ಮನೆಯ ಮೋಹ

Share Button

ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವಂಥ ಪ್ರತಿಯೊಂದು ಸಜೀವ ಹಾಗು ನಿರ್ಜಿವ ವಸ್ತುವಿಗೂ ಆರಂಭ ಮತ್ತು ಅಂತ್ಯಗಳು ಇದ್ದೇ ಇರುತ್ತವೆ. ಆರಂಭದಲ್ಲಿ ಯಾವುದೇ ವಸ್ತು \ ವ್ಯಕ್ತಿ ಯಲ್ಲಿ ಅಂಕುರಿಸುವ ಆಸೆಯ ಮೊಳಕೆ ಅವರ/ ಅದರ ಸಾಂಗತ್ಯದಲ್ಲಿ ವ್ಯಾಮೋಹದ ಸಸಿಯು ಬೆಳೆದು ಬಲಿತು ಹೆಮ್ಮರವಾಗಿ ಬೇರುಬಿಟ್ಟಿರುತ್ತದೆ. ಪ್ರಪಂಚದ ಎಲ್ಲಾ ಜೀವಿಗಳಿಗೂ ಅಗತ್ಯವಾದ ಮೂಲ ಭೂತ ವಸ್ತುಗಳಲ್ಲಿ ಮನೆಯೂ ಒಂದು. ಎಲ್ಲರಿಗೂ “ಹೇಳ್ಕಳಕೊಂದು ಊರು, ತಲೆ ಮೇಲೊಂದು ಸೂರು” ಬೇಕೆ ಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸ್ವಂತ  ಮನೆಯಿರಬೇಕೆಂದು ಕನಸು ಕಾಣುತ್ತಾನೆ .ಆವನಲ್ಲಿನ ಆ ಕನಸು ನನಸಾಗಲು ಬಹಳ ಪರಿಶ್ರಮವನ್ನು ಬೇಡುತ್ತದೆ ಆದ್ದರಿಂದ ಅದರಮೇಲಿನ ಮೋಹ ಬಿಟ್ಟು ಬಿಡುವುದು   ಅಷ್ಟು ಸುಲಭ ಸಾಧ್ಯವಲ್ಲ. ಕಟ್ಟಿದ ನಂತರ ಮನೆಯಲ್ಲಿ ವಾಸ ಮಾಡುತ್ತ ಆ ಮನೆಯ ಮೇಲೆ ನಮ್ಮ ಮನದಲ್ಲಿ ನಮಗರಿವಿಲ್ಲದೆ ವ್ಯಾಮೋಹ ಆವರಿಸಿ ಬಿಟ್ಟಿರುತ್ತದೆ. ಆ ನಾವಿದ್ದ ಮನೆ ಭೌತಿಕವಾಗಿ ಅಳಿದರೂ ಮಾನಸಿಕವಾಗಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ.

ಆದರೂ ಈ ಮನೆಯ ಬಗ್ಗೆ  ಮಾತನಾಡುವಾಗ ನಮ್ಮಲ್ಲಿ ಹೆಣ್ಣು ಮಕ್ಕಳು ತಾವು ಹುಟ್ಟಿ ಬೆಳೆದ ಮನೆಗೇ ಹೊರಗಿನವರಾಗುವ ಸಂದಿಗ್ಧ ಪರಿಸ್ಥಿತಿ ಮಾತ್ರ ವಿಷಾದಕರ ಸಂಗತಿ  ಹುಟ್ಟಿ ಬೆಳೆದು ಮದುವೆಯಾಗುವ ತನಕ  ತನ್ನದೆ ಆಗಿದ್ದ ಮನೆ ಮದುವೆಯಾದ ಮರುಕ್ಷಣಕ್ಕೆ ತವರುಮನೆಯಾಗಿ ಬಿಡುತ್ತದೆ. ಮೊದಲಿನ ಸ್ವಾತಂತ್ಯವು ಅವಳಿಗರಿವಿಲ್ಲದೇ ಕಳೆದುಹೋಗುತ್ತದೆ. ವಿವಾಹವಾದ ಕ್ಷಣದಿಂದ ಅಲ್ಲಿಯ ತನಕ ಅಪರಿಚಿತವಾಗಿದ್ದ ಮನೆಯೇ ಅವಳ ಮನೆಯಾಗಿ ಬಿಡುತ್ತದೆ. ತವರು ಮನೆಯಲ್ಲಿ ಕಳೆದುಕೊಂಡ ಹಕ್ಕನ್ನು  ಗಂಡನ ಮನೆಗೆ ಕಾಲಿಟ್ಟ ಕ್ಷಣದಿಂದಲೇ ಗಳಿಸುತ್ತಾಳೆ. ಆಗ ಅವಳ ಗಂಡನ ಮನೆಯೇ ಅವಳ ಮನೆ. ಮುಂದೆ ತಾನು ಹುಟ್ಟಿ ಬೆಳೆದ ಮನೆಯನ್ನೇ ತನ್ನ ತವರುಮನೆ ಎನ್ನುವಳು “ಕೊಟ್ಟು ಹೆಣ್ಣು ಕುಲಕ್ಕೆ ಹೊರಗು” ಎಂಬ ನಾಣ್ನುಡಿಯು ಕಲ್ಲು ಮನಸ್ಸಿನ ಕಟು ಮಾತಾಗಿ ಅರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿದೆ. ಬೆಂಗಳೂರಿನ ಸಮಾರಂಭವೊಂದರ ಭಾಷಣದಲ್ಲಿ ಶ್ರೀಯುತ ರಾಜ್ ಕುಮಾರ್ ಮಡಿವಾಳರ್ ಎಂಬ ಸಾಹಿತಿಯು ಹೆಣ್ಣಿನ ತವರುಮನೆಯಿಂದ ಗಂಡನ ಮನೆಯವರೆಗಿನ ಬದುಕಿನ ಈ ಪಯಣವನ್ನು “ವಲಸೆ” ಗೆ ಹೋಲಿಸಿದ್ದು ಸಮಂಜಸವಾಗಿತ್ತು. ಶತಮಾನಗಳಿಂದ ನಮ್ಮಲ್ಲಿ ರಕ್ತಗತವಾಗಿ ಮೈಗೂಡಿ ಬಂದಿರುವ ನಮ್ಮ ಈ ಸಂಸ್ಕೃತಿಯ ಪ್ರಭಾವವೇ ಇದಕ್ಕೆ ಕಾರಣವೆನ್ನಬಹುದು.

ಪ್ರತಿಯೊಂದು ಜೀವಿಗೂ ಒಂದು ಮನೆಯ ಅವಶ್ಯಕತೆ ಇರುತ್ತದೆ. ಮೂಲ ಕಲ್ಪನೆಯಲ್ಲಿ ವಾಸ ಮಾಡುವ ಸ್ಥಳವೆ ಆದರೂ ವಿವಿಧ ಜೀವಿಗಳು ವಾಸವಾಗುವ ಜಾಗಗಳಿಗೆ ಒಂದೊಂದು ತರಹದ ಹೆಸರು.ಮನುಜನಿಗೆ ಮನೆ,ಪಕ್ಷಿಗೆ ಗೂಡು,ವನ್ಯಮೃಗಗಳಿಗೆ ಗುಹೆ, ಹಾವುಗಳಿಗೆ ಹುತ್ತ, ಇಲಿ ಹೆಗ್ಗಣಗಳಿಗೆ ಬಿಲ, ದನಕರುಗಳಂಥ ಸಾಕುಪ್ರಾಣಿಗಳಿಗೆ ಕೊಟ್ಟಿಗೆ ಇತ್ಯಾದಿ. ಗೀಜಗ ಪಕ್ಷಿಯು ಅದೆಷ್ಟೂ ಸೊಗಸಾಗಿ ತನ್ನ ಗೂಡನ್ನು ತಲೆಕೆಳಗಾದಂಥ ವಿನ್ಯಾಸದಲ್ಲಿ ಕಟ್ಟುತ್ತದೆ ಎಂದರೆ ಆ ಪಕ್ಷಿಯನ್ನು “ಪಕ್ಷಿಲೋಕದ ಇಂಜಿನೀಯರ್ ” ಎಂದು ಕರೆಯುತ್ತಾರೆ. ಮನೆ ಕಟ್ಟುವಾಗ ಆಗುವ ಖರ್ಚು ವೆಚ್ಚಗಳ ಕಷ್ಟವನ್ನು ಗಮನಿಸಿಯೇ “ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು” ಎಂಬ ಗಾದೆ ಹುಟ್ಟಿರಬೇಕು . ಮನೆ ಎಷ್ಟೇ ಪುಟ್ಟದಿರಲಿ, ಗುಡಿಸಲೇ ಆಗಲಿ ಸ್ವಂತ ಮನೆ ಕೊಡುವ ತೃಪ್ತಿ ಮತ್ತು ನೆಮ್ಮದಿಗೆ ಬೆಲೆ ಕಟ್ಟಲು ಅಸಾಧ್ಯ. ಮನೆ ಕಟ್ಟಿದ ನಂತರ ಆ ಮನೆಗಿಡುವ ಹೆಸರು ಮನೆಯ ಯಜಮಾನ/ ಯಜಮಾನಿಯ ಅಭಿರುಚಿಗೆ ಸಾಕ್ಷಿಯೇ ಸರಿ. ಹಿಂದೆ ಮನೆಗಳಿಗೆ ದೇವರು ಹೆಸರನ್ನಿಡಲಾಗುತ್ತಿತ್ತು  ಈಗೀಗ ಭಾವನಾತ್ಮಕ ನೆಲೆಯ ನಂಟಿನ ಪ್ರತೀಕವಾಗುವ ಹೆಸರುಗಳನ್ನು ಕಾಣಬಹುದು ಉದಾ: ಮಡಿಲು, ನೆರಳು, ಅಮ್ಮ, ತವರುಮನೆ, ವಲ್ಮೀಕ, ಗುಹೆ, ಗೂಡು ಇತ್ಯಾದಿ .ನನಗಂತು ಪ್ರತಿಯೊಂದು ಮನೆಯ ಅಂದ ಚೆಂದದ ಜತೆ ಹೆಸರನ್ನು ಸಹ ಗಮನಿಸಿ ಆನಂದಿಸುವ ಅಭ್ಯಾಸವಿದೆ.

ಮನೆ ಕಟ್ಟಿದ ದಿನದಿಂದ ಹುಟ್ಟಿದ ಸ್ವಂತ ಮನೆಯ ಸೆಳೆತ ಸಾಯುವತನಕ ಜೀವಂತವಾಗಿರುತ್ತದೆ. ನಾವು ಎಲ್ಲಿಗೇ ಹೋದರೂ ತನ್ನ ಮನೆಗೆ ಮರಳಬೇಕೆನ್ನುವ
ತುಡಿತವನ್ನು ಅನುಭವಿಸದಿರುವ ಜೀವಿಗಳೇ ಇಲ್ಲವನ್ನಲು ಅಡ್ಡಿಯಿಲ್ಲ ಶಾಲೆ ಬಿಟ್ಟೊಡನೆ ಗುಂಪು ಗುಂಪಾಗಿ ಓಡುವ ಮಕ್ಕಳು, ಸಂಜೆಯ ವೇಳೆಗೆ ಮರಳಿ ಗೂಡಿನತ್ತ ಹಾರುವ ಹಕ್ಕಿಗಳ  ಸಮೂಹ, ಗೋಧೂಳಿ ಸಮಯದಲ್ಲಿ ಕೊಟ್ಟಿಗೆಯ ಕಡೆಗೆ ಧಾವಿಸುವ ದನಗಳ ಹಿಂಡನ್ನು ನೋಡಿದವರಿಗೆ ಮಾತ್ರವೆ ಮನೆಯ ಸೆಳೆತ ಏನೆಂಬುದು ಅರಿವಿಗೆ ಬರುವುದು. ಎಷ್ಟೆ ಉನ್ನತವಾದ ಅಧಿಕಾರಿಯಾಗಲಿ ತನ್ನ ಕರ್ತವ್ಯದ ವೇಳೆ ಮುಗಿದೊಡನೆ ಮನೆಯೇ ಅವನ ಗಮ್ಯವಾಗಿರುವುದು. ಮನೆಯೆಂದರೇ ಕೇವಲ ಕಟ್ಟಡ ಮಾತ್ರವಲ್ಲ ಮಾತೆಯ ಮಮತೆಯ ಮಡಿಲಿಗೆ ಪರ್ಯಾಯವಾಗುವ ಬೆಚ್ಚನೆಯ ಹಿತವಾದ ಜಾಗ.ಅದು ಗುಡಿಸಲಾಗಲಿ, ಮಹಲೇ ಆಗಲಿ ಅದು ಅವನ ಸ್ವಂತ. ಅದೊಂದು ರೀತಿಯಲ್ಲಿ ಅವನದೇ ಆದ ಸಾಮ್ರಾಜ್ಯ. ಅಲ್ಲಿ ಅವನ್ಯಾರಿಗೂ ಅಡಿಯಾಳಲ್ಲ.  ಅವನು ಸರ್ವ ಸ್ವತಂತ್ರ. ಅದು ಅವನದೇ ಆದ ಖಾಸಗಿ ವಲಯ.ಅಲ್ಲಿ ಅವನ ಭಾವನೆಗಳಿಗೆ ಬೆಲೆಯಿದೆ. ಮನೆ ಎಂದರೆ ಸ್ವಂತ ಮನೆಯೆ ಆಗಬೇಕಿಲ್ಲ. ಬಾಡಿಗೆ ಮನೆಯೆ ಆದರೂ ಅಲ್ಲಿ ಅವನಿರುವ ತನಕ ಅದು ಅವನದೇ ಸರಿ  ಸ್ಟಂತದ  ಮನೆಯಾದರೆ ಅಲ್ಲಿ ಅವನ/ ಅವಳ ಜನನ, ಬಾಲ್ಯದ ನೆನಪು, ವಿದ್ಯಾಭ್ಯಾಸ,ವಿವಾಹ, ಸಾವುನೋವು  ಹೀಗೆ ಜೀವನದ ಎಲ್ಲಾ ಪ್ರಮುಖ ಘಟ್ಟಗಳೊಂದಿಗೆ ಆ ಮನೆಯು ಅವನೊಂದಿಗೆ ಬೆಸೆಯಲ್ಪಟ್ಟ ಕಾರಣದಿಂದಲೆ ಬಿಡಿಸಲಾಗದ ಭಾವನಾತ್ಮಕ  ಬಂಧನವಾಗಿ ಬಿಡುತ್ತದೆ. ಒಂದು ರೀತಿಯಲ್ಲಿ ಆ ಮನೆಯು ಅವನ ಇಡೀ ಬದುಕಿನ  ಅವಿಭಾಜ್ಯ ಅಂಗವಾಗಿರುತ್ತದೆ.

ಹಿಂದೆಲ್ಲಾ ಯಾವುದೇ ವ್ಯಕ್ತಿ ತನ್ನ ಬಾಲ್ಯದ ದಿನಗಳಿಂದ ಹಿಡಿದು ವೃದ್ಧಾಪ್ಯದ ದಿನಗಳ ತನಕ ಒಂದೇ ಊರಿನಲ್ಲಿ ಒಂದೇ ಮನೆಯಲ್ಲಿ ಬಾಳಿ ಬದುಕುತ್ತಿದ್ದನು. ಬದಲಾದ ದಿನಗಳಲ್ಲಿ ವಿದ್ಯಾಭ್ಯಾಸ,ಉದ್ಯೋಗ ಮತ್ತು ವೈಯುಕ್ತಿಕ ಕಾರಣಗಳಿಂದ ಒಂದೇ ಮನೆಯಲ್ಲಿ ಬದುಕು ಸಾಗಿಸಲು ಅಸಾಧ್ಯವಾಗಿದೆ. ಬದಲಾದ ಈ ವ್ಯವಸ್ಥೆಯಲ್ಲಿ ಅನೇಕ ಜನ ತಂದೆತಾಯಿಗಳು ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮ ಮಕ್ಕಳೊಡನೆ ಬದುಕಲೆ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದಾಗ ತಾವು ಬಾಳಿ ಬದುಕಿದ ಮನೆಯನ್ನು ಬಿಟ್ಟು ಹೊರಡುವ  ಅತೀವ ಸಂಕಟವನ್ನು ಅನುಭವಿಸುತ್ತಾರೆ. ಆ ಮನೆಯಲ್ಲಿ ಬಾಳುತ್ತ ಅದರೊಡನೆ ಬೆಳೆಸಿಕೊಂಡಂಥ ಭಾವನಾತ್ಮಕ ಸಂಬಂಧಗಳ ವ್ಯಾಮೋಹವೇ ಇದಕ್ಕೆಲ್ಲಾ ಕಾರಣ. ಅಂತಹ ಸಂದಿಗ್ಧ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಸ್ಥಿತಿಗೆ ತಯಾರಾಗುವ ದಿನಗಳಲ್ಲಿ ಅವರ ಪರಿಸ್ಥಿತಿ ಹೇಗಿರುತ್ತದೆಯೆಂದರೆ ತನಗಿಷ್ಟವಾದ ಸಿಹಿತಿಂಡಿಯನ್ನು ಕೈಯಲ್ಲಿಟ್ಟುಕೊಂಡ ಮಗು ಹೆಚ್ಚು ತಿಂದರೆ ಬೇಗ ಬೇಗನೆ ಮುಗಿಯುವ ಚಿಂತೆಯಲ್ಲಿ ಚೂರು ಚೂರೇ ನಿಧಾನವಾಗಿ ತಿಂದು ಮುಗಿಸುವ ಹಾಗೇ ತಾವು ಆ ಮನೆಯಲ್ಲಿರುವ ತನಕವೂ ಅದರ ಸಾಂಗತ್ಯವನ್ನು ಅತಿ ತೀವ್ರವಾಗಿಯೇ  ಅನುಭವಿಸುವ ಮಟ್ಟಕ್ಕೆ ಬಂದಿರುತ್ತಾರೆ. ಇಂಥಾ ಮನೆ ಎಂಬ ಮಾಯೆಯ ವ್ಯಾಮೋಹವು ನಮ್ಮ  ದಾರ್ಶನಿಕ ಹಾಗೂ ರಾಷ್ಟ್ರಕವಿ  ಕುವೆಂಪುರವರನ್ನೂ ಸಹಾ ಬಿಟ್ಟಿಲ್ಲ ಎಂಬುದಕ್ಕೆ ಅವರು ಬರೆದ “ನನ್ನ ಮನೆ”ಎಂಬ ಕವಿತೆಯೆ ಸಾಕ್ಷಿಯಾಗಿದೆ.

ನನ್ನದಲ್ಲದಿಳೆಯೊಳಿಂದು
ಹೆಮ್ಮೆಯಿಂದ ನನ್ನದೆಂದು
ಬೆಂದು ಬಳಲಿದಾಗ ಬಂದು
ನೀರು ಕುಡಿದ ನನ್ನ ಮನೆ ! “

ನಿರಾಕಾರವಾದ ನಮ್ಮ ಮನದಲ್ಲಿ ಮನೆಯನ್ನು ಸಾಕಾರ ಮಾಡಲು ಮತ್ತು ಮನೆಯೆಂದಾಕ್ಷಣ ನಮ್ಮ ಮನದಲ್ಲಿ  ಮೂಡಿದ ಅಮೂರ್ತಭಾವಗಳನ್ನು ಮೂರ್ತಗೊಳಿಸಲು ಇಂತಹ ಸಶಕ್ತ ಪದಗಳೇ ಸಾಕು ! ತಂತಮ್ಮ ಮನೆಯಲ್ಲಿ ಬಾಳಿ ಬದುಕಿದ ಎಲ್ಲರ ತನುಮನಗಳ ಅಂತರಾಳದಿಂದ ಬಂದು ಮಾತುಗಳೇ ಆಗಿವೆ.

ಎಂ.ಆರ್. ಅನಸೂಯ

16 Responses

  1. ಅರ್ಥಪೂರ್ಣವಾದ ಬರಹ. ಧನ್ಯವಾದಗಳು

  2. ನಾಗರತ್ನ ಬಿ. ಅರ್. says:

    ಮನೆಯ ಬಗ್ಗೆ ಬರೆದಿರುವ ಲೇಖನ ಬಹಳ ಚೆನ್ನಾಗಿದೆ
    ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ ಎನ್ನುವ ಮಾತು ಹಿರಿಯರು ಬಾಯಿಯಿಂದ ಆಗಾಗ ಕೇಳುತ್ತಿರುತ್ತೇವೆ..ಆದರೆ ಇಲ್ಲಿರುವವರೆಗೂ ಬೇಕು.ಹಾಗೇ ಮನೆ ಚಿಕ್ಕದಾದರೂ ಸರಿ ದೊಡ್ಡದಾದರೂ ಸರಿ..
    ಮನಸ್ಸು ದೊಡ್ಡ ದಾಗಿರಬೇಕಷ್ಟೆ.ಅಭಿನಂದನೆಗಳು ಮೇಡಂ.

  3. ನಯನ ಬಜಕೂಡ್ಲು says:

    ಸುಂದರವಾದ ಬರಹ

  4. PC kasturi says:

    ಬರಹ ಚೆನ್ನಾಗಿದೆ

  5. Padma Anand says:

    ಜೀವನದ ಅತ್ಯಗತ್ಯಗಳಲ್ಲಿ ಒಂದಾದ ಮನೆಯ ಬಗ್ಗೆ ಭಾವನಾತ್ನಕವಾಗಿ ಬರೆದಿರುವ ಲೇಖನ ಸುಂದರವಾಗಿದೆ.

  6. ಶಂಕರಿ ಶರ್ಮ says:

    ಹೌದು..ಸ್ವಂತ ಮನೆಯೊಂದು ಇರಬೇಕೆಂಬುದು ಸಾಮಾನ್ಯವಾದ ಆಸೆ. ಜೇಬಿನ ಗಾತ್ರಕ್ಕೆ ತಕ್ಕಂತೆ ಅವುಗಳ ಗಾತ್ರ! ಆದರೆ, ಮನೆ ಸಣ್ಣದಾಗಿದ್ದರೂ ಮನ ದೊಡ್ಡದಾಗಿದ್ದರೆ ಮನ:ಶಾಂತಿ ಲಭಿಸುತ್ತದೆ…ತದ್ವಿರುದ್ಧವಾದರೆ??!
    ಸೊಗಸಾದ ಬರಹ ಮೇಡಂ.

  7. B c n murthy says:

    ಚೆನ್ನಾಗಿದೆ

  8. padmini says:

    ಭಾವನಾತ್ನಕಲೇಖನ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: