ಭಾವಿಸಿದ ಬಾವಿ
ಮನೆಗೆ ಬಂದ ‘ನೀರೆ (ಸೊಸೆ ಅಥವಾ ಮನೆಯೊಡತಿ) ನೀರಿಗೆ ಬರದೆ ಇರ್‍ತಾಳೆಯೇ’ ಎನ್ನುವುದೊಂದು ಗಾದೆ ಮಾತು. ಇದನ್ನು ಒಂದು ಕಾಲದಲ್ಲಿ ‘ನೀರೆ ಬಾವಿಗೆ ಬರದೇ ಇರ್‍ತಾಳೆಯೇ’ ಎಂದು ಮಾರ್ಪಡಿಸಬಹುದಾಗಿತ್ತು. ಮನೆಯ ಮತ್ತೆ ಊರಿನ ನೀರಿನ ಅಗತ್ಯವನ್ನು ಪೂರೈಸುತ್ತಾ ಇದ್ದದ್ದು ಬಾವಿಗಳೇ. ಹೊಲ, ಗದ್ದೆ, ತೋಟಗಳೂ ಸಹ ನಳನಳಿಸುತ್ತಾ ಇದ್ದದ್ದು ದೊಡ್ಡ ಒರತೆ ಇರುವ ಬಾವಿಗಳ ನೀರಿಂದಲೇ. ನಿಜ, ಮನೆಯ ಸಂತೋಷ, ಸಮೃದ್ಧಿಗಳು ಸುಲಲಿತವಾಗಿ ದೊರೆಯುವ ನೀರನ್ನು ಅವಲಂಬಿಸಿರುತ್ತವೆ. ಮನೆಗಳು ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ, ಊರುಗಳು ಚೆನ್ನಾಗಿದ್ದರೆ ರಾಜ್ಯ, ಸಾಮ್ರಾಜ್ಯ, ರಾಷ್ಟ್ರಗಳೂ ಚೆನ್ನಾಗಿರುತ್ತವೆ.
ಒಂದು ಕಾಲಘಟ್ಟದಲ್ಲಿ ಮನುಷ್ಯನ ವಾಸಸ್ಥಾನ ನೀರಿನ ಹತ್ತಿರವೇ ಇತ್ತು. ನೀರಿನ ಆಸರೆಯಲ್ಲಿಯೇ ಸಾಮ್ರಾಜ್ಯಗಳೂ ಸಹ ವಿಸ್ತಾರವಾಗಿ ಬೆಳೆದು ನಿಂತವು. ಸಂಸ್ಕೃತಿ, ನಾಗರಿಕತೆಗಳ ರೂಪುರೇಷೆಗಳು ನೀರಿನ ಬಳಕೆಯ ಸಾಧ್ಯತೆಯ ಇತಿಮಿತಿಗಳನ್ನೇ ಆಧರಿಸಿದ್ದವು. ಸ್ವಾತಂತ್ರ್ಯ ಬಂದ ನಂತರ ನದಿಗಳಿಗೆ ಕಟ್ಟಿದ ಅಡ್ಡಗಟ್ಟೆಯಿಂದ ನೀರು ಕಾಲುವೆ ಉಪಕಾಲುವೆಗಳಲ್ಲಿ ಹರಿದು ಎಲ್ಲಾ ಕಾಲದಲ್ಲೂ ಸಾಧ್ಯವಾದಷ್ಟೂ ಹಳ್ಳಿಗಳಿಗೂ ನೀರು ದೊರೆಯುವಂತೆ ಆಗಿರುವುದರ ಜೊತೆಗೆ ಕೊಳವೆ ಬಾವಿಗಳ ಬಳಕೆಯೂ ವ್ಯಾಪಕ ಆಗಿ ಸಾಧ್ಯವಾದ ಮಟ್ಟಿಗೆ ಮನೆಬಾಗಿಲಿಗೇ ನೀರು ನಲ್ಲಿಗಳ ಮೂಲಕ ದೊರೆಯುವಂತಾಗಿದೆ. ಇದೊಂದು ಘನ ಸಾಧನೆಯೇ!
ಅಜ್ಜಿ ಮನೆ ಬಾವಿ
ಬಾವಿ ಎಂದಾಗ ನಾಲ್ಕು ಬಾವಿಗಳ ನೆನಪಾಗುತ್ತದೆ. ಒಂದು ಅಜ್ಜಿ ಮನೆಯದು, ಇನ್ನೊಂದು ನಮ್ಮ ವಠಾರದ್ದು, ಮತ್ತೊಂದು ಸಾರ್ವಜನಿಕ ಬಾವಿ, ನಾಲ್ಕನೆಯದು ತಾತನ ತೋಟದ ಬಾವಿ. ಅಜ್ಜಿ ಮನೆಯ ಬಾವಿ ಮನೆಯವರಿಗೆ ಮತ್ತೆ ಬಂದು ಹೋಗುವವರಿಗೆ, ಕೆಲಸದಾಳುಗಳಿಗೆಲ್ಲಾ ಬೇಕಾಗುವಷ್ಟು ಬತ್ತ ಕುಟ್ಟಿ ಅವಲಕ್ಕಿ, ಅಕ್ಕಿ ಮಾಡುವ ಏತದ ಮನೆ ಮತ್ತು ಬಚ್ಚಲುಮನೆಗಳ ನಡುವೆ ಇತ್ತು. ಏತದ ಮನೆಯಲ್ಲಿ ಬತ್ತ ಬೇಯಿಸುತ್ತಿದ್ದರು. ಅದಕ್ಕೂ ನೀರು ಬೇಕಾಗುತ್ತಿತ್ತು, ಸ್ನಾನಕ್ಕೂ ನೀರು ಬೇಕಾಗುತ್ತಿತ್ತು. ಈ ಬಾವಿಯಲ್ಲಿ 10-12 ಅಡಿ ಆಳದಲ್ಲಿ ಸದಾ ನೀರಿರುತ್ತಿತ್ತು. ಮಳೆಗಾಲ, ಬೇಸಿಗೆಕಾಲ ಎನ್ನುವ ಅಂತರವೇನೂ ಇರಲಿಲ್ಲ. ಬಾವಿಯಿಂದ ನೀರು ಸೇದಿದ ನಂತರ ಬಾವಿಕಟ್ಟೆಗೆ ತಾಗಿಕೊಂಡಂತೆ ಇದ್ದ ಒಂದು ಸಣ್ಣ ಕಾಲುವೆಯಲ್ಲಿ ನೀರು ಸುರಿದರೆ ಅದು ಆ ಕಾಲುವೆಯಲ್ಲಿ ಇದ್ದ ಸಣ್ಣ ತೂಬಿನಿಂದ ಬಚ್ಚಲುಮನೆಯ ತೊಟ್ಟಿಗೆ ಹೋಗುತ್ತಿತ್ತು. ತೀರಾ ಸಣ್ಣ ಮಕ್ಕಳನ್ನು ಹೊರತುಪಡಿಸಿ ಎಲ್ಲರೂ ಮುಂದಿನವರ ಸ್ನಾನಕ್ಕೆ ನೀರು ಬೇಕು ಎಂದು 4-5 ಕೊಡ ನೀರು ಸೇದಲೇ ಬೇಕಿತ್ತು. ರಾತ್ರಿ ಅಡಿಗೆ ಮನೆಯ ಕೆಲಸ ಮುಗಿದ ಮೇಲೆ ಕೆಂಡ ತಂದು ಬಚ್ಚಲುಮನೆಯ ಹೊಟ್ಟು ತುಂಬಿದ ಒಲೆಗೆ ಹಾಕಿ ಅದರ ಬಾಗಿಲು ಮುಚ್ಚಿದರೆ ಬೆಳಿಗ್ಗೆ ನನ್ನ ತಾತ 4 ಗಂಟೆಗೆ ಸ್ನಾನಕ್ಕೆ ಬರುವ ವೇಳೆಗೆ ಹಂಡೆಯ ನೀರು ಬಿಸಿ ಬಿಸಿಯಾಗಿರುತ್ತಿತ್ತು. ಆನಂತರ ಬಂದವರೆಲ್ಲ ಒಲೆಗೆ ಸಣ್ಣ ಸೌದೆ ತುಂಡು, ಒಂದಿಷ್ಟು ಸುರಗು (ಮರದ ಜಾತಿಯ ಒಂದು ರೀತಿಯ ಉರುವಲು) ಹಾಕಿ ಬೆಂಕಿ ಆರದಿರದ ಹಾಗೆ ನೋಡಿಕೊಳ್ಳಬೇಕಿತ್ತು. ಅದರ ಜೊತೆಗೆ ನೀರು ಸೇದಿ ಹಂಡೆಗೆ ನೀರು ತುಂಬಿ ಮುಂದಿನವರಿಗೆ ಸ್ನಾನಕ್ಕೆ ನೀರು ಇರುವಂತೆಯೂ ನೋಡಿಕೊಳ್ಳಬೇಕಿತ್ತು.
ಈ ವಿಷಯಕ್ಕೆ ಮಾತ್ರವಲ್ಲದೆ ಈ ಬಾವಿ ವಿಶೇಷ ಎಂದೆನ್ನಿಸಿದ್ದು ನನ್ನ ಚಿಕ್ಕಮ್ಮನ ಮದುವೆಯ ಸಂದರ್ಭದಲ್ಲಿ ನಾಂದಿ ಮಾಡುವಾಗ ಮೊಳಕೆ ಬರಿಸಿದ ಬೇರೆ ಬೇರೆ ಕಾಳುಗಳನ್ನು ಮಣ್ಣಿನ ಸಣ್ಣ ಕುಡಿಕೆಗಳಲ್ಲಿರಿಸಿ ಪೂಜೆ ಮಾಡಿ ಅದನ್ನು ಬಾವಿಗೆ ಹಾಕಿದುದರಿಂದಾಗಿ. ಕುಡಿಯುವ ನೀರಿಗೆ ಹಾಕಿದರಲ್ಲ ಯಾಕೆ ಎನ್ನುವ ಕುತೂಹಲ ಒಂದು ಕಡೆ; ಹಾಗೆ ಮಾಡಿದುದು ಸರಿಯೇ ಎನ್ನುವ ಸಂದೇಹ ಇನ್ನೊಂದು ಕಡೆ. ದೊಡ್ಡವರೆಲ್ಲ ಬಾವಿ ಕಟ್ಟೆಯಿಂದ ಸರಿದು ಮನೆಯ ಒಳಕ್ಕೆ ಹೋದ ಮೇಲೆ ಬಾವಿಯೊಳಗೆ ಇಣುಕಿ ನೋಡಿದರೆ ಏನೂ ಕಾಣಲಿಲ್ಲ. ಕುತೂಹಲ, ಸಂದೇಹ ಹಾಗೆಯೇ ಉಳಿದಿತ್ತು. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆದ ಮೇಲೆ ಗೊತ್ತಾಯಿತು ಗಂಗೆಯನ್ನು ಪೂಜಿಸುವ ರೀತಿ ಇದು; ನೀರು ಬದುಕನ್ನು ಗಂಗೆಯ ಹಾಗೆ ಪವಿತ್ರವಾಗಿರಿಸಲಿ ಎನ್ನುವ ಭಾವ ಇದರ ಹಿಂದೆ ಇದೆ; ಮೊಳಕೆ ಬಂದ ಕಾಳುಗಳನ್ನು ನೀರು ಚಿಗುರಿಸುವ ಹಾಗೆ ಬದುಕು ಚಿಗುರಲಿ ಎನ್ನುವ ಆಶಯವುಳ್ಳದ್ದು – ಎಂದು.
ಈ ಬಾವಿ ಮತ್ತಷ್ಟು ವಿಶೇಷ ಎಂದೆನ್ನಿಸಿದುದು ಒಂದು ಘಟನೆಯಿಂದಾಗಿ. ಅದು ನಾನು ನೋಡಿದ ಘಟನೆಯಲ್ಲ. ನನ್ನ ತಾಯಿಯಿಂದ ಕೇಳಿದ ಘಟನೆ. ನನ್ನ ಅಜ್ಜಿಯ ಮನೆಯಿದ್ದ ಊರಿನಲ್ಲಿ ಮೊದಲಿಗೆ ಎಸ್.ಎಸ್.ಎಲ್.ಸಿ.ಯ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲು ಅವಕಾಶವಿತ್ತು. ತಾತ ಹೆಣ್ಣು, ಗಂಡು ಎನ್ನುವ ಭೇದವಿಲ್ಲದೆ ಎಲ್ಲರನ್ನೂ ಓದಲು ಕಳಿಸಿದ್ದರು. ಗಂಡು ಮಕ್ಕಳನ್ನು ಹೈಸ್ಕೂಲು ವಿದ್ಯಾಭ್ಯಾಸ ಮುಗಿದ ಮೇಲೆ ಬೆಂಗಳೂರು, ಮೈಸೂರು, ಮದ್ರಾಸಿಗೆ ಅವರು ಆಯ್ಕೆ ಮಾಡಿಕೊಂಡ ಬೇರೆ ಬೇರೆ ಕೋರ್ಸುಗಳಿಗೆ ಓದಲು ಕಳಿಸಿದ್ದರು. ಹೆಣ್ಣುಮಕ್ಕಳಿಗೆ ಮಾತ್ರ ಆಗಿನ ನಿಯಮದಂತೆ 14 ವರ್ಷವಾದ ನಂತರ ಮದುವೆ ಮಾಡಿದರು. ನನ್ನ ಒಬ್ಬ ದೊಡ್ಡಮ್ಮನಿಗೆ ಮುಂದೆ ಓದಲು ಬಹಳ ಆಸಕ್ತಿ ಇತ್ತು. ಮದುವೆ ಮಾಡಲು ವ್ಯವಸ್ಥೆ ಮಾಡಿದಾಗ ಅವರು ತನಗೆ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದರು. ಬಾವಿಗೆ ಬೀಳುತ್ತೇನೆ ಎಂದು ಬಾವಿಯ ಕಡೆಗೆ ಓಡಿದರು. ನನ್ನ ದೊಡ್ಡ ತಾತನ ಮಗಳು ಅವರು. ದೊಡ್ಡ ತಾತ ದೊಡ್ಡಮ್ಮನ ಹಿಂದೆಯೇ ಧಾವಿಸಿ ಹೋಗಿ ನೀರು ಸೇದುವ ಹಗ್ಗವನ್ನು ಬಾವಿಯ ರಾಟೆಯಿಂದ ತೆಗೆದು ದೊಡ್ಡಮ್ಮನಿಗೆ ರಪ ರಪ ಎಂದು ಸಮನಾಗಿ ಹೊಡೆದು, ಬಾವಿಗೆ ಬೀಳುತ್ತೀಯಾ, ಬೀಳು ನೋಡ್ತೀನಿ ಎಂದು ಗುಡುಗಿದರು. ಮತ್ತೆ ಬಾಸುಂಡೆ ಬರಿಸಿಕೊಳ್ಳುವ ಸಾಹಸವನ್ನು ಕೈಬಿಟ್ಟು ದೊಡ್ಡಮ್ಮ ತೆಪ್ಪಗೆ ಮದುವೆಯಾದರು. ಅವರ ಓದುವ ಆಸೆ ಅವರ ದೊಡ್ಡ ಮಗಳಿಂದ ಮುಂದೆ ಪೂರೈಸಿತು. ಆಕೆ ಎಂ.ಎ. ಕನ್ನಡ ಓದುತ್ತಿದ್ದಾಗ, ಆಕೆ ರೆಫೆರೆನ್ಸ್‌ಗಾಗಿ ತಂದದ್ದನ್ನೆಲ್ಲ ದೊಡ್ಡಮ್ಮನೇ ಓದಿ ಟಿಪ್ಪಣಿ ಮಾಡುತ್ತಿದ್ದರು.
ಮತ್ತೊಂದು ಘಟನೆಯ ಕಾರಣದಿಂದಾಗಿಯೂ ಅಜ್ಜಿಯ ಮನೆಯ ಬಾವಿ ನನಗೆ ವಿಶೇಷ ಎನ್ನಿಸಿದೆ. ನನ್ನ ಅಜ್ಜಿಗೆ ನಾಲ್ಕು ಗಂಡುಮಕ್ಕಳು, ಐದು ಹೆಣ್ಣುಮಕ್ಕಳು; ನನ್ನ ತಾಯಿಯ ದೊಡ್ಡಪ್ಪ-ದೊಡ್ಡಮ್ಮನಿಗೆ ಐದು ಗಂಡುಮಕ್ಕಳು ಮೂವರು ಹೆಣ್ಣುಮಕ್ಕಳು; ಒಬ್ಬ ಸೋದರತ್ತೆಗೆ ಮೂರು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು; ಮತ್ತೊಬ್ಬ ಸೋದರತ್ತೆಗೆ ಮೂರು ಗಂಡುಮಕ್ಕಳು, ಮೂರು ಹೆಣ್ಣುಮಕ್ಕಳು. ಇವರೆಲ್ಲರೂ ದೊಡ್ಡವರಾಗಿ ಕೆಲವರು ಹೈಸ್ಕೂಲು ವಿದ್ಯಾಭ್ಯಾಸ ಮುಗಿಸುವವರೆಗೆ, ಇನ್ನು ಕೆಲವರು ಮುಂದಿನ ದಿನಗಳಲ್ಲಿ ಆರಂಭವಾದ ಕಾಲೇಜು ವಿದ್ಯಾಭ್ಯಾಸ ಮುಗಿಸುವವರೆಗೆ ಅಜ್ಜಿಯ ಮನೆಯಲ್ಲಿಯೇ ಇದ್ದರು. ಆಮೇಲೆ ಇವರೆಲ್ಲರ ಮದುವೆಯಾಗಿ, ಅವರ ಮಕ್ಕಳಿಗೆಲ್ಲಾ ಮದುವೆಯಾಗಿ ಬೇರೆ ಬೇರೆ ಕಡೆ ಸಂಸಾರ ಹೂಡುವ ವರೆಗೂ ಈ ಬಾವಿ ನೀರು ಅವರೆಲ್ಲರಿಗೂ ತಂಪು ನೀಡಿತ್ತು. ನನ್ನ ಅಜ್ಜಿಯ ಕೊನೆಗಾಲದ ವೇಳೆಗೆ ಬಾವಿಯಲ್ಲಿ ನೀರು ಕಡಿಮೆಯಾಯಿತು, ಬತ್ತಿ ಹೋಗುವ ಸ್ಥಿತಿ ಬಂತು. ಮುನಿಸಿಪಾಲಿಟಿಯಿಂದ ನಲ್ಲಿ ನೀರಿನ ಸೌಲಭ್ಯ ದೊರೆಯುತ್ತಿದ್ದುದರಿಂದ ಬಾವಿಯಲ್ಲಿ ನೀರು ಕಡಿಮೆಯಾದುದಕ್ಕೆ ಅಷ್ಟೇನೂ ಬೇಸರ ಇರಲಿಲ್ಲ. ಆದರೆ ದೇವಕಾರ್ಯ, ಪಿತೃತರ್ಪಣಗಳಂತಹ ಸಂದರ್ಭಗಳಲ್ಲಿ ಬಾವಿಯ ನೀರೇ ಬೇಕು ಎನ್ನುವ ಮಾನಸಿಕ ಒತ್ತಡ ಇತ್ತು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ನಲ್ಲಿಗೆ ಪೈಪ್ ಜೋಡಿಸಿ ನೀರನ್ನು ಬಾವಿಗೆ ಬಿಟ್ಟು ಬಾವಿಯಿಂದ ನೀರು ಸೇದಿಕೊಳ್ಳುವುದು!
ವಠಾರದ ಬಾವಿ
ಸಂಪ್ರದಾಯಸ್ಥ ಮನೆತನದ ಅಜ್ಜಿ ಮನೆಯವರಂತೆಯೇ ನಮ್ಮ ತಂದೆಗೂ ಮನೆ ಬಾಡಿಗೆಗೆ ಹಿಡಿಯಲು ಬಾವಿ ಇರುವುದು ಧಾರ್ಮಿಕ ಆಚರಣೆಗಳಿಗಾಗಿ ಅತ್ಯಗತ್ಯವಾದ ಶರತ್ತಾಗಿತ್ತು. ನಾವು ಸಣ್ಣವರಿದ್ದಾಗ ಮೊದಲಿಗೆ ಇದ್ದದ್ದು ಎದುರುಬದುರು ಇದ್ದ ನಾಲ್ಕು ಮನೆಗಳ ವಠಾರದಲ್ಲಿ. ಮನೆಗಳ ಮುಂಭಾಗದಲ್ಲಿದ್ದ ಆವರಣದ ಒಂದು ಪಕ್ಕದಲ್ಲಿ ಇದ್ದ ಬಾವಿ ಎಲ್ಲರಿಗೂ ಸೇರಿದ್ದು. ಎಲ್ಲರೂ ಹೊಂದಿಕೊಂಡು ನೀರು ಸೇದಿಕೊಳ್ಳುತ್ತಿದ್ದರು. ನಾನೇ ಮೊದಲು ಸೇದಿಕೊಳ್ಳಬೇಕು ಎಂದಾಗಲೀ, ಇನ್ನೊಬ್ಬರು ಸೇದಿಕೊಳ್ಳುತ್ತಿರುವಾಗ ಮಧ್ಯೆ ಬಂದು ನನಗೆ ಸೇದಲು ಬಿಡಿ ಎಂದಾಗಲೀ ಯಾರೂ ಜಗಳವಾಡಿದ್ದು ನನ್ನ ನೆನಪಿನಲ್ಲಿಲ್ಲ. ನಲ್ಲಿ ನೀರೂ ಸಿಗುತ್ತಿತ್ತು. ಸಾರ್ವಜನಿಕ ನಲ್ಲಿ ಅದು. ಮನೆಯ ಹತ್ತಿರದಲ್ಲೇ, ನಾಲ್ಕು ಬೀದಿ ಸೇರುವ ವೃತ್ತದ ಒಂದು ಮೂಲೆಯಲ್ಲಿತ್ತು ಆ ನಲ್ಲಿ. ಅಲ್ಲೂನೂ ನೀರಿಗಾಗಿ ಜಗಳವಾಡಿದವರನ್ನು ನೋಡಿದ ನೆನಪಿಲ್ಲ. ಯಾವ ಯಾವುದೋ ಸಮಯದಲ್ಲಿ ನಲ್ಲಿಯಲ್ಲಿ ನೀರು ಬರುತಿತ್ತು. ಅದರಿಂದ ಬಹುಮಟ್ಟಿಗೆ ಆ ನೀರಿಗೆ ಯಾರೂ ಕಾಯುತ್ತಿರಲಿಲ್ಲ. ಬಾವಿಯ ನೀರನ್ನೇ ಸೇದಿಕೊಂಡುಬಿಡುತ್ತಿದ್ದರು. ಈ ಬಾವಿಗೆ ಸಂಬಂಧಿಸಿದ ಒಂದು ಸಂಗತಿ ಎಂದರೆ ಎಲ್ಲರೂ ಅವರವರ ಮನೆಯ ಹಗ್ಗವನ್ನೇ ನೀರು ಸೇದಲು ಬಳಸುತ್ತಾ ಇದ್ದರು ಎನ್ನುವುದು.
ಈ ಬಾವಿ ವಿಶೇಷವಾದದ್ದು ಯಾಕೆ ಎಂದರೆ ಒಂದು – ಮಳೆಗಾಲದಲ್ಲಿ ಆ ಬಾವಿಯ ನೀರಿನ ಮಟ್ಟ ಎಷ್ಟು ಏರುತ್ತಾ ಇತ್ತು ಎಂದರೆ ಸ್ವಲ್ಪ ಕೈ ಒಳಗೆ ಹಾಕಿ ಕೊಡದಿಂದ ನೀರು ತುಂಬಿಕೊಳ್ಳಬಹುದಿತ್ತು. ಬೇಸಿಗೆ ಬಂತು ಎಂದರೆ ಹಗ್ಗದ ಸುರುಳಿಯಷ್ಟನ್ನೂ ಬಿಡಿಸಿ ನೀರು ಸೇದಿಕೊಳ್ಳಬೇಕಾಗುತ್ತಿತ್ತು. ಒಂದು ಹಗ್ಗದ ಪೆಂಡಿ 7-8 ಗಜ ಉದ್ದವಾಗಿರುತ್ತಿತ್ತು. ಬೇಸಿಗೆಯಲ್ಲಿ ಅದರ ಹೂಳನ್ನು ತೆಗೆಸಿ ಸ್ವಚ್ಛ ಮಾಡಿಸ್ತಾ ಇದ್ದರು. ಇನ್ನೊಂದು – ವಠಾರದಲ್ಲಿರುವ ಯಾರದಾದರೂ ಮನೆಯಲ್ಲಿರುವ ಅಜ್ಜಿ ಅಥವಾ 8-10 ವರ್ಷದ ಮಕ್ಕಳು ಚೊಂಬು, ಕೊಡ ಅಥವಾ ಬಕೆಟನ್ನು ಹಗ್ಗದಿಂದ ಸರಿಯಾಗಿ ಬಿಗಿಯದೆ ಬಾವಿಯಲ್ಲಿ ಬೀಳಿಸಿಬಿಡುತ್ತಿದ್ದರು. ಒಂದು ಸಾರಿ ಇದ್ದ ಒಂದೇ ಬಕೆಟ್ ಬಾವಿಯಲ್ಲಿ ಬಿದ್ದು ಹೋಯಿತು. ಆಗ ಯಾರ ಹತ್ತಿರವೂ ಹಣ ಅಷ್ಟೆಲ್ಲಾ ಇರುತ್ತಿರಲಿಲ್ಲ. ಬಕೆಟ್ ಬಾವಿಯಲ್ಲಿ ಬಿದ್ದರೆ ಹೋಗಲಿ ಬಿಡು, ಇನ್ನೊಂದು ತಂದರೆ ಆಯಿತು ಎನ್ನುವಂತಿಲ್ಲ. ಆಗ ಬಕೆಟ್ ಬೀಳಿಸಿಕೊಂಡವರ ಮನೆಯ 13-14 ವರ್ಷದ ಹುಡುಗ ಸೊಂಟಕ್ಕೆ ಹಗ್ಗದ ಒಂದು ತುದಿಯನ್ನು ಕಟ್ಟಿಕೊಂಡು ಕೊಡ ಬಾವಿಯಲ್ಲಿ ಇಳಿಯುವಂತೆ ಇಳಿದೇ ಬಿಟ್ಟ! ನೀರಲ್ಲಿ ಮುಳುಗಿ ಆ ಬಕೆಟ್ ಹುಡುಕಿ ತೆಗೆದುಕೊಂಡ. ಅವನನ್ನು ಮೇಲೆ ಎಳೆದುಕೊಳ್ಳುವುದಕ್ಕೆ ಒಂದಿಬ್ಬರು ಘಟಾನುಘಟಿಗಳೇನೋ ಇದ್ದರು. ನಮ್ಮಂಥ ಸಣ್ಣ ಮಕ್ಕಳಿಗೆ ಭಯವೋ ಭಯ! ಉಳಿದವರಿಗೆ ಆತಂಕ. ಅವನು ಮೇಲೆ ಬಂದ ಮೇಲೆ ಎಲ್ಲರಿಗೂ ನಿರಾಳವಾಯಿತು.
ಅವರ ಮನೆ ಬಕೆಟ್ ಏನೋ ಸಿಕ್ಕಿತು, ನಮ್ಮ ಚೊಂಬು, ಕೊಡ ಏನಾಯ್ತು, ಅದನ್ನೂ ತಂದಿದ್ದರೆ ಚೆನ್ನಾಗಿರ್‍ತಿತ್ತು ಎಂದು ಹೇಳಿದವರೂ ಇದ್ದರು. ಅವರೆಲ್ಲಾ ಪಾತಾಳಗರಡಿ ತೆಗೆದುಕೊಂಡು ಬಾವಿಯಿಂದ ಅಲ್ಲಿ ಬಿದ್ದಿರುವ ವಸ್ತುಗಳನ್ನೆಲ್ಲಾ ತೆಗೆದು ಕೊಡುವವನಿಗಾಗಿ ಕಾಯಲೇಬೇಕಿತ್ತು. ಪಾತಾಳಗರಡಿ ಒಂದು ಉದ್ದದ ಕಬ್ಬಿಣದ ಸರಳಿಗೆ ಬೆಸುಗೆ ಹಾಕಿರುವ ಹುಕ್‌ಗಳನ್ನು ಹೊಂದಿರುವ ಒಂದು ವಸ್ತು. ಅದರಲ್ಲಿ ಹುಕ್‌ಗಳು ಮೇಲಿನಿಂದ ಎರಡು, ನಾಲ್ಕು, ಆರು ಹೀಗೆ ಕ್ರಮವಾಗಿ ಹೆಚ್ಚಾಗುವ ಹಾಗೆ ಗೊಂಚಲಾಗಿ ಇರುತ್ತಿದ್ದವು. ಅವೆಲ್ಲಾ ಅಲ್ಲಾಡುವ ಹುಕ್‌ಗಳು. ಅದರಿಂದಾಗಿ ಸರಳಿನ ಮೇಲ್ಭಾಗದ ತುದಿಯಲ್ಲಿರುವ ದೊಡ್ಡ ರಂಧ್ರ್ತಕ್ಕೆ ಹಗ್ಗವನ್ನು ಕಟ್ಟಿ ಬಾವಿಯ ತಳಕ್ಕೆ ಕಳುಹಿಸಿ ನೀರನ್ನೆಲ್ಲಾ ಜಾಲಾಡಿದಾಗ ಆ ಹುಕ್ ಗಳಿಗೆ ಏನಾದರೂ ಸಿಕ್ಕಿಕೊಂಡರೆ ಸಲೀಸಾಗಿ ಮೇಲಕ್ಕೆ ತೆಗೆದುಕೊಳ್ಳಬಹುದಿತ್ತು. ಬಾವಿಯಲ್ಲಿ ಬಿದ್ದದ್ದೆಲ್ಲಾ ಅದಕ್ಕೆ ಸಿಕ್ಕೇ ಸಿಗ್ತಾ ಇತ್ತು. ಅಂತಹ ಪರಿಣತರು ಪಾತಾಳಗರಡಿಯನ್ನು ತಂದವರು ಆಗಿರುತ್ತಿದ್ದರು.
ಒಮ್ಮೆ ನಮ್ಮ ತಂದೆ ನಮಗೆ ಆಡುವುದಕ್ಕೆ ಸ್ಕಿಪಿಂಗ್ ತಂದುಕೊಟ್ಟಿದ್ದರು. ಅದರ ಹಿಡಿಕೆಗೆ ಇದ್ದ ಬಣ್ಣದ ಜೋಡಣೆ, ಹಗ್ಗಕ್ಕೆ ಇದ್ದ ಬಣ್ಣ ಎಲ್ಲಾ ನಮಗೆ ತುಂಬಾ ಇಷ್ಟವಾಗಿತ್ತು. ಮನೆ ಆಟ ಆಡ್ತಾ ಇದ್ದಾಗ ಬಾವಿಯಿಂದ ನೀರು ಸೇದುವ ಅಭಿನಯ ಮಾಡುವುದಕ್ಕೆ ಬಾವಿಯಲ್ಲಿ ನಾನು ಅದನ್ನು ಇಳಿಬಿಟ್ಟೆ. ನನ್ನ ಕೈಯಿಂದ ಅದು ಜಾರಿ ಬಾವಿಯಲ್ಲಿ ಬಿದ್ದುಹೋಯಿತು. ಎಲ್ಲರಿಂದ ಬೈಸಿಕೊಂಡದ್ದು ಹೌದಾದರೂ ಅಷ್ಟು ಚಂದದ ಸ್ಕಿಪಿಂಗ್ ಬಿದ್ದುಹೋಂಯಿತಲ್ಲಾ ಎಂದು ನನಗೆ ತುಂಬಾ ಬೇಜಾರಾಗಿತ್ತು. ಪಾತಳಗರಡಿಯವನು ಸೋಸಿದಾಗ ನಾನು ಬೀಳಿಸಿದ ಸ್ಕಿಪಿಂಗೂ ಮೇಲೆ ಬಂತು. ನನಗೆ ಬಹಳ ಸಂತೋಷ ಆಯ್ತು. ಆದರೆ ಅದನ್ನು ಹಿಡಿದು ಆಡುವುದಕ್ಕೆ ಹೋದರೆ ಅದು ತುಂಡು ತುಂಡು ಆಗಿಬಿಡ್ತು! ನೀರಿನಲ್ಲಿ ನೆನೆದು ಅದು ತನ್ನ ಬಣ್ಣದ ಜೊತೆಗೆ ಬಂಧವನ್ನೆಲ್ಲಾ ಕಳೆದುಕೊಂಡುಬಿಟ್ಟಿತ್ತು. ನನ್ನ ಸಂತೋಷವೆಲ್ಲಾ ಜರ್ರಂತ ಇಳಿದುಹೋಯ್ತು. ಈಗ ಆ ವಿಷಯವನ್ನು ರಾಜರತ್ನಂ ಬರೆದಿರುವ ಬಣ್ಣದ ತಗಡಿನ ತುತೂರಿಯ ಕಥೆಯೇ ಆಯ್ತು ಎಂದುಕೊಂಡು, ಹಾಸ್ಯಮಿಶ್ರಿತ ನಗೆ ಬೀರಬಹುದು.
ಈ ಬಾವಿಗೆ ಹೊಂದಿಕೊಂಡ ಹಾಗೆ ಒಂದು ವಿಷಾದದ ಘಟನೆಯೂ ಇದೆ. ನಮ್ಮ ದೊಡ್ಡಪ್ಪನ ಮಗಳು ಅವರೂರಿನಲ್ಲಿ ಹೈಸ್ಕೂಲು ಇಲ್ಲ ಎಂದು ನಮ್ಮ ಮನೆಗೆ ಓದಲು ಬಂದಳು. ಅವಳು ಹೊಂದಿಕೊಳ್ಳಲೇ ಇಲ್ಲ. ಒಂದು ವಾರವೂ ನಮ್ಮ ಜೊತೆ ಅವಳು ಉಳಿಯಲಿಲ್ಲ. ಬಾವಿಗೆ ನೀರು ಸೇದುವುದಕ್ಕೆ ಹೋದಾಗ ಅಲ್ಲಿ ಗೊಳೋ ಎಂದು ಅಳುತ್ತಾ ಇರುತ್ತಿದ್ದಳು. ಅಲ್ಲಿಯೇ ಎದುರು ಮನೆಯ ಹುಡುಗನ ಹತ್ತಿರ ಒಂಬತ್ತು ಕಾಸು ಕೊಟ್ಟು ಪೋಸ್ಟ್ ಕಾರ್ಡ್ ತರಿಸಿ ಬಾವಿಯ ಹತ್ತಿರವೇ ಪತ್ರ ಬರೆದು ಪೋಸ್ಟಿಗೆ ಹಾಕಲು ಅವನ ಹತ್ತಿರವೇ ಕೊಟ್ಟಳು. ನಮ್ಮ ದೊಡ್ಡಪ್ಪ ಅವಳನ್ನು ಕರೆದುಕೊಂಡು ಹೋಗುವುದಕ್ಕೆ ಬಂದಾಗಲೇ ಇದೆಲ್ಲ ಗೊತ್ತಾದದ್ದು. ನಮ್ಮ ಅಮ್ಮನಿಗೆ ಇದರಿಂದ ತುಂಬಾ ಬೇಜಾರಾಗಿತ್ತು.
ಸಾರ್ವಜನಿಕ ಬಾವಿ
ನನ್ನ ನೆನಪಿನಲ್ಲಿರುವ ಮೂರನೆಯ ಬಾವಿ ಸಾರ್ವಜನಿಕರಿಗಾಗಿ ಸರ್ಕಾರ ಕಟ್ಟಿಸಿದ್ದದ್ದು. ಅದು ನಾವು ಇದ್ದ ವಠಾರದ ಮನೆಯ ಪಕ್ಕದ ಬೀದಿಯಲ್ಲಿ ಇತ್ತು. ಅದೇ ದಾರಿಯಲ್ಲಿ ಹೋಗಿ ಎಡಕ್ಕೆ ಇರುವ ರಸ್ತೆಗೆ ತಿರುಗಿದರೆ ನಮ್ಮ ಬಂಧುಗಳ ಮನೆ. ಅವರ ಮನೆ ದಾಟಿ ನೇರವಾಗಿ ಸ್ವಲ್ಪ ಮುಂದೆ ಹೋದರೆ ನಮ್ಮ ಅಜ್ಜಿ ಮನೆ. ನಾವು ಅದೇ ದಾರಿಯಲ್ಲಿ ಸದಾ ಎನ್ನುವ ಹಾಗೆ ಓಡಾಡುತ್ತಾ ಇದ್ದೆವು. ಆ ಸಾರ್ವಜನಿಕ ಬಾವಿ ತುಂಬಾ ದೊಡ್ಡದು. ಅದಕ್ಕೆ ಎರಡು ವಿರುದ್ಧ ದಿಕ್ಕುಗಳಲ್ಲಿ ಉತ್ತರ ದಕ್ಷಿಣವಾಗಿ ನಾಲ್ಕು ನಾಲ್ಕು ಒಟ್ಟು ಎಂಟು ರಾಟೆಗಳು ಇದ್ದವು. ಒಂದೇ ಸಾರಿಗೆ ಎಂಟು ಮಂದಿ ನೀರು ಸೇದಿಕೊಳ್ಳಬಹುದಿತ್ತು. ನಮ್ಮ ವಠಾರದ್ದು ಮತ್ತು ಅಜ್ಜಿ ಮನೆಯದ್ದು ಕಬ್ಬಿಣದ ರಾಟೆಯಾದರೆ ಈ ಬಾವಿಯದು ಮರದ ರಾಟೆಗಳು. ಕಬ್ಬಿಣದ ರಾಟೆ ಗಾಲಿಯ ಹಾಗೆ ಇದ್ದರೆ ಮರದ ರಾಟೆ ಸಿಲಿಂಡರಿನ ಆಕಾರದಲ್ಲಿತ್ತು. ಕಬ್ಬಿಣದ ರಾಟೆಗೆ ಆಗಾಗ ಎಣ್ಣೆ ಹಚ್ಚಿ ಸಲೀಸಾಗಿ ತಿರುಗುವಂತೆ ನೋಡಿಕೊಳ್ಳಬೇಕು. ಮರದ ರಾಟೆಗೆ ಆ ಕೆಲಸದ ಅಗತ್ಯ ಇಲ್ಲ.
ಈ ಬಾವಿಯ ಕಟ್ಟೆಯೂ ಎತ್ತರದಲ್ಲಿತ್ತು, ರಾಟೆಯನ್ನೂ ಎತ್ತರದಲ್ಲಿ ಜೋಡಿಸಿಟ್ಟಿದ್ದರು. ಆ ರಾಟೆಗೆ ಹಗ್ಗ ಸೇರಿಸುವುದು ಸುಲಭವಾಗಿರಲಿಲ್ಲ. ಬಾವಿ ಕಟ್ಟೆಯೇನೋ ಸಾಕಷ್ಟು ಅಗಲವಿತ್ತು. ಕಟ್ಟೆ ಹತ್ತಿ ಹಗ್ಗವನ್ನು ರಾಟೆಗೆ ಸೇರಿಸಬಹುದಿತ್ತು. ಆದರೂ ಕಾಲು ಜಾರಿ ಬಿದ್ದರೆ ಎನ್ನುವ ಭಯಕ್ಕೂ ಜಾಗ ಇತ್ತು. ಆ ಬಾವಿಗೆ ಸ್ವಲ್ಪ ದೂರದಲ್ಲಿ ಎರಡು ಕುಂಟೆಗಳು, ಒಂದು ದೊಡ್ಡ ಕೆರೆಯೂ ಇತ್ತು. ಇದರಿಂದಾಗಿ ಬಾವಿಯಲ್ಲಿ ನೀರು ಯಾವಾಗಲೂ ಇರ್‍ತಿತ್ತು. ಅದು ಬೆಳಕಿನಲ್ಲಿ ಫಳ ಫಳಾಂತ ಹೊಳೀತಾ ಇತ್ತು. ಅಜ್ಜಿಯ ಮನೆಯದ್ದು ಮತ್ತೆ ನಮ್ಮ ವಠಾರದ ಬಾವಿಯದ್ದು ನೀರು ಮಧ್ಯದಲ್ಲಿ ಮಾತ್ರ ಸೂರ್ಯನ ಬೆಳಕಿನಷ್ಟೇ ಬೆಳ್ಳಗೆ ಕಾಣುತ್ತಿತ್ತು, ಉಳಿದ ಭಾಗದಲ್ಲಿ ಕಪ್ಪಾಗಿ ಕಾಣುತ್ತಾ ಇತ್ತು. ಸಾರ್ವಜನಿಕ ಬಾವಿ ಹತ್ತಿರ ಹೋಗಬಾರದೂಂತ ಮನೆಯಲ್ಲಿ ಹೇಳಿದ್ದರೂ ಆ ನೀರಿನ ಹೊಳಪು ಬಾವಿಯಲ್ಲಿ ಇಣುಕಿ ಇಣುಕಿ ನೋಡುವಂತೆ ಮಾಡುತ್ತಿತ್ತು. ಯಾರೂ ಇಲ್ಲದೇ ಇದ್ದಾಗ ಇಣುಕಿ ನೋಡ್ತಾ ಇರಲಿಲ್ಲ ಅನ್ನೋದೇನೋ ಹೌದು.
ಮತ್ತೆ ಆ ಬಾವಿಯ ನೀರು ಬಹಳ ಸಿಹಿಯಾಗಿಯೂ ಇತ್ತು. ವಠಾರದ ಬಾವಿಯ ನೀರು, ಅಜ್ಜಿ ಮನೆಯ ಬಾವಿಯ ನೀರು ಸಪ್ಪೆ, ಸ್ವಲ್ಪ ಉಪ್ಪು. ಸಾರ್ವಜನಿಕ ಬಾವಿ ಎಲ್ಲರಿಗೂ ಮುಕ್ತವಾಗಿತ್ತು. ಬಾವಿಯ ಸುತ್ತ ಕಲ್ಲುಚಪ್ಪಡಿಯ ಅಗಲವಾದ ಹಾಸು ಇತ್ತು. ಅದನ್ನೇ ಒಗೆಯುವ ಬಂಡೆ ಮಾಡಿಕೊಂಡು ಬಟ್ಟೆ ಒಗೆದುಕೊಳ್ಳುವವರೂ ಇದ್ದರು. ದಾರಿಹೋಕರು, ಗಾಡಿ ಹೂಡಿಕೊಂಡು ಹೋಗುತ್ತಾ ಇರುವವರು ಬಾಯಾರಿಕೆ ಹಿಂಗಿಸಿಕೊಳ್ಳುತ್ತಿದ್ದರು. ಹೊಲಕ್ಕೆ ಹೋಗಿ ಹಿಂತಿರುಗಿ ಬರುವವರು ತಾವೂ ಸ್ನಾನ ಮಾಡುತ್ತಿದ್ದರು; ತಮ್ಮ ಎತ್ತುಗಳನ್ನು ನೊಗದಿಂದ ಬಿಡಿಸಿ ಅವುಗಳಿಗೂ ಸ್ನಾನ ಮಾಡಿಸುತ್ತಿದ್ದರು, ಕುಡಿಯುವುದಕ್ಕೆ ನೀರು ಕೊಡುತ್ತಿದ್ದರು. ಕೆಲವರು ನೀರು ಸೇದುತ್ತಿರುವವರಿಂದಲೇ ತಮ್ಮ ಬೊಗಸೆಗೆ ನೀರು ಹಾಕಿಸಿಕೊಂಡು ಕುಡಿಯುತ್ತಿದ್ದರು. ಇವೆಲ್ಲದರ ಜೊತೆಗೆ ಮಡಿ ಹೆಂಗಸರು ಇನ್ನೂ ಚುಮು ಚುಮು ಬೆಳಕು ಆಗುತ್ತಿದ್ದಂತೆ ಉಳಿದವರೆಲ್ಲ ಏಳುವುದಕ್ಕೆ ಮುಂಚೆ – ಬೇಸಿಗೆ, ಛಳಿಗಾಲ, ಮಳೆಗಾಲ ಎಂದಿಲ್ಲದೆ ಯಾವ ಕಾಲವಾದರೂ – ಈ ಬಾವಿಗೆ ಬಂದು ಸ್ನಾನಮಾಡಿ ಮಡಿ ನೀರು ತೆಗೆದುಕೊಂಡು ಹೋಗುತ್ತಿದ್ದರು. ಅವರ ಇಂಥ ಪರಿಸ್ಥಿತಿಗೆ ಏನು ಹೇಳಬೇಕು ಎನ್ನುವುದು ಗೊತ್ತಾಗುವುದಿಲ್ಲ. ಅವರು ಸ್ನಾನಕ್ಕೆ ಹೋಗುವ ಸಮಯದಲ್ಲಿ ಅವರ ಹೊರತಾಗಿ ಇನ್ನೊಂದು ನರಪಿಳ್ಳೆ ಬಾವಿಯತ್ತ ಸುಳೀತಾ ಇರಲಿಲ್ಲ. ಅವರ ಮುಖ ನೋಡಿದರೆ ಅಪಶಕುನ ಎನ್ನುವ ಮೂಢನಂಬಿಕೆ ಅವರಿಗೆ ರಕ್ಷಾಕವಚವೇ ಆಗಿತ್ತು ಎಂದು ಈಗ ನನಗೆ ಹೊಳೆಯುತ್ತಾ ಇದೆ.
ಈ ಬಾವಿಯಲ್ಲಿ ನೀರು ಸೇದಿಕೊಳ್ಳಲು ಕೆಲವರು ಅವರ ಮನೆಯ ಹಗ್ಗವನ್ನೇ ತೆಗೆದುಕೊಂಡು ಹೋಗುತ್ತಿದ್ದರು. ಆದರೂ ನನಗೆ ನೆನಪಿರುವ ಹಾಗೆ ಆ ಬಾವಿಯ ರಾಟೆಯಲ್ಲಿ ಯಾವಾಗಲೂ ಹಗ್ಗ ಇರ್‍ತಿತ್ತು. ಯಾರು ಅದರ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆ ಬಾವಿಯ ಎದುರು ಒಂದಷ್ಟು ಸಾಲುಮನೆಗಳಿದ್ದವು. ಅಲ್ಲಿ ಒಂದೆರಡು ಮನೆಯಲ್ಲಿ ನನ್ನ ಶಾಲಾ ಗೆಳತಿಯರು ಇದ್ದರು. ಅವರೆಲ್ಲಾ ಈ ಬಾವಿಯ ನೀರನ್ನೇ ಬಳಸುತ್ತಿದ್ದರು. ಬಾವಿಯ ಒಂದು ಪಕ್ಕ ಮದ್ರಾಸಿಗೆ ಹೋಗುವ ಹೈವೇ ರಸ್ತೆ, ಅದು ಹತ್ತಿರದ ಹಳ್ಳಿಗಳಿಗೆ ಲಿಂಕ್ ಕೊಡುವ ರಸ್ತೆಯೂ ಆಗಿತ್ತು. ಬಾವಿಯ ಇನ್ನೊಂದು ಪಕ್ಕ ಆಟದ ಮೈದಾನದ ತರಹ ಒಂದಷ್ಟು ಖಾಲಿ ಜಗ. ಅಲ್ಲಿ ಮಕ್ಕಳೆಲ್ಲಾ ಸೇರಿ ಆಟ ಆಡುತ್ತಿದ್ದರು. ಬಾವಿಯಿಂದ ಸ್ವಲ್ಪ ದೂರದಲ್ಲಿ ರಸ್ತೆ ಪಕ್ಕಕ್ಕೆ ಒಂದು ದೊಡ್ಡದಾದ, ಎತ್ತರವಾದ ಅರಳಿಮರ ಇತ್ತು. ಅದರ ಅಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವವರೂ ಇದ್ದರು. ಹೀಗಾಗಿ ಬಾವಿಕಟ್ಟೆ ಯಾವಾಗಲೂ ಗಿಜಿಗಿಜಿಯೇ. ಅಲ್ಲಿ ಚೆನ್ನಾಗಿ ಗಾಳಿ ಬೀಸ್ತಾ ಇರ್‍ತಿತ್ತು. ನಾವು ಆಗಾಗ ಗಾಳಿಪಟ ಹಾರಿಸೋದಿಕ್ಕೂ ಅಲ್ಲಿಗೆ ಹೋಗ್ತಾ ಇದ್ದೆವು.
ತೋಟದ ಬಾವಿ
ನಮ್ಮ ತಾತನ ತೋಟದಲ್ಲಿದ್ದದ್ದು ಇಳಿಯುವ ಬಾವಿ. ಅಂತಹುದು ಎರಡು ಇದ್ದವು. ಅದಕ್ಕೆ ಪಂಪ್ ಜೋಡಿಸಿದ್ದರು. ನೀರು ಸಣ್ಣ ಸಣ್ಣ ಕಾಲುವೆಗಳಲ್ಲಿ ಹರಿದು ಗಿಡ ಮರಗಳ ಬುಡಕ್ಕೆ ಹೋಗುತ್ತಿತ್ತು. ನಮ್ಮ ತಾತ ಬಗೆ ಬಗೆಯ ಹಣ್ಣಿನ ಮರಗಳನ್ನೂ, ಬಗೆ ಬಗೆಯ ಹೂಗಿಡಗಳನ್ನೂ ಬೆಳೆಸಿದ್ದರು. ತೋಟಕ್ಕೆ ತಾಗಿಕೊಂಡು ಇದ್ದ ಹೊಲದಲ್ಲಿ ರಾಗಿ, ಗದ್ದೆಯಲ್ಲಿ ಕೆಂಪಕ್ಕಿ ಬತ್ತ ಬೆಳೆಯುತ್ತಿದ್ದರು. ಅದಕ್ಕೆಲ್ಲಾ ಈ ಬಾವಿಗಳ ನೀರು ಬಳಕೆಯಾಗುತ್ತಿತ್ತು. ಪಂಪ್ ಹಾಕಿಸಿಕೊಳ್ಳುವ ಮುಂಚೆ ಏತದಿಂದಲೇ ನೀರು ಎತ್ತುತ್ತಿದ್ದರು. ತೋಟದ ಕೆಲಸ ಮಾಡಿ ಮುಗಿದ ಮೇಲೆ ಸ್ನಾನ ಮಾಡುವುದಕ್ಕೆ ಪಂಪಿನ ಪೈಪಿನ ಪಕ್ಕದಲ್ಲೇ ಒಂದಷ್ಟು ಜಾಗ ಇತ್ತು. ಅದಕ್ಕೆ ಕಲುಚಪ್ಪಡಿ ಹಾಸಿದ್ದರು. ಒಂದು ಸಣ್ಣ ತೊಟ್ಟಿಯೂ ಇತ್ತು. ಪೈಪನ್ನು ತಿರುಗಿಸಿ ತೊಟ್ಟಿಯಲ್ಲಿ ನೀರು ತುಂಬಿಸಿಕೊಳ್ಳಬಹುದಿತ್ತು. ನನ್ನ ಮಾವಂದಿರು, ಚಿಕ್ಕಮ್ಮಂದಿರು, ನಾವು ಅಕ್ಕ ತಂಗಿಯರು ಆಗಾಗ ತೋಟ ನೋಡಲು ಹೋಗುತ್ತಿದ್ದೆವು. ನಮ್ಮ ತಾತ ಆಗ ಎತ್ತಿನ ಗಾಡಿ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲಿ ನಮಗೆ ಎರಡು ಕೆಲಸ. ಒಂದು ಏನೇನು ಹಣ್ಣು ಇವೆಯೋ ಅವನ್ನು ಕೊಯ್ದು ತಿನ್ನುವುದು, ಹೂಗಳನ್ನು ಬಿಡಿಸಿ ಮಾಲೆ ಕಟ್ಟುವುದು. ಇನ್ನೊಂದು ಎಲ್ಲಾ ಕಾಲದಲ್ಲೂ ತಣ್ಣಗಿರುವ ಆ ನೆಲಬಾವಿಯ ನೀರನ್ನು ಪಂಪ್ ಮಾಡಿಕೊಂಡು ಜೋರಾಗಿ ದಬ ದಬ ಎಂದು ಸುರಿಯುವ ನೀರಿನಡಿ ನಿಂತು ಅಹಹ! ಉಹುಹು! ಎಂದು ಕುಣಿದಾಡುವುದು!
ಮಾವಂದಿರು ಬಾವಿಯಲ್ಲಿ ಇಳಿದು ಧೈರ್ಯವಾಗಿ ಈಜುತ್ತಿದ್ದರು. ತುಂಬಾ ಆಳದ ಮತ್ತೆ ಅಗಲದ ಬಾವಿಗಳು ಅವು. ಇಳಿಯುವುದಕ್ಕೆ ೫೦-೬೦ ಮೆಟ್ಟಿಲಾದರೂ ಇದ್ದವು ಎಂದು ನೆನಪು. ಬಾವಿಯ ವ್ಯಾಸ ೫೦’ ಇದ್ದಿರಬಹುದು. ಸುತ್ತ ಯಾವ ಬೇಲಿಯೂ ಇರಲಿಲ್ಲ. ಬಾವಿಯ ಹತ್ತಿರ ಓಡಾಡುವಾಗ ತುಂಬಾ ಎಚ್ಚರಿಕೆಯಿಂದಲೇ ಇರಬೇಕಿತ್ತು. ಜಾಗಕ್ಕೆ ಅಪರಿಚಿತರಾದವರು ಬಂದರೆ ತಾತ ಅವರ ಜೊತೆಗೇ ಹೋಗಿ ಬಾವಿಯಿಂದ ಅವರು ಯಾವ ತೊಂದರೆಗೂ ಸಿಕ್ಕಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದರು.
ಮಾನ್ಯುಮೆಂಟ್ ಬಾವಿ
ನಮ್ಮ ತಂದೆಗೆ ವರ್ಗವಾದಾಗ ಇದ್ದ ಬಾಡಿಗೆ ಮನೆಗಳಲ್ಲಿ ಬಾವಿ ಇದ್ದೇ ಇದ್ದವು. ಅಂತಹ ಮನೆಯನ್ನೇ ಹುಡುಕುತ್ತಿದ್ದರು ನನ್ನ ತಂದೆ. ತುಮಕೂರಿನಲ್ಲಿದ್ದಾಗ ಬಾವಿಯಿಂದ ನೀರು ಆಗಾಗ ಸೇದಿಕೊಳ್ಳುತ್ತಿದ್ದೆವು, ಅಷ್ಟೇ. ಅದು ಕಾಂಪೌಂಡಿನಲ್ಲಿ ಹಿತ್ತಿಲಲ್ಲಿತ್ತು. ಅದರಲ್ಲೂ ನೀರು 12-13′ ಆಳದಲ್ಲಿತ್ತು. ಅದರ ನೀರೂ ಹೊಳೀತಾ ಇತ್ತು. ಆದರೆ ಅದರ ಹೊಳಪು ಸಾರ್ವಜನಿಕ ಬಾವಿಯ ನೀರಿನ ತರಹದ್ದು ಆಗಿರಲಿಲ್ಲ. ಕಾರಣ ಗೊತ್ತಿಲ್ಲ. ಬೆಳಕು ಬೀಳುವ ಕೋನದಲ್ಲಿಯ ವ್ಯತ್ಯಾಸ ಇರಬಹುದು. ಈ ಬಾವಿಯ ಕಟ್ಟಡ ವಿಭಿನ್ನವಾಗಿತ್ತು. ಇದಕ್ಕೆ ದಪ್ಪ ಗಚ್ಚುಗಾರೆಯ ಗೋಡೆಯ ತರಹದ ಅರ್ಧವೃತ್ತಾಕಾರದ ವಿನ್ಯಾಸ ಇತ್ತು. ಅಜ್ಜಿ ಮನೆಯದು ಮತ್ತೆ ವಠಾರದ ಮನೆಯ ಬಾವಿಯದು ಕಲ್ಲಿನ ತೆಳುಗೋಡೆಯ ಚೌಕಾಕಾರದ ವಿನ್ಯಾಸ. ಬಾವಿಗಳಲ್ಲಿ ಇಳಿಯುವಾಗ ಕಾಲಿಟ್ಟುಕೊಳ್ಳಲು ಆಗುವಂತೆ ಸಣ್ಣ ಗೂಡುಗಳು ಇದ್ದವು. ಬಾವಿ ಸ್ವಚ್ಛಮಾಡುವವರು ಅದನ್ನು ಬಳಸಿಕೊಳ್ಳುತ್ತಿದ್ದರು. ಸಾರ್ವಜನಿಕ ಬಾವಿಯದೂ ಚೌಕಾಕಾರವೇ. ಅದರ ಕಲ್ಲಿನ ಗೋಡೆ ಮುಕ್ಕಾಲು ಅಡಿಯಷ್ಟು ದಪ್ಪದ್ದು.
ಮೈಸೂರಿಗೆ ಬಂದಮೇಲೆ ಒಂದು ಮನೆಯಲ್ಲಿ ಬಾವಿ ಒಂದು ಸ್ಮಾರಕವಾಗಿ ಕಾಂಪೌಂಡಿನ ಮೂಲೆಯಲ್ಲಿತ್ತು! ಇನ್ನೊಂದು ಮನೆಯಲ್ಲಿ ಭದ್ರವಾದ ಬೀಗ ಹಾಕಿದ ಮೆಷ್ ಬಾಗಿಲ ಬಂದೋಬಸ್ತಿನ ಅಡಿಯಲ್ಲಿ ಸುಖವಾಗಿತ್ತು! ಮುಂದೆಂದೂ ಬಾವಿ ಒಂದು ಈವೆಂಟ್ ಆಗಲಿಲ್ಲ ಎಂದುಕೊಳ್ಳುವ ವೇಳೆಗೆ ಒಂದು ವಿಚಿತ್ರವಾದ ಬಾವಿಯ ನೆನಪಾಯಿತು. ಬೆಂಗಳೂರಿನಲ್ಲಿ ಒಂದು ಮನೆಯ ಒಳಗೆ ವೆರಾಂಡದಲ್ಲಿ ಬಾವಿ ಇತ್ತು. ಅದರ ಮೇಲೆ ಹಲಗೆಯಂತಹುದೇನನ್ನೋ ಮುಚ್ಚಿದ್ದರು. ಅದು ನೆಲದ ತರಹವೇ ಕಾಣುತ್ತಿತ್ತು. ಅವರು ಹೇಳಿದುದರಿಂದ ಮಾತ್ರ ಅಲ್ಲಿ ಬಾವಿ ಇದೆ ಎನ್ನುವುದು ಗೊತ್ತಾದದ್ದು. ಅದರಲ್ಲಿ ನೀರೂ ಇತ್ತು. ವರ್ಷಕ್ಕೊಂದು ಸಾರಿ ಸುಣ್ಣ ಹಾಕಿ ಅದರ ನೀರು ಅಡ್ಡ ವಾಸನೆ ಇಲ್ಲದೆ ಸ್ವಚ್ಛವಾಗಿರುವ ಹಾಗೆ ನೋಡಿಕೊಳ್ಳುತ್ತಿದ್ದರು.
ನೀರಿನ ಅಗತ್ಯವಿದ್ದರೂ ನೀರಿದ್ದ ಕೆರೆಗಳ ನೀರನ್ನೇ ಆರಿಸಿ ಸೈಟ್ ಮಾಡಿ ಮಾರಾಟ ಮಾಡುವ ಈ ಕಾಲದಲ್ಲಿ ಬಾವಿಯ ನೀರಿನ ಅಗತ್ಯವಿಲ್ಲದಿದ್ದರೂ ಅದನ್ನು ಮುಚ್ಚಿಸುವ ಯೋಚನೆ ಮಾಡದೆ ಅವರು ಹೊಸದಾಗಿ ಮನೆ ಕಟ್ಟಿಕೊಂಡಾಗ ಅದನ್ನು ತಮ್ಮ ಮನೆತನದವರಿಗೆ ಬದುಕು ಕೊಟ್ಟ ಬಾವಿ ಎಂದು ಉಳಿಸಿಕೊಂಡಿದ್ದರು. ಮನೆಯ ಸದಸ್ಯ ಎನ್ನುವ ಹಾಗೆ ಮನೆಯೊಳಗೇ ಅದಕ್ಕೆ ಜಾಗ ಕೊಟ್ಟಿದ್ದರು. ಆ ಬಾವಿ ನಿಜವಾಗಲೂ ಅವರ ಲೆಕ್ಕಕ್ಕೆ ಮಾತ್ರವಲ್ಲ ನಮಗೂ ಒಂದು ಹೆರಿಟೇಜ್ ಮಾನ್ಯುಮೆಂಟೇ!
ಬದುಕಿಗೂ ಬಾವಿಗೂ ಅನ್ಯೋನ್ಯ ನಂಟು. ಚೆನ್ನಾಗಿ ಓದಿ ಮುಂದೆ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವವರ ಬದುಕಿನ ಹಿಂದೆಯೂ ಬಾವಿ ಇದೆ, ಇದ್ದ ಹಾಗೆಯೇ ಇರುತ್ತೇನೆ, ರೂಢಿಗತತೆ ಸಾಕು ಎನ್ನುವವರ ಬದುಕಿನ ಹಿಂದೆಯೂ ಬಾವಿ ಇದೆ. ಬಾವಿಯೊಂದಿಗಿನ ನಡೆ ಸಂತೋಷ, ಉಲ್ಲಾಸದ ಭಾಗ ಆಗುವುದು ಒಂದು ಸಾಧ್ಯತೆ, ಬದುಕಿಗೆ ದೊರೆಯುವ ಒಂದು ಆಯಾಮ, ಅಷ್ಟೇ. ಬದುಕು ಚಿಗುರಲಿ ಎನ್ನುವ ಆಶಯಕ್ಕೆ ಸಂಕೇತವಾಗಿ ಬಾವಿ ಸದಾ ಮರ್ಯಾದಿತ.
–ಪದ್ಮಿನಿ ಹೆಗಡೆ
Nice article
ನೆನಪಿನಾಳದಿಂದ ಹೆಕ್ಕಿ ತೆಗೆದ ಭಾವಿಸಿದ ಬಾವಿ ಲೇಖನ ಬಹಳ ಆಪ್ತವಾಗಿ ಮೂಡಿ ಬಂದಿದೆ ಮೇಡಂ.
ಹಳೆಯ ನೆನಪುಗಳನ್ನು ಹೊಸ ಹೊಳಹಿನಿಂದ ಗಮನಿಸಿ ಬರೆದ ಸೊಗಸಾದ ಬರಹ. ಬಾವಿಯೊಂದಿಗೆ ಬೆಸೆದ ಭಾವಗಳನ್ನು ಬಹಳ ಆಪ್ತವಾಗಿ ನಿರೂಪಿಸಿದ್ದೀರಿ ಮೇಡಂ.
ಬಾವಿಯ ಕುರಿತಾದ ಸೊಗಸಾದ ಲೇಖನ. ಹಿಂದಿನ ಕಾಲದಲ್ಲಿ ಬಾವಿಗಳಿಲ್ಲದ ಬದುಕೇ ಊಹಿಸಿಕೊಳ್ಳಲಾಗದು.
ಆದರೂ ನಿಮ್ಮ ಸ್ಕಿಪಿಂಗ್ ಗೆ ಆ ಅವಸ್ಥೆ ಬರಬಾರ್ಇತ್ತು.
ನಿಮ್ಮ ಜೀವನದ ಬೇರೆ ಬೇರೆ ಮಜಲುಗಳಲ್ಲಿ ಸಂಧಿಸಿದ ಬಾವಿಗಳ ಕಥೆಗಳು ಬಹಳ ಇಷ್ಟವಾಯ್ತು.
ವಿವಿಧ ಬಾವಿಗಳ ಆಳದಿಂದ ಮೊಗೆದ ಸಿಹಿ ನೀರಿನ ಸವಿ ನೆನಪುಗಳು ಚೆನ್ನಾಗಿ ಮೂಡಿ ಬಂದಿದೆ
ನನ್ನೂರಿನ ಬಾವಿಗಳು ನೆನಪಿಗೆ ಬಂದವು, ಚೆನ್ನಾಗಿದೆ ಬರಹ