ತನುಕನ್ನಡ, ಮನಕನ್ನಡ, ನುಡಿಕನ್ನಡವೆನ್ನಿರೋ.
ಕನ್ನಡ ಕರ್ನಾಟಕದ ಜನರ ಮಾತೃಭಾಷೆ, ರಾಜ್ಯದಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ಬಳುವಳಿಯಾಗಿ ಬಂದ ಕನ್ನಡ ನಮ್ಮ ಹೃದಯದ ಭಾಷೆ. ಇದು ಉಳಿಯಲಿ, ಬೆಳಗಲಿ, ಮೊಳಗಲಿ ಎಂಬುದೇ ಕನ್ನಡಿಗರ ಆಶಯ. ಕನ್ನಡ ಭಾಷೆಗೆ ಭವ್ಯವಾದ ಇತಹಾಸವಿದೆ, ಇದರೊಟ್ಟಿಗೆ ಸಂಸ್ಕೃತಿ, ಪರಂಪರೆಯ ಹಿರಿಮೆಯಿದೆ. ಸಾವಿರದೈನೂರು ವರ್ಷಕ್ಕೂ ಹಿಂದಿನಿಂದ ಬೆಳೆದ ಸಾಹಿತ್ಯ ಭಂಡಾರ ಕನ್ನಡದಲ್ಲಿದೆ. ಜೊತೆಗೆ ಶ್ರೀಮಂತವಾದ ಜನಪದ ಸಾಹಿತ್ಯದ ಕೊಡುಗೆಯೂ ಇದೆ. ಭಾಷೆ ಮನುಷ್ಯನ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವೇ ಆದರೂ ಇದು ನಮ್ಮ ಜನಜೀವನದ ಹಾಸುಹೊಕ್ಕಾಗಿದೆ. ಕನ್ನಡಿಗರ ಪ್ರಾಜ್ಞವಂತಿಕೆ, ಭಾಷಾಪಾಂಡಿತ್ಯಕ್ಕೆ ದೊಡ್ಡ ಉದಾಹರಣೆಯೆಂದರೆ ಒಂಬತ್ತನೇ ಶತಮಾನದ ಕವಿರಾಜಮಾರ್ಗದಲ್ಲಿ ಬರುವ ಉಕ್ತಿ ”ಪದನರಿದು ನುಡಿಯಲುಂ, ನುಡಿದದನರಿದಾರಯಲು ಮಾರ್ಪರಾ ನಾಡವರ್ಗಳ್, ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ”. ಕನ್ನಡದ ಸಾಹಿತ್ಯದ ಸುವರ್ಣಯುಗದ ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ ಮೊದಲಾದ ಕವಿಗಳು ಕೊಡುಗೆಯಾಗಿ ನೀಡಿರುವ ಅನರ್ಘ್ಯ ಕಾವ್ಯರತ್ನಗಳಿಗೆ ಸರಿಸಾಟಿಯಾದ ಕೃತಿಗಳು ಅಪರೂಪ.
ಹಿಂದಿನ ಕಾಲದಲ್ಲಿ ರಾಜಕೀಯ ಕಾರಣಗಳಿಗಾಗಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ಹರಿದು ಹಂಚಿಹೋಗಿದ್ದವು. ಭಾರತ ಸ್ವತಂತ್ರವಾದ ನಂತರ 1957 ರಲ್ಲಿ ಭಾಷಾವಾರು ಪ್ರಾಂತ್ಯಗಳು ಅಸ್ತಿತ್ವಕ್ಕೆ ಬಂದಾಗ ಈ ಪ್ರದೇಶಗಳೆಲ್ಲ ಪುನಃ ಒಂದುಗೂಡಿ ಕರ್ನಾಟಕವಾಯಿತು. ಅಂದಿನಿಂದ ಇಂದಿನವರೆಗೆ ಕನ್ನಡದ ಏಳ್ಗೆಗಾಗಿ ಪ್ರಯತ್ನಗಳು ನಡೆದೇ ಇವೆ. ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠಸಾಧನೆಗಾಗಿ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನವೂ ದೊರೆತಿದೆ. ಪ್ರತಿವರ್ಷ ನವೆಂಬರ್ ಒಂದನೇ ದಿನಾಂಕದಂದು ಕರ್ನಾಟಕ ರಾಜ್ಯೋದಯದ ಸವಿನೆನಪಿಗೆ ಕನ್ನಡ ರಾಜ್ಯೋತ್ಸವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಈ ಆಚರಣೆಯಿಂದಲೇ ಕನ್ನಡಬಾಷೆಗೆ ಹೆಚ್ಚಿನ ಅನುಕೂಲವಾಗಿದೆಯೇ? ಎಂದರೆ , ಬಹಳ ಸಂಕಟದಿಂದ ಇಲ್ಲವೆಂದೇ ಹೇಳಬೇಕಾಗಿದೆ. ಏಕೆಂದರೆ ರಾಜ್ಯೋತ್ಸವದ ಆಚರಣೆಯು ಕನ್ನಡ ಬಾವುಟ ಹಾರಿಸಿ, ಭುವನೇಶ್ವರಿಯ ಮೆರವಣಿಗೆ, ಸಾಹಿತಿಗಳಿಂದ ಭರ್ಜರಿ ಭಾಷಣಗಳು, ಹೆಚ್ಚಾಗಿ ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಮುಕ್ತಾಯವಾಗಿಬಿಡುತ್ತದೆ. ಸರ್ಕಾರದ ವತಿಯಿಂದಲೂ ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಸರ್ಕಾರದ ಭಾಷೆ ಮತ್ತು ಸಂಸ್ಕೃತಿ ಇಲಾಖೆಯವರು ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡುವರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಆಯ್ಕೆಪಟ್ಟಿ ಯಾವ್ಯಾವುದೋ ಕಾರಣಗಳಿಗಾಗಿ ಅತಿಯಾಗಿ ಉದ್ದವಾಗಿದ್ದು ನೂರಾರು ಜನರಿಗೆ ಪ್ರಶಸ್ತಿ ಸಂದಿದ್ದನ್ನು ಕಂಡಿದ್ದೇವೆ. ಇವರಲ್ಲಿ ನಿಜವಾದ ಸಾಧನೆಗೈದವರು ಯಾರೋ ಎಂಬ ಸಂದೇಹ ಮೂಡಿದ್ದು ನಿಜ. ಇನ್ನು ಖಾಸಗಿ ಸಂಘ ಸಂಸ್ಥೆಗಳೋ ನವೆಂಬರಿನ ಎಲ್ಲಾ ದಿನಗಳಂದೂ ಒಂದಲ್ಲಾ ಒಂದು ಕಡೆ ಕನ್ನಡ ರಾಜ್ಯೋತ್ಷವವನ್ನು ಆಚರಿಸುತ್ತಲೇ ಇರುತ್ತಾರೆ. ಅರ್ಥ ಕಡಿಮೆ ಗದ್ದಲ ಹೆಚ್ಚು ಎನ್ನುವಂತಿರುತ್ತವೆ ಈ ಉತ್ಸವಗಳು. ಇದರಿಂದ ಕನ್ನಡದ ಉದ್ಧಾರವಾಗುವುದೂ ಅಷ್ಟಕ್ಕಷ್ಟೆ.
ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಶಿಕ್ಷಣದಲ್ಲಿ ನಾವು ಮಕ್ಕಳಿಗೆ ಕನ್ನಡವನ್ನು ಎಷ್ಟುಮಟ್ಟಿಗೆ ಕಲಿಸುತ್ತಿದ್ದೇವೆ ಎಂಬುದನ್ನು. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅಪಾರವಾಗಿದೆ. ಇವರೆಲ್ಲರೂ ಕನ್ನಡವನ್ನು ಪಠ್ಯವಾಗಿ ಆಭ್ಯಸಿಸುತ್ತಾರೆಯೇ? ಶಾಲೆಗಳಲ್ಲಿ ಸಿ.ಬಿ.ಎಸ್.ಇ, ಐ.ಸಿ.ಎಸ್.ಇ, ಹೀಗೆ ವಿವಿಧ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಏಕರೂಪದ ಪಠ್ಯವೆಂದಿಲ್ಲ. ಇಂಗ್ಲಿಷ್ ಮಾಧ್ಯಮವಿರುವ ಈ ಶಾಲೆಗಳಲ್ಲಿ ಪ್ರಥಮ, ಅಥವ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಓದುವುದು ಅನಿವಾರ್ಯವಲ್ಲ. ಹಾಗಾಗಿ ಕಾಟಾಚಾರಕ್ಕೆ ಪ್ರೌಢಶಾಲೆಯವರೆಗೆ ಮೂರನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ಅನ್ಯಭಾಷಿಕರು ಹೇರಳವಾಗಿ ವಲಸೆ ಬಂದಿರುವ ನಗರಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿದೆ. ಪ್ರೌಢಶಾಲೆಯಲ್ಲಿ ಮೂರನೆಯ ಬಾಷೆಯಾಗಿ ಹಿಂದಿ ಕನ್ನಡದ ಜಾಗವನ್ನು ಆಕ್ರಮಿಸುತ್ತದೆ. ಇನ್ನು ಕನ್ನಡ ಮಾಧ್ಯಮದ ಶಾಲೆಗಳೆಂದರೆ ನಮ್ಮ ಸರ್ಕಾರಿ ಶಾಲೆಗಳು. ಇಲ್ಲಿಗೆ ನಮ್ಮವರೇ ತಮ್ಮ ಮಕ್ಕಳನ್ನು ಸೇರಿಸಲು ಉತ್ಸುಕರಾಗಿಲ್ಲ. ಅವರಿಗೆ ಇಂಗ್ಲಿಷ್ ಕಲಿತರೇ ವಿದ್ಯಾವಂತರು ಎಂಬ ತಪ್ಪು ಕಲ್ಪನೆ ಭೂತವಾಗಿ ಕಾಡಿದೆ. ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದನ್ನು ಪ್ರತಿಷ್ಠೆಯಾಗಿ ಭಾವಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆಗೆ ಒಲವಿಲ್ಲ. ನಮ್ಮ ನೆರೆಹೊರೆಯಲ್ಲಿರುವ ಅನೇಕ ಅನ್ಯಭಾಷಿಕರು ನಾನಾ ಕಾರಣಗಳಿಗಾಗಿ ಹಲವಾರು ವರ್ಷಗಳು ಕರ್ನಾಟಕದಲ್ಲಿಯೇ ಬದುಕುತ್ತಿದ್ದರೂ ಕನ್ನಡ ಕಲಿತಿಲ್ಲ. ಕಾರಣ ನಮ್ಮ ಔದಾರ್ಯ. ಅವರಿಗಿಂತ ಮೊದಲೇ ನಾವು ಅವರನ್ನು ಅವರ ಬಾಷೆಯಲ್ಲೇ ಮಾತನಾಡಿಸಿ ಅನಿವಾರ್ಯವಾಗಿಯಾದರೂ ಕನ್ನಡ ಕಲಿಯುವ ಪ್ರಯತ್ನವನ್ನು ಮಾಡದಂತೆ ಸವಲತ್ತು ಒದಗಿಸುತ್ತೇವೆ. ಈ ಹುಚ್ಚು ಔದಾರ್ಯದ ಫಲವಾಗಿಯೇ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮತನಾಡುವವರನ್ನು ಹುಡುಕಿ ತೆಗೆಯಬೇಕಾಗಿದೆ. ಉದಾರೀಕರಣ, ಬಹುರಾಷ್ಟ್ರೀಕರಣದಿಂದಾಗಿ ವಲಸೆ ಬಂದ ಜನಗಳೇ ಇಲ್ಲಿ ಬಹು ಸಂಖ್ಯಾತರಾಗಿ ಕನ್ನಡ ಮಾತನಾಡುವವರೇ ಇಲ್ಲಿ ಮೂಲೆಗುಂಪಾಗಿದ್ದಾರೆ. ಇಂಥಹ ಪರಿಸ್ಥಿತಿಯನ್ನು ನೋಡಿಯೇ ಕನ್ನಡದ ಶಾಯರಿ ಕವಿ ಅಸಾದುಲ್ಲಾಬೇಗ್ ಹೀಗೆ ವ್ಯಂಗ್ಯವಾಡಿದ್ದಾರೆ. ”ಆ ಕಡೆ ರಾಜಾಜಿ, ಈ ಕಡೆ ಶಿವಾಜಿ, ಅಲ್ಲಿ ಎನ್ನಡ, ಇಲ್ಲಿ ಎಕ್ಕಡ, ಇನ್ನೆಲ್ಲಿ ಕನ್ನಡ. ಕೆಂಪೇಗೌಡ ಸುಮ್ಮನೇಕೆ ಕುಂತಿ, ನಿನ್ನ ಕತ್ತಿ ತೆಗೆದು ಎಲ್ಲರೆದೆಯ ಮೇಲೆ ಕೆತ್ತಿಬಿಡು ಕನ್ನಡ,ಕನ್ನಡ,ಕನ್ನಡ” ಇವತ್ತಿನ ಸಂದರ್ಭದಲ್ಲಿ ಇವರ ಕೋರಿಕೆ ಅತ್ಯಂತ ಸಮಂಜಸವಾಗಿದೆಯೆನ್ನಿಸುತ್ತದೆ.
ಕನ್ನಡ ಭಾಷೆ, ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನಿತ್ತಿರುವ ಅನೇಕ ಮಹನೀಯರು ಕನ್ನಡದ ಆಸ್ತಿ ಮಾಸ್ತಿಯವರು, ಪು.ತಿ.ನರಸಿಂಹಾಚಾರ್, ಕನ್ನಡದ ಭಗವದ್ಗೀತೆ ಮಂಕುತಿಮ್ಮನಕಗ್ಗ ಬರೆದ ಡಿ.ವಿ.ಜಿ., ಗೊರೂರು ರಾಮಸ್ವಾಮಯ್ಯಂಗಾರ್, ಜಿ.ಪಿ.ರಾಜರತ್ನಂ, ಕನ್ನಡಕ್ಕೊಬ್ಬನೇ ‘ಕೈ’ ಎಂದೇ ಹೆಸರಾದ ಟಿ.ಪಿ.ಕೈಲಾಸಂ, ವರಕವಿ ಬೇಂದ್ರೆಯವರು ಮೊದಲಾದವರ ಮನೆಮಾತು ಕನ್ನಡವಾಗಿರಲಿಲ್ಲ. ಆದರೆ ಇವರ ಕನ್ನಡದ ಸೇವೆ ಚಿರಸ್ಮರಣೀಯ. ರಾಜರತ್ನಂ ರವರ ‘ರತ್ನನ ಪದಗಳು’ ಓದಲು ಹೆಂಡ ಕುಡುಕನ ಮಾತುಗಳಂತೆ ಹೊರನೋಟಕ್ಕೆ ಕಾಣಿಸಿದರೂ ಆಂತರ್ಯದಲ್ಲಿ ಜೀವನದ ಅಮೂಲ್ಯಸಾರವನ್ನೇ ಅಡಗಿಸಿವೆ. ಅವರು ರತ್ನನ ಬಾಯಿಂದ ಹೇಳಿಸಿರುವ ಮಾತುಗಳು ”ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂವೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ ನೀಕಾಣೆ ”ಕನ್ನಡದ ಉತ್ಕಟ ಪ್ರೇಮವನ್ನು ಸಮರ್ಥವಾಗಿ ಅಭಿವ್ಯಕ್ತಿಸಿವೆ. ಕನ್ನಡದ ಹಿರಿಮೆಯನ್ನು ಕೊಂಡಾಡುತ್ತಾ ರಾಷ್ಟ್ರಕವಿ ಕು.ವೆಂ.ಪು.ರವರು ”ಕನ್ನಡ ಎನೆ ಕುಣ ದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು. ಕಾಮನಬಿಲ್ಲನು ಕಾಣುವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು” ಎಂದು ನಮ್ಮನ್ನೂ ಮೈ ಮರೆಸಿಬಿಡುತ್ತಾರೆ.
ಕನ್ನಡ ಪ್ರಹಸನ ಪ್ರಪಿತಾಮಹರೆಂದು ಕರೆಯಲ್ಪಡುವ ಟಿ.ಪಿ.ಕೈಲಾಸಂ ಸಾಹಿತ್ಯದ ವಿದ್ಯಾರ್ಥಿಯಲ್ಲ. ಅವರು ಓದಿದ್ದು ಭೂಗರ್ಭಶಾಸ್ತ್ರ. ಆದರೆ ಅವರದು ಬಹುಮುಖೀ ಪ್ರತಿಭೆ. ಅವರು ಕೊಟ್ಟಿರುವ ನಾಟಕಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತ ಈಗಲೂ ರಂಗಪ್ರಯೋಗವಾಗುತ್ತಿವೆ. ಅವರು ಇಂಗ್ಲೆಂಡಿನಲ್ಲಿದ್ದಾಗ ನಡೆದ ಒಂದು ಸ್ವಾರಸ್ಯಕರ ಘಟನೆ ಇಲ್ಲಿ ಪ್ರಸ್ತುತವಾಗುತ್ತದೆ. ಕೈಲಾಸಂ ಒಂದು ಸ್ಟೇಜ್ ಷೋ ನೋಡಲು ಹೋಗಿದ್ದರು. ಅಲ್ಲಿ ರಂಗದ ಮೇಲೆ ಬಂದ ಗಾಯಕನೊಬ್ಬ ಇಂಗ್ಲಿಷಿನಲ್ಲಿ ‘ಕಾನ್ಸ್ಟೆಂಟಿನೋಪಲ್’ ಎಂದು ಪ್ರಾರಂಭವಾಗುವ ಹಾಡನ್ನು ವಾದ್ಯವೃಂದದ ಜೊತೆಗೂಡಿ ಹಾಡಿದನು. ಜನ ಮೆಚ್ಚಿ ಕರತಾಡನಮಾಡಿದರು. ಅದರಿಂದ ಉತ್ತೇಜಿತನಾಗಿ ಹಾಡುಗಾರ ಪ್ರೇಕ್ಷಕರಲ್ಲಿ ಯಾರಾದರೂ ಅದೇ ರೀತಿಯಲ್ಲಿ ಹಾಡಿದರೆ ಅವರಿಗೆ ಎರಡು ಪೌಂಡ್ ಬಹುಮಾನ ಕೊಡುವುದಾಗಿ ಸವಾಲು ಹಾಕಿದ. ಅಲ್ಲಿನವರಾರೂ ಪ್ರತಿಕ್ರಿಯಿಸಲಿಲ್ಲ. ಆದರೆ ನಮ್ಮ ಕೈಲಾಸಂರವರು ಎದ್ದು ವೇದಿಕೆಗೆ ಹೋದರು. ವಾದ್ಯವೃಂದಕ್ಕೆ ನುಡಿಸಲು ಹೇಳಿದರು. ಕನ್ನಡದಲ್ಲಿ ಒಂದು ಆಶುಕವಿತೆಯನ್ನು ಅಲ್ಲೇ ರಚಿಸಿ ರಾಗ,ತಾಳಬದ್ಧವಾಗಿ ಹಾಡಿದರು. ”ನಾನ್ ಕೋಳೀಕೆ ರಂಗಾ, ‘ಕೋ’ನು ‘ಳೀ’ನು ‘ರಾ’ ನು ‘ಸೊನ್ನೆ’ ‘ಗಾ’, ಕಕೋತ್ವ ಳೀ ಕಕೇತ್ವ ರಾ ಮತ್ಸೊನ್ನೆಯೂನು ಗಾ , ಇದ್ನ ಹಾಡಕ್ಕ್ ಬರ್ದೆ ಬಾಯ್ಬುಡೋನು ಬೆಪ್ಪು ನನ್ಮಗಾ”. ಯಾರಿಗೂ ಏನೂ ಅರ್ಥವಾಗದಿದ್ದರೂ ತದ್ರೂಪದ ಲಯಬದ್ಧವಾದ ಗಾಯನಕ್ಕೆ ಚಪ್ಪಾಳೆ ತಟ್ಟಿದರು. ಮೊದಲು ಆಹ್ವಾನಕೊಟ್ಟಿದ್ದ ಗಾಯಕ ಎರಡು ಪೌಂಡ್ ಕೊಟ್ಟು ನೀನೇನು ಹಾಡಿದೆ ಎಂದು ಪ್ರಶ್ನಿಸಿದ. ಕೈಲಾಸಂ ಹೆಮ್ಮೆಯಿಂದ ಹೇಳಿದರಂತೆ ಇದು ಕನ್ನಡ ನನ್ನ ಮದರ್ ಟಂಗ್ ಎಂದು. ಪ್ರತಿಯೊಬ್ಬ ಕನ್ನಡಿಗನಿಗೆ ಇಂತಹ ಅಭಿಮಾನವಿರಬೇಕು.
ಈಗಿನಕಾಲದಲ್ಲಿ ಕನ್ನಡನಾಡಿನಿಂದ ವಿದೇಶಕ್ಕೆ ಓದಲು, ನೌಕರಿಮಾಡಲು ಹೋಗುವವರ ಮತ್ತು ಅಲ್ಲೇ ನೆಲಸಿರುವವರ ಸಂಖ್ಯೆ ಗಣನೀಯವಾಗಿದೆ. ಅಂಥಹವರು ಅಲ್ಲಿಯೇ ಹಲವಾರು ಕನ್ನಡ ಸಂಘಟನೆಗಳನ್ನು ಮಾಡಿಕೊಂಡಿದ್ದಾರೆ. ಅಲ್ಲೇ ಇರುವ ಕನ್ನಡಿಗರು ಒಟ್ಟುಗೂಡಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದು ಸಂತೋಷದ ಸಂಗತಿ. ಕುವೆಂಪು ರವರ ‘ಎಲ್ಲಾದರು ಇರು ಎಂತಾದರು ಇರು ನೀ ಕನ್ನಡ ಗೋವಿನ ಮುದ್ದಿನ ಕರು‘ ಎಂಬುದನ್ನು ಇವರು ಸಾಕಾರಗೊಳಿಸಿದ್ದಾರೆ. ತವರಿನಿಂದ ದೂರವಿರುವ ಅವರು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿರುವುದೇ ಪ್ರಶಂಸನೀಯ ಕೆಲಸ. ನಮ್ಮವರೇ ಆದ ಶ್ರೀ. ಶಿಕಾರಿಪುರ ಹರಿಹರೇಶ್ವರರು ಹಲವು ದಶಕಗಳ ಹಿಂದೆಯೇ ಇಂತಹ ಪ್ರಯತ್ನ ಮಾಡಿದ್ದರು. ವೃತ್ತಿಯಿಂದ ಸಿವಿಲ್ ಇಂಜಿನಿಯರರಾಗಿ ಉದ್ಯೋಗದ ಸಲುವಾಗಿ ಅಮೇರಿಕಾಕ್ಕೆ ಹೋಗಿದ್ದರು. ಅಲ್ಲಿರುವ ಕನ್ನಡಿಗರ ಕೂಟವನ್ನು ಕಟ್ಟಿ ”ಅಮೆರಿಕನ್ನಡ” ಎಂಬ ನಿಯತಕಾಲಿಕ ಪತ್ರಿಕೆಯನ್ನು ಹೊರಡಿಸಿ, ಅದನ್ನು ನಿರಂತರವಾಗಿ ಎರಡು ದಶಕಕ್ಕೂ ಮೀರಿ ನಡೆಸಿದ ಕೀರ್ತಿಶಾಲಿಗಳು. ಇಂತಹವರಿಂದ ಸ್ಫೂರ್ತಿಗೊಂಡ ಅಲ್ಲಿಯ ಕನ್ನಡಪರ ಸಂಘಗಳೆಲ್ಲ ಒಟ್ಟಾಗಿ ಸೇರಿ ಪ್ರತಿವರ್ಷ ‘ಅಕ್ಕ'(AKKA) ಎಂಬ ಕನ್ನಡ ಸಮ್ಮೇಳನವನ್ನು ಅಮೆರಿಕದಲ್ಲಿ ನಡೆಸುತ್ತಿದ್ದಾರೆ. ಕನ್ನಡದ ಸಾಹಿತಿಗಳನ್ನು, ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿ ಅವರನ್ನು ಸನ್ಮಾನಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಸರ್ಕಾರದ ಪ್ರತಿನಿಧಿಗಳೂ ಅಲ್ಲಿ ಬಾಗವಹಿಸಲು ಹೋಗುತ್ತಾರೆ. ಹೀಗೆ ವಿದೇಶದಲ್ಲಿ ಸದ್ದು ಮಾಡುತ್ತಿರುವ ಧ್ವನಿ ಕರ್ನಾಟಕದಲ್ಲೂ ಅರ್ಥಪೂರ್ಣವಾಗಿ ಮೊಳಗಬೇಕು.
ನಿಜವಾದ ಕನ್ನಡ ಪ್ರೇಮವನ್ನು ತೋರಲು ಸಭೆ, ಸಮ್ಮೇಳನ, ಘೋಷಣೆಗಳಿಗಿಂತ ಕೆಲವು ಸುಲಭ ಸೂತ್ರಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ. ನಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಕನ್ನಡದಲ್ಲೇ ಮಾತನಾಡಬೇಕು. ಪ್ರತಿದಿನ ನಾವು ವ್ಯವಹರಿಸುವವರೊಡನೆ ಕಡ್ಡಾಯವಾಗಿ ಕನ್ನಡವನ್ನೇ ಬಳಸಬೇಕು. ನಮ್ಮ ಮಕ್ಕಳು ಯಾವುದೇ ಮಾಧ್ಯಮದಲ್ಲಿ ಯಾವುದೇ ವಿಷಯವನ್ನು ಓದುತ್ತಿರಲಿ ಕನ್ನಡವನ್ನು ಓದುವ, ಬರೆಯುವುದನ್ನು ಕಡ್ಡಾಯವಾಗಿ ಮಾಡಬೇಕು. ಮನೆಯಲ್ಲಿ ಕನ್ನಡ ಪುಸ್ತಕ, ಪತ್ರಿಕೆಗಳನ್ನು ತರಿಸಿ ಓದುವ ಅಭ್ಯಾಸವನ್ನು ಎಲ್ಲ ಸದಸ್ಯರೂ ಮಾಡಬೇಕು. ಕನ್ನಡ ಬರದವರು ನೆರೆಹೊರೆಯಲ್ಲಿದ್ದರೆ ಅವರೊಡನೆ ಕನ್ನಡದಲ್ಲಿ ಮಾತನಾಡಿ ಮತ್ತು ಅವರಿಗೆ ಕನ್ನಡವನ್ನು ಕಲಿಸಿರಿ. ತೆರೆದ ಮನಸ್ಸಿನಿಂದ ಕನ್ನಡದ ವಾತಾವರಣವನ್ನು ನಾವೇ ಸೃಷ್ಠಿಸಿಕೊಳ್ಳಬೇಕು. ಇದರಿಂದ ಕನ್ನಡ ಬಾಷೆ ಖಂಡಿತವಾಗಿ ಬೆಳೆಯುತ್ತದೆ, ಉಳಿಯುತ್ತದೆ, ಸಂದೇಹ ಬೇಡ. ಕನ್ನಡದ ದೀಪವನ್ನು ನಮ್ಮ ಮನೆಯಿಂದ ಮೊದಲು ಹಚ್ಚೋಣ. ಅದು ತಾನಾಗಿಯೇ ಇತರರ ಮನೆಗಳಿಗೆ ಹರಡುತ್ತದೆ. ಕನ್ನಡ ತಾಯಿಯ ಮಕ್ಕಳಾಗಿ ‘‘ತನು ಕನ್ನಡ, ಮನಕನ್ನಡ, ನುಡಿ ಕನ್ನಡ” ಎಂಬುದನ್ನು ಕಾಯಾ, ವಾಚಾ, ಮನಸಾ ಆಚರಣೆಗೆ ತರೋಣ. ‘‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.”
-ಬಿ.ಆರ್.ನಾಗರತ್ನ. ಮೈಸೂರು.
ಬರಹ ತುಂಬಾ ಚೆನ್ನಾಗಿದೆ..
ಧನ್ಯವಾದಗಳು ಮೇಡಂ.
ಕನ್ನಡದ ಮೇಲೆ ಒಲವು ಮೂಡಿಸುವಂತಹ ಬರಹ.
ಹೌದು
ವಿದ್ಯಾವಂತರಾದ ನಾವು ಮೊದಲು ಕನ್ನಡವನ್ನು ಉಳಿಸಬೇಕು ಬೆಳೆಸಬೇಕು
ಧನ್ಯವಾದಗಳು ಮೇಡಂ
ಎಲ್ಲ ಕನ್ನಡಿಗರೂ ಓದಲೇಬೇಕಾದ ಉತ್ತಮ ಲೇಖನ. ಧನ್ಯವಾದಗಳು ಮೇಡಂ
ನನ್ನ ಲೇಖನ ಓದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಕೋರಿ ರುವ ನಿಮಗೆ ವಂದನೆಗಳು ಸಾರ್
ನಮ್ಮ ಸವಿಗನ್ನಡದ ಬಗ್ಗೆ ಬಹಳಷ್ಟು ವಿಷಯಗಳನ್ನು ಹಂಚಿಕೊಂಡಿರುವಿರಿ. ಸೊಗಸಾದ ಸಕಾಲಿಕ ಬರಹ. ಧನ್ಯವಾದಗಳು, ನಾಗರತ್ನ ಮೇಡಂ.
ವಾಸ್ತವತೆಯನ್ನು ಬಿಂಬಿಸುವ ಉತ್ತಮ ಲೇಖನ ಅಕ್ಕಾ
ಧನ್ಯವಾದಗಳು ಶಂಕರಿಶರ್ಮ ಮೇಡಂ ಹಾಗೂ ಸೋದರಿ ವಿದ್ಯಾ
ರಾಜ್ಯೋತ್ಸವ ದ ಸಮಯದಲ್ಲಿ ತಾಯಿ ಭುವನೇಶ್ವರಿಗೆ ಅರ್ಪಿಸಿದ ಸೊಗಸಾದ ನುಡಿಮಾಲೆ
ಧನ್ಯವಾದಗಳು ಗೆಳತಿ ಪದ್ಮಾ
ನಮ್ಮ ಕನ್ನಡ ಭಾಷೆ ಬಲು ಸೊಗಸು ಹಾಗು ವೈವಿಧ್ಯಮಯ. ಈ ಪುಣ್ಯ ಭೂಮಿ ಯಲ್ಲಿ ಜನಿಸಿದ ನಾವೇ ಭಾಗ್ಯವಂತರು. ಉತ್ತಮ ಲೇಖನ, ಧನ್ಯವಾದಗಳು.
ಸುಂದರ ಸರಳವಾದ ಲೇಖನ.