ಸ್ಮಾರ್ಟ್ ಫೋನಾಯಣ…

Share Button


ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್,  ವಾಟ್ಸಾಪ್, ಅಂತೆಲ್ಲ ಬ್ಯುಸಿ ಆಗಿರುವುದನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ ಉರಿಯೆದ್ದು, ಅದು ನನ್ನನ್ನು ಸುಟ್ಟು ಮುಗಿಸುವ ಮುನ್ನ ನಾನೂ ಒಂದು ಸ್ಮಾರ್ಟ್ಫೋನ್ ಖರೀದಿಸಿ ಸ್ಮಾರ್ಟ್ ಆಗಲು ನಿರ್ಧರಿಸಿದೆ.ಅದರಂತೆ ಒಂದು ಶುಭದಿನ, ಅಂದರೆ ನನ್ನ ಹುಟ್ಟುಹಬ್ಬದ ದಿನ ಮೊಬೈಲು ಮಾರುವ ಅಂಗಡಿಯೊಂದಕ್ಕೆ ತೆರಳಿ ನನ್ನ ಬಜೆಟ್ ಗೆ ಒಗ್ಗುವ ಒಂದು ಸ್ಮಾರ್ಟ್ಫೋನ್ ಖರೀದಿಸಿ ನನಗೆ ನಾನೇ ಉಡುಗೊರೆ ಕೊಟ್ಟುಕೊಂಡು ಬೀಗುತ್ತಾ ಮನೆಗೆ ಬಂದೆ.

ಮನೆಗೆ ತಂದ ಬಳಿಕ ಹಳೆಯ ಮಾಮೂಲಿ ಚಿಕ್ಕ ಡಬ್ಬಾ ಮೊಬೈಲ್ ನಿಂದ ಸಿಂ ಕಾರ್ಡ್ ಹೊರ ತೆಗೆದು, ಹೊಸ ಫೋನ್ ಗೆ ಅಳವಡಿಕೆಯಾಗಲು ಸುಲಭವಾಗುವಂತೆ ಆ ಸಿಮ್ ಕತ್ತರಿಸಿ ಅಳವಡಿಸಲು ಒಂದೆರಡು ದಿನಗಳೇ ಆದವು. ನಂತರ ಬಳಸಲು ಪ್ರಾರಂಭಿಸಿದಾಗ ಅದರ ವಿರಾಟ್ ಸಾಮರ್ಥ್ಯದ ಅರಿವಾಗಿ ಈ ದೈತ್ಯನನ್ನು ಪಳಗಿಸಿ ಹೇಗಪ್ಪ ಕೆಲಸಕ್ಕೆ ಹಚ್ಚುವುದು ಎನ್ನುವುದು ತೋಚದೆ ದಂಗಾದೆ.ಆಮೇಲೆ ಹೆಂಗೋ ಏನೋ ಕಂಡ ಕಂಡ ಲೋಗೋಗಳನ್ನೆಲ್ಲ ತೋರುಬೆರಳಿನಿಂದ ಸ್ಪರ್ಶಿಸುತ್ತಾ ಅವು ತೋರಿಸಿದ ಮಾರ್ಗದಲ್ಲಿ ಚೆಲ್ಲಾಪಿಲ್ಲಿಯಾಗಿ  ಸಾಗಿ, ಅಂತೂ ಇಂತೂ ಫೋನ್ ನಂಬರ್ ಗಳನ್ನು ಸೇವ್ ಮಾಡುವುದು, ಫೇಸ್ಬುಕ್ ವಾಟ್ಸಾಪ್ ಗಳನ್ನು ತೆರೆಯುವುದು ಮುಂತಾದ್ದನ್ನೆಲ್ಲ ಕಷ್ಟಪಟ್ಟು ಕಲಿತೆ.

ನನ್ನ ಪಾಡನ್ನೆಲ್ಲ ನೋಡುತ್ತಿದ್ದ ಐದನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗ ಒಂದು ದಿನ ನನ್ನ ಬಳಿ ಬಂದು”ಅಮ್ಮ ನಿನ್ನ ಫೋನ್ ಕೊಡಿಲ್ಲಿ”ಎಂದು ಹೇಳಿ ಚಕಚಕನೆ ನನ್ನ ಫೋನ್ ಏನೆಲ್ಲಾ  ಕಾರ್ಯಗಳನ್ನು ಮಾಡಬಲ್ಲದು, ಎಷ್ಟೆಲ್ಲಾ ಆ್ಯಪ್ ಗಳಿವೆ, ಅವುಗಳನ್ನೆಲ್ಲ ಬಳಸುವುದು ಹೇಗೆ ,ಎಂದೆಲ್ಲಾ ಹೇಳಿಕೊಟ್ಟ.
“ಅಬ್ಬಾ! ಅಂತೂ ಇಂತೂ ಇದನ್ನು ಪಳಗಿಸಿದೆನಲ್ಲ”ಎನ್ನುವ ಖುಷಿಯಲ್ಲಿ “ಥ್ಯಾಂಕ್ಯೂ ಮಗನೇ ‘ ಎಂದು ನನ್ನ ಮಗನಿಗೆ ಹೇಳಿದರೆ, ಆತ ಹಲ್ಲುಕಿರಿಯುತ್ತಾ “ಆಪರೇಟ್ ಮಾಡಕ್ಕೆ ಬರದಿದ್ದ ಮೇಲೆ ಸ್ಮಾರ್ಟ ಫೋನ್ ಬೇರೆ ಬೇಕಿತ್ತೇನಮ್ಮ? ಒಂದು ಒಳ್ಳೆ ಸೀರೆ ತಗೊಂಡು ಸುಮ್ಮನೆ ಇರಬಾರದಿತ್ತಾ”ಎಂದು ಹೇಳಿ, ನಾನು “ಏಯ್, ನಿನ್ನಾ” ಎಂದು ಕೈಯೆತ್ತುವ ಮುನ್ನ ಅಲ್ಲಿಂದ ಓಡಿಹೋದ.

ಏನೇ ಹೇಳಿ ಮಕ್ಕಳು ವೇಗವಾಗಿ ತಂತ್ರಜ್ಞಾನದ ಬಳಕೆ ಕಲಿಯುವಷ್ಟು ನಮಗೆ ಕಲಿಯಲು ಸ್ವಲ್ಪ ಕಷ್ಟವೇ. ಆದರೆ ಕಲಿಯದೇ ಬೇರೆ ನಿರ್ವಾಹವಿಲ್ಲ. ಈಗಿನ ಕಾಲವೇ ಹಾಗಿದೆ.ಮೊದಮೊದಲು ಬರಿ ಸಂಪರ್ಕಕ್ಕಾಗಿ ಮಾತನಾಡಲು ಮಾತ್ರ ಬಳಕೆಯಾಗುತ್ತಿದ್ದ ಫೋನ್ ಈಗ ಮಾಡುತ್ತಿರುವ ಕೆಲಸಗಳು ಒಂದೇ ಎರಡೇ.ಆನ್ಲೈನ್ ಮಾಯೆಯಿಂದಾಗಿ ಇಡೀ ಪ್ರಪಂಚವೇ ನಮ್ಮ ಬೆರಳ ತುದಿಯಲ್ಲಿ ಕುಣಿತಿದೆ.ಕೆಲಸ ಕಾರ್ಯ,ಮಾತು,ಕಥೆ,ಹರಟೆ,ವ್ಯಾಪಾರ. ವ್ಯವಹಾರ, ಓದು, ಬರಹ, ತರಬೇತಿ,ಮನರಂಜನೆ,ಸಾಮಾಜಿಕ ಸಂಪರ್ಕ ಎಲ್ಲವೂ  ಆನ್ಲೈನ್ ನಲ್ಲೇ ಜರುಗುತ್ತಿರುವ ಈ ಕಾಲದಲ್ಲಿ ಒಂದು ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಸಾಕು ಹತ್ತಾಳುಗಳ ಬಲವಿದ್ದಂತೆ.ಹಾಗಾಗಿ ‘ನಿರಂತರವಾಗಿ ಬದಲಾಗುತ್ತಲೇ ಇರುವ ಪರಿಸರಕ್ಕೆ ಹೊಂದಿಕೊಳ್ಳುವ ಜೀವಿ ಮಾತ್ರ ಉಳಿಯುವುದು’ಎನ್ನುವ ಡಾರ್ವಿನ್ ನ ಸಿದ್ಧಾಂತದಂತೆ  ಬಳಸಲು ಕಲಿಯದೇ ಬೇರೆ ನಿರ್ವಾಹವಿಲ್ಲ.ಕಂಪ್ಯೂಟರ್ ಇಲ್ಲವೇ ಲ್ಯಾಪ್ ಟಾಪ್ ಎಲ್ಲರ ಕೈಗೂ ಎಟಕುವುದಿಲ್ಲ. ಇದ್ದರೂ ಎಲ್ಲಾ ಕಡೆ ಹೊತ್ತೊಯ್ಯಲು ಆಗೋದಿಲ್ಲ.ಕೆಲವು ಕೆಲಸಗಳಿಗೆ ಫೋನ್ ನಂಬರ್ ಲಿಂಕ್ ಆಗಿರೋ ಆ್ಯಪ್ ಗಳೇ ಬೇಕು.ಹಾಗಾಗಿ ಸ್ಮಾರ್ಟ್ ಫೋನ್ ಇಲ್ಲದೇ ಜೀವನವಿಲ್ಲ ಅಂತಾಗಿ ಬಿಟ್ಟಿದೆ.

ಹೊಸ ರೆಸಿಪಿ,ಕಸೂತಿ, ಹೊಲಿಗೆ, ಹಾಡು,ಕುಣಿತ,ನಾಟಕ,ಸಿನೆಮಾ,ಭಾಷಣ,ಆಧ್ಯಾತ್ಮ,ವಿಜ್ಞಾನ, ಏನುಂಟು ಏನಿಲ್ಲ ಆನ್ಲೈನ್ ಲೋಕದಲ್ಲಿ!ಮನಸ್ಸಿಗೆ ಬಂದದ್ದು ಟೈಪಿಸಿದರೆ ಸಾಕು ಇಡೀ ಲೋಕವೇ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.ಮುಂಚೆಯಾದರೆ ಯಾವುದೇ ಒಂದು ಮಾಹಿತಿ ಬೇಕಿದ್ದರೆ ಮಣಗಟ್ಟಲೆ ತೂಕವಿರುವ ವಿಶ್ವಕೋಶಗಳ ಇಲ್ಲವೇ ನಿಘಂಟುಗಳ ಮೊರೆ ಹೋಗಬೇಕಿತ್ತು.ಈಗಯಾವುದೇ ವಿಷಯದ ಬಗ್ಗೆ ಬೇಕಾದರೂ ಗೂಗಲಣ್ಣನ ಮೊರೆ ಹೊಕ್ಕರೆ ಸಾಕು,ಕಣ್ಣು ಮುಚ್ಚಿ ಬಿಡುವುದೊರೊಳಗೆ ಪುಟಗಟ್ಟಲೆ ಮಾಹಿತಿ ,ಸಂಬಂಧಿಸಿದ ಫೋಟೋ,ವಿಡಿಯೋಗಳ ಸಮೇತ ಫೋನಿಗೆ ಬಂದು ಬಿದ್ದು ಹೋಗಿರುತ್ತೆ. 

ಮಕ್ಕಳಿಗಂತೂ ಶಾಲೆಯಲ್ಲಿ ನೀಡುವ ಯಾವುದೇ ಯೋಜನೆ,ಇಲ್ಲವೇ ಮನೆಕೆಲಸ  ಮಾಡಲು ಗೂಗಲಣ್ಣನ ಸಹಾಯವೇ ಬೇಕು.ಆದರೆ ಇದು ಯಾವ ವಿಪರೀತಕ್ಕೆ ಹೋಗಿದೆ ಎಂದರೆ, ಯಾವುದಾದರೂ ವಿಷಯದ ಬಗ್ಗೆ ಪ್ರಬಂಧ ಬರೆಯಲು ಹೇಳಿದರೆ ತರಗತಿಯಲ್ಲಿರುವ ಎಲ್ಲಾ ಮಕ್ಕಳ ಬರವಣಿಗೆಯೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಒಬ್ಬರ ಬರವಣಿಗೆ ತಿದ್ದಿದರೆ ಆಯಿತು ಬೇರೆಯವರದ್ದು ನೋಡೋದೇ ಬೇಡ ಅನ್ನಿಸುವಷ್ಟು ಸಾಮ್ಯತೆ ನೋಡಿದಾಗ ಬೇಸರವಾಗುತ್ತದೆ.

ಮಾಹಿತಿಯ ಸಂಗ್ರಹವಷ್ಟೇ ಅಲ್ಲ,ಮನೆಗೆ ಬುಟ್ಟಿ ಹೊತ್ತು ಹೂವು ಸೊಪ್ಪು ಮಾರಲು ಬರುವವರಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಯ ವ್ಯಾಪಾರಗಳನ್ನೆಲ್ಲ ಫೋನ್ ನಲ್ಲಿ ಪಾವತಿಸುವ ಮೂಲಕ ನಿಭಾಯಿಸಿ ಬಿಡಬಹುದು. ಪರ್ಸಲ್ಲಿ ಹಣ ಹೊತ್ತು ತಿರುಗುವ,ಇಲ್ಲವೇ ಎ ಟಿ ಎಂ ಹುಡುಕಿಕೊಂಡು ಅಲೆಯುವ ಕಷ್ಟವೇ ಇಲ್ಲ.ನಮ್ಮ ಖಾತೆ ಇರುವ ಬ್ಯಾಂಕ್ನ ಆ್ಯಪ್ ಫೋನ್ ನಲ್ಲಿದ್ದರೆ ಸಾಕು,ಯಾವ ಅಂಗಡಿಗೆ ಬೇಕಾದರೂ ಧೈರ್ಯವಾಗಿ ನುಗ್ಗಬಹುದು. ಈ ಕರೋನ ಕಾಲದಲ್ಲಿ ಎಷ್ಟೊಂದು ಕೈಗಳ ಬದಲಾಯಿಸಿ ಬಂದಿರಬಹುದಾದ ಕಾಗದದ ನೋಟುಗಳ ಮುಟ್ಟುವ ಅಪಾಯ ಕೂಡ ಇಲ್ಲ.  ಬಟ್ಟೆ ಬರೆಗಳನ್ನು ಕೊಳ್ಳಲು ಅಂಗಡಿಗೆ ಹೋಗಿ,ಇರೋಬರೋದನ್ನೆಲ್ಲ ಜಾಲಾಡಿದರೂ ಯಾವುದೂ ಮನಸ್ಸಿಗೆ ಸಮಾಧಾನ ತರದಿದ್ದಾಗ, “ಯಾಕೋ ಯಾವುದೂ ಇಷ್ಟ ಆಗ್ತಾ ಇಲ್ಲ,”ಅಂತ ಹೇಳಿ ಸೇಲ್ಸ್ ಗರ್ಲ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದು ಈಗ ಮರೆತೇ ಹೋಗಿದೆ.ಬಿಡುವಿದ್ದಾಗ ಮನೆಯಲ್ಲೇ ಕುಳಿತು ನೂರಾರು ಉಡುಪುಗಳ ಜಾಲಾಡಿ ಮನಸ್ಸಿಗೆ ಖುಷಿಯಾಗಿದ್ದು ಆರಿಸಿಕೊಳ್ಳಬಹುದು . ಆನ್ಲೈನ್ ನಲ್ಲೆ ಕೊಳ್ಳಲು ಆಗದಿದ್ದರೂ, ಬಟ್ಟೆಯಂಗಡಿಗೆ ಹೋದಾಗ “ಇಂತಹದ್ದೇ” ಬೇಕು ಎಂದು ಹೇಳಿ ಸಮಯ ಉಳಿಸಬಹುದು. 

ಈ ಆನ್ಲೈನ್ ಶಾಪಿಂಗ್ ಗೆ ನನ್ನ ಫೋನ್ ಎಷ್ಟು ಸಹಾಯ ಮಾಡುತ್ತದೆ ಅಂದರೆ, ಒಮ್ಮೊಮ್ಮೆ ನನಗೆನನ್ನ ಫೋನ್ ಗೆ ಜೀವ ಇರಬಹುದು ಅನ್ನೋ ಗುಮಾನಿ ಮೂಡಿ ಬಿಡುತ್ತದೆ.ಏನಾದರೂ ಗೆಳತಿಯರ ಬಳಿ ಮಾತನಾಡುವಾಗ ಸೀರೆಗಳ ಬಗ್ಗೆ ಮಾತನಾಡಿದೆ ಅಂದುಕೊಳ್ಳಿ, ಆ ದಿನ ಫೇಸ್ ಬುಕ್ ನಲ್ಲಿ ಸಾಲು ಸಾಲಾಗಿ ಸೀರೆಗಳ ಜಾಹೀರಾತುಗಳ ಮೇಲೆ ಜಾಹೀರಾತುಗಳು ಬರತೊಡಗುತ್ತವೆ.”ಸೆಕೆಂಡ್ ಹ್ಯಾಂಡ್ ಕಾರ್ ತೊಗೊಬೇಕು ಕಣೋ” ಅಂತ ತಮ್ಮನ ಬಳಿ ಹೇಳಿದ್ದಷ್ಟೇ ,ಕಾರುಗಳ ಸಾಲೇ ಫೋನ್ ನಲ್ಲೆಲ್ಲ. ಆಗೆಲ್ಲಾ ನಮ್ಮ ಜೀವನ ನಮ್ಮದಲ್ಲ ಗೂಗಲಣ್ಣನದು ಅನ್ನಿಸಿದ್ದೂ ಹೌದು.   ಪುಸ್ತಕದಂಗಡಿಗೆ ಹೋಗಿ ಪುಸ್ತಕ ಖರೀದಿಸಲು ಸಮಯ  ಈಗೀಗ ಸಿಗುವುದು ಎಷ್ಟು ಕಷ್ಟವಾಗಿದೆ.ಓದಲೇಬೇಕು ಅನ್ನಿಸಿದಾಗ ಆನ್ಲೈನ್ ನಲ್ಲಿಸಿಗುವ ಆಡಿಯೋ ಪುಸ್ತಕಗಳನ್ನೆ ದಿನಾ ಕೆಲಸಕ್ಕೆ ಎಂದು ಬಸ್ ನಲ್ಲಿ ಪ್ರಯಾಣಿಸುವಾಗ ಕೇಳಿಸಿ ಕೊಳ್ಳುವುದಾಗಿದೆ.ನಮ್ಮ ಆಯ್ಕೆ, ಅಭಿರುಚಿಯ ಪುಸ್ತಕಗಳೇ ಸಿಗುವ ಗ್ಯಾರಂಟಿ ಏನೂ ಇಲ್ಲ “ಸಿಕ್ಕಿದ್ದೇ ಶಿವಾ ”  ಅಂತ ಕೇಳಿಸಿಕೊಂಡು ಸಾಗಿದರೆ ಪ್ರಯಾಣದ ಆಯಾಸವನ್ನು ಸ್ವಲ್ಪ ಮರೆಯಬಹುದು.  ಬರೆಯುವುದು ಕೂಡ ಎಷ್ಟೊಂದು ಕಡಿಮೆಯಾಗಿ ಬಿಟ್ಟಿದೆ. ಫೋನ್ ನಲ್ಲೆ ಎಲ್ಲಾ ಬರವಣಿಗೆ ಕೆಲಸ ಆಗಿಹೋಗುತ್ತೆ. ಟೈಪಿಸುವ ಕಷ್ಟ ಕೂಡ ಇಲ್ಲ ಈಗ. ಮಾತನಾಡುತ್ತಾ ಹೋದರೆ ಸಾಕು ಅದೇ ಟೈಪ್ ಮಾಡಿಕೊಡುವ ಆ್ಯಪ್ ಗಳೂ ಕೂಡ ಇವೆ.ಲೇಖನ ಬರೆದು ಫೋನ್ ನಲ್ಲೆ ಮೇಲ್ ಮಾಡಿದರೆ ಸಾಕು ತಲುಪಬೇಕಾದ ಕಡೆಗೆ ಕ್ಷಣಾರ್ಧದಲ್ಲಿ ತಲುಪಿಬಿಡುತ್ತದೆ.ಇಲಾಖೆಯ ಎಲ್ಲಾ ಕೆಲಸಗಳು ಕೂಡ ಆನ್ಲೈನ್ ನಲ್ಲೇ ನಡೆಯುವುದು.ಶಾಲೆಯ ವಿದ್ಯಾರ್ಥಿಗಳ ಯಾವುದೇ ಮಾಹಿತಿಯನ್ನು’ ಪಟ್ ‘ ಎಂದು ರವಾನಿಸಿ ಬಿಡಬಹುದು. 

ಈ ಕರೋನ ಕಾಲದಲ್ಲಿ ಭೌತಿಕವಾಗಿ ತರಗತಿಗಳು ನಡೆಸಲು ಸಾಧ್ಯವಾಗದೇ ಇರುವಾಗ ಆನ್ಲೈನ್ ನಲ್ಲಿ ಪಾಠ ಕಲಿಯಲು ಸರ್ಕಾರಿ,ಖಾಸಗಿ ಅಂತ ಎಲ್ಲರೂ ಮೊರೆ ಹೋಗಿರೋದು ಫೋನ್ ಗಳಿಗೇನೆ. ಕಂಪ್ಯೂಟರ್  ಇಲ್ಲವೆ ಲ್ಯಾಪ್ ಟಾಪ್ ಇಲ್ಲದವರಿಗೆ ಸ್ಮಾರ್ಟ್ ಫೋನೆ  ಎಲ್ಲಾ. ಎಲ್ಲಾ ಶಾಲೆಗಳ ಮಕ್ಕಳಿಗೂ ಆನ್ಲೈನ್ ತರಗತಿಗಳು ಶುರುವಾದ ಬಳಿಕ ಎಲ್ಲಾ ಮಕ್ಕಳ ಕೈಲೂ ಒಂದೊಂದು ಸ್ಮಾರ್ಟ್ ಫೋನ್ ನಲಿದಾಡುತ್ತಿವೆ.ಮಕ್ಕಳು ಅದಕ್ಕಾಗಿ ಅಪ್ಪ ಅಮ್ಮಂದಿರಿಗೆ ಕೊಡೊ ಕಾಟ ಏನೂ ಕಮ್ಮಿಯಿಲ್ಲ. ಒಂದೇ ಒಂದು ಮಗುವಿರುವ ಮನೆಯ ಪೋಷಕರೇ ಪುಣ್ಯವಂತರು.ಇಬ್ಬರು ಇಲ್ಲ ಮೂವರು ಮಕ್ಕಳಿದ್ದರೆ ಅಪ್ಪ ಅಮ್ಮಂದಿರ ಪಾಡು ದೇವರಿಗೇ ಪ್ರೀತಿ. ಎಷ್ಟು ಮಕ್ಕಳಿರುತ್ತಾರೋ ಅಷ್ಟು ಫೋನ್ ಇದ್ದರೆ ಸರಿ.ಇಲ್ಲದಿದ್ದರೆ ಒಂದೇ ಸಮಯದಲ್ಲಿ ಮಕ್ಕಳಿಬ್ಬರಿಗೂ ಆನ್ಲೈನ್  ತರಗತಿಗಳಿದ್ದರೆ ಮುಗೀತು ,ಯುದ್ಧ ಶುರು ಅಂತಾನೆ ಅರ್ಥ. ಏನೋ ಉಳ್ಳವರು ಇಬ್ಬರು ಮಕ್ಕಳಿಗೂ ಆಗೋ ಹಾಗೆ ಬೇರೆ ಬೇರೆ ಫೋನ್ ಇಟ್ಟುಕೊಳ್ಳಬಹುದು. ಅಷ್ಟು ಅನುಕೂಲವಿಲ್ಲದವರ ಪಾಡು ಹೇಳತೀರದು.ಮಕ್ಕಳ ಜಗಳ ಬಿಡಿಸಿಯೆ ದಿನ ಕಳೆಯಬೇಕು. ಕೆಲವು ಮಕ್ಕಳಿಗಂತೂ ತಮ್ಮ ಮನೆಲಿರೋ ಫೋನ್ ಸಮಾಧಾನವೇ ತರದು. ಬೇರೆ ಗೆಳೆಯರ ಮನೆ ಏನಾದರೂ ಉತ್ತಮ ಗುಣಮಟ್ಟದ್ದು ಇದ್ದರೆ ಹೋಲಿಕೆ ಮಾಡಿಕೊಂಡು ಕೊರಗುವುದು ಬೇರೆ.ಅಪ್ಪ ಅಮ್ಮ ಇಬ್ಬರೂ ಹಗಲು ಕೆಲಸಕ್ಕೆ ಹೋಗಿ ರಾತ್ರಿ ಮಾತ್ರ ಫೋನ್ ಮಕ್ಕಳ ಕೈಗೆ ಸಿಗುವುದಾದರೆ ಮಕ್ಕಳ ಕಲಿಕೆಗೆ ಸಿಗುವ ಸಮಯವಾದರೂ ಎಷ್ಟು?. ಫೋನೇ ಇರದ ಪೋಷಕರ ಮಕ್ಕಳಿಗೆ ಆ ಅಲ್ಪ ಸಮಯದ ಪಾಠವೂ ಇಲ್ಲ.ಇದೆಲ್ಲ ಸಂಕಷ್ಟದಿಂದ ಬೇಸತ್ತ ಪೋಷಕರನ್ನು ಭೇಟಿ ಮಾಡಿದಾಗೆಲ್ಲಾ ಅವರ ಒಂದೇ ಪ್ರಶ್ನೆ,”ಮೇಡಂ ಶಾಲೆಗೆ ಮಕ್ಕಳನ್ನು ಯಾವಾಗಿನಿಂದ ಕರೆಸಿಕೊಳ್ತೀರ,”ಅಂತ.

ವಿಪರ್ಯಾಸ ಏನೆಂದರೆ ಕರೋನ ಬರೋಕ್ಕಿಂತ ಮುಂಚೆ ಶಾಲೆಯಲ್ಲಿ ಶಿಕ್ಷಕರು,ಮಕ್ಕಳು ಫೋನ್ ಬಳಸುವುದಕ್ಕೆ ನಿಷೇದವಿತ್ತು. ಕರೋನ ಬಂದು ಎಲ್ಲಾ ತಲೆಕೆಳಗು ಮಾಡಿಬಿಟ್ಟಿತು. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಪಾಠ ಮಾಡುವಂತಾಗಿದೆ. ಅಲ್ಲದೇ ಮಕ್ಕಳು ಪಾಠ ಮಾತ್ರ ಕಲಿತಾರೆ ಅನ್ನೋ ಗ್ಯಾರಂಟೀ ಏನೂ ಇಲ್ಲ. ಇಲ್ಲದ ಸಲ್ಲದ ಮೊಬೈಲ್ ಗೇಮ್ ಗಳ,ಅಸಭ್ಯ,ಅಶ್ಲೀಲ ವೆಬ್ಸೈಟ್ ಗಳ ಜಾಲಕ್ಕೆ ಬೀಳದಿದ್ದರೆ ಸಾಕು ಅನ್ನುವ ಆತಂಕ,ಭಯ ಪೋಷಕ ಶಿಕ್ಷಕರೆಲ್ಲರದು.
ಇನ್ನು ಫೇಸ್ಬುಕ್ ,ವಾಟ್ಸಪ್, ಇನ್ಸ್ಟಗ್ರಾಮ್ , ಟ್ವಿಟ್ಟರ್ ಅಂತೆಲ್ಲ ಸಾಮಾಜಿಕ ಜಾಲತಾಣಗಳು ಜೇಡರ ಬಲೆಯಂತೆ ಎಲ್ಲಾ ಕಡೆ ಹರಡಿ ,ಇಡೀ ಭೂಮಿಯ ಜನರನ್ನೆಲ್ಲ ಕಟ್ಟಿ ಹಾಕಿ ಕೆಡವಿವೆ.ಇವುಗಳಿಂದಾಗಿ ಎಲ್ಲರೂ ಎಲ್ಲರಿಗೂ ಗೊತ್ತು.ಚಿಕ್ಕಂದಿನಲ್ಲಿ ಒಂದನೇ ತರಗತಿಯಲ್ಲಿ ಕೊನೇ ಬೆಂಚಿನಲ್ಲಿ ಮೂರನೆಯವಳಾಗಿ ಕುಳಿತಿರುತ್ತಿದ್ದ ಸಹಪಾಠಿಯಿಂದ ಹಿಡಿದು ,ಕಾಲೇಜ್ ನಲ್ಲಿ ಪರಮಾಪ್ತ ಸಖಿಯಾಗಿದ್ದವಳವರೆಗೆ ಎಲ್ಲರನ್ನೂ  ಜಾಲತಾಣಗಳ ಬಲೆ ಬೀಸಿ ಹಿಡಿದು ಬಿಡಬಹುದು.

ಈ ಜಾಲತಾಣಗಳ ಪೊಸ್ಟ್   ನೋಡಿದರೆ ಎಲ್ಲರೂ, ಸುಖಿಗಳೇ,ಎಲ್ಲರೂ ಯಶಸ್ವಿಗಳೇ, ದುಕ್ಕ ಸಂಕಟಗಳಿಗೆ ಜಾಗವೇ ಇಲ್ಲ. ಎಲ್ಲರ ಚಿತ್ರಪಟಗಳು ನಗುವ ಅಂಟಿಸಿಕೊಂಡು ಹೊಟ್ಟೆಯುರಿ ಹೆಚ್ಚಿಸುವವೇ. ಚಿತ್ರವಿಚಿತ್ರವಾಗಿ ಸೆಲ್ಫಿ ತೆಗೆದು,ಪೋಸ್ಟ್ ಮಾಡಿ,ಎಷ್ಟು ಲೈಕ್ ಗಳು,ಕಮೆಂಟ್ ಗಳು ಎಷ್ಟು ಅಂತ ಕಾಯೋರೇ ಎಲ್ಲಾ. ಸೆಲ್ಫಿ ಡಿಫರೆಂಟ್ ಆಗಿರಬೇಕು ಅಂತ ಸರ್ಕಸ್ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಮೂರ್ಖರ ನೋಡಿಯೇ “ಮೂರ್ಖತನಕ್ಕೆ ಮದ್ದಿಲ್ಲ”ಅನ್ನೋ ಗಾದೆ ಹುಟ್ಟಿದೆ ಬಿಡಿ.  ಮುಂಚೆಯಾದರೆ ಫೋಟೋ ತೆಗೆಸಿಕೊಳ್ಳುವುದು ಅಂದರೆ ಸ್ಟುಡಿಯೋಗೆ ಹೋಗಬೇಕಿತ್ತು.ಇಲ್ಲವಾದರೆ ಯಾವುದಾದರೂ ಸಮಾರಂಭಗಳಲ್ಲಿ  ಫೋಟೋಗ್ರಾಫರ್ ತೆಗಿತ್ತಿದ್ದ ಫೋಟೋಗಳ ಜೋಪಾನವಾಗಿ ಆಲ್ಬಂಗಳಲ್ಲಿ ಕಾಯ್ದಿರಿಸಿಕೊಂಡು,ನೋಡಬೇಕು ಅಂತ ಅನ್ನಿಸಿದಾಗ ಆಲ್ಬಂ ತೆಗೆದು ನೋಡೋದೇ  ಒಂದು ಸಂಭ್ರಮ.ಈಗ ಫೋನ್ ನ ಕೃಪೆಯಿಂದಾಗಿ ಎಲ್ಲರೂ ಕ್ಯಾಮರಾಮನ್ ಗಳೇ.ಫೋಟೋಗಾಗಿ ಯಾವ ಸಮಾರಂಭ,ಕಾರ್ಯಗಳಿಗಾಗಿ ಕಾಯೋದೇನು ಬೇಡ.ತಮ್ಮ ಜೀವನದ ಒಂದೊಂದು ಕ್ಷಣವನ್ನೂ ಸೆರೆ ಹಿಡಿಯಲು,ದಿನಂಪ್ರತಿ ಸಿಕ್ಕ ಸಿಕ್ಕಲ್ಲಿ ನಿಂತು,ಬೇಕು ಬೇಡದ ಭಂಗಿಗಳಲ್ಲಿ ನಿಂತು ಫೋಟೋ,ಸೆಲ್ಫಿಗಳ ಕ್ಲಿಕ್ಕಿಸಿ ಪೋಸ್ಟ್ ಮಾಡೋದೇ ಮಾಡೋದು.ವೈಯಕ್ತಿಕ ಬದುಕು ಎಂಬುದು ಈಗ ಬಟಾಬಯಲಾಗಿ ಹೋಗಿದೆ.

ಈ ವಿಚಿತ್ರ ಪೋಸ್ಟ್ ಗಳ  ಜೊತೆಗೆ ನೂರೆಂಟು ವಾಟ್ಸಾಪ್ ಗುಂಪುಗಳ ಕಾಟ ಬೇರೆ.ಇಲಾಖೆಯ ಅಧಿಕೃತ ಗುಂಪುಗಳ ಜೊತೆಗೆ,ಸ್ನೇಹಿತರು,ನೆಂಟರು ಇಷ್ಟರು,ಹವ್ಯಾಸದ ಸ್ನೇಹಿತರ ಗುಂಪುಗಳು ಎಲ್ಲವೂ ಯಾವಾಗ ತಮ್ಮೊಳಗೆ ಸೇರಿಸಿಕೊಳ್ಳುತ್ತವೋ ತಿಳಿಯದು. ಒಮ್ಮೊಮ್ಮೆ ಮುಂಜಾವಿಗೆ  ಎದ್ದು ಬೆಳಿಗ್ಗೆ ಬೆಳಿಗ್ಗೆ ಮೊಬೈಲ್ ದರ್ಶನ ಮಾಡಿ ವಾಟ್ಸಪ್ ತೆರೆದು ನೋಡಿದರೆ ಧುತ್ತನೆ ಯಾವುದೋ ಒಂದು ಹೊಸ ಗುಂಪು ಸ್ವಾಗತಿಸಲು ಸಿದ್ದವಾಗಿರುತ್ತೆ. ನಮ್ಮ ಇಷ್ಟಾನಿಷ್ಟಗಳ ಕೇಳಿಕೊಂಡು ಯಾರೂ ಗ್ರೂಪ್ ಗೆ ಸೇರಿಸೊಲ್ಲ. ಸೇರಿಯಾದ ಬಳಿಕ ಇಷ್ಟವಿರದೆ ಆಚೆ ಬಂದರೂ ಮತ್ತೆ ಮತ್ತೆ ಎಳೆದು ಎಳೆದು ಸೇರಿಸಿಬಿಡುತ್ತಾರೆ.ಮತ್ತೆ ಗುಂಪಿನ ಸದಸ್ಯರಲ್ಲಿ ಕೆಲವರು ಸೇರಿ ಇನ್ನೊಂದು ಮರಿ ಗುಂಪು ಮಾಡಿಬಿಡುತ್ತಾರೆ.ನಾನಂತೂ ಹೈಸ್ಕೂಲ್ ನಿಂದಾ ಹಿಡಿದು ಕಾಲೇಜ್ ಮುಗಿಸುವವರೆಗೂ ಯಾವ ಯಾವ ಶಾಲೆ ಕಾಲೇಜ್ ನಲ್ಲಿ ಇದ್ದೇನೋ ಅವೆಲ್ಲದರ ಒಂದೊಂದು ಗುಂಪುಗಳಲ್ಲಿ ಸೇರಿ ಹೋಗಿದ್ದೇನೆ.

ಕುಟುಂಬಗಳಲ್ಲಿ ಗಂಡನ ಕಡೆಯದು ಒಂದು ಗುಂಪು,ನನ್ನ ಕಡೆಯದೊಂದು,ಅದರಲ್ಲೂ ಕಸಿನ್ ಗಳದ್ದೇ ಮತ್ತೊಂದು.ಶಾಲೆಯಲ್ಲಿ ಸಹೋದ್ಯೋಗಿಗಳ ದ್ದೊಂದು, ಮಹಿಳಾ ಸಹೋದ್ಯೋಗಿಗಳದ್ದು ಇನ್ನೊಂದು.ವರ್ಷದಲ್ಲಿ ಎಷ್ಟು ತರಬೇತಿಗಳಲ್ಲಿ ಭಾಗವಹಿಸಿರುತ್ತೇವೊ ಅಷ್ಟೂ ಹೊಸ ಗುಂಪಿಗೆ ಸೇರಬೇಕು.ಎಷ್ಟು ತರಗತಿಗಳಿಗೆ ಪಾಠ ಮಾಡುತ್ತೇವೋ ಅವು ಇನ್ನೊಂದಿಷ್ಟು .ನನ್ನ ಮಕ್ಕಳ ಶಾಲಾ ಕಾಲೇಜ್ ಗಳವರದು ಮತ್ತಷ್ಟು.   ಬೇರೆ ಬೇರೆ ಘಟ್ಟಗಳಲ್ಲಿ ಆದ ಸ್ನೇಹಿತೆಯರ ಗುಂಪುಗಳು ಮಗದಷ್ಟು .ಸಾಹಿತ್ಯಾಸಕ್ತರ ಗುಂಪುಗಳು ಒಂದಷ್ಟು. ಹೀಗೆ ಅದೆಷ್ಟು ಗುಂಪುಗಳಿಗೆ ಸೇರಿದ್ದೇನೆ ಅನ್ನೋದು ಲೆಕ್ಕಕ್ಕೇ ಸಿಗೋಲ್ಲ. ಇವೆಲ್ಲವುಗಳಲ್ಲಿ ಟೆಲಿಗ್ರಾಂ ನಲ್ಲಿ ಕೂಡ ದ್ವಿಪಾತ್ರ ಮಾಡುವ ಗುಂಪುಗಳು ಕೂಡ ಇವೆ.

ಆದರೆ ಎಲ್ಲಾ ಗುಂಪುಗಳ ಹಣೆಬರಹ ಮಾತ್ರ ಹೆಚ್ಚು ಕಡಿಮೆ ಒಂದೇ. ಗುಂಪಿಗೆ ಸೇರಿದ ಬಳಿಕ ಒಂದೆರಡು ತಿಂಗಳು ಸದಸ್ಯರ ಗದ್ದಲವೋ ಗದ್ದಲ ಆಮೇಲೆ ಬರು ಬರುತ್ತಾ ಗುಂಪು,ವಾಟ್ಸಪ್ ಚಾಟ್ ಪೇಜ್ ನ ತಳಭಾಗ ಯಾವಾಗ ಸೇರುವುದೋ ಗೊತ್ತಾಗುವುದಿಲ್ಲ. ಯಾರಾದರೂ ಸದಸ್ಯರ ಹುಟ್ಟುಹಬ್ಬದ ದಿನ ಮಾತ್ರ ತನ್ನ ಕುಂಭಕರ್ಣ ನಿದ್ದೆಯಿಂದ ಎದ್ದು,ಗರ್ಜಿಸಿ, ಹೂಂಕರಿಸುತ್ತಾ ಹೊಟ್ಟೆ ತುಂಬಾ ಮೆಸೇಜ್ ಗಳ ತುಂಬಿಸಿಕೊಂಡು ಮತ್ತೆ ಇನ್ನೊಂದು ಹುಟ್ಟುಹಬ್ಬದವರೆಗೆ ಮರು ನಿದ್ರೆಗೆ ಜಾರಿ ಬಿಡುತ್ತದೆ.ನಿರಂತರವಾಗಿ ಗಳಿಗೆ ಗಳಿಗೆಗೂ ನಮ್ಮ ಕೆಲಸಗಳನ್ನು ನೆನಪಿಸುತ್ತಾ,ಕುತ್ತಿಗೆ ಮೇಲೆ ನಿಂತು ಕೆಲಸ ಮಾಡಿಸೋವು ಅಂದ್ರೆ ಇಲಾಖೆಯ ಅಧಿಕೃತ ಗುಂಪುಗಳು ಮಾತ್ರ. ಅವಕ್ಕೆ ನಿದ್ರೆ ಬರೋದು ನನಗೆ ನಿವೃತ್ತಿಯಾದಾಗ ಮಾತ್ರ.

ಇವಿಷ್ಟೇ ಮಾತ್ರವಲ್ಲ ಆನ್ಲೈನ್ ಮಹಿಮೆ. ಇದರಲ್ಲಿಸಂಬಂಧ ಕುದುರಿಸುವ ಎಷ್ಟೊಂದು ವೆಬ್ಸೈಟ್ ಗಳು ಕೂಡ  ಹೆತ್ತವರಿಗೆ ತಮ್ಮ ಮಕ್ಕಳಿಗೆ ಸೂಕ್ತ ಸಂಗಾತಿ ಹುಡುಕುವ ಸಲುವಾಗಿ ಸಹಾಯ ಮಾಡುತ್ತಿವೆ.ಹುಡುಗ ಇಲ್ಲವೇ ಹುಡುಗಿ ಯಾವ ದೇಶದ ಯಾವ ಮೂಲೆಯಲ್ಲಿದ್ದರೂ ಸುಲಭವಾಗಿ ಸಂಪರ್ಕಿಸಬಹುದು .ಸಂಬಂಧ ಒಪ್ಪಿಗೆಯಾದ ಮೇಲೂ ನೇರವಾಗಿ ಭೇಟಿಯಾಗದೆ ಇದ್ದರೂ ಸಾಮಾಜಿಕ ಜಾಲತಾಣಗಳು, ವೀಡಿಯೊ ಕಾಲ್ಗಳ ಮೂಲಕ ಸಂಪರ್ಕದಲ್ಲಿರಬಹುದು. ಹೀಗೆ ಒಂದು ದೂರದೇಶದಲ್ಲಿರುವ ಹುಡುಗನೊಬ್ಬನೊಟ್ಟಿಗೆ ನನ್ನ ಪರಿಚಯದ ಒಬ್ಬರ ಮಗಳ ಮದುವೆ ನಿಶ್ಚಯವಾಯಿತು.ಹುಡುಗ ನೇರವಾಗಿ ನೋಡಲು ಸಿಗದಿದ್ದರೂ, ವಿಡಿಯೋ ಕರೆ,ಫೋನ್ ಕಾಲ್ ಗಳ ಮೂಲಕವೇ ನೋಡಲು ಮಾತನಾಡಲು ಸಿಗುತ್ತಾನೆ. ಎರಡೂ ಕಡೆಯವರಿಗೆ ಸಂಬಂಧ ಒಪ್ಪಿಗೆಯಾಗಿ ಹುಡುಗ ವಿದೇಶದಿಂದ ಬಂದ ನಂತರವೇ ಮದುವೆ ಎಂದು ನಿರ್ಧಾರವಾಗಿದೆ.

ಇತ್ತೀಚೆಗೆ ಒಂದು ಸಮಾರಂಭದಲ್ಲಿ ಈ ಮದುವೆ ಹುಡುಗಿ ಸಿಕ್ಕಿ ಮಾತನಾಡುವಾಗ ,”ಏನಪ್ಪಾ,ನಿಮ್ಮ ಹುಡುಗ ಹೇಗೆ,” ಎಂದು ಕೇಳಿದೆ. ಅವಳು,”ಏನೋ ಗೊತ್ತಿಲ್ಲಾ ಆಂಟಿ ,ನೇರವಾಗಿ ಸಿಕ್ಕ ಮೇಲೆಯೇ ಬಂಡವಾಳ ಗೊತ್ತಾಗೋದು,”ಎಂದು ನಕ್ಕಳು.ನನಗೆ ಆಶ್ಚರ್ಯವಾಗಿ ,”ಯಾಕಪ್ಪಾ,ಫೋನ್ ನಲ್ಲಿ ಮಾತನಾಡಿಕೊಂಡು,ವಿಡಿಯೋ ಕಾಲ್ನಲ್ಲಿ ಕೂಡ ನೋಡಿದ್ದೀ ತಾನೇ? ,ಹುಡುಗ ಹೇಗೆ ಅಂತ ಗೊತ್ತಾಗಿ ಲ್ಲವಾ,!”ಎಂದೆ.ಅವಳು ನಗುತ್ತಾ,”ಮದುವೆ ಅನ್ನೋದು ಏನು ಆನ್ಲೈನ್ ಶಾಪಿಂಗ್ ಅಲ್ವಲ್ಲ ಆಂಟಿ ,ತೊಗೊಂಡು ಆದ ಮೇಲೆ ಇಷ್ಟವಾಗದಿದ್ದರೆ ಎರಡು ವಾರದೊಳಗೆ ವಾಪಸ್ ಮಾಡಲು, ಅವನು ಅಲ್ಲಿಂದ ಬಂದ ಬಳಿಕ,ನೇರವಾಗಿ ಭೇಟಿ ಮಾಡಿ, ಮಾತನಾಡಿ ಒಡನಾಡಿದ ಮೇಲೆಯೇ ನಿರ್ಧಾರ ಮಾಡಲು ಸಾಧ್ಯ,”ಎಂದಾಗ ಮಾತು ಹೊರಡದೆ ಸುಮ್ಮನಾದೆ.

ನಾವೆಲ್ಲ ತೇಲಿ ಮುಳುಗಿ,ಮುಳುಗಿ ತೇಲಿ ಸಾಗುತ್ತಿರುವ  ಈ ಆನ್ಲೈನ್ ಕಡಲೊಳಗೆ ಅವಿತಿರುವ ತಿಮಿಂಗಿಲ,ಶಾರ್ಕ್ ಗಳ ನಿಭಾಯಿಸುವುದನ್ನು ಕೂಡ ಕಲಿತಿರಬೇಕು. ಸುಳ್ಳು ಸುಳ್ಳು ಸಂದೇಶ ಕಳಿಸಿ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಜನರಿಗೆ ಪಂಗನಾಮ ಹಾಕುವವರಿಗೆ ಕೂಡ ಏನೂ ಬರವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಕೌಂಟ್ ಸೃಷ್ಟಿಸಿಕೊಂಡು ಹುಡುಗಿಯರು,ಮಕ್ಕಳಿಗೆ ತೊಂದರೆ ಕೊಡುವವರ ಬಗ್ಗೆಯೂ ಎಚ್ಚರ ವಹಿಸಬೇಕು.ಮಕ್ಕಳ ಕೈಯಲ್ಲಿ ಫೋನ್ ಕಲಿಕೆಗೆ ಅಂತ ಕೊಟ್ಟರೂ ಎದೆಯಲ್ಲಿ ಡವಡವ ಹೊಡೆದು ಕೊಳ್ಳುತ್ತಿರುತ್ತೆ.ನೂರೆಂಟು ಮೊಬೈಲ್ ಗೇಮ್ ಗಳಿಗೆ ವ್ಯಸನಿಗಳಾಗಿದ್ದು ನಲುಗಿದ ಮಕ್ಕಳ ಬಗ್ಗೆ ಓದಿದಾಗೆಲ್ಲ ದುಕ್ಕವಾಗುತ್ತದೆ. ಈ ಫೋನ್ ಎನ್ನುವ ಬೆಂಕಿ ಬೆಳಕಾಗಲೂಬಹುದು, ಮನೆ ಸುಡಲೂಬಹುದು,ಹೇಗೆ ಬಳಸುತ್ತೇವೋ ಅದು ನಮ್ಮ ಕೈಯಲ್ಲೇ ಇದೆ.‌

ಸಮತಾ.ಆರ್

16 Responses

  1. Hema says:

    ವಾವ್..ಎಷ್ಟು ಸುಲಲಿತವಾಗಿ ಬರೆಯುತ್ತೀರಾ…ಇದು ಮನೆ ಮನೆ ಕಥೆ! ಫೋನ್ ಗಳು ದಿನೇದಿನೇ ಸ್ಮಾರ್ಟರ್ ಆಗುತ್ತಾ ಇವೆ.. ಪ್ರತಿಯಾಗಿ ನಾವು ದಿನೇದಿನೇ ನಾವು ದಡ್ಡರಾಗುತ್ತಾ ಇದ್ದೇವೆ!

  2. Samatha.R says:

    ಧನ್ಯವಾದಗಳು ಮೇಡಂ…

  3. Ashamani says:

    ವಾಸ್ತವ ಸಂಗತಿ ಮನಮುಟ್ಟುವಂತಿದೆ

  4. ನಾಗರತ್ನ ಬಿ. ಅರ್. says:

    ಅಂಗೈಯಲ್ಲಿ ಅರಮನೆ ಯನ್ನು ನಾನಾ ರೀತಿಯಲ್ಲಿ ಸೊಗಸಾಗಿ ದೃಷ್ಟಾಂತ ಗಳ ಮೂಲಕ ನಿರೂಪಿಸಿರುವ ರೀತಿ ಬಹಳ ಸೊಗಸಾಗಿ ಬರೆದಿದ್ದೀರಿ.. ಮೇಡಂ..ಹಾಗೇ ಮನೇವಿಷಯಗಳೆಲ್ಲಾ ಬಟಾಬಯಲಾಗುತ್ತಿವೆ.
    ಕೆಲವರಿಗೆ ನಾವು ಎಲ್ಲಿದ್ದೇವೆ ಏನು ಮಾತಾಡಬೇಕು ಎಷ್ಟು ಎಂಬುದರ ಅರಿವೇ ಇರುವುದಿಲ್ಲ.ಇನ್ನು ಕೆಲವರಂತೂ ಕಿವಿಗೆ ಸ್ಪೀಕರ್ ಸಿಕ್ಕಿಸಿಕೊಂಡು ಹುಚ್ಚುರಂತೆ ನಗುತ್ತಾ ನುಲಿಯುತ್ತಾ ಹೋಗುತ್ತಿರುತ್ತಾರೆ.ಒಟ್ಟಾರೆ ಚಂದದ ಬರಹ ಧನ್ಯವಾದಗಳು ಮೇಡಂ.

  5. ನಯನ ಬಜಕೂಡ್ಲು says:

    ಚಂದದ ಬರಹ. ಇವತ್ತಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸದೆ ಇರುವವರು ಯಾರೂ ಇಲ್ಲ ಅಂತಾನೇ ಹೇಳಬಹುದು.

  6. ವಸುಂಧರಾ says:

    ಚೆಂದ ಬರಹ ಸಮತಾ. ಪ್ರಬಂಧ ಮಾದರಿ ನಿಮ್ಗೆ ಸಿದ್ಧಿಸಿದೆ.

  7. ಶಿವಮೂರ್ತಿ.ಹೆಚ್. says:

    ಸರ್ವಂ ಪೋನ್ ಮಯಂ

  8. Padma Anand says:

    ಹೌದು, ನಿಮ್ಮ ಮಾತು ನಿಜ. ಇದು ಬೆಂಕಿಯ ಸಹವಾಸವೇ ಹೌದು. ಇದರಿಂದ ಬೆಳಕ ಬೀರುವ ದೀಪಗಳನ್ನು ಮಾತ್ರ ಹೊತ್ತಿಸಿಕೊಂಡು ಸುಡದಂತೆ ಬದುಕನ್ನು ಕಾಪಿಟ್ಟುಕೊಳ್ಳುವ ಸಮನ್ವಯತೆಯನ್ನು ಸಾಧಿಸುವುದು ಒಂದು ಸಮಕಾಲೀನ ಸವಾಲಾಗಿದೆ.

  9. ಕಾಂತರಾಜ್ says:

    ಫೋನಯಣದ ವಿಶ್ವ ರೂಪವೇ ಈ ಬರಹದಲ್ಲಿ ಅಡಗಿದೆ ಇದು ಪ್ರತಿಯೊಬ್ಬರ ಅನುಭವವೂ ಹೌದು

  10. ಸುಲಲಿತವಾದ ಪ್ರಬಂಧ
    ಸೊಗಸಾಗಿ ಮೂಡಿಬಂದಿದೆ

  11. ಶಂಕರಿ ಶರ್ಮ says:

    ಹೌದು…. ಈ ಲೇಖನವು ಎಲ್ಲರದ್ದೂ ಕೂಡಾ..! ನಾನು ಸ್ಮಾರ್ಟ್ ಫೋನ್ ಖರೀದಿಸುವ ಮೊದಲೇ, ಪೇಟೆಯಲ್ಲಿ ಹೂಮಾರುವವನ ಕೈಯಲ್ಲಿ ಈ ಫೋನ್ ಕಂಡು ನನ್ನ ಬಗ್ಗೆ ಮರುಗಿದ್ದೆ! ಈಗಲೂ, ಇದನ್ನು ಕಲಿಯಲು, ನಮ್ಮ ಮಕ್ಕಳೇ ನಮ್ಮ ಗುರುಗಳು. ನವಿರು ಹಾಸ್ಯಮಿಶ್ರಿತ ಬರಹವು ಬಹಳ ಇಷ್ಟವಾಯ್ತು..ಧನ್ಯವಾದಗಳು ಸಮತಾ ಮೇಡಂ.

  12. ವಿದ್ಯಾ says:

    ತುಂಬಾ ತುಂಬಾ ಚೆನ್ನಾಗಿ ದೆ ಲೇಖನ ಮೇಡಂ
    ವಂದನೆಗಳು

  13. ಉಮೇಶ್ ಸಿದ್ದಪ್ಪ says:

    ಚಂದದ ಬರಹ ಬರೆದಿರುವುದು ಮೊಬೈಲ್ನಲ್ಲೇ, ಪ್ರಕಟಣೆಗೆ ಕಳುಹಿಸಿದ್ದು, ನಮಗೆಲ್ಲಾ ಸುದ್ದಿ ಮುಟ್ಟಿಸಿದ್ದು, ನಾವೆಲ್ಲಾ ಓದಿದ್ದು, ನಮ್ಮ ಅಭಿಪ್ರಾಯ ತಿಳಿಸಿದ್ದು, ಎಲ್ಲಾ, ಎಲ್ಲಾ, ಮೊಬೈಲ್ನಲ್ಲೆ.
    ಶಾಲಾ ಹೆಬ್ಬಾಗಿಲ ಹೊರಗಿರ ಬೇಕಾಗಿದ್ದ ಮೊಬೈಲ್ ಇಂದು, ಕರೋನದ ಕೃಪೆಯಿಂದ ಶಾಲೆ ಅಂದ್ರೆ ಮೊಬೈಲ್ ಆಗಿದೆ. ಕರೋನದ ಪ್ರಭಾವದ ಗೃಹಬಂದನದ ಸಮಯ, ನಮ್ಮ ಸಮತ ಮೇಡಂ ಅವರ ಪುಟ್ಟ ಮಸ್ತಕದಿಂದ ನೂರಾರು ಕತೆ, ಕವನ, ತರ್ಜಿಮೆಗಳು ಹೊರಬಂದು ಇದೇ ಮೊಬೈಲ್ ಗಳಲ್ಲಿ ರಾರಾಜಿಸುತ್ತವೆ, ಕರೋನಕ್ಕೊಂದು ಧನ್ಯವಾದ ಹೇಳಲೇಬೆಕು.

  14. Savithri bhat says:

    ಆಹಾ..ಎಸ್ಟೊಂದು ಸತ್ಯ,ಸುಂದರ ,ನಿರರ್ಗಳ ಬರಹ .. ಲೇಖನದ ಉದ್ದಕ್ಕೂ ಇರುವ ತಿಳಿಹಾಸ್ಯ ಮನಕ್ಕೆ ಮುದ ನೀಡಿತ್ತು

  15. Samatha.R says:

    ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: