ವಿಲನ್ ವರುಣ
ಮಳೆಗಾಲವೆಂದರೆ ಸಿಹಿ ನೆನಹುಗಳ ಹೂಮಳೆ. ಬಾಲ್ಯದಿಂದ ಇಂದಿನವರೆಗೂ ಸರಿದ ಎಲ್ಲಾ ಮಳೆಗಾಲಗಳೂ ಸವಿ ಸವಿ ನೆನಪೇ. ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ. ಧೋ ಎಂದು ಸುರಿವ ಬೇಸಿಗೆಯ ಸಂಜೆಯ ಅತಿಥಿ ಮಳೆಯಾಗಲೀˌದಿನ ಪೂರ್ತಿ ಜಿಟಿ ಜಿಟಿ ಎನ್ನುವ ಶ್ರಾವಣದ ಜಡಿಮಳೆಯಾಗಲೀ ವರ್ಷಋತುವಿನ ಕಣ್ಣಾಮುಚ್ಚಾಲೆಯಾಡುವ ಬಿಸಿಲುಮಳೆಯಾಗಲೀˌದಸರಾ ಸಂಭ್ರಮ ಹಾಳುಮಾಡುತ್ತಿದ್ದ ನವರಾತ್ರಿಯ ಸಂಜೆ ಮಳೆಯಾಗಲೀ ಎಲ್ಲವೂ ಸುಂದರ, ಆತ್ಮೀಯˌಆಪ್ಯಾಯಮಾನ.
ಹೊರಗೆ ಮಳೆ ಸುರಿದಿರಲು
ಮೆಚ್ಚಿನ ಪುಸ್ತಕˌಕುರುಕು ಕೈಲಿರಲು
ಹಬೆಯಾಡೋ ಬಿಸಿ ಕಾಫಿ ಜೊತೆಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ….
(ಸರ್ವಜ್ಞ ಕವಿಯ ಕ್ಷಮೆ ಕೋರಿ)
ಹೀಗೇ ನಾನು ಮಳೆಗಾಲ ಪ್ರಿಯೆ. ಆದರೆ ನಾನು ಇಲ್ಲಿ ಹೇಳ ಹೊರಟಿರೋದು ಒಂದೆರಡು ಅಪವಾದ ಎಂದೆನಲ್ಲಾ ಆ ಬಗ್ಗೆ.
ನಾನು ಮತ್ತು ರವೀಶ್ˌನನ್ನ ಗೆಳತಿ ಶಶಿ ಮತ್ತು ಅವಳ ಅಕ್ಕ ಭಾವ ಚನ್ನೈನಲ್ಲಿರುವ ಶಶಿಯ ಮಗನ ಮನೆಗೆ ಹೋಗಿದ್ದೆವು. ಅಲ್ಲಿಂದ ಟ್ಯಾಕ್ಸಿಯಲ್ಲಿ ಕಂಚಿ ಮಹಾಬಲಿಪುರಕ್ಕೆ ಒಂದು ದಿನದ ಪ್ರವಾಸ ಕೈಗೊಂಡೆವು. ಬೆಳಿಗ್ಗೆ ಕಂಚಿ ಕಾಮಾಕ್ಷಿಯ ಈಶ್ವರನ ದೇವಸ್ಥಾನದ ದರ್ಶನವಾಗಿ ಶಂಕರ ಮಠಕ್ಕೆ ಹೋಗಿ ಗೌರವ ಸಲ್ಲಿಸಿದೆವು. ಭೋಜನದ ನಂತರ ಕಂಚಿ ಸೀರೆ ಖರೀದಿ ಮುಗಿಸಿ ಮಹಾಬಲಿಪುರಂ ಕಡೆಗೆ ಹೊರಟೆವು. ಅಲ್ಲಿಯವರೆಗೆ ಸುಡುತ್ತಿದ್ದ ಸೂರ್ಯ ಮಂಕಾಗತೊಡಗಿದ. ಇನ್ನೇನು ತಲುಪಿದೆವು ಅನ್ನುವಷ್ಟರಲ್ಲಿ ಮೋಡಗಳು ದಟ್ಟೈಸಲು ಆರಂಭ.ಅಲ್ಲಿ ತಲುಪಲು ಆಗುತ್ತದೋ ಇಲ್ಲವೋ ಅನ್ನುವ ಆತಂಕದಲ್ಲಿ ದಾಪುಗಾಲಿಟ್ಟು ಸಮುದ್ರದ ಕಡೆಗೆ ದೌಡಾಯಿಸಿದೆವು. ಅನತಿದೂರದಲ್ಲಿ ಸಮುದ್ರ. ಶುರುವಾಯ್ತು ನೋಡಿ ದಪ್ಪ ದಪ್ಪ ಹನಿಗಳು 5 ನಿಮಿಷದಲ್ಲೇ ಕುಂಭದ್ರೋಣ ಮಳೆ ಶುರು.ಸಮುದ್ರದ ಕಡೆಗೆ ಆಸೆಗಣ್ಣಿಂದ ನೋಡುತ್ತಾ ವಾಪಸ್ಸಾಗಬೇಕಾಯಿತು.
ಮಕ್ಕಳ ಮುಂದೆ ಚಾಕಲೇಟ್ ತೋರಿಸಿ ಕಿತ್ತುಕೊಂಡ ಹಾಗಾಯ್ತು ನನ್ನ ಸ್ಥಿತಿ. ಕಾರನ್ನು ತಲುಪಲಾಗದಷ್ಪು ಜೋರು ಮಳೆ. ದಾರಿಯಲ್ಲೇ ಇದ್ದ ಶೆಡ್ ಅಂಗಡಿಗಳಲ್ಲಿ ನಿಂತಿದ್ದಾಯ್ತು. ಒಬ್ಬೊಬ್ಬರು ಒಂದೊಂದು ಕಡೆ. ಪೂರಾ ನೆಂದ ಬಟ್ಟೆಗಳು. ನಿಲ್ಲಲೂ ಸರಿಯಾಗಿ ಜಾಗವಿಲ್ಲ. ಟೆಂಟಿನ ಸಂದಿಯಿಂದ ಸೋರುತ್ತಿದ್ದ ಮಳೆನೀರು. 2 ಗಂಟೆ ಕಾಲ ಒಂದೇ ರಭಸದಲ್ಲಿ ಸುರಿದಿದೆ ಮಳೆ ಅಂದ್ರೆ ನಮ್ಮಪಾಡು ನೀವೇ ಊಹಿಸಿ. ಮೊಳಕಾಲು ತನಕ ನಿಂತ ನೀರು. ಅಬ್ಬಾ! ಮಳೆ ನಿಲ್ಲುವಷ್ಟರಲ್ಲಿ ಕತ್ತಲಾಗಿ ಸಮುದ್ರ ದರ್ಶನ ಸಾಧ್ಯವಾಗಲಿಲ್ಲ. ನನಗಂತೂ ನಿರಾಸೆಯಲ್ಲಿ ಕಣ್ಣಲ್ಲಿ ನೀರು. ಪುಣ್ಯ! ಮಳೆಯ ನೀರಿನ ಮರೆಯಲ್ಲಿ ಅದು ಯಾರಿಗೂ ಕಾಣಿಸಲಿಲ್ಲ. ಯಾವಾಗಲೂ ನನ್ನ ಗೆಳೆಯನಾಗಿ ಮನ ಮುದಗೊಳಿಸುತ್ತಿದ್ದ ವರುಣದೇವ ಅವತ್ತು ಮಾತ್ರ ನನ್ನ ಪಾಲಿನ ವಿಲನ್ ಆಗಿಬಿಟ್ಟಿದ್ದˌ ದುಃಖದ ಸಂಗತಿ ಅಂದರೆ ಈವರೆಗೂ ಮತ್ತೆ ಮಹಾಬಲಿಪುರಂ ನೋಡಲಾಗಿಲ್ಲ.
-ಸುಜಾತಾ ರವೀಶ್
Beautiful
ಅಯ್ಯೋ ವರುಣನ ಆರ್ಭಟದಿಂದ ನಿಮ್ಮ ಪ್ರವಾಸ ಮಟುಕಾದ ಲೇಖನ ವಿಷಾದ ತಂದಿತು.. ಮತ್ತೂಂದು ಸಾರಿ ಅಲ್ಲಿಗೆ ಹೋಗಿ ನಿರಾತಂಕವಾಗಿ ನೋಡಿ ಆನಂದಿಸುವ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ ಮೇಡಂ..ವರುಣ .. ಗೆಳೆಯ ನಾಗಿಲಿ
ಛೇ! ಹೀಗಾಗಬಾರದಿತ್ತು!
ಇರಲಿ ಬಿಡಿ, ಇನ್ನೊಮ್ಮೆ ಹೋಗುವಿರಂತೆ. ಸಧ್ಯ ಜಾಸ್ರಿ ತೊಂದರೆಯಾಗದಂತೆ ಹಿಂದಿರುಗುವಂತಾದುದಕ್ಕರ ವರುಣದೇವನಿಗೆ ವಂದಿಸಿರಿ. ಕುಂಭದ್ರೋಣ ಮಳೆ ಎಂದರೆ ಭಯವೇ ಆಗುತ್ತದೆ. ನಿರಾಶೆಯ ಅನುಭವವನ್ನೂ ಆಪ್ತವಾಗಿ ಹಂಚಿಕೊಂಡಿದ್ದೀರಿ. ಚಂದದ ಬರಹ.
ಹೌದು…ಜಡಿಮಳೆಯ ಅನುಭವ ಕರಾವಳಿಯವರಾದ ನಮಗೆ ಸರ್ವೇಸಾಮಾನ್ಯ. ಸುಂದರ ಸಮುದ್ರರಾಜನ ದರ್ಶನಕ್ಕೆ ವಿಘ್ನವೊಡ್ಡಿದ ನಿಮ್ಮ ಗೆಳೆಯ ವರುಣನೇ ಇನ್ನೊಮ್ಮೆ ನಿಮಗೆ ಖಂಡಿತಾ ಸಹಾಯ ಮಾಡುವನು…ನೋಡುತ್ತಿರಿ! ಚಂದದ ಬರಹ.