ನಮ್ಮ ಬಿಜಾಪುರ ಪ್ರವಾಸ
ಕಾಲೇಜು ಮುಗಿಯುತ್ತಲೇ ಮದುವೆ ಗೊತ್ತಾದ ಕಾರಣ ನನ್ನ ಮದುವೆಗೆ ಕಾಲೇಜಿನ ಎಲ್ಲ ಗೆಳೆಯ ಗೆಳತಿಯರು ಆಗಮಿಸಿದ್ದರು.ಈಗ ಒಬ್ಬೊಬ್ಬರೇ ಮದುವೆಯಾಗಿ ಈ ಸದ್ಯ ಗೆಳೆಯನೊಬ್ಬನ ಮದುವೆ ಗೊತ್ತಾಯಿತು. ನಾನಾ ಕಾರಣಗಳಿಂದ ಒಂದೆರಡು ಗೆಳತಿಯರ ಮದುವೆಗಷ್ಟೇ ನನಗೂ ಹೋಗಲಾಯಿತು.ಈ ಮದುವೆಗಾದರೂ ಹೋಗೋಣ ಎಂದು ಉಳಿದ ಗೆಳತಿಯರನ್ನು ಕೇಳಿದರೆ ನಾದಿನಿ ಮನೆಯಲ್ಲಿ ಕಾರ್ಯಕ್ರಮ,ಮಗುವಿನ ಆರೋಗ್ಯ ಎಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಂಡರು. ನನ್ನೊಂದಿಗೆ ಕಚೇರಿಯಲ್ಲಿ ಒಟ್ಟಿಗೆ ಊಟ ಮಾಡಿ, ಒಮ್ಮೊಮ್ಮೆ ಅವರ ಅಮ್ಮ ನನಗಾಗಿ ಕೂಡ ಡಬ್ಬಿ ಕಟ್ಟಿ ಕಲಿಸುತ್ತಿದ್ದರು. ನನಗೆ ಇಷ್ಟವೆಂದು ಟೊಮೇಟೊ ಪಲ್ಯ ಮಾಡಿದ ದಿನ ಹೆಚ್ಚಿಗೆಯೇ ಕಟ್ಟಿಕೊಂಡು ಬರುತ್ತಿದ್ದ ಗೆಳೆಯನ ಮದುವೆಗೆ ಹೋಗಲೇ ಬೇಕು ಎಂದು ಮನೆಯವರನ್ನು ಒತ್ತಾಯಿಸಿದೆ. ಪ್ರಾಜೆಕ್ಟು ಬ್ಯುಸಿ ಎಂದೆಲ್ಲ ಹೇಳುತ್ತಿದ್ದವರು,ಒತ್ತಾಯಕ್ಕೆ ಮಣಿದು ಕೆಲಸವನ್ನು ಬದಿಗಿಟ್ಟು ಹೋಗೋಣ ನಡಿ ಎಂದು ಲಾಸ್ಟ ಮಿನಿಟಿನಲ್ಲಿ ನಿರ್ಧರಿಸಿ, ಶುಕ್ರವಾರ ರಾತ್ರಿ ಬಿಜಾಪುರ್ ಬಸ್ ಹತ್ತಿದೆವು.
ಬೆಳಿಗ್ಗೆ ಬಿಜಾಪುರದ ಹೋಟೆಲಿನಲ್ಲಿ ನವ ವಧುವಿನ ಮನೆಯವರು ನಮಗಾಗಿ ಕೋಣೆ ಸಿದ್ಧಗೊಳಿಸಿಟ್ಟಿದ್ದರು. ಫ್ರೆಶ್ ಅಪ್ ಆಗಿ,ಅಲ್ಲಿಯೇ ಹೋಟೆಲಿನಲ್ಲಿ ಉಪಹಾರ ಮುಗಿಸಿ ಬಿಜಾಪುರ್ ಸುತ್ತಾಡಲು ಹೊರಟೆವು. ನನ್ನದೇ ಕಾಲೇಜಿನ ಮಹೇಶ ಅಷ್ಟು ಪರಿಚಯವಿಲ್ಲದಿದ್ದರೂ ಅವನೊಬ್ಬನೇ ಮದುವೆಗಾಗಿ ನಮ್ಮಂತೆ ಬೇಗನೆ ಬಂದು ತಲುಪಿದ್ದರಿಂದ ನಮ್ಮೊಂದಿಗೆ ಸುತ್ತಾಡಲು ನಮಗೆ ಜೊತೆಯಾದ. ಉಪ್ಪಲಿ ಬುರುಜ್, ಬಾರಾಕಮಾನ್, ಮುಲಿಕ್ ಮೈದಾನ ತೋಪ್, ನವರಸಪುರ ಸಂಗೀತ ಮಹಲ್, ನಾರಿಮಹಲ್, ಇಬ್ರಾಹಿಂ ರೋಜಾ, ತಾಜ್ ಬಾವಡಿ, ಜೋಡಗುಂಬಜ್, ಜಾಮಿಯಾ ಮಸೀದಿ ,ಗೋಲಗುಂಬಜ್ ತಾಣಗಳ ದರ್ಶನ ಮಾಡಿದೆವು.
ಮಲಿಕ್ -ಇ- ಮೈದಾನ್ ತೋಪು
ವಿಜಯಪುರ ನಗರದ ಮಧ್ಯಭಾಗದಲ್ಲಿ ಕೋಟೆಯ ಮೇಲೆ ಇರಿಸಲಾಗಿರುವ ಈ ತೋಪು ಶಿವಾಜಿ ವೃತ್ತದ ಹತ್ತಿರದಲ್ಲಿದೆ.ಬರೋಬ್ಬರಿ 55ಟನ್ ತೂಗುವ ಈ ತೋಪು ವಿಶ್ವದ ಬೃಹತ್ ತೋಪುಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಉರ್ದುವಿನಲ್ಲಿ ಮಲಿಕ್ ಇ ಮೈದಾನ್ ಅಂದರೆ ರಣರಂಗದ ರಾಜ ಎಂಬ ಅರ್ಥವಿದೆ. ಅಹ್ಮದ್ ನಗರದ ರಾಜಕುಮಾರಿ ಚಾಂದ್ ಬೀಬಿ ಆದಿಲ್ ಶಾಹಿ ಮನೆತನದ ಸೊಸೆಯಾಗಿ ಬರುವ ಸಂದರ್ಭದಲ್ಲಿ ಇದನ್ನು ವರದಕ್ಷಿಣೆಯ ರೂಪದಲ್ಲಿ ಆದಿಲ್ ಶಾಹಿಗಳಿಗೆ ಬಳುವಳಿಯಾಗಿ ಬಂದಿತ್ತು. ಈ ತೋಪು ಸಿಂಹದ ಬಾಯಿಯಂತೆ ವಿಶಿಷ್ಟವಾಗಿ ರೂಪಿತವಾಗಿದೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೇ ಕಾರಣವಾದ ತಾಳಿಕೋಟೆ ಕದನದಲ್ಲಿ ಬಹುಮನಿ ಸುಲ್ತಾನರ ವಿಜಯದಲ್ಲಿ ಈ ತೋಪು ಪ್ರಮುಖ ಪಾತ್ರವಹಿಸಿತ್ತು.
ಆಸರ್ ಮಹಲ
ಸುಮಾರು 1646 ರಲ್ಲಿ ಮೊಹಮ್ಮದ್ ಆದಿಲ್ ಷಾ ಅವರಿಂದ ಅಸರ್ ಮಹಲ್ ಅನ್ನು ನಿರ್ಮಿಸಲಾಯಿತು, ಇದನ್ನು ನ್ಯಾಯ ಸಭಾಂಗಣವಾಗಿ ಬಳಸಲಾಗುತ್ತಿತ್ತು. ಮೇಲಿನ ಮಹಡಿಯಲ್ಲಿನ ಕೊಠಡಿಗಳು ಹಸಿಚಿತ್ರಗಳಿಂದ ಅಲಂಕರಿಸಲ್ಪಟ್ಟಿವೆ ಮತ್ತು ಮುಂಭಾಗವನ್ನು ಚೌಕದ ತೊಟ್ಟಿಯಿಂದ ಅಲಂಕರಿಸಲಾಗುತ್ತದೆ. ಇಲ್ಲಿ ಮಹಿಳೆಯರು ಒಳಗೆ ಪ್ರವೇಶಿಸುವಂತಿಲ್ಲ.ಪ್ರತಿವರ್ಷ ಈ ಸ್ಥಳದಲ್ಲಿ ಉರ್ಸ್ (ಉತ್ಸವ) ನಡೆಯುತ್ತದೆ. ಸಭಾಂಗಣದ ಮುಂದೆ ದೊಡ್ಡ ತೊಟ್ಟಿಯನ್ನು ನೋಡಬಹುದು, ಇದು ಕೇಂದ್ರದಲ್ಲಿದ್ದು ಸುಮಾರು 15 ಅಡಿಗಳಷ್ಟು ಆಳವಾಗಿರುತ್ತದೆ. ಈ ತಾಣವು ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ನಿರ್ವಹಣೆಗೆ ಒಳಪಟ್ಟಿದೆ.
ಇಬ್ರಾಹಿಂ ರೋಜಾ
ಎರಡನೇ ಇಬ್ರಾಹಿಂ ಆದಿಲ್ ಶಹಾನ ಸಮಾಧಿ ಮತ್ತು ಮಸೀದಿಗಳಿರುವ ಈ ಅದ್ಭುತ ಅವಳಿ ಕಟ್ಟಡಗಳು. ಉನ್ನತ ಮಟ್ಟದ ಶಿಲಾ ಕುಸುರಿ ಕೆಲಸವನ್ನು ದಾಖಲಿಸಿರುವ ಇಬ್ರಾಹಿಂ ರೋಜಾ ಇಡೀ ಭಾರತದಲ್ಲಿಯೊ ಅತ್ಯಂತ ಪ್ರಮಾಣಬದ್ಧವಾಗಿ ನಿರ್ಮಿಸಲಾದ ಇಸ್ಲಾಂ ಸ್ಮಾರಕಗಲಲ್ಲೊಂದು ಎಂಬ ಹೆಗ್ಗಳಿಕೆ ಪಡೆದ
ಕಟ್ಟಡ. ವಿಶ್ವವಿಖ್ಯಾತ ತಾಜ್ ಮಹಲ್ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದ ಕಟ್ಟಡ ಎಂದೂ ಇದಕ್ಕೆ ಖ್ಯಾತಿ ಇದೆ. ಐದು ಘನವಾದ ಪ್ರಬಾವಗಳಿಂದ ಕೂಡಿದ, ಶಿಲ್ಪಕಲೆಯ ಸಾರ ಸರ್ವಸ್ವವನ್ನು ಹೇರಿಕೊಂಡ ಶಿಲಾಘಲಕಗಳನ್ನು ಹೊಂದಿದ ಈ ಕಟ್ಟಡ ತನ್ನ ಅನುಪಮ ವಿನ್ಯಾಸ ಮತ್ತು ಸೌಂದರ್ಯದಿಂದ ನೋಡುಗರ ಮನ ಸೆಳೆಯುತ್ತಿದೆ. ಎತ್ತರವಾದ ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿದ್ದು ನಾಲ್ಕು ಮಿನಾರುಗಳನ್ನೊಳಗೊಂಡ ಸುಂದರವಾದೊಂದು ಗೋಪುರದಿಂದಾವೃತವಾಗಿದ್ದು ಸುತ್ತ ಸುಂದರವಾದ ಉದ್ಯಾನವನ್ನು ಹೊಂದಿದೆ.
ಬಾರಾ ಕಮಾನ
ಎರಡನೆಯ ಇಬ್ರಾಹಿಮ ಆದಿಲ್ ಶಹನು ಸೂಕ್ಷ್ಮ ಕೆತ್ತನೆ ಕಲಾ ಕುಸುರಿಯ ಕಟ್ಟಡ ಇಬ್ರಾಹಿಂ ರೋಜಾವನ್ನು ಕಟ್ಟಿದನು. ಆತನ ಮೊಮ್ಮಗ ಎರಡನೇಯ ಅಲಿ ಆದಿಲ್ ಶಾಹನು ಅಜ್ಜ,ತಂದೆಯರನ್ನು ಮೀರಿಸುವ ಕಟ್ಟಡದ ಯೋಜನೆಯನ್ನು ಹಾಕಿ “ಅಲಿರೋಜಾ” ಕಟ್ಟಲು ಪ್ರಾರಂಭಿಸಿದನಂತೆ, ದೌರ್ಬಾಗ್ಯದಿಂದ ಅದು ಪೂರ್ತಿಯಾಗಲಿಲ್ಲ. ಅರೆ ಕೆಲಸಕ್ಕೆ ಪರ್ಯಾಯ ಶಬ್ದವಾಗಿ “ಬಾರಾಕಮಾನ್” ಆಯಿತು. ಕಟ್ಟಡದ ತಳಪಾಯ ಹಾಗೂ ಕಟ್ಟೋಣದ ಕ್ಷೇತ್ರವು ಗೋಳಗುಮ್ಮಟ್ಟಕ್ಕಿಂತ ದೊಡ್ಡದಾಗಿದೆ ಎಂಬುದನ್ನು ಊಹಿಸಿಕೊಂಡಾಗ ಕಟ್ಟಡ ಪೂರ್ತಿಗೊಂಡಿದ್ದರೆ ಪ್ರಪಂಚದಲ್ಲಿಯೇ ಅದೊಂದು ಅದ್ಭುತ
ಕಟ್ಟಡವಾಗುತ್ತಿತ್ತು! ಇದು 1656 ರಿಂದ 1686 ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ ಷಾ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ.
ಜಾಮಿಯಾ ಮಸೀದಿ
ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ಜುಮ್ಮಾ ಮಸೀದಿಯನ್ನು ಕಟ್ಟಿಸಿದನು. ತಾಳಿಕೋಟೆಯ ಕದನವನ್ನು ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು.ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ.ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ.
ಗೋಲ ಗುಮ್ಮಟ
ಕರ್ನಾಟಕದ 7 ಅದ್ಭುತಗಳಲ್ಲಿ ಒಂದು ಎಂದು ಹೆಸರಿಸಲಾದ ಗೋಲಗುಮ್ಮಟದಲ್ಲಿ ಸುಲ್ತಾನ ಮಹ್ಮದ ಆದಿಲಶಾಹನ ಸಮಾಧಿಯಂಟು. ಈ ಕಟ್ಟಡವು 1626 ರಿಂದ 1656 ರ ವರೆಗೆ 30 ವರ್ಷಗಳ ಕಾಲದಲ್ಲಿ ಪೂರ್ತಿಗೊಂಡಿತು. ಇದರ ಎತ್ತರ 177 ಪೂಟು 4 ಇಂಚು, ಗುಮ್ಮಟದ ಸುತ್ತಳತೆ 144 ಫೂಟಿನದಾಗಿದೆ.
ಈ ಗುಮ್ಮಟದಲ್ಲಿ 7 ಸಲ ಪ್ರತಿಧ್ವನಿಯಾಗುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ.
ಇದನ್ನು ‘ಪಿಸುಗುಟ್ಟುವ ಗ್ಯಾಲರಿ’(ವಿಸ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು 7 ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಗುಮ್ಮಟದಲ್ಲಿ ಹಲವಾರು ಮಜಲುಗಳನ್ನು ಹತ್ತಲು,ಕೆಲವರಿಗೆ ಬಹಳ ಕಷ್ಟವಾಯಿತು. ಎಲ್ಲ ಕಡೆ ಸುತ್ತಾಡಿ ಕೊನೆಯಲ್ಲಿ ಗೋಳಗುಮ್ಮಟ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಬೆಳಿಗ್ಗೆ ರಿಕ್ಷಾ ಹತ್ತುವಾಗ ರಿಕ್ಷಾವಾಲಾ ಮೊದಲೇ ನಮಗೆ ಸಲಹೆ ನೀಡಿದ್ದರು. ಅವರು ಹಾಗೆ ಹೇಳಿದ್ದರ ಅರ್ಥ ಗುಮ್ಮಟದ ವೈಭವ,ವಿಶಾಲತೆ ಕಂಡು ಅರ್ಥವಾಯಿತು.
ಚಿಕ್ಕಂದಿನಲ್ಲಿ ಬಿಜಾಪುರಕ್ಕೆ ಬಂದಾಗ ಟಾಂಗಾದಲ್ಲಿ ಓಡಾಡಿದ ನೆನಪು. ಟಾಂಗಾದಲ್ಲಿ ಓಡಾಡಬೇಕು,ಮಗರಾಯನನ್ನು ಅದರಲ್ಲಿ ತಿರುಗಾಡಿಸಬೇಕು ಎಂದು ಆಸೆ ಪಟ್ಟರೆ ರಿಕ್ಷಾದಲ್ಲಿ ಸುತ್ತಾಡುತ್ತ ಬಹಳ ಸಮಯವೇ ಆಗಿ ನಮಗೆ ಸುಸ್ತಾಯಿತು,ಶಿವಗಿರಿ,ಆಲಮಟ್ಟಿ ಡ್ಯಾಮ್ ಇತ್ಯಾದಿ ತಾಣಗಳು 20-30 ಕಿ.ಮೀ ವ್ಯಾಪ್ತಿಯಲ್ಲಿ ಇರುವುದರಿಂದ ನಮಗೆ ಆಸಕ್ತಿಯಿದ್ದರೆ ತೋರಿಸುವುದಾಗಿ ರಿಕ್ಷಾವಾಲಾ ಹೇಳಿದರೂ ಇನ್ನೊಮ್ಮೆ ಕಾಣುವ ಎಂದು ನಿರಾಕರಿಸಿದೆವು. ಆ ದಿನ ಊಟ ಮುಗಿಸಿ, ಗೆಳೆಯನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋದೆವು. ಕಾರ್ಯಕ್ರಮದ ಹಾಲ್ ಹುಡುಕುವಾಗ ಒಂದೇ ಹೆಸರಿನ ಎರಡು ಹಾಲ್ ಗಳು ಸ್ವಲ್ಪೇ ದೂರದಲ್ಲಿದ್ದುದರಿಂದ ಸ್ವಲ್ಪ ಕಷ್ಟವಾಯಿತು.
ಮಾರನೇ ದಿನ ಮದುವೆಯ ಮುಹೂರ್ತಕ್ಕಿಂತ ಸ್ವಲ್ಪ ಮುಂಚೆ ಸಮಯ ಹೊಂದಿಸಿಕೊಂಡು ಬಿಜಾಪುರ್ ಮಾರ್ಕೆಟಿನ ಸುತ್ತ ಟಾಂಗಾದಲ್ಲಿ ಒಂದು ಸುತ್ತು ಸುತ್ತಿ ಬಂದೆವು.ಕುದುರೆ ಗಡಿಯ ಮೇಲೆ ಓಡಾಡುತ್ತ ಆ ಕುದುರೆಯ ಗೆಳೆತನವನ್ನೇ ಸಂಪಾದಿಸಿದ ಮಗರಾಯ. ಮದುವೆ,ಊಟ ಮುಗಿಸಿ ಸ್ವಲ್ಪ ವಿಶ್ರಮಿಸಿ, ಒಂದು ಸುತ್ತು ವಾಕಿಂಗ್ ಮಾಡುತ್ತ ಕಂಡ ಪುಸ್ತಕ ಮಾರಾಟ ಪ್ರದರ್ಶನದಲ್ಲಿ 4-5 ಪುಸ್ತಕ ಖರೀದಿಸಿ, ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತ ನಮ್ಮ ಬಿಜಾಪುರ ಪ್ರವಾಸವೂ ಮುಗಿಯಿತು.
–ಸಾವಿತ್ರಿ ಶ್ಯಾನುಭಾಗ, ಕುಂದಾಪುರ
ಸವಿಸ್ತಾರ ಮಾಹಿತಿ, ವಿವರ. ಚೆನ್ನಾಗಿದೆ
ಚೆಂದದ ಪ್ರವಾಸಕಥನ..
ವಾವ್ ನಾನು ಈಗಾಗಲೇ ಬಿಜಾಪುರ ನೋಡಿದ್ದೆ ನಿಮ್ಮ ಪ್ರವಾಸ ಕಥನದಿಂದ ಮತ್ತೊಮ್ಮೆ ಸುತ್ತಾಡಿ ನೆನಪು ಮರುಕಳಿಸಿತು. ಧನ್ಯವಾದಗಳು
ಸವಿಸ್ತಾರವಾದ ಪ್ರವಾಸ ಅನುಭವ ಮುದ ತಂದಿದೆ
ಸಾವಿತ್ರಿಯವರೆ.
ಬಿಜಾಪುರ ನೋಡಿದ ನೆನಪು ಮರುಕಳಿಸಿತು.
ನನಗೂ ಹೋದಂತೆ ಅನಿಸಿತು , ವಿವರಿಸಿದ ವಿಧಾನದಿಂದ .
ಸೂಪರ್
ಬಿಜಾಪುರದ ಪ್ರವಾಸೀ ತಾಣಗಳನ್ನು ಆಸಕ್ತಿದಾಯಕವಾಗಿ ವಿವರಿಸುವ ಪ್ರವಾಸೀ ಕಥನ ಚಂದಿದೆ.
ಹಲವಾರು ವರ್ಷಗಳ ಮೊದಲು ನಾನೇ ಪ್ರವಾಸವನ್ನು ಆಯೋಜಿಸಿ, ನೋಡಿದ್ದ ಬಿಜಾಪುರ(ಇಂದಿನ ವಿಜಯಪುರ?) ನೆನಪಾಯ್ತು. ವಿವರವಾದ ಮಾಹಿತಿ ಸಹಿತದ ಪ್ರವಾಸ ಲೇಖನ ಬಹಳ ಚೆನ್ನಾಗಿದೆ.