ಸಾಂಸ್ಕೃತಿಕ ಹೊಳಲ್ಕೆರೆ : ಶೈಕ್ಷಣಿಕ ಪ್ರವಾಸ ಕಥನ-ಭಾಗ 2

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..)

4 ಧಾರ್ಮಿಕ ಸಾಮರಸ್ಯತೆ:

ಬಗೆ ಬಗೆಯ ಜನಸಮೂಹಗಳು ಇರುವ ಈ ಪ್ರದೇಶದಲ್ಲಿ ಧಾರ್ಮಿಕ ಸಾಮರಸ್ಯತೆಯನ್ನು ಗಂಭೀರವಾಗಿ ಭಾವಿಸಿರುವುದು ಇಲ್ಲಿಯ ಆಡಳಿತಗಾರರ ವಿವೇಕಯುತ ದೂರದೃಷ್ಟಿಯ ಸೂಚಕ. ಎಲ್ಲಾ ರೀತಿಯಲ್ಲೂ ಸಮೃದ್ಧವಾದ ಹೊಳಲ್ಕೆರೆ ಸೀಮೆಯನ್ನು ಇವರು ಸಹಜವಾಗಿ ಸಾಂಸ್ಕೃತಿಕ ನೆಲೆಯನ್ನಾಗಿಸಿದರು ಎನ್ನುವುದಕ್ಕೆ ಸಾಕ್ಷಿ ಇಲ್ಲಿಯ ದೇವಾಲಯಗಳಿಗೆ ಸಂಬಂಧಿಸಿದಂತೆ ದೊರೆತಿರುವ ಬಹುಮುಖಿ ಶಾಸನಗಳು. ಇವು ಈ ಹಿಂದೆ ನಿರ್ಮಿತವಾದ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿದುದಕ್ಕೆ ಸಂಬಂಧಿಸಿದವುಗಳು. ಇಲ್ಲಿ ಶೈವರು, ವೀರಶೈವರು, ವೈಷ್ಣವರು, ಜೈನರು, ತಾಂತ್ರಿಕರು, ನಾಥಪಂಥೀಯರು ಪ್ರಭಾವಶಾಲಿಯಾಗಿದ್ದವರು. ಇವರ ಧಾರ್ಮಿಕ ಕೇಂದ್ರಗಳನ್ನು ವೈಭವೀಕರಿಸುವ ಪ್ರಯತ್ನ ನಡೆದಿರುವುದನ್ನು ಇಲ್ಲಿ ದೊರೆತ ಶಾಸನಗಳಿಂದ ಅರ್ಥಮಾಡಿಕೊಳ್ಳಬಹುದು.

ಇಲ್ಲಿಯ ಧಾರ್ಮಿಕ ಕೇಂದ್ರಗಳ ಬಗೆಗಿನ ಶಾಸನೋಕ್ತ ಇತಿಹಾಸ ಕ್ರಿಸ್ತಶಕ 964ರಿಂದ ಆರಂಭವಾಗುತ್ತದೆ. ಚಿಕ್ಕಂದವಾಡಿಯ ಮಹೇಶ್ವರ ದೇವಾಲಯ, ಗುಂಡೇರಿಯ ಚನ್ನಕೇಶವ ದೇವಾಲಯಗಳು ಶಾಸನಗಳ ಉಲ್ಲೇಖ ಆರಂಭವಾದ ಕಾಲದಲ್ಲಿ ಗಮನಿಸಿದ ದೇವಾಲಯಗಳು. ಇಲ್ಲಿ ದೊರೆತಿರುವ ಶಾಸನಗಳು ಬಹುಮಟ್ಟಿಗೆ ಈಗಾಗಲೇ ಇದ್ದ ದೇವಾಲಯಗಳ, ಬಸದಿಗಳ ಜೀರ್ಣೋದ್ಧಾರ ಮಾಡಿ ದಾನದತ್ತಿಗಳನ್ನು ಕೊಟ್ಟ ವಿಷಯವನ್ನು ಹೇಳುತ್ತವೆ. ಕೆಲವು ಸ್ವಲ್ಪ ವಿಭಿನ್ನ.

1348ರ ಶಾಸನವು ದುಮ್ಮಿಯ ಪಾಳೇಗಾರ ವೀರಪ್ಪನಾಯಕನು ಹೊರಕೆರೆ ದೇವರಪುರದ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಗರ್ಭಗುಡಿ ಕಟ್ಟಿಸಿದ ವಿಷಯ ಹೇಳಿದರೆ ಸಂತೆ ಬೆನ್ನೂರಿನ ಹನುಮಪ್ಪ ನಾಯಕನ ಮಗ ರಾಜಪ್ಪ ನಾಯಕ ತನ್ನ ತಾಯಿ ತಂದೆಯರಿಗೆ ಪುಣ್ಯ ದೊರೆಯಲಿ ಎಂದು ಬಾಗೂರಿನ ಕೇಶವ ದೇವಾಲಯದ ಆವರಣದಲ್ಲಿದ್ದ ಲಕ್ಷ್ಮೀ ದೇವಾಲಯದ ಜೀರ್ಣೋದ್ಧಾರ ಮಾಡಿಸಿದ, ಸುಲಲಿತವಾಗಿ ಪೂಜಾ ಕೈಂಕರ್ಯ ನಡೆಯುವುದಕ್ಕಾಗಿ ದತ್ತಿ ಕೊಟ್ಟ ಎಂಬುದನ್ನು ಕ್ರಿ.ಶ. 1571ರ ಶಾಸನ ವಿವರಿಸುತ್ತದೆ.

ನಾಗಲಿಂಗ ದೇವಸ್ಥಾನದಲ್ಲಿಯ ಶಾಸನ

5 ಧಾರ್ಮಿಕ ಐತಿಹ್ಯಗಳು

ಕ್ರಿಸ್ತಪೂರ್ವ 15ನೇ ಶತಮಾನದಿಂದಲೂ ಜನಮನದಲ್ಲಿ ವಿರಾಜಮಾನನಾಗಿದ್ದ ದೈವ ಆಂಜನೇಯ. ಸ್ವಯಂಭೂ ಆಗಿದ್ದ ದೈವ ಅಹೋಬಲದ ಲಕ್ಷ್ಮೀ ನರಸಿಂಹ. ಪುರಾಣೋಕ್ತ ಪ್ರಸಿದ್ಧ ದೈವಗಳು ಕಂಬ ನರಸಿಂಹ, ಕದ್ರಿ ನರಸಿಂಹ. ಕ್ರಿಸ್ತಪೂರ್ವ 300ರಿಂದ ಕ್ರಿಸ್ತಶಕ 200ರ ಅವಧಿಯಲ್ಲಿ ಜನಮಾನ್ಯತೆ ಪಡೆದಿರುವ ದೈವ ರಂಗನಾಥ. ಕ್ರಿಸ್ತಪೂರ್ವ 300ರಿಂದ ಕ್ರಿಸ್ತಶಕ 300ರ ವರೆಗಿನ ಅವಧಿಯಲ್ಲಿ ಪ್ರಾಮುಖ್ಯತೆ ಪಡೆದ ದೈವ ಆಂದ್ರದ ವೆಂಕಟೇಶ್ವರ (ತಿಮ್ಮಪ್ಪ). ಈ ಎಲ್ಲ ದೈವಗಳಿಗೂ ಆಂಜನೇಯನಿಗೂ ಅವಿನಾಭಾವ ಸಂಬಂಧ ಇರುವುದನ್ನು ಪ್ರಸ್ತಾಪಿಸಿ ತಮ್ಮದು ದೇವಭೂಮಿ ಎಂದು ಜನ ಭಕ್ತಿಭಾವದಲ್ಲಿ ಮಿಂದಿರುವ ಕಥಾನಕಗಳಿವೆ.

ಅಂಥ ಕಥಾನಕಗಳಲ್ಲಿ ಒಂದು ಹೀಗಿದೆ – ಈಗಿನ ಹೊರಕೆರೆ ದೇವರಪುರದ ಬಳಿಯ ಪ್ರದೇಶವೊಂದರ ರಾಜನಾಗಿ ನಂದರಾಜ ಎನ್ನುವವನಿದ್ದ.  ಅವನು ಸೊಕ್ಕಿಹೋಗಿದ್ದ. ಆಗ ಜನ ಲಕ್ಷ್ಮೀನರಸಿಂಹನನ್ನು ಬೇಡಿಕೊಂಡರು. ಲಕ್ಷ್ಮೀನರಸಿಂಹ ಆಂಜನೇಯನನ್ನು ಕಳುಹಿಸಿದ. ಆತ ದಾಸಯ್ಯನ ವೇಷದಲ್ಲಿ ಬಂದ. ಆತನನ್ನೂ ನಂದರಾಜ ಹಿಂಸಿಸಿದ. ಆಂಜನೇಯ ಹೆದರಿ ಓಡಲಾರಂಭಿಸಿದ. ಲಕ್ಷ್ಮೀನರಸಿಂಹ ಆಂಜನೇಯನನ್ನು ತಾಳಯ್ಯ ಎಂದು ಹಿಡಿದು ನಿಲ್ಲಿಸಿದ. ಆಗ ಆಂಜನೇಯ ನಿಂತ ನೆಲೆಯೇ ತಾಳ್ಯ!

ಎರಡನೆಯ ಕಥಾನಕ ನಂದರಾಜನ ಇನ್ನೊಂದು ಮುಖವನ್ನು ಚಿತ್ರಿಸುತ್ತದೆ. ಈ ನಂದರಾಜ ತಿಮ್ಮಪ್ಪನ ಸನ್ನಿಧಿಗೆ ಹೋಗುತ್ತಿದ್ದ ಭಕ್ತರನ್ನು ತಡೆದು ನಿಲ್ಲಿಸುತ್ತಿದ್ದ. ಅವರ ಹತ್ತಿರವಿದ್ದ ಚಿನ್ನದ ನಾಣ್ಯ, ವಸ್ತ್ರಗಳನ್ನು ಕಸಿದುಕೊಳ್ಳುತ್ತಿದ್ದ. ಬದಲಿಗೆ ಚರ್ಮದ ನಾಣ್ಯಗಳನ್ನು ಕೊಟ್ಟು ಹಿಂಸಿಸುತ್ತಿದ್ದ. ಇದನ್ನು ತಡೆಯಲಾರದೆ ಭಕ್ತರು ತಿಮ್ಮಪ್ಪನನ್ನು ಬೇಡಿಕೊಂಡರು. ತಿಮ್ಮಪ್ಪ ಸಮೀಪದ ಕರೇಕಲ್ಲು ಬೆಟ್ಟದ ಮೇಲೆ ಕಾಲೂರಿ ನಿಂತು ನಂದರಾಜನನ್ನು ಸಂಹರಿಸಿದ.  ಅವನ ಪುರವನ್ನು ಸುಟ್ಟುರುಹಲಾರಂಭಿಸಿದ. ಆ ಪುರದಲ್ಲಿ ಮಗುವಿನೊಂದಿಗೆ ಸಾಧ್ವಿಯೊಬ್ಬಳಿದ್ದಳು. ಅವಳು ಮಗುವನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದಳು. ಸ್ವಾಮಿ ಶಾಂತನಾದ. ಪುರದಲ್ಲಿ ಆಕೆ ಇದ್ದ ಭಾಗ ಮಾತ್ರ ಉಳಿಯಿತು. ಅದು ನಂದನಹೊಸೂರಾಯಿತು.

ಮೂರನೆಯ ಕಥಾನಕದ ಪ್ರಕಾರ ಸಾಧ್ವಿಯ ಪ್ರಾರ್ಥನೆಯಿಂದ ಶಾಂತನಾದ ತಿಮ್ಮಪ್ಪ ಲಕ್ಷ್ಮೀ ನರಸಿಂಹನಾಗಿ ಹುತ್ತವೊಂದರಲ್ಲಿ ನೆಲೆಸಿದ. ಅಲ್ಲಿಗೆ ಹಸುವೊಂದು ಹೋಗಿ ದಿನವೂ ಹಾಲು ಕರೆಯುತ್ತಿತ್ತು. ಅದನ್ನು ಗಮನಿಸಿದ ಭಕ್ತರು ಹುತ್ತದ ಬಳಿಗೆ ಹೋಗಿ ನೋಡಿದರು. ಅಲ್ಲಿ ಲಕ್ಷ್ಮೀರಂಗನಾಥ ದೇವರನ್ನು ಕಂಡು ಧನ್ಯರಾದರು. ಆ ದೈವವನ್ನು ಅಲ್ಲಿಯೇ ನೆಲೆಸಬೇಕೆಂದು ಬೇಡಿಕೊಂಡರು. ದೇವರು ನೆಲೆ ನಿಲ್ಲಲು ದೇವಾಲಯವೊಂದನ್ನು ಕಟ್ಟಿಸಿದರು. ಅದೇ ಹೊರಕೆರೆ ದೇವರಪುರದ ಶ್ರೀಲಕ್ಷ್ಮೀ ರಂಗನಾಥ ದೇವಾಲಯ.

ಇವು ವಿಶೇಷ ಕಥಾನಕಗಳು. ಭಾರತದ ಎಲ್ಲಾ ಕಡೆಯಲ್ಲಿ ಇದ್ದಂತೆ ಇಲ್ಲಿಯೂ ಜನ ಮೊದಲಿಗೆ ಶಿವನ ಆರಾಧಕರೇ. ಇಲ್ಲಿ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಕ್ರಿಸ್ತ ಶಕೆ 964ರದ್ದು. ಇದು ಉಲ್ಲೇಖಿಸುವ ದೇವರು ಮಹೇಶ್ವರ (ಈಶ್ವರ). ಈ ಕಥಾನಕಗಳು ಜನ ನಿಧಾನವಾಗಿ ಮೊದಲಿಗೆ ಲಕ್ಷ್ಮೀನರಸಿಂಹ, ಆನಂತರ ರಾಮದಾಸ ಆಂಜನೇಯ, ನಂತರ ತಿರುಪತಿ ತಿಮ್ಮಪ್ಪ, ಅಂತಿಮವಾಗಿ ಲಕ್ಷ್ಮೀರಂಗನಾಥನ ಆರಾಧಕರಾಗಿ ಒಟ್ಟಾರೆ ವೈಷ್ಣವರಾಗಿ ಬದಲಾದುದನ್ನು ಸೂಚಿಸುತ್ತವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ದೇವಸ್ಥಾನಗಳೂ ಇದನ್ನು ಸಮರ್ಥಿಸುತ್ತವೆ. ಇಲ್ಲಿ 80 ಈಶ್ವರ, 17 ವೀರಭದ್ರ ದೇವಸ್ಥಾನಗಳು ಇದ್ದರೆ, ಆಂಜನೇಯನದು 112, ತಿಮ್ಮಪ್ಪನದು 24, ರಂಗನಾಥನದು 23, ಲಕ್ಷ್ಮೀ ನರಸಿಂಹನದು 10, ಶ್ರೀರಾಮನದು 4, ಶ್ರೀಕೃಷ್ಣನದು 1, ಸೂರ್ಯನದು 1 ದೇವಸ್ಥಾನಗಳು ಇವೆ.

ಈ ಕಥಾನಕಗಳು ಸೂಚಿಸುತ್ತಿರುವ ಇನ್ನೊಂದು ವಿಶೇಷ ಸಂಗತಿ – ದೈವಾರಾಧನೆಯನ್ನು ಬದಲು ಮಾಡಿಕೊಂಡಾಗ ಶಿಷ್ಟ ಪುರುಷ ದೈವಗಳನ್ನು ಮಾತ್ರ ಜನಸಮೂಹ ಬದಲು ಮಾಡಿಕೊಳ್ಳಲು ಒಪ್ಪಿಕೊಂಡಿರುವುದು. ಈಗ ಇಲ್ಲಿ ಶಿಷ್ಟ ಅಲ್ಲದ ಜುಂಜಪ್ಪನದು 6, ಅಜ್ಜಯ್ಯನದು 3, ದೊಡ್ಡಯ್ಯ, ಹುಚ್ಚಯ್ಯ, ಈರಣ್ಣ, ಮಳೆ ಮಲ್ಲಪ್ಪ, ನಾಗಪ್ಪ ಇವರದೆಲ್ಲ ತಲಾ ಒಂದೊಂದು ದೇವಸ್ಥಾನಗಳು ಮಾತ್ರ ಇವೆ.

-ಮುಂದುವರಿಯುವುದು

ಈ ಲೇಖನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=33386

ಕೆ.ಎಲ್. ಪದ್ಮಿನಿ ಹೆಗಡೆ

4 Responses

  1. ನಯನ ಬಜಕೂಡ್ಲು says:

    ಮಾಹಿತಿ ಪೂರ್ಣ ಬರಹ

  2. Padma Anand says:

    ಎಷ್ಟೊಂದು ವಿವರಗಳನ್ನು ತಿಳಿಸುವ ಲೇಖನ! ಸೊಗಸಾಗಿ ಮೂಡಿಬರುತ್ತಿದೆ.

  3. ಶಿವಮೂರ್ತಿ.ಹೆಚ್. says:

    ಹೊಳಲ್ಕೆರೆಯ ಸ್ಥಳೀಯ ಇತಿಹಾಸವನ್ನು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದ್ದೀರಿ ಮೇಡಂ

  4. ಶಂಕರಿ ಶರ್ಮ says:

    ಹೊಳಲ್ಕೆರೆಯ ಧಾರ್ಮಿಕ ಹಿನ್ನೆಲೆಯನ್ನು ಬಿಂಬಿಸುವ ಸೊಗಸಾದ ಲೇಖನವು ಮಹತ್ವಪೂರ್ಣ ಮಾಹಿತಿಗಳಿಂದ ಕೂಡಿದೆ.. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: