ನೆನಪಿನ ದೋಣಿಯಲಿ …
ಭಾವ ಬಾವಿಯೊಳಗಿಣುಕಿ ನೋಡೆಲೆಳಸದಿರು
ತಿಳಿನೀರ ಬುಡದ ಬಗ್ಗಡವ ಕಂಡು ಬೆದರದಿರು
ಬಾವಿ : ಜನಮಾನಸದಿಂದ ಮರೆಯಾಗುತ್ತಿರುವ ಅದೆಷ್ಟೋ ವಿಷಯಗಳಲ್ಲಿ ಬಾವಿಯೂ ಒಂದು. ಇಂದಿನ ಮಕ್ಕಳಿಗೆ ಉಪಯೋಗಿಸುವುದು ಹೋಗಲಿ ನೋಡಿಯೂ ತಿಳಿದಿರದ ವಸ್ತುಗಳಲ್ಲಿ ಇದೂ ಒಂದು. ಈಗ ಎಲ್ಲರಿಗೂ well (ಬಾವಿ) ಪಳೆಯುಳಿಕೆಯ ಸಂಗತಿ borewell (ಕೊಳವೆಬಾವಿ) ಅದರೆ ಗೊತ್ತು. ನಾವು ಬಾವಿಯಲ್ಲಿ ದಿನಾ ನೀರು ಸೇದುವ ಪ್ರಸಂಗ ಒದಗಿ ಬಾರದಿದ್ದರೂ ಕೆಲವೊಮ್ಮೆಯಾದರೂ ಅದನ್ನು ಉಪಯೋಗಿಸುವ ಸಂದರ್ಭಗಳೊದಗಿವೆ. ಅದೇನೋ… ಮೊದಲಿನಿಂದಲೂ ಬಾವಿ ಅಂದರೆ ನಿಗೂಢ ವಿಸ್ಮಯ ಪ್ರಪಂಚದಂತೆಯೇ ಭಾಸ. ಅದ್ಬುತ ಮಾಯಾಲೋಕವೇ ತೆರೆಯುವುದೇನೋ ಎನ್ನುವಷ್ಟು ಸೆಳೆತ ಅದರ ಬಗ್ಗೆ .
ನಾನು ಮೊಟ್ಟಮೊದಲು ಬಾವಿ ನೋಡಿದ್ದು ನಾವು ಬಾಡಿಗೆಗಿದ್ದ ಚಾಮುಂಡಿಪುರಂನ ಮನೆಯಲ್ಲಿಯೇ. ನಲ್ಲಿಯಲ್ಲಿ ಧಾರಾಳ ಕಾವೇರಿ ನೀರು ಬಂದರೂ ಅಲ್ಲಿದ್ದ ಮನೆ ಮಾಲಕಿ ಮಡಿಹೆಂಗಸು ಅಜ್ಜಿ ಬಾವಿ ನೀರನ್ನೇ ಸೇದಿ ಉಪಯೋಗಿಸುತ್ತಿದ್ದುದು ಚಿಕ್ಕ ಮಕ್ಕಳಾದ ನಮಗೆ ಕೌತುಕದ ವಿಷಯ. ನಂತರದ ಬಾವಿ ಭೇಟಿಯೆಂದರೆ ಚಿಂತಾಮಣಿಯಲ್ಲಿ ನನ್ನ ತಾಯಿಯ ತವರಿನಲ್ಲಿ. ತುಂಬಾ ಮೇಲೆಯೇ ನೀರಿದ್ದ ಆ ಬಾವಿಯಲ್ಲಿದ್ದ ಆಮೆ ಸಹ ನಮ್ಮ ಫ್ರೆಂಡ್ ಆಗಿತ್ತು . ಮನೆ ಬಳಕೆಗೆಲ್ಲಾ ಬಾವಿ ನೀರನ್ನೇ ಉಪಯೋಗಿಸುತ್ತಿದ್ದರಿಂದ ಬಾವಿಯಲ್ಲಿ ನೀರು ಸೇದಿ ತುಂಬುವುದು ಅಕ್ಷರಶಃ ಮಕ್ಕಳಾಟವೇ ಆಗಿತ್ತು . ಉಸ್ತುವಾರಿಗೆ ಒಬ್ಬರು ಇರುತ್ತಿದ್ದರಷ್ಟೇ. ಹಿತ್ತಲಿನ ಬಾವಿಯ ಬಳಿಯಿಂದ ಬಚ್ಚಲುಮನೆಯ ತೊಟ್ಟಿಗೆ ಪೈಪ್ ಸಂಪರ್ಕ ಇದರಿಂದ ಹೊರುವಂತಿರಲಿಲ್ಲ . ಬರೀ ಸೇದುವುದಷ್ಟೇ. ದಿನಾ ಸೇದುತ್ತಿದ್ದ ಮಾವನ ಮಕ್ಕಳಿಗೆ ಅದು ಸಾಮಾನ್ಯ . ನಮಗೆ ಅಪರೂಪವಾದ್ದರಿಂದ ಉತ್ಸಾಹದಿಂದ ಸೇದಿದ್ದೇ ಸೇದಿದ್ದು .
ಮುಂಚೆ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿತ್ತು ಬಾವಿ. ಬಾವಿ ಎಂದರೆ ನೀರನ್ನು ಪಡೆಯಲು ನೆಲವನ್ನು ಕೊರೆದು ಮಾಡಿದ ಒಂದು ನಿರ್ಮಾಣ. ಅದಕ್ಕೆ ಸುತ್ತ ಕಟ್ಟೆ ಕಟ್ಟಿ ಅಡ್ಡವಾಗಿ ಒಂದು ಕಬ್ಬಿಣದ ಕಂಬ ನಿಲ್ಲಿಸಿ ಆ ಕಂಬದಿಂದ ಒಂದು ದಪ್ಪ ಕಬ್ಬಿಣದ ಕೊಂಡಿ. ಆ ಕೊಂಡಿಗೆ ರಾಟೆ ಎಂಬ ವೃತ್ತಾಕಾರದ ಕಬ್ಬಿಣದ ವಸ್ತು. ರಾಟೆಗೆ ಹಗ್ಗವನ್ನು ಸಿಕ್ಕಿಸಿ ಒಂದು ತುದಿಯನ್ನು ಬಿಂದಿಗೆಯ ಕೊರಳಿಗೆ ಕಟ್ಟಿ ಬಾವಿಯೊಳಗೆ ಇಳಿಬಿಟ್ಟರೆ ಮತ್ತೊಂದು ತುದಿ ಆಚೆ ನೆಲದ ಮೇಲೆ. ನಂತರ ಹಗ್ಗವನ್ನು ಎರಡೂ ಕೈಯಿಂದ ಎಳೆಯುತ್ತ ನೀರು ತುಂಬಿದ ಬಿಂದಿಗೆಯನ್ನು ಹೊರಗೆ ಎಳೆಯುವುದು . ಆಮೇಲೆ ಬಾವಿ ಮಧ್ಯದಿಂದ ಕಟ್ಟೆಗೆ ಅದನ್ನು ತೆಗೆದುಕೊಂಡರೆ ಒಂದು ಬಿಂದಿಗೆ ನೀರು ಸೇರಿದಂತೆ. ಕೆಲವು ಬಾರಿ ಬೇರೆ ಪಾತ್ರೆಗೆ ನೀರು ಬಗ್ಗಿಸಿಕೊಂಡು ಮತ್ತೆ ಅದೇ ಬಿಂದಿಗೆ ನೀರು ತರಲು ಮುಳುಗುತ್ತಿತ್ತು .
ನೀರು ಸೇದುವ ರೀತಿ ವೈಯ್ಯಾರ ಹೇಗಿರಬೇಕೆಂದರೆ ಕೆಳಗೆ ಬೀಳುವ ಹಗ್ಗ ಸರಿಯಾಗಿ ಸುರುಳಿಯಾಗೇ ಕೂರಬೇಕಂತೆ.ಮತ್ತೆ ನೀರಿಗೆ ಬಿಂದಿಗೆ ಬಿಟ್ಟರೆ ಹಗ್ಗ ಅದೇ ಕೆಳಗೆ ಹೋಗಬೇಕಂತೆ. ಸೇದುವಾಗ ನಾವು ಒಂದು ಬಾರಿ ಬಲಕ್ಕೆ ಒಂದು ಬಾರಿ ಎಡಕ್ಕೆ ಬಾಗಿದರೆ ಸರಿ. ಆಮೇಲೆ ಬಾವಿಯಲ್ಲಿ ನೀರು ಸೇದುವುದು ಹೆಂಗಸರಿಗೆ ಒಳ್ಳೆಯ ವ್ಯಾಯಾಮ. ನೀರು ಸೇದುವುದು ಹಾಗೂ ಸೊಂಟದ ಮೇಲೆ ಬಿಂದಿಗೆ ಹೊತ್ತು ತರುವುದು ಗರ್ಭಕೋಶದ ಮಾಂಸಖಂಡಗಳಿಗೆ ತುಂಬಾ ಒಳ್ಳೆಯ ವ್ಯಾಯಾಮವಾಗಿತ್ತು. ಹಾಗಾಗಿಯೇ ಆಗ ಋತುಬಂಧ ಸಮಸ್ಯೆಗಳು ಕಡಿಮೆ ಇದ್ದವು.
ಮೊದಲೆಲ್ಲ ಹಿತ್ತಾಳೆ ತಾಮ್ರದ ಕೊಡಗಳು. ನಂತರ ಪ್ಲಾಸ್ಟಿಕ್ . ಪ್ಲಾಸ್ಟಿಕ್ ಕೊಡಗಳನ್ನು ಹಾಗೆ ಹೀಗೆ ಓಲಾಡಿಸಿ ಸ್ವಲ್ಪ ನೀರು ತುಂಬಿದರೆ ಮಾತ್ರ ಅವು ಮುಳುಗುತ್ತಿದ್ದುದು. ಆದರೆ ಪಾಪ ಹಿತ್ತಾಳೆ ತಾಮ್ರದ ಕೊಡಗಳು ನಖರಾ ಮಾಡದೆ ಮುಳುಗುತ್ತಿದ್ದವು. ಮನೆ ತುಂಬಾ ಜನರಿದ್ದರಂತೂ ನೀರು ಎಷ್ಟು ಸೇದಿದರೂ ಸಾಕಾಗದ ಪರಿಸ್ಥಿತಿ ಇರುತ್ತಿತ್ತು. ಹಗ್ಗದ ಗಟ್ಟಿಗೆ ಎಳೆದು ಎಳೆದು ಅಂಗೈಗಳು ಕೆಂಪಾಗಿದ್ದು ತರಚಿ ರಕ್ತ ಬಂದ ಪ್ರಸಂಗಗಳು ಇದ್ದವಂತೆ. ಮನೆಯಲ್ಲಿ ದಿನಾ ದೇವರ ಪೂಜೆ ಅಭಿಷೇಕಗಳಿಗೆ ಮಡಿ ಅಡುಗೆಗಳಿಗೆ ಹಿರಿಯರ ಕಾರ್ಯಗಳಿದ್ದಾಗ ಅಡಿಗೆಗೆ ಎಲ್ಲಾ ಬಾವಿ ನೀರೇ ಶ್ರೇಷ್ಠ ಎಂದು ಅದನ್ನೇ ಉಪಯೋಗಿಸುತ್ತಿದ್ದುದು. ಈಗಲೂ ಎಷ್ಟೋ ದೇವಸ್ಥಾನಗಳಲ್ಲಿ ಬಾವಿಗಳು ಸುಸ್ಥಿತಿಯಲ್ಲಿದ್ದು ಬಳಕೆಯಾಗುತ್ತಿರುವುದು ಸಂತೋಷದ ವಿಷಯ.
ನೆಲಬಾವಿಗಳು: ಸುತ್ತ ಏನೊಂದೂ ಕಟ್ಟೆ ರಕ್ಷಣೆ ಇಲ್ಲದೆ ನೇರ ಹಳ್ಳದಂತಿರುವ ಇಂತಹ ಬಾವಿಗಳು ತೋಟಗಳಲ್ಲಿ ಗಿಡಕ್ಕೆ ನೀರುಣಿಸಲು ಸಾಮಾನ್ಯವಾಗಿ ಇರುತ್ತಿದ್ದವು. ಇಂಗು ಗುಂಡಿಗಳು ಸಹ ಒಂದು ರೀತಿಯ ನೆಲ ಬಾವಿಗಳೇ .ಇವೆಲ್ಲವುಗಳ ಉಪಯೋಗ ಆಗ ಹೆಚ್ಚು ಇದ್ದುದರಿಂದಲೇ ಅಂತರ್ಜಲ ಸಂರಕ್ಷಣೆ ನಡೆಯುತ್ತಿತ್ತು ಈಗಿನ ಹಾಗೆ ಎಲ್ಲವನ್ನೂ ಬಕಾಸುರನ ಹಾಗೆ ಬಳಸಿಬಿಡುವ ಹಪಾಹಪಿ ಇರುತ್ತಿರಲಿಲ್ಲ.
ಕೆಲವೊಂದು ಬಾವಿಗಳ ಕಟ್ಟೆಗಳು ಕಲಾಕೃತಿಗಳಂತೆ ಕೆತ್ತನೆಗಳನ್ನು ಹೊಂದಿದ ತುಂಬಾ ಸುಂದರವಾಗಿಯೂ ಇರುತ್ತಿದ್ದವು ಹಿಂದಿನ ಕಾಲದಲ್ಲಿ ಅರವಟ್ಟಿಗೆಗಳ ಹಾಗೆ ಬಾವಿಗಳನ್ನು ಕಟ್ಟಿಸಿ ಜನಸೇವೆಯ ಕಾರ್ಯಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಊರಿಗೊಂದು ಅಥವಾ ಬೀದಿಗೊಂದು ಬಾವಿಗಳು ಇರುತ್ತಿದ್ದವು. ಸಿಹಿ ನೀರಿನ ಬಾವಿಯಿಂದ ನೀರು ಸೇದಿ ತರುವುದೇ ಹೆಂಗಳೆಯರಿಗೆ ದೊಡ್ಡ ಕೆಲಸ . ಸಾಮಾನ್ಯ ಬೆಳಗಿನ ಜಾವ ಅಥವಾ ಮುಸ್ಸಂಜೆಯ ತಂಪು ಹೊತ್ತಿನಲ್ಲಿ ಈ ಕಾರ್ಯ ನಡೆಯುತ್ತಿದ್ದುದು ಹೆಣ್ಣುಮಕ್ಕಳ ಮೀಟಿಂಗ್ ಪ್ಲೇಸ್ ಸಹ ಅದೇ ಆಗಿತ್ತು . ಊರಿನ, ಸಂಸಾರಗಳ ವಿಷಯ ಪರಸ್ಪರ ಯೋಗಕ್ಷೇಮಗಳ ಸಂಭಾಷಣೆಗಳಿಗೆ ಬಾವಿಕಟ್ಟೆ ಮೂಕಸಾಕ್ಷಿಯಾಗಿರುತ್ತಿತ್ತು. ನೀರು ತರುವ ಕೆಲಸದಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ . ಹಾಗಾಗಿಯೇ ಈ ಗಾದೆ ಮಾತು “ಊರಿಗೆ ಬಂದವಳು ನೀರಿಗೆ ಬಾರದಿದ್ದಾಳೆ”? ಬಾವಿಕಟ್ಟೆಗಳೆಂದರೆ ಒಂದು ರೀತಿ ಮಹಿಳೆಯರ ವಾಟ್ಸಾಪ್ ಗ್ರೂಪ್ ನಂತೆ .
ಬೇಂದ್ರೆಯವರು ಮಗಳು ಮಂಗಳೆ ನೀರುತರಲು ಹೋಗುವ ಪರಿಯನ್ನು ಬಣ್ಣಿಸಿ “ಸಂಜೀಯ ಜಾವೀಗೆ “ಎಂಬ ಕವನವನ್ನು ಬರೆದಿದ್ದಾರೆ . (ಗರಿ ಸಂಕಲನ). ಅದರ ಕೆಲ ಸಾಲುಗಳು:
ಸಂಜೀಯ ಜಾವೀಗೆ ಹೊರಟೀದಿ ಬಾವಿಗೆ
ಕಿರಗೀಯ ನೀರಿಗೆ ಒದೆಯೂತ ದಾರೀಗೇ
ಗೆಜ್ಜೆಯು ಗೆಜ್ಜೆಗೆ ತಾಕ್ಯಾವಾ ಹೆಜ್ಜೀಗೆ
ಏನಾರ ನಡಿಗೆ ಯಾವೂರ ಹುಡುಗೆ
ಸಂಜೀಯ ಜಾವೀಗೆ ಹೊರಟಾಳ ಬಾವಿಗೆ
ಪುಟ್ಟ ಕೈಗೂಸಾಗಿ ಆಡುತ್ತಿದ್ದ ಕಂದ ಕಿರಿಗೆ (ಪುಟ್ಟ ಸೀರೆ)ಯುಟ್ಟು ನೀರು ತರುವಷ್ಟು ದೊಡ್ಡವಳಾಗಿರುವುದು ಅಪರಿಚಿತಳನ್ನು ಕಂಡಷ್ಟು ಅಚ್ಚರಿಯಾಗುತ್ತದಂತೆ ಕವಿಗೆ . ಹೀಗೆ ಅವಳು ನೀರು ತರುವ ಬಗೆಯನ್ನೇ ಒಂದಿಡೀ ದೊಡ್ಡ ಕವನವನ್ನಾಗಿಸಿದ್ದಾರೆ.
ನೀರು ಧಾರಾಳವಾಗಿ ಬರದೆ ಬಾವಿಗಳನ್ನೇ ನೆಚ್ಚಿಕೊಂಡ ಕಡೆ ನೀರು ಸೇದಿ ತುಂಬಿಸಲೆಂದೇ ಆಳು ಇಟ್ಟುಕೊಂಡಿರುತ್ತಿದ್ದರು. ಇವರಿಗೂ ಆರಾಮ ಅವರಿಗೂ ಸಂಪಾದನೆ ಮಾರ್ಗ. ಎಷ್ಟೋ ಬಡ ಹುಡುಗರು ಹೀಗೆ ನೀರು ಸೇದಿ ಕೊಟ್ಟು ವಿದ್ಯಾಭ್ಯಾಸದ ಖರ್ಚಿಗೆ ಹಣ ಸಂಪಾದಿಸುತ್ತಿದ್ದರಂತೆ.
ಮುಂದೆ ನಾನು ಕೆಲಸಕ್ಕೆ ಮೊದಲ ಪೋಸ್ಟಿಂಗ್ ಚಿಕ್ಕಬಳ್ಳಾಪುರಕ್ಕೆ ಹೋದೆ. ನಲ್ಲಿಯ ನೀರು ಮೂರು ದಿನಕ್ಕೊಮ್ಮೆ ಅಲ್ಲಿ. ಸಂಪು ಟ್ಯಾಂಕುಗಳು ಜನಪ್ರಿಯವಾಗಿರಲಿಲ್ಲ. ಆ ಬಾಡಿಗೆ ಮನೆಯಲ್ಲಿ ದೊಡ್ಡ ತೊಟ್ಟಿಯು ಇರದಿಲ್ಲ. ಮೈಸೂರಿನಿಂದ ಹೋದ ದಿವಸ ಅಥವಾ ಮನೆಗೆ ಅತಿಥಿಗಳು ಬಂದಾಗಲೆಲ್ಲ ನೀರು ಸೇದುವುದೊಂದೇ ಮಾರ್ಗ. ಒಂದಾಳಿನಷ್ಟೆತ್ತರ ಬಿದ್ದಿದ್ದ ಹಗ್ಗ ನೋಡೇ ಎದೆಯೊಡೆಯುತ್ತಿತ್ತು. ರಾಟೆಗೆ ಹಗ್ಗ ಸಿಗಿಸಿ ಬಿಂದಿಗೆಗೆ ನೇಣುಬಿಗಿದು ಬಾವಿಯೊಳಗೆ ಕಳಿಸಿದರೆ ಅದು ನೀರು ತಾಕುವ ಝಲ್ ಶಬ್ದ ಕೇಳಲೇ ಅದೆಷ್ಟೋ ನಿಮಿಷಗಳು. ಮತ್ತೆ ಹೊರಗೆ ಬರ ಮಾಡಿಕೊಳ್ಳಲು ಹರಸಾಹಸ. ನಿಜಕ್ಕೂ ಕಾವೇರಿಯ ಮಡಿಲಿನಲ್ಲೇ ಹುಟ್ಟಿ ಬೆಳೆದ ನನಗೆ ಬರದ ನಾಡಿನ ಬವಣೆ ನೀರಿನ ಮಹಿಮೆಯನ್ನು ಅರಿಯಲು ಕಣ್ತೆರೆಸಲು ಅದೊಂದು ಪಾಠವಾಗಿತ್ತು.
ನಮ್ಮ ಬಾವಿಯ ಬಗ್ಗೆ ಗಾದೆಗಳನ್ನು ಕಡಿಮೆಯೇ? ಒಂದೆರಡು ಹೆಸರಿಸೋಣ ಅಂದರೆ “ಹಗಲು ಕಂಡ ಬಾವಿಯಲ್ಲಿ ಇರುಳು ಬಿದ್ದರಂತೆ” ನಿಚ್ಚಳವಾದ ಸತ್ಯ ಎದುರಿಗೇ ಕಂಡರೂ, ಅರಿತಿದ್ದು ತಪ್ಪು ಮಾಡುವವರ ಅಜ್ಞಾನದ ಬಗ್ಗೆ ಆಡುವ ಮಾತು ಇದು. ಮತ್ತೊಂದು “ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಬುದ್ಧಿ” ಬೇರೆಯವರ ಮಕ್ಕಳ ಅಥವಾ ವಸ್ತುಗಳಿಗೆ ಬೆಲೆ ಕೊಡದೆ ಕ್ವಚಿತ್ತಾಗಿ ಬಳಸಿಕೊಳ್ಳುವ ಸ್ವಾರ್ಥಪರರ ಬಗ್ಗೆ ನುಡಿಯುವ ಗಾದೆಯಿದು .
ಈಗೆಲ್ಲ ಬರಿ ಬೋರ್ ವೆಲ್ ಗಳ ಕಾಲ . ಟ್ಯಾಂಕರ್ ಗಳಿಂದ ನೀರು ತುಂಬಿಸಿ ಮನಸೋ ಇಚ್ಛೆ ಬಳಸುವ ಇಂದಿನ ಮಂದಿಗೆ ನೀರನ್ನು ಪೋಲು ಮಾಡುವುದು ಫ್ಯಾಶನ್. ಮೂರನೇಯ ಮಹಾಯುದ್ದ ನೀರಿಗಾಗಿಯೇ ನಡೆಯುವುದು ಎನ್ನುತ್ತಿರುವಾಗ ಇರುವ ನೀರಿನ ವಿವೇಚನಾಯುತ ಬಳಕೆಗೆ ಬಾವಿಗಳೇ ಸೂಕ್ತ ದಾರಿಯಾಗಿದ್ದವು. ಇಂಗುವ ಮಳೆ ನೀರನ್ನೆಲ್ಲ ಇವೇ ಹಿಡಿದಿಡುತ್ತಿದ್ದರಿಂದ ಅಂತರ್ಜಲ ಮಟ್ಟದ ಕುಸಿತವೂ ಇರುತ್ತಿರಲಿಲ್ಲ. ಹೀಗಾಗಿಯೇ ಈಗ ಬಾವಿಗಳ ಪುನರುಜ್ಜೀವನ ಜಲಸಂಪನ್ಮೂಲದ ವರ್ಧನೆಗೆ ಕಾರಣ ಎಂದು ಮನಗಂಡು ಹಾಳುಬಾವಿಗಳನ್ನು ಮತ್ತೆ ಉಪಯೋಗಕ್ಕೆ ಬರುವಂತೆ ಕೆಲವು ಸಂಘ ಸಂಸ್ಥೆಗಳು ಹಾಗೂ ಸರಕಾರ ಪ್ರಯತ್ನಿಸುತ್ತಿದೆ .
ಮತ್ತೊಂದು ತಮಾಷೆ ವಿಷ್ಯ! ಸಂಬಂಧಿಕರೊಬ್ಬರ ಮನೆ ಪಾಲಾದಾಗ ಮಧ್ಯೆಯಿದ್ದ ಒಂದು ಬಾವಿಯೂ ಭಾಗವಾಗಿತ್ತು. ಅವರ ಭಾಗಕ್ಕೆ ರಾಟೆ ಮುಚ್ಚಳ ಬೀಗ ಅವರು , ಇವರ ಭಾಗಕ್ಕೆ ಇವರು. ಆದರೆ ನೀರು ಹಾಗೆ ಪಾಲು ಮಾಡಲು ಆಗುತ್ತಿತ್ತೇ? ಆಗಿನ ಕಾಲಕ್ಕೆ ಅದೆಲ್ಲ ತೋಚುತ್ತಿರಲಿಲ್ಲ ಬಿಡಿ!
‘ಪಾತಾಳಗರಡಿ’ ಮೈತುಂಬ ಕೊಕ್ಕೆ ಗಳಿದ್ದ ಈ ಕಬ್ಬಿಣದ ಸಾಧನ ಬಾವಿ ಆಳದಲ್ಲೆಲ್ಲೋ ಮುಳುಗಿ ಅಡಗಿ ಕುಳಿತಿರುವ ಕೊಡಗಳಿಗೆ ಬಿಡುಗಡೆ ಕೊಡಲು ಬಂದ ಆಪದ್ಬಾಂಧವ. ಬಾವಿಯಲ್ಲಿ ನೀರು ಕಡಿಮೆಯಾಗಿ ತಳ ಕಾಣುವಾಗ ಇವನ ಆಗಮನ . ಕೆಲವೊಮ್ಮೆ ಕೈ ಜಾರಿ ಬಿದ್ದ ಸರ ಬಳೆಗಳು ಸಹ ಇದರ ಮೂಲಕ ಪುನರ್ ಲಭ್ಯವಾಗುತ್ತಿದ್ದವು.. ಅಪರೂಪದಲ್ಲಿ ಇದರ ಬಳಕೆಯಾದಾಗ ಬಾವಿ ಕಟ್ಟೆಯ ಸುತ್ತ ವಸ್ತುಗಳನ್ನು ಕಳೆದುಕೊಂಡಿದ್ದವರು ಜಮಾಯಿಸುತ್ತಿದ್ದುದು ವಿಶೇಷ .
ನನ್ನ ಇತ್ತೀಚಿನ ಬಾವಿ ಸಾಂಗತ್ಯ ಅಂದರೆ ಮೂವತ್ತು ವರ್ಷಗಳ ಹಿಂದೆ ನಮ್ಮ ತಂದೆ ಕುವೆಂಪು ನಗರದಲ್ಲಿ ಮನೆ ಕೊಂಡಾಗ ಅಲ್ಲಿ ಭಾವಿಯಿದ್ದುದು. ತಿಳಿದು ನನಗೂ ಅದು ತುಂಬಾ ಖುಷಿ ಕೊಟ್ಟ ವಿಷಯ . ಬಗ್ಗಿದರೆ ಕೈಗೆ ಎಟಕುವಷ್ಟು ಮೇಲೆ ಇದ್ದ ನೀರು.. ಒಂದಷ್ಟು ದಿನ ಬಳಸಿ ನಂತರ ಸಮಯಾಭಾವದಿಂದ ಮತ್ತೆ ನಲ್ಲಿ ನೀರಿಗೆ ಶರಣಾದೆವು. ಮಳೆಗಾಲದಲ್ಲಿ ತುಂಬಿಬಿಡುತ್ತಿದ್ದ ಸಮಸ್ಯೆ ಉಪಯೋಗಿಸದೆ ಕೆಟ್ಟ ನೀರು ಇವೆಲ್ಲವೂ ಬಾವಿ ಮುಚ್ಚುವ ನಿರ್ಧಾರಕ್ಕೆ ಕಾರಣವಾದವು ಇದೂ ಸಹ ತುಂಬಾ ನೋವು ಕೊಟ್ಟ ವಿಷಯ. ಬಾಲ್ಯಕ್ಕೆ ಬೆಸೆದ ಕೊಂಡಿಯ ಸರಪಳಿ ಮುರೀತೇನೋ ಎಂಬ ವಿಷಾದ ಕಾಡಿತ್ತು.
ಕೆಲವೊಮ್ಮೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಉಂಟು. ಹಾಗೆ ಬಿದ್ದ ಕೆಲ ಬಾವಿಗಳು ಗತ್ಯಂತರವಿಲ್ಲದಾಗ ಶುದ್ಧಿಯಾಗಿ ಪುನರ್ಬಳಕೆಯಾದರೆ ಮತ್ತೆ ಕೆಲವು ಉಪಯೋಗಿಸಲ್ಪಡದೇ ಹಾಳುಭಾವಿಗಳಾಗಿ ಬಿಟ್ಟಿದ್ದವು. ದುಷ್ಟಶಕ್ತಿಗಳ ಆವಾಸ ಎಂದು ಹೆದರಿ ಆ ಕಡೆ ನೋಡಲೂ ಬಾರದೆಂದು ಹಿರಿಯರ ತಾಕೀತು . ಚಾಚೂತಪ್ಪದೆ ಪಾಲಿಸುತ್ತಿದ್ವಿ ಕೂಡ. ತುಂಬಾ ಜನಜನಿತವಾಗಿರುವ ಬೈಗುಳವೂ ಬಾವಿಗೆ ಸಂಬಂಧಿಸಿದ್ದೇ “ಎಲ್ಲಾದರೂ ಹಾಳು ಬಾವಿಗೆ ಬಿದ್ದು ಸಾಯಿ” ಅಂತ ಶಪಿಸುತ್ತಿದ್ದರು.
ಚಿಕ್ಕಂದಿನಲ್ಲಿ ಓದಿದ್ದ “ಬಾವಿಗೆ ಬಿದ್ದ ಚಂದ್ರ” ಪದ್ಯ ತುಂಬಾ ಕಾಡುತ್ತದೆ . ಆ ಪದ್ಯದಲ್ಲಿ ಬಾವಿಯಲ್ಲಿ ಚಂದ್ರನ ಪ್ರತಿಬಿಂಬ ನೋಡಿದ ಗೋಪಿ ಮತ್ತು ಪುಟ್ಟು ಎಂಬ ಮಕ್ಕಳು ಹಗ್ಗ ಹಾಕಿ ಚಂದ್ರನನ್ನು ಬಾವಿಯಿಂದ ಮೇಲೆ ತರಲು ಯತ್ನಿಸುತ್ತಾರೆ . ಆ ವಯಸ್ಸಿನ ಮುಗ್ಧತೆ ಮತ್ತೆ ಮರಳಿ ಬರಬಾರದೆ ಎನಿಸುತ್ತದೆ. ಅದಕ್ಕೆ ಏನೋ ಈಗಲೂ ಬಾವಿ ಕಂಡಾಗಲೆಲ್ಲ ಅದರ ಬಳಿ ಹೋಗಿ ಕಟ್ಟೆಗೆ ಆತು ಆಳ ನೋಡುವ ಹವ್ಯಾಸ ಚಟವೇ ಆಗಿದೆ. ಮತ್ತೆ ಬಾವಿಗಳ ಫೋಟೋ ತೆಗೆಯುವುದು. ಅದರಲ್ಲಿ ಹಣಕಿದಾಗಲೆಲ್ಲ ಚಂದ್ರ ಬಿದ್ದಿರುವನೇನೋ ಎಂಬ ಬಾಲ್ಯದ ನಂಬಿಕೆ ನೆನಪಾಗಿ ನಗು ಬರುತ್ತದೆ ಅದೇಕೋ ಚಿಕ್ಕಂದಿನ ದಿನಕ್ಕೆ ಹೋದ ಹಾಗಾಗಿ ಮನದಲ್ಲೇ ಮತ್ತೆ ಎರಡು ಜಡೆಯ ವಿಸ್ಮಯ ತುಂಬಿದ ಕಣ್ಣುಗಳ ಪುಟ್ಟ ಹುಡುಗಿಯಾದೆನೇನೋ ಎಂಬ ಭಾವ. ರೆಕ್ಕೆ ಬಿಚ್ಚಿ ಹಾರಾಡುವ ಹಕ್ಕಿಗಳ ನಿರಾಳತೆ . ಕೆಲವೊಂದು ವಿಷಯ ವಸ್ತುಗಳೇ ಹಾಗೇ ಅಲ್ಲವಾ?
-ಸುಜಾತಾ ರವೀಶ್
ಚಂದದ ಬರಹ
ಧನ್ಯವಾದಗಳು
ಸುಜಾತಾ ರವೀಶ್
Nice articulation.
ಬಾವಿಯ ಬಗ್ಗೆ ಉತ್ತಮ ಮಾಹಿತಿ ಯನೊಳಗೊಂಡ ಲೇಖನ ದ ಜೊತೆಗೊಂದು ಬದುಕಿನ ಹಂತದಲ್ಲಿ ನೆನಪು ಗಳು ಸರಮಾಲೆ ಚೆನ್ನಾಗಿ ಮೂಡಿ ಬಂದಿದೆ ಮೆಡಂ.
ತುಂಬಾ ಚೆನ್ನಾಗಿದೆ
ಹಳೆಯ ನೆನಪುಗಳ ಸುಂದರ ಚಿತ್ರಣ.
ಚೆಂದದ ಬರಹ..
ಬಾವಿಯ ನೆನಪಿನ ಬುತ್ತಿಯನ್ನು ನಮಗೆಲ್ಲರಿಗೂ ಉಣಬಡಿಸಿರುವಿರಿ..ಧನ್ಯವಾದಗಳು ಸುಜಾತಾ ಮೇಡಂ.
ನೆನಪಿನ ಬಾವಿಯಿಂದ ಮೊಗೆ ಮೊಗೆದು ಬಾಳಿನ ಸುಂದರ ನೆನಪುಗಳನ್ನು ಸೇದಿ ಮೇಲೆ ತಂದಂತಿದೆ ಈ ಸುಂದರ ಲೇಖನ
…….ಸೊಗಸಾದ ಸವಿವರ…. ಸಚಿತ್ರ…. ಕವನ-ಲೇಪಿತ ಲೇಖನ… ಹಿತವಾದ ಭಾಷೆ
…. it is very enlightening….ಮಂಗಳವಾಗಲಿ….ಧನ್ಯವಾದಗಳು….