ಬೆಳಕು-ಬಳ್ಳಿ

ಬಣ್ಣ ಕಳಚಿತ್ತು!

Share Button

ಹಸಿರು ಪಲ್ಲವದ ಮಡಿಲಲ್ಲಿ
ಮಲಗಿ ಆಸರೆಗಾಗಿ‌ ಹಂಬಲಿಸಿ
ಬಾಡಿ ಸೊರಗಿ ಮುದುಡಿದ
ಹಣ್ಣೆಲೆಗಳು ನೆಲವನ್ನಪ್ಪಿತ್ತು
ಗಾಳಿ ತೋರಿದ ಹಾದಿ ಹಿಡಿದಿತ್ತು!

ಚಿಗುರು ಮತ್ತಷ್ಟು ಪಲ್ಲವಿಸಿ
ಕಿಲಕಿಲನೆ ನಗುತ್ತಿತ್ತು
ನಂಟು ಗಂಟೆಂದುಕೊಂಡು ದೂಡಿದ
ಹಣ್ಣಲೆಗಳು ಕಣ್ಣೀರು ಸುರಿಸಿ
ಸತ್ತು ಹಸಿರಿನ ಹೊಟ್ಟೆ ತುಂಬಿಸಿತ್ತು

ತಳಿರಿನ ತುಂಬು ತುಳುಕುವ ಸಂಭ್ರಮ
ಕಣ್ಣು ಕುಕ್ಕುವಂತಿತ್ತು
ಇಬ್ಬನಿಯು ಹಸಿರ ಚೆಲುವಿಗೆ
ಮರುಳಾಗಿ‌ ಮುತ್ತು ಸುರಿಸಿತ್ತು

ಸುಖದ ಅಮಲಿನ ಕನಸಿನಲ್ಲಿ
ಕಳೆದು ಹೋಗಿದ್ದ ಮಂಜಿಗೆ
ನೇಸರನ ಕಿರಣ ತಾಗಿದ
ಆ ಕ್ಷಣ ಕರಗಿ ಕಣ್ಣೀರು
ಸುರಿಸುತ್ತಾ  ನೆಲವನ್ನಪ್ಪಿತ್ತು

ಕಾಲ ಉರುಳಿತ್ತು ಚಿಗುರು
ಹೂವಾಗಿ ಹಣ್ಣಾಗಿ ತಳಿರು
ಅರಳಿ ನಗುವುದ ಕಂಡವರು
ಅಂದ ಚೆಂದ ಹೊಗಳಿ
ಕಿತ್ತು ಹೋಯ್ದುದ ನೆನೆದು  ನೋವಿನಿಂದ
ಹಸಿರು ನಲುಗಿ ಹೋಗಿತ್ತು

ಕಟ್ಟಿದ್ದ ತೋರಣ ಬಾಡಿ ಕಳಚಿತ್ತು
ಹಸಿರು ಮಾಗಿ ಬಣ್ಣ ಕಳಚಿ ಹಳದಿಯಾಗಿತ್ತು
ಉಸಿರಾಡಲು ನಿತ್ರಾಣವಿಲ್ಲದೆ ನೆಲವನ್ನಪ್ಪಿತ್ತು
ಬೇಸರದ ಬಿಸಿಯಲ್ಲಿ ಬೇಯುತ್ತಿದ್ದ
ಎಲೆಗಳನ್ನು ಗಾಳಿ ಮತ್ತೆ ಹೊತ್ತು ಸಾಗಿತ್ತು!

ಸೌಮ್ಯಶ್ರೀ ಎ.ಎಸ್.

9 Comments on “ಬಣ್ಣ ಕಳಚಿತ್ತು!

  1. ನಮಸ್ಕಾರ, ಕವನ ವಾಸ್ತವತೆಯ ಪ್ರತಿರೂಪ, ಅದರಲ್ಲೂ ಕೊನೆಯ ಸಾಲುಗಳು ಮನ ಮಿಡಿಯುವಂತಿದೆ

  2. ತುಂಬಾ ತುಂಬಾ ಅರ್ಥಪೂರ್ಣವಾಗಿ ಚಿಂತನೆಗೆ ಹಚ್ಚುತ್ತದೆ ಕವನ.ಅಭಿನಂದನೆಗಳು ಮೇಡಂ.

  3. ಬದಲಾವಣೆ ಜಗದ ನಿಯಮ ಅನ್ನೋ ಮಾತನ್ನು ನೆನಪಿಸಿತು ಕವನ. ತುಂಬಾ ಚೆನ್ನಾಗಿದೆ

  4. ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ನೆನಪಾಯ್ತು. ಚಂದದ ಕವನ.

Leave a Reply to ನಾಗರತ್ನ ಬಿ. ಅರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *