ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 7
(ಕಳೆದ ಸಂಚಿಕೆಯಿಂದ ಮುಂದುವರಿದುದು)
ಒಸಾಕ
ನಮ್ಮ ಮುಂದಿನ ಭೇಟಿ ಒಸಾಕ ಆಗಿತ್ತು. ನಾರದಿಂದ 30 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಒಸಾಕ ಕೋಟೆಯನ್ನು ನೋಡುವುದು ನಮ್ಮ ಉದ್ದಿಶ್ಯವಾಗಿತ್ತು. ಒಸಾಕ ವಿಸ್ತೀರ್ಣದಲ್ಲಿ ಜಪಾನಿನ ಎರಡನೆಯ ದೊಡ್ಡ ನಗರ. ಕನ್ಸಾಯ್ ಪ್ರಾಂತ್ಯದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಮಿಲಿಯನ್. ಇದು ಯೆಡೋ ಎನ್ನುವ ನದಿಯು ಸಮುದ್ರಕ್ಕೆ ಸೇರುವ ಜಾಗದಲ್ಲಿದೆ. ಒಸಾಕ ವಾಣಿಜ್ಯ ನಗರಿಯಾಗಿದೆ. ಒಸಾಕ ಎಂದರೆ ದೊಡ್ಡ ಇಳಿಜಾರು ಎಂದರ್ಥ. ದೊಡ್ಡ ಬೆಟ್ಟದ ಆಚೆ ಮತ್ತು ಈಚೆ ನಾರ ಮತ್ತು ಒಸಾಕ ಇವೆ. ನಮಗೆ ದಾರಿಯಲ್ಲಿ ಕೆಲವು ಸುರಂಗ ಮಾರ್ಗಗಳು ಸಿಕ್ಕಿದುವು. ಒಂದು 10 ಕಿ.ಮೀ. ಉದ್ದ ಇದೆ.
ಒಸಾಕ ಕೋಟೆಗೆ ಭೇಟಿ ನೀಡುವ ಮೊದಲು ಊಟ ಮಾಡಿದೆವು. ಹೋಟೆಲ್ಲಿನ ಹೆಸರು ‘ಶ್ಯಾಮ’. ಚಿಕ್ಕದಾಗಿದ್ದ ಹೋಟೆಲ್. ಆದರೂ ಚೆನ್ನಾಗಿತ್ತು. ಅದರಲ್ಲಿ 30 ಆಸನಗಳು ಮಾತ್ರ ಇದ್ದು, ಅಷ್ಟೇ ಜನ ಊಟಕ್ಕೆ ಕೂರಬಹುದು. ಪುಟ್ಟ ಕುರ್ಚಿಗಳು ಮತ್ತು ಚಿಕ್ಕ ಟೇಬಲ್‌ಗಳು. ಒಂದು ಟೇಬಲ್ಲಿನಲ್ಲಿ ಇಬ್ಬರು ಮಾತ್ರ. ನಮ್ಮ ಗುಂಪಿಗೆ ಹೇಳಿ ಮಾಡಿಸಿದಂತೆ ಇತ್ತು ಅನ್ನಿ! ಅಪ್ಪಟ ಭಾರತೀಯ ಊಟ ರುಚಿಕರವಾಗಿತ್ತು. ಚಪಾತಿ ಗೋಧಿಯದ್ದೋ ಅಥವ ಜೋಳದ್ದೋ ಗೊತ್ತಾಗಲಿಲ್ಲ! ಬಾಯಿಗೆ ರುಚಿಯಾಗಿತ್ತು, ಅಷ್ಟೇ ಸಾಕು. ಜೊತೆಗೆ ದಾಲ್, ಹೂಕೋಸಿನ ಪದಾರ್ಥ ಇದ್ದುವು. ಒಂದು ಚಿಕ್ಕ ಬಟ್ಟಲಿನಲ್ಲಿ ಅನ್ನ! ಜಪಾನೀಯರು ಕಡಿಮೆ ಅನ್ನ ತಿನ್ನುತ್ತಾರಂತೆ. ಇದನ್ನೆಲ್ಲಾ ನೀಡುವ ಮೊದಲು ತರಕಾರಿಯ ಸಲಾಡ್ ಕೊಟ್ಟರು. ನಂತರ ತಿಳಿಯಾದ ಸೂಪ್ ನೀಡಿದರು. ಲಸ್ಸಿ ಕೂಡ ಇತ್ತು. ಊಟದ ಕೊನೆಯಲ್ಲಿ ಸಿಹಿಯಾದ ಒಣಜಾಮೂನು ಇತ್ತು. ಎಲ್ಲರಿಗೂ ಊಟ ಇಷ್ಟವಾಯಿತು. ಪುಟ್ಟ ‘ಶ್ಯಾಮ’ ಹೋಟೆಲನ್ನು ಇಸ್ಕಾನ್‌ನವರು ನಡೆಸುತ್ತಿದ್ದಾರೆ. ಹೋಟೆಲಿನ ಗೋಡೆಗಳಲ್ಲಿ ಕೃಷ್ಣ ತನ್ನ ಅನೇಕ ಲೀಲೆಗಳನ್ನು ತೋರಿಸುತ್ತ ಚಿತ್ರಗಳಲ್ಲಿ ಕಂಗೊಳಿಸುತ್ತಿದ್ದಾನೆ. ಊಟ ಮುಗಿಸಿ ನಾವು ಒಸಾಕ ಕೋಟೆಯನ್ನು ನೋಡಲು ಹೊರಟೆವು.
ಒಸಾಕ ಕೋಟೆ
ಕೋಟೆಯೆಂದರೆ ನನಗೆ ನೆನಪಾಗುವುದು ರಾಜಸ್ಥಾನ. ಅದ್ಭುತವಾದ ಕೋಟೆಗಳನ್ನು ನಿರ್ಮಿಸಿ ನೆನಪಿಗೆ ಬಿಟ್ಟುಹೋಗಿದ್ದಾರೆ ಅಲ್ಲಿನ ರಾಜರು. ಜಪಾನಿನ ಒಸಾಕ ಕೋಟೆ ಹಲವಾರು ರಾಜರು ಆಳಿದ ಸ್ಥಳ. ಅದರದ್ದೇ ಇತಿಹಾಸವಿದೆ. ಮೂಲ ಕೋಟೆ, ಬೆಂಕಿಯಿಂದ ನಾಶವಾಗಿ ಈಗ ಇರುವುದು ಹೊಸದೆಂದೇ ಹೇಳಬಹುದು. ಕೋಟೆಯನ್ನು ಸಮೀಪಿಸಲು ಕಂದಕ ದಾಟಿ ಹೋಗಬೇಕು. ಎರಡು ಎತ್ತರದ ದಿಬ್ಬಗಳನ್ನು ಬಂಡೆಗಲ್ಲುಗಳಿಂದ ಮಾಡಿ ಸುತ್ತ ಕಂದಕ ನಿರ್ಮಿಸಿದ್ದಾರೆ. ಕೋಟೆ ಐದು ಅಂತಸ್ತುಗಳಿಂದ ಇರುವಂತೆ ಹೊರಗಡೆ ನೋಡುವಾಗ ಕಾಣುತ್ತದೆ. ಆದರೆ ಒಳಗೆ ಎಂಟು ಅಂತಸ್ತುಗಳಿವೆ. ಹೊರಗಡೆಯಿಂದ ನೋಡಲು ಪಗೋಡ ರೀತಿಯಲ್ಲಿ ಕಾಣುತ್ತದೆ. ತಿಳಿಹಸಿರು ಮತ್ತು ಬಿಳಿ ಬಣ್ಣದಲ್ಲಿದೆ. ಎರಡು ಬಾರಿ ಸಿಡಿಲು ಬಡಿದು ಸುಟ್ಟಿದೆ. ಮೀಜಿ ಸರ್ಕಾರದ ಅಡಿಯಲ್ಲಿ ಈ ಕೋಟೆಯಲ್ಲಿ ಮದ್ದು ಗುಂಡುಗಳನ್ನು ತಯಾರು ಮಾಡಿ ಸಂಗ್ರಹಿಸಲಾಗುತ್ತಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಲ್ಲಿ ಮದ್ದುಗುಂಡು ಮತ್ತು ಸ್ಫೋಟಕಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಲಾಗಿತ್ತು. ಅರವತ್ತು ಸಾವಿರ ಕೆಲಸಗಾರರು ಇಲ್ಲಿದ್ದರು.
ಇದರ ಮೇಲೆ ಬಾಂಬ್ ದಾಳಿ ಆಗಸ್ಟ್ 14, 1965 ರಲ್ಲಿ ನಡೆಯಿತು. ಬಹುತೇಕ ಕೋಟೆ ಧ್ವಂಸಗೊಂಡು 382 ಜನ ಪ್ರಾಣ ಕಳೆದುಕೊಂಡರು. 1995 ರಲ್ಲಿ ಕಟ್ಟಡವನ್ನು ಕಾಂಕ್ರೀಟಿನಿಂದ ಮತ್ತೆ ಕಟ್ಟಲಾಗಿದೆ. ಒಳಗೆ ಸಂಗ್ರಹಾಲಯ ಇದೆ. ಒಟ್ಟಿನಲ್ಲಿ ಈ ಕೋಟೆ ನನಗೆ ಅಷ್ಟೇನೂ ಮುಖ್ಯವಾದದ್ದು ಎನಿಸಲಿಲ್ಲ. ನಮ್ಮ ದೇಶದ ಕೋಟೆಗಳ ಭವ್ಯತೆ ಇಲ್ಲಿಲ್ಲ. ಕೋಟೆಗೆ ಹೋಗುವ ದಾರಿಯಲ್ಲಿ ಚೆರ್ರಿ ಮರಗಳ ಉದ್ಯಾನವಿದೆ. ಕೋಟೆಯ ಮುಂದೆ ಹಿಂದಿನ ಕಾಲದ ದಿರಿಸು ಧರಿಸಿದ ‘ಶೋಗನ್’ಗಳು ಇದ್ದರು. ಇವರು ಕತ್ತಿ ಹಿಡಿದು ಶಿರಸ್ತ್ರಾಣ ಧರಿಸಿ ಯುದ್ಧ ಮಾಡಲು ನಿಂತಿರುವ ವೀರರಂತೆ ಕಾಣಿಸುತ್ತಾರೆ. ಅವರ ಜೊತೆ ಚಿತ್ರ ತೆಗೆದುಕೊಳ್ಳಬಹುದು. ಆದರೆ ಹಣ ಕೊಡಬೇಕು. ಇದು ರೋಮ್‌ನ ಕಲೋಸಿಯಮ್ ಮುಂದೆ ಇದ್ದ ಗ್ಲೇಡಿಯೇಟರ್‌ಗಳನ್ನು ನೆನಪಿಗೆ ತಂದಿತು.
ಒಸಾಕ ಕೋಟೆಯ ಹತ್ತಿರವೇ ಆಧುನಿಕ ಕಟ್ಟಡಗಳು ತಲೆಯೆತ್ತಿವೆ. ಇದು ‘ದೃಶ್ಯಮಾಲಿನ್ಯ’ವನ್ನು ಉಂಟುಮಾಡುತ್ತಿದೆ ಎಂದು ನನ್ನ ಅಭಿಪ್ರಾಯ. ಸುಮಾರು ಒಂದು ಗಂಟೆಯ ಕಾಲ ಕೋಟೆಯ ಮುಂದೆ ಕಳೆದು ಬಸ್ಸಿಗೆ ವಾಪಾಸು ಬಂದೆವು. ಮೊದಲೇ ಬಸ್ಸಿನ ಫೋಟೋ ತೆಗೆದುಕೊಂಡಿದ್ದೆ. ಏಕೆಂದರೆ ಬಸ್ಸು ಇರುವ ಜಾಗ ತಿಳಿಯದೆ ನಾವು ಚೀನಾದ ಶಾಂಘೈನಲ್ಲಿ ಕಳೆದುಹೋಗಿದ್ದೆವು! ಹಾಗಾಗಬಾರದಲ್ಲ ಎಂದು ಈಗೆಲ್ಲ ನಾವು ಇಳಿದ ಸ್ಥಳ ಮತ್ತು ಬಸ್ಸಿನ ನಂಬರ್ ಪ್ಲೇಟಿನ ಫೋಟೋ ತೆಗೆದುಕೊಂಡಿರುತ್ತೇನೆ.
ಬಸ್ಸಿನಲ್ಲಿ ಒಸಾಕ ರೈಲ್ವೆ ನಿಲ್ದಾಣಕ್ಕೆ ಬಂದೆವು. ಸೀಟುಗಳನ್ನು ಬುಲೆಟ್ ರೈಲಿನಲ್ಲಿ ಮೊದಲೇ ಕಾದಿರಿಸಲಾಗಿತ್ತು. ಮಧ್ಯಾಹ್ನ 3.50 ಕ್ಕೆ ನಿಲ್ದಾಣದಲ್ಲಿದ್ದೆವು. ಚಿಕ್ಕ ಸೂಟ್‌ಕೇಸ್ ಜೊತೆ ಎರಡು ಸ್ಥಳಗಳಲ್ಲಿ ಎಸ್ಕಲೇಟರ್ ಹತ್ತಬೇಕಿತ್ತು. ಬಹಳ ದೊಡ್ಡ ಸ್ಟೇಷನ್. ವಿಮಾನ ನಿಲ್ದಾಣದ ಹಾಗೇ ದೊಡ್ಡದಾಗಿತ್ತು. ನಮ್ಮ ರೈಲು ಬಂದೇ ಬಿಟ್ಟಿತು. ಇದು ಶಿಂಕಾನ್‌ಸೆನ್ ಹಿಕಾರಿ ಎಕ್ಸ್‌ಪ್ರೆಸ್ ಆರಾಮಾಗಿ ಏರಿ ಕುಳಿತೆವು. ಅದು ಹೊರಡುವ ಸಮಯ 4.16 ಆಗಿತ್ತು. ಸರಿಯಾಗಿ 4.16 ಕ್ಕೆ ಹೊರಟೇ ಬಿಟ್ಟಿತು. ಸಮಯ ಪಾಲನೆಯನ್ನು ನಾವು ಜಪಾನೀಯರಿಂದ ಕಲಿಯಬೇಕು. ರೈಲು ಹೊರಡುವುದಕ್ಕೆ ಮುಂಚೆ ಎತ್ತರದ ಗೋಡೆಗಳಂತೆ ಇರುವ ವಿಭಾಗೀಯಗಳು ರೈಲಿನ ಆಚೀಚೆ ಬಂದ್ ಮಾಡಿಬಿಡುತ್ತವೆ. ಯಾರೂ ಕೊನೆಯ ಕ್ಷಣದಲ್ಲಿ ರೈಲಿನ ಹತ್ತಿರ ಬರುವ ಹಾಗೇ ಇಲ್ಲ. ಎಲ್ಲೆಲ್ಲೂ ಶಿಸ್ತು ಇದೆ ಎಂದರೆ ಅದು ಜಪಾನ್ ಎನ್ನಬಹುದು. ಇನ್ನು ನಮ್ಮ ಮುಂದಿನ ಗಮ್ಯ ಟೋಕಿಯೋ ನಗರ. ಎರಡು ದಿನ ಕ್ಯುಟೋದಲ್ಲಿ ಕಳೆದಾಗಿತ್ತು. ಎರಡೂವರೆ ಗಂಟೆಗಳ ಪ್ರಯಾಣ. ಒಸಾಕದಿಂದ ಟೋಕಿಯೋ 550 ಕಿ.ಮೀ. ದೂರ ಇದೆ. ಕೆಲಸದಿಂದ ಹಿಂದಿರುಗುವ ಅನೇಕ ಮಂದಿ ರೈಲಿನಲ್ಲಿದ್ದರು. ಕೆಲವರು ಅಲ್ಲಿಯೇ ಏನಾದರೂ ಕೊಂಡು ತಿನ್ನುತ್ತಿದ್ದರು.
ಏಳೂವರೆಗೆ ಟೋಕಿಯೋ ತಲುಪಿದೆವು. ಮತ್ತೆ ಇಲ್ಲಿಂದ ಮೆಟ್ರೊ ರೈಲನ್ನು ಹತ್ತಿ ಹೋಟೆಲನ್ನು ಸೇರಿದೆವು. ನಾವು ಈಗ ಉಳಿದಿದ್ದ ಹೋಟೆಲ್ ‘ಪರ್ಲ್’ ಎನ್ನುವ ಹೆಸರಿನಲ್ಲಿದ್ದು, ಇದು ಸ್ವಲ್ಪ ದೊಡ್ಡದಾಗಿತ್ತು ಎಂದೇ ಹೇಳಬೇಕು. ಕ್ಯೋಟೋನಲ್ಲಿ ನಾವಿದ್ದ ‘ಜಪಾನಿಂಗ್ ಹೋಟೆಲ್’ ರೂಮಿನಷ್ಟು ಚಿಕ್ಕದಲ್ಲ. ಅಲ್ಲಿ ನಾವು ನಮ್ಮ ಚಿಕ್ಕ ಸೂಟ್‌ಕೇಸನ್ನು ಕಾಲಿನ ಹತ್ತಿರ ಮಂಚದ ಮೇಲೆ ಇಟ್ಟುಕೊಂಡಿದ್ದೆವು. ಇಲ್ಲೂ ಹಾಗೇ ಮಾಡಿದೆವೆಂದು ನೆನಪು. ಹೋಟೆಲ್ ರೂಮುಗಳು ವಿಚಿತ್ರ ಎನ್ನಿಸಿತು. ಸ್ನಾನದ ಮನೆಯ ಬಾಗಿಲು ಹೊರಗೆ ತೆಗೆದುಕೊಳ್ಳುತ್ತದೆ. ಒಳಗೆ ಅಲ್ಲ, ನಾವು ಇದನ್ನು ಅಭ್ಯಾಸ ಮಾಡಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು. ನಮ್ಮ ಅಭ್ಯಾಸ ಬಾಗಿಲನ್ನು ನೂಕಿ ಒಳಗೆ ಪ್ರವೇಶ ಮಾಡುವುದಲ್ಲವೇ? ಇಲ್ಲಿ ತದ್ವಿರುದ್ಧ! ಹಾಸಿಗೆಗಳನ್ನು ಬೇರೆಯಾಗಿ ಹಾಕಿರುತ್ತಾರೆ. ಓಡಾಡಲು ಜಾಗವೇ ಇಲ್ಲ. ಒಬ್ಬರು ನಡೆದಾಡಿದರೆ ಇನ್ನೊಬ್ಬರು ಕೂರಬೇಕು. ಹಾಸಿಗೆ, ಮಂಚ ಹತ್ತಿ ಹೋಗಬೇಕಷ್ಟೆ. ಬಾತ್‌ರೂಮಿಗೆ ಹೋಗಲು ಒಂದು ಎತ್ತರದ ಮೆಟ್ಟಿಲು ಹತ್ತಬೇಕು. ಸಾಮಾನ್ಯವಾಗಿ ಜಪಾನೀಯರು ಕುಳ್ಳಗಿರುತ್ತಾರೆ. ಆದರೆ ಬಾತ್‌ಟಬ್ ಆಳೆತ್ತರ ಇತ್ತು! ಜಪಾನಿನ ಕಮೋಡ್‌ಗಳೇ ವಿಶಿಷ್ಟ. ನಿಮ್ಮ ಟಿ.ವಿ. ರಿಮೋಟ್ ಕಂಟ್ರೋಲ್ ಹಾಗೆ ಪಕ್ಕದಲ್ಲಿ ಇರುತ್ತದೆ. ನೀವು ಬಟನ್ ಒತ್ತಿದರೆ ನೀರು ಪುಳಕ್ ಎಂದು ಚಿಮ್ಮುತ್ತದೆ. ಸರಿಯಾಗಿ ಓದಿ ಬಟನ್ ಒತ್ತಬೇಕು. ಇಲ್ಲದಿದ್ದಲ್ಲಿ ಮೇಲೆ ತಾರಸಿಗೋ ಇಲ್ಲಾ ನಿಮ್ಮ ಮುಖಕ್ಕೋ ನೀರು ಜೆಟ್‌ನಂತೆ ಚಿಮ್ಮುವುದು ಗ್ಯಾರಂಟಿ! ಯಾವಾಗಲೂ ಬಾತ್‌ಟಬ್‌ಗೆ ಚಾಚಿ ಅಂಟಿದಂತೆ ಸಿಂಕ್ ಇರುತ್ತದೆ. ನಮಗೆ ಇದೆಲ್ಲಾ ವಿಚಿತ್ರ ಮತ್ತು ವಿಶಿಷ್ಟ ಅನುಭವ ನೀಡಿದುವು.
ಈಗ ಜಪಾನೀಯರು ಹೊರಗಿನವರನ್ನು ತಮ್ಮ ದೇಶಕ್ಕೆ ಬಿಟ್ಟುಕೊಳ್ಳುತ್ತಿದ್ದಾರೆ. ಹಲವು ದಶಕಗಳ ಹಿಂದೆ ಭಾರತೀಯರಿಗೆ ಹೋಟೆಲ್ ರೂಮುಗಳನ್ನು ಬಾಡಿಗೆಗೆ ಕೊಡಲು ಹಿಂಜರಿಯುತ್ತಿದ್ದರು ಎಂದು ಒಬ್ಬ ಹಿರಿಯರು ನನಗೆ ಹೇಳಿದರು. ಮನೆ ಬಾಡಿಗೆಗೆ ನೀಡಿದರೆ ಅಲ್ಲಿದ್ದ ಪೀಠೋಪಕರಣಗಳನ್ನು ಮತ್ತೆ ಉಪಯೋಗಿಸುತ್ತಿರಲಿಲ್ಲವಂತೆ. ಎಲ್ಲವನ್ನೂ ಸುಟ್ಟು ಹಾಕುತ್ತಿದ್ದರಂತೆ.
ನಮಗೆ ರಾತ್ರಿಯ ಊಟ ರೂಮಿಗೇ ತಂದು ನೀಡಿದರು. ಚಪಾತಿ, ದಾಲ್ ಮತ್ತು ಅನ್ನ. ಅಷ್ಟಾಗಿ ಹಿಡಿಸಲಿಲ್ಲ. ಅರ್ಧಕ್ಕೂ ಮಿಕ್ಕಿ ಕಸದ ಡಬ್ಬಕ್ಕೇ ಹೋಯಿತು. ಊಟ ಮಾಡಿ ಮಲಗಿದೆವು. ತಲೆನೋವು, ಭಾರ ಬಂದಿತ್ತು. ಮಾತ್ರೆ ನುಂಗಿ ಮಲಗಿದೆ.
(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33475
-ಡಾ.ಎಸ್.ಸುಧಾ, ಮೈಸೂರು
ಓದುತ್ತಾ ಸಾಗಿದಂತೆ ದೃಶ್ಯಗಳು ಕಣ್ಣ ಮುಂದೆ ಬಂದ ಅನುಭವ
Thanks nayana. thanks for the encouragement
ಎಂದಿನಂತೆ ಪ್ರವಾಕಥನ ಸಾಗುತ್ತಿದೆ ತಾವು ನೋಡಿದ ಸ್ಥಳ ಅದರ ಹಿನ್ನೆಲೆ ಅಲ್ಲಿನ ರೀತಿ ನೀತಿಗಳ ಸೂಕ್ಷ್ಮ ಅವಲೋಕನ ಹೊಸಜಾಗಕ್ಕೆ ಹೋದಾಗ ಗಮನಿಸಬೇಕಾದ ಅಂಶ ಇವೆಲ್ಲವನ್ನೂ…ಬಹಳ ಚೆನ್ನಾಗಿ ಮೂಡಿಸಿದ್ದೀರಾ ಮೇಡಂ ಧನ್ಯವಾದಗಳು.
Thanks nagarathna. i get spoorti from your words
ಜಪಾನಿನ ಪ್ರವಾಸೀ ತಾಣಗಳನ್ನು ಕಣ್ಣಿಗೆ ಕಟ್ಟುವಂತೆ ಸೂಕ್ತ ಮಾಹಿತಿಗಳ ಜೊತೆ ನೀಡುತ್ತಿರುವುದು ಅಭಿನಂದನೀಯ.
ಪೂರಕ ಚಿತ್ರಗಳೊಂದಿಗೆ ಸುಂದರ ಪ್ರವಾಸ ಕಥನ ಖುಷಿಕೊಟ್ಟಿತು.
Thanks for your encouragement shankari