ನಾ ಶಾಲೆಗೆ ಹೋಗಲ್ಲಾ..

Share Button

 

ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ  ಕರುಳು  ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ. ಅತ್ತು ಅತ್ತು ಕಣ್ಣು ಮೂಗು ಕೆಂಪೇರಿಸಿಕೊಂಡಿದ್ದ ಮಗು ‘ಮನೆಗೆ ಹೋಗುವಾ’ ಎಂದು ಅಪ್ಪಣೆ ಮಾಡಿತು.ಟೀಚರ್ ಬಿಡಲಿಲ್ಲ.ಹತ್ತಿರ ಬಂದು  ತನ್ನ ಕಣ್ಣು ಮೂಗು,ಕಿವಿ  ತೋರಿಸುತ್ತಾ ಇಂಗ್ಲೀಷ್ ನಲ್ಲಿ ಐಸ್,ನೋಸ್,ಇಯರ್ ಎಂದು ಹೇಳಿಸಲು ಹೊರಟರು.ಮಿಕಿ ಮಿಕಿ ನೋಡಿದ್ದೇ ಹೊರತು ಪ್ರತಿಕ್ರಿಯೆ ಇಲ್ಲ.ಕಣ್ಣುಗಳು ಆಚೀಚೆ .

ಕಣ್ಣೀರಿಳಿಸುವ ಸಹಪಾಠಿಗಳ ಕರುಣಾಜನಕ ಸ್ಥಿತಿ ಕಂಡು ಹೆದರಿ ಒಬ್ಬ ಬಾಲಕ ಅಮ್ಮ ಎಂದರೆ ಟೀಚರಿಗೆ ಗೊತ್ತಾಗಲಿಕ್ಕಿಲ್ಲ ಎಂದು ಮುಂಜಾಗರೂಕತೆಯಿಂದ  ಆಚೀಚೆಯವರು  ತನ್ನಮ್ಮನನ್ನು ಕರೆವಂತೇ ಅರುಣಕ್ಕನನ್ನು ಬರಲಿಕ್ಕೆ ಹೇಳಿ ಎಂದು ಗೋಳಿಡುತ್ತಿದ್ದ. ಅದ ಕಂಡು ಎಲ್ಲಾ ಎಳೆಚಿಗುರುಗಳೂ ಸಾಮೂಹಿಕವಾಗಿ ಸಾಥ್ ಕೊಟ್ಟವು. ಟೀಚರ್ ಕಿವಿ ತೂತು ಬೀಳಲಿಲ್ಲ ಅಷ್ಟೇ.ಎರಡೂ ಕಿವಿ ಕೈಲಿ ಮುಚ್ಚಿಕೊಂಡರು.ತಮ್ಮ ತಮ್ಮ ಮಕ್ಕಳ ಪ್ರತಾಪವನ್ನು ಕಂಡು ಕೇಳಿ ಬೆಚ್ಚಿ ಬಿದ್ದ ಮಮತಾಮಯಿ ಅಮ್ಮಂದಿರು ಗಬಕ್ಕನೆ ಧಾವಿಸಿ ಮಕ್ಕಳನ್ನೆತ್ತಿ ಎದೆಗವಚಿ ಶಾಲಾಚೀಲ ಹಿಡಿದು  ಹೊರಗೆಹೊರಟರು.

ನನ್ನದು ಎಲ್ಲಿ ಎಂದು ಹುಡುಕಿದರೆ ಗ್ರೌಂಡಿನ ತುದಿಗೆ ನಿಂತು ನನಗೆ ಕಾಯುತ್ತಿದ್ದಳು. ಸರಿ. ಮನೆಗೆ ಹೊರಟೆವು. ಊಟಮಾಡಿ ಮಲಗಿ ಎದ್ದದ್ದೇ ನಾಳೆಯಿಂದ ನಾನು ಶಾಲೆಗೆ ಹೋಗುವುದಿಲ್ಲ ಎಂದು ತೀರ್ಮಾನ ಆಯಿತು. ನಾನು ಮೌನ. ಯಥಾಪ್ರಕಾರ ಮರುದಿನ ಎಬ್ಬಿಸಿ ಹೊರಡಿಸಿದೆ. ಪ್ರತಿಭಟನೆ ಬಂದರೂ ಕೇಳಲಿಲ್ಲ. ತರಗತಿಯ ಒಳಹೋಗಲಾರೆ ಎಂಬ ಹೊಸ  ಐಡಿಯಾ ಹೊಳೆಯಿತು.ಆಯಾ ಮಗುವಿನ ಸೊಂಟಕ್ಕೆ ಕೈ ಹಾಕಿ ಅನಾಮತ್ತು ಎತ್ತಿ ಒಳಗೆ ಒಯ್ದಳು.ವಾವ್,ಆ ರಂಪ, ಕಿರುಚಾಟ,ಕೈ ಕಾಲು ಬಡಿವ ದುಖಃ ನೋಡಿಯೇ ತಿಳಿಯಬೇಕು.

ಮರುದಿನದಿಂದ ನನಗೆ ತಟಪಟ ಏಟುಗಳು.ಜೊತೆಗೇ ರಾಗರಾಗವಾಗಿ ಅಳು.”ಇಂದು ಶಾಲೆಗೆ ಹೋಗುವುದಿಲ್ಲಾಆಆಆಆಆಆ….”ನನಗೂ ಸಿಟ್ಟು ಬಂತು. ಮೌನವ್ರತ ನನ್ನದು. ಶಾಲೆಗೆ ಹೊರಡಿಸಲೂ ಇಲ್ಲ.

ಚಿನ್ನು ಅಪ್ಪ ಯಾರ ಪಕ್ಷ ವಹಿಸಬೇಕೆಂದು ತಿಳಿಯದೆ ಆಫೀಸಿಗೆ ಹೋದರು.ಸುಮಾರು ಹನ್ನೊಂದು ಘಂಟೆಗೆ  ಸಂಮ್ ಥಿಂಗ್ ಈಸ್ ರಾಂಗ್ ಎಂದು ತಿಳಿಯಿತು ಸ್ವಾತಂತ್ರ್ಯ ಸವಿಯುತ್ತಿದ್ದ ಮಗುವಿಗೆ.ಅಮ್ಮನಿಗೆ ಸಮಾಧಾನ ಪಡಿಸಲು  ಹೊರಟಿತು.ಎರಡು ಚಮಚೆ ಹಾಲು ಕುಡಿಯಲೂ ವಾಕರಿಸುತ್ತಿದ್ದ ಪಾಪು ಹಾಲು ಕೊಡು ಎಂದು ಕೇಳಿ ಕುಡಿದಿತ್ತು. ತೆಪ್ಪಗಿದ್ದೆ. ಊಟಕ್ಕೂ ತಕರಾರೇ ಇಲ್ಲ. ನಾನೇನೂ ಮರುಳಾಗಲಿಲ್ಲ. ಮಧ್ಯಾಹ್ನ ಮೂರು ಘಂಟೆಗೆ ಸ್ಲೇಟುತುಂಬ ಬರೆದು ಎದುರು ಹಿಡಿದಳು.ಅ….ಆ….ಇ  ಈಜೊತೆಗೆ ಇಂಗ್ಲೀಷ್ ಅಕ್ಷರಮಾಲೆ.ಮುಖ ನೋಡಿದರೆ ಈಗಾದರೂ ಅಮ್ಮ ಮಾತಾಡಬಹುದೆಂಬ ಆಸೆ. ಸೆಳೆದು ಮುದ್ದಿಸಿದ್ದೆ .ರಾಜಿ ಆಯ್ತೆಂಬ  ಸಮಾಧಾನ ಪಾಪುವ ಮುದ್ದುಮುಖದ ತುಂಬಾ.

ಮತ್ತೆ ತಕರಾರಿಲ್ಲದೆ ಶಾಲೆಗೆ ಹೋಗತೊಡಗಿದ್ದಳು.ಸ್ನೇಹಿತೆಯರಾದ ನೌಶಿ,ರಾಫಿಯಾ ಮತ್ತಿತರರು ಆಪ್ತವಾದಂತೆ  ಶಾಲೆ ಹತ್ತಿರ ವಾಯಿತು.ರಜಾದಿನ ಬೋರ್ ಸುರು.ಸುರಿವ ಮಳೆಗೆ ನೀರಾಟವಾಡುತ್ತಾ  ಚೂಡು ಕಡಲೆ ಮೆಲ್ಲುತ್ತ  ಮೆಲ್ಲುತ್ತ ಶಾಲೆ ಮೆಟ್ಟಲು ಹತ್ತುವ ಸಂಭ್ರಮ.

ಮೂರನೇ ವಯಸ್ಸಿನಲ್ಲಿ ಅಮ್ಮನ ಮಡಿಲು ಬಿಟ್ಟು ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಸಂಕಟ ಇದು.ಚಿನ್ನು ಎಲ್ಲಾ ಪುಟಾಣಿಗಳ ಪ್ರತಿನಿಧಿ ಎಂದರೆ ತಪ್ಪಿಲ್ಲ.ಪ್ರತಿಯೊಬ್ಬ ತಾಯ್ತಂದೆಯರೂ  ಅನುಭವಿಸುವ ವಿಚಾರವಿದು.ಅಮ್ಮ ಅಪ್ಪನೇ ಪ್ರಪಂಚ ವಾದ ಎಳೆಕಂದಮ್ಮಗಳು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವ ತನಕ ಅನಿವಾರ್ಯವಾಗಿ ಅನುಭವಿಸಬೇಕಾಗಿ ಬರುತ್ತದೆ.

ಈಗ ಮಳೆ ಸುರಿಯುವಾಗ ಮತ್ತದೇ ನೆನಪು ಕೀಟಲೆಯದಾಗಿ ಕಾಡುತ್ತದೆ.

 

– ಕೃಷ್ಣವೇಣಿ ಕಿದೂರು

3 Responses

  1. Hema says:

    ಶಾಲೆಗೆ ಹೋದ ಪ್ರಥಮ ದಿನ ನನ್ನ ಮಗನೂ ಅತ್ತಿದ್ದ. ಎಲ್ಲಾ ಮಕ್ಕಳ ಸಾಮೂಹಿಕ ಅಳು ನೋಡಿ ಬೇಜಾರಾಯಿತು. ಎಲ್ ಕೆ ಜಿ ಕ್ಲಾಸ್ ನ ಅಧ್ಯಾಪಕಿಯರಿಗೆ ಇಂತಹ ಪುಟಾಣಿಗಳನ್ನು ಸಮಾಧಾನಿಸಲು ಅದೆಷ್ಟು ಕಷ್ಟವಾಗುತ್ತದೆಯೋ.

  2. sangeetha raviraj says:

    ತುಂಬ ಮನಮುಟ್ಟುವ ಬರಹ… ನನ್ನ ಮಗಳನ್ನು ಮೊದಲು ಅಂಗನವಾಡಿಗೆ ಕಳುಹಿಸಿದ ದಿನಗಳಲ್ಲಿ ನಾನೂ ಅತ್ಹುಬಿಟ್ಟಿದ್ದೆ!
    sageetha

  3. Shruthi Sharma says:

    ಹಹ್ಹ..! ಚೆನ್ನಾಗಿದೆ.. 🙂

Leave a Reply to sangeetha raviraj Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: