ಗುಟುಕರಿಸು ನಿನ್ನ ಚಹಾವನ್ನಾ..
ಈಗಲೇ ಗುಟುಕರಿಸು ನಿನ್ನ ಚಹಾವನ್ನ
ಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ
ಪ್ರತಿ ಗುಟುಕಿನ ಸ್ವಾದವ ಅನುಭವಿಸು
ಅದರ ಬಣ್ಣದ ಸೊಬಗ ಆನಂದಿಸು
ಮೇಲಿನ ಕೆನೆ ಪದರ ಸೆಳೆದು ರುಚಿಸು
ತೇಲಿರುವ ನೊರೆಯ ಊದಿ ಹಿಂದೆ ಸರಿಸು
ತುಸು ಬಿಸಿಯಿರುವ ಲೋಟದ ಕಂಠ ಹಿಡಿದು
ಸ್ವಲ್ಪ ಸ್ವಲ್ಪವೇ ಗುಟುಕು ಗುಟುಕಾಗಿ ಹೀರು
ಕಂದುಬಣ್ಣದ ಬಿಸಿದ್ರವ ತುಟಿ ತಲುಪಿ ಇಳಿಯಲಿ
ಹಾಲಿನ ಘಮಲು ಸಕ್ಕರೆಯ ಸಿಹಿ ಭಾವ ಬಾಯಲ್ಲಿ ಹರಡಲಿ
ನಾಳೆ ಏನಾಗುವುದೋ ಯಾರಿಗೆ ಗೊತ್ತು
ಸಿಕ್ಕ ಸಮಯದಲೇ ಸವಿದುಬಿಡು ನಿನ್ನ ಚಹಾ
ನಿಧಾನದಲಿ ಪರಮ ಸಮಾಧಾನದಲಿ
ನೀರ ಮೇಲಿನ ಗುಳ್ಳೆಯಂತೆ ಈ ಜೀವನ
ಯಾವಾಗ ಮುಗಿಯುವುದೋ ಬಲ್ಲವರು ಯಾರಣ್ಣ
ಮನವು ಭಾರವಾಗಿ ಒಂಟಿತನ ಕಾಡಿದಾಗ ಬಲು ದೀರ್ಘ ಈ ಬದುಕು
ಮನದಲ್ಲೇ ಕಳೆದ ಖುಷಿಯ ಕ್ಷಣಗಳ ಮೆಲುಕು ಹಾಕು
ಮಾಡಲು ಮೈ ಮುರಿಯುವಷ್ಟು ಕೆಲಸವಿದೆ
ತಪ್ಪಗಳ ಮಾಡಿ ಕಲಿಯಲು ಸಾಕಷ್ಟು ಸಮಯವಿದೆ
ಇರುವ ಕಾಲವೆಲ್ಲಾ ಗಟ್ಟಿಯಾಗಿ ಕಠೋರತೆಯ ಪಡೆಯಲು ಹೋರಾಡಿರುವೆ
ಕ್ಷಣ ಕ್ಷಣಕ್ಕೂ ಭವಿಷ್ಯದ ಒಳಿತಿಗಾಗಿ ದುಡಿದಿರುವೆ
ಸಮಯ ಕಳೆದುಹೋಗಿ ಬದುಕು ಮುಗಿದುಹೋಗುವ ಮುನ್ನ
ಈಗಲೇ ಗುಟುಕರಿಸು ನಿನ್ನ ಚಹಾವನ್ನಾ…
ಕೆಲ ಜೀವದ ಗೆಳೆಯರು ಜೊತೆಗಿರುವರು
ಹಲವರು ಮರೆಯದ ಪಾಠ ಕಲಿಸಿ ತೆರಳುವುರು
ಹಂಬಲಿಸಿ ಇಷ್ಟಪಟ್ಟವರ ನೆನಹು ಮನದಲ್ಲಿ ಹಸಿರ ತುಂಬಿದೆ
ಸ್ವಾರಸ್ಯಮಯ ಘಟನಾವಳಿಗಳ ಜಾತ್ರೆಯೇ ನೆರೆದಿದೆ
ಗುಡಿಗುಡಿಯ ಸುತ್ತಿ ಹರಕೆ ಹೊತ್ತು ಪಡೆದ ಮಕ್ಕಳು
ಬೆಳೆದು ದೊಡ್ಡವರಾಗಿ ತಮ್ಮ ಬದುಕ ಕಂಡುಕೊಂಡಿಹರು
ರೆಕ್ಕೆ ಬಲಿತ ಮೇಲೆ ಗೂಡು ತೊರೆದು ಹಾರಿಹರು
ಪ್ರತಿ ಘಟನೆಗಳು ಹೇಗೆ ಜರುಗುವುವು ಎಂಬುದು ಅರಿಯದಾಗಿದೆ
ಅನಿರೀಕ್ಷಿತ ತಿರುವುಗಳಿಗೆ ಈ ಬಾಳು ಸಾಕ್ಷಿಯಾಗಿದೆ
ಸಮಸ್ತ ಜಗದ ಒಲವ ಮೈ ತುಂಬಿಸಿಕೊಳ್ಳೋಣ
ನಮ್ಮ ಕಾಳಜಿವಹಿಸುವವರ ಮರೆಯದೆ ನೆನೆಯೋಣ
ದೀರ್ಘ ಉಸಿರ ತೆಗೆದುಕೊಂಡು ಮೊಗದೀ ನಗುವ ತುಂಬಿಕೊಂಡು
ಗಂಟಲುಬ್ಬಿ ಒತ್ತರಿಸುವ ದುಃಖವ ಹೊರಹಾಕೋಣ
ಸವಿಯೋಣ…. ಜೀವನದ ಚಹಾ ಸವಿಯೋಣ…
ಸದ್ದಿಲ್ಲದೆ……..ಯಾವುದೇ ಗಡಿಬಿಡಿಯಿಲ್ಲದೆ…..
-ಕೆ.ಎಂ ಶರಣಬಸವೇಶ, ಶಿವಮೊಗ್ಗ
Very very tasty.
ಅರ್ಥಪೂರ್ಣ ಕವನ..ಇಷ್ಟವಾಯಿತು
ನಿಜವಾಗಿಯೂ ಬದುಕಿನ ಹೊರಣವನ್ನು ಚಹಾದಹೋಲಿಕೆಯೊಂದಿಗೆ ಸಮೀಕರಿಸಿ ಬರೆದಿರುವ ಕವನ ಸುಂದರ ವಾಗಿದೆ… ಚಿಂತನೆಗೆ ಹೆಚ್ಚುವಂತೆ ಮಾಡುತ್ತದೆ ಅಭಿನಂದನೆಗಳು ಸಾರ್
ಚೆನ್ನಾಗಿದೆ ಬರಹ
ಸಿಹಿ-ಕಹಿ ಚಹವನ್ನು ಆಸ್ವಾದಿಸಿ ಕುಡಿಯುವುದು ಒಳ್ಳೆಯದು!
ಮೊದ ಮೊದಲಿಗೆ ರುಚಿಯಾದ ಚಹಾದ ವರ್ಣನೆಯೊಂದಿಗೆ ಪ್ರಾರಂಭವಾದ ಕವನ ಮುಂದೆ ಬಾಳಿನ ತತ್ವಶಾಸ್ತ್ರದ ಎಳೆಗಳನ್ನು ನವಿರಾಗಿ ಬಿಚ್ಚಿಟ್ಟಿದೆ.
ಬಾಳಿನ ಸವಿಯನ್ನು ಆಸ್ವಾದಿಸುವ ಪರಿಯನ್ನು ಬಹಳ ಸೊಗಸಾಗಿ ಬಿಚ್ಚಿಟ್ಟಿರುವಿರಿ. ನಮಗಾಗಿ ಇರುವ ದಿನವನ್ನು ಸಂತೋಷದಿಂದ ಕಳೆಯಬೇಕಾದ ಅಗತ್ಯತೆಯನ್ನು ಬಿಂಬಿಸುವ ಕವನ ಬಹಳ ಇಷ್ಟವಾಯ್ತು.