ಲಹರಿ

ಸುಂದರಿ ಎಂದರೆ ಯಾರು…

Share Button

 ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಕಾಲದಿಂದ ಕಾಲಕ್ಕೆ,ದೇಶದಿಂದ ದೇಶಕ್ಕೆ ಸೌಂದರ್ಯದ ಅರ್ಥ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ತೆಳ್ಳಗೆ ಬೆಳ್ಳಗೆ ಎತ್ತರಕ್ಕೆ ಇರುವವರನ್ನು ಪಾಶ್ಚಾತ್ಯ ದೇಶಗಳಲ್ಲಿ ಸುಂದರಿ ಎಂದು ಪರಿಗಣಿಸಿದರೆ ಆಫ್ರಿಕಾ ದೇಶಗಳಲ್ಲಿ, ಗುಂಡು ಗುಂಡಗೆ
ಇದ್ದಷ್ಟೂ ಹುಡುಗಿ ಸುಂದರಿ ಎಂದು ಹೇಳುತ್ತಾರೆ.

ಇದಕ್ಕೆ ಸಂಬಂಧಿಸಿದಂತೆ ರಾಮಾಯಣದಲ್ಲಿ ಒಂದು ಕಥೆಯಿದೆ.ರಾಮ ರಾವಣನನ್ನು ಗೆದ್ದು ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆದುಕೊಂಡು ಹೋಗುವಾಗ, ಸುಗ್ರೀವ ರಾಮ ಸೀತೆಯರನ್ನು ಕಿಷ್ಕಿಂಧೆಗೆ ಆತಿಥ್ಯ ಸ್ವೀಕರಿಸಲು ಆಹ್ವಾನಿಸುತ್ತಾನೆ.ಅದಕ್ಕೆ ಒಪ್ಪಿ ತೆರಳಿದಾಗ ಅಲ್ಲಿಯ ವಾನರರ ಪತ್ನಿಯರಿಗೆ ಸೀತೆಯನ್ನು ನೋಡಿ ಆಶ್ಚರ್ಯವಾಯಿತಂತೆ “ಅಯ್ಯೋ ಸೀತೆಯನ್ನು ಸುಂದರಿ ಎಂದು ಹೇಗೆ ಹೇಳುವುದು?,ಅವಳಿಗೆ ಬಾಲವೇ ಇಲ್ಲವಲ್ಲ! “ಎಂದರಂತೆ.ಅದಕ್ಕೇ ಸೌಂದರ್ಯ ಎನ್ನುವುದು ನೋಡುವವರ ಕಣ್ಣಲ್ಲಿರುತ್ತದೆ ಎಂದು ಹೇಳುತ್ತಾರೇನೋ.

ಚರ್ಮದ ಬಣ್ಣ, ಕೇಶರಾಶಿಯ ಹೊಳಪು,ಹಲ್ಲಿನ ಬಿಳುಪು,ಕಂಗಳ ಕಾಂತಿ,ಉತ್ತಮ ಮೈ ಮಾಟ ಇವು ಮಾತ್ರ ಸೌಂದರ್ಯದ ಅಳತೆ ಗೋಲುಗಳೇ? ನಮ್ಮ ಜಾಹೀರಾತು ಸಿನೆಮಾ ಲೋಕಗಳು ತೋರಿಸುವ ಸುಂದರಿಯರೇ ಸೌಂದರ್ಯದ ಆದರ್ಶವೆಂದು ಯುವಜನರು ಮಾರು ಹೋಗಿರುವುದು ಬೇಸರ ತರುತ್ತದೆ. ಯಾವುದೇ ಜಾಹೀರಾತು ನೋಡಿ ಹುಡುಗಿಯರೆಲ್ಲ ತೆಳ್ಳಗೆ , ಬೆಳ್ಳಗೆ , ಎತ್ತರದವರೇ! ಎಲ್ಲೋ ಒಂದಷ್ಟು ಅಪವಾದ ಗಳಿರಬಹುದು.ಪ್ರಪಂಚದ ಸೌಂದರ್ಯದ
ಅಳತೆಗೋಲಿಗೆ ಸಿಗದ ಹುಡುಗಿಯರು ತಮ್ಮ ಯಾವುದೇ ತಪ್ಪು ಇರದಿದ್ದರೂ ಅಪಹಾಸ್ಯಕ್ಕೆ ಗುರಿಯಾಗಿ ನೋಯುವುದು ಯಾವ ನ್ಯಾಯ?ಪತ್ರಿಕೆಗಳಲ್ಲಿ ಬರುವ ಮೆಟ್ರಿಮೋನಿಯಲ್ ಕಾಲಂ ಗಳಲ್ಲಿ,”ವಧು ಬೇಕು” ವಿಭಾಗದ ಎಲ್ಲಾ ಜಾಹೀರಾತುಗಳ ಓದುವುದೇ ಬೇಡ.ಮೊದಲನೆಯದು ನೋಡಿದರೆ ಸಾಕು. ಎಲ್ಲರಿಗೂ ಹುಡುಗಿ
ಫೇರ್,ಸ್ಲಿಮ್,ಆಗಿರಬೇಕು.

ಕಪ್ಪಾಗಿರುವುದು ಒಂದು ಅಪರಾಧವೇ?ಕೆಲವರು ಉದಾರಿಗಳು,“ಹುಡುಗಿ ಕಪ್ಪಾಗಿದ್ದರೂ ಲಕ್ಷಣವಾಗಿದ್ದಾಳೆ,” ಅಂತ ತಮ್ಮ ಕರುಣೆಯನ್ನು ಹರಿಸುತ್ತಾರೆ. “ಹುಡುಗಿ ಚೆನ್ನಾಗಿದ್ದಾಳೆ” ಅಂದರೆ ಸಾಲದೇ ! ಮಧ್ಯದಲ್ಲಿ ಈ “ರೂ” ಅನ್ನೋದು ಯಾಕೆ?. ಕಪ್ಪು ಹುಡುಗಿಯರಲ್ಲಿ ಈ” ಗುಡ್ ಗರ್ಲ್ ಸಿಂಡ್ರೋಮ್” ಸ್ವಲ್ಪ ಜಾಸ್ತಿಯೇ ಏನೋ. ಎಲ್ಲದಕ್ಕೂ ತಲೆ ಬಾಗುವ , ತುಂಬಾ ಒಳ್ಳೆಯವರಾಗಿ ತಮ್ಮ ಭಾವನೆಗಳ ಹತ್ತಿಕ್ಕುವ, ಎಲ್ಲರಿಗೂ ನೆರವಾಗುವ ಗುಣಗಳನ್ನು ತಮ್ಮ ಮೇಲೆ ಆರೋಪಿಸಿಕೊಳ್ಳುತ್ತಾರೇನೋ ಅಂತ ಕೆಲ ಕಪ್ಪು ಹೆಣ್ಣು ಮಕ್ಕಳ ನೋಡಿದರೆ ಅನ್ನಿಸುತ್ತದೆ. ಮದುವೆಯ ಸಮಯ ಬಂದರೆ ಬಿಡಿ,ಹೆಣ್ಣು ಹೆತ್ತವರ ಕಷ್ಟ ಹೇಳ ತೀರದು. “ಎಲ್ಲಾ ಸರಿ,ಆದ್ರೆ ಹುಡುಗಿ ಸ್ವಲ್ಪ ಕಪ್ಪು” ಅಂತ ತಿರಸ್ಕರಿಸಿ ಹೇಳುವವರಿಗೆ ಏನೂ ಕೊರತೆಯಿಲ್ಲ. ಎಷ್ಟೇ ಓದಿ ,ಬರೆದು , ಕೆಲಸಕ್ಕೆ ಸೇರಿ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರೂ, ಈ “ಸ್ವಲ್ಪ ಕಪ್ಪು,” ಅನ್ನೋದು ಮದುವೆಯ ಸಮಯದಲ್ಲಿ ದೊಡ್ಡ ರಾಕ್ಷಸನಂತೆ ಕಾಡುತ್ತದೆ.

ಈಗೀಗಿನ ಹುಡುಗಿಯರ ವೇಷ ಭೂಷಣ, ಮೇಕಪ್ ಎಲ್ಲಾ ನೋಡಿದರೆ ವಿಷಾದವಾಗುತ್ತದೆ. ತಮ್ಮನ್ನು ತಾವು ಪ್ರದರ್ಶನದ ಗೊಂಬೆಯಂತೆ ಅಲಂಕರಿಸಿಕೊಳ್ಳುವ ಮನೋಭಾವ ಬೆಳೆಸಿದ್ದು ಯಾರು?”ಚೆನ್ನಾಗಿ ಕಾಣಬೇಕು” ಅನ್ನೋ ಹಂಬಲದ ಹಿಂದಿನ ಮನೋವೈಜ್ಞಾನಿಕ ಕಾರಣವೇನು? ಹೆಣ್ಣು ಅಂದರೇನು ಚಂದ
ಕಾಣಬೇಕಾದ ಒಂದು ವಸ್ತುವೇ.? ಒಳ್ಳೆಯ ವಿದ್ಯೆ,ಆಲೋಚಿಸುವ ಕ್ರಿಯಾಶೀಲ ಮನಸ್ಸು,ಚತುರತೆಯಿಂದ ಕಾರ್ಯ ನಿರ್ವಹಿಸುವ ಚಾಕಚಕ್ಯತೆ, ಉತ್ತಮ ಆರೋಗ್ಯ, ಇವುಗಳು ಒಬ್ಬಳು ಹುಡುಗಿಯನ್ನು ಸುಂದರಿ ಮಾಡಲು ನಿಜವಾಗಿ ಬೇಕಾದವುಗಳು ಅಂತ ನನಗೆ ಯಾವಾಗಲೂ ಅನ್ನಿಸುತ್ತದೆ.ಸ್ವಚ್ಛ ವಸ್ತ್ರಧಾರಿಯಾಗಿ, ಸರಳವಾಗಿ, ಹಿತ ಮಿತವಾಗಿ ಅಲಂಕರಿಸಿಕೊಂಡು ನಗು ನಗುತ್ತ ಇರುವ ಹೆಣ್ಣು ಮಕ್ಕಳ ಸೌಂದರ್ಯ ಎಲ್ಲಕ್ಕಿಂತಲೂ ಮಿಗಿಲಾದದ್ದು. ಆದರೆ ಸಮಾಜದ ಸೌಂದರ್ಯದ ಮಾನದಂಡಗಳು ಬದಲಾಗಲು ಶತಮಾನಗಳೇ ಬೇಕೇನೋ.

ಜಾಹೀರಾತುಗಳಲ್ಲಿಯಂತು ಹುಡುಗಿಯರನ್ನು ಬಳಸಿ ಕೊಳ್ಳುವ ರೀತಿ ನೋಡಿದರೆ ಬೇಸರವಾಗುತ್ತದೆ. ಉದಾಹರಣೆಗೆ ಯಾವುದಾದರೂ ಒಂದು ಕಾರಿನ ಜಾಹೀರಾತಿನಲ್ಲಿ ನೋಡಿ, ಫುಲ್ ಸೂಟ್ ನಲ್ಲಿರುವ ಹುಡುಗರ ಮಧ್ಯೆ ಚಿಕ್ಕದಾಗಿ ಉಡುಗೆ ತೊಟ್ಟು,ಮೈ ಕೈ ತೋರಿಸಿಕೊಂಡು ನಿಂತಿರುವ ಹುಡುಗಿ ಯೊಬ್ಬಳಿರುತ್ತಾಳೆ. ಹುಡುಗರು ಮೈ ತುಂಬಾ ಬಟ್ಟೆ ಧರಿಸಿ ಆರಾಮಾಗಿ ಇರಬಹುದಾದರೆ ಹುಡುಗಿಯರು ಯಾಕಿರ ಬಾರದು?.ಸ್ತ್ರೀ ಸ್ವಾತಂತ್ರ,ಸಮಾನತೆ,ನನ್ನ ಆಯ್ಕೆ ನನ್ನದು,ಅನ್ನುವ ಹೆಸರಲ್ಲಿ ಮೈ ತೋರಿಸುವ ಬಟ್ಟೆ ಹಾಕಿ ಕೊಳ್ಳುವುದರಲ್ಲಿ ಯಾವ ಲಾಜಿಕ್ ಇದೆ ! ನನಗಂತೂ ತಿಳಿಯದು.

ಸಮಾನತೆ ಅನ್ನುವುದು ಹುಡುಗರ ಸಮನಾಗಿ ವಿದ್ಯೆ ಕಲಿತು,ಅವರ ಸರಿಸಮನಾಗಿ ಯಾವುದೇ ಕ್ಷೇತ್ರದಲ್ಲಿ ಸಮರ್ಥವಾಗಿ ವೃತ್ತಿಯನ್ನು ಮಾಡುವದರಲ್ಲಿ ಇದೆಯೇ ಹೊರತು,ಅರೆ ಬರೆ ಬಟ್ಟೆ ಧರಿಸಿ “ನನ್ನ ದೇಹ,ನನ್ನ ಆಯ್ಕೆ” ಅನ್ನೋದರಲ್ಲಿ ಇದೆಯೇ ಅಂತ ನನಗೆ ಆಶ್ಚರ್ಯ ವಾಗುತ್ತದೆ. ಹುಡುಗರು ವಿದ್ಯೆ, ಕರಿಯರ್ ಪ್ಲಾನ್ ಮಾಡುವುದು ಮುಂತಾದವಕ್ಕೆ ಮಹತ್ವ ಕೊಟ್ಟಷ್ಟೇ,ಹುಡುಗಿಯರೂ ಕೂಡ ಕೊಡಬೇಕು. ಜೀವನ ಸಂಗಾತಿಯ ಆಯ್ಕೆಗೂ ತಮ್ಮದೇ ಇಚ್ಛೆಯ,ತಮ್ಮ ಅಭಿರುಚಿಗೆ,ಮನೋಭಾವಕ್ಕೆ ಹೊಂದುವವರನ್ನು ಪರಿಗಣಿಸಬೇಕು. ಆಗ ಮಾತ್ರ ನಿಜವಾದ ಸಮಾನತೆ ದೊರೆತಂತೆ. ಆ ರೀತಿ ತನ್ನ ಜೀವನವನ್ನು ತಾನು ರೂಪಿಸಿಕೊಳ್ಳುವ ಹುಡುಗಿಯೇ ಸುರಸುಂದರಿ.

ನನ್ನ ಪ್ರಕಾರ ಓರ್ವ ವ್ಯಕ್ತಿಯ ಸೌಂದರ್ಯ ಅವರ,ಬುದ್ಧಿ,ಭಾವನೆ,ಮನೋಭಾವ,ಕರುಣೆ, ಸೌಹಾರ್ದತೆ, ಇತರೊಂದಿಗೆ ಹೊಂದಿಕೊಂಡು ಬಾಳುವ ಗುಣ ಎಲ್ಲವನ್ನೂ ಒಳಗೊಂಡಿರುತ್ತದೆ. ನಮಗೆ ಇಷ್ಟವಾಗುವವರು ಹೇಗಿದ್ದರೂ ನಮ್ಮ ಕಣ್ಣಿಗೆ ಸುಂದರವಾಗಿಯೇ ಕಾಣುತ್ತಾರೆ ಅಲ್ಲವೇ.ನಮ್ಮನ್ನು ಅಕ್ಕರೆಯಿಂದ ಕಾಣುವ ನಮ್ಮ ಅಜ್ಜಿಯಂದಿರು,ಬೆನ್ನು ಬಾಗಿ,ಚರ್ಮ ಸುಕ್ಕು ಗಟ್ಟಿ, ಬೊಚ್ಚು ಬಾಯಿಯವರಾಗಿದ್ದರೂ ನಮಗವರು ಐಶ್ವರ್ಯ ರೈ ಗಿಂತಲೂ ಸುಂದರಿಯರು ಅಲ್ಲವೇ.
ಮಕ್ಕಳಿಗಂತೂ ಅವರಮ್ಮನಿಗಿಂತ ಸುಂದರ ವ್ಯಕ್ತಿ ಪ್ರಪಂಚದ ಯಾವ ಸೂಪರ್ ಮಾಡೆಲ್ ಕೂಡ ಅಲ್ಲ.

ಮದುವೆ ಮನೆಗಳಲ್ಲಿ ಸರ್ವಾಲಂಕಾರ ಭೂಷಿತರಾಗಿ,ದುಬಾರಿ ವಸ್ತ್ರ ವಡವೆಗಳ ತೊಟ್ಟು ಮೆರೆಯುವ ಹೆಂಗಳೆಯರ ಸೌಂದರ್ಯ, ಹಳೇ ಸೀರೆಯುಟ್ಟು,ಕುತ್ತಿಗೆಗೆ ಕರಿದಾರ,ಕೈಗೆ ಮಾಸಿದ ಬಳೆ ತೊಟ್ಟು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ,ಊಟದ ಮನೆಯಲ್ಲಿ ಎಲೆ ತೆಗೆಯುವ ಕೆಲಸ ಮಾಡಿ,ದುಡಿದು
ತನ್ನ ಮಕ್ಕಳ ಸಾಕುವ ತಾಯಂದಿರ ಸೌಂದರ್ಯಕ್ಕಿಂತ ಮಿಗಿಲೇ? ಬಿಸಿಲು ಬೆಂಕಿ ಎನ್ನದೇ,ರಸ್ತೆ ನಿರ್ಮಾಣದ ಕೆಲಸ ಮಾಡುವ, ಜಲ್ಲಿ ಕಲ್ಲು ಒಡೆಯುವ, ಹೊಲ
ಗದ್ದೆಗಳಲ್ಲಿ ಕೆಲಸ ಮಾಡಿ, ಮೈ ಕೈ ಚರ್ಮ ಕಂದಿ ಹೋಗಿರುವ ಹೆಂಗಸರನ್ನು ಕುರೂಪಿಗಳು ಎನ್ನಲು ಸಾಧ್ಯವೇ?

ಒಟ್ಟಿನಲ್ಲಿ ಹೇಳುವುದಾದರೆ ದೇವರ ಸೃಷ್ಟಿಯಲ್ಲಿ ಪ್ರತಿ ಯೋರ್ವ ಜೀವಿಯೂ ಸುಂದರವೆ ಅಲ್ಲವೇ. ಸೃಷ್ಟಿಯ ಅತ್ಯಂತ ಸುಂದರಿ ಭೂಮಿ ತಾಯಿಯಲ್ಲದೆ ಮತ್ತಿನ್ಯಾರು?

-ಸಮತಾ.ಆರ್‍

18 Comments on “ಸುಂದರಿ ಎಂದರೆ ಯಾರು…

  1. ಅರ್ಥಪೂರ್ಣವಾದ ಬರಹ. ಸುಂದರಿ ಎಂದರೆ ಯಾರು..? ಎನ್ನುವುದನ್ನು ತುಂಬಾ ಮನಮುಟ್ಟುವಂತೆ ತಿಳಿಸಿದ್ದಿರಿ..ಧನ್ಯವಾದಗಳು

  2. ಉತ್ತಮ ಲೇಖನ ಸೌಂದರ್ಯ ಮೀಮಾಂಸೆಯನ್ನು ಚೆನ್ನಾಗಿ ವರ್ಣಿಸಿದ್ದಾರೆ ಪ್ರಸ್ತುತ…

  3. ಉತ್ತಮ ಲೇಖನ ಸೌಂದರ್ಯ ಮೀಮಾಂಸೆಯನ್ನು ಚೆನ್ನಾಗಿ ವರ್ಣಿಸಿದ್ದಾರೆ… ಎಲ್ಲ ಕಾಲಘಟ್ಟಕ್ಕೆ ಅನ್ವಯ

  4. ಸುಂದರಿ ನನ್ನ ದೃಷ್ಟಿಯಲ್ಲಿ ಯಾರು ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಪಡಿಮೂಡಿಸಿರುವ ನಿಮ್ಮ ಲೇಖನ ಬಹಳ ಮುದ ನೀಡಿ ತು ಧನ್ಯವಾದಗಳು ಮೇಡಂ

  5. ಬರಹ ಇಷ್ಟವಾಯಿತು.. ಸೀತೆಗೆ ‘ಬಾಲ’ ಇಲ್ಲದಿರುವುದು..ಓದಿದಾಗ. ಹೌದಲ್ಲಾ, ವಾನರ ಸ್ತ್ರೀಯರು ಕರೆಕ್ಟ್ ಆಗಿ ಹೇಳಿದ್ದಾರೆ ಅಂತ ಅನಿಸಿ ನಗು ಬಂತು.

  6. ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  7. ಸೌಂದರ್ಯವನ್ನು ವಿವಿಧ ಕೋನಗಳಲ್ಲಿ ಪರಾಮರ್ಶಿಸಿ ತಮ್ಮ ಅಭಿಪ್ರಾಯವನ್ನು ಸೊಗಸಾಗಿ ಮಂಡಿಸಿರುವಿರಿ.. ಧನ್ಯವಾದಗಳು.

  8. ಸುಂದರಿ, ಸುರಸುಂದರಿ,
    ಏನೇ ಹೇಳಿರಿ
    ಎಲ್ಲಾ ಒಂದೇ ರಿ.
    ನೋಡೋರ ಮನಸ್ಸುರಿ,
    ಅವರ ಕಣ್ಣಲ್ಲಿರತ್ತೆ ರಿ,
    ಈ ಸುಂದರಿ.

    ಅಲಂಕಾರಿಕ ವಸ್ತುಗಳ ಹಿಂದಿನ ಸುಂದರಿ,
    ಒಂದು ಅಲಂಕಾರಿಕ ವಸ್ತು ರಿ.

    ನೈಜತೆನೆ ಸೌಂದರ್ಯ ರಿ.
    ಕಷ್ಟಗಳ ಎದುರಿಸೊ ದಿಟ್ಟತನರಿ,
    ನೋವಿನ ಸ್ಪಂದನ ರಿ,
    ಈ ಸುಂದರಿ.

  9. ಸೌಂದರ್ಯದ ಕುರಿತಾದ ಸುಂದರ ಲೇಖನ ಆತ್ಮ ಸೌಂದರ್ಯದ ಮೇಲೆ ಬೆಳಕು ಚೆಲ್ಲಿದೆ

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *