ಶಕ್ತಿವಂತ ಸ್ವಾಮಿಭಕ್ತ ಆಂಜನೇಯ

Share Button

ಯಾವುದೇ ಸಣ್ಣ-ಪುಟ್ಟ ಕಾರ್ಯವೂ ಯಶಸ್ವಿಯಾಗಬೇಕಾದರೆ ನಿಷ್ಠೆ, ಏಕಾಗ್ರತೆ ಬೇಕು. ವಿಶೇಷವಾದ ಕಾರ್ಯ  ? ಪೂರ್ವಯೋಜಿತವಾಗಿದ್ದರೆ ಸುಗಮವಾಗಿ ಸಾಗ್ಕಾಬಹುದು. ಹಾಗಾದರೆ ಘನವಾದ ಕಾರ್ಯ..? ಬಲವಾದ ಶಕ್ತಿ, ಸಾಮರ್ಥ್ಯ ಬೇಕೇ ಬೇಕು. ಎಲ್ಲದಕ್ಕೂ ಮಿಗಿಲಾಗಿ ಚಾತುರ್ಯ, ಜಾಣ್ಮೆ ಅತೀ ಅಗತ್ಯ. ಮಾನವಾತೀತ ಕಾರ್ಯಕ್ಕೆ ‘ಸಿದ್ಧಿ’ ಬೇಕು. ಸಿದ್ಧಿ ಕೈಗೂಡಿದವರು ಎಂತಹ ಕಠಿಣತಮ ಕೆಲಸವನ್ನಾದರೂ ಹೂ ಎತ್ತಿದಂತೆ ಮಾಡಬಲ್ಲರು ಎಂಬುದು ಅನುಭವಿಗಳ ಮಾತು. ಸಿದ್ದಿ ಎಂದಾಗ ನೆನಪಿಗೆ ಬರುವವ ಆಂಜನೇಯ. ಈ ಆಂಜನೇಯನೆಂದರೆ ಯಾರು ? ಇಂತಹ ಅಲೌಕಿಕ ಶಕ್ತಿ ಆಂಜನೇಯನಿಗೆ ಹೇಗುಂಟಾಯಿತು ? ಎಲ್ಲಿ ಪ್ರದರ್ಶನವಾಯಿತು? ಎಂಬುದನ್ನೊಮ್ಮೆ ಅವಲೋಕಿಸೋಣ.

ರಾಮಾಯಣವೆಂಬುದು ಅಮರವಾದುದು. ಜಗತ್ತನ್ನು ಪಾವನಗೊಳಿಸುವ ಮಹಾನದಿಯೆಂದೂ ಉಲ್ಲೇಖಿಸಬಹುದು. ನಿತ್ಯನೂತನವಾದ ರಾಮಾಯಣವೆಂಬ ಮಹಾಪುರಾಣದಲ್ಲಿರುವ ದೇವತಾ ಪುರುಷ ಶ್ರೀರಾಮನನ್ನು ನೆನೆಯದ ಹಿಂದುಗಳಿಲ್ಲ. ರಾಮ ಪ್ರೇಮಿಗಳು ಸ್ವಾಮಿ ಭಕ್ತ ಹನುಮನನ್ನೂ ಪೂಜಿಸಿಯೇ ಪೂಜಿಸುತ್ತಾರೆ. ಯಾಕೆಂದರೆ ಎಲ್ಲಿ ರಾಮನಿರುವನೋ ಅಲ್ಲಿ ಹನುಮನೂ ಇರುತ್ತಾನೆ. ರಾಮನ ಬಂಟ ಹನುಮಂತ.

ಹನುಮನ ಜನನ

ಗೌತಮ ಮತ್ತು ಅಹಲ್ಯೆಯರ ಪುತ್ರಿ ಅಂಜನೆ. ಈಕೆಯ ಪತಿ ವಾನರ ನಾಯಕನಾದ ಕೇಸರಿ, ಇವರಿಗೆ ಸಂತಾನವಾಗದಿರಲು ಅಂಜನೆ ಶಿವನನ್ನು ಸ್ತುತಿಸಿದಳು. ಶಿವನು ಪಾರ್ವತಿಯ ಗರ್ಭವನ್ನು ಆಕೆಯ ಹೊಕ್ಕುಳ ಪ್ರದೇಶದಿಂದ ಹೊರತೆಗೆದು ವಾಯುವಿನ ಮೂಲಕ ಅಂಜನೆಯ ಕೈಯಲ್ಲಿಡಲು ಆಕೆ ಅದನ್ನು ನುಂಗಿದಳು. ಪರಿಣಾಮವಾಗಿ ಹುಟ್ಟಿದ ವೀರನೇ ಆಂಜನೇಯ, ಆತನಿಗೆ ಹನುಮಂತ, ಜಿರಂಜೀವಿ, ಪವನಜ,  ಮುಖ್ಯಪ್ರಾಣ, ಮಾರುತಿ ಹೀಗೆ ಹಲವು ಹೆಸರುಗಳು, ಆಂಜನೆಯ ಮಗನಾದುದರಿಂದ ಆಂಜನೇಯ. ಇವನು ಬ್ರಹ್ಮಚಾರಿಯಾಗಿಯೇ ಉಳಿದವ.

ಬಾಲ್ಯದಲ್ಲಿ ಆಂಜನೇಯನು ಬಾಲಸೂರ್ಯನನ್ನು ಹಣ್ಣೆಂದು ಭ್ರಮಿಸಿ ತಿನ್ನುವುದಕ್ಕೆಂದು ಆಕಾಶಕ್ಕೆ ನೆಗೆದನಂತೆ. ಅಷ್ಟರಲ್ಲಿ ದೇವೇಂದ್ರನು ಈ ಅನರ್ಥವನ್ನು ಕಂಡು ತನ್ನ ವಜ್ರಾಯುಧದಿಂದ ಹೊಡೆಯಲು ಆಂಜನೇಯನ ಮುಖವು ಜಜ್ಜಿ ಹೋಗಿ ಅವನು ನೆಲಕ್ಕುರುಳಿದನಂತೆ. ಇದನ್ನು ಕಂಡ ವಾಯುವಿಗೆ ಸಹಿಸುವದಕ್ಕಾಗಲಿಲ್ಲ. ಪುತ್ರಶೋಕದಿಂದ ಆತನು ಮರೆಯಾದನು. ವಾಯು ರಹಿತವಾದ ಧರಿತ್ರಿಯನ್ನು ಕಲ್ಪಿಸುವುದಕ್ಕೆ ಸಾಧ್ಯವೇ…?  ಎಲ್ಲರ ದೂರು ಬ್ರಹ್ಮನಿಗೆ ಹೋಯಿತು. ಬ್ರಹ್ಮನು ಆಂಜನೇಯಯನ್ನು ಬದುಕಿಸಿದ್ದೂ ಅಲ್ಲದೇ ‘ನಿನಗಿನ್ನು ಮರಣ ಬಾರದಿರಲಿ’ ಎಂದು ವರವನ್ನಿತ್ತನು. ಅಂದಿನಿಂದ ಆತನು ಹನುಮಂತನಾಗಿಯೂ ಚಿರಂಜೀವಿಯಾಗಿಯೂ ಗುರುತಿಸಲ್ಪಟ್ಟನು.

ಬಾಲ್ಯದ ಹುಡುಗಾಟಿಕೆಯಲ್ಲಿ ಹನುಮಂತನು ಕೀಟಲೆ ಕೊಡುವ ಕೋಟಲೆಯಾಗಿದ್ದನಂತೆ. ಋಷ್ಯಾಶ್ರಮಗಳಿಗೆ ನುಗ್ಗಿ ಋಷಿ-ಮುನಿಗಳಿಗೆ ಕಿರುಕುಳ ಕೊಡುತ್ತಿದ್ದನಂತೆ. ಈ ಸಂದರ್ಭದಲ್ಲಿ ಒಂದು ದಿನ ಋಷಿಗಳು ‘ನಿನ್ನ ಬುದ್ದಿಗೆ ಮೌಢ್ಯ ಬರಲಿ’ ಎಂದು ಕೋಪದಿಂದ ಶಪಿಸಿದರಂತೆ. ಇದರಿಂದ ಅವನ ತಾಯಿಯಾದ ಅಂಜನೆಗೆ ದುಃಖವಾಗಿ ಮಗನನ್ನು ಋಷಿಗಳ ಪಾದದಲ್ಲಿಟ್ಟು ಕ್ಷಮಿಸುವಂತೆ ಪ್ರಾರ್ಥಿಸಿಕೊಂಡಳಂತೆ. ಪರಿಣಾಮವಾಗಿ ಕೋಪ ಕರಗಿದ  ಅವರು ‘ಮುಂದೆ ಧರ್ಮೋದ್ದಾರಕನಾದ ಅವತಾರ ಪುರುಷ ಶ್ರೀರಾಮನ ಪಾದ ಸ್ಪರ್ಶದಿಂದ ಮೌಢ್ಯ ನೀಗಿ ಪೂರ್ಣತೆಯನ್ನು ಪಡೆಯಲಿ’ ಎಂದು ಮರುಶಾಪ ನೀಡಿ ಒಂದು ಕರ್ಣಕುಂಡಲವನ್ನು ಅಂಜನೆಯ  ಕೈಗಿತ್ತು  ಹನುಮನ ಕಿವಿಗೆ ಹಾಕಿಕೊಳ್ಳಲು ಸೂಚಿಸಿದರಂತೆ. ಅಲ್ಲಿಂದ ಮುಂದೆ ಅವನು ರಾಮ ನಿರೀಕ್ಷೆಯಲ್ಲೇ  ಕಾಲ ಕಳೆಯುತ್ತಿದ್ದನು.

ವಾಲಿ ಮತ್ತು ಸುಗ್ರೀವರು ಅಂಜನೆಯ ಸಹೋದರರು, ಅರ್ಥಾತ್ ಹನುಮನ ಸೋದರ ಮಾವಂದಿರು. ಅವರಿಬ್ಬರೂ ಸೋದರರಾದರೂ ಪರಸ್ಪರ ವೈರಿಗಳು. ಅವರಿಬ್ಬರಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದುವು. ವಾಲಿ ದುಷ್ಟ, ಸುಗ್ರೀವ ಸದ್ಗುಣಿ. ಸುಗ್ರೀವನ ಪತ್ನಿ ‘ರುಮೆ’ಯನ್ನು ವಾಲಿ ಅಪಹರಿಸಿ ಇಟ್ಟುಕೊಂಡಿದ್ದ. ವಾಲಿ ಕಿಷ್ಕಿಂಧೆಯಲ್ಲಿ ಅರಸನಾಗಿದ್ದ. ಸುಗ್ರೀವ ಋಷ್ಯಮೂಕ ಪರ್ವತದ ಪರಿಸರದಲ್ಲಿದ್ದ ಕಪಿಗಳಿಗೆ ರಾಜನಾಗಿದ್ದು ಹನುಮ ಮಂತ್ರಿಯಾಗಿದ್ದ, ಸುಗ್ರೀವನು ಋಶ್ಯಮೂಕ ಪರ್ವತದಲ್ಲಿ ವಾಲಿಯಿಂದ ಸುರಕ್ಷಿತವಾಗಿರಲು ಒಂದು ಕಾರಣವಿತ್ತು.

ಹಿಂದೆ ವಾಲಿಯು ‘ದುಂದುಭಿ” ಎಂಬ ರಾಕ್ಷಸನನ್ನು ಕೊಂದು ಅವನ ರುಂಡವನ್ನೂ ಅಪವಿತ್ರ ರಕ್ತವನ್ನೂ ಮತಂಗ ಋಷಿಗಳ ಆಶ್ರಮದ ಬಳಿ ಎಸೆದಿದ್ದ ಕಾರಣ  ಮುನಿಯು ಕೋಪಗೊಂಡು ‘ಈ ಋಷಮೂಕ ಪರ್ವತಕ್ಕೆ  ವಾಲಿಯು ಬಂದರೆ ಅವನಿಗೆ ಮರಣ ಪ್ರಾಪ್ತವಾಗಲಿ’ ಎಂದು ಶಾಪವಿತ್ತುದರಿಂದ ವಾಲಿಯು ಅಲ್ಲಿಗೆ ಬರಲು ಹೆದರುತ್ತಿದನು.

ದುಷ್ಟ ನಿಗ್ರಹನೂ ಶಿಷ್ಟ ರಕ್ಷಕನೂ ಆಗಿದ್ದ ಶ್ರೀರಾಮನು ಲಕ್ಷ್ಮಣ ಸಮೇತನಾಗಿ ಸೀತಾನ್ವೇಷಣೆಯಲ್ಲಿ ಋಷ್ಯಮೂಕ ಪರಿಸರದಲ್ಲಿ ಹಾದು ಹೋಗುತ್ತಿದ್ದಾಗ ಸುಗ್ರೀವನು ದೂರದಿಂದ ಗಮನಿಸಿದನು. ಅವರು ಯಾರೆಂದು ತಿಳಿದು ಬರಲು ಹನುಮಂತನನ್ನು ಕಳುಹಿಸುತ್ತಾನೆ. ಪರಸ್ಪರ ಪರಿಚಯಿಸಿಕೊಂಡಾಗ ವಿಷಯ ತಿಳಿಯುತ್ತದೆ. ಹನುಮನ ಕಿವಿಯಲ್ಲಿ ಇದುವರೆಗೆ ಅಜ್ಞಾತವಾಗಿದ್ದ ಕರ್ಣಕುಂಡಲವು ಶ್ರೀರಾಮನ ದಿವ್ಯ ದೃಷ್ಟಿಗೆ ಗೋಚರಿಸಿ, ಅದರ ಬಗ್ಗೆ ರಾಮನು ವಿಚಾರಿಸುತ್ತಾನೆ. ಆಗ ಆಂಜನೇಯನು “ಕರುಣಾರ್ಣವನಾದ ಶ್ರೀರಾಮಚಂದ್ರ…. ನಿನ್ನ ಪಾದ ಸೇವೆಯ ಭಾಗ್ಯವನ್ನು ನನಗಿತ್ತು ನನ್ನನ್ನು ಉದ್ಧರಿಸು‘ ಎಂದು ಶ್ರೀರಾಮನ ಪಾದಕಮಲದಲ್ಲಿ  ಬೀಳುತ್ತಾ ಕರ್ಣಕುಂಡಲವನ್ನು ತನ್ನಮ್ಮ ತೊಡಿಸುವಾಗ ಹೇಳಿದ ಅಮ್ಮನ ಹರಕೆಯನ್ನು ಸ್ವಾಮಿಯ ಮುಂದೆ ವಿವರಿಸುತ್ತಾನೆ. ಕೂಡಲೇ ಶ್ರೀರಾಮನು ಹನುಮನನ್ನೆತ್ತಿ ಬಿಗಿದಪ್ಪಿಕೊಂಡು ನಿನ್ನ ಅಭೀಷ್ಟವು ಸಿದ್ದಿಸಲಿ. ನಿನ್ನ ಅಮ್ಮನ  ಅಪ್ಪಣೆಯಂತೆ ನನಗಾಗಿ ಕಾದು ಹಂಬಲಿಸುತ್ತಿರುವ ನಿನ್ನನ್ನು ನಾನೆಂದಿಗೂ ಬಿಡಲು ಸಾಧ್ಯವಾಗದು. ನಿನ್ನ ಇಷ್ಟಾರ್ಥವು ಗುರುತರವಾದುದು. ಶ್ಲಾಘನೀಯವೂ ಆಗಿದೆ. ಇದೋ ಈ ನನ್ನ ಲಕ್ಷ್ಮಣನಂತೆಯೇ ನಿನ್ನನ್ನೂ ನೋಡಿಕೊಳ್ಳುವೆನು ಎಂದು ಅನುಗ್ರಹಿಸುತ್ತಾನೆ.

ಸ್ವಾಮಿ ಸೇವೆ :

ಸುಗ್ರೀವ ದರ್ಶನಕ್ಕಾಗಿ ಋಷ್ಯಮೂಕ ಗಿರಿ ಶಿಖರಕ್ಕೆ ರಾಮ – ಲಕ್ಷ್ಮಣರಿಬ್ಬರನ್ನೂ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುವೆನೆಂಬ ತನ್ನ ಅಪೇಕ್ಷೆಯನ್ನು ರಾಮನ ಮುಂದಿಡುತ್ತಾನೆ ಹನಮಂತ. ನಾವು ನಡೆಯಬಲ್ಲೆವಾದರೂ ನಿನ್ನ ಅಭೀಷ್ಟೆ ಈಡೇರಲಿ ಎನ್ನುತ್ತಾ ಒಪ್ಪಿಗೆ ಸೂಚಿಸುತ್ತಾನೆ ಶ್ರೀರಾಮ, ಹಸನ್ಮುಖನಾದ ಹನುಮಂತ ತನ್ನ ಎರಡು ಹೆಗಲ ಮೇಲೆ ಅಣ್ಣ-ತಮ್ಮಂದಿರಿಬ್ಬರನ್ನೂ ಹೊತ್ತುಕೊಂಡು ಋಷ್ಯಮೂಕ ಬೆಟ್ಟವನ್ನು ಹತ್ತುತ್ತಾನೆ. ಹನುಮಂತನೇ ವಾಹನವಾಗಿ ನಡೆದ ದೇವಾಂಶ ಸಂಭೂತರಾದ ಆ ಸಹೋದರರಿಬ್ಬರೂ ಸಂತೋಷದಿಂದ ಸುಗ್ರೀವನ ಮುಂದೆ ಬಂದಿಳಿದರು. ಸುಗ್ರೀವನಿಂದ ವಾಲಿಯ ನೀಚತನ, ತಾನು ಕೈಹಿಡಿದ ಮಡದಿಯನ್ನು ದುಷ್ಟಪರಾಕ್ರಮಿಯಾದ ವಾಲಿ ವಶಪಡಿಸಿಕೊಂಡ ದುಃಖವನ್ನು ತೋಡಿಕೊಂಡನು.

ಶ್ರೀರಾಮನ ಸಹಾಯದಿಂದ ಸುಗ್ರೀವನು ವಾಲಿಯನ್ನು ಸಂಹಾರ ಮಾಡಿದನು. ಹನುಮಂತನು ಸೀತಾನ್ವೇಷಣೆಯಲ್ಲಿ  ರಾಮನಿಗೆ ನರವಾದನು. ಇವನು ಯೋಜನ ದೂರ ಹಾರುವ ಶಕ್ತಿ ಉಳ್ಳವನೆಂದು ರಾಮಾಯಣದಲ್ಲಿ ಉಲ್ಲೇಖವಿದೆ. ಒಂದು ಯೋಜನ ದೂರವೆಂದರೆ 8 ಮೈಲಿಗಳೆಂದು ತಜ್ಞರ ಅಭಿಪ್ರಾಯ. ಲಂಕೆಗೆ ಹಾರಿ ಅಶೋಕವನದಲ್ಲಿ ಸೀತೆಯನ್ನು ಕಂಡು ಹಿಡಿದು ಶ್ರೀರಾಮ ಮುದ್ರೆಯುಂಗುರವನ್ನು ನೀಡಿ, ಆಮೇಲೆ ಸೀತೆಯಿಂದ ಚೂಡಾಮಣಿಯನ್ನು ಪಡೆದು ರಾವಣನ ಸೇವಕರು ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದಲೇ ಲಂಕೆಯನ್ನು ಸುಟ್ಟು, ಶ್ರೀರಾಮನ ಬಳಿಗೆ ಸುಖವಾಗಿ ಹಿಂತಿರುಗಿ ಬಂದು ಒಪ್ಪಿಸಿದಾಗ ಅತೀವ ಸಂತೋಷವಾದ ಶ್ರೀರಾಮನು ತನ್ನ ಹೃದಯ ಪೂರ್ತಿಯಾಗಿ ಭಕ್ತನನ್ನು ಆಲಂಗಿಸಿಕೊಂಡನು. ಅರಣ್ಯವಾಸಿಯಾದ ಸ್ವಾಮಿಯು ಬೇರಾವುದನ್ನೂ ಕೊಡಲಾರದೆ ಹೋದರೂ ಭಕ್ತನಾದ ಭೃತ್ಯನಿಗೆ ಇದಕ್ಕಿಂತ ಹೆಚ್ಚಿನ ಕೊಡುಗೆ ಇನ್ನೇನು ಬೇಕು…?

ಹನುಮಂತನು ಯಾವ ವಿಪತ್ತನ್ನಾದರೂ ದಾಟಿ ಹೋಗುವ ವೀರ, ರಾವಣನನ್ನು  ಜಯಿಸುವುದರಲ್ಲಿ ರಾಮನ ಅನುಯಾಯಿಯಾಗಿ ಪ್ರಾಮಾಣಿಕತೆಯಿಂದ ಸೇವೆಯನ್ನು ನೈತಿಕ ಶಕ್ತಿ, ಸರಳತೆ, ವಿನಯ, ಪೌರುಷ ಇದಕ್ಕಿಂತಲೂ ಹೆಚ್ಚಾಗಿ ಸ್ವಾಮಿನಿಷ್ಠೆ ಆತನಲ್ಲಿ ಮನೆ ಮಾಡಿತ್ತು. ಆಂಜನೇಯನ ಸೇವೆಯ ಆದರ್ಶ ಜಗತ್ತಿಗೆ ಮಾರ್ಗದರ್ಶನವಾದು. ಇಂತಹ ಶ್ರೀರಾಮ ದೂತನು ಸದಾ ಪೂಜಿಸತಕ್ಕವನು. ಅಂತೆಯೇ ಸೀತಾ, ಲಕ್ಷ್ಮಣರಿಂದೊಡಗೂಡಿದ ಶ್ರೀರಾಮನ ಪಾದ ತಲದಲ್ಲಿ ತಲೆಬಾಗಿ ನಮಿಸುವ ಆಂಜನೇಯನನ್ನು ಕಾಣುತ್ತೇವೆ. ಅವನು ಈಗಲೂ ಇದ್ದಾನೆ ಎಂಬುದು ನಂಬಿಕೆ.  ಸಪ್ತ ಚಿರಂಜೀವಿಗಳಲ್ಲಿ ಒಬ್ಬ ಹನುಮಂತ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

8 Responses

  1. ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

  2. ನಾಗರತ್ನ ಬಿ. ಅರ್. says:

    ಎಂದಿನಂತೆ ಪುರಾಣ ಕಥೆ ಓದಿಸಿಕೊಂಡು ಹೋಯಿತು.ಕಥೆ ಪಡಿಮೂಡಿಸಿರುವ ರೀತಿ ಬಹಳ ಹಿಡಿಸಿತು ಮೇಡಂ ಧನ್ಯವಾದಗಳು.

  3. . ಶಂಕರಿ ಶರ್ಮ says:

    ರಾಮ ಪಾದ ಸೇವಕ, ವೀರ ಹನುಮನ ಜೀವನವನ್ನು ವರ್ಣಿಸುವ ಸೊಗಸಾದ ಪೌರಾಣಿಕ ಕಥೆ… ಧನ್ಯವಾದಗಳು ವಿಜಯಕ್ಕ.

  4. ಪಿ. ಶಿವಕುಮಾರಿ says:

    ಕಥೆ ತುಂಬಾ ಲಾಯಿಕಿಲ್ಲಿ ಓದುಸಿಗೊಂಡು ಹೋತು ವಿಜಯಕ್ಕ

  5. ನಯನ ಬಜಕೂಡ್ಲು says:

    ಚೆನ್ನಾಗಿದೆ

  6. Padma Anand says:

    ಸ್ವಾಮಿನಿಷ್ಠೆಗೆ ಹೆಸರಾದ ಹನುಮಂತನ ಪೌರಾಣಿಕ ಕಥಾನಕ ಸೊಗಸಾಗಿ ಮೂಡಿ ಬಂದಿದೆ

  7. ಹನುಮನ ಪೌರಾಣಿಕ ಕಥೆ ಚೆನ್ನಾಗಿ ಮೂಡಿಬಂದಿದೆ

  8. padmini says:

    ಹನುಮನ ಕಥೆ ಚೆನ್ನಾಗಿದೆ

Leave a Reply to ಪಿ. ಶಿವಕುಮಾರಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: