ಮುಸುಕಿನೊಳಗೆ ಸೇರಿದ್ದಾಗ ಒಳಗೆ ಅದೇನೋ ತಳಮಳ. ಅದೊಂದು ಮುಂಜಾನೆ ಮುಸುಕಿನೊಳಗಿಂದ ಹೊರಬಂದು ಮೊಗ್ಗಾಗಿದ್ದೆ. ಕೊರೆಯುವ ಛಳಿಯಲ್ಲೂ ಹಿತವಾದ ಅನುಭವ. ಹೊರಗೆ ಬಂದು ಉಸಿರಾಡುವ ಆ ಹೊತ್ತಿನಲ್ಲಿ ಬಂಧನದಿಂದ ಬಿಡುಗಡೆಗೊಂಡ ಭಾವ. ನಿಧಾನವಾಗಿ ಕಣ್ತೆರೆಯುತ್ತಿದ್ದಂತೆ ಮೊಗದ ಮೇಲೆ ಬಿದ್ದ ಆ ಬೆಳಕು ನಾನೆಲ್ಲಿರುವೆ ಎನ್ನುವುದನ್ನು ತೋರಿಸಿತ್ತು. ಸುತ್ತಲಿನ ಎಲ್ಲವೂ ಮಸುಕಾಗಿ ಕಾಣುತ್ತಿದ್ದವು. ಸ್ವಲ್ಪ ಹೊತ್ತಿನ ನಂತರ ಬೆಳಕು ಗಾಢವಾಗುತ್ತ ಬಂದು ಬಿಸಿಲೇರಿದಾಗ ನಾನು ಹಸಿರೆಲೆಗಳ ನಡುವೆ ಅರಳಿ ನಿಂತಿದ್ದೆ. ಮೇಲೆ ಆಕಾಶ, ಸುತ್ತ ಗಿಡಮರಗಳು. ಇಲ್ಲಿ ನಮ್ಮದೇ ಸಾಮ್ರಾಜ್ಯ ಎಂದು ತಿಳಿದಿದ್ದೆ. ಹಿತವಾದ ಗಾಳಿ ಬೀಸಿದಾಗ ಉಯ್ಯಾಲೆಯಲ್ಲಿ ಕುಳಿತು ಜೀಕಿದಂತೆ. ಬಿಸಿಲು ಮೈಸೋಕಿದಾಗ ಅದೇನೋ ಹಿತವಾದ ಅನುಭವ. ದುಂಬಿಯೊಂದು ಸುಳಿಯುತ್ತ ಬಂದು ರಾಗವೊಂದನ್ನು ಕೇಳಿಸಿದಾಗ- ಇಲ್ಲಿ ಹೀಗೂ ಉಂಟೇ!- ಎಂದು ಅಚ್ಚರಿಪಡುತ್ತಿರುವಾಗಲೇ ಅವನು ನನ್ನಲ್ಲಿದ್ದ ಮಧುವನ್ನು ಹೀರಿ ಮಾಯವಾಗಿದ್ದ. ಅವನು ಮತ್ತೆ ಇತ್ತ ಬರಲಾರನೇ?-ಬಯಸಿತ್ತು ಮನ. ಈ ಧರೆಯ ಮೇಲಿನದು ಎಂತಹ ಸುಂದರ ಜೀವನ!
ನಾನು ಬೇಸಿಗೆಯಲ್ಲೂ ಅರಳಿದ್ದೆ. ನನ್ನಮ್ಮನಾದ ಗಿಡದ ಮೇಲೆ ಮತ್ತು ನನ್ನನ್ನು ಗಟ್ಟಿಯಾಗಿ ಹಿಡಿದಿದ್ದ ಕೊಂಬೆಯ ಮೇಲೆ ಬಹಳ ಭರವಸೆಯನ್ನಿಟ್ಟಿದ್ದೆ. ಎತ್ತರವಾದ ಗಿಡದ ಕೊಂಬೆಯ ಮೇಲೆ ಅರಳಿ ಕಣ್ಣುಗಳನ್ನು ತೆರೆದು ಸುತ್ತಲಿನ ಲೋಕವನ್ನು ನೋಡುತ್ತಿರುವಂತೆಯೇ ಬಲಿಷ್ಠವಾದ ಮಾನವನ ಬೆರಳುಗಳು ನನ್ನನ್ನು ಕಿತ್ತು ಒಂದು ಚೀಲದಲ್ಲಿ ಹಾಕಿ ಹೊತ್ತೊಯ್ದಾಗ ನನಗಾದ ನೋವನ್ನು ಹೇಳಲಾರೆ. ಕ್ಷಣಕ್ಷಣಕ್ಕೂ ಅಮ್ಮನಿಂದ ದೂರವಾಗುತ್ತಿರುವ ಅನುಭವ. ಎಲ್ಲಿಗೆ ಕರೆದೊಯ್ಯುವನೋ ನನಗಂತೂ ತಿಳಿಯಲಿಲ್ಲ. ಸುಂದರವಾದ ಈ ಧರೆಯಲ್ಲಿ ಸುಮ್ಮನಿದ್ದವರನ್ನೂ ಹೀಗೆ ಬಲಾತ್ಕಾರವಾಗಿ ಎಳೆದೊಯ್ಯುವ ಇಂತಹವರೂ ಇದ್ದಾರೆಯೇ? ವಿಚಿತ್ರವಾದರೂ ಸತ್ಯ.
ನೋಡುನೋಡುತ್ತಿದ್ದಂತೆ ದಾರದಲ್ಲಿ ಬಂದಿಯಾಗಿ ಮಾರುಕಟ್ಟೆಯತ್ತ ಸಾಗಿದ್ದೆ. ನನಗೂ ಬೆಲೆಯುಂಟು ಎಂದು ಬೀಗುತ್ತಿದ್ದಾಗಲೇ ಬಿಕರಿಯಾಗಿ ಯಾರದೋ ಕೈಸೇರಿದ್ದೆ. ಅಲ್ಲಿಂದ ಸೀದಾ ದೇವಾಲಯವನ್ನೇ ಸೇರಿದ್ದೆ. ನನ್ನ ಮೇಲೆ ನೀರನ್ನು ಸಿಂಪಡಿಸಿ ಹೊನ್ನಿನ ಬಣ್ಣದ ಹರಿವಾಣದಲ್ಲಿಟ್ಟಾಗ ಸ್ವಲ್ಪ ಹಾಯೆನಿಸಿತು. ಅಲ್ಲಿಂದ ಮುಂದೆ ಸಾಗಿ ದೇವರ ಪಾದವನ್ನು ಸ್ಪರ್ಶಿಸಿದ್ದೆ. ಅದೊಂದು ಅನೂಹ್ಯ ಅನುಭವ. ಧನ್ಯತೆಯ ಆ ಕ್ಷಣದಲ್ಲಿ ನನ್ನನ್ನೇ ನಾನು ಮರೆತಿದ್ದೆ. ಮರುದಿನ ನನ್ನನ್ನು ಮತ್ತೆ ಹರಿವಾಣದಲ್ಲಿರಿಸಿ ಗಿಡದ ಬುಡಕ್ಕೆ ಹಾಕಲಾಯಿತು. ದೇವರನ್ನು ಸ್ಪರ್ಶಿಸಿದ್ದರಿಂದ ನನಗೂ ಮಾನ್ಯತೆ ದೊರೆತಿತ್ತು. ಬಾಡುತ್ತ ನೆಲ ಸೇರುವಾಗಲೂ ಮನದಲ್ಲಿ ದೇವರಿಗೆ ಹತ್ತಿರವಾದ ಧನ್ಯತೆಯ ಭಾವ. ಇದಕ್ಕಿಂತ ಮಿಗಿಲಾದದ್ದು ಇನ್ನೇನು ಬೇಕು?
ಕಣ್ತೆರೆದಾಗ ನಾನು ಅರಳಿದ್ದು ಬೇಲಿಯೊಂದರ ಬಳಿಯಲ್ಲಿ ಎಂದು ತಿಳಿಯಿತು. ಸುತ್ತ ಬಿಸಿಲು ಹರಡಿತ್ತು. ಮನದಲ್ಲಿ ಅದಮ್ಯ ಉತ್ಸಾಹ! ಹಕ್ಕಿಯೊಂದು ಹತ್ತಿರವೇ ಬಂದಾಗ ಅದು ನನ್ನನ್ನು ಕಂಡು ಬಂದಿರಬಹುದು ಎಂದು ಭಾವಿಸಿದ್ದೆ. ಆದರೆ ಅದು ಕತ್ತುಕೊಂಕಿಸಿ ಅತ್ತಿತ್ತ ನೋಡಿದಂತೆ ಮಾಡಿ ಪುರ್ರನೆ ಹಾರಿಹೋಯಿತು. ನನಗಾದ ನಿರಾಶೆ ಅಷ್ಟಿಷ್ಟಲ್ಲ. ಕೆಲವೇ ನಿಮಿಷಗಳಲ್ಲಿ ಮುದ್ದಾದ ಮಗುವೊಂದು ನನ್ನ ಸಮೀಪ ಬಂದುನಿಂತು ನನ್ನನ್ನೇ ನೋಡಲಾರಂಭಿಸಿತು. ನಾನೂ ಅದರತ್ತ ನೋಡುತ್ತಲೇ ಇದ್ದೆ. ಅದು ಇದ್ದಕ್ಕಿದ್ದಂತೆ ನನ್ನನ್ನು ಮುಟ್ಟಲು ನನ್ನತ್ತ ತನ್ನ ಪುಟ್ಟ ಕೈಗಳನ್ನು ಚಾಚಿತ್ತು, ಅಷ್ಟರಲ್ಲೇ-ಏ! ಅದನ್ನು ಮುಟ್ಟಬೇಡ, ಅದು ಬೇಲಿಹೂವು, ನಿನಗೆ ಮುಡಿಯೋಕೆ ಬೇರೆ ಹೂವು ತೆಕ್ಕೊಡ್ತೀನಿ-ಎನ್ನುವ ಮಾತು ಕೇಳಿಬಂದಾಗ ಅದು ಹಿಂದಿರುಗಿ ನೋಡುತ್ತಲೇ ಹೊರಟುಹೋಯಿತು. ಅಯ್ಯೋ, ನನ್ನ ಹಣೆಯ ಬರಹ ಹೀಗೇನಾ?
ಅದೊಂದು ವಿಶಾಲವಾದ ಕಟ್ಟಡ. ಯಾವುದೋ ಸಮಾರಂಭಕ್ಕಾಗಿ ಸಜ್ಜುಗೊಳಿಸಲಾಗಿತ್ತು. ವೇದಿಕೆಯ ಪಕ್ಕದ ಕೋಣೆಯಲ್ಲಿ ಒಂದು ಬುಟ್ಟಿಯೊಳಗೆ ಕುಳಿತು ನಾನು ಹೊರಗಿನ ದೃಶ್ಯವನ್ನು ನೋಡಲು ಕಾತರಳಾಗಿದ್ದೆ. ಹಾಲ್ ಆಹ್ವಾನಿತರಿಂದ ತುಂಬಿತ್ತು. ವೇದಿಕೆ ಮೇಲೆ ಗಣ್ಯರೆಲ್ಲರೂ ಆಸೀನರಾದ ನಂತರ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಗಳನ್ನು ಸ್ವಾಗತಿಸುವ ಸಮಯದಲ್ಲಿ ಚಿಕ್ಕ ಹುಡುಗಿಯೊಬ್ಬಳು ಅವರ ಕೈಗೆ ನನ್ನನ್ನಿತ್ತಳು. ಅವರು ನನ್ನನ್ನು ಅಲ್ಲೇ ಮೇಜಿನ ಮೇಲೆ ಪಕ್ಕದಲ್ಲಿರಿಸಿದರು. ಆದರೆ ಕಾರ್ಯಕ್ರಮ ಮುಗಿದ ನಂತರ ತಮ್ಮೊಂದಿಗೆ ನನ್ನನ್ನು ಕರೆದೊಯ್ಯಲಿಲ್ಲ. ನಾನು ಅಲ್ಲೇ ಉಳಿದೆ. ನಂತರ ಕಸ ಗುಡಿಸುವವರು ನನ್ನನ್ನು ಮೇಜಿನ ಮೇಲಿಂದ ಕೆಳಗೆ ತಳ್ಳಿ ಪೊರಕೆಯಲ್ಲಿ ಗುಡಿಸಿ ಕಸದೊಂದಿಗೆ ಸೇರಿಸಿಬಿಟ್ಟರು. ಬಾಡುವ ಮುನ್ನವೂ ನೆಮ್ಮದಿಯೇ ಇಲ್ಲವಾಗಿದೆಯಲ್ಲ, ನನ್ನ ಅಳಲನ್ನು ಯಾರಿಗೆ ಹೇಳಲಿ?
ಆಗಷ್ಟೇ ಅರಳಿ ಸುತ್ತ ನೋಡುತ್ತಿದ್ದೆ. ಮೇಲಿನ ನೀಲಾಕಾಶ ಹಳದಿಯಾಗುತ್ತಿತ್ತು. ಇದ್ದಕ್ಕಿದ್ದಂತೆ ನಡೆದ ಆಕ್ರಮಣದಲ್ಲಿ ಬಂದಿಯಾಗಿ ದೂರ ನಡೆದಿದ್ದೆ. ಕಿತ್ತ ಕೈ ಯಾವುದೋ, ಮಾಲೆ ಮಾಡಿದ ಕೈ ಯಾವುದೋ, ಅಂತೂ ಕೊನೆಗೊಮ್ಮೆ ಹಾರದಲ್ಲಿ ಸೇರಿ ಯಾವ ದೇಹಕ್ಕೋ ಮಾಲೆಯಾಗಿದ್ದೆ. ಆದರೆ ಆ ದೇಹದಲ್ಲಿ ಉಸಿರೇ ಇಲ್ಲವೆಂದು ತಿಳಿದಾಗ ನನ್ನ ಪರಿಸ್ಥಿತಿ ಹೇಗಿತ್ತೆಂದು ನೀವೇ ಊಹಿಸಬಹುದು. ಅಂತೂ ಶವಯಾತ್ರೆಯಲ್ಲಿ ನಾನೂ ಸ್ಮಶಾನಕ್ಕೆ ಸಾಗಿದ್ದೆ. ಚಿತೆಯತ್ತ ನೋಡಿದಾಗ ನಾನೂ ಜೀವಂತವಾಗಿದ್ದೂ ಉರಿದುಹೋಗುವೆನೇ ಎನ್ನಿಸಿತ್ತು. ಆದರೆ ಹಾಗಾಗಲಿಲ್ಲ, ಹಾರವನ್ನೇ ಬದಿಗೆ ಸರಿಸಲಾಯಿತು. ನಾನು ಉಳಿದಿದ್ದೆ. ಶವ ಉರಿದು ಬೂದಿಯಾಗುವಾಗ ಎಲ್ಲರೂ ಅಲ್ಲಿಂದ ಹೊರಗೆ ನಡೆದಿದ್ದರು. ನೀರವತೆ ಮತ್ತು ಕತ್ತಲು ಮನಸ್ಸಿಗೆ ಬೆಂಕಿಯಾಗಿ ಕಾಡಿದ್ದವು. ಜೀವನ ಎಂದರೆ ಇಷ್ಟೇನಾ? ಎಲ್ಲಿಯ ಹುಟ್ಟು? ಎಲ್ಲಿಯ ಸಾವು? ಆಗಲೇ ಅನ್ನಿಸಿದ್ದು- ಯಾವ ಹೂವು ಯಾರ ಮುಡಿಗೋ, ಯಾರ ಪಯಣ ಯಾವ ಕಡೆಗೋ-ಎಂದು.
ಉದ್ಯಾನದಲ್ಲಿನ ಗಿಡವೊಂದರಲ್ಲಿ ಮುಳ್ಳುಗಳ ನಡುವೆಯೇ ಗುಲಾಬಿಯಾಗಿ ಜನಿಸಿದ್ದೆ. ಮಾಲಿಯ ಕಣ್ಗಾವಲಿನಲ್ಲಿ ಸುರಕ್ಷಿತವಾಗಿರುವೆನೆಂಬ ಭ್ರಮೆ ನನಗೆ. ಅಲ್ಲೇ ಸುಳಿದಾಡುತ್ತಿದ್ದ ಯುವಕನೊಬ್ಬ ಸಮಯ ನೋಡಿ ನನ್ನನ್ನು ಕಿತ್ತು ತನ್ನ ಜೇಬಿನಲ್ಲಿಸಿರಿಸಿ ಉದ್ಯಾನದ ಮತ್ತೊಂದು ಮೂಲೆಯತ್ತ ನಡೆದ. ಅಲ್ಲಿ ಆ ಹುಡುಗಿ ಅವನಿಗಾಗಿ ಕಾದಿದ್ದಳು. ಅವಳನ್ನು ಕಂಡೊಡನೆ ಜೇಬಿನಿಂದ ಹೊರತೆಗೆದು ನನ್ನನ್ನು ಅವಳ ಕೈಗಿತ್ತ. ಅವಳು ಅಚ್ಚರಿಗೊಳ್ಳಬಹುದೆಂದು ನಾನು ಅವಳ ಮುಖವನ್ನೇ ನೋಡುತ್ತಿದ್ದೆ. ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಅವಳು ನನ್ನನ್ನು ಬೇಲಿಯತ್ತ ಎಸೆಯುತ್ತ ಅವನತ್ತ ನೋಡಿ-ನಿನ್ನ ಪ್ರೀತಿ ಇಷ್ಟೇನಾ? ಬರೀ ಗುಲಾಬಿ ತಂದಿದೀಯಾ? ಇದನ್ನ ಕೊಟ್ರೆ ಮಸಾಲೆ ಸಿಗತ್ತಾ? ಇಲ್ಲ ಆಸ್ತಿ ಸಿಗತ್ತಾ? ಇದನ್ನ ಇಟ್ಕೊಂಡು ಏನ್ಮಾಡ್ಲಿ? ನೀನು ತುಂಬಾ ಕಂಜೂಸ್ ಅಂತ ನನಗೆ ಗೊತ್ತಿರ್‍ಲಿಲ್ಲ-ಎಂದಾಗ ನನ್ನ ಕೆನ್ನೆಗೆ ಎತ್ತಿ ಯಾರೋ ಬಾರಿಸಿದಂತಾಯಿತು. ಕೆಳಗೆ ಬಿದ್ದಿದ್ದಕ್ಕೆ ನನಗೆ ದುಃಖವಾಗಲಿಲ್ಲ, ಆದರೆ ಈ ಹುಡುಗಿ ನನ್ನ ಬೆಲೆಯನ್ನೇ ಕಳೆದುಬಿಟ್ಟಿದ್ದಳು. ನನ್ನ ಕಣ್ಣಲ್ಲೂ ನೀರು ಜಿನುಗಿತ್ತು. ಆದರೆ ನನ್ನ ಅಳಲನ್ನು ಕೇಳುವವರಾಗಲೀ, ನನ್ನತ್ತ ಸಹಾನುಭೂತಿಯಿಂದ ನೋಡುವವರಾಗಲೀ ಯಾರೂ ಇರಲಿಲ್ಲ. ಗಿಡದಲ್ಲಿ ಹಾಯಾಗಿದ್ದ ನನ್ನನ್ನು ಕಿತ್ತಿದ್ದಾದರೂ ಏಕೆ? ಈ ರೀತಿ ಅವಮಾನಿಸಲೆಂದೇ?
ಮಲ್ಲಿಗೆಯಾಗಿ ಅರಳಿ ಸಂಭ್ರಮಿಸುತ್ತಿದ್ದೆ. ನನ್ನ ಸೌಂದರ್ಯ ಮತ್ತು ಪರಿಮಳವೇ ಕುತ್ತಾಗಿ ಪರಿಣಮಿಸಿದ್ದವು. ಕಾಣದ ಕೈ ಕಿತ್ತು ಮಾಲೆ ಮಾಡಿ ಮಾರುಕಟ್ಟೆಗೆ ಸಾಗಿಸಿತ್ತು. ಅಂತೂ ನಾರಿಯ ಮುಡಿ ಸೇರಿದ್ದೆ. ಅವಳು ರೈಲಿನಲ್ಲಿ ಕಿಟಕಿಯ ಬದಿ ಕುಳಿತು ಯಾವುದೋ ಊರಿಗೆ ಹೊರಟಿದ್ದಳು. ಅವಳ ತಲೆಯಲ್ಲಿದ್ದ ನಾನೂ ಕಿಟಕಿಯ ಹೊರಗಿನ ದೃಶ್ಯಗಳನ್ನು ನೋಡುತ್ತ ಸಂಭ್ರಮಿಸುತ್ತಿದ್ದೆ. ಕೆಲವೇ ಗಂಟೆಗಳಲ್ಲಿ ಅವಳು ತನ್ನ ಚೀಲದಲ್ಲಿದ್ದ ಬಾಚಣಿಗೆಯನ್ನು ತೆಗೆದು ಕೆದರಿದ ಕೂದಲನ್ನು ಸರಿಪಡಿಸಿಕೊಳ್ಳತೊಡಗಿದಳು. ಅದಕ್ಕೂ ಮುನ್ನ ನನ್ನನ್ನು ತೆಗೆದು ಕಿಟಕಿಯಿಂದ ಹೊರಗೆ ಬಿಸಾಡಿದಳು. ನಾನು ಅವಳ ಈ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಗಿಡದ ಮೇಲೆ ಮೆರೆಯುತ್ತ ಸುಗಂಧವನ್ನು ಹರಡಬೇಕಿದ್ದ ನಾನು ಈ ರೀತಿ ಅನಾಥಳಂತೆ ಇನ್ನೂ ಉಸಿರಿರುವಾಗಲೇ ಹಳಿಗಳ ನಡುವೆ ಬಿದ್ದಿದ್ದೆ. ನನ್ನ ಕಂಬನಿಯ ಕಥೆಗಳನ್ನ ಯಾರಲ್ಲಿ ಹೇಳಿಕೊಳ್ಳಲಿ? ನೀವೇ ಹೇಳಿ.
-ಲಲಿತ ಎಸ್ ,ಸಕಲೇಶಪುರ
Very nice
ವಿಭಿನ್ನ ವಾಗಿದೆ ಬರಹ. ಮಾನುಷಿಕವಾದ ಭಾವನೆ ಗಳ ನ್ನು ಹೂವಿನ ಬದುಕಿಗೆ ಆರೋಪಿಸಿ ಹೆಣೆದ ಬಗೆ ಮೆಚ್ಚುಗೆ ಯಾಯಿತು
ಆಹಾ ಹೂವುಗಳ ಅಂತ ರಾಳದ ನೋವು ನಲಿವನ್ನು ಬಹಳ ಆಪ್ತವಾಗಿ ಲೇಖನ ದಲ್ಲಿ ಪಡಿಮೂಡಿಸಿರುವ ಪರಿ ಮನಕ್ಕೆ ಬಹಳ ಮುದ ತಂದಿತು ಧನ್ಯವಾದಗಳು ಗೆಳತಿ ಲಲಿತಾ
ಮನುಷ್ಯರಂತೆ ಆಲೋಚಿಸುತ್ತಾ, ‘ಮಾತಾಡಿದ’ ಹೂವಿನ ಸ್ವಗತ ಬಹಳ ಇಷ್ಟವಾಯಿತು..
ಅಮೋಘ ವಾದ ಪರಿಕಲ್ಪನೆ,, ಹೂವುಗಳು ನಮ್ಮೊಂದಿಗೆ ಮಾತಾಡುತ್ತಿವೆ ಎನ್ನುವಷ್ಟು ಅಪ್ತವಾಗಿತ್ತು ಬರಹ ,ಬರೆದವರಿಗೂ ,ಹೊಸ ರೀತಿಯ ಆಲೋಚನೆ ಮಾಡಿ
ಬರೆಸಿದ ಹೇಮಮಾಲಾ ಅವರಿಗೂ ಧನ್ಯವಾದ ಗಳು
ಸೊಗಸಾದ ಬರಹ!
ಹೂವನ್ನು ತಾನಾಗಿ ಬಿಂಬಿಸಿದ ಬರಹ. ಕೆಲವು ಕಷ್ಟ ಕೋಟಲೆಗೆ ತನ್ನನ್ನು ಹೋಲಿಸುವ ಮನೋಭೂಮಿಕೆ ಒಳ್ಳೆಯದು.
ಹೂವಿನೊಳಗಣ ಪರಕಾಯ ಪ್ರವೇಶದಿಂದಾದ ಅದ್ಭುತ ಅನುಭವಗಳು ಕಚಗುಳಿ ಇಟ್ಡಂತಿದ್ದರೂ ಮನವನ್ನು ಚಿಂತನೆಗೂ ಹಚ್ಚಿತು. ಚಂದದ ಲೇಖನ.
ನಾನಾ ಹೂವುಗಳ ಮನದ ಮಾತು ಬಹಳ ಸೊಗಸಾಗಿ ಮೂಡಿಬಂದಿದೆ. ಅವುಗಳಿಗೂ ಭಾವನೆಗಳಿವೆ ಎಂಬುದು ಕೂಡಾ ಅಷ್ಟೇ ಸತ್ಯವಾದರೂ ಮನುಷ್ಯ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಅಲ್ಲವೇ?…ಯಾಕೆಂದರೆ ಅವುಗಳಿಗೆ ಮಾತು ಬಾರದು…ಪ್ರಾಣಿಗಳಂತೆ ಮೂಕ!
Lalitha s
Thanks for your appreciating words.