ಸಾಂಸ್ಕೃತಿಕ ಹೊಳಲ್ಕೆರೆ : ಶೈಕ್ಷಣಿಕ ಪ್ರವಾಸ ಕಥನ-ಭಾಗ 3
(ಕಳೆದ ಸಂಚಿಕೆಯಿಂದ ಮುಂದುವರಿದುದು..)
6 ಸ್ತ್ರೀ ದೈವಾರಾಧನೆ
ಸ್ತ್ರೀ ದೈವಗಳ ಆರಾಧನೆಗೆ ಸಂಬಂಧಿಸಿದಂತೆ ಕರಿಯಮ್ಮನದು 49, ಕುಕ್ಕವಾಡೇಶ್ವರಿ 46, ಮಾರಮ್ಮ 33, ದುರ್ಗಮ್ಮ 29, ಚೌಡಮ್ಮ 26, ಗುಳ್ಳಮ್ಮ 7, ಕೊಪ್ಪದಮ್ಮ 6, ಕಾಳಿ 5, ಹೊಳಲಮ್ಮ 5, ಎಲ್ಲಮ್ಮ 4, ದೊಡ್ಡಮ್ಮ 4, ಕೆಂಡದಮ್ಮ 4, ಮಾತಂಗೆಮ್ಮ 3, ಬನಶಂಕರಿ 3, ಮೈಲಮ್ಮ 3, ಮಿಡಿಸೆಮ್ಮ 2, ಉಡುಸಲಮ್ಮ 2, ಸಪ್ತಮಾತೃಕೆಯರು, ಚಿಕ್ಕಮ್ಮ, ಹಳ್ಳದ ಗಂಗಮ್ಮ, ಉತ್ಸವಾಂಬ, ಪ್ಲೇಗಮ್ಮ, ಮುತ್ತಮ್ಮ, ಹುಲಿಗೆಮ್ಮ, ಅಂತರಗಟ್ಟಮ್ಮ, ಬುರುಜಿನಮ್ಮ, ಸಾವೇರಮ್ಮ ಇವರದು ತಲಾ ಒಂದೊಂದು ದೇವಾಲಯಗಳು ಇವೆ. ಶಿಷ್ಟ ದೇವಿಯರಾದ ಲಕ್ಷ್ಮೀದೇವಿಯದು 13, ಏಕನಾಥೇಶ್ವರಿಯದು 4, ಪಾರ್ವತಿಯದು 3 ದೇವಾಲಯಗಳು ಮಾತ್ರ ಇವೆ.
ಭಾರತೀಯ ಚಿಂತನೆಯಲ್ಲಿ ಪ್ರಕೃತಿ ಸ್ತ್ರೀ ತತ್ತ್ವ. ಪ್ರಕೃತಿಯನ್ನು ಎಲ್ಲ ಬಗೆಯ ಸಹಜ ಸಂಪತ್ತಿನ ಮೂಲವಾದ ಲಕ್ಷ್ಮಿ ದೇವಿ ಎಂದು ವೈಷ್ಣವ ಪಂಥೀಯರೂ, ಎಲ್ಲಾ ಬಗೆಯ ಸತ್ವ-ಶಕ್ತಿ ರೂಪವಾದ ದುರ್ಗಿ (ಪಾರ್ವತೀ) ಎಂದು ಶೈವ ಪಂಥೀಯರು ಆರಾಧಿಸುತ್ತಾರೆ. ಪ್ರಕೃತಿಯ ವಿವಿಧ ಭಾವಗಳನ್ನು ಸ್ತ್ರೀದೈವವೆಂದು ಆರಾಧಿಸುವುದು ಎಲ್ಲಿ, ಯಾಕೆ ಪ್ರಮುಖವಾಗುತ್ತದೆ ಎಂಬುದಕ್ಕೆ ದೇವಿಪ್ರಸಾದ ಚಟ್ಟೋಪಾಧ್ಯಾಯರ ವಿಶ್ಲೇಷಣೆ ಕುತೂಹಲಕಾರಿಯಾದದ್ದು. ಗುಡ್ಡ, ಬೆಟ್ಟ, ಕಾಡು, ಕಣಿವೆಗಳೇ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಪ್ರಕೃತಿಯನ್ನು ಪಳಗಿಸುವುದಕ್ಕಿಂತ ಅದು ಇರುವಂತೆಯೇ ಅದರ ಗರಿಷ್ಠ ಲಾಭವನ್ನು ಪಡೆಯುವುದೇ ಸೂಕ್ತ ಆಗಿರುತ್ತದೆ; ಅಲ್ಲಿ ಪ್ರಕೃತಿಯ ಬಗೆಗೆ ಭಯ ಭಕ್ತಿಯಿಂದೊಡಗೂಡಿದ ಪೂಜ್ಯಭಾವನೆ ಇರುವುದೇ ಸ್ವಾಭಾವಿಕ; ಆ ಭಾವವು ಅನುನಯ, ಶರಣಾಗತಿ, ದೈನ್ಯಯುತ ಪ್ರಾರ್ಥನೆ ಮುಂತಾದ ರೂಪದಲ್ಲಿರುತ್ತದೆ ಎನ್ನುತ್ತಾರೆ ದೇವಿಪ್ರಸಾದ ಚಟ್ಟೋಪಾಧ್ಯಾಯರು.
ಆಡಳಿತಾಧಿಕಾರ ಪುರುಷರದೇ ಆಗಿದ್ದುದು, ಇಲ್ಲಿಯ ಆಡಳಿತಗಾರರು ವಿಭಿನ್ನ ಪ್ರದೇಶಗಳ ಸಾಮ್ರಾಟರಿಗೆ ಅಧೀನರಾಗಿಯೇ ತಮ್ಮ ಅಧಿಕಾರವನ್ನು ಚಲಾಯಿಸ ಬೇಕಾಗಿದ್ದುದು ಇವುಗಳಿಂದಾಗಿ ಪುರುಷ ದೈವಗಳ ಆರಾಧನೆಯಲ್ಲಿ ಶಿಷ್ಟ ದೈವಗಳೇ ಪ್ರಾಧಾನ್ಯತೆ ಪಡೆದದ್ದು ಸಹಜ ಎಂದೆನ್ನಬಹುದು. ಆದರೆ ಇಂಥ ಸಂದರ್ಭ ಸ್ತ್ರೀದೈವಾರಾಧನೆಯದಲ್ಲ. ಜೊತೆಗೆ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯಿಂದ ಹೊಳಲ್ಕೆರೆ ಸೀಮೆಯೂ ಪ್ರಭಾವಿತ ಆಗಿತ್ತು. ಬಸವಣ್ಣನವರ ಹೆಸರಿನಲ್ಲಿ ಇಲ್ಲಿ ಬಿಜ್ಜೆನಾಳ ಬಸವಾಪುರ ಇದೆ. 38 ಬಸವೇಶ್ವರ ದೇವಾಲಯಗಳು ಇವೆ.
ಪ್ರಾಚೀನ ಹೊಳಲ್ಕೆರೆ ಸೀಮೆ ಸುಲಭವಾಗಿ ಪಳಗಿಸಲಾಗದ ಪ್ರಾಕೃತಿಕ ಸಂಪತ್ತುಳ್ಳ ಪ್ರದೇಶ ಆಗಿದ್ದುದೂ, ಬಸವಣ್ಣನವರ ಚಿಂತನೆಯ ಪ್ರಭಾವ ಸ್ತ್ರೀ ದೈವಗಳ ಪ್ರಾಧಾನ್ಯತೆ ಕುಂದದಿರುವುದಕ್ಕೆ ಪೂರಕ ಕಾರಣವಾಗಿರಬಹುದಾದ ಸಾಧ್ಯತೆಯೂ ಇಲ್ಲಿ ಶಿಷ್ಟವಲ್ಲದ ಸ್ತ್ರೀ ದೈವಗಳ ಆರಾಧನೆಯಲ್ಲಿ ಯಾವ ವಿಶೇಷ ಬದಲಾವಣೆ ಆಗದಿರುವುದಕ್ಕೆ ಕಾರಣ ಎಂದೆನ್ನಬಹುದು.
7 ಪ್ರಸ್ತುತ ಇತಿಹಾಸ
ಈಗಿನ ಹೊಳಲ್ಕೆರೆ ಪಟ್ಟಣದ ಇತಿಹಾಸ 10ನೇ ಶತಮಾನದಿಂದ ಆರಂಭವಾಗಿದೆ. ಇದನ್ನು ನಿರ್ಮಿಸಿದವನು ಬೋಯಿನಾಯಕ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಇದು ಕದಂಬರ ಕಾಲದಿಂದ ಹಿಡಿದು ಚಿತ್ರದುರ್ಗದ ಪಾಳೆಯಗಾರರ ಕಾಲದವರೆಗೆ ಪ್ರಾಮುಖ್ಯತೆಯನ್ನು ಹೊಂದಿದ್ದರೂ ಇದು ವಿಶೇಷ ಗಮನ ಸೆಳೆದದ್ದು ವಿಜಯನಗರದ ಅರಸರು ತಿಮ್ಮಣ್ಣನಾಯಕ ಎಂಬಾತನನ್ನು ಹೊಳಲ್ಕೆರೆ ಸೀಮೆಯ ನಾಯಕನನ್ನಾಗಿ ನೇಮಕ ಮಾಡಿದ ನಂತರ ಎನ್ನುತ್ತಾರೆ ಇತಿಹಾಸಕಾರರು. ಇದರ ಸಮೀಪದಲ್ಲಿಯೇ ಹೊಯ್ಸಳರ ಮುಮ್ಮಡಿ ಬಲ್ಲಾಳನಿಗೂ ಯಾದವ ದೊರೆ ಸಂಕಮದೇವನಿಗೂ ಕಾಳಗ ನಡೆಯಿತು ಎನ್ನುವುದು ಹೊಳಲ್ಕೆರೆ ಪಟ್ಟಣ ರಾಜಕೀಯವಾಗಿ ಮಹತ್ವದ ಕೇಂದ್ರ ಆಗಿತ್ತು ಎನ್ನುವುದರ ಸೂಚಕ.
ಇಲ್ಲಿರುವ ಪುರಾತನ ದೇವಾಲಯಗಳಲ್ಲಿ ವೇಣುಗೋಪಾಲ ಸ್ವಾಮಿ, ಪ್ರಸನ್ನ ಗಣಪತಿ ದೇವಾಲಯಗಳು ವಿಶೇಷವಾದದ್ದು. ಇಲ್ಲಿಯ ಗಣಪತಿ ಎಲ್ಲರಿಗೂ ಸುಪ್ರಸನ್ನ. ಗಣಪತಿಯ ವಿಗ್ರಹ 9’ ಎತ್ತರವಿದ್ದು ಹಂಪೆಯ ಬೃಹತ್ ಗಣಪತಿಗಳನ್ನು ಶಿಲ್ಪಕಲೆಯ ದೃಷ್ಟಿಯಿಂದ ಹೋಲುತ್ತದೆ. ಚಿತ್ರದುರ್ಗದ ಮದಕರಿನಾಯಕನ ಮೈದುನ ಗುಲ್ಯಪ್ಪ ನಾಯಕ ಈ ವಿಗ್ರಹವನ್ನು 1570ರಲ್ಲಿ ನಿರ್ಮಿಸಿ ತನ್ನನ್ನೂ ಅಜರಾಮರನನ್ನಾಗಿಸಿಕೊಂಡಿದ್ದಾನೆ. ಭಕ್ತರ ಅಪಾರ ಸಮೂಹವನ್ನು ಹೊಂದಿರುವ ಮತ್ತು ಕನಕದಾಸ, ಪುರಂದರ ದಾಸರಿಬ್ಬರ ಮನವನ್ನೂ ಸೆಳೆದ ಈ ಗಣಪತಿಯನ್ನು ಕನಕ ದಾಸರು
“ಕಾಯಕವಿದು ನಿನ್ನದು ಕೇಳು ನಿರ್ವಿಘ್ನದಾಯಕ ಎನಗೆ ಸನ್ಮತಿಯ
ಜೀಯ ಕಾರು|ಣ್ಯದಿ ಕೊಡು ಪೊಂಬೊಳಲ ವಿನಾಯಕ ವಿಶ್ವಾವಲಂಬ”
– “ವಿಶ್ವವೇ ನಿನ್ನನ್ನು ಅವಲಂಬಿಸುವಂತಾಗಿರುವ ವಿನಾಯಕನೇ, ನಿನ್ನ ಕಾಯಕವೇ ವಿಘ್ನಗಳು ಇಲ್ಲದಂತೆ ಮಾಡುವುದು; ನೀನು ನಿರ್ವಿಘ್ನದಾಯಕ, ನೀನು ಪೊನ್ನೇ (ಹೊನ್ನೇ) ಹೊಳಲು (ಪಟ್ಟಣ) ಆಗಿರುವುದರ ವಿನಾಯಕ. ನನಗೆ ಸನ್ಮತಿಯನ್ನು ಹೊಂದಿರಲು ಏನಾದರೂ ಅಡ್ಡಿಯುಂಟಾಗುತ್ತದೆ ಎಂದಾದರೆ ಅದು ಪರಿಹಾರವಾಗುವ ವರವನ್ನು (ಹೊನ್ನನ್ನು) ನನ್ನ ಮೇಲೆ ಕರುಣೆಯಿಟ್ಟು ಕೊಡು, ಸ್ವಾಮಿ” – ಎಂದು ಸ್ತುತಿಸಿ, ಪ್ರಾರ್ಥಿಸಿ ತಮಗೂ, ಹೊಳಲ್ಕೆರೆಗೂ ಒಂದು ಪ್ರಭಾವಳಿಯನ್ನು ಕಟ್ಟಿಕೊಟ್ಟಿದ್ದಾರೆ.
ಮುಗಿಯಿತು
ಈ ಲೇಖನಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=33394
–ಕೆ.ಎಲ್. ಪದ್ಮಿನಿ ಹೆಗಡೆ
ತುಂಬಾ ಚೆನ್ನಾಗಿತ್ತು
ಅತ್ಯಂತ ಕರಾರುವಕ್ಕಾದ ಮಾಹಿತಿಯನ್ನು ನೀಡುವ, ಕುತೂಹಲಭರಿತ, ವಿದ್ವದ್ ಪೂರ್ಣ ಲೇಖನ ಮಾಲೆ ಸೊಗಸಾಗಿ ಮೂಡಿ ಬಂದಿತು.ಅಭಿನಂದನೆಗಳು.
ಬಹಳ ವಿದ್ವತ್ಪೂರ್ಣ ಬರಹ. ಆಳ ಅಧ್ಯಯನಕ್ಕೆ ಯೋಗ್ಯವಾದ ಲೇಖನಮಾಲೆ..ಧನ್ಯವಾದಗಳು ಮೇಡಂ.
ಲೇಖನಮಾಲೆಯನ್ನು ಓದಿದ ಮತ್ತು ಹೊಳಲ್ಕೆರೆಯ ವಿಶೇಷತೆಯನ್ನು ಗಮನಿಸಿದ ಸಹೃದಯಿಗಳಿಗೆ ಧನ್ಯವಾದಗಳು.
ಪದ್ಮಿನಿ ಹೆಗಡೆ
ಅತ್ಯಂತ ಉಪಯುಕ್ತ ಮಾಹಿತಿಯುಳ್ಳ ಲೇಖನ. ಈ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು ಮೇಡಂ.