ಬಣ್ಣ ಕಳಚಿತ್ತು!
ಹಸಿರು ಪಲ್ಲವದ ಮಡಿಲಲ್ಲಿ
ಮಲಗಿ ಆಸರೆಗಾಗಿ ಹಂಬಲಿಸಿ
ಬಾಡಿ ಸೊರಗಿ ಮುದುಡಿದ
ಹಣ್ಣೆಲೆಗಳು ನೆಲವನ್ನಪ್ಪಿತ್ತು
ಗಾಳಿ ತೋರಿದ ಹಾದಿ ಹಿಡಿದಿತ್ತು!
ಚಿಗುರು ಮತ್ತಷ್ಟು ಪಲ್ಲವಿಸಿ
ಕಿಲಕಿಲನೆ ನಗುತ್ತಿತ್ತು
ನಂಟು ಗಂಟೆಂದುಕೊಂಡು ದೂಡಿದ
ಹಣ್ಣಲೆಗಳು ಕಣ್ಣೀರು ಸುರಿಸಿ
ಸತ್ತು ಹಸಿರಿನ ಹೊಟ್ಟೆ ತುಂಬಿಸಿತ್ತು
ತಳಿರಿನ ತುಂಬು ತುಳುಕುವ ಸಂಭ್ರಮ
ಕಣ್ಣು ಕುಕ್ಕುವಂತಿತ್ತು
ಇಬ್ಬನಿಯು ಹಸಿರ ಚೆಲುವಿಗೆ
ಮರುಳಾಗಿ ಮುತ್ತು ಸುರಿಸಿತ್ತು
ಸುಖದ ಅಮಲಿನ ಕನಸಿನಲ್ಲಿ
ಕಳೆದು ಹೋಗಿದ್ದ ಮಂಜಿಗೆ
ನೇಸರನ ಕಿರಣ ತಾಗಿದ
ಆ ಕ್ಷಣ ಕರಗಿ ಕಣ್ಣೀರು
ಸುರಿಸುತ್ತಾ ನೆಲವನ್ನಪ್ಪಿತ್ತು
ಕಾಲ ಉರುಳಿತ್ತು ಚಿಗುರು
ಹೂವಾಗಿ ಹಣ್ಣಾಗಿ ತಳಿರು
ಅರಳಿ ನಗುವುದ ಕಂಡವರು
ಅಂದ ಚೆಂದ ಹೊಗಳಿ
ಕಿತ್ತು ಹೋಯ್ದುದ ನೆನೆದು ನೋವಿನಿಂದ
ಹಸಿರು ನಲುಗಿ ಹೋಗಿತ್ತು
ಕಟ್ಟಿದ್ದ ತೋರಣ ಬಾಡಿ ಕಳಚಿತ್ತು
ಹಸಿರು ಮಾಗಿ ಬಣ್ಣ ಕಳಚಿ ಹಳದಿಯಾಗಿತ್ತು
ಉಸಿರಾಡಲು ನಿತ್ರಾಣವಿಲ್ಲದೆ ನೆಲವನ್ನಪ್ಪಿತ್ತು
ಬೇಸರದ ಬಿಸಿಯಲ್ಲಿ ಬೇಯುತ್ತಿದ್ದ
ಎಲೆಗಳನ್ನು ಗಾಳಿ ಮತ್ತೆ ಹೊತ್ತು ಸಾಗಿತ್ತು!
–ಸೌಮ್ಯಶ್ರೀ ಎ.ಎಸ್.
ನಮಸ್ಕಾರ, ಕವನ ವಾಸ್ತವತೆಯ ಪ್ರತಿರೂಪ, ಅದರಲ್ಲೂ ಕೊನೆಯ ಸಾಲುಗಳು ಮನ ಮಿಡಿಯುವಂತಿದೆ
ಸೊಗಸಾಗಿದೆ ಭಾವಬಂಧ.
Superb
Nice poem
ತುಂಬಾ ತುಂಬಾ ಅರ್ಥಪೂರ್ಣವಾಗಿ ಚಿಂತನೆಗೆ ಹಚ್ಚುತ್ತದೆ ಕವನ.ಅಭಿನಂದನೆಗಳು ಮೇಡಂ.
ಚೆನ್ನಾಗಿದೆ. ವಾಸ್ತವದ ಅನಾವರಣ
ಬದಲಾವಣೆ ಜಗದ ನಿಯಮ ಅನ್ನೋ ಮಾತನ್ನು ನೆನಪಿಸಿತು ಕವನ. ತುಂಬಾ ಚೆನ್ನಾಗಿದೆ
ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ನೆನಪಾಯ್ತು. ಚಂದದ ಕವನ.
ಚಿಂತನೆಗೆ ಹಚ್ಚುವ ಸುಂದರ ಕವನ