ಶ್ರೀಲಂಕಾ ಪ್ರವಾಸ: ರಾವಣನ ನಾಡಿನಲ್ಲಿ ಸೀತೆಯರು-1
ರಾವಣನ ನಾಡಿನಲ್ಲಿ ಸೀತೆಯರ ಅನಿರೀಕ್ಷಿತ ಪ್ರವಾಸ , ಅವಿಸ್ಮರಣೀಯ ಪಯಣವಾದ ಪ್ರವಾಸ ಕಥನ ಇದು. ನಾವು ನ್ಯೂಜಿಲ್ಯಾಂಡ್‌ಗೆ ಹೋಗಲು ಪ್ರತಿಷ್ಞಿತ ಪ್ರವಾಸಿ ಕಂಪೆನಿಯೊಂದರಲ್ಲಿ ಕಾಯ್ದಿರಿಸಿದ್ದೆವು. ಆದರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಬೇಕಾಯಿತು. ಅವರಿಗೆ ನೀಡಿದ್ದ ಮುಂಗಡ ಹಣ ವಾಪಸ್ ಬರುವ ಲಕ್ಷಣ ಕಾಣಲಿಲ್ಲವಾದ್ದರಿಂದ. ಏಳು ದಿನಗಳ ಶ್ರೀಲಂಕಾ ಪ್ರವಾಸವನ್ನು ಕಾಯ್ದಿರಿಸಿದೆವು. ಅಷ್ಟೇನೂ ಆಸಕ್ತಿಯಿಂದ ಹೊರಟವರಲ್ಲ ನಾವು. ಶ್ರೀಲಂಕಾ ಎಂದಾಕ್ಷಣ ನನಗೆ ನೆನಪಾದದ್ದು – ಸೀತಾಪಹರಣ. ಲಂಕಾಧಿಪತಿ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯ ಆಕ್ರಂದನ ನನ್ನ ಕಿವಿಗೆ ಅಪ್ಪಳಿಸುತ್ತಿರುವ ಹಾಗೇ ಅವಳ ಕಳವಳ, ದುಗುಡ, ದುಃಖ ನನ್ನ ಕಣ್ಣ ಮುಂದೆ ತೇಲಿ ಬಂತು.
ಶ್ರೀಲಂಕಾ ಪ್ರವಾಸ ಹೊರಟವರಿಗೆ ಆರಂಭದಲ್ಲೇ ಒಂದು ಆಘಾತ ಕಾದಿತ್ತು. ಸ್ಥಳೀಯ ಏಜೆಂಟ್ ನೀಡಿದ್ದ ಮಾಹಿತಿಯಂತೆ ಇಪ್ಪತ್ಯದು ಜನ ಪ್ರವಾಸಿಗರ ತಂಡದೊಂದಿಗೆ ನಾವು ಅಂದರೆ ನಾನು ಮತ್ತು ನನ್ನ ಗೆಳತಿ ನವೆಂಬರ್ 11, 2019 ರಂದು ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹೊರಟು ಶ್ರೀಲಂಕಾದ ರಾಜಧಾನಿ ಕೊಲೊಂಬೊವನ್ನು ಬೆಳಿಗ್ಗೆ ಐದು ಗಂಟೆಗೆ ತಲುಪಿದ್ದೆವು. ಅಲ್ಲಿಂದ ನಮ್ಮ ಪ್ರವಾಸ ಆರಂಭ. ಪ್ರವಾಸದಲ್ಲಿ ನಾವು ನೋಡಲಿರುವ ಪ್ರೇಕ್ಷಣೀಯ ಸ್ಥಳಗಳ ವೇಳಾಪಟ್ಟಿ, ಟಿಕೆಟ್, ಇ-ವೀಸಾ ಎಲ್ಲವನ್ನೂ ಎಜೆಂಟ್‌ನಿಂದ ಪಡೆದು ನಿಗದಿತ ಸಮಯಕ್ಕೆ ಸರಿಯಾಗಿ (ಅಂದರೆ ಅಂತರ್ ರಾಷ್ಟ್ರೀಯ ಪಯಣಕ್ಕೆ ಮೂರು ಗಂಟೆಗಳ ಕಾಲ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ಹಾಜರಿರಬೇಕಲ್ಲವೆ) ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿದೆವು. ಅಲ್ಲಿ ನಮ್ಮ ಸಹಪ್ರಯಾಣಿಕರ ಸುಳಿವಿಲ್ಲ. ಬಹುಶಃ ಕೊಲೊಂಬೋದಲ್ಲಿ ಭೇಟಿಯಾಗಬಹುದು ಎಂದುಕೊಂಡೆವು. ಆದರೆ ಅಲ್ಲಿಯೂ ಅವರ ಪತ್ತೆಯಾಗಲಿಲ್ಲ. ಕೊಲೊಂಬೋ ವಿಮಾನ ನಿಲ್ದಾಣದಲ್ಲಿ ಪ್ರವಾಸ ಮಾಡಲಿದ್ದ ಕಂಪನಿಯ ಹೆಸರಿದ್ದ ಕೌಂಟರ್ ಬಳಿ ವಿಚಾರಿಸಿದಾಗ ಅವರು ಒಂದು ಟ್ಯಾಕ್ಸಿ ಕರೆದು ಒಂದು ಪೈವ್ ಸ್ಟಾರ್ ಹೋಟೆಲ್‌ಗೆ ಕಳುಹಿಸಿದರು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಸಹಪ್ರಯಾಣಿಕರ ಹುಡುಕಾಟ ನಡೆಸಿದೆವು. ಪ್ರತಿಫಲ ಮಾತ್ರ ಶೂನ್ಯ. ನಮ್ಮನ್ನು ಹೋಟೆಲ್‌ಗೆ ಕರೆತಂದ ಡ್ರೈವರ್ ಬಳಿ ವಿಚಾರಿಸಿದಾಗ – ‘ನಿಮ್ಮಿಬ್ಬರ ಏಳು ದಿನಗಳ ಕಾಲ ಶ್ರೀಲಂಕಾ ಪ್ರವಾಸಕ್ಕೆ ನನ್ನೊಂದಿಗೆ ಕಂಪನಿಯವರು ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ.
ಅವನಿಂದ ಶ್ರೀಲಂಕಾ ಸಿಮ್ ಪಡೆದು ನಮ್ಮ ಪ್ರವಾಸದ ಏಜೆಂಟ್‌ಗೆ ಫೋನ್ ಮಾಡಿದರೆ ಹಾರಿಕೆ ಉತ್ತರ ನೀಡಿದ ಹೌದಾ !, ನಿಮ್ಮ ಜೊತೆ ಯಾರೂ ಇಲ್ವಾ? . . . ಏನೂ ಚಿಂತೆ ಬೇಡ, ಆರಾಮವಾಗಿ ಪ್ರವಾಸ ಮಾಡಿ – ಎಂದು ಹೇಳಿ ಫೋನು ಇಟ್ಟು ಬಿಟ್ಟ. ನಮಗೋ ಗಾಬರಿ, ಆತಂಕ. . . . ಗುರುತು ಪರಿಚಯವಿಲ್ಲದ ಈ ನಾಡಿನಲ್ಲಿ ಇಬ್ಬರೇ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಪ್ರವಾಸ ಮಾಡುವುದಾದರೂ ಹೇಗೆ? ಅಂದು ಅಶೋಕವನದಲ್ಲಿ ಬಂಧಿಯಾದ ಸೀತೆಯ ದುಗುಡ ನೆನಪಾಯಿತು. ಸೀತೆಗಾದರೋ ರಾಕ್ಷಸಿಯರ ಕಾವಲು ಇದೆ. ರಾವಣನೊಬ್ಬನದೇ ಕಾಟ ಆದರೆ ನಮಗೆ….!??? ಬೆಂಗಳೂರಿನಲ್ಲೇ ರಾತ್ರಿಯ ವೇಳೆ ಆಟೋ/ಟ್ಯಾಕ್ಸಿಯಲ್ಲಿ ಓಡಾಡಲು ಭಯಪಡುವ ಸ್ಥಿತಿ. ಹೆಣ್ಣುಮಕ್ಕಳು ಒಂಟಿಯಾಗಿ ಎಲ್ಲಿಗೆ ಪ್ರಯಾಣ ಮಾಡಿದರೂ (ಗಂಡಸರು) ಗಂಡ/ಮಗ, ಬಸ್/ರೈಲು/ವಿಮಾನ ಹತ್ತಿಸಿದರೆ – ಊರು ತಲುಪಿದ ತಕ್ಷಣ ಬಂಧುಗಳು / ಸ್ನೇಹಿತರು ಕರೆದೊಯ್ಯಲು ಬರುವ ಸಂಪ್ರದಾಯ. ಪ್ರವಾಸಿ ಕಂಪನಿಯವರು ಓಡಾಡಲು ಟ್ಯಾಕ್ಸಿ, ತಂಗಲು ಹೋಟೆಲ್ ಕಾಯ್ದಿರಿಸಿದ್ದಾರೆ..ನಿಜ . ಆದರೆ ಇಬ್ಬರೇ ಹೆಣ್ಣುಮಕ್ಕಳು ಏಳು ದಿನಗಳ ಕಾಲ ಅಪರಿಚಿತ ಡ್ರೈವರ್‌ನೊಂದಿಗೆ ಪಯಣಿಸಲು ಭಯ. ನನ್ನ ಯೋಗ ಗುರುಗಳು ಆತಂಕ, ಭಯ ಎದುರಾದಾಗ ದೀರ್ಘವಾದ ಉಸಿರು ತೆಗೆದುಕೊಂಡು ಮೂರು ಬಾರಿ ಓಂಕಾರ ಹೇಳಿದರೆ ಮನಸ್ಸಿನಲ್ಲಿ ಶಾಂತಿ, ವಿಶ್ವಾಸ ಮೂಡುವುದು ಎಂದು ಹೇಳಿದ್ದು ನೆನಪಾಯಿತು. ಹಾಗೇ ಮಾಡಿದೆವು. ಮನಸ್ಸಿನ ತಳಮಳ ತುಸು ಶಾಂತವಾಯಿತು. ಡ್ರೈವರ್ ಮುಂದೆ ಯಾವುದೇ ಆತಂಕ ತೋರಿಸಿಕೊಳ್ಳದೆ, ಆತ್ಮೀಯತೆಯಿಂದ ಅವನೊಂದಿಗೆ ಹರಟುತ್ತ್ತಾ ಪ್ರವಾಸಕ್ಕೆ ಸಿದ್ಧವಾದೆವು. ನಮ್ಮ ಪ್ರವಾಸದಲ್ಲಿ ಭೇಟಿಯಾಗುವ ವ್ಯಕ್ತಿಗಳು ರಾವಣನ ಬಳಗದವರೋ, ಹನುಮಂತನ ಬಣದವರೋ ಗೊತ್ತಿಲ್ಲ.
ಶ್ರೀಲಂಕಾ – ಒಂದು ಕಾಲದಲ್ಲಿ ಬ್ರಿಟಿಷರ ವಸಾಹತು ಆಗಿದ್ದ ದ್ವೀಪರಾಷ್ಟ್ರ. 1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ತಮಿಳರ ಹಾಗೂ ಸಿಂಹಳೀಯರ ನಡುವೆ ದೀರ್ಘಕಾಲ ಸಂಘರ್ಷ ನಡೆದಿತ್ತು. ಇಲ್ಲಿನ ಜನಸಂಖ್ಯೆಯ ಎಪ್ಪತ್ತು ಭಾಗ ಬೌದ್ಧಧರ್ಮದ ಅನುಯಾಯಿಗಳಾದ ಸಿಂಹಳೀಯರು ಇನ್ನುಳಿದವರು ಭಾರತದಿಂದ ವಲಸೆ ಹೋದ ತಮಿಳರು ಹಾಗೂ ಮತಾಂತರ ಹೊಂದಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಮೊದಲನೆಯ ದಿನದ ಪ್ರವಾಸ ಕೊಲೊಂಬೋದಿಂದ ಕ್ಯಾಂಡಿಯ ಕಡೆಗೆ – ಕ್ಯಾಂಡಿಯು ಹಿಂದೊಮ್ಮೊ ಶ್ರೀಲಂಕಾ ದೊರೆಗಳ ರಾಜಧಾನಿಯಾಗಿತ್ತು. ದಾರಿಯಲ್ಲಿ ‘ರಾಮ್‌ಬುಕ್ಕಾನ್’ ಬಳಿ ಇರುವ ‘ಪಿನ್ನಾವಾಲ ಆನೆ ಬಿಡಾರ‘ ಕ್ಕೆ ಭೇಟಿ ಇತ್ತೆವು. ಸುಮಾರು ಇಪ್ಪತೈದು ಹೆಕ್ಟೇರ್ ವಿಸ್ತೀರ್ಣದಲ್ಲಿ ಮಹಾಓಯೋ ನದಿ ಹರಿಯುವ ತಾಣದಲ್ಲಿ 1975 ರಲ್ಲಿ ಶ್ರೀಲಂಕಾ ಅರಣ್ಯ ಸಂರಕ್ಷಣಾ ಇಲಾಖೆಯವರು ಇದನ್ನು ಆರಂಭಿಸಿದರು. ಇಡೀ ವಿಶ್ವದಲ್ಲೇ ಪ್ರಖ್ಯಾತಿ ಪಡೆದಿರುವ ಆನೆ ಸಾಕಣೆ ಕೇಂದ್ರ ಇದು. ಇಲ್ಲಿ ಪುಟ್ಟ ಅನಾಥ ಆನೆ ಮರಿಗಳಿಗೆ ಬಾಟಲಿಗಳಲ್ಲಿ ಹಾಲೂಡಿಸುವ ದೃಶ್ಯ ನೋಡಬಹುದು. ಪ್ರವಾಸಿಗರು ಹಣ್ಣುಗಳನ್ನು ಖರೀದಿಸಿ ಆನೆಗಳಿಗೆ ತಿನ್ನಿಸಬಹುದು, ಓಯೋ ನದಿಯಲ್ಲಿ ಸ್ನಾನ ಮಾಡಿಸಬಹುದು ಹಾಗೂ ಆನೆ ಸವಾರಿ ಮಾಡಬಹುದು. ಪ್ರಸ್ತುತ ಇಲ್ಲಿ ಸುಮಾರು ಇನ್ನೂರು ಆನೆಗಳು ಇವೆ ಎಂಬ ಫಲಕ ಹಾಕಿದ್ದರು. ಇಲ್ಲಿ ಆನೆಲದ್ದಿಯಿಂದ ಪೇಪರ್ ಹಾಗೂ ಅಲಂಕಾರಿಕ ವಸ್ತುಗಳನ್ನು ಮಾಡಿ ಮಾರಾಟಮಾಡುತ್ತಾರೆ.
ಹಚ್ಚ ಹಸಿರು ಹೊದ್ದು ನಿಂತ ಅಭಯಾರಣ್ಯ, ಝುಳು ಝುಳು ಹರಿಯುತ್ತಿರುವ ಓಯೋ ನದಿ, ಅಲ್ಲಿ ವಿಹರಿಸುತ್ತಿರುವ ಆನೆಗಳ ಹಿಂಡು, ನಮ್ಮೆಲ್ಲಾ ಆತಂಕವನ್ನು ಕ್ಷಣಮಾತ್ರದಲ್ಲಿ ಮರೆ ಮಾಡಿತು. ಪ್ರಕೃತಿಯ ಸಾನಿಧ್ಯ ನಮ್ಮಲ್ಲಿ ಭರವಸೆ, ವಿಶ್ವಾಸ ಉಂಟು ಮಾಡಿತು. ಪ್ರವಾಸ ಮಾಡಲು ಉತ್ಸಾಹ, ಲವಲವಿಕೆ ಮೂಡಿತು. ಮುಂದಿನ ಪ್ರವಾಸಿ ತಾಣ, ‘ಮಸಾಲೆ ಸಸ್ಯಗಳ’ ತೋಟ. ಅಲ್ಲಿ ಬೆಳೆದಿದ್ದ ದಾಲ್ಚಿನ್ನಿ, ಲವಂಗ, ಏಲಕ್ಕಿ, ಮೆಣಸು, ಮೊಗ್ಗು ಇನ್ನೂ ಹತ್ತು ಹಲವು ಬಗೆಯ ಔಷಧೀಯ ಸಸ್ಯಗಳು ತಮ್ಮ ವಿಶಿಷ್ಟ ಪರಿಮಳದೊಂದಿಗೆ ನಮ್ಮನ್ನು ಸ್ವಾಗತಿಸಿದವು. ಅಲ್ಲಿನ ಗೈಡ್ ಎಲ್ಲ ಗಿಡಮೂಲಿಕೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಾ – ಅಲ್ಲೇ ತಯಾರಿಸಿದ ಸಸ್ಯ ಔಷಧಗಳ ಪರಿಚಯ ಮಾಡಿಸಿದರು. ಕಾಲುನೋವು, ಮಂಡಿನೋವು, ಬೆನ್ನುನೋವು ಇತ್ಯಾದಿ. . . ಇದ್ದವರಿಗೆ ಉಚಿತವಾಗಿ ‘ಮಸಾಜ್’ ಮಾಡುತ್ತಿದ್ದರು. ನನ್ನ ಗೆಳತಿಯೂ ‘ಮಂಡಿನೋವಿ’ಗೆ ಮಸಾಜ್ ಮಾಡಿಸಿಕೊಂಡಳು. ಮಸಾಜ್ ಮಾಡುತ್ತಿದ್ದವಳ ಕೂದಲು ಅವಳಷ್ಟೇ ಉದ್ದವಾಗಿತ್ತು (ಸುಮಾರು ಐದು ಅಡಿ ಎರಡು ಅಂಗುಲ) ಅಲ್ಲಿಯೇ ತಯಾರಿಸಿದ್ದ ಕೊಬ್ಬರಿ ಎಣ್ಣೆಯಿಂದ ಇಂತಹ ಕಾಂತಿಯುತ ಸೊಂಪಾದ ಕೂದಲು ಬೆಳೆಯುವುದು ಎಂದಳು. ನನಗೇನೋ ಅಂತಹ ಕೂದಲಿನ ಆಕರ್ಷಣೆಗಿಂತ ಅನಾನುಕೂಲಗಳೇ ಹೆಚ್ಚಾಗಿ ಕಂಡವು. ಆ ಕೂದಲಿನ ಆರೈಕೆಗಾಗಿಯೇ ಎಲ್ಲ ಕೆಲಸ ಬಿಟ್ಟು, ಕೂದಲು ಬೆಳೆಸಲೆಂದೇ ದಿನದ ಬಹುಭಾಗ ಮೀಸಲಿಡಬೇಕಾದೀತು!
ಆ ದಿನ ರಾತ್ರಿ ‘ನುವಾರ ಎಲಿಯಾ’ ದಲ್ಲಿ ತಂಗಿದೆವು. ಹೋಟೆಲ್ ಸಿಬ್ಬಂದಿ ಐದಾರು ಮಂದಿ ಇದ್ದರು.. ಊಟದ ಹಾಲ್‌ನಲ್ಲಿ ನಾವಿಬ್ಬರೇ .. ಮನದ ಮೂಲೆಯೊಂದರಲ್ಲಿ ಸಂಶಯ ಹೆಡೆಯಾಡಿಸುತ್ತಲೇ ಇತ್ತು. ಅವರು ಬಡಿಸಿದ ಊಟವನ್ನು ಆತುರಾತುರವಾಗಿ ಮುಗಿಸಿ ರೂಮ್ ಸೇರಿ ಬಾಗಿಲು ಭದ್ರಪಡಿಸಿದೆವು. ಬಾಗಿಲಿಗೆ ಚಿಲಕ ಇರಲಿಲ್ಲ . .. ಡೋರ್ ಲಾಕ್ ಮಾತ್ರ ಇತ್ತು. ಒಂದು ಕಾರ್ಡ್ ತೋರಿಸಿದರೆ ತೆರೆಯುವ ಬಾಗಿಲು. ಹಾಗಾಗಿ ಬಾಗಿಲಿಗೆ ಅಡ್ಡಲಾಗಿ ಒಂದು ಟೀಪಾಯ್ ಜರುಗಿಸಿ, ಅದರ ಮೇಲೊಂದು ಕುರ್ಚಿ ಇಟ್ಟು ಮಲಗುವ ಸಿದ್ಧತೆ ಮಾಡಿದೆವು. ಬಾಗಿಲು ಬಡಿಯುವ ಸದ್ದು, ಸಮಯ ರಾತ್ರಿ 9-30 ಗಂಟೆ, ಧೈರ್ಯ ಮಾಡಿ ಬಾಗಿಲು ತೆರೆದರೆ – ಊಟ ಬಡಿಸಿದ ಹುಡುಗ ಐಸ್‌ಕ್ರೀಂ ಹಿಡಿದು ನಿಂತಿದ್ದ ‘ನೀವು ಊಟ ಸರಿಯಾಗಿ ಮಾಡಲಿಲ್ಲ ಅದಕ್ಕೆ ಆಂಗಡಿಗೆ ಹೋಗಿ ಐಸ್‌ಕ್ರೀಂ ತಂದೆ, ಬೆಳಿಗ್ಗೆ ತಿಂಡಿ ಏನು ಮಾಡಲಿ?’ ಎಂದ. ನಗುವುದೋ, ಅಳುವುದೋ ನೀವೇ ಹೇಳಿ. ಬೆಳಿಗ್ಗೆ ನೀರು ನೀರಾದ ಗಂಜಿಯಂತಹ, ಅರೆಬರೆ ಬೆಂದ ಉಪ್ಪಿಟ್ಟು ಜೊತೆಗೆ ದಾಲ್ ತಂದಿಟ್ಟ. ಅದನ್ನು ತಿನ್ನದಿದ್ದರೆ ಆ ಹುಡುಗನಿಗೆ ಬೇಜಾರಾದೀತು ಎಂದು ಕಷ್ಟಪಟ್ಟು ನುಂಗಿದೆವು.
ಆ ದಿನದ ಪ್ರವಾಸಿ ತಾಣ ‘ಬುದ್ಧನ ಪವಿತ್ರವಾದ ಹಲ್ಲು’ ಇರುವ ದೇವಾಲಯ ಶ್ರೀದಳದ ಮಾಲೆಗಾವ ದಲ್ಲಿರುವ ಪ್ರಸಿದ್ಧ ಬೌದ್ಧ ದೇವಾಲಯದಲ್ಲಿ ಬುದ್ಧನ ಪವಿತ್ರವಾದ ಹಲ್ಲನ್ನು ರಕ್ಷಿಸಿಡಲಾಗಿದೆ. ಹಿಂದಿನ ರಾಜರ ಅರಮನೆಯ ಪ್ರಾಂಗಣದಲ್ಲಿರುವ ಈ ದೇಗುಲವನ್ನು ಯುನೆಸ್ಕೋದವರು ‘ವಿಶ್ವದ ಹೆರಿಟೇಜ್ ಸೈಟ್’ ಎಂದು ಘೋಷಿಸಿದ್ದಾರೆ. ಅಲ್ಲಿನ ಇತಿಹಾಸವನ್ನು ಅಲ್ಲಲ್ಲಿ ಫಲಕಗಳ ಮೇಲೆ ಬರೆಯಲಾಗಿದೆ ಹಾಗೂ ಬುದ್ಧನ ಜೀವನ ಚರಿತ್ರೆಯ ದೃಶ್ಯಗಳನ್ನು ಬಿಡಿಸಲಾಗಿದೆ. ಆ ಭವ್ಯವಾದ ದೇಗುಲ, ಮಂದಸ್ಮಿತ ಬುದ್ಧನಮೂರ್ತಿ ಮನಸ್ಸಿಗೆ ಮುದ ನೀಡಿದವು.
(ಮುಂದುವರಿಯುವುದು..)
-ಡಾ.ಗಾಯತ್ರಿ ದೇವಿ ಸಜ್ಜನ್. ಎಸ್
ಚೆನ್ನಾಗಿ ದೆ
ತುಂಬಾ ಸುಂದರವಾದ ಅನುಭವ . ಚೆನ್ನಾಗಿದೆ. ನಾವೇ ಅನುಭವಿಸಿದ ಆಗೆ ಅನ್ನಿಸುತೆ.
ಪ್ರವಾಸದ ಆರಂಭದಲ್ಲೇ ಆತಂಕ ಸನ್ನಿವೇಶ.ಆದರೂ ವಿವರಣೆ ಚೆನ್ನಾಗಿ ಮೂಡಿ ಕುತೂಹಲ ಮೂಡಿಸಿದೆ… ಮೇಡಂ.
Very nice. ಮತ್ತೊಂದು ಪ್ರವಾಸ ಕಥನ
ನಿಮ್ಮ ಜೊತೆಯಲ್ಲೇ ನಾವಿದ್ದೇವೇನೋ ಎಂದೆನಿಸುವಷ್ಟು ಸಹಜ ಸುಂದರ ನಿರೂಪಣೆ .ಕುತೂಹಲ ಮೂಡಿಸಿದೆ ಮುಂದಿನ ಸಂಚಿಕೆಗಳನ್ನು ಓದಲು ಕಾತರದಿಂದ ಕಾಯುತ್ತಿದ್ದೇನೆ .
ಸುಜಾತಾ ರವೀಶ್
ಆತಂಕದಿಂದಲೇ ಆರಂಭವಾದರೂ, ಊಟ ಸೇರಲಿಲ್ಲವೆಂದು ತಾನಾಗಿಯೇ ಒದಗಿಬಂದ ಐಸ್ ಕ್ರೀಮ್, , ವಾಹ್, ಯಾರಿಗುಂಟು, ಯಾರಿಗಿಲ್ಲ? ಓದಲುಕಾತುರದಿಂದ ಕಾಯುವಂತೆ ಮಾಡುವ ಮತ್ತೊಂದು ಪ್ರವಾಸೀ ಕಥನದ ಶುಭಾರಂಭ ಚೆನ್ನಾಗಿ ಮೂಡಿಬಂದಿದೆ.
ನಿಮ್ಮೆಲ್ಲರ ಅಭಿಮಾನಪೂರ್ವಕ ನುಡಿಗಳಿಗೆ ವಂದನೆಗಳು
ಆತಂಕಗಳ ನಡುವೆಯೇ ಆರಂಭಗೊಂಡ ಶ್ರೀಲಂಕಾ ಪ್ರವಾಸವು ಬಹಳ ಚೆನ್ನಾಗಿ ಮೂಡಿಬಂದಿದೆ. ಸಹಜ, ಸುಂದರ ನಿರೂಪಣೆ ನಮಗೂ ಪ್ರವಾಸದ ಅನುಭವವನ್ನು ನೀಡಿದೆ…ಧನ್ಯವಾದಗಳು ಗಾಯತ್ರಿ ಮೇಡಂ.
ಸುಂದರ ನಿರೂಪಣೆ