ಅಮೆರಿಕಾ ಪ್ರವಾಸದಲ್ಲಿ ನಡೆದ ಅವಾಂತರ
2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್‌ನಲ್ಲಿ ನಡೆಯಲಿದ್ದ ಅಂತರ್ ರಾಷ್ಟ್ರೀಯ ರಸಾಯನ ಶಾಸ್ತ್ರದ ಸಮ್ಮೇಳನದಲ್ಲಿ ಭಾಗವಹಿಸುವವರಿದ್ದರು. ನಾವೂ ಅವರ ಜೊತೆ ಅಮೆರಿಕಾ ನೋಡಲು ಹೊರಟೆವು. ಅಮೆರಿಕಾ ಎಂದಾಕ್ಷಣ ನನ್ನ ಕಣ್ಣ ಮುಂದೆ ನಲಿದಾಡಿದ್ದು ನಯಾಗರಾ ಜಲಪಾತ.
ನಾವು ಅಮೆರಿಕಾದಲ್ಲಿ ನೆಲಸಿದ್ದ ಬಂಧುಗಳ ಮನೆಗೆ ಲಗ್ಗೆಯಿಟ್ಟೆವು. ಮಿಚಿಗನ್‌ನ ಆನಾರ್ಬರ್‌ನಲ್ಲಿದ್ದ ನನ್ನ ತಂಗಿ ಉಮ ನಮ್ಮನ್ನು ನಯಾಗರಾಕ್ಕೆ ಕರೆದೊಯ್ದಳು. ದಾರಿಯಲ್ಲಿ ಹಾಕಿದ್ದ ಒಂದು ಫಲಕ ಹೀಗಿತ್ತು –‘ಇಲ್ಲಿರುವ ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳು ದಾಳಿ ಮಾಡಬಹುದು. ನಿಮ್ಮ ವಾಹನದ ಕಿಡಕಿಗಳನ್ನು ತೆರೆಯಬೇಡಿ. ಯಾರಾದರೂ ಲಿಫ್ಟ್ ಕೇಳಿದರೆ ಕಾರು ನಿಲ್ಲಿಸಬೇಡಿ’. ಅಬ್ಬಾ, ಅಮೆರಿಕದಂತಹ ಮುಂದುವರೆದ ರಾಷ್ಟ್ರದಲ್ಲೂ ಇಂತಹ ಫಲಕಗಳು ಎಂದು ಗಾಬರಿಯಾಯಿತು. ದಾರಿಯಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಜಿ.ಪಿ.ಎಸ್. ನಮ್ಮನ್ನು ಕೆನಡಾ ಕಡೆ ಕರೆದೊಯ್ಯುತ್ತಿತ್ತು. ಕೆನಡಾ ಬದಿಯಿಂದ ನಯಾಗರಾ ಹೆಚ್ಚು ಸುಂದರವಾಗಿ ಕಾಣುವುದರಿಂದ, ಸಾಮಾನ್ಯವಾಗಿ ಪ್ರವಾಸಿಗರು ಕೆನಡಾ ಬದಿಯಿಂದಲೇ ನೋಡಲು ಬಯಸುತ್ತಾರೆ. ಆದರೆ ನಮ್ಮ ಬಳಿ ಕೆನಡಾ ವೀಸಾ ಇರಲಿಲ್ಲ. ನಾವು ಅಮೆರಿಕದಿಂದಲೇ ಜಲಪಾತವನ್ನು ನೋಡಬೇಕಿತ್ತು. ಅಂತೂ ಇಂತೂ ಸ್ವಲ್ಪ ತಡವಾಗಿ ನಯಾಗರಾ ತಲುಪಿದೆವು. ನನ್ನ ತಂಗಿ ಲಾಡ್ಜ್ ಒಳಗೆ ಹೋಗಿ, ಮೊದಲೇ ಬುಕ್ ಮಾಡಿದ್ದ ರೂಮಿನ ಕೀ ತೆಗೆದುಕೊಂಡು ಬಂದಳು.
ಉಮ ಮಂಕಾಗಿದ್ದಳು. ಅವಳು ಗಡಿಬಿಡಿಯಲ್ಲಿ, ತನ್ನ ಲೆಕ್ಕ ಮರೆತು, ಕೇವಲ ನಾಲ್ಕು ಜನರಿಗೆಂದು ಕೊಠಡಿಯನ್ನು ಕಾದಿರಿಸಿದ್ದಳು. (ಹನ್ನೆರಡು ಜನ ಬುದ್ಧಿವಂತರ ಕಥೆ ಕೇಳಿದ್ದೀರಲ್ಲ) ಇನ್ನೊಂದು ರೂಂ ಮಾಡಲು, ಆ ಲಾಡ್ಜಿನಲ್ಲಿ ಕೊಠಡಿಗಳು ಖಾಲಿ ಇರಲಿಲ್ಲ. ಆ ಲಾಡ್ಜ್ ಒಂದು ರೆಸಾರ್‍ಟ್‌ನಂತೆ ಇತ್ತು. ಮಧ್ಯೆ ಆಫೀಸು, ಸುತ್ತಲೂ ಕೊಠಡಿಗಳು. ನಮ್ಮ ರೂಂ ಆಫೀಸಿನ ಹಿಂಬದಿಯಲ್ಲಿತ್ತು. ಗಂಟೆ ರಾತ್ರಿ ಎಂಟಾಗಿತ್ತು. ನಾವು ಲಗೇಜ್ ಹೊತ್ತು ರೂಮಿನೊಳಗೆ ಹೋದೆವು. ಸ್ವಲ್ಪ ಹೊತ್ತಿನಲ್ಲಿ ಬಾಗಿಲು ಬಡಿದ ಸದ್ದು, ಲಾಡ್ಜ್ ಸಿಬ್ಬಂದಿಗೆ ನಾವು ಐದು ಜನ ಇರುವುದು ಗೊತ್ತಾಗುವುದು ಬೇಡ ಎಂದು ನಾನು ಧಡಬಡಿಸಿ ವಾಷ್ ರೂಮಿನೊಳಗೆ ನುಗ್ಗಿದೆ. ರೂಮಿಗೆ ಬಂದವನು ನೀರಿನ ಬಾಟಲಿಯಿಟ್ಟು ಹೋದ. ಈಗ ಸ್ವಲ್ಪ ಧೈರ್ಯ ಬಂದಿತ್ತು, ಯಾರಾದರೂ ಬಂದರೆ ಒಬ್ಬರು ವಾಷ್ ರೂಮಿನೊಳಗೆ ಹೋಗುವುದು ಎಂದು ನಿರ್ಧರಿಸಿದೆವು. ಮನೆಯಿಂದ ತಂದಿದ್ದ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತೆವು. ಮತ್ತೊಮ್ಮೆ ಬಾಗಿಲು ಬಡಿದ ಸದ್ದು. ಒಬ್ಬರು ವಾಶ್ ರೂಮಿನೊಳಗೆ, ಆದರೆ ಈ ಬಾರಿ ಬಂದವರು ನನ್ನ ಗೆಳತಿ ಲತಾಳ ಸ್ನೇಹಿತರು. ಅವರ ಮುಂದೆ ರೂಮಾಯಣವನ್ನು ಹೇಳಿದಾಗ ಅವರು ಹೊಟ್ಟೆ ತುಂಬಾ ನಕ್ಕರು.
ನಾವು ಇನ್ನೂ ಒಂದು ದಿನ ಅಲ್ಲಿ ಉಳಿಯಬೇಕಾಗಿತ್ತು. ಹೀಗೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಲೇ ಕಳೆದೆವು. ಯಾರಾದರೂ ನಮ್ಮ ಕಡೆ ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತಿತ್ತು. ಎಂದೂ ಹೀಗೆ ಯಾರಿಗೂ ವಂಚನೆ, ಕಳ್ಳತನ ಮಾಡಿದವರಲ್ಲ. ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದವರು. ವಿಧ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಬೋಧಿಸಿದವರು. ಆದರೆ ಪರಿಸ್ಥಿತಿ ಹಾಗಿತ್ತು. ನಾವು ಅಸಹಾಯಕರಾಗಿದ್ದೆವು. ಆದರೆ ಈಗಲೂ ಈ ಘಟನೆಯನ್ನು ನೆನಸಿಕೊಂಡಾಗಲೆಲ್ಲ ಹೊಟ್ಟೆ ಹುಣ್ಣಾಗುವ ಹಾಗೆ ನಗುತ್ತೇವೆ. ನೀವೇನಂತೀರಾ?
–ಡಾ.ಗಾಯತ್ರಿದೇವಿ ಸಜ್ಜನ್
ಅಮೇರಿಕಾದಲ್ಲಿ ನಿಮ್ಮ ರೂಮಾಯಣದ ಅನುಭವ ದ ತುಣುಕು ಕೇಳಿದ ಓದಿದ ವರಿಗೆ ಒಂದು ಎಚ್ಚರಿಕೆಯ ಸಂದೇಶ ಸಾರುವ ನಿಟ್ಟಿನಲ್ಲಿ ಇದೆ ಧನ್ಯವಾದಗಳು ಮೇಡಂ.
ತುಂಬಾ ಚೆನ್ನಾಗಿದೆ ರೂಮಾಯಣ. ಪರಿಸ್ಥಿತಿ ಎಲ್ಲಾ ರೀತಿಯ ಹೊಂದಾಣಿಕೆಯನ್ನೂ ಕಲಿಸುತ್ತದೆ.
Madam vry nce Narration .Madam I was your student in Sahyadi College during 1983 to 1985. Yr way of teaching English novel is awesome. Particularly Lord of de Flies. Ralph, Simon, Piggy characters vry nce Madam
ಅಮೆರಿಕದ ರೂಮಾಯಣದ ರಾಮಾಯಣ ಅಂತೂ ಒಳ್ಳೆ ಪಾಠವನ್ನೇ ಕಲಿಸಿಬಿದ್ತು…ಅಲ್ವಾ ಮೇಡಂ? ಸೊಗಸಾದ ನಿರೂಪಣೆ…ಧನ್ಯವಾದಗಳು ಗಾಯತ್ರಿ ಮೇಡಂ.
ನಿಮ್ಮ ಪರದಾಟವನ್ನು ಊಹಿಸಿ ನಾವೂ ನಕ್ಕು ಬಿಡುತ್ತೇವೆ. ನವಿರಾದ ನಿರೂಪಣೆಗಾಗಿ ಅಭಿನಂದನೆಗಳು.