ಒಂದು ಅಪೂರ್ಣ ಹೂ ಪುರಾಣ

Share Button

ಹೂಗಳ ಬಗ್ಗೆ ಬರೆಯುವಾಗ ನಾನು ರಂಜೆಯ ಹೂವಿನಿಂದಲೆ ಸುರುಮಾಡಬೇಕು. ಅದು ನನ್ನಬಾಲ್ಯದ ನೆನಪಿನೊಂದಿಗೆ ಬೆಸೆದಷ್ಟು ಬೇರೆ ಯಾವ ಹೂವೂ ಬೆಸೆದಿಲ್ಲ.ನಮ್ಮಮನೆಯ ಹಿಂದಿನ ಕಾಡಿನಲ್ಲಿ ಯಥೇಚ್ಛ ಸುರಿಯುತ್ತಿದ್ದ ಈ ಪರಿಮಳದ ಹೂಗಳನ್ನು ಆಯ್ದು ಮಾಲೆ ಮಾಡಿ ಮುಡಿಯುವುದಕ್ಕೆ ನಾವು ಬೆಳ್ಳಂಬೆಳಗ್ಗೇ ಎದ್ದು ಹೋಗುತ್ತಿದ್ದೆವು.ಬಿಳಿಯೆಂದರೆ ಬಿಳಿಯಲ್ಲ. ಕೆನೆಯೆನ್ನಬಹುದಾದ ಆ ಹೂಗಳನ್ನು ಕೊಯ್ಯುವುದಲ್ಲ; ಹೆಕ್ಕುವುದು. ರಾತ್ರಿಹೊತ್ತು ಅರಳಿದ ಹೂಗಳು ಪರಿಮಳವನ್ನು ಯಥೇಚ್ಛ ಹರಡಿ ಬೆಳಗೆ ಇನ್ನೂ ಉಳಿದ ಪರಿಮಳವನ್ನು ಧಾರಾಳ ಸೂಸುತ್ತ ಮರದಡಿಯಲ್ಲಿ ಕಣ್ಣು ಮಿಟುಕಿಸುತ್ತ ಕೈಮಾಡಿ ಕರೆಯುತ್ತಿದ್ದವು.ಆ ಹೂಗಳನ್ನು ಮಗುವಿನಂತೆ ಜೋಪಾನ ಬೊಗಸೆ ತುಂಬ ಆರಿಸಿ ಮನೆಗೆ ಬಂದು ಅದನ್ನು ಮತ್ತೆ ಪೋಣಿಸುವ ಸಂಭ್ರಮ.ಸೂಜಿ-ನೂಲಿನಿಂದಲ್ಲ.ಮುಳಿಕಡ್ಡಿಯಲ್ಲಿ ಸಣ್ಣದೊಂದು ತೂತನ್ನು ಕೈಯಿಂದಲೇ ಮಾಡಿ ಆ ತೂತಿನಿಂದ ಸಪೂರದ ಬಾಳೆಯ ನಾರನ್ನು ದಾರದಂತೆ ಇಳಿಬಿಟ್ಟು ಪೋಣಿಸುವ ಕಾರ್ಯಜರಗುತ್ತಿತ್ತು. ನಿಜ ಹೇಳಬೇಕೆಂದರೆ ಎಳೆಯ ಪ್ರಾಯದಲ್ಲೆ ವಿಧವೆಯಾಗಿ ಕೇಶಮುಂಡನ ಮಾಡಿಸಿಕೊಂಡಿದ್ದ ನನ್ನ ಅಜ್ಜಿಗೆ ಈ ಕಾಯಕ ಅತ್ಯಂತ ಪ್ರಿಯವಾದುದಾಗಿತ್ತು.ಕಣ್ಣು ಕಾಣಿಸದಿದ್ದರೂ ಅಭ್ಯಾಸಬಲದಿಂದ ಅವರು ಪೋಣಿಸುತ್ತಿದ್ದರು. ಹಾಗೆ ಹೂಗಳನ್ನು ಪೋಣಿಸುವಾಗ ಅವರ ಮನದಲ್ಲಿ ಅದೆಷ್ಟು ನೆನಪಿನ ಮೆರವಣಿಗೆಯೋ. ಅದೆಲ್ಲ ಆಗ ನಮಗೆ ಗೊತ್ತಾಗುತ್ತಿರಲಿಲ್ಲ.

ಅಜ್ಜಿ ಪೋಣಿಸಿದ ಮಾಲೆಗಳನ್ನು ಮುಡಿದು ಶಾಲೆಗೆ ಹೋದರೆ ತರಗತಿ ಇಡೀ ಘಮಘಮ.ಸಂಜೆ ಮನೆಗೆ ಹಿಂತಿರುಗುವಾಗ ಮಾಲೆ ಬಾಡಿ ಬಸವಳಿದರೂ ಪರಿಮಳದ ಭಂಡಾರ ಬರಿದಾಗುತ್ತಿದ್ದಿಲ್ಲ. ಆದರೆ ಸುರಗಿಯ ಹೂವಿನಂತೆ ಅದನ್ನು ಮತ್ತೆ ಮುಡಿಯುವ ಪ್ರಮೇಯವಿರುತ್ತಿರಲಿಲ್ಲ. ಯಾಕೆಂದರೆ ಮತ್ತೆ ಹೊಚ್ಚಹೊಸ ಹೂಗಳು ನಮ್ಮನ್ನು ಕಾಡಿಗೆ ಬರಮಾಡಿಕೊಳ್ಳುತ್ತಿದ್ದವು. ನಮ್ಮ ಕ್ಲಾಸ್ ಟೀಚರಿಗೆ, ಗೆಳತಿಯರಿಗೆ ಕೂಡ ಹೂಮಾಲೆ ತೆಕ್ಕೊಂಡು ಹೋಗಿ ಕೊಡುವುದರಲ್ಲೂ ಏನೋ ಒಂದು ಖುಷಿ. ನಮ್ಮ ಶಾಲೆಯ ಗಿರಿಜಾ ಟೀಚರ ಮದುವೆಗೆ ನನ್ನ ಪುಟ್ಟಕ್ಕನೇ ರಂಜೆಯ ಮಾಲೆಯನ್ನು ಕೊಟ್ಟದ್ದೆಂದು ಅವಳು ಹೇಳುತ್ತಿದ್ದಳು. ಅವರ ಸಂಪ್ರದಾಯದಂತೆ ವಧೂವರರು ಹಾರ ವಿನಿಮಯ ಮಾಡಲು ರಂಜೆಯ ಹೂವಿನ ಹಾರವೇ ಆಗಬೇಕಂತೆ. ನಮ್ಮ ಸಂಪ್ರದಾಯದಲ್ಲಿ ಅಡಕೆಯ ಹಿಂಗಾರದ ಹೂವಿನ ಮಾಲೆಗಳು ಅದಕ್ಕಾಗಿ ಸಿದ್ಧವಾಗುತ್ತಿದ್ದವು. ಈ ಮಾಲೆಯನ್ನು ಹೆಣೆಯುವುದೂ ಒಂದು ಕಲೆಯೇ. ಕಲಾತ್ಮಕತೆಯಿಂದ ಹೆಣೆದ ಹಿಂಗಾರದ ಮಾಲೆ ಮನೋಹರವಾಗಿ ಕಾಣುತ್ತದೆ.ಈಗ ಅದೆ‌ಉ ಬಹುಮಟ್ಟಿಗೆ ಬದಲಾಗಿದೆ. ಅದಿರಲಿ.ಈ ರಂಜೆಯ ಹೂವಿನ ನೆನಪು ನನ್ನನ್ನು ಕಾಡಿ ‘ರಂಜೆಯ ಹೂಗಳು ಮತ್ತು ಪಾತಕ್ಕನ ಲಂಗ’ ಎಂಬ ಶೀರ್ಷಿಕೆಯಲ್ಲಿ ಒಂದು ಕವಿತೆಯನ್ನೂ ಬರೆದಿದ್ದೆ. ರಂಜೆಗೆ ‘ಬಕುಲ’ವೆಂದೂ ಕರೆಯುತ್ತಾರೆಂದು ನಾನು ಆಮೇಲೆ ತಿಳಿದುಕೊಂಡೆ.

ಇನ್ನು ಒಣಗಿ ಎಸೆದರೂ ಪರಿಮಳವನ್ನು ಬಿಟ್ಟುಕೊಡದ ಕೇದಿಗೆಯ ವಿಚಾರಕ್ಕೆ ಬಂದರೆ ಅದರ ಬಂಗಾರದ ಬಣ್ಣ ಮಾತ್ರವಲ್ಲ ವಿಶೇಷ ಪರಿಮಳ ಮೂಗನ್ನು ಅರಳಿಸುತ್ತಿತ್ತು ಹಾಗಂತ ಅದು ಯಾವಾಗಂದರೆ ಆವಾಗ ಸಿಗುವ ಹೂವಲ್ಲ. ಮರವು ಅದನ್ನು ‘ಹಡೆಯುವ ಮುಹೂರ್ತಕ್ಕೆ ನಾವು ಕಾಯಬೇಕಿತ್ತು. ಮುಂಗಾರು ಮಳೆಯ ಗುಡುಗಿಗೆ ಅದು ಹಡೆಯುತ್ತದೆ ಎಂದು ನಂಬಿಕೆ.ನಾವು ಬಾಲ್ಯದಲ್ಲಿ ಹೇಳುತ್ತಿದ್ದ ಒಗಟುಗಳಲ್ಲಿ ಒಂದು ‘ ಆಚ ಕರೆಯಲ್ಲಿ ಬೊಡ್ಡಿ ಹೆತ್ತರೆ ಈಚಕರೆಯಲ್ಲಿ ನಾರುತ್ತದೆ.’ ಅದರ ಉತ್ತರ ಗೊತ್ತೇ‌ಇದೆ -ಕೇದಿಗೆ. ಪರಿಮಳವನ್ನು ‘ನಾರುವುದು’ ಎಂದು ಹೇಳುವುದು ಒಗಟುಗಳ ವ್ಯಂಗ್ಯದ ಒಂದು ರೀತಿ. ಅಷ್ಟೆ. ಆದರೆ ಅದರಲ್ಲಿ ಹೆರುವ ಕ್ರಿಯೆಯ ಹೋಲಿಕೆ ಉಂಟಲ್ಲ. ಅದು ಕೇದಿಗೆ ಹೂವಿಗೆ ಅಪ್ಪಟವಾಗಿ ಹೊಂದಿಕೊಳ್ಳುತ್ತದೆ. ಈ ಕೇದಿಗೆಯನ್ನು ಬಿಡಿಸಿ ಹೂಮುಡಿಯುವ ಮನೆಮಂದಿಗೆ ಹಂಚುವಾಗ ಪುಟ್ಟ ಮತ್ತು ಮಧ್ಯಮ ಗಾತ್ರದ ಕೇದಿಗೆಗಾಗಿ ಒಂದು ಸಣ್ಣ ಪೈ ಪೋಟಿ ಇರುತ್ತಿತ್ತು. ಪುಟ್ಟಪುಟ್ಟ ಕೇದಿಗೆಗಳನ್ನೊಳಗೊಂಡ ‘ಕುಂಡಿಗೆ’ ಎಂದು ಕರೆಯಿಸಿಕೊಳ್ಳುವ ಸಣ್ಣಗೊಂಚಲಿನಂತಿರುವ ಭಾಗ ಹೆಚ್ಚಾಗಿ ಕಿರಿಯವರ ಜಡೆಯನ್ನೇರುತ್ತಿತ್ತು. ಕಿರಿಯರಲ್ಲಿಯೇ ಅತೃಪ್ತರಿಗೆ ಮುಂದಿನ ಸರದಿಗೆ ನೀಡುವ ಭರವಸೆ ಹಿರಿಯರಿಂದ ಸಿಗುತ್ತಿತ್ತು. ಎಸಳು ಕೇದಿಗೆಯನ್ನು ಮಡಚಿ ಅಥವಾ ಬಗ್ಗಿಸಿ ಚೂಪಾದ ತೆಂಗಿನ ಗರಿಯ ಕಡ್ಡಿಯನ್ನು ಅಥವಾ ಕಾರೆಮುಳ್ಳನ್ನು ಚುಚ್ಚಿ ಅದನ್ನು ಮುಡಿಗೆ ಏರಿಸಿಕೊಳ್ಳುವದರಲ್ಲಿ ಒಂದು ಸಂಭ್ರಮ.’

‘ಕನಕಾಂಬರವೆಂಬ ಸುಂದರ ಹೆಸರಿನಿಂದ ಘಟ್ಟದ ಮೇಲೆ ಕರೆಯಿಸಿಕೊಳ್ಳುವ ಅಬ್ಬಲ್ಲಿಗೆಯ ಮಾಲೆಯಂತೂ ಅಂದಿನ ದಿನಗಳಲ್ಲಿ ಹುಡುಗಿಯರ ಜಡೆಗಳಲ್ಲಿ ಸಾಮಾನ್ಯ..ಶಾಲಾ ವಾರ್ಷಿಕೋತ್ಸವ ಬಂತೆಂದರೆ ಡಾನ್ಸ್ , ಕೋಲಾಟ ಮುಂತಾದ ಕಾರ್ಯಕ್ರಮಗಳಲ್ಲಿ ಈ ಅಬ್ಬಲ್ಲಿಗೆಯ ಜಲ್ಲಿ ಇದ್ದೇ ಇರುತ್ತಿತ್ತು. ಊರಿನ ಜಾತ್ರೆ, ಅಥವಾ ಬಂಧುಗಳ ಮನೆಯಲ್ಲಿ ಕಾರ್ಯಕ್ರಮ ಇದೆಯೆಂದರೆ ಆ ದಿನ ಮುಡಿಯಬೇಕಾದ ಹೂವಿನ ಅಟ್ಟಣೆ ಹಿಂದಿನ ದಿನವೇ ಶುರುವಾಗುತ್ತಿತ್ತು. ಗೆಂಟಿಗೆ ಮಾಲೆ, ಅಬ್ಬಲ್ಲಿಗೆ ಮಾಲೆ, ಮಲ್ಲಿಗೆಯ ಸೀಸನುಗಳಲ್ಲಿ ಮಲ್ಲಿಗೆಯ ಮಾಲೆ.- ಇವುಗಳೆಲ್ಲ ಸಿದ್ಧವಾಗಿ ರಾತ್ರಿ ಅಂಗಳದಲ್ಲಿ ಇಬ್ಬನಿಗೆ ತೆರೆದಿಟ್ಟು ಮರುದಿನ ಮುಗುಳುಮುಗುಳಾಗಿ ನಗುವ ಅವುಗಳನ್ನು ಕೊಂಡಾಟದಿಂದ ಮುಡಿದುಕೊಳ್ಳುವ ಖುಷಿಯೋ ಖುಷಿ.ನ ನ್ನ ಸೋದರತ್ತೆಯಂದಿರ ಕಾಲಕ್ಕೆ ತೋಡಿನ ಬದಿಯಲ್ಲಿ ಎಲ್ಲ ಧಾರಾಳ ಬೆಳೆಯುತ್ತಿದ್ದ ‘ಲಂಬಾಸು’ ‘ಲಂಬನ’ ಎಂದೆಲ್ಲ ಕರೆಯಿಸಿಕೊಳ್ಳುವ ಗಿಡಗಳಲ್ಲಿ ಅರಳುತ್ತಿದ್ದ ಹಳದಿ ಹೂಗಳನ್ನು ಮಾಲೆಮಡಿ ಮುಡಿಯುತ್ತಿದ್ದರಂತೆ .ಹಿಂದಿನ ದಿನವೇ ಮೊಗ್ಗುಗಳನ್ನು ಸಂಗ್ರಹಿಸಿ ಮಾಲೆ ಮಾಡಿ ಅವು ಕೊಡೆಯಂತೆ ಅಗಲವಾಗಿ ಅರಳುವುದನ್ನು ತಪ್ಪಿಸಲು ಬೀಸುವ ಕಲ್ಲುಗಳಮಧ್ಯೆ ಇಡುತ್ತಿದ್ದರಂತೆ. ಅವರ ಕಿಲಾಡಿ ತಮ್ಮನೊಬ್ಬ ಕೆಲವೊಮ್ಮೆ ಹೀಗೆ ಇರಿಸಿದ ಕಲ್ಲುಗಳನ್ನು ತಿರುಗಿಸಿ ಹೂಗಳ ಮಾಲೆಗಳನ್ನು ಅಪ್ಪಚ್ಚಿಯಾಗಿಸಿ ಗೋಳುಹೊಯ್ದುಕೊಳ್ಳುತ್ತಿದ್ದನಂತೆ.ನಮ್ಮ ತಲೆಮಾರಿನಲ್ಲಿ ಆ ಹೂವು, ಮುಡಿಯುವ ಹೂಗಳ ಲಿಸ್ಟಿನಿಂದ ಬಿದ್ದುಹೋಯ್ತು. ಹಾಗೆಯೇ ಮುಂದೆ ದಾಸವಾಳ, ಅಬ್ಬಲ್ಲಿಗೆ,ಚಿಕ್ಕಗಸೆ, ಸುರುಳಿ, ಮರಮಲ್ಲಿಗೆ, ಗೋರಟೆ, ನಾವು ‘ಮಂಜಟ್ಟಿ’ ಎಂದು ಕರೆಯುತ್ತಿದ್ದ ನಂದಿಬಟ್ಟಲು, ಮಂದಾರ- ಹೀಗೆ ಒಂದೊಂದೇ ಹೂಗಳು ಡಿಲಿಟ್ ಆಗಿ ಈಗ ಗುಲಾಬಿ ಅಥವಾ ಮಲ್ಲಿಗೆಯನ್ನು ಮಾತ್ರ ಮುಡಿಯುವವರ ಸಂಖ್ಯೆ ಜಾಸ್ತಿ ಇದೆ. ಇರವಂತಿಗೆ ಸೇವಂತಿಗೆಗಳು ಕೂಡ ಮುಡಿಯೇರುವ ಮಾನ್ಯತೆಯನ್ನು ಬಹುಪಾಲು ಕಳೆದುಕೊಂಡು ಖಿನ್ನವಾಗಿವೆ. ಅವೇನಿದ್ದರೂ ಡೆಕೊರೆಶನಿಗೆ ಹೊರತು ನಮ್ಮ ಅಲಂಕಾರಕ್ಕಾಗಿ ಅಲ್ಲ ಎಂಬ . ಅಸಡ್ಡೆ ಈಗ ಹೆಚ್ಚಾಗಿದೆ.ಪೂಜೆಯ ಪ್ರಸಾದವೆಂದು ಕೊಟ್ಟರೂ ಅವನ್ನೆಲ್ಲ ಮುಡಿಯುವ ಆಸಕ್ತಿ ಹೆಚ್ಚಿನವರಿಗಿಲ್ಲ. ನವನವೀನ ಕೇಶವಿನ್ಯಾಸದಲ್ಲಿ ಹೂಗಳ ಅಲಂಕಾರಕ್ಕೆ ಸ್ಥಾನವಿಲ್ಲ.

ಹತ್ತು ಮೂವತ್ತು ವರ್ಷಗಳ ಹಿಂದೆ ನಾನು ಮೈಸೂರಿನ ಮಾನಸ ಗಂಗೋತ್ರಿ ಲೇಡೀಸ್ ಹಾಸ್ಟೆಲಿನಲ್ಲಿ ಎರಡುವಾರ ತಂಗಬೇಕಾದ ಸಂದರ್ಭ ಬಂದಿತ್ತು. ಅಲ್ಲಿ ಬೆಳಗ್ಗೆ ‘ಹೂವ ಹೂವ’ ಎಂದು . ಕರೆಯುತ್ತಿದ್ದ ಹೂವಾಡಗಿತ್ತಿಯ ಮಧುರ ಧ್ವನಿ ನನ್ನನ್ನು ಸೆಳೆಯುತ್ತಿತ್ತು. ಆದರೆ ಹೂವ ಮುಡಿಯುವವರ ಸಂಖ್ಯೆ ಆಗಲೇ ಕುಸಿಯತೊಡಗಿತ್ತು. ಕೆಲವು ಹುಡುಗಿಯರು ಮಾತ್ರ ತಮ್ಮ ತಮ್ಮ ಕೋಣೆಯೊಳಗೆ ಇರಿಸಿಕೊಂಡ ಆರಾಧ್ಯ ದೇವರ ಭಾವಚಿತ್ರಕ್ಕೆ ಮಾಲೆಯನ್ನು ಅರ್ಪಿಸಲು ಹೂ ಕೊಳ್ಳುತ್ತಿದ್ರರು. ಹೂವಾಡಗಿತ್ತಿಯ ಬುಟ್ಟಿಯಲ್ಲಿ ಮಾರಾಟವಾಗದ ಹೂಗಳು ಇನ್ನೂ ಇದ್ದರೂ. ನಿರಾಶೆಗೊಳ್ಳದೆ ನಗು ಅರಳುತ್ತಿದ್ದ ಅವಳ ಮೊಗದದೊಂದಿಗೆ ಹೂಗಳು ಪೈಪೋಟಿಯನ್ನು ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಆಗ ನಾನೊಂದು ಕವಿತೆಯನ್ನು ಬರೆದಿದ್ದೆ. ( ‘ಹೂವಾಡಗಿತ್ತಿ ನೀಲಮ್ಮ’).

ಹಿಂದೆಲ್ಲ ಹೂಗಳೆಂದರೆ ದೇವರ ಪೂಜೆಗೆ ಮತ್ತು ಮುಡಿಯುವುದಕ್ಕಾಗಿ- ಎಂದಷ್ಟೇ ತಿಳಿಯುತ್ತಿದ್ದ ಕಾಲವಾಗಿತ್ತು.ಅದೂ ವಿಶೇಷವಾಗಿ ನಮ್ಮ ಹಳ್ಳಿಗಳಲ್ಲಿ. ನೋಡಿ ಆಸ್ವಾದಿಸುವ ಮನೋಭಾವ ಕಡಿಮೆಯೆಂದೇ ಹೇಳಬಹುದು. ಕೆಲವೊಂದು ಹೂಗಳು ಬಿಡಿಬಿಡಿಯಾಗಿ ತಲೆಗೇರಿದರೆ ಇನ್ನು ಕೆಲವು ಹೆಣೆದೋ ಪೋಣಿಸಿಯೋ ಮಾಲೆಯಾಗಿ ಮುಡಿಯನ್ನಲಂಕರಿಸುತ್ತಿದ್ದವು. ಅಬ್ಬಲಿಗೆಯಂತಹ ಕೆಲವು ಹೂಗಳು ಪೂಜೆಗೆ ನಿಷಿದ್ಧವಾಗಿದ್ದವು.ಕಿಸ್ಕಾರ ಅಥವಾ ಕೇಪುಳ ಹೂ ದೇವರಿಗೆ ಅರ್ಪಿತವಾದರೂ, ಬಿಡಿಹೂಗಳನ್ನು ಪ್ರಸಾದವಾಗಿ ಸ್ವೀಕರಿಸುತ್ತಿದ್ದರೂ ಮಾಲೆಮಾಡಿ ಮುಡಿದುಕೊಳ್ಳುವ ರೂಢಿ ಇರಲಿಲ್ಲ .ಪಾರಿಜಾತವು ತನ್ನ ಬಣ್ಣ ಮತ್ತು ಮೋಹಕ ಪರಿಮಳದಿಂದ ಎಷ್ಟೇ ಆಕರ್ಷಿಸಿದರೂ ಅದರ ಕೋಮಲತೆಯಿಂದಾಗಿ ಮಾಲೆ ಮಾಡಿ ಮುಡಿದುಕೊಳ್ಳಲು ದಕ್ಕುತ್ತಿರಲಿಲ್ಲ. ಹೂಗಳ ಕುರಿತಾದ ಈ ಅಪೂರ್ಣಬರಹವನ್ನು ಮುಗಿಸುವ ಮೊದಲು ಒಂದು ಸ್ವಾರಸ್ಯದ ಮಾಹಿತಿಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಬಹುಶ: ಹೆಣ್ಣುಮಕ್ಕಳಂತೆ ತುಂಬುತುರುಬಲ್ಲವಾದರೂ ಶಿಖೆ ಅಥವಾ ಪಿಳ್ಳೆಜುಟ್ಟನ್ನು ಹಿಂದಿನ ಕಾಲದಲ್ಲಿ ಅನೇಕ ಗಂಡಸರೂ ಇಟ್ಟುಕೊಳ್ಳುತ್ತಿದ್ದರು.ಅವರಲ್ಲಿ ಕೆಲವರು ಹೂಗಳನ್ನೂ ಮುಡಿಯುತ್ತಿದ್ದರಂತೆ.ಅದಕ್ಕೆ ಸಂಬಂಧಿಸಿದಂತೆ ಕೆಲವು ಸ್ವಾರಸ್ಯಕರ ಕತೆಗಳನ್ನು ನನ್ನ ಬಾಲ್ಯದಲ್ಲಿ ಕೇಳಿದ ಅಸ್ಪಷ್ಟ ನೆನಪಿದೆ. ಅಂತಹ ಕತೆಗಳು ನಿಮ್ಮಲ್ಲಿ ಕೆಲವರಲ್ಲೂ ಇರಬಹುದು.ಅವರಿಗೆ ನಾನು ಈ ರಿಲೇಕೋಲನ್ನು ದಾಟಿಸುತ್ತ ವಿರಮಿಸುತ್ತೇನೆ.

ಮಹೇಶ್ವರಿ.ಯು

12 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. Anonymous says:

    Renje, parijatha, kedage parimala Ella ondagi banthu..

  3. ನಾಗರತ್ನ ಬಿ. ಅರ್. says:

    ಹೂಗಳೊಡನೆ ನಿಮ್ಮ ಒಡನಾಟ ಅವುಗಳ ಬೆಳೆಸುವಿಕೆ..ಬಳಸುವಿಕೆ ನಂಬಿಕೆ ಆಚರಣೆಗಳನ್ನು ಆಗಿನಿಂದ ಈಗಿನವರಿಗೆ… ಚಿತ್ರಗಳ ಮೂಲಕ ಅನಾವರಣಗೊಳಿಸಿರವ ನಿಮ್ಮ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೇಡಂ.

  4. sudha says:

    parimalada lekhana

  5. Dr Krishnaprabha says:

    ನಾನೂ ಎರಡು ವರ್ಷದ ಹಿಂದೆ, ರೆಂಜೆಹೂವಿನ ಮಾಲೆಯನ್ನು ವಾಟ್ಸಾಪ್ ಸ್ಟೇಟಸಿನಲ್ಲಿ ಹಂಚಿಕೊಂಡಾಗ, ಹಲವರು ಪ್ರತಿಕ್ರಿಯೆ ನೀಡಿದ ವಿಷಯದ ಕುರಿತು ಸುರಹೊನ್ನೆಯಲ್ಲಿ ಒಂದು ಲೇಖನ ಬರೆದಿದ್ದೆ.
    ಗಂಡಸರು ಅವರ ಜುಟ್ಟಿಗೆ ಹೂವು ಮುಡಿಯುತ್ತಿದ್ದರು ಅನ್ನುವುದಕ್ಕೆ ನನ್ನ ತಂದೆಯವರೇ ಉದಾಹರಣೆ. ತುಂಬುಕೂದಲಿನ ಜುಟ್ಟು ಅವರದು. ಮಲ್ಲಿಗೆ ಹೂಗಳ ಸಮಯದಲ್ಲಿ ಮಲ್ಲಿಗೆ ಮಾಲೆ ನನಗಿಲ್ಲವೇ ಅಂತ ಕೇಳುವರೆಂದು, ಅಮ್ಮ ಅವರಿಗಾಗಿ ಪುಟ್ಟ ಮಲ್ಲಿಗೆಯ ಮಾಲೆ ಕಟ್ಟುತ್ತಿದ್ದರು. ಎರಡು ವರ್ಷದ ಹಿಂದೆ ನಮ್ಮನ್ನಗಲಿದರು.

  6. Anonymous says:

    ಹೂಗಳ ಹೊರತು ನಮ್ಮ ಬಾಲ್ಯ ಇಲ್ಲವೇ ಇಲ್ಲ ಎನ್ನಿಸುವಷ್ಟು ಹಾಸುಹೊಕ್ಕು ಹೂಗಳ ಬಳಕೆ .ನಿಮ್ಮ ಅನುಭವದ ಅನಾವರಣ ತುಂಬ ಸುಂದರವಾಗಿ ಮಾಡಿದ್ದೀರಿ ಸೊಗಸಾದ ಬರಹ .

    ಸುಜಾತಾ ರವೀಶ್

  7. Hema, hemamalab@gmail.com says:

    ಆಪ್ತ ಬರಹ. ನಾವೂ ಬಾಲ್ಯದಲ್ಲಿ ರೆಂಜೆ, ಸುರಗಿ, ಕೇದಗೆ , ಸುರುಳಿ, ಗೆಂಟಿಗೆ…ಇತ್ಯಾದಿ ಹೂಗಳನ್ನು ಮಾಲೆ ಕಟ್ಟಿ ಮುಡಿಯುತ್ತಿದ್ದೆವು. ಮನೆಯಲ್ಲಿ ಆಧುನಿಕತೆ ಹಾಗೂ ಕರೆಂಟ್ ಇಲ್ಲದ ಆ ಕಾಲದಲ್ಲಿ ಗುಡ್ಡ-ತೋಟ ಸುತ್ತುತ್ತಾ ಸಿಕ್ಕಿದ ಕಾಡುಹೂವು ಆರಿಸುವುದು, ರೆಂಜ, ಕುಂಟಾಲ, ನೇರಳೆ, ಕೇಪಳ ಮೊದಲಾದ ಕಾಡುಹಣ್ಣು ತಿನ್ನುವುದು ….ಹೀಗೆ ಬೇಸಗೆ ರಜೆ ಸಮಯದಲ್ಲಿ ಪ್ರಕೃತಿಯಲ್ಲಿ ನಮ್ಮ ‘ಸಮ್ಮರ್ ಕ್ಯಾಂಪ್’ ಅಡ್ಡಿಯಿಲ್ಲದೆ ಸಾಗುತ್ತಿತ್ತು.

  8. padmini says:

    ಹೂಗಳೊಡನೆ ಒಡನಾಟ ಚೆನ್ನಾಗಿದೆ.

  9. ಶಂಕರಿ ಶರ್ಮ says:

    ಬಕುಳದ ಹೂವಿನ ನರುಗಂಪನ್ನು ಹರಡಿಸುತ್ತಾ, ಕೇದಿಗೆ ಘಮಲು ತಲೆಗೇರಿಸುತ್ತಾ,, ಅಬ್ಬಲಿಗೆ, ಮಲ್ಲಿಗೆ ಮಾಲೆಗಳ ಜಲ್ಲಿಯನ್ನು ಬಿಟ್ಟು ಸಿಂಗರಿಸಿದ ಸೊಗಸಾದ ಲೇಖನವು ನಮ್ಮೆಲ್ಲರ ಮುಖಗಳಲ್ಲೂ ನಗು ಹೂವನ್ನು ಅರಳಿಸಿತು…ಸೊಗಸಾದ ಹೂ ಮಾಲೆಗೆ ಧನ್ಯವಾದಗಳು ಮಹೇಶ್ವರಿ ಮೇಡಂ.

  10. ಮಹೇಶ್ವರಿ ಯು says:

    ಧನ್ಯವಾದಗಳು ನನ್ನೆಲ್ಲ ಸೋದರಿ ಯರಿಗೂ. ವಿಶೇಷವಾಗಿ ಈ ಬರಹ ರೂಪಕ್ಕೆ ಪ್ರೇರಣೆ ನೀಡಿದ ಹೇಮಮಾಲಾ ಅವರಿಗೆ ಕೃತಜ್ಞತೆ ಗಳು

  11. Savithri bhat says:

    ಹೂವಿನಷ್ಟೇ ಸೊಗಸಾದ ಲೇಖನ ಮನಕ್ಕೆ ಮುದ ನೀಡಿತು

  12. Padma Anand says:

    ಹೂವಿನೊಂದಿಗಿನ ಹೂಮನದ ಒಡನಾಟದ ನಿರೂಪಣೆ ಹೂವಿಷ್ಟೇ ನವಿರಾಗಿ ಮನಕೆ ಮುದ ನೀಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: