ಓದು ಮಗು, ಓದು….
ಅಕ್ಷರಕ್ಷರ ಪದ
ವಾಕ್ಯಗಳಲವಿತ
ಋಷಿಮುನಿ ಪ್ರಣೀತ
ವೇದ ವೇದಾಂಗ
ಕರ್ಮಾನುಷ್ಠಾನ.
ಇತಿಹಾಸ ಭೂಗೋಳ
ಜ್ಞಾನ ವಿಜ್ಞಾನ
ಖಗೋಳಾದಿ ಗಣಿತ
ಯಂತ್ರತಂತ್ರಾದಿ
ವಿಷಯಾನುಭವ.
ಕತೆ, ಕಾವ್ಯ, ಕವನ
ಸಾಹಿತ್ಯ ಸಂಗೀತ
ನಾಟ್ಯ ಅಭಿನಯಾದಿ
ನವರಸ ದರ್ಶನ
ಜ್ಞಾನ ಪರಿಪೂರ್ಣ.
ಬಾಷೆ ನೂರಿರಲಿ
ಕ್ಷೇತ್ರ ಸಾವಿರವಿರಲಿ
ಅರಿವಿನ ಬೀಜ ಬಿತ್ತಿ
ಪಡೆವ ಜ್ಞಾನದ ಫಸಲು
ಓದೆಂಬುದೊಂದು ಕೃಷಿ.
ಏನು ಓದಿದೆ ನೀನು
ಎಷ್ಟು ಓದಿದೆ ನೀನು
ಓದು ಸಾಕಿನ್ನು
ಎಂಬುದನು ಮರೆತುಬಿಡು
ಓದೆಂಬುದೊಂದು ತಪ.
ಹೊತ್ತಗೆಯಲವಿತ
ಅರಿವಿನ ಬೀಜ
ಎದೆಯಾಳಕಿಳಿದು
ಮೊಳೆತು, ಚಿಗುರಿ
ಹೆಮ್ಮರವಾಗಿ
ಸಾವಿರ ಟಿಸಿಲೊಡೆದು
ಆಗಲಿ ಬೋಧಿವೃಕ್ಷ.
.
– ದಿವಾಕರ ಡೋಂಗ್ರೆ