ಶ್ರೀಲಂಕಾ ಪ್ರವಾಸ: ರಾವಣನ ನಾಡಿನಲ್ಲಿ ಸೀತೆಯರು-2
(ಕಳೆದ ಸಂಚಿಕೆಯಿಂದ ಮುಂದುವರಿದುದು)
ಶ್ರೀಲಂಕಾ ದೀರ್ಘಕಾಲ ಆಂಗ್ಲರ ಆಳ್ವಿಕೆಯಲ್ಲಿದ್ದುದರಿಂದ ಅಲ್ಲಿನ ಮನೋಹರ ಪ್ರಕೃತಿ ತಾಣಗಳಿಗೆಲ್ಲಾ ಬಿಳಿಯ ದೊರೆಗಳ ಹೆಸರೇ ಇದೆ. Arthur’s View Point, Gregory Lake, Victoria park, St. Clair Water Falls, Devon Falls ಇತ್ಯಾದಿ. ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಇನ್ನೂ ಅದೇ ಹೆಸರಿನಲ್ಲಿ ಕರೆಯಲ್ಪಡುತ್ತಿವೆ. ಅದನ್ನು ಬದಲಾಯಿಸಿ, ಶ್ರೀಲಂಕಾದ ಮಹಾನ್ ವ್ಯಕ್ತಿಗಳ ಹೆಸರಿಟ್ಟಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು ಎನ್ನಿಸಿತು. ಇಲ್ಲಿನ ಪ್ರಕೃತಿ ಸಂಪತ್ತು ಅಪಾರ. ಹಚ್ಚ ಹಸಿರು ಹೊದ್ದು ನಿಂತ ಬೆಟ್ಟ ಗುಡ್ಡಗಳು, ರಮಣೀಯ ಜಲಪಾತಗಳು, ಹಾಲ್ನೊರೆಯಂತೆ ಸಾಗುವ ನದಿಗಳು, ವನ್ಯಜೇವಿಗಳು, ತಲೆದೂಗುವ ಅಡಿಕೆ, ತೆಂಗು, ಬಾಳೆ ಹಾಗೂ ಕಾಫಿ-ಟೀ ಎಸ್ಟೇಟುಗಳು, ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಕಡಲ ತೀರಗಳು, ಪ್ರವಾಸಿಗರಿಗೆ ಹಬ್ಬ. ಒಂದು ಕ್ಷಣ ಕೇರಳದಲ್ಲಿ ಇದ್ದೇವೇನೋ ಎಂಬ ಭಾವ ಮೂಡಿ ಮರೆಯಾಯಿತು.
ಅಲ್ಲಿಂದ ‘ಸೀತಾ ಎಲಿಯಾ’ ಎಂಬ ಊರಿಗೆ ಹೋದೆವು. ಅಲ್ಲಿ ‘ಸೀತಾ ಅಮ್ಮನ್’ ದೇಗುಲ ಇದೆ. ಲಂಕಾಧಿಪತಿ ರಾವಣನು ಪರಮಸಾಧ್ವಿಯಾದ ಸೀತೆಯನ್ನು ಅಪಹರಣ ಮಾಡಿ ಬಂಧನದಲ್ಲಿರಿಸಿದ್ದ ‘ಅಶೋಕವನ’ ಇದು. ರಸ್ತೆಯ ಬದಿಯಲ್ಲಿರುವ ಪುಟ್ಟ ದೇವಸ್ಥಾನ, ಬದಿಯಲ್ಲಿ ಹರಿಯುತ್ತಿರುವ ಹಳ್ಳ, ಹಿಂಬದಿಯಲ್ಲಿ ಬಂಡೆಯೊಂದರೆ ಮೇಲೆ ಶೋಕಗ್ರಸ್ಥಳಾಗಿ ಕುಳಿತಿರುವ ಸೀತೆಯ ಮುಂದೆ ಬಾಗಿ ನಿಂತು ಮುದ್ರೆಯುಂಗುರ ನೀಡುತ್ತಿರುವ ಹನುಮನ ಮೂರ್ತಿಗಳು ಇವೆ. ಬಂಡೆಯ ಮೇಲೆ ದೊಡ್ಡ ಗಾತ್ರದ ವರ್ತುಲಾಕಾರದ ಹೆಜ್ಜೆಯ ಗುರುತುಗಳೂ ಇವೆ. ಅವು ಹನುಮನ ಹೆಜ್ಜೆಯ ಗುರುತು ಎಂದು ಪ್ರತೀತಿ. ಪ್ರವಾಸೋದ್ಯಮ ಇಲಾಖೆಯವರು ಈ ದೇಗುಲಕ್ಕೆ ಯಾವುದೇ ಪ್ರಾಶಸ್ತ್ಯ ನೀಡಿದ ಕುರುಹು ಕಾಣುವುದಿಲ್ಲ . ಕಾರಣ ಊಹಿಸುವುದು ಸುಲಭ ಸಾಧ್ಯ. ಇದು ಲಂಕೆಗೆ ಮಸಿ ಬಳಿಯುವಂತಹ ಪ್ರಸಂಗ ಅಲ್ಲವೇ?. . . ರಾವಣನ ದೇವಸ್ಥಾನ ನಿರ್ಮಿಸಿ ಪೂಜಿಸುವವರು ಇಂತಹ ದುರ್ಘಟನೆಗೆ ಬೇರೆಯೇ ತಿರುವು ಕೊಡುತ್ತಾರೆ.
ಹೆಣ್ಣಿನ ಅಪಹರಣ, ಅತ್ಯಾಚಾರದ ಘಟನೆಗಳು ಹಿಂದೆಯೂ, ಇಂದಿಗೂ, ಎಂದೆಂದಿಗೂ ನಡೆಯುತ್ತಲೇ ಇವೆಯಲ್ಲವೇ? ಅಂದು ರಾಮಾಯಣದಲ್ಲಿ ಸೀತಾಪಹರಣ, ನಂತರ ಮಹಾಭಾgತದಲ್ಲಿ ದ್ರೌಪದಿಯ ಮಾನಭಂಗ, ಈಗಲೂ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರಕ್ಕೆ ಕೊನೆ ಹಾಡುವವರು ಯಾರು? ಡಾ|| ರಾಧಾಕೃಷ್ಣನ್‌ರವರ ಮಾತು ಇಲ್ಲಿ ಪ್ರಸ್ತುತ ‘ಮಾನವ ಹಕ್ಕಿಹಂತೆ ಹಾರಲು ಕಲಿತ, ಮೀನಿನಂತೆ ಈಜಲು ಕಲಿತ ಆದರೆ ಮಾನವನಂತೆ ಬದುಕಲು ಕಲಿಯಲೇ ಇಲ್ಲ’.
ಒಂದರೆಡು ದಿನದಲ್ಲಿ ‘ನಾದನ್’ (ನಮ್ಮ ಡ್ರೈವರ್) ಮನೆಯವನಂತೆ ಆಗಿಹೋಗಿದ್ದ. ಪ್ರತಿನಿತ್ಯ ಆವನು ನಾವು ಉಳಿದುಕೊಳ್ಳುವ ಹೋಟೆಲ್ ರೂಮಿನ ತನಕ ಲಗೇಜ್ ತಂದುಕೊಟ್ಟು, ‘ವೈ ಫೈ ಪಾಸ್ ವರ್ಡ್’ನೀಡಿ, ಸಸ್ಯಾಹಾರ ಭೋಜನದ ವ್ಯವಸ್ಥೆ ಮಾಡಿ (ಅಲ್ಲಿನ ಹೋಟೆಲ್‌ಗಳಲ್ಲಿ ಮಾಂಸಾಹಾರ ಹೆಚ್ಚು) ನಿಮಗೆ ಏನಾದರೂ ಬೇಕಾದಲ್ಲಿ ಫೋನ್ ಮಾಡಿ, ತಕ್ಷಣ ಬರುವೆ ಎಂದು ಆಶ್ವಾಸನೆ ನೀಡುತ್ತಿದ್ದ. ನನ್ನ ಗೆಳತಿ ಕಂಠಾಭರಣ, ಸೊಂಟಾಭರಣ, ಜಾನು ಆಭರಣ, ನೇತ್ರಾಭರಣ ಗಳಿಂದ ಸುಶೋಭಿತಳು. ಅರ್ಥ ಆಗಲಿಲ್ಲವೇ. . . ಕುತ್ತಿಗೆ ಬಳಿ ಕಾಲರ್ (ಸ್ಪಾಂಡಿಲೈಟಿಸ್) ಸೊಂಟಾಭರಣ (ಸೈಯಾಟಿಕಾ), ಮಂಡಿಗೆ ಬೆಲ್ಟ್ (ಮಂಡಿ ನೋವು), ಕನ್ನಡಕ . . ನಡೆಯಲು ಟಾರ್ ರೋಡ್ ಇದ್ದರೆ ಸರಿ, ಇಲ್ಲವಾದರ ಗಜಗಮನೆ, ಆದರೂ ಪ್ರವಾಸ ಮಾಡಲು ಎಲ್ಲಿಲ್ಲದ ಉತ್ಸಾಹ. ಮೊದಲ ದಿನ ನಾನು ಅವರ ಕೈಹಿಡಿದು ನಡೆಸುವಾಗ ನಾದನ್ ಆ ಜವಾಬ್ದಾರಿಯನ್ನು ಪ್ರೀತಿಯಿಂದ ವಹಿಸಿಕೊಂಡನು. ಪ್ರವಾಸ ಮುಗಿಯವವರೆಗೂ ಅವರಿಗೆ ಊರುಗೋಲಿನಂತೆ ಇರುತ್ತಿದ್ದ. ನಮ್ಮ ಪಯಣದ ಮಾರ್ಗದಲ್ಲೇ ಇದ್ದ ಅವನ ಮನೆಗೆ ಪ್ರೀತಿಯಿಂದ ಒತ್ತಾಯಿಸಿ ಕರೆದೊಯ್ದ. ಅವನ ಹೆಂಡತಿ ಮಾಡಿದ್ದ ಇಡ್ಲಿ-ಸಾಂಬಾರನ್ನು ಚಪ್ಪರಿಸಿ ತಿಂದೆವು. ನಾವು ತೆಗೆದುಕೊಂಡು ಹೋಗಿದ್ದ ಚಕ್ಕುಲಿ, ಉಂಡೆಯನ್ನು ಕೊಟ್ಟು ಅವನ ಮಕ್ಕಳಿಗೆ ಉಡುಗೊರೆಯನ್ನು ನೀಡಿ ನಮ್ಮ ಮಮತೆಯ ಬಲೆಗೆ ಸಿಕ್ಕಿಸಿದೆವು. ಅವನ ಮುತ್ತಜ್ಜ ಆಂಗ್ಲರ ಕಾಲದಲ್ಲಿ ತಮಿಳುನಾಡಿನಿಂದ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ವಲಸೆ ಬಂದಿದ್ದರಂತೆ, ಅವನ ಕುಟುಂಬದವರನ್ನೂ ಕರೆದುಕೊಂಡು ‘ಹನುಮಾನ್’ ದೇವಾಲಯಕ್ಕೆ ಹೋದೆವು.
ಬೆಟ್ಟದ ನೆತ್ತಿಯ ಮೇಲಿರುವ ಈ ಹನುಮಾನ್ ದೇವಾಲಯ ಸುಮಾರು ಇಪ್ಪತೈದು ಅಡಿ ಎತ್ತರವಿದೆ. ಪೂಜಾರಿಯು ಮೇಲೆ ಕೆಳಗೆ ಚಲಿಸುವ ಏಣಿಯ ಮೇಲೆ ನಿಂತು ದೀಪಾರತಿ ಮಾಡುವುದನ್ನು ನೋಡಲು ಎರಡು ಕಣ್ಣು ಸಾಲದು. ಮಂಗಳಾರತಿ ನಂತರ ನೀಡಿದ ‘ಪೊಂಗಲ್’ ಪ್ರಸಾದ ಅತ್ಯಂತ ರುಚಿಯಾಗಿತ್ತು. ದೇಗುಲದ ಸುತ್ತಲೂ ಕಾಣುವ ತೋಟ, ಹೊಲಗದ್ದೆ, ಕೆರೆ, ಹಳ್ಳ ಅತ್ಯಂತ ರಮಣೀಯವಾದ ದೃಶ್ಯ. ಇಲ್ಲಿನ ಸ್ಥಳ ಪುರಾಣ ಹೀಗಿದೆ – ರಾಮನ ಅಣತಿಯಂತೆ ಸೀತೆಯನ್ನು ಅರಸಿ ಬಂದ ರಾಮಭಂಟ ಹನುಮಂತ – ರಾಮೇಶ್ವರದ ಬಳಿ ಇರುವ ಧನುಷ್ಕೋಟಿಯಿಂದ ಒಂದೇ ನೆಗೆತದಲ್ಲಿ ಹಾರಿ ಹೆಜ್ಜೆ ಇಟ್ಟ ಸ್ಥಳ ಇದು. ಈ ವಿಶೇಷ ಘಟನೆಯ ನೆನಪಿಗಾಗಿ ಚಿನ್ಮಯ ಸ್ವಾಮಿಗಳು ಹನುಮಾನ್ ದೇಗುಲವನ್ನು ನಿರ್ಮಿಸಿದ್ದಾರೆ.
ಸಮೀಪದಲ್ಲಿರು ‘ಹಕ್‌ಗೊಳ ಉದ್ಯಾನವನ’ ನೋಡಿದಾಗ ಬೆಂಗಳೂರಿನ ಲಾಲ್‌ಬಾಗ್ ನೆನಪಾಯಿತು. ಎಲ್ಲ ಬಗೆಯ ಸಸ್ಯಗಳೂ ಕಂಗೊಳಿಸುವ ಸುಂದರವಾದ ‘ಸಸ್ಯಕಾಶಿ’ ಇದು. ಮುಂದಿನ ಪ್ರವಾಸೀ ತಾಣ ‘ಮಡುಗಂಗಾ ನದಿ’ಯ ಮಧ್ಯೆ ಇರುವ ನಡುಗಡ್ಡೆಗಳು. ಇಲ್ಲಿಯೂ ಔಷಧೀಯ ಸಸ್ಯಗಳನ್ನು ಹೇರಳವಾಗಿ ಕಾಣಬಹುದು. ಇಲ್ಲಿನ ದಾಲ್ಚಿನ್ನಿ ಹಾಗೂ ಅದರ ಎಣ್ಣೆ ಬಹಳ ಪ್ರಖ್ಯಾತವಾದುದು. ನದಿ ಸಮುದ್ರ ಸೇರುವ ಸ್ಥಳಕ್ಕೆ ದೋಣಿಯಲ್ಲಿ ಕರೆದೊಯ್ಯುತ್ತಾನೆ. ಈ ಸಂಗಮದ ವರ್ಣನೆ ಮಾಡಲು ಪದಗಳೇ ದೊರಕುತ್ತಿಲ್ಲ. ಸಂಜೆ ಅಲ್ಲಿನ ರಂಗಮಂದಿರದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ’ ನೋಡಿದೆವು- ಜಾನಪದ ನೃತ್ಯ ರೂಪಕಗಳು – ಯಕ್ಷಗಾನದ ಹಾಗೆ ಮುಖವಾಡ ಧರಿಸಿ – ರಾಮಾಯಣದ ಕಥೆ ಆಧರಿಸಿದಂತಹ ನೃತ್ಯರೂಪಕಗಳು.
‘ಗಲ್ಲೆ’ ಯಲ್ಲಿರುವ ‘ಕೊಸಗೊಡ ಆಮೆ ಬಿಡಾರ’ ನೋಡಲೇಬೇಕಾದ ಸ್ಥಳ. ಅಲ್ಲಿನ ಸ್ಥಳೀಯರು ಸಮುದ್ರ ತೀರದಲ್ಲಿ ದೊರೆಯುತ್ತಿದ್ದ ಆಮೆಯ ಮೊಟ್ಟೆಗಳನ್ನು ಹೋಟೆಲುಗಳಿಗೆ ಮಾರುತ್ತಿದ್ದರಂತೆ. ಇದರಿಂದ ಆಮೆಯ ಸಂತತಿ ಕ್ಷೀಣಿಸುತ್ತಿರುವುದನ್ನು ತಡೆಯಲು ಸರ್ಕಾರದವರು ಅದನ್ನು ಸುರಕ್ಷಿತ ವಲಯವನ್ನಾಗಿ ಘೋಷಿಸಿದ್ದಾರೆ. ಸ್ಥಳೀಯರಲ್ಲಿ ಜಾಗೃತಿ ಮೂಡಿಸಿ- ಆಮೆಯ ಮೊಟ್ಟೆಗಳನ್ನು ಮರಳಿನಲ್ಲಿ ಹುದುಗಿಸಿ ಕಾಪಾಡುತ್ತಾರೆ. ಮರಳಿನಲ್ಲಿ ಮೊಟ್ಟೆಯನ್ನುಎರಡು ಅಡಿ ಆಳದಲ್ಲಿ ಹೂತಿಟ್ಟರೆ ಗಂಡು ಆಮೆ ಜನಿಸುವುದು ಹಾಗೂ ನಾಲ್ಕು ಅಡಿ ಆಳದಲ್ಲಿ ಹೂತಿಟ್ಟರೆ ಹೆಣ್ಣು ಆಮೆ ಜನಿಸುವುದಂತೆ. ಆಮೆ ಮರಿಯ ಲಿಂಗದ ನಿರ್ಧಾರ ಆಗುವುದು ಅದರ ತಾಯಿಯ ಗರ್ಭದಲ್ಲಿ ಅಲ್ಲ – ಬದಲಾಗಿ ಆ ಮೊಟ್ಟೆಯು ಮರಿಯಾಗುವ ಕಾಲದಲ್ಲಿ ಆಗುವ ಒತ್ತಡ ಹಾಗೂ ಶಾಖದಿಂದ ಎಂದು ಪ್ರಾಣಿಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಅಲ್ಲಿನ ಕಡಲ ತೀರಗಳಲ್ಲಿ ಸೂರ್ಯಾಸ್ತ ನೋಡುತ್ತಾ ಮೌನವಾಗಿ ಕುಳಿತು ಬಿಡುತ್ತಿದ್ದೆವು. ‘ಮೇಡಂ ಕತ್ತಲಾಗುತ್ತಾ ಬಂತು, ಇನ್ನು ಹೋಗೋಣವೇ’ ಎಂದು ನಾದನ್ ಹೇಳುವವರೆಗೂ.. . . ..
‘ಡಾಮ್ರೋ ಚಹಾ ಕಾರ್ಖಾನೆ’ ಬಹುದೊಡ್ಡ ಚಹಾ ಪುಡಿ ತಯಾರಿಸುವ ಘಟಕ. ಚಹಾ ಪುಡಿಯನ್ನು ಸಂಸ್ಕರಿಸುವ ರೀತಿಯನ್ನು ನೋಡಿದೆವು-ಎಂಟು ವಿಭಿನ್ನ ರುಚಿಯೊಂದಿಗೆ, ಸುವಾಸನೆಯೊಂದಿಗೆ ತಯಾರಾಗುವ ಚಹಾ – ಇಲ್ಲಿ ಚಹಾವನ್ನು ಉಚಿತವಾಗಿ ಕುಡಿಯಲು ನೀಡುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಚಹಾ ಪುಡಿಗೆ ಅಧಿಕ ಬೇಡಿಕೆ ಇದೆ. ಅವರಲ್ಲಿ ಉತ್ಪಾದನೆ ಆಗುವ 60% ಚಹಾ ಪುಡಿಯನ್ನು ಪ್ರತಿಷ್ಠಿತ ಕಂಪನಿಗಳು ಖರೀದಿಸಿ ತಮ್ಮ ತಮ್ಮ ಲೇಬಲ್ ಅಂಟಿಸಿ ಮಾರುತ್ತಾರಂತೆ. ಕೇವಲ 40% ಮಾತ್ರ ‘ಡಾಮ್ರೋ ಚಹಾ’ ಎಂಬ ಹೆಸರಿನಿಂದ ಮಾರಲ್ಪಡುತ್ತದೆ. ಕಂಪನಿಗಳ ಜಾಹೀರಾತು ನೋಡಿ ಆಕರ್ಷಿತರಾಗಿ ಕೊಳ್ಳುವ ಗ್ರಾಹಕರು ಇಂತಹ ಒಳ ಒಪ್ಪಂದಗಳ ರಹಸ್ಯ ಅರಿಯಲೇಬೇಕು.
ಇನ್ನು ಪ್ರವಾಸದ ಕೊನೆಯ ಹಂತಕ್ಕೆ ಬಂದೆವು. ಶ್ರೀಲಂಕಾದ ದಕ್ಷಿಣದಲ್ಲಿರುವ ಕೊಲೊಂಬೋದಿಂದ ಹೊರಟು ‘ಕ್ಯಾಂಡಿ, ನುವಾರ ಎಲಿಯಾ, ಬೆಂಟೋಟ, ಗಲ್ಲೆ’ ಇವುಗಳಿಗೆ ಭೇಟಿ ನೋಡಿ ಮತ್ತೆ ಕೊಲೊಂಬೋಗೆ ಮರಳಿಬಂದೆವು. ಇಲ್ಲಿನ ‘ಗಂಗಾರಾಮಯ್ಯ ದೇವಸ್ಥಾನ’ ವಿಶೇಷವಾದ ಸ್ಥಳ. ಚಕ್ರವರ್ತಿ ಅಶೋಕನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರು ಬೌದ್ಧಧರ್ಮ ಪ್ರಚಾರಕ್ಕಾಗಿ ಸಿಂಹಳಕ್ಕೆ ಬಂದಾಗ ಬುದ್ಧನಿಗೆ ಜ್ಞಾನೋದಯವಾದ ಸ್ಥಳದಿಂದ ಬೋಧಿವೃಕ್ಷದ ರೆಂಬೆಯೊಂದನ್ನು ತಂದು ನೆಟ್ಟರು. ಅದು ಇಂದು ಬೃಹದಾಕಾರವಾಗಿ ಬೆಳೆದಿದೆ. ಆ ಬೋಧಿವೃಕ್ಷದ ಸುತ್ತಲೂ ಭವ್ಯವಾದ ಬೌದ್ಧ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿ ವೃಕ್ಷಕ್ಕೆ ನೀರೆರೆದು, ಪುಷ್ಪಗಳಿಂದ ಅಲಂಕರಿಸಿ, ಊದುಬತ್ತಿ ಹಚ್ಚಿ ಪೂಜಿಸುವರು – ಭಾರತದ ಬುದ್ಧಗಯಾದಲ್ಲಿ ಒಮ್ಮೆ ಕಾರಣಾಂತರದಿಂದ ಬೋಧಿವೃಕ್ಷ ಒಣಗಿಹೋದಾಗ ಇಲ್ಲಿನ ದೇವಾಲಯದಿಂದ ಒಂದು ರೆಂಬೆಯನ್ನು ಹೋಗಿ ನೆಟ್ಟರು ಎಂಬ ಪ್ರತೀತಿ ಇದೆ.
ಇದರ ಬಳಿಯೇ ಇರುವ ‘ಬ್ಯೆರಾ ಸರೋವರ’ ದಲ್ಲಿ ಬುದ್ಧನ ದೇವಾಲಯ ಇದೆ. ಅಲ್ಲಿ ಬುದ್ಧನ ಮಲಗಿರುವ ಮೂರ್ತಿಯೊಂದನ್ನು ಅತಿ ಸುಂದರವಾಗಿ ನಿರ್ಮಿಸಿದ್ದಾರೆ. ಭಾರತದಲ್ಲೇ ಹುಟ್ಟಿ ಬೆಳೆದ ಬೌದ್ಧ ಧರ್ಮ ಬೇರೂರದ್ದು ಇನ್ನೆಲ್ಲೋ. ಇಂತಹ ತಿರುವಿಗೆ ಇತಿಹಾಸವೇ ಉತ್ತರಿಸಬೇಕು.
ಕೊಲೊಂಬೋದಲ್ಲಿರುವ ‘ಕಡಲತೀರದ ವಸ್ತು ಸಂಗ್ರಹಾಲಯ’ ಇವರ ಮೀನುಗಾರಿಕೆಯ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತದೆ. ಅವರ ಮೀನುಗಾರಿಕೆ ಸಲಕರಣೆಗಳು, ದೋಣಿಗಳು, ಹಡಗುಗಳು – ಇವೆಲ್ಲದರ ವಿವರವಾದ ಚಿತ್ರಣ ಇಲ್ಲಿ ಕಾಣಬಹುದು. ‘ಪೆಟ್ಟಾ ತೇಲುವ ಮಾರುಕಟ್ಟೆ’ – ಇದನ್ನು ಸಮುದ್ರದಲ್ಲಿ ತೇಲಾಡುವ ಹಲಗೆಗಳ ಮೇಲೆ ನಿರ್ಮಿಸಿದ್ದಾರೆ. ಎಲ್ಲಾ ಬಗೆಯ ವಸ್ತುಗಳನ್ನು ಮಾರುವಂತಹ ಅಂಗಡಿಗಳೂ, ಹೋಟೆಲ್‌ಗಳೂ ಇವೆ.
ಇಂದು ನಮ್ಮ ಲಂಕಾ ಪ್ರವಾಸದ ಕೊನೆಯ ದಿನ. ಅಂದು ಅಲ್ಲಿ ಅಧ್ಯಕ್ಷೀಯ ಚುನಾವಣೆ. ಇಲ್ಲಿ ಕೆಲವು ಬಾರಿ ಪ್ರಧಾನಮಂತ್ರಿ ಹೆಚ್ಚು ಅಧಿಕಾರ ಹೊಂದುತ್ತಾರೆ, ಕೆಲವು ಬಾರಿ ಅಧ್ಯಕ್ಷರು. ಹಾಗಾಗಿ ಇದು ಭಾರತದಲ್ಲಿನ ಸರ್ಕಾರದ ರೀತಿಯೂ ಅಲ್ಲ ಅಮೆರಿಕಾದ ಅಧ್ಯಕ್ಷೀಯ ಸರ್ಕಾರದ ಮಾದರಿಯೂ ಅಲ್ಲ. ನಾದನ್ ಬೆಳಿಗ್ಗೆಯಿಂದಲೇ ಬೇಗ ಹೊರಡುವಂತೆ ಒತ್ತಾಯಿಸುತ್ತಿದ್ದ. ನಮ್ಮ ವಿಮಾನ ಸಂಜೆ 5 ಗಂಟೆಗೆ ಹೊರಡಲಿದ್ದುದರಿಂದ ನಮಗೆ ಇನ್ನೂ ಸ್ವಲ್ಪ ಹೊತ್ತು ಕೊಲೊಂಬೋ ಸುತ್ತುವ ಆಸೆ. ಅಲ್ಲಿನ ಮುಖ್ಯಬೀದಿಗಳಲ್ಲಿ ಬಹು ಮಹಡಿ ಕಟ್ಟಡಗಳು ತಲೆ ಎತ್ತಿವೆ. ಅವೆಲ್ಲಾ ಚೈನಾದವರ ವ್ಯಾಪಾರಕ್ಕೆ ಸಂಬಂಧಪಟ್ಟ ಕಟ್ಟಡಗಳು ಎಂದು ನಾದನ್ ತಿಳಿಸಿದ. ಹಿಂದೊಮ್ಮೆ ಆಂಗ್ಲರು, ಫ್ರೆಂಚರು, ಡಚ್ಚರು ವ್ಯಾಪಾರದ ಸೋಗಿನಲ್ಲಿ ಬಂದು ಎಲ್ಲರ ಸಂಪತ್ತನ್ನು ಕಬಳಿಸಿದ ಹಾಗೆ ಇಂದು ಅಭಿವೃದ್ಧಿಯ ನೆಪದಲ್ಲಿ ಚೀನೀಯರು ಹಲವಾರು ಪುಟ್ಟ ರಾಷ್ಟ್ರಗಳಲ್ಲಿ ತಮ್ಮ ಹೆಜ್ಜೆ ಊರುತ್ತಿರುವುದು ಸ್ಪಷ್ಟವಾಗಿದೆ.
ಅಷ್ಟರಲ್ಲಿ ‘ನಾದನ್’ ಗಡಿಬಿಡಿಯಿಂದ ನಮ್ಮನ್ನು ಗಲ್ಲಿಗಲ್ಲಿಗಳಲ್ಲಿ ಸುತ್ತಿಸಿದ. ಅಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮಧ್ಯೆ ಘರ್ಷಣೆಯಿಂದಾಗಿ ಸಂಭವಿಸಿದ ದುರ್ಘಟನೆಯ ಕಾರಣ, ಪಟ್ಟಣದ ಕೆಲವು ಭಾಗಗಳಲ್ಲಿ ಕರ್ಫ್ಯೂ ಜಾರಿ ಆಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಎಲ್ಲಿಯೂ ಒಂದು ಹೋಟೆಲ್ ತೆರೆದಿರಲಿಲ್ಲ. ‘ಅಹಿಂಸೆಯೇ ಪರಮ ಧರ್ಮ’ ಎಂದು ಸಾರಿದ ಬೌದ್ಧಧರ್ಮವನ್ನೇ ಪಾಲಿಸುವವರ ನಾಡಿನಲ್ಲಿ ಏಕೆ ಇಂತಹ ಹಿಂಸಾಚಾರ?
ನಾದನ್ ಎಲ್ಲಿಂದಲೋ ಬ್ರೆಡ್, ಜಾಮ್ ಮತ್ತು ಒಂದು ಬಾಟಲ್ ನೀರು ತಂದುಕೊಟ್ಟು ನಮ್ಮನ್ನು ಸುರಕ್ಷಿತವಾಗಿ ಒಂದು ಗಂಟೆಯ ಹೊತ್ತಿಗೆ ಕೊಲೊಂಬೋ ವಿಮಾನ ನಿಲ್ದಾಣ ತಲುಪಿಸಿದ. ಟಿಪ್ಸ್ ಕೊಡಲು ಹೋದಾಗ ನೀವು ನಮ್ಮ ಅತಿಥಿಗಳು, ನಮಗೆ ಅನ್ನ ಕೊಡುವ ದೇವರು ಎಂದು ಕೈ ಮುಗಿದು ಹೊರಟೇಬಿಟ್ಟ. ನಮಗೆ ಮಾತೇ ಹೊರಡಲಿಲ್ಲ. ನಿನ್ನ ಮಕ್ಕಳಿಗೆ ಇದು ‘ಅಜ್ಜಿಯ ಉಡುಗೊರೆ’ ಎಂದು ಒತ್ತಾಯಿಸಿ ಕೊಡಬೇಕಾಯಿತು. ನಮ್ಮ ಕಾಲಿಗೆ ನಮಸ್ಕರಿಸಿ ಹೊರಟವನನ್ನು ನೋಡಿ ನಮ್ಮ ಕಣ್ಣಂಚಿನಲ್ಲಿ ನೀರಾಡಿತು.
ವಿಮಾನ ನಿಲ್ದಾಣದಲ್ಲಿ ಸುಮಾರು ಐವತ್ತು ಯುವಕರು ಗಲ್ಫ್ ದೇಶಗಳಿಗೆ ಉದ್ಯೋಗಾರ್ಥಿಗಳಾಗಿ ಹೋಗಲು ಕ್ಯೂ ನಿಂತಿದ್ದು ನೋಡಿದಾಗ ನಾದನ್ ಮಾತುಗಳು ನೆನಪಾಯಿತು. ನಿರುದ್ಯೋಗ ಸಮಸ್ಯೆ ತುಂಬಾ ಇರುವುದರಿಂದ ಯುವಕರು ಉದ್ಯೋಗ ಅರಸಿ ಹೊರದೇಶಗಳಿಗೆ ಹೋಗುತ್ತಾರೆ. ನಾದನ್ ಸಹ ಅಬುದಾಬಿಯಲ್ಲಿ ಹತ್ತು ವರ್ಷಗಳ ಕಾಲ ಡ್ರೈವರ್ ಆಗಿ ಕೆಲಸ ಮಾಡಿದ್ದವನು. ಆದರೆ ಇತ್ತೀಚಿನ ವರ್ಷಗಳಲ್ಲಿ ಶ್ರೀಲಂಕಾ ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ ಇಲ್ಲಿ ಉದ್ಯೋಗ ಅವಕಾಶಗಳು ನಿಧಾನವಾಗಿ ಸಿಗುತ್ತಿವೆ.
ಮತ್ತೊಂದು ಸಂತಸದ ಸಂಗತಿ ಎಂದರೆ ನಮ್ಮ ಒಂದು ರೂ.ಗೆ ಇಲ್ಲಿನ ಎರಡೂವರೆ ರೂ.ಗಳು. ಏನನ್ನು ಕೊಂಡರೂ ಕಡಿಮೆ ದರ ಎನ್ನಿಸುತ್ತಿತ್ತು. ಆದರೆ ಅಮೆರಿಕ, ಲಂಡನ್, ಯೂರೋಪ್‌ಗೆ ಪ್ರವಾಸ ಹೋದಾಗ ಅವರ ಡಾಲರ್, ಪೌಂಡ್ ಮತ್ತು ಯುರೋಗಳ ಮುಂದೆ ನಮ್ಮ ದುಡ್ಡು ಕಳಾಹೀನವಾಗಿಬಿಡುತ್ತಿತ್ತು. ಎಲ್ಲ ವಸ್ತುಗಳೂ ತುಂಬಾ ದುಬಾರಿ ಎನ್ನಿಸಿ ಕಾಫಿ ಕುಡಿಯಲೂ ಮನಸ್ಸಾಗುತ್ತಿರಲಿಲ್ಲ.
ನಾವಿಬ್ಬರೇ ಏಳು ದಿನಗಳ ಹಿಂದೆ ಇಲ್ಲಿಗೆ ಬಂದಾಗ ಗಾಬರಿ, ಆತಂಕ, ಭಯ ಇತ್ತು. ಆದರೆ ಇಂದು ಈ ನಾಡನ್ನು ಬಿಟ್ಟು ಹೋಗಲು ಮನಸ್ಸೇ ಆಗುತ್ತಿಲ್ಲ…. ರಾವಣನಿಂದ ಅಪಹೃತಳಾದ ಸೀತೆಯೂ ಸುರಕ್ಷಿತವಾಗಿ ರಾಮನ ಬಳಿ ವಾಪಾಸ್ಸಾದಳಲ್ಲವೇ? ಪ್ರವಾಸಿ ಕಂಪನಿ ನಮ್ಮ ಮುದ್ರೆಯುಂಗುರವಾದರೆ, ಡ್ರೈವರ್ ‘ನಾದನ್’ ನಮ್ಮ ಪಾಲಿಗೆ ಹನುಮಂತನಾಗಿದ್ದ.
ಈ ಬರಹದ ಮೊದಲಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=33786
(ಮುಗಿಯಿತು)
–ಡಾ. ಗಾಯತ್ರಿ ದೇವಿ ಸಜ್ಜನ್. ಎಸ್
ತುಂಬಾ ಚೆನ್ನಾಗಿದೆ.
ವಂದನೆಗಳು
ಬಹಳ ಸೊಗಸಾಗಿ, ಕ್ಷಿಪ್ರವಾಗಿ, ಶ್ರೀಲಂಕಾ ಪ್ರಯಾಣ ಮಾಡಿಸಿದಿರಿ ಮೇಡಂ..ವಿವರವಾಗಿ ಇನ್ನೂ ಕೆಲವು ಕಂತುಗಳಲ್ಲಿ ಹರಿದು ಬಂದಿದ್ದರೂ ಆಸಕ್ತಿಯಿಂದ ಓದಬಹುದಾಗಿತ್ತು.
ನಿಮ್ಮ ಶ್ರೀ ಲಂಕಾ ಪ್ರವಾಸ ಆರಂಭದಲ್ಲಿ ಆತಂಕ ಎದುರಿಸಿದ,ರೂಂ ಆನಂತರ ದ ಅನುಭವ ನೋಡಿದ ಸ್ಥಳಗಳ ಪುರಾಣ ಐತಿಹ್ಯ ಘಟನೆಗಳ ವಿವರ ಅದಕ್ಕೆ ಪೂರಕವಾಗಿ ಬಳಸಿರುವ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ… ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಗೆಳತಿಯ ಆತ್ಮಸ್ಥೈರ್ಯ ಮೆಚ್ಚುವಂತೆ ಇದೆ ಧನ್ಯವಾದಗಳು ಮೇಡಂ
ಸುಂದರ ನಿರೂಪಣೆ
ಸೊಗಸಾದ ನಿರೂಪಣೆಯಿಂದ ಕೂಡಿದ ಶ್ರೀಲಂಕಾ ಪ್ರವಾಸ ಕಥನ ಇನ್ನಷ್ಟು ಇರಬೇಕಿತ್ತು ಅನ್ನಿಸಿತು.
ಇಬ್ಬರು ಗೆಳತಿಯರು ಕೂಡಿ ಮಾಡಿದ ಶ್ರೀಲಂಕಾ ಪ್ರವಾಸದಲ್ಲಿ, ನಿಮ್ಮ ಅತಂಕಗಳನ್ನೆಲ್ಲಾ ಪರಿಹರಿಸಿ, ಪ್ರವಾಸವನ್ನು ಆನಂದದಿಂದ ಪೂರೈಸಲು ಸಹಕರಿಸಿ, ಸುರಕ್ಷಿತವಾಗಿ ಹಿಂತಿರುಗಲು ನೆರವಾದ ‘ನಾದನ್’ ನಿಜವಾಗಿಯೂ ಮಾನವೀಯತೆಯ ಜೀವಂತ ಸಾಕ್ಷಿ ಎಂದೆನಿಸಿಕೊಂಡಿರುವನು…ತುಂಬಾ ಖುಷಿಯಾಯ್ತು ಮೇಡಂ. ತಮ್ಮ ಸೊಗಸಾದ ಬರಹವು ನಮ್ಮನ್ನೂ ಶ್ರೀಲಂಕಾ ಸುತ್ತಿಸಿತು.