ಅಂಬಿಕಾತನಯರ ಅಂಬಾಪ್ರೇಮ
‘ಕುಣಿಯೋಣು ಬಾರಾ, ಕುಣಿಯೋಣು ಬಾರಾ’, ‘ಇಳಿದು ಬಾ ತಾಯೇ ಇಳಿದು ಬಾ’, ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು‘ ಎಂಬ ಕವಿತೆಗಳನ್ನು ಕೇಳದ ಕನ್ನಡಿಗರು ಇಲ್ಲವೆಂದರೆ ಬಹುಷಃ ತಪ್ಪಾಗಲಾರದು ಎನಿಸುತ್ತದೆ. ಉತ್ಸಾಹದ ಚಿಲುಮೆಯನ್ನುಕ್ಕಿಸುವ, ನೊಂದಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೇಮದ ಕಾರಂಜಿಯನ್ನು ಚಿಮ್ಮಿಸಬಲ್ಲ ಕವಿತೆಗಳನ್ನು ರಚಿಸಿದ ಹಾಗೂ ‘ರಸವೇಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂದು ಮಾರ್ಮಿಕವಾಗಿ ಜೀವನದ ಅರ್ಥವನ್ನು ರಸವತ್ತಾಗಿ ಹೇಳಿದಂತಹ ಕೀರ್ತಿ ನಮ್ಮ ವರಕವಿ ಬೇಂದ್ರೆಯವರು ಎಂದರೆ ಅತಿಶಯೋಕ್ತಿಯಲ್ಲ!
‘ಅಂಬಿಕಾತನಯದತ್ತ’ –ಇದು ಬೇಂದ್ರೆಯವರ ಕಾವ್ಯನಾಮ. ಈ ಹೆಸರಿನ ಹಿಂದೆ ಸ್ವಾರಸ್ಯವಾದ ಒಂದು ಸುಳಿವಡಗಿದೆ ಎಂದರೆ ಅಚ್ಚರಿಯೇ ಸರಿ! ‘ಅಂಬೂತಾಯಿ’ ಬೇಂದ್ರೆಯವರ ಜನನಿ (ತಂದೆ ಶ್ರೀ ರಾಮಚಂದ್ರಪಂತರು ಇವರಎರಡನೇ ಮಡದಿ). ‘ಅಂಬೂತಾಯಿ’ ಅವರ ತವರಿನ ಹೆಸರು (ಅತ್ತೆಮನೆಯ ಹೆಸರು ಪಾರ್ವತಿಬಾಯಿ) ಕವಿ ಬೇಂದ್ರೆಯವರು ತಮ್ಮತಾಯಿಯವರನ್ನು ಐದು ಬಗೆಯಿಂದ ಹೊಗಳುತ್ತಾರೆ.
(1) ದೇಹ ಕೊಟ್ಟ ತಾಯಿ
(2) ಮಾತು ಕಲಿಸಿದ ತಾಯಿ
(3) ಸಂಸ್ಕಾರ ಸಂಪನ್ನ ಮಾಡಿದ ತಾಯಿ
(4) ಭೂಮಂಡಲದ ಮಾನವತೆಯಲ್ಲಿ ನೆಲೆಸಿದ ತಾಯಿ
(5) ವಿಶ್ವೋದರದಲ್ಲಿ ಧರಿಸಿದ ತಾಯಿ
ಇಂತಹ ಪಂಚಕೋಶ ಗರ್ಭದಲ್ಲಿ ಜನಿಸಿದ ನಾನು ‘ಧನ್ಯ ಧನ್ಯ’ ಎನ್ನುತ್ತಾರೆ.
ಇಂತಹ ಅವರ ತಾಯಿ ಅವರ ಮರಣಕಾಲದ ಪೂರ್ವದಲ್ಲಿ ಒಂದು ಕನಸು ಕಂಡರಂತೆ ‘ಒಂದು ದೇವಿಯ ಗುಡಿ, ಆ ದೇವಿಯಲ್ಲಿ ಆಕೆ ಪ್ರಾರ್ಥನೆ ಮಾಡುತ್ತಾ, ತಾಯೇ! ನನಗೆ ದಾನ-ಧರ್ಮಕ್ಕಾಗಿ ಸಾಕಷ್ಟು ಸಂಪತ್ತು ಕೊಡು ಮತ್ತೆ ಏತಕ್ಕೂಅಲ್ಲ’ ಎಂದು ಕೇಳಿಕೊಂಡು ಗುಡಿಗೆ ಪ್ರದಕ್ಷಿಣೆ ಹಾಕಿ ಬಂದು ನೋಡುತ್ತಾರಂತೆ, ದೇವಿಯಿದ್ದಲ್ಲಿ ‘ದತ್ತ’ನ ಮೂರ್ತಿ! ಪರಮಾಶ್ಚರ್ಯದಿಂದ ತನ್ನ ಕನಸನ್ನು ಮಗ ಬೇಂದ್ರೆಯವರ ಹತ್ತಿರ ಹೇಳಿ ಈ ನನ್ನ ಕನಸಿನ ಅರ್ಥವೇನು? ಎಂದು ಕೇಳಿದರಂತೆ. ಆಗ ವರಕವಿ ಹೇಳಿದರಂತೆ, ” ಅಮ್ಮಾ, ನೀನು ಗೋದುಬಾಯಿಯ ಮಗಳು ಅಂಬಾಬಾಯಿ, ನಾನು ಅಂಬಿಕಾತನಯ, ನಾನು ಕವಿ, ಈ ಕನ್ನಡನಾಡಿಗೆ ಈ ‘ದತ್ತ’ನನ್ನೇ ದಾನ ಮಾಡಿದ್ದೀಯಾ, ಮತ್ತೇನು ಬೇಕು ನಿನಗೆ? ಎಂದು ದೇವಿ ಕೇಳಿದ್ದಾಳೆ ಅಷ್ಟೆ” ಅಂದರಂತೆ. ಅಂದಿನಿಂದಅವರು ‘ಅಂಬಿಕಾತನಯದತ್ತ’. ಇಂತಹ ಸರಳ, ಸುಂದರ, ಸಜ್ಜನಿಕೆಯ ಮಗನನ್ನು ಹೆತ್ತು ಕನ್ನಡನಾಡಿಗೆ ಕೊಟ್ಟತಾಯಿಗೆ ಗಂಗಾಷ್ಟಕ ಬರೆದು ಅರ್ಪಿಸಿದ ಕವಿಕುವರ ಅಂಬಿಕಾತನಯದತ್ತರು! ಈ ನಾಮಾಂಕಿತದ ಮೊದಲ ಕವಿತೆ ಮುದ್ರಿತವಾದದ್ದು 1918 ಶ್ರಾವಣ ಮಾಸದಲ್ಲಿ ‘ಪ್ರಭಾತ’ ಎಂಬ ಮಾಸಿಕದ ಮೊದಲ ಸಂಚಿಕೆಯಲ್ಲಿ.
ಬಹುಭಾಷಾ ಪಾಂಡಿತ್ಯ ಹೊಂದಿದ್ದ ವರಕವಿಯ ಆಂಗ್ಲಭಾಷೆಯ ಕಾವ್ಯನಾಮ ಬೆನ್‌ರಾಮ ಸನ್ ಬೇಂದ್ರೆ ರಾಮಚಂದ್ರನ ಮಗ ಎಂಬ ಸಂಕೇತ. ಭಾವನೆಗೆ ಭಾಷೆ ಯಾವುದೇ ಇರಲಿ ಅದಕ್ಕೆ ಸ್ಪೂರ್ತಿ ‘ಅಂಬಾತಾಯಿ’ ಎನ್ನುತ್ತಿದ್ದ ಮಾತೃಭಕ್ತರು. ವರಕವಿಯವರಿಗೆ ಸ್ತ್ರೀಯರ ಬಗ್ಗೆ ಅಪಾರ ಗೌರವ.ಅಂಬೂತಾಯಿಯ ಗರ್ಭದ ಕೂಸು ಅಂಬಿಕಾತನಯದತ್ತ ಜಗದ ಎಲ್ಲ ಸ್ತ್ರೀಯರಲ್ಲೂ ‘ಅಂಬೂತಾಯಿ’ಯನ್ನೇ ಕಂಡಂತಹ ಮಾತೃಪ್ರೇಮಿ!
ಜೀವನವೇ ದೇವತೆ, ತ್ರಿಪದಿಯಲ್ಲಿ ಹೊರಹೊಮ್ಮಿದ ಗರತಿಯ ಹಾಡುಗಳಲ್ಲಿನ ಹೆಣ್ಣುಮಕ್ಕಳು ನಮ್ಮತಾಯಿ-ತಂಗಿಯರು, ಅಮ್ಮ-ಅಕ್ಕಂದಿರು, ಅವರದೇ ನಿಜವಾದ ಕಾವ್ಯ ಉಳಿದದ್ದೆಲ್ಲ ಕಾವ್ಯದ ಛಾಯೆ ಎಂದು ಹೆಣ್ತನವನ್ನು ಗೌರವಿಸುತ್ತಿದ್ದಂತಹ ಕವಿ. ಕಾವ್ಯವು ‘ಕಾಂತಾ ಸಮ್ಮಿತೆ’ ಎಂದರೆ ಕಾಂತೆಯರ ಮಾತಿನಂತಿರುವುದೇ ಕಾವ್ಯವಾದರೆ ಕಾಂತೆಯರ ಮಾತುಗಳೇ ಕಾವ್ಯದ ಮಾತೆಯಲ್ಲವೇ? ಎನ್ನುತ್ತಿದ್ದಂತಹ ಗೌರವಾನ್ವಿತ ವ್ಯಕ್ತಿತ್ವ. ವೇದ-ಶಾಸ್ತ್ರಗಳಿಗೆ ಬಗ್ಗದವರು ಕಾಂತೆಯರ ಮಾತಿಗೆ ಬಗ್ಗುತ್ತಾರೆ ಎಂದಾದಲ್ಲಿ ವೇದ-ಶಾಸ್ತ್ರಗಳ ತಿರುಳು ಕಾವ್ಯಮಾತೆಯ ಅವತಾರ ಎಂದು ಸ್ತ್ರೀಯರ ಸ್ಥಾನಕ್ಕೆ ‘ಮಾನ’ ದೊರಕಿಸಿ ಕೊಟ್ಟಂತಹ ವರಕವಿ (ಇಲ್ಲಿ ‘ಕಾಂತೆ’ ಎಂದರೆ ‘ಹೆಂಡತಿ’ ಎಂದು ಸಂಕುಚಿತ ಅರ್ಥಮಾಡದೆ ‘ಸ್ತ್ರೀ’ ಎಂಬ ವಿಶಾಲ ಅರ್ಥದಲ್ಲಿ ತಿಳಿಯಬೇಕು).
‘ಕೋಪವ್ಯಾಕಣ್ಣಯ್ಯ ಕೊಳ್ಳೊ ಕಾಲಿಗೆ ನೀರ|
ಬಾಯತಂಬುಲವ ಉಗುಳಣ್ಣ|
ನೀ ಬರುವದಾರಿಯ ನೋಡಿ ಬಡವಾದೆ||
ಎಂದು ತಂಗಿ ಅಣ್ಣನಿಗೆ ಹೇಳುವ ಮಾತುಗಳು.
ಸರದಾರ ಬರುವಾಗ ಸುರಿದಾವ ಮಲ್ಲೀಗಿ|
ದೊರೆ ನನ್ನ ತಮ್ಮ ಬರುವಾಗ|
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ|
-ಎಂದುಅಕ್ಕ – ತಮ್ಮನ ಬಗ್ಗೆ ಹೆಮ್ಮೆಯಿಂದ ಹೇಳುವ ಮಾತುಗಳು.
ತಾಯಿ ಕಾಣುದ ಜೀವತಾವೂರಿ ಬಾವೂರಿ|
ಭಾಳ ಬಿಸಿಲಾನ ಅವರೀಯ| ಹೂವ್ಹಾಂಗ|
ಬಾಡತೀನಿ ತಾಯಿ ಕರೆದೊಯ್ಯ||
-ಎಂದು ಮಗಳು -ತಾಯಿಗೆ ಅವಲತ್ತುಕೊಳ್ಳುವ ಮಾತುಗಳು.
ಅಚ್ಚ ಮಲ್ಲಿಗೆ ಹೂವ ಮುಚ್ಚಿ ಮಾರುವಜಾಣ|
ನಾ ಕೊಳ್ಳುವೆನಿದರ ಬೆಲೆ ಹೇಳೋ?ತಂಗೀಗೆ|
ಸುರುಳಿ ಗೂದಲದ ಸುಗುಣೀಗೆ||
-ಎಂದು ಅಕ್ಕನು -ತಂಗಿಯ ನಲ್ಲನಿಗೆ ಹೇಳುವ ಕೀಟಲೆಯ ಮಾತುಗಳು.
ಇಲ್ಲಿ ಎಷ್ಟು ಕಾಂತಿಯಿದೆ, ಕಾಂತತೆಯಿದೆ ಆದ್ದರಿಂದ ನಿಜವಾಗಿಯೂ ಹೆಣ್ಣು ಒಬ್ಬ ಆದಿ ಮಾಯೆಯೇ ಆಗಿ ತಾಯಿ-ತಂಗಿ-ಅಕ್ಕ-ಹೆಂಡತಿ-ಮಗಳು ಇಲ್ಲವೂ ಆಗುತ್ತಾಳೆ. ಸ್ತ್ರೀಯರ ದುಃಖ ಸಹಿಷ್ಣುತೆ ವಜ್ರಕುಸುಮ (ಅಸಾಧಾರಣೋಕ್ತಿ) ಇಂತಹ ಹತ್ತು ಹಲವಾರು ಗುಣಗಳುಳ್ಳ ಸ್ತ್ರೀ ಸರಸ್ವತೀ ಸ್ವರೂಪ, ಇಂತಹ ಸರಸ್ವತಿ ಇಲ್ಲದ ಸಾರಸ್ವತ ಲೋಕವುಂಟೇ? ಎನ್ನುವಂತಹ ಮಾತುಗಳಲ್ಲಿ ನಮ್ಮ ವರಕವಿಯವರಿಗೆ ಹೆಣ್ಣಿನ ಬಗ್ಗೆ ಇದ್ದಂತಹಅಪಾರ ಗೌರವಾದರಗಳು ಎದ್ದುಕಾಣುತ್ತವೆ.
ಇಂತಹ ಗೌರವಾದರಗಳನ್ನು ಸ್ತ್ರೀಯರ ಬಗ್ಗೆ ಹೊಂದಿದ್ದಂತಹ ವರಕವಿಯು ಹೆಣ್ಣುಮಕ್ಕಳಿಗೆ ಹೇಳುವ ಹಿತನುಡಿಯ ಜೊತೆಗೆ ತಮ್ಮ ಮನಸ್ಸಿನ ಅಪೇಕ್ಷೆಯನ್ನು ಹೊರಹಾಕುತ್ತಾರೆ ”ಬಾಯಿಗೆ ಸಿಕ್ಕ ಸಕ್ಕರೆ ಮಿಠಾಯಿಯನ್ನು ಬೇಕು-ಬೇಕಾದಂತೆ ಹೊರಳಿಸಿ ತಿನ್ನುವ ಹಾಗೆ ಹೆಂಗಳೆಯರು ಬೀಸುವಾಗ, ಕುಟ್ಟುವಾಗ, ಲಾಲಿ ಹಾಡುವಾಗ, ನೀರು ಸೇದುವಾಗ, ದೇವರ ಪೂಜೆ ಮಾಡುವಾಗ, ಕಸಗುಡಿಸುವಾಗ – ಹೀಗೆ ಮನೆವಾರ್ತೆ ಮಾಡುವಾಗ ಗುನುಗುವ ಮಾತೇ ಜಾನಪದವಾಗಿ ಬಂದಂತಹ ಹಾಡು ಕನ್ನಡದ ಹಣ್ಣ ತಿರುಳಿನಲಿ ಸಕ್ಕರೆಯ ಹರಳುಗಳು, ಇವು ಹೆಂಗಳೆಯರ ರಸಿಕತೆ, ಜಾಣ್ಮೆ ಹಾಗೂ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಆದರೆ ನನ್ನೆದೆಯ ಒಡಲಾಳದಲ್ಲಿ ಒಂದು ಕೊರಗಿದೆ ಅದೇನೆಂದರೆ ಯಾರಿಂದ ಇವು ಬಂದವೋ ಆ ಹೆಣ್ಣುಮಕ್ಕಳಲ್ಲಿ ಇಂದು ಹಾಡು ಹಾಡುವ ವಾಡಿಕೆ ಕಡಿಮೆಯಾಗುತ್ತಿದೆ, ಹಾಗಾಗಬಾರದು, ಹೆಣ್ಣು ಮಕ್ಕಳ ಹಾಡನ್ನುಅವರ ಕೊರಳ ಧ್ವನಿಯಿಂದ ಕೇಳುವುದೇ ಒಂದು ಸೊಗಸು, ಅದೊಂದು ಜೀವನದಾಯಕ ಶಕ್ತಿ, ನವನಾಗರೀಕತೆ ಹಾಗೂ ನೂತನ ಶಿಕ್ಷಣ ಬಂದು ಹಳೇ ಸಂಪ್ರದಾಯವನ್ನೇ ನುಂಗುತ್ತಿವೆ, ಹಾಗಾಗಬಾರದು ಹೆಂಗಳೆಯರ ಕನ್ನಡ-ಕವನ” ಇಂತಹ ಅವರ ಕಳಕಳಿಯ ನುಡಿಗಳಲ್ಲಿ ಅವರ ‘ಅಂಬಾ ಪ್ರೇಮ’ (ಇಲ್ಲಿ ಅಂಬಾ-ತಾಯಿ ‘ಸ್ತ್ರೀ’ ಎಂಬ ಅರ್ಥ) ಕನ್ನಡನಾಡಿನ ಎಲ್ಲಾ ಮಾತೆಯರಿಗೆ ಹೇಳಿದ ಹಿತನುಡಿಗಳಾಗಿವೆ.
ವರಕವಿಯವರ ಹೃದಯದ ಮಾತುಗಳನ್ನು ಓದುವ ತಾಯಂದಿರು-ಅಕ್ಕ-ತಂಗಿಯರು ಇಂತಹ ಹಳ್ಳಿಯ ಹಾಡನ್ನು ಇಂಗಗೊಡಿಸದೇ ಹನಿ-ಹನಿ ಕೂಡಿ ಹಳ್ಳ, ಹಳ್ಳ-ಹಳ್ಳ ಕೂಡಿ ಹೊಳೆ, ಹೊಳೆ-ಹೊಳೆ ಕೂಡಿ ಸಮುದ್ರ ಆಗುವಂತೆ ಕನ್ನಡದ ಕಾವ್ಯ ಸಮುದ್ರವನ್ನು ಕಟ್ಟುತ್ತಾ, ನಮ್ಮ ಮುಂದಿನ ಪೀಳಿಗೆಗೆ ಇದರ ಸವಿ ಸಿಗುವಂತೆ ಮಾಡುವ ಮೂಲಕ ವರಕವಿಯ ಮಾತೃ ಹೃದಯಕ್ಕೆ ಗೌರವಿಸುತ್ತಾ, ನಮ್ಮೂರ ಮಮತಾಮಯಿಗೆ ಶಿರಬಾಗಿ ನಮಿಸೋಣ.
‘ಕನ್ನಡದ ಕುಲ-ತಿಲಕ ಅಂಬಿಕಾತನಯ ನಿನ್ನ ಚರಣಗಳಿಗಿದು ನನ್ನ ನುಡಿ-ನಮನ’.
–ಡಾ. ಸುಧಾ ಹೆಚ್.ಎಸ್., ಧಾರವಾಡ.
ಬೇಂದ್ರೆ ಯ ಮಾತೃಪ್ರೇಮ ಸ್ರೀ ಬಗ್ಗೆ ಇರುವ ಗೌರವ ಜಾನಪದ ಸೊಗಡಿನ ಹಿರಿಮೆಯನ್ನು ಅನಾವರಣಗೊಳಿಸಿರುವ ಲೇಖನ ಚೊಕ್ಕ ವಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ.
ವರಕವಿ ಬೇಂದ್ರೆ ಯವರ ಕುರಿತಾದ ಬರಹ ಬಹಳ ಚೆನ್ನಾಗಿದೆ.
ಬಾ ಬಾರೋ… ಬಾರೋ ಬಾರೋ
ಬಾರೋ ಸಾಧನ ಕೇರಿಗೆ…
ಸುಧಾ….
ನಮ್ಮ ಬೇಂದ್ರೆ ಅಜ್ಜಾ ನಗಲಿಕ್ಕೆ ಹತ್ಯಾನ
ಬೇಂದ್ರೆಯವರ ಮಾತೃಪ್ರೇಮ ಗೌರವ ಕುರಿತಾದ ಲೇಖನ ಚೆನ್ನಾಗಿದೆ.
ಸೊಗಸಾದ ಬರಹ. ಕೆಲವು ವರ್ಷಗಳ ಮೊದಲು ‘ಸಾಧನಕೇರಿ’ಗೆ ಭೇಟಿ ಕೊಟ್ಟಿದ್ದು ನೆನಪಾಯಿತು. ಅಂಬಿಕಾತನಯದತ್ತರಿಗೆ ನಮನಗಳು.
ಹಿರಿಕವಿಗಳ ಕಾವ್ಯನಾಮದ ಹಿನ್ನೆಲೆ, ಅವರ ಮಾತೃಪ್ರೇಮ ಎಲ್ಲವನ್ನೂ ಪರಿಚಯಿಸಿದ ಸೊಗಸಾದ ಲೇಖನ.
ತುಂಬಾ ಚೆನ್ನಾಗಿ barediddirip9845565238
ತುಂಬಾ ಚೆನ್ನಾಗಿದೆ