ಹರಿದ್ವೇಷಿ ತಂದೆಗೆ, ಹರಿಭಕ್ತ ಮಗ
ಈ ಜಗತ್ತಿನಲ್ಲಿ ಉತ್ತಮರು, ಮಧ್ಯಮರು, ಅಧಮರು (ರಾಕ್ಷಸ ಪ್ರವೃತ್ತಿಯವರು) ಹೀಗೆ ಮಾನವರು ಆವರವರ ಗುಣಧರ್ಮಕ್ಕನುಸಾರ ಆಗಿ ಹೋಗಿದ್ದಾರೆ. ಯಾವುದೋ ಸನ್ನಿವೇಶದಿಂದ ಒಳ್ಳೆಯವರು ಕೆಟ್ಟವರಾಗಬಹುದು ಕೆಟ್ಟವರು ಒಳ್ಳೆಯವರಾಗಬಹುದು. ಹಾಗೆಯೇ ಒಳ್ಳೆಯವರ ಹೊಟ್ಟೆಯಲ್ಲಿ ಕೆಟ್ಟವರು ಹುಟ್ಟಬಹುದು. ಕೆಟ್ಟವರಿಂದ ಒಳ್ಳೆಯವರ ಜನನವೂ ಆದ ದೃಷ್ಟಾಂತಗಳಿವೆ. ತಮ್ಮ ಒಳ್ಳೆಯತನದಿಂದ ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಮಾಡಬಹುದು. ಇದಕ್ಕೆ ಯೋಗ್ಯ ಉದಾರಹಣೆ ನೀಡುವುದಾದರೆ ಪುರಾಣಕ್ಕೆ ಸಂಬಂಧಿಸಿದಂತೆ, ಕಿರಾತನೋರ್ವ ಮುನಿಯಾದುದೇ ಅತಿ ಶ್ರೇಷ್ಠ ದೃಷ್ಟಾಂತ. ಇದಲ್ಲದೆ ಸಂಗದೋಷದಿಂದಲಾಗಿ ಒಳ್ಳೆಯವರೂ ವಾಮಮಾರ್ಗಕ್ಕೆ ತಿರುಗುವುದನ್ನು ದಿನನಿತ್ಯ ಕಾಣುತ್ತೇವೆ.
ಉತ್ತಮ ಸಂತಾನವಾಗಬೇಕಾದರೆ ಅದರಲ್ಲಿ ತಾಯಿಯ ಪಾತ್ರ ಹಿರಿದಾದುದು. ವಿವಾಹವಾದ ಕುಲೀನ ಸ್ತ್ರೀಯೊಬ್ಬಳು ತಾಯಿಯಾಗುತ್ತಾಳೆ ಎಂದರೆ… ಗರ್ಭಿಣಿಯಾದರೆ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾನವೀಯ ದೃಷ್ಟಿಯಿಂದ ಆಕೆಯನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಜತನದಿಂದ ನೋಡಲಾಗುತ್ತದೆ. ಆಕೆಯ ಸರ್ವತೋಮುಖ ಆರೋಗ್ಯದ ಹೊಣೆ ಮನೆ ಮಂದಿಯೆಲ್ಲರ ಕರ್ತವ್ಯವೆಂದು ತಿಳಿಯಲಾಗುತ್ತದೆ. ಯಾವುದೇ ನೋವಿನ ಸಂಗತಿಯನ್ನೋ ಆಘಾತಕರ ಘಟನೆಯನ್ನೋ ಗರ್ಭಿಣಿಯ ಮುಂದೆ ಹೇಳಲು ಅನುಭವದ ಹಿರಿಯರು ಹಿಂಜರಿಯುತ್ತಾರೆ. ಯಾಕೆಂದರೆ ಆ ಕೆಟ್ಟ ಪರಿಣಾಮ ಗರ್ಭಸ್ಥ ಶಿಶುವಿನ ಮೇಲೆ ಆಗಿಯೇ ಆಗುತ್ತದೆ. ಅಂತೆಯೇ ಒಳ್ಳೆಯ ಸನ್ನಿವೇಶ, ಸಂದರ್ಭಗಳು ಸಚ್ಚಾರಿತ್ರ್ಯ, ಉತ್ತಮ ಸಂಸ್ಕಾರಗಳು ನಡೆದುದಾದರೆ ಅದಕ್ಕನುಗುಣವಾಗಿ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಸಂಶಯವಿಲ್ಲ . ಇದಕ್ಕನುಗುಣವಾಗಿ ಅರ್ಜುನ-ಸುಭದ್ರೆಯರ ಮಗನಾದ ಅಭಿಮನ್ಯುವಿನ ಕತೆ ನಮ್ಮ ಮುಂದಿದೆ. ಸಹಸ್ರಾರು ವರ್ಷಗಳ ಹಿಂದೆ ನಡೆದ ಘಟನೆಯಾದರೂ ಇದು ನಿತ್ಯನೂತನವಾಗಿ ನಾರೀಲೋಕಕ್ಕೆ ಕಿವಿಮಾತು ಹೇಳುವಂತಿದೆ. ಸುಭದ್ರೆಯ ಸೀಮಂತ ಮುಗಿಸಿ ಎತ್ತಿನಗಾಡಿಯಲ್ಲಿ ತವರು ಮನೆಗೆ ಕರೆದೊಯ್ಯುತ್ತಾನೆ. ಅಣ್ಣನಾದ ಶ್ರೀಕೃಷ್ಣ. ಪ್ರಯಾಣದ ಆಯಾಸ ಪರಿಹಾರಕ್ಕಾಗಿ ತಂಗಿ ಸುಭದ್ರೆಗೆ ಅಣ್ಣ ಕತೆ ಹೇಳುತ್ತಾನೆ. ಆ ಕತೆಯಾದರೋ ಅಂತಿಂತಹ ಕತೆಯಲ್ಲ! ಮಹಾಭಾರತ ಯುದ್ದದ ಚಕ್ರವ್ಯೂಹ ರಚನೆಯ ವಿವರಣೆಯನ್ನು ಕೊಡುವಂತಾದ್ದು, ಕೇಳುತ್ತಾ ಕೇಳುತ್ತಾ ಸುಭದ್ರೆ ತೂಕಡಿಸುತ್ತಾಳೆ. ಮುಂದಿನ ಹೂಂಗುಟ್ಟುವಿಕೆ ಅವಳ ಬಾಯಿಯಿಂದಲ್ಲ! ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನಿಂದ ಎಂದು ತಿಳಿದಾಗ ಕೃಷ್ಣ, ತಕ್ಷಣ ತನ್ನ ಮಾತನ್ನು ಅಲ್ಲಿಗೇ ನಿಲ್ಲಿಸುತ್ತಾನೆ. ಪರಿಣಾಮವಾಗಿ, ಮುಂದೆ ಅಭಿಮನ್ಯು ಚಕ್ರವ್ಯೂಹದಲ್ಲಿ ರಥಿಕರನ್ನು ಪರಾಜಯಗೊಳಿಸಿದನಾದರೂ ಹೊರಗೆ ಬರಲಾಗಲಿಲ್ಲ. ಕರ್ಣನು ಕಪಟ ಯುದ್ದದಲ್ಲಿ ಆತನ ಹಸ್ತಗಳನ್ನು ತುಂಡರಿಸುತ್ತಾನೆ. ದುಶ್ಯಾಸನನ ಮಗನಿಂದ ಅಭಿಮನ್ಯುವಿನ ವಧೆ ಆಯಿತಾದರೂ ಆತನನ್ನೂ ಕೊಂದು ಬಿಟ್ಟೆ ಅಭಿಮನ್ಯು ವೀರ ಮರಣವನ್ನಪ್ಪುತ್ತಾನೆ ಎಂಬುದು ಮಹಾಭಾರತ ಕಥೆಯಿಂದ ವೇದ್ಯ.
ಗರ್ಭಸ್ಥ ಶಿಶುವಿನ ಮೇಲೆ ಆಗುವ ಸತ್ಪರಿಣಾಮದ ಇನ್ನೊಂದು ಉದಾಹರಣೆ ಪ್ರಹ್ಮಾದನಿಗೆ ಸಂಬಂಧಪಟ್ಟದ್ದು, ಮಹಾವಿಷ್ಣುವಿನ ಅರಮನೆಯ ದ್ವಾರಪಾಲಕರಾಗಿದ್ದ ಜಯ-ವಿಜಯರು ಸನಕಸನಂದರ ಶಾಪಕ್ಕೆ ಗುರಿಯಾಗಿ ರಾಕ್ಷಸ ರೂಪದಿಂದ ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ ಜನ್ಮವೆತ್ತಿದ್ದರು. ಹಿರಣ್ಯಾಕ್ಷನನ್ನು ವರಾಹ ಅವತಾರದಲ್ಲಿ ಹರಿಯು ಕೊಂದ ಕೋಪಕ್ಕೆ ಹಿರಣ್ಯಕಶಿಪುವು ಬ್ರಹ್ಮನನ್ನು ಒಲಿಸಿಕೊಳ್ಳಲು ತಪಸ್ಸಿಗೆ ಹೋಗುತ್ತಾನೆ. ಅವನಿಲ್ಲದ ವೇಳೆ ಆ ರಕ್ಕಸನ ರಾಜ್ಯಕ್ಕೆ ದೇವತೆಗಳು ಮುತ್ತಿಗೆ ಹಾಕುತ್ತಾರಲ್ಲದೆ, ಗರ್ಭಿಣಿಯಾಗಿದ್ದ ಹಿರಣ್ಯ ಕಶಿಪುವಿನ ಪತ್ನಿ ಕಯಾದುವನ್ನು ಸೆರೆಹಿಡಿದು ಇರಿಸುತ್ತಾರೆ. ಮಹಾಕ್ರೂರಿಯಾದ ಹಿರಣ್ಯಕಶಿಪುವಿನ ನಿರ್ನಾಮಕ್ಕಾಗಿ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದ ನಾರದರು ಅಲ್ಲಿಗೆ ಪ್ರವೇಶಿಸುತ್ತಾರೆ. ಕಯಾದುವಿನ ಉದರದಲ್ಲಿ ಬೆಳೆಯುವ ಶಿಶುವನ್ನು ಹರಿಭಕ್ತನನ್ನಾಗಿ ಪರಿವರ್ತಿಸುವ ಯೋಚನೆಯಿಂದ ಆಕೆಯನ್ನು ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಸತತವಾಗಿ ನಾರದರಿಂದ ತತ್ತೋಪದೇಶ ಪಡೆದ “ಕಯಾದು” ವಿಷ್ಣುವನ್ನೇ ಧ್ಯಾನಿಸುತ್ತಾ ಕಾಲ ಕಳೆಯುತ್ತಾಳೆ. ನಾರದರ ಉಪದೇಶದಿಂದ ಆಕೆಯ ಉದರದಲ್ಲಿದ್ದ ಪ್ರಹ್ಲಾದನೂ ಹರಿಯ ಪರಮಭಕ್ತನಾಗುತ್ತಾನೆ. ತಂದೆಯಾದ ಹಿರಣ್ಯಕಶಿಪುವು ಬ್ರಹ್ಮನನ್ನು ಒಲಿಸಿಕೊಂಡು ಯಾರಿಂದಲೂ ಯಾವುದರಿಂದಲೂ, ರಾತ್ರಿಯಾಗಲೀ, ಹಗಲಾಗಲೀ, ಮರಣ ಬರಬಾರದೆಂದು ವರವನ್ನು ಪಡೆದು ಹಿಂತಿರುಗುತ್ತಾನೆ. ನಾರದರು ಕಯಾದುವನ್ನು ಹಿರಣ್ಯಕಶಿಪುವಿಗೆ ಒಪ್ಪಿಸುತ್ತಾರೆ.
ಪ್ರಹ್ಲಾದನ ಜನನವಾಗುತ್ತದೆ. ಮಗು ಹರಿಭಕ್ತನಾಗಿ ಬೆಳೆದರೆ ತಂದೆಯಾದರೋ ಹರಿಯ ದ್ವೇಷಿ, ಹಿರಣ್ಯಕಶಿಪುವು ತನ್ನ ಮಗ ಪ್ರಹ್ಲಾದನನ್ನು ಶುಕ್ರಾಚಾರ್ಯರ ಪುತ್ರರಾದ ಚಂಡ, ಅಮರ್ಕರಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ಅವನಿಗೆ ವಿಷ್ಣು ವಿರೋಧವಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದರೆ ಅದಕ್ಕೆ ವಿರೋಧವಾಗಿ ವಿಷ್ಣು ಉಪಾಸಕನಾಗಿ ಪ್ರಹ್ಲಾದನು ಸ್ಪಂಧಿಸುತ್ತಾನೆ. ಇದನ್ನು ಕೇಳುತ್ತಿದ್ದ ರಕ್ಕಸ ತಂದೆಗೆ ಕೆಟ್ಟ ಸಿಟ್ಟು ಬರುತ್ತದೆ. ಗುರುಗಳಲ್ಲಿ ಅವನನ್ನು ತಿದ್ದಲು ಹೇಳಿದರೂ ಪ್ರಯೋಜನವಾಗಲಿಲ್ಲ. ತಾನೇ ಮಗನಿಗೆ ವಿಧವಿಧವಾದ ಕಠಿಣ ಶಿಕ್ಷೆ ಕೊಟ್ಟು ಹರಿಯ ಹೆಸರನ್ನೇ ಹೇಳಕೂಡದೆಂದು ಕಟಪ್ಪಣೆ ಮಾಡಿದರೂ ಫಲಿತಾಂಶ ಶೂನ್ಯ. ಯಾವುದಕ್ಕೂ ಬಗ್ಗದ ಬಾಲಕನನ್ನು ಆನೆಯಿಂದ ತುಳಿಸಿ, ಕುದಿವ ಎಣ್ಣೆಯಲ್ಲಿ ಹಾಕಿ, ಪರ್ವತದಿಂದ ಕೆಳಗೆ ದೂಡಿ ಹೀಗೆ ಮಾರಣಾಂತಿಕ ಶಿಕ್ಷೆ ಕೊಡುತ್ತಾನೆ ತಂದೆ. ಇಲ್ಲ! ಇದಾವುದಕ್ಕೂ ಪ್ರಹ್ಲಾದ ಹೆದರುವುದಿಲ್ಲ! ಆ ಬಾಲಕನ ಕೂದಲೂ ಕೊಂಕುವುದಿಲ್ಲ! ಆಶ್ಚರ್ಯ! ಪರಮಾಶ್ಚರ್ಯ!!!
ಕೋಪದಿಂದ ಕಿಡಿಕಿಡಿಯಾದ ತಂದೆ ಬಾಲಕನಿಗೆ “ಎಲ್ಲಿದ್ದಾನೆ ಆ ನಿನ್ನ ಹರಿ ? ತೋರಿಸು. ಈ ಕಂಬದಲ್ಲಿದ್ದಾನೆಯೇ ಎಂದು ಕಂಬವನ್ನು ಕಾಲಿನಿಂದ ತುಳಿಯುತ್ತಾನೆ. ತಕ್ಷಣವೇ ಕಂಬ ಇಬ್ಬಾಗವಾಗಿ ನರಸಿಂಹಾವತಾರದಿಂದ ಉದ್ಭವಿಸುತ್ತಾನೆ ಹರಿ. ಹೂಂಕಾರ ಮಾಡುತ್ತಾ ನರಸಿಂಹನ ಮೇಲೆ ಬೀಳಲು ಹೋದ ರಾಕ್ಷಸನನ್ನು ಉಗ್ರರೂಪಿಯಾದ ನರಸಿಂಹನು ಬಾಗಿಲು ಹೊಸ್ತಿಲ ಮೇಲೆ ಕುಳಿತು ತನ್ನ ತೊಡೆಯ ಮೇಲೆ ಹಾಕಿ ತನ್ನ ಉಗುರುಗಳಿಂದ ಹಿರಣ್ಯನ ಉದರವನ್ನು ಸೀಳಿ ಸಂಹರಿಸುತ್ತಾನೆ.
ಹಿರಣ್ಯಕಶಿಪುವು ತನಗೆ ಮರಣವೇ ಬರಬಾರದೆಂದು ಬಹಳ ಎಚ್ಚರಿಕೆಯಿಂದ ಬ್ರಹ್ಮನಲ್ಲಿ ಕೇಳಿದ್ದೇನೆಂದರೆ ಹಗಲು ಅಥವಾ ರಾತ್ರಿ, ದೇವತೆಗಳಿಂದಲೋ, ಮನುಷ್ಯರಿಂದಲೋ, ರಾಕ್ಷಸರಿಂದಲೋ, ಯಾವ ಪ್ರಾಣಿಯಿಂದಾಗಲೀ, ಯಾವ ಆಯುಧಗಳಿಂದಾಗಲೀ ತನಗೆ ಮರಣ ಬೇಡವೆಂದು ಬೇಡಿಕೊಂಡಿದ್ದ. ಅದಕ್ಕನುಗುಣವಾಗಿ ಹರಿಯು ಮುಸ್ಸಂಜೆಯ ಹೊತ್ತು, ಕಂಬದಲ್ಲಿ ಕಾಣಿಸಿಕೊಂಡು ನರಸಿಂಹರೂಪವಾಗಿ ಬಂದು ಹೊಸ್ತಿಲಲ್ಲಿ ಕುಳಿತು ಹರಣ ಮಾಡಿದ್ದ. ನರಸಿಂಹ ರೂಪದಲ್ಲಿ ಬಂದ ಹರಿಯನ್ನು ಸ್ತುತಿಸಿದ ಪ್ರಹ್ಲಾದನಲ್ಲಿ ಬಹಳ ಆಹ್ಲಾದದಿಂದ ‘ಮಗೂ ಪ್ರಹ್ಲಾದ, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳಿಕೋ ಎನ್ನುತ್ತಾನೆ ಹರಿ. ಆಗ ಬಾಲಕನು ‘ನನಗೆ ನಿನ್ನಲ್ಲಿರುವ ಭಕ್ತಿ ಅಚಲವಾಗಿರಲಿ, ನನ್ನ ತಂದೆಗೆ ಸದ್ಗತಿ ಉಂಟಾಗಲಿ ಬೇರೇನೂ ಬೇಡ’ ಎಂದು ಕೇಳಿಕೊಳ್ಳುತ್ತಾನೆ. ಆಗ ಹರಿಯು ‘ಒಪ್ಪಿದ್ದೇನೆ. ನೀನು ಕೀರ್ತಿಶಾಲಿಯಾದ ರಾಜನಾಗಿ ಸುಖದಿಂದ ರಾಜ್ಯಭಾರ ಮಾಡು. ಕಡೆಗೆ ನನ್ನ ಸನ್ನಿಧಿಗೆ ಬಂದು ಸೇರು’ ಎಂದು ಹರಸಿ ಕಣ್ಮರೆಯಾಗುತ್ತಾನೆ.
ಇಲ್ಲಿ ಗರ್ಭಿಣಿಯರಿಗೆ ವಿಶೇಷವಾದ ಸಲಹೆಯಿದೆ. ಚಿಂತೆ, ದ್ವೇಷ, ಅಸೂಯೆ, ಸಂಕುಚಿತ ಸ್ವಾರ್ಥ ಇವುಗಳನ್ನೆಲ್ಲ ಬಿಟ್ಟು ಮನಸ್ಸಿನ ಸುಪ್ರಸನ್ನತೆ, ಶಾಂತತೆ, ಧೈರ್ಯ, ಆತ್ಮವಿಶ್ವಾಸ ಇವೆಲ್ಲವುಗಳ ಜೊತೆಗೆ ದೈವಿಕ ಚಿಂತನೆ ಗರ್ಭಿಣಿಗೆ ಆರೋಗ್ಯ ವರ್ಧಕ ಟಾನಿಕ್ಕಿನಂತೆ ಸಹಾಯ ಮಾಡುತ್ತದೆ ಎಂಬುದನ್ನು ಮರೆಯುವಂತಿಲ್ಲ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಪ್ರಕಟಿಸಿದ ಹೇಮಮಾಲಾ ಹಾಗೂ ಓದಿಮೆಚ್ಚಿದ ಬಂಧುಗಳಿಗೆ ವಂದನೆಗಳು.
ಎಂದಿನಂತೆ ಪೌರಾಣಿಕ ಕಥೆ ಚೆನ್ನಾಗಿ ಮೂಡಿ ಬಂದಿದೆ.ಮತ್ತೆ ಮತ್ತೆ ಪೌರಾಣಿಕ ಕಥೆಗಳನ್ನು ಮೆಲುಕು ಹಾಕುವಂತೆ ಮಾಡುವ ನಿಮಗೆ ಧನ್ಯವಾದಗಳು ಮೇಡಂ.
ಎಂದಿನಂತೆ ಪೌರಾಣಿಕ ಕಥೆ ಚೆನ್ನಾಗಿದೆ.ಅಭಿನಂದನೆಗಳು ಮೇಡಂ.
ಉತ್ತಮ ವಿಚಾರಗಳಿಂದ ಕೂಡಿದೆ ಪುರಾಣ ಕಥೆಗಳು.
ಪುರಾಣದ ಕಥೆ ಮೆಲುಕು ಹಾಕಿದಿರಿ. ಚೆನ್ನಾಗಿದೆ
ಬರಹ
ಪೌರಾಣಿಕ ಕಥೆಗಳು ಓದಿದಷ್ಟೂ ಹೊಸದೆನಿಸುತ್ತವೆ. ಬಹು ಸುಂದರ ನಿರೂಪಣೆ ವಿಜಯಕ್ಕಾ, ಧನ್ಯವಾದಗಳು.
ಒಳ್ಳೆಯ ಉದಾಹರಣೆಗಳೊಂದಿಗೆ ನೀಡಿರುವ ಸಂದೇಶ ಸುಂದರ ನಿರೂಪಣೆಯಿಂದ ಮನಸೆಳೆಯಿತು.