ಮಾಸ ಮಾಸಗಳಲ್ಲೂ ಶ್ರಾವಣವೇ ಮನಮೋಹಕ
ಶ್ರಾವಣ ಬಂತು ನಾಡಿಗೆ…
ಬಂತು ಕಾಡಿಗೆ ಬಂತು ಬೀಡಿಗೇ….
ಎಂದು ಶ್ರಾವಣದ ಮೋಹಕತೆಯ ಜೊತಗೆ ಅದರ ರುದ್ರನರ್ತನವನ್ನು ರಸಿಕರಿಗೆ ಉಣಬಡಿಸಿದ ನಮ್ಮ ವರಕವಿ ಬೇಂದ್ರೆಯಜ್ಜ ಪದಪದಗಳಲ್ಲೂ ಶ್ರಾವಣದ ಸೊಗಸನ್ನು, ಸೊಬಗನ್ನು ಬಹುಶಃ ಇನ್ನಾರೂ ಹೇಳಲಾಗದಷ್ಟು ಸುಂದರವಾಗಿ ವರ್ಣಿಸಿದ್ದಾರೆ. ಶ್ರಾವಣವೆಂದರೆ ಹಾಗೇ….ಒಬ್ಬ ಚಿಲ್ಲರೆ ವ್ಯಾಪಾರಿಯಿಂದ ಹಿಡಿದು ರೈತನವರೆಗೂ, ಒಬ್ಬ ಅರಸಿಕನಿಂದ ಹಿಡಿದು ಕಾವ್ಯಪ್ರೇಮಿಯವರೆಗೂ ಮೈ ಮನಗಳನ್ನು ಪುಳಕಗೊಳಿಸುವ ಚುಂಬಕಶಕ್ತಿ ಅದಕ್ಕಿದೆ.. ನಾಸ್ತಿಕ ದೇವರಿಲ್ಲ ದೇವರಿಲ್ಲ ಎಂದುಕೊಂಡೇ ಸದಾ ಮನೆಯವರ ಬಲವಂತಕ್ಕೆಂಬಂತೆ ಅವನನ್ನೇ ಧ್ಯಾನಿಸುತ್ತಿರುತ್ತಾನೆ. ಆಸ್ತಿಕ ಹೆಚ್ಚೇ ಎನ್ನಬಹುದಾದ ಭಯಭಕ್ತಿಗಳಿಂದ ದೇವರನ್ನು ಆರಾಧಿಸುತ್ತಿರುತ್ತಾನೆ. ಈ ಇಬ್ಬರು ವಿರೋಧಾಭಾಸಿಗಳಿಗೂ ಶ್ರಾವಣ ನಂಟನ್ನು ಬೆಸೆಯುತ್ತದೆ.
ಶ್ರಾವಣ ಬಂತೆಂದರೆ ಸಾಕು, ಆಷಾಢದ ಗಾಳಿಗೆ ಮುದುಡಿ ಮರಿಗುಬ್ಬಿಯಾಗಿದ್ದ ದೇಹ-ಮನಸ್ಸುಗಳೆರಡು ಗರಿಗೆದರಿ ಕುಣಿವ ನವಿಲಿನಂತಾಗುತ್ತವೆ. ಆಕಾಶದಲಿ ಅಬ್ಬರವಿಲ್ಲದೆ ಮುತ್ತಿಕೊಂಡ ಕರಿಮೋಡಗಳು ಹನಿಸುವ ಹನಿಗಳಿಗೆ ಮುಖವೊಡ್ಡಿ ಮೈಮರೆಯಬೇಕೆನಿಸುತ್ತದೆ. ರಸ್ತೆಯ ಕೊಚ್ಚೆಯನ್ನು ಹಾರಿಸಿಕೊಂಡು ಮಳೆಯಲ್ಲೊಮ್ಮೆ ನೆನೆದು ಬಿಡಬೇಕೆನಿಸುತ್ತದೆ. ಗಿಡಮರಗಳ ಎಲೆಗಳ ತುದಿಯಲ್ಲಿ ಇನ್ನೇನು ಭೂಮಿಗೆ ಬೀಳಲು ಕಾತರಿಸಿ ನಿಂತ ಹನಿಗಳ ಬೆರಳಿನಲ್ಲಿ ಜತನವಾಗಿ ಅಂಗೈಗೆ ಉದುರಿಸಿಕೊಳ್ಳಬೇಕೆನಿಸುತ್ತದೆ. ಮಳೆಯಲ್ಲಿ ನೆನೆನೆನೆದು ಸಂಭ್ರಮಿಸುವ ಗುಬ್ಬಿಗಳ ಚಿವ್ ಚಿವ್ ಕೇಳುತ್ತಾ ಸುಮ್ಮನೆ ಧ್ಯಾನಸ್ಥ ಸ್ಥಿತಿಯಲ್ಲಿದ್ದುಬಿಡೋಣ ಎನಿಸುತ್ತದೆ. ಒಬ್ಬರೇ ಹಾಡಿಕೊಳ್ಳೋಣ, ಏನಾದರೂ ಗೀಚೋಣ, ಅತೀ ಆಪ್ತರೊಂದಿಗೆ ಮನಸ್ಸಿನ ಆಹ್ಲಾದತೆಯನ್ನು ಆ ಕ್ಷಣಕ್ಕೆ ಹಂಚಿಕೊಂಡುಬಿಡೋಣ ………ಹೀಗೇ….. ಇನ್ನೂ ಏನೇನೋ ಅನಿಸಿಕೆಗಳಿಗೆ ಸೋಪಾನವಾಗುವ ಶ್ರಾವಣ ಮುದದೊಂದಿಗೆ ಆಹ್ಲಾದತೆಯ ಮುದ್ರೆಯೊತ್ತುತ್ತದೆ. ನವವಧೂವರರಿಗಂತೂ……..ಸಧ್ಯ ಮುಗಿಯಿತಲ್ಲ ಆಷಾಢ ಎಂಬ ಸಮಾಧಾನದ ನಿಟ್ಟುಸಿರು ! ಅವರಲ್ಲಿ ಸುಶ್ರಾವ್ಯದ ಸಂಗೀತದ ಮಾಧುರ್‍ಯ ಧ್ವನಿಸತೊಡಗುತ್ತದೆ.
ಇನ್ನು ನಮ್ಮ ಆಸ್ತಿಕವಲಯಕ್ಕೆ ಬಂದರೆ ಶ್ರಾವಣ ಭಕ್ತರಿಗೆ ಸುಗ್ಗಿಯ ಕಾಲ. ‘ಶ್ರಾವಣ’ `ಶ್ರವಣ’ `ಶ್ರಾವ್ಯ’ ಹೀಗೆ ಹಲವು ಶಬ್ಧಾರ್ಥಗಳಲ್ಲಿ ಅರ್ಥೈಸ ಹೋದರೆ ಶ್ರವಣ… ಎಂದರೆ ಕೇಳು ಎಂಬ ಅರ್ಥವಿದೆ. ಈ ಮಾಸದಲ್ಲಿ ಹಿಂದುಗಳಾದ ನಮಗೆ ಈ `ಕೇಳು’ ಎಂದರೆ ಒಳ್ಳೆಯ ಸಂಗತಿಗಳು ಸದಾ ಕಿವಿಗೆ ಬೀಳುತ್ತಿರಲಿ ಎಂಬುದಾಗುತ್ತದೆ. ಅದಕ್ಕಾಗಿಯೇ ಪ್ರಾತಃಕಾಲದಲ್ಲಿ ಅಭಿಷೇಕಗಳು, ಪೂಜೆಗಳು, ವ್ರತಗಳು, ಹೋಮಹವನಗಳು, ಕತೆಗಳು, ದೇವತಾರ್ಚನೆಗಳು, ಹೀಗೆ ನಾನಾರೀತಿಯಿಂದ ದೈವೋಪಾಸನೆಗಳು ಈ ಮಾಸಪೂರ್ತಿ ನಡೆಯುತ್ತಲೇ ಇರುತ್ತವೆ. ಶಿವಭಕ್ತರು ಶಿವಾಲಯಕ್ಕೆ ನಡೆದರೆ , ವೈಷ್ಣವರು ನಾರಾಯಣನ ಮುಂದೆ ನಿಂತು ‘ಅನ್ಯಥಾ ಶರಣಂ ನಾಸ್ತಿ’ ಎನ್ನುತ್ತಾರೆ. ಪುರಾಣ ಸಂಕೀರ್ತನೆಗಳು, ಸಂಗೀತ-ನೃತ್ಯಗಳು, ಹೀಗೆ ಒಳ್ಳೆಯದನ್ನೇ ಆಲಿಸುತ್ತ ಒಳ್ಳೆಯದನ್ನೇ ನೋಡುತ್ತ, ಒಳ್ಳೆಯದನ್ನೇ ಪಠಿಸುತ್ತಾ ನಮ್ಮ ಸಮಯವನ್ನೆಲ್ಲ ಹೀಗೆ ಸತ್ಸಂಗದಲ್ಲಿ ಕಳೆಯುತ್ತಾ ಅಂದರೆ ನಮ್ಮ ಸ್ವಾರ್ಥಗಳು, ದುರಾಸೆಗಳು , ದುಷ್ಟರ ಸಹವಾಸ ಪರಪೀಡನೆಗಳು ತಕ್ಕಮಟ್ಟಿಗೆ ಶಮನವಾಗಬಹುದೇನೋ ಎಂಬ ಮಹಾನ್ ಚಿಂತನೆಗಳಿಂದ ಹಿರಿಯರು ಹೀಗೆಲ್ಲ ಯೋಜಿಸಿರಬೇಕೆನಿಸುತ್ತದೆ. ಅದೇನೇ ಇರಲಿ ಈ ಚಂಚಲ ಮನಸ್ಸಿಗೊಂದಷ್ಟು ನೆಮ್ಮದಿ ಸಮಾಧಾನ ಸಿಗುವುದರ ಬಗ್ಗೆ ಅನುಮಾನವಿಲ್ಲ.. ಕೇಳಿದ್ದನ್ನು ಮನನ ಮಾಡಿಕೊಂಡು, ಅವುಗಳನ್ನು ಆಚರಣೆಗೆ ತರುವುದೂ ಕೂಡ ಶ್ರಾವಣದ ಪರಿಣಾಮವಾಗಬೇಕು.
ಶ್ರಾವಣಮಾಸದಲ್ಲಿ ಬರುವ ಕೆಲವು ವ್ರತ -ಹಬ್ಬಗಳನ್ನು ಗಮನಿಸೋಣ. ಶ್ರಾವಣ ಶುರುವಾಗುವುದೇ ಭೀಮನ ಅಮಾವಾಸ್ಯೆಯ ವ್ರತದಿಂದ. ತನ್ನ ಪತಿ ಭೀಮನಂತೆ ರಾಮನಂತೆ ; ನೀತಿವಂತನಾಗಿ ಶಕ್ತಿಶಾಲಿಯಾಗಿರಲಿ, ಆಯುಷ್ಯವಂತನಾಗಲಿ ತನಗೆ ಮುತ್ತೈದೆಭಾಗ್ಯ ಸದಾ ಇರಲಿ ಎಂದು ಬೇಡಿಕೊಳ್ಳುವ ಹೆಂಗೆಳೆಯರ ವ್ರತ. ಸ್ತ್ರೀಯರು ಅದೇನು ಬೇಡಿಕೊಳ್ಳುತ್ತಾರೊ ಬಿಡುತ್ತಾರೋ, ತನ್ನ ಗಂಡ ಕೃಷ್ಣನಾಗದಿದ್ದರೆ ಸಾಕಪ್ಪಾ, “ಎನ್ನ ಗಂಡನ ರಾಮನ ಮಾಡಯ್ಯಾ ತಂದೆ,” ಎಂದು ಗುಟ್ಟಾಗಿ ಬೇಡಿಕೊಳ್ಳುತ್ತಾರೋ ಇಲ್ಲವೋ ಕೇಳಿನೋಡಿ ಅವರನ್ನೇ !
ಭೀಮನ ಅಮಾವಾಸ್ಯೆಯಿಂದ ಶುರುವಾಗುವ ಶ್ರಾವಣ, ಅಲ್ಲಿಂದ ಮುಂದೆ ನಾಗರಪಂಚಮಿ ಆಗಮಿಸಿ, ಹುತ್ತಕ್ಕೆ ತನಿಯೆರೆದು ತನ್ನ ಒಡಹುಟ್ಟಿದ ಸಹೋದರರೆಲ್ಲ ತಣ್ಣಗಿರಲಿ , ತನ್ನ ತವರು ಸುಖವಾಗಿರಲಿ ಎಂದು ಆಶಿಸಿ ಜೊತೆಗೆ ನಮ್ಮ ರಾಷ್ಟ್ರೀಯ ಹಬ್ಬವನ್ನೂ ಆಚರಿಸುತ್ತೇವೆ, ಅದೇ ಸ್ವಾತಂತ್ರ್ಯ ದಿನಾಚರಣೆ. ಮಕ್ಕಳಿಗೆ “ಝಂಡಾ ಊಂಚಾ ರಹೇ ಹಮಾರಾ” ಎಂದು ಹಾಡಿ ಕುಣಿದು ಕುಪ್ಪಳಿಸುವ ಹಬ್ಬವಾದರೆ, ಹೆಂಗಸರಿಗೆ ನಾಗರಪಂಚಮಿ ಸಂಭ್ರಮ ! ಶಿಕ್ಷಕರಿಗೆ ನಾಗರೀಕರಿಗೆ ಗ್ರಾಮಸ್ಥರಿಗೆ ತನ್ನ ಊರಿನಲ್ಲಿ ಸ್ವಾತಂತ್ರ್ಯದ ಹಬ್ಬ ವಿಜೃಂಭಿಸಬೇಕೆಂಬ ಬಯಕೆ, ಆಸೆ ! ಇದರ ಬೆನ್ನ ಹಿಂದೆಯೇ ಇದೇ ವರಮಹಾಲಕ್ಷ್ಮಿ ವ್ರತ. ಲಕ್ಷ್ಮಿಯನ್ನು ಮನದುಂಬಿ ಅಲಂಕರಿಸಿ , ಸಿಹಿಮೆದ್ದು, ಆಗಮಿಸಿದ ಮುತ್ತೈದೆಯರಿಗೆ ತನ್ನ ಕೈಲಾದ ಮಟ್ಟಿಗೆ ತಾಂಬೂಲ ನೀಡಿ ಸಾರ್ಥಕ ಭಾವ ಅನುಭವಿಸುವ ದಿನ ! ಋಗ್-ಯಜುರ್ ಉಪಾಕರ್ಮಗಳು! ಇವಿಷ್ಟರ ಜೊತೆಗೆ “ಬಕ್ರೀದ್” ಆಚರಣೆ ಕೂಡ ಬಂದಿದೆ. ಇದಿಷ್ಟೂ ಶ್ರಾವಣ ಶುದ್ಧದಲ್ಲಿ ಬಂದರೆ, ಇನ್ನು ಬಹುಳದಲ್ಲಿ ಕೃಷ್ಣಜನ್ಮಾಷ್ಠಮಿ ಬರುತ್ತದೆ. ಬಾಲಕೃಷ್ಣನ ಹೆಜ್ಜೆಗುರುತುಗಳನ್ನು ತಮ್ಮ ಮನೆಯ ಅಂಗಳದಲ್ಲಿ ಮೂಡಿಸಿ, ಅವನಿಗೆಂದೇ ಬಗೆಬಗೆಯ ತಿಂಡಿಗಳನ್ನು ತಯಾರಿಸಿ ನೈವೇದ್ಯವಿಟ್ಟು, ಅವನು ನಮ್ಮ ಜೊತೆ ನಮ್ಮ ಸುತ್ತಮುತ್ತಲೇ ಇದ್ದಾನೆಂಬ ಅವನ ಮೇಲಿನ ಪ್ರೇಮ ಬಾಹುಳ್ಯದಿಂದ ತೊನೆವ ದಿನ !
ಇದಲ್ಲದೆ ಮಂಗಳಗೌರಿ ವ್ರತ, ಶ್ರಾವಣ ಶನಿವಾರಗಳು, ಸೋಮವಾರಗಳು, ಉಪವಾಸಗಳ ಮೂಲಕ ದೇವರ ಸನ್ನಿಧಿಯಲ್ಲೇ ತಾವು ವಾಸಿಸುತ್ತಿದ್ದೇವೆಂಬ ಸಾರ್ಥಕ್ಯ ಭಾವದ ಭಕ್ತರ ದಂಡು! ಹೀಗೆ ಶ್ರಾವಣ ಸಂಭ್ರಮದಿಂದ ಶೋಭಿಸುತ್ತದೆ ! ಇದರಲ್ಲಿ ಇನ್ನೊಂದು ವಿಷಯವನ್ನು ಈಗ ನೆನೆಯಲೇ ಬೇಕು. ಅದೆಂದರೆ, “ಉಲ್ಹಾರ”! ಈಗ್ಗೆ ಸ್ವಲ್ಪ ವರ್ಷಗಳ ಹಿಂದೆಯಷ್ಟೇ “ಶ್ರೀಮದ್ ರಮಾರಮಣ ಗೋವಿಂದ ಗೋವಿಂದ” ಎಂಬ ಘಂಟಾನಾದದಂತಹ ಧ್ವನಿಯೊಂದಿಗೆ ಮನೆಯ ಮುಂದೆ ಚಿಲ್ಟಾರಿ ಪಿಲ್ಟಾರಿಗಳೊಂದಿಗೆ ಮನೆಯ ಎಲ್ಲ ಪುರುಷರು ಅಕ್ಕಪಕ್ಕದ ಅಥವಾ ಜಾತ್ಯಸ್ಥರ ಮನೆಯ ಮುಂದೆ ನಿಲ್ಲುತ್ತಿದ್ದರು. ಆ ಮನೆಯವರು ಅವರಿಗೆ ಅಕ್ಕಿಯೋ ಅಥವಾ ಹಣವನ್ನೋ ಅವರು ಹಿಡಿದ ತಂಬಿಗೆಗೆ ಭಕ್ತಿಯಿಂದ ಸಮರ್ಪಿಸುತ್ತಿದ್ದರು. ಇದು ಶ್ರಾವಣ ಶುರುವಾದ ಮೊದಲ ಶನಿವಾರದಿಂದ ಕೊನೆಯ ಶನಿವಾರದವರೆಗೂ ಮುಂದುವರೆದು ನಂತರ ಮುಕ್ತಾಯವಾಗುತ್ತಿತ್ತು. ತಾವು ಮನೆಯ ಮುಂದೆ ನಿಂತು ಬೇಡಿತಂದ ಪದಾರ್ಥಗಳಿಂದ ಕೊನೆಯ ಶನಿವಾರ ನೈವೇದ್ಯ ತಯಾರಿಸಿ, ಅದನ್ನು ದೇವರಿಗೆ ಸಮರ್ಪಿಸಿ ತಾವೂ ಸೇವಿಸಿ ಧನ್ಯತಾಭಾವ ಅನುಭವಿಸುತ್ತಿದ್ದರು. ಮನುಷ್ಯ ನಿಗರ್ವಿಯಾಗಿರಬೇಕು, ಅಹಂಕಾರ ರಹಿತನಾಗಿರಬೇಕು ಎಂಬುದಕೆ ಈ ಪದ್ಧತಿ ಸಾಕ್ಷಿಯಾಗಿತ್ತು. ಆದರೆ ಈಗ ಇತ್ತೀಚೆಗಂತೂ ಎಲ್ಲಿಯೂ ಈ ನಾಮಧಾರಿಗಳು ಕಾಣಬರುವುದಿಲ್ಲ. ಕಂಡರೆ ಬೆರಳೆಣಿಕೆಯಷ್ಟು ! ಮಕ್ಕಳಂತೂ ನಾಚಿಕೊಳ್ಳುತ್ತಾರೆ, ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಉನ್ನತಭಾವದ ಇಂತಹ ಪದ್ದತಿ ನಾಶವಾಗುತ್ತದಲ್ಲ ಎಂಬ ಖೇದ ಸಂಪ್ರದಾಯಸ್ಥರನ್ನು ಕಾಡದಿರದು..
ಶ್ರಾವಣವೆಂದರೆ ಸಾಕು ಅದು ಸಮೃದ್ಧಿ, ಸಂತೋಷ , ನೆಮ್ಮದಿ , ಸುಖದ ಸಂಕೇತವಾಗಿ ಹೊರಹೊಮ್ಮತ್ತದೆ. ಎಲ್ಲರ ಮೊಗವೂ ಮಂದಹಾಸದಿಂದ ಕಂಗೊಳಿಸುತ್ತದೆ. ಪ್ರೀತಿಯ ಹರಿಕಾರ ಶ್ರಾವಣ ! ರೈತನ ನಗು ಶ್ರಾವಣ ! ಇಂತಹ ಶ್ರಾವಣ ಕವಿಗಳನ್ನೂ ಬಿಟಿ ಲ್ಲ, ಸಿನಿಮಾಲೋಕವನ್ನೂ ಬಿಟ್ಟಿಲ್ಲ. ಡಾ|| ರಾಜಕುಮಾರರ “ಶ್ರಾವಣಮಾಸ ಬಂದಾಗ…..” ಗೀತೆ ಜನಪ್ರಿಯವಾಗಿದೆ. ಹಿಂದಿಯಲ್ಲಂತು “ಆಯಾ ಸಾವನ್ ಝೂಮ್ಕೆ” ಎಂದು ಧರ್ಮೇಂದ್ರ-ಆಶಾಪರೇಖ್ ಕುಣಿದು ಕುಪ್ಪಳಿಸಿದ ಹಾಡು ಎಲ್ಲರ ಹೃದಯಗಳನ್ನು ನವಿರುಭಾವಗಳನ್ನು ತಟ್ಟಿಬರುತ್ತದೆ. “ಜಿಯಾ ಬೇಕರಾರ್ ಹೈ….” ಹಾಡು ಗುನುಗಬೇಕೆನಿಸುವುದಿಲ್ಲವೆ? ನಿಮ್ಮಿ ಸುನಿಲ ದತ್ತರ ಹಾಡು ರಿಮ್‌ಜಿಮ್‌ಕೆ ಯೆ ಪ್ಯಾರೆ ಪ್ಯಾರೆ…. ,”ಚಲಿಯಾ” ಸಿನಿಮಾದ “ಡಮ್ ಡಮ್ ಡಿಗಡಿಗಾ” ರಾಜಕಪೂರನ ಹಾಡು ನೆನಪಾಗದಿದ್ದರೆ ಛೆ! ಹರಿಯಾಲ ಸಾವನ್ ಡೋಲ ಭಜಾಯಾ ಹಾಡು ನೆನಪಿದೆಯೇ ಅತೀ ಹಳೆಯ ಹಾಡು ಕಪ್ಪುಬಿಳುಪಿನ ಕಾಲದ ಅತಿ ಎಫೆಕ್ಟಿವ್ ಹಾಡು ! ಇವೆಲ್ಲವೂ ಶ್ರಾವಣದ ಮೋಹಕತೆಯನ್ನೂ ರಸಿಕತನವನ್ನೂ ಸಾರದಿರವೇ? ಸಾವಿರ ಸಾವಿರ ನೋವು ಸಂಕಟಗಳು ಬದುಕಿನಲ್ಲಿದ್ದರೂ ಶ್ರಾವಣದ ಆಗಮನ ಎಲ್ಲ ಸಂಕಷ್ಟಗಳನ್ನೂ ಮರೆಸಿ ಹೊಸಬದುಕನ್ನು ಹೊಸ ಕನಸುಗಳನ್ನು ಮೂಡಿಸುವ ಶ್ರಾವಣ; ಜೀವನದಲ್ಲಿ ಜೀವಂತಿಕೆಯನ್ನು ಮೂಡಿಸಿ ನಗುವಿನ ಕಾರಣಿಕನಾಗುತ್ತದೆ ಅಲ್ಲವೇ?
ಆದರೆ ಈ ಕೊರೋನಾ ಸಂಕಟದಲ್ಲಿ, ಜೀವನ ದುರ್ಭರವಾಗುತ್ತಿದೆ. ಸಂಕಷ್ಟಗಳು ಒಂದರ ಮೇಲೊಂದು ಮುಗಿಬಿದ್ದು ಜೀವ ಉಳಿಸಿಕೊಳ್ಳುವುದೆ ಕಷ್ಟವೆನ್ನುವ ಹಾಗಾಗಿದೆ. ಆದರೆ ಇದೆಲ್ಲವೂ ಸ್ಥಿರವಲ್ಲ. ಕತ್ತಲೆ ಕಳೆದ ಮೇಲೆ ಬೆಳಕು ಬರುವಂತೆ ಒಳ್ಳೆಯ ಕಾಲ ಬಂದೇ ಬರುತ್ತದೆ. ಆದರೆ ನಾವು ಎಚ್ಚರಿಕೆಯಿಂದಿರಬೇಕಷ್ಟೆ. ಶ್ರಾವಣವಾದರೂ ನಮ್ಮೆಲ್ಲರ ಸಂಕಟಗಳನ್ನು ನೀಗಿಸಿ, ದೇಶಕ್ಕೆ ಹೊಸ ಮೆರುಗು ನೀಡಲಿ.
-ಬಿ.ಕೆ. ಮೀನಾಕ್ಷಿ, ಮೈಸೂರು.
ಚೆನ್ನಾಗಿದೆ ಲೇಖನ
ಬಹಳಷ್ಟು ವಿಷಯಗಳ ಅನಾವರಣ ಚೆನ್ನಾಗಿ ಮೂಡಿ ಬಂದಿದೆ ಶ್ರಾವಣದ ಲೇಖನ.ಅಭಿನಂದನೆಗಳು ಗೆಳತಿ ಮೀನಾಕ್ಷಿ.
ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಅಂಶವಾದ
ಹಬ್ಬಗಳ ಆಚರಣೆ, ಅವುಗಳ ಹಿನ್ನೆಲೆಯನ್ನು ಬಹಳ
ಸೊಗಸಾಗಿ ಬಿಂಬಿಸಿದ ನಿಮ್ಮ ಲೇಖನ ಮನ ತಟ್ಟಿದೆ.
ಧಾರ್ಮಿಕರಂಗದಿಂದ ಸಿನಿಮಾರಂಗದವರೆಗೂ ಎಲ್ಲ ರೀತಿಯ ಶ್ರಾವಣದ ವೈಶಿಷ್ಟ್ಯಗಳನ್ನು ಒಳಗೊಂಡ ಸುಲಲಿತ ಲೇಖನ ಸೊಗಸಾಗಿದೆ. ಅಭಿನಂದನೆಗಳು.
ಶ್ರಾವಣ ಕಥನ ಸೊಗಸಾಗಿ ಮೂಡಿಬಂದಿದೆ
ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ
ಶ್ರಾವಣದ ಸಂಭ್ರಮ, ಮಹತ್ವಗಳನ್ನು ನವಿರಾಗಿ ಮನಮುಟ್ಟುವಂತೆ, ಸೊಗಸಾಗಿ ಬರಹದಲ್ಲಿ ಬಿಂಬಿಸಿರುವಿರಿ ಮೇಡಂ.. ಧನ್ಯವಾದಗಳು.
ತುಂಬಾ ಚೆನ್ನಾಗಿ ದೆ ಲೇಖನ ಮೇಡಂ
ಶ್ರಾವಣ ದ ವಿವರಣೆ ಸಂಕ್ಷಿಪ್ತ, ಭಾವಸೂಕ್ಷ್ಮ, ಶ್ರಾವಣದ ಉಯ್ಯಾಲೆಯ ಅನುಭವವನದನು ಕೊಡುತ್ತದೆ. ಹೌದು ಈಗ ಜಾಗಟೆ ದಾಸಯ್ಯಗಳು ಬರುವುದಿಲ್ಲ…
ಇವತ್ತು ನೋಡಿದೆ. ನಾನು. ಹೇಮಮಾಲಾ ಮೇಡಂ, ಪ್ರಕಟಿಸಿದ್ದಾಕ್ಕಾಗಿ ಧನ್ಯವಾದ. ನಯನರವರಿಗೆ,ನಾಗರತ್ನ ಮೇಡಂ ಮತ್ತು ವತ್ಸಲಾರವರಿಗೆ: ನಿಮ್ಮ ಅನಿಸಿಕೆ ಪ್ರೋತ್ಸಾಹ ನೀಡುತ್ತದೆ. ಮೂವರಿಗೂ ಧನ್ಯವಾದ.