ಸಂಸಾರದಿಂದಷ್ಟು ದೂರ..

Share Button

ಒಮ್ಮೆ  ಹೊಸಗನ್ನಡ ಸಾಹಿತ್ಯದ  ಆದ್ಯರಲ್ಲಿ ಒಬ್ಬರು ಎಂದು ಖ್ಯಾತರಾಗಿದ್ದ ಪಂಜೆ ಮಂಗೇಶರಾಯರು ಮೈಸೂರಿನ ಉದ್ಯಾನವನವೊಂದರಲ್ಲಿ ಹಲವು ಸ್ನೇಹಿತರೊಡನೆ ಮಾತನಾಡುತ್ತ ಕುಳಿತಿದ್ದರಂತೆ. ಆಗ ಒಬ್ಬರು ಪಂಜೆಯವರನ್ನು “ಅದೇನು ಮೈಸೂರಿಗೆ ಬಂದದ್ದು, ಏನಾದರೂ ಸಭೆಯೋ , ಸಮ್ಮೇಳನವೋ?” ಎಂದು ಕೇಳಿದರಂತೆ.

ಪಂಜೆಯವರು “ಸಭೆಗಾಗಿ ಅಲ್ಲ,ಸ್ವಂತಕ್ಕಾಗಿ”ಎಂದು ಉತ್ತರಿಸಿದರಂತೆ.

 ಮತ್ತೊಬ್ಬರು ಸ್ನೇಹಿತರು”ಚೇಂಜಿಗಾಗಿ ಬಂದದ್ದೋ?”ಎಂದು ಕೇಳಿದಾಗ “ಹೌದು ಒಂದೆರಡು ದಿನ ನಿಮ್ಮಂಥ ಸ್ನೇಹಿತರ ಜತೆ ಹಾಯಾಗಿದ್ದು ಹೋಗೋಣ ಎಂದು
ಬಂದದ್ದು”ಎಂದು ಮಾರುತ್ತರ ನೀಡಿದರಂತೆ.  

 “ಕುಟುಂಬಸಮೇತ ಬಂದಿದ್ದೀರೋ?”ಎಂದು ಸ್ನೇಹಿತರು  ಮತ್ತಷ್ಟು ವಿವರ ಬಯಸಿದಾಗ  “ಹೇಳಿದೆನಲ್ಲ, ಚೇಂಜಿಗಾಗಿ ಬಂದದ್ದು” ಎಂದು ಸ್ಪಷ್ಟೀಕರಣ ನೀಡಿದರಂತೆ ಪಂಜೆಯವರು. ಅಂಥ ಕವಿಶಿಷ್ಯ ಪಂಜೆಯವರೇ ಬದಲಾವಣೆ ಬಯಸಿ ಕುಟುಂಬದಿಂದಷ್ಟು ದೂರ ಇರಲು ಸಮಯ ಮಾಡಿಕೊಂಡಾಗ
ಇನ್ನು ನಮ್ಮಂಥವರ ಪಾಡೇನು!

ದಿನಾ ಬೆಳಗಿನ ವಾಯುಸಂಚಾರದಲ್ಲಿ ನನಗೆ  ಸ್ನೇಹಿತನಾಗಿದ್ದ ಒಬ್ಬ ಆಸಾಮಿ ಒಂದು ಎರಡು ವಾರ ಕಾಣಲಿಲ್ಲ ನಂತರ ಭೇಟಿಯಾದಾಗ “ಏನು ಚಲಪತಿಯವರು ಸುಮಾರು ದಿನ ಕಾಣಲಿಲ್ಲ ಹುಷಾರಾಗಿದ್ದೀರಿ ತಾನೇ? ‘ಎಂದು ಕುಶಲ ವಿಚಾರಿಸಿದೆ.

  “ಹೀಗೆ ಜಾಲಿಯಾಗಿ ಬ್ಯಾಂಕಾಕ್‌,ಪಟ್ಟಾಯ,ಸಿಂಗಪೂರ,ಕ್ವಾಲಾಲಂಪುರ ಹೋಗಿ ಬಂದ್ವಿ. ಅದಕ್ಕೇ ಕಾಣಲಿಲ್ಲ ಸಾರ್‌ ” ಎಂದು ಉತ್ತರಿಸಿದರು.

  “ಯಾರು ಯಾರು?”ಸುಮ್ಮನೆ ಕೇಳಿದೆ.

  “ಆಫೀಸಿನಲ್ಲಿ ನನ್‌ ಥರದೋರೇ ನಾಲ್ಕು ಜನರ ಪಟಾಲಂ ಇದೆ,ಅವರ ಜತೆ ಹೋಗಿದ್ದೆ.

“ನಿಮ್ಮ ಮನೆಯವರು,ಮಕ್ಕಳು ಜತೆ ಬರಲಿಲ್ಲವಾ?”ಕುತೂಹಲ ನನಗೆ.

 “ಅವರನ್ನು ಕರೆದವರು ಯಾರು? ಹೋಗಿದ್ದು ನಾವು ಐದುಜನ  ಅಷ್ಟೆ” ತನ್ನ ಪ್ರವಾಸದ ಉದ್ದೇಶವನ್ನು ಸ್ಪಷ್ಟವಾದ ಮಾತುಗಳಲ್ಲಿ ಸಾರಿದರು ನನ್ನ ಮಿತ್ರ.

ಒಮ್ಮೆ ನಮ್ಮ ಮನೆದೇವರು ನರಸಿಂಹನ  ದರ್ಶನಕ್ಕೆ ಕೆ ಆರ್‌ ತಾಲೂಕಿನ ಅಕ್ಕಿಹೆಬ್ಬಾಳಿಗೆ ಹೋಗಿದ್ದೆ(ಪತ್ನಿಸಮೇತ). ದೇವಸ್ಥಾನದಿಂದ ಹೊರಗೆ ಬಂದಾಗ ಅಲ್ಲಿನ ಸುಂದರ ಹುಲ್ಲುಹಾಸಿನ ಮಹಿಳಾಮಣಿಯರು ಕುಳಿತು ದೇವರನಾಮ ಇತ್ಯಾದಿಗಳನ್ನು ತಮಗೆ ದೇವರು ಕೊಟ್ಟ ದನಿಯಲ್ಲಿ ಹಾಡಿಕೊಳ್ಳುತ್ತಿದ್ದರು.ಅವರಲ್ಲಿ ಇಬ್ಬರು ನನಗೆ ಪರಿಚಿತರೇ.ಅವರ ಹತ್ತಿರ ಹೋಗಿ “ಏನು ಸೀತಾ ಅವರೆ, ಮೂರ್ತಿ ಬರಲಿಲ್ಲವಾ?”ಎಂದು ಒಬ್ಬರನ್ನು  ಕೇಳಿದೆ.

  “ಅವರನ್ನು ಬಿಟ್ಟು ಬಂದಿದ್ದೇವೆ.ಇದು ನಮ್ಮ ಮಹಿಳಾ ಸಂಘದ ಪ್ರವಾಸ.”

“ಅದೂ  ಅಲ್ದೆ ಅವರೂ ಒಂದು ದಿವಸ ಹಾಯಾಗಿ ಇರಲಿ ಬಿಡಿ”ಅಂತ ಮತ್ತೊಬ್ಬ ಮಹಿಳಾಮಣಿ ದನಿ ಸೇರಿಸಿದರು.

 ಇದೇ ತರಹದ  ಮತ್ತೊಂದು ಪ್ರಸಂಗ. ಎರಡು ವರುಷದ ಹಿಂದೆ ನಾವು ಮಧ್ಯಪ್ರದೇಶ ಪ್ರವಾಸ ಹೋಗಿದ್ದಾಗ ಭೋಪಾಲದ ಸಂಗಂ ಹೋಟೇಲಿಗೆ ನಾವು  ಬಂದ ಅರ್ಧ ಗಂಟೆಗೆ ಮತ್ತೊಂದು ಪ್ರವಾಸಿ ಬಸ್‌ ಆಗಮಿಸಿತು. ಅರೆ ಇದೇನು ! ಇಳಿದವರೆಲ್ಲ ಐವತ್ತರಿಂದ  ಅರವತ್ತು ವಯೋವರ್ಗದ ಪ್ರಮೀಳೆಯರ
ಪಡೆ, ಜೋರಾಗಿ ನಗೆಯ  ಅಲೆ ಎಬ್ಬಿಸುತ್ತ, ಪ್ರವಾಸದ ರಮ್ಯ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತ ಒಳಗೆ ಬಂದರು. ಕೊನೆಯಲ್ಲಿ ದಂಪತಿಗಳ ಏಕೈಕ ಜೋಡಿ ಪರಸ್ಪರ ನೀನು, ನಿನ್ನಿಂದ ಎಂದೆಲ್ಲ ಪರಸ್ಪರ  ದೂಷಿಸಿಕೊಂಡು ನಿಧಾನವಾಗಿ ಬಂದರು.

ನಮ್ಮ ತಂಡದ ಒಬ್ಬ ಮಹಿಳೆ ಕುತೂಹಲದಿಂದ “ಒಬ್ಬರೇ ಬಂದಿರಾ?”ಎಂದು ಕೇಳಿದಾಗ “ಒಬ್ಬರೇ ಏಕೆ ಇಲ್ಲಿ ಇಪ್ಪತ್ತು ಜನ ಸ್ನೇಹಿತೆಯರು ಇಲ್ಲವಾ?ನಾವೆಲ್ಲ ಬೆಂಗಳೂರಿನ ಆರ್‌ ಕೆ ಲೇ ಔಟ್‌ ಸ್ನೇಹವನಿತಾ ಸಂಘದವರು”ಎಂದು ಎಲ್ಲರ ಪರವಾಗಿ ಒಬ್ಬ ರಮಣಿ  ಆತ್ಮವಿಶ್ವಾಸದಿಂದ ನುಡಿದರು.

“ನಿಮ್ಮ ನಿಮ್ಮ ಪತಿರಾಯರು ಬರಲಿಲ್ಲವಾ?”ಅನುಮಾನವಿದ್ದೇ ಇತ್ತಲ್ಲ.

 “ಇದ್ದಾರೆ,ಇದ್ದಾರೆ ಮನೆಯಲ್ಲೇ ಅವರನ್ನು  ಕುಕ್ಕಿ ಹಾಕಿ ಬಂದಿದ್ದೇವೆ. ಇದು ನಮ್ಮ ಎಂಟನೇ ಪ್ರವಾಸ .ರಷ್ಯಾ, ದುಬಾಯಿ,ಸಿಂಗಪುರ ಎಲ್ಲ ಕಡೆ ಹೀಗೇ ನಾವುನಾವೇ  ಹೋಗಿದ್ದೇವೆ. ಆ ಸರಸಮ್ಮನಿಗೂ ಹೇಳಿದ್ವಿ ಒಬ್ಬಳೇ ಬಾ ಅಂತ. ನೋಡಿ  ಪಾಪ ಗಂಡನ ಜತೆ ಬಂದು ಎಷ್ಟು ಪಾಡು ಪಡತಾ ಇದ್ದಾಳೆ. ನಗೋ
ಹಾಗಿಲ್ಲ,ಹಾಡೋ  ಹಾಗಿಲ್ಲ.”ಎಂದು ಪ್ರತಿಕ್ರಿಯಿಸಿದರು.

ಎಷ್ಟು ವಿಭಿನ್ನ,ವಿನೂತನ ಆರೋಗ್ಯಕರ  ದೃಷ್ಟಿಕೋನ ಅಲ್ಲವೇ!

ಇದೇ ತೆರನಾದ ಪ್ರಸಂಗ ಅದೇ ಪ್ರವಾಸದ ಸಂದರ್ಭ  ಇಂದೋರಿನಲ್ಲಿ ನಡೆದದ್ದು. ಅಲ್ಲಿ ಛಪ್ಪನ್‌ ದುಕಾನ್‌ ಸ್ಟ್ರೀಟ್‌ ಎಂಬ ಎಲ್ಲ ಬಗೆ ತಿಂಡಿ ತಿನಿಸು ಲಭ್ಯವಿರುವ ಐವತ್ತಾರು  ಅಂಗಡಿ ಹೊಂದಿರುವ ಬೀದಿ ಇದೆ. ನಮ್ಮ ವಿ ವಿ ಪುರಂನ ಫುಡ್‌ ಸ್ಟ್ರೀಟ್‌ ಇದ್ದ ಹಾಗೆ. ಆದರೆ ಇದು  ಅತ್ಯಂತ ವ್ಯವಸ್ಥಿತ ಹಾಗೂ ವೈಭವೋಪೇತ ತಿನಿಸುದಾಣ. ಸ್ವಾಗತ ಕಮಾನುಗಳೇನು? ಝಗಮಗಿಸುವ ದೀಪಾಲಂಕಾರಗಳೇನು? ಒಟ್ಟಾರೆ ಎಲ್ಲ ತಿಂಡಿಪೋತರ ಓಲೈಸುವ ನಂದನವನ ಇದು.

ಅಲ್ಲಿಗೆ ಭೇಟಿ ಇತ್ತು ವಿಶೇಷ ಖಾದ್ಯಗಳನ್ನು ಆಸ್ವಾದಿಸಿ ಅಡ್ಡಾಡುತ್ತಿದ್ದಾಗ “ ಲೇ ಸುಧಾ ಈ ಅಂಗಡಿಯಲ್ಲಿ ಗಜಕ್(ಎಳ್ಳು ಬೆಲ್ಲದಿಂದ ಮಾಡಿದ ಬರ್ಫಿಯಂಥ
ಸಿಹಿತಿಂಡಿ) ಚೆನ್ನಾಗಿರತ್ತೆ, ತೊಗೋಳ್ಳೋಣವಾ” ಅಚ್ಚಕನ್ನಡ ನುಡಿ ಕಿವಿಗೆ ಬಿದ್ದು ಹಿತಾನುಭವ ಉಂಟು ಮಾಡಿತು. ಅಲ್ಲಿ ಬೆಂಗಳೂರಿನ ನಾಲ್ವರು ಮಹಿಳಾಮಣಿಯರು ಪರಸ್ಥಳವೆಂಬ ಭಯವಿಲ್ಲದೆ ವಿಹರಿಸುತ್ತಿದ್ದರು.

“ನೀವು ಯಾವ ಟ್ರಾವೆಲ್ಸ್‌ ನಿಂದ ಬಂದಿದ್ದೀರಿ.”ಎಂದು ಕೇಳಿದಾಗ,

“ಯಾವ ಟ್ರಾವೆಲ್ಸೂ ಇಲ್ಲ.ನಾವು ನಾಲ್ಕು ಸ್ನೇಹಿತರು ಬೆಂಗಳೂರಿನವರು. ಬಿಡುವಿನ ದಿನ ತೀರ್ಮಾನ ಮಾಡಿ,ಫ್ಳೈಟ್‌ ಹತ್ತಿ ಇಂದೋರಿಗೆ ಬರ್ತೀವಿ. ಪ್ರವಾಸದಲ್ಲೇ ಸ್ನೇಹಿತೆಯಾದ ಪೂನಂ ಮನೆಗೆ ಹೋಗ್ತೀವಿ. ನಾಲ್ಕು ದಿನ ಹಾಯಾಗಿ ಸುತ್ತಾಡಿ ಮತ್ತೆ ಬೆಂಗಳೂರಿನ ವಿಮಾನ ಹತ್ತುತ್ತೀವಿ”ಎಂದು  ಉತ್ಸಾಹದಿಂದಲೇ  ವರದಿ  ಡಿದರು.

ಅದನ್ನು ಕೇಳಿ ನನಗೆ ಭಲೇ ಎನ್ನಿಸಿತು ಅವರ ಆತ್ಮವಿಶ್ವಾಸ. ಸಂಬಂಧಗಳ ವಿಷಯದಲ್ಲಿ familiarity breeds contempt (ಅತಿ ಅನ್ಯೋನ್ಯತೆ ತಿರಸ್ಕಾರಕ್ಕೆ ದಾರಿಯಾಗುತ್ತದೆ) ಎಂಬ ಗಾದೆ ನೆನಪಾಯಿತು. ಈ ಪ್ರಸಂಗಗಳಲ್ಲಿ ಯಾರೂ ತಮ್ಮ ಜವಾಬ್ದಾರಿಯನ್ನಾಗಲೀ,ಸಂಬಂಧಗಳನ್ನಾಗಲೀ ಕಡಿದುಕೊಂಡು ಬಂದವರಲ್ಲ. ತಮ್ಮ ಸ್ನೇಹವಲಯದ ಸಮಾನಶೀಲರಲ್ಲಿ ತಮ್ಮ ಆನಂದವನ್ನು ಹಂಚಿಕೊಳ್ಳಲು ಒಂದಿಷ್ಟು ಬಿಡುವು ಮಾಡಿಕೊಂಡು ಬಂದವರು ಅಷ್ಟೆ.

-ಮಹಾಬಲ ಕೆ ಎನ್‌

7 Responses

  1. ನಯನ ಬಜಕೂಡ್ಲು says:

    ಸೊಗಸಾಗಿದೆ ಬರಹ. ಬದುಕಲ್ಲಿ ಸ್ವಲ್ಪವಾದರೂ ಬದಲಾವಣೆ ಬಯಸದವರು ಯಾರೂ ಇಲ್ಲ.

  2. Padma Anand says:

    ಲೇಖನ ಓದಿದಾಗ, ಸಂಸಾರವನ್ನು ಬಿಟ್ಟು ಗೆಳತಿಯೊಂದಿಗೆ ಟ್ರಾವಲ್ಸನಲ್ಲಿ ದಕ್ಷಿಣ ಭಾರತ ಪ್ರವಾಸ ಹೋದ ಸವಿನೆನಪು ಮರುಕಳಿಸಿದಂತಾಯಿತು. ಆರೋಗ್ಯಕರವಾದ ಬದಲಾವಣೆ ಜೀವನೋತ್ಸಾಹ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಚಂದದ ಬರಹ.

  3. ನಾಗರತ್ನ ಬಿ. ಅರ್. says:

    ಬದುಕಿನಲ್ಲಿ ಸ್ವಲ್ಪ ಬದಲಾವಣೆ ಬೇಕು ಎಂದು ಪ್ರತಿಯೊಬ್ಬರೂ ಅನ್ನಿಸುತ್ತದೆ… ಆದರೆ ಅದಕ್ಕೆ ..
    ತಕ್ಕನಾದ ಪರಿಸರ ಪ್ರೋತ್ಸಾಹ..ಅನುಮತಿ..
    ಆರ್ಥಿಕ ..ಸಫಲತೆ ಎಷ್ಟು ಜನಕ್ಕೆ ಸಿಕ್ಕೀತು.. ಯೋಚಿಸುವಂತೆ ಮಾಡಿತು ನಿಮ್ಮ.ಧನ್ಯವಾದಗಳು.
    .

  4. Good fences make good neighbours
    ಈ ಕವನದ ಸಾಲಿನಂತೆ ಅರ್ಥಗರ್ಭಿತವಾದ ಲೇಖನ

  5. ಶಂಕರಿ ಶರ್ಮ says:

    ನಿಜ.. ಬದಲಾವಣೆಯು ಹೊಸ ಹುಮ್ಮನಸ್ಸನ್ನು ನೀಡಿರುವುದು ತಮ್ಮ ಲೇಖನದಲ್ಲಿ ಗಮನಕ್ಕೆ ಬರುವುದು ಸುಳ್ಳಲ್ಲ.. ಸೊಗಸಾದ ಸಾಂದರ್ಭಿಕ ಬರಹ ಸರ್…ಧನ್ಯವಾದಗಳು

  6. Suma Badri says:

    Too good

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: