ವಾಸನೆ ಒಂದು ಚಿಂತನೆ

Share Button

2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ ರೋಗ ಲಕ್ಷಣವೆಂದರೆ ವಾಸನೆಗಳನ್ನು ಗುರುತಿಸಲಾಗದ ಸ್ಥಿತಿ. ಇದೇ ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ್ದು ಎನ್ನಬಹುದು. ವಾಸನೆ ಎಂಬುದು ಒಂದು ಸಾಮಾನ್ಯ ಪದ. ವಿವಿಧ ರೀತಿಯ ವಾಸನೆಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ವರ್ಣಿಸುತ್ತೇವೆ. ಬಹಳ ಒಳ್ಳೆಯ ವಾಸನೆ ಇದ್ದರೆ ಅದನ್ನು ಸುವಾಸನೆ, ಪರಿಮಳ, ಸುಗಂಧ ಇತ್ಯಾದಿ ಪದಗಳಿಂದ ಗುರುತಿಸುತ್ತೇವೆ. ಹೂವು, ಗಂಧ, ಸಾಂಬ್ರಾಣಿ ಇವು ಈ ವರ್ಗಕ್ಕೆ ಸೇರುತ್ತದೆ. ವಾಸನೆ ತಡೆಯಲಾರದೆ ಇದ್ದರೆ‌ ಅದನ್ನು ದುರ್ಗಂಧ, ದುರ್ವಾಸನೆ ಎನ್ನುತ್ತೇವೆ. ಚರಂಡಿ, ಗಾಂಜಾ, ಸಿಗರೇಟು, ಕಾರ್ಖಾನೆಯ ಹೊಗೆ ಈ ವರ್ಗಕ್ಕೆ ಸೇರುತ್ತದೆ. ಪಂಚೇಂದ್ರಿಯಗಳಲ್ಲಿ ಒಂದಾದ ನಾಸಿಕ ಇದನ್ನು ಗುರುತು ಹಿಡಿಯುತ್ತದೆ. ಕೋವಿಡ್ ಸಂತ್ರಸ್ಥರಲ್ಲಿ ಈ ಗ್ರಂಥಿ ಕೆಲಸ ನಿಲ್ಲಿಸಿ ಯಾವ ವಾಸನೆಯನ್ನೂ ಸೆರೆಹಿಡಿಯದೆ ನಿಸ್ತೇಜವಾಗುತ್ತದೆ. ಅಲ್ಲದೆ ನಾಲಿಗೆಯೂ ತನ್ನ ಕಾರ್‍ಯ ನಿಲ್ಲಿಸಿ ಉಪ್ಪು, ಹುಳಿ, ಖಾರ ಎಂಬ ಯಾವ ಒಂದು ರುಚಿಯನ್ನು ಮಿದುಳಿಗೆ ತಲುಪಿಸಿ ಆಸ್ವಾದಿಸಲು ವಿಫಲವಾಗುತ್ತದೆ. ಇದರ ಕಷ್ಟ ಅನುಭವಿಸಿದವರಿಗೇ ಗೊತ್ತು.

ಇವಿಷ್ಟು ಕೋವಿಡ್ ಕಥೆಯಾದರೆ ವಾಸನಾ ಗ್ರಹಣಶಕ್ತಿ ಕುಂದಿದರೆ ಇನ್ನೆಷ್ಟು ಅಪಾಯಗಳಿವೆ ನೋಡೋಣ. ವಾಸನಾ ಗ್ರಹಣಶಕ್ತಿ ಕುಂದಿದರೆ ಅದು ‘ಆಲ್‌ಜಮೀರ್’ ಕಾಯಿಲೆಯ (ಮರೆವು ಕಾಯಿಲೆ), ‘ಸಿಜೋಫ್ರಿನಿಯಾ’ (ಮನೋವೈಜ್ಞಾನಿಕ, ಎರಡು ಚಿತ್ತ), ‘ಸ್ವಯಂ ಅಭಾಧಿತ’ (Auto Imune) ಖಾಯಿಲೆಗಳಾದ ಲೂಪಸ್ (ಚರ್ಮರೋಗ) ರೋಗಗಳ ಪ್ರಾರಂಭಿಕ ಗುಣಲಕ್ಷಣಗಳೆಂದು ಧಾರಾಳವಾಗಿ ಹೇಳಬಹುದು. ಈ ತರಹದ ಬೇನೆಗಳಿಂದ ಮಿದುಳು ಸುರುಟುಗೊಳ್ಳುವಿಕೆ, ಹಾಗೂ ಮೆದುಳಿನ ಭಾಗಗಳು ವಾಸನಾಗ್ರಂಥಿಗಳನ್ನು ಉತ್ತೇಜನಗೊಳಿಸುವ ಪ್ರಕ್ರಿಯೆ ಕುಂಠಿತವಾಗುತ್ತದೆ. ವಾಸನಾ ಗ್ರಹಣಶಕ್ತಿ ಕುಂದಿದರೆ ‘ಪಾರ್ಕಿಕ್‌ಸನ್’ ಖಾಯಿಲೆಯ ಪ್ರಾರಂಭಿಕ ಲಕ್ಷಣಗಳು ಎಂದೂ ಹೇಳಲಾಗಿದೆ. ಮನಸ್ಸಿನ ಖಿನ್ನತೆ ಕೂಡಾ ವಾಸನಾ ಗ್ರಹಣಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಇಷ್ಟಾದರೂ ವಾಸನಾಶಕ್ತಿ ಕುಂಠಿತವಾದರೆ ಬಹಳ ಭಯಪಡಬೇಕಿಲ್ಲ. ಕಾರಣ ವಾಸನಾ ಗ್ರಹಣ ಶಕ್ತಿ ನಮಗೆ ವಯಸ್ಸಾದಂತೆ ನಿಧಾನವಾಗಿ ಕುಂಠಿತವಾಗುತ್ತದೆ. ಶೇಕಡ 33 ಮಂದಿ, ಎಂಬತ್ತರ ವಯಸ್ಸಿನಲ್ಲಿ ವಾಸನಾ ಗ್ರಹಣ ಶಕ್ತಿ ಕಳೆದುಕೊಳ್ಳುತ್ತಾರೆ. ಧೂಮಪಾನ ವಾಸನಾಗ್ರಹಣ ಶಕ್ತಿಯನ್ನು ವೇಗವಾಗಿ ಕುಂಠಿತಗೊಳಿಸುತ್ತದೆ. ನಾವು ಆಗಾಗ ವಿವಿಧ ಸುವಾಸನೆಗಳನ್ನು ಪರೀಕ್ಷಿಸುವುದರಿಂದ ವಾಸನಾ ಗ್ರಹಣ ಶಕ್ತಿಯನ್ನು ಹೆಚ್ಚಿಸಬಹುದು. ನಾವು ಬಹಳ ಹಸಿವೆಯಿಂದಿದ್ದಾಗ ನಮ್ಮ ವಾಸನಾಗ್ರಹಣ ಶಕ್ತಿ ಅತ್ಯಧಿಕವಾಗಿರುತ್ತದೆ.

ಒಂದು ವಿಚಿತ್ರ ಆದರೆ ಸತ್ಯಸಂಗತಿಯೆಂದರೆ ಸ್ತ್ರೀಯರಿಗೆ ವಾಸನಾ ಗ್ರಹಣ ಶಕ್ತಿ ಬಹಳ ತೀಕ್ಷ್ಣವಾಗಿರುತ್ತದೆ. ಇದಕ್ಕೆ ಕಾರಣ ಪುರುಷರಿಗಿಂತ ಸ್ತ್ರೀಯರಿಗೆ ಶೇಕಡ ಐವತ್ತರಷ್ಟು ಹೆಚ್ಚು ಅಣುಕೋಶಗಳು (Cells) ಮೆದುಳಿನ ವಾಸನಾ ಗ್ರಹಣ ವಿಭಾಗದಲ್ಲಿ ಇವೆ ಪ್ರಾಯಶಃ ಇದರಿಂದಲೇ ಅವರ ಅಡುಗೆಗಳು ಅಷ್ಟು ರುಚಿಯಾಗಿರುವುದು ಅಲ್ಲವೇ? ಈ ಗುಣ ಪುರುಷರಿಗೆ ಒಂದು ಎಚ್ಚರಿಕೆಯ ಕರೆಗಂಟೆ ಕೂಡ ಹೌದು. ಸಿಗರೇಟ್, ಮದ್ಯವ್ಯಸನಿಗಳು ಎಷ್ಟೇ ಎಚ್ಚರಿಕೆ ವಹಿಸಿದರೂ ಮನೆಯೊಡತಿ ಕಂಡುಹಿಡಿಯುವುದರ ಒಳಗುಟ್ಟು ಇದೇ ಅಲ್ಲವೇ? ಮಹಾಭಾರತದ ದ್ರೌಪದಿಗೆ ಯೋಜನೆಗಳ ದೂರದಿಂದ ಬರುತ್ತಿದ್ದ ಸೌಗಂಧಿಕಾ ಪುಷ್ಪದ ಸುಗಂಧ ಈ ಮಾತನ್ನು ಪುಷ್ಟೀಕರಿಸುವುದಿಲ್ಲವೇ? ರಾಮಾಯಣದಲ್ಲಿ ಲಕ್ಷಣ ರಾವಣನ ಸಹೋದರಿ ಶೂರ್ಪನಖಿಯ ನಾಸಿಕವನ್ನೇ ಕತ್ತರಿಸಿ ವಾಸನಾ ಪ್ರಪಂಚದಿಂದ ದೂರ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಇದಲ್ಲದೆ ಒಂದು ಅಧ್ಯಯನ ಪ್ರಕಾರ ಸ್ತ್ರೀಯರು ಪುರುಷರಿಗಿಂತ ಚೆನ್ನಾಗಿ ಸುಗಂಧ ದ್ರವ್ಯಗಳನ್ನು ಗುರುತಿಸುವುದಲ್ಲದೆ ವ್ಯತ್ಯಾಸಗಳನ್ನು ಹೇಳಬಲ್ಲರು. ಗರ್ಭಿಣಿ ಸ್ತ್ರೀಯರಲ್ಲಿ ವಾಸನಾ ಗ್ರಂಥಿಗಳು ಬಹಳ ತೀಕ್ಷ್ಣವಾಗಿರುತ್ತದೆ. ಆದ್ದರಿಂದಲೇ ಅವರು ಬೇಡದ ವಿಷಕಾರಿ, ಪದಾರ್ಥಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಇದು ಒಂದು ಒಳ್ಳೆಯ ಬೆಳವಣಿಗೆ ಕೂಡ.

PC: Internet

ನಮ್ಮ ಮನಸ್ಸಿನ ವಾಸನೆ ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ಮಿದುಳಿನ ಚಿತ್ರೀಕರಣ (Scan) ನಿಂದ ಪತ್ತೆಹಚ್ಚಬಹುದು. ಕೆಲವು ಮನೋವೈಜ್ಞಾನಿಕ ಖಾಯಿಲೆಗಳಿಗೆ ಊ ತರಹದ ವಾಸನೆಗಳ ಪ್ರಯೋಗದಿಂದ ಗುಣವಾಗಿರುವ ದಾಖಲೆಗಳಿವೆ. ಇನ್ನು ಬಲವಾದ ಪೆಟ್ಟಿನಿಂದ ಜ್ಞಾನಹೀನರಾದವರಿಗೆ ಮಿದುಳಿನ ಭಾಗಕ್ಕೆ ಘಾಸಿಯಾದರೆ ಈ ಚಿಕಿತ್ಸೆ ಫಲಕಾರಿಯಾಗಬಹುದು. ರೋಗಿಗೆ ಯಾವ ವಾಸನೆ ಹಿತವೆಂದು ಕಂಡುಹಿಡಿದು ಅದರ ಪ್ರಯೋಗದಿಂದ ಗುಣಮುಖರಾಗಿರುವ ಪ್ರಸಂಗಗಳಿವೆ.

ಇನ್ನು ಪ್ರಾಣಿಪ್ರಪಂಚದಲ್ಲಿ ಶ್ವಾನಗಳು ವಾಸನೆಗಳನ್ನು ಗ್ರಹಿಸುವುದರಲ್ಲಿ ಅತ್ಯಂತ ಶ್ರೇಷ್ಠವಾದುದು. ಪ್ರಪಂಚದ ಎಲ್ಲಾ ಗೃಹ ಇಲಾಖೆ, ಸೇನೆ, ಗುಪ್ತಚರ ಇಲಾಖೆಯಲ್ಲಿ ಇವುಗಳ ಸೇವೆ. ಅತ್ಯಮೂಲ್ಯ, ಇವುಗಳು ಬಾಂಬ್, ಕೊಲೆಗಾರ, ಮಾದಕ ವಸ್ತುಗಳು, ಇವುಗಳನ್ನು ವಾಸನೆಯ ಮೂಲಕ ಕಂಡುಹಿಡಿದು ಹಲವಾರು ಕ್ಲಿಷ್ಟಕರವಾದ ಸಮಸ್ಯೆಗಳನ್ನು ಪರಿಹಾರ ಮಾಡಿವೆ ಹಾಗೂ ಈಗಲೂ ಮಾಡುತ್ತಿವೆ. ಇದಕ್ಕಿಂತ ಆಫ್ರಿಕನ್ ಹಾಗೂ ಇತರೆ ದೇಶದ ಆನೆಗಳ ನಾಸಿಕ ಗ್ರಂಥಿಗಳು ಎಷ್ಟು ಸೂಕ್ಷ್ಮ ಎಂದರೆ, ಇಪ್ಪತ್ತು ಕಿ.ಮೀ. ದೂರದಲ್ಲಿರುವ ನೀರಿನ ವರಸೆಗಳನ್ನು ಗುರುತು ಹಿಡಿಯಬಲ್ಲವು. ಸಾಮಾನ್ಯವಾಗಿ ಎಲ್ಲಾ ಪ್ರಾಣಿಪಕ್ಷಿಗಳ ನಾಸಿಕ ಗ್ರಂಥಿಗಳು ಬಹಳ ತೀಕ್ಷ್ಣವಾಗಿರುತ್ತವೆ.

ಯಾರಲ್ಲಿ ಎನಾಸ್ಮಿಯ (ವಾಸನೆ ತಿಳಿಯದಿರುವಿಕೆ) ಖಾಯಿಲೆ ಇರುತ್ತದೋ ಅವರಿಗೆ ಯಾವ ವಾಸನೆಯ ಅರಿವೂ ಇರುವುದಿಲ್ಲ. ಅಂಥವರಿಗೆ ಹೊಗೆ, ಹಾಲು ಉಕ್ಕಿರುವ ವಾಸನೆ ಇವುಗಳ ಅರಿವು ಇರುವುದಿಲ್ಲ. ಇಂಥವರು ಬೆಂಕಿ ಅಪಘಾತ, ವಿಷಪ್ರಾಶನ ಇವುಗಳಿಂದ ಅಪಾಯಕ್ಕೆ ಒಳಪಡುವ ಸಾಧ್ಯತೆಬಹಳ. ಈ ಎನಾಸ್ಮಿಯಗೆ ಕಾರಣ ಕೆಲವು ಖಾಯಿಲೆಗಳು ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದು ಆಗಿರುವ ಹಾನಿ ಕಾರಣ. ವಾಹನ ಅಪಘಾತ ಸಾಮಾನ್ಯವಾಗಿ ಇಂಥಹ ಹಾನಿಗೆ ಕಾರಣವಾಗಿರುತ್ತದೆ. ಕೆಲವರಲ್ಲಿ ಮಾತ್ರ ಇದು ಹುಟ್ಟಿನಿಂದ ಬಂದಿರುವ ಸಾಧ್ಯತೆ ಇದೆ. ಇದು ಅವರು ವಯಸ್ಕರಾಗುವವರೆಗೂ ಗೊತ್ತಾಗದಿರುವುದು ನಿಜಕ್ಕೂ ಆಘಾತಕಾರಿ. ಕಾರಣ ಕಣ್ಣು, ಕಿವಿ ತಪಾಸಣೆಯಂತೆ ಮಕ್ಕಳಿಗೆ ವಾಸನಾ ಗ್ರಹಣ ಶಕ್ತಿಯ ಯಾವ ತಪಾಸಣೆಯನ್ನು ಬಾಲ್ಯದಲ್ಲಿ ಮಾಡುವುದಿಲ್ಲ.

ಈ ವಾಸನಾ ಗ್ರಹಣಾಶಕ್ತಿಯನ್ನು ಉಪಯೋಗಿಸಿ ಈಗ ವಿವಿಧ ವಾಸನೆಗಳನ್ನು ಅಡಿಗೆ ಮನೆಗೆ, ರೆಫ್ರಿಜಿರೇಟರ್, ಟೋಸ್ಟರ್ ಇತ್ಯಾದಿ ಪರಿಕರಗಳಿಗೆ ಬಳಸಿ ವಾಸನೆಗಳಿಂದ ಒಲೆ ತಾನಾಗಿ ಆರಿಹೋಗುವ ಪ್ರಕ್ರಿಯೆ ಆಗುವಂತೆ ಮಾಡುತ್ತಾರೆ. ಇದರಿಂದ ಹಲವರು ಅಪಘಾತಗಳು ಸಂಭವಿಸುವುದನ್ನು ತಡೆಯಬಹುದಾಗಿದೆ. ತ್ಯಾಜ್ಯವಸ್ತುಗಳು, ಕಾರ್ಖಾನೆಗಳಿಂದ ಬರುವ ದುರ್ವಾಸನೆಯಿಂದ ಕೂಡಿದ ಗಾಳಿಯನ್ನು ನಿಷ್ಕ್ರಿಯಗೊಳಿಸಲು ‘Odour Control’ ವಾಸನಾ ಹತೋಟಿ ಎಂಬ ಒಂದು ಪ್ರಕ್ರಿಯೆ ಮಾಡುತ್ತಾರೆ. ಇದರಲ್ಲಿ ಈ ಗಾಳಿಯನ್ನು ನೀರು, ಆಮ್ಲ, ಕ್ಷಾರಗಳ ಮೂಲಕ ಹಾಯಿಸಿ ನಂತರ ಸುವಾಸನಾ ಭರಿತ ವಸ್ತುಗಳೊಡನೆ ಬೆರಸಿ ಹೊರಬಿಡುತ್ತಾರೆ. ಇದರಿಂದ ವಾಯುಮಾಲಿನ್ಯ ತಡೆದು ಪರಿಸರ ಶುಭ್ರವಾಗಿರುತ್ತದೆ.

ಹೀಗೆ ವಾಸನೆಯೆಂಬ ಪದ ಬಹಳ ಸಾಮಾನ್ಯವಾಗಿ ಕಂಡರೂ ಇದರ ಪ್ರಭಾವ ಅಸಾಧಾರಣ. ಇದು ಜೀವವನ್ನೇ ಅಲುಗಾಡಿಸಬಲ್ಲುದು. ಹಲವಾರು ಮಾರಣಾಂತಿಕ ಖಾಯಿಲೆಗಳಿಗೆ ಮುನ್ಸೂಚನೆ ನೀಡಬಲ್ಲುದು. ಅಸಾಧಾರಣ ವಾಸನೆ, ಸುವಾಸನೆ, ದುರ್ವಾಸನೆಗಳನ್ನು ದೂರದಿಂದಲೇ ಕಂಡುಹಿಡಿಯುವವರು ನಿಜಕ್ಕೂ ಮಹಾಪರಿಣಿತರೆಂದೇ ಭಾವಿಸಬೇಕು. ಹೀಗಾಗಿ ವಾಸನೆಯನ್ನು ಅಲ್ಲಗಳೆಯದಿರಿ. ನೀವೇನಂತೀರಿ?

ಕೆ. ರಮೇಶ್

10 Responses

  1. ನಾಗರತ್ನ ಬಿ. ಅರ್. says:

    ವಾಸನಾ ವಿಚಾರದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಬರೆದಿರುವ ಲೇಖನ ಬಹಳ ಆಪ್ತವಾಗಿ ಮೂಡಿ ಬಂದಿದೆ ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  3. ಮಹೇಶ್ವರಿ ಯು says:

    ಮಾಹಿತಿಪೂಣ೯ಮತ್ತು ಸ್ವಾರಸ್ಯಕರ ಬರಹ ಕ್ಕಾಗಿ ಅಭಿನಂದನೆ ಗಳು

  4. ಉತ್ತಮವಾದ ಲೇಖನ ವಂದನೆಗಳು

  5. . ಶಂಕರಿ ಶರ್ಮ says:

    ಹೌದು ಸರ್, ಈ ಕೊರೊನಾ ಬಂದ ಮೇಲೆ ವಾಸನೆ ಬಗ್ಗೆ ಬಹಳ ಮಾತುಕತೆ ಪ್ರಾರಂಭವಾಗಿದೆ. ಸ್ವಲ್ಪ ಸಾದಾ ಶೀತವಾದರೆ ಸಾಕು, ಮನೆಯವರೆಲ್ಲರ ಮೊದಲ ಪ್ರಶ್ನೆ…ರುಚಿ, ವಾಸನೆ ಹೇಗಿದೆ ಎಂಬುದು! ಸ್ತ್ರೀಯರಲ್ಲಿ ಆಘ್ರಾಣಿಸುವ ಶಕ್ತಿ ಹೆಚ್ಚು ಎಂಬುದು ಈಗ ತಿಳಿಯಿತಷ್ಟೆ! ಆದ್ದರಿಂದ, ನಮ್ಮ ಕಿರೀಟಕ್ಕೆ ಗರಿಯೊಂದು ಸೇರ್ಪಡೆಗೊಂಡ ಬಗ್ಗೆ ಹೆಮ್ಮೆಯಾಯಿತು! ಒಳ್ಳೆಯ ಮಾಹಿಯುಕ್ತ ಲೇಖನ ಸರ್ ಧನ್ಯವಾದಗಳು.

  6. Padma Anand says:

    ವಾಸನೆಯ ಕುರಿತಾಗಿಯೂ ಎಷ್ಟೊಂದು ವಿಚಾರಗಳನ್ನು ಆಸಕ್ತಿದಾಯಕವಾಗಿ ತಿಳಿಸಿಕೊಟ್ಟ ಲೇಖನ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: