ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 2
ಜಪಾನ್ ಮುಟ್ಟಿದಾಗ ಮಧ್ಯಾಹ್ನ 3.45 ಗಂಟೆ ಆಗಿತ್ತು. ಇದು ಅಲ್ಲಿಯ ಸಮಯ. ಭಾರತಕ್ಕಿಂತ ಜಪಾನ್ ಸಮಯ ಮೂರು ಗಂಟೆಗಳ ಕಾಲ ಮುಂದೆ ಇರುತ್ತದೆ. ಉದಾಹರಣೆಗೆ ನಮ್ಮಲ್ಲಿ ಮಧ್ಯಾಹ್ನ ಎರಡು ಗಂಟೆ ಆಗಿದ್ದರೆ ಜಪಾನಿನಲ್ಲಿ ಸಂಜೆ ಐದು ಗಂಟೆ ಸಮಯ. ನರಿಟದಲ್ಲಿ ಇಳಿದಾಗ ಅಷ್ಟಾಗಿ ಜನಜಂಗುಳಿ ನಮಗೆ ಕಾಣಿಸಲಿಲ್ಲ. ಇಲ್ಲಿ ಇಮಿಗ್ರೇಷನ್ ಅಂದರೆ ಅನ್ಯ ದೇಶವನ್ನು ಪ್ರವೇಶಿಸಿ ಇರುವುದಕ್ಕೆ ಅನುಮತಿ ಆಗಬೇಕು. ಅದನ್ನು ಮುಗಿಸಿ, ನಮ್ಮ ಬ್ಯಾಗೇಜ್ ತೆಗೆದುಕೊಳ್ಳಲು ಹೋದೆವು.
ಇಬ್ಬರ ಲಗೇಜ್ ಪೂರ್ತಿಯಾಗಿ ಬರಲಿಲ್ಲ. ಅಲ್ಲಿಂದ ಏರ್‌ಪೋರ್ಟ್‌ನಲ್ಲಿಯೇ ಇರುವ ಜೆ.ಆರ್. ಟ್ರೈನ್ ಸರ್ವಿಸ್‌ಗೆ ಹೋದೆವು. ಜಪಾನಿನಲ್ಲಿ ರೈಲು ವ್ಯವಸ್ಥೆ ಬಹಳ ಚೆನ್ನಾಗಿದೆ. ಜನರು ಅದನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಟೋಕಿಯೋದಲ್ಲಿಯೇ 15 ಮೆಟ್ರೋ ಲೈನ್‌ಗಳಿವೆ. ಟ್ಯಾಕ್ಸಿ ಬಹಳ ದುಬಾರಿ. ವಿವಿಧ ರೀತಿಯ ರೈಲುಗಳಿವೆ. ಮುಂಬಯಿಯಲ್ಲಿರುವಂತಹ ಲೋಕಲ್ ಗಾಡಿಗಳು, ಎಕ್ಸ್‌ಪ್ರೆಸ್ ರೈಲುಗಳು ಮತ್ತು ವಿಶೇಷವಾದ ಬುಲೆಟ್ ರೈಲುಗಳು ಇವೆ. ನಾವು ಏರ್‌ಪೋರ್ಟ್‌ನಲ್ಲಿಯೇ ಇರುವ ಕಛೇರಿಯಲ್ಲಿ ಜೆ.ಆರ್.ರೈಲ್ ಪಾಸ್ ಅನ್ನು ಮಾಡಿಸಿಕೊಂಡೆವು. ಇದಕ್ಕೆ ಪಾಸ್‌ಪೋರ್ಟ್ ತೋರಿಸಬೇಕು. ಏಳು ದಿನಗಳಿಗೆ ಮಾಡಿಸಿದೆವು. ಇದನ್ನು ತೋರಿಸಿ ರೈಲ್ವೆ ಸ್ಟೇಷನ್ ಒಳಗೆ ಹೋಗಬೇಕು. ಅಲ್ಲಿ ಕಂಪ್ಯೂಟರ್‌ನಲ್ಲಿ ಟಿಕೆಟ್ ಕೊಳ್ಳಬೇಕು. ನಂತರ ಗೇಟ್‌ನಲ್ಲಿ ಅದನ್ನು ತೂರಿಸಬೇಕು. ಆಗ ಗೇಟ್ ತೆಗೆಯುತ್ತದೆ. ನಾವು ಆಚೆ ಬದಿಗೆ ಹೋದಾಗ ಮತ್ತೆ ಟಿಕೆಟ್ ಆಚೆ ಬರುತ್ತದೆ. ಅದನ್ನು ತೆಗೆದುಕೊಳ್ಳಬೇಕು. ಇದೊಂದು ವಿಶೇಷವಾದ ಫೂಲ್ ಪ್ರೂಫ್ ಸಿಸ್ಟಮ್. ಅಂದರೆ ಯಾರೂ ಕಳ್ಳತನ ಮಾಡಿ ನುಗ್ಗುವ ಹಾಗೇ ಇಲ್ಲ. ಭದ್ರತೆ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ನಮ್ಮಲ್ಲಿ ಹೀಗೇ ಆದರೆ ಎಷ್ಟು ಒಳ್ಳೆಯದು ಎನ್ನಿಸಿತು. ಇಷ್ಟೆಲ್ಲಾ ಮುಗಿಸಿ ಹೊರಗೆ ಬಂದಾಗ ಸೂರ್ಯನ ಬೆಳಕು ಕಡಿಮೆ ಆಗುತ್ತಿತ್ತು. ಬಹುಶಃ ಅಲ್ಲಿನ ಸಮಯ ಆರರ ಹತ್ತಿರ ಇರಬಹುದು. ಟೋಕಿಯೋದಲ್ಲಿ ಮೆಲ್ಲಗೆ ಚಳಿಗಾಳಿ ಬೀಸುತ್ತಿತ್ತು. ನಾವು ಹೊರಗೆ ಬಂದ ಮೇಲೆ ಬಸ್ಸುಗಳಿಗೆ ಎಂದು ನಿಗದಿ ಪಡಿಸಿದ ಸ್ಥಳಕ್ಕೆ ನಮ್ಮ ಸೂಟ್‌ಕೇಸ್‌ಗಳೊಡನೆ ಬಂದು ನಿಂತೆವು. ಬಸ್ ಬಂದಿತು. ನಮ್ಮ ಸಾಮಾನುಗಳನ್ನು ಒಳಗೆ ಹಾಕಿ ಚಳಿ ತಪ್ಪಿಸಲು ಬಸ್ ಹತ್ತಿ ಕುಳಿತೆವು. ಬೆಚ್ಚಗಾಯಿತು. ಸುಮಾರು ಒಂದು ಗಂಟೆ ಕಾಲದ ಪ್ರಯಾಣ. ಎಲ್ಲರಿಗೂ ಬೆಂಗಳೂರಿನಿಂದ ಪ್ರಯಾಣ ಮಾಡಿ ಸಾಕಾಗಿತ್ತು. ‘ಗೋವಿಂದ’ ಎನ್ನುವ ರೆಸ್ಟುರಾಗೆ ಕರೆದುಕೊಂಡು ಹೋದರು ನಮ್ಮ ಮಾರ್ಗದರ್ಶಿ ಪ್ರಭುಜೀ. ಇಸ್ಕಾನ್ ದೇವಾಲಯ ಟೋಕಿಯೋದಲ್ಲಿದೆ. ಇದರ ಪಕ್ಕದಲ್ಲಿಯೇ ‘ಗೋವಿಂದ’ ಇದೆ. ಇಸ್ಕಾನ್‌ಗೆ ಸಂಬಂಧಪಟ್ಟಿದ್ದು. ಇಲ್ಲಿ ಸಸ್ಯಾಹಾರಿ ಊಟ, ತಿಂಡಿ ಮಾತ್ರ ಸಿಗುತ್ತದೆ. ಅಲ್ಲಿ ಪೂರಿ, ಪಾಲಕ್, ಸಬ್ಜಿ, ಸಾಂಬಾರ್, ರಸಂ ಇಷ್ಟೂ ಊಟದಲ್ಲಿದ್ದುವು! ಊಟವಿಲ್ಲದೇ ಎಲ್ಲರಿಗೂ ರುಚಿ ಕಾಣಿಸಿತು. ನಂತರ ಮಾವಿನ ಲಸ್ಸಿ ಬೇರೆ ಇತ್ತು. ಎಲ್ಲರೂ ಊಟ ಮುಗಿಸಿ ನಮ್ಮ ಹೋಟೆಲ್ ‘ಲುಮಿಯೆರ್’ ಕಡೆ ಪ್ರಯಾಣಿಸಿದೆವು.
ಟೋಕಿಯೋ ನಗರ ಬಹಳ ತುಟ್ಟಿ ಎನಿಸುವ ಮಹಾನಗರ. ಇಲ್ಲಿ ನಗರಕ್ಕೆ ಹತ್ತಿರ ಇದ್ದಷ್ಟೂ ಹೋಟೆಲ್‌ಗೂ ಬಹಳ ಹಣ ತೆರಬೇಕು. ನಮ್ಮ ‘ಲುಮಿಯೆರ್’ ಹೋಟೆಲ್ ಚೆನ್ನಾಗಿತ್ತು. ಬಹುಶಃ ನಾಲ್ಕು ನಕ್ಷತ್ರದ್ದು ಇರಬೇಕು. ನಮ್ಮ ರೂಮಿನ ಸಂಖ್ಯೆ ಪಡೆದು ಲಗೇಜುಗಳನ್ನು ಮೇಲಕ್ಕೆ ಲಿಫ್ಟ್‌ನಲ್ಲಿ ಸಾಗಿಸಿದ್ದಾಯಿತು. ಇಲ್ಲಿ ಯಾರೂ ಸಹಾಯಕರಿಲ್ಲ. ನಮಗೆ ನಾವೇ ಸಹಾಯಕರು. ಆದ್ದರಿಂದಲೇ ಕಡಿಮೆ ಲಗೇಜು ಇದ್ದಷ್ಟೂ ಪ್ರಯಾಣ ಸುಖಕರ ಎನ್ನುವುದು. ರೂಮಿನ ಒಳಗೆ ಹೋದ ಮೇಲೆ ಪ್ರಭುಜೀಯವರು ಮೊದಲೇ ಹೇಳಿದ್ದರಿಂದ, ಅಂದರೆ ರೂಮಿನ ಅಳತೆಯ ಬಗ್ಗೆ ಹೇಳಿದ್ದರಿಂದ ಅಷ್ಟಾಗಿ ಬೇಜಾರಾಗಲಿಲ್ಲ. ನಮ್ಮ ಸೂಟ್‌ಕೇಸ್‌ಗಳನ್ನು ಇಡುವುದಕ್ಕೇ ಜಾಗ ಇಲ್ಲ. ಜೊತೆಗೆ ಮಲಗಿದ ಮೇಲೆ ಎದ್ದು ಬಾತ್‌ರೂಮಿಗೆ ಹೋಗಲು ಹೆಜ್ಜೆ ಇಡಲು ಜಾಗವಿಲ್ಲ! ರೂಮು ಎಷ್ಟು ಚಿಕ್ಕದೆಂದರೆ ಅಲ್ಲಿ ಇಲ್ಲಿ, ಎದ್ದು ಬಿದ್ದು ಓಡಾಡುವಂತಿತ್ತು! ಅಂತೂ ಪ್ರಯಾಣದ ಆಯಾಸ ಪರಿಹರಿಸಲು ದಿಂಬಿಗೆ ತಲೆಕೊಟ್ಟಿದ್ದೇ ತಡ ನಿದ್ರಾದೇವಿ ನನ್ನನ್ನು ಆವರಿಸಿಬಿಟ್ಟಳು. ಪ್ರಯಾಣದಲ್ಲಿಯೇ 16 ನೆಯ ಏಪ್ರಿಲ್ ಕಳೆಯಿತು.
ಟೋಕಿಯೋ
17-04-2019
ಬೆಳಿಗ್ಗೆದ್ದು ಆತಂಕದಿಂದ ಹೊರಡುವ ಅಗತ್ಯವೇನಿರಲಿಲ್ಲ. ಎದ್ದು ಸ್ನಾನಾದಿಗಳನ್ನು ಮಾಡಿ ಎಂಟೂವರೆ ಗಂಟೆಗೆ ಹೋಟೆಲನ್ನು ಬಿಟ್ಟು ಹೊರಟೆವು. ಇಷ್ಟರಲ್ಲಿ ಕೆಲವರು ಪರಿಚಯ ಆಗಿದ್ದರು. ಅಕ್ಕ ತಂಗಿಯರು ಇದ್ದದ್ದು ವಿಶೇಷ. ಒಂದು ಜೊತೆ ಅಕ್ಕತಂಗಿಯರು ಎಂಭತ್ತರ ಹತ್ತಿರದವರು. ಇನ್ನೊಂದು ಜೊತೆ ಅಕ್ಕತಂಗಿಯರು ಅರವತ್ತರ ಅಸುಪಾಸು. ಇವರುಗಳನ್ನು ನೋಡಿ ಬಹಳ ಸಂತೋಷವಾಯಿತು. ದಾರಿಯಲ್ಲಿ ಮನೆಗಳ ಮುಂದೆ ಕುಂಡಗಳಲ್ಲಿ ಸುಂದರ ಹೂಗಳು. ಹೋಟೆಲಿನಿಂದ ಇಸ್ಕಾನ್‌ಗೆ ಹೋದೆವು. ಭಾರತದಲ್ಲಿರುವಂತೆಯೇ ಮಂದಿರ. ಬಾಗಿಲಿನ ಕೆತ್ತನೆ ಬಹಳ ಚೆನ್ನಾಗಿದೆ. ಮೇಲೆ ಗರುಡ ಇದೆ. ಜಪಾನಿ ಭಾಷೆಯಲ್ಲಿ ಕೆರೂರ ಎಂದು ಕರೆಯುತ್ತಾರೆ. ಎಲ್ಲರೂ ಕುಳಿತು ಕೃಷ್ಣನ ಭಜನೆ ಮಾಡಿದೆವು. ಈ ಮಂದಿರ 2011ರಲ್ಲಿ ಪ್ರಾರಂಭವಾಯಿತು. ಈಗ ಇನ್ನೂ ಕೆಲವೆಡೆ ಪ್ರಾರಂಭವಾಗುತ್ತಿದೆ. ಜಪಾನೀಯರು ಪ್ರತಿದಿನ 10-12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರಿಗೆ ಅದೇ ಪ್ರಮುಖವಾದದ್ದು. ಆದ್ದರಿಂದ ಮಾನಸಿಕ ಒತ್ತಡಗಳೂ ಬಹಳ ಜಾಸ್ತಿ. ವಾರದ ರಜಾ ದಿನಗಳಲ್ಲಿ ಕೆಲವರು ಇಲ್ಲಿ ಬರುತ್ತಾರಂತೆ. ಬಂದು ಕುಳಿತು ದೇವರ ವಿಗ್ರಹಗಳನ್ನು ನೋಡುತ್ತಾ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುತ್ತಾರಂತೆ. ಇತ್ತೀಚೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಬರುತ್ತಾರೆ ಎಂದು ಅಲ್ಲಿಯ ಮುಖ್ಯಸ್ಥರು ಹೇಳಿದರು. ಇಲ್ಲಿರುವ ಕೃಷ್ಣನ ವಿಗ್ರಹ ಜೈಪುರದಲ್ಲಿ ಮಾಡಿದ್ದು. ಪಕ್ಕದಲ್ಲಿ ‘ಪುರಿ ಜಗನ್ನಾಥ’ ಇದ್ದಾನೆ. ಇದರ ಪಕ್ಕ ಗೌರಾಂಗ ಇದ್ದಾನೆ. ಜಪಾನಿ ಭಾಷೆಯಲ್ಲಿ ‘ಹರೇಕೃಷ್ಣ ಹರೇರಾಮ’ ಬರೆದು ಹಾಕಿರುವ ತೂಗುಪಟ (ಚಾರ್ಟ್) ಇದೆ. ಕೃಷ್ಣನ ದರ್ಶನವಾದ ಮೇಲೆ ಪಕ್ಕದ ‘ಗೋವಿಂದ’ ರೆಸ್ಟುರಾದಲ್ಲಿ ತಿಂಡಿ ತಿನ್ನಲು ಹೋದೆವು. ಇಡ್ಲಿ, ವಡೆ ತಯಾರು ಮಾಡಿದ್ದರು. ಇಲ್ಲಿ ಕಾಫಿ, ಟೀ ಇರುವುದಿಲ್ಲ. ಆದರೆ ಹಾಲು ಹಾಕಿದ ಕಷಾಯ ಕೊಟ್ಟರು, ಬಹಳ ಚೆನ್ನಾಗಿತ್ತು.
ಆಶಿಕಾಗ ಉದ್ಯಾನ
ನಮ್ಮ ಆ ದಿನದ ಭೇಟಿ ಆಶಿಕಾಗ ಉದ್ಯಾನವಾಗಿತ್ತು. ಇದು ಟೋಕಿಯೋದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿದೆ. ಸುಮಾರು ಒಂದೂವರೆ ಗಂಟೆ ಪ್ರಯಾಣ. ಆಶಿಕಾಗ ನಗರದಲ್ಲಿ ಈ ಉದ್ಯಾನ ಇದೆ. ಇದು 23 ಎಕರೆಗಳಷ್ಟು ವಿಸ್ತಾರವಾಗಿದೆ. ಪ್ರವೇಶ ದರ, 500 ಯೆನ್ (ಏಪ್ರಿಲ್-ಮೇ ನಲ್ಲಿ) ಮುಖ್ಯವಾಗಿ ಇಲ್ಲಿರುವ ಹೂವು ವಿಸ್ಟೀರಿಯ. ಇದಲ್ಲದೆ ಇನ್ನೂ ಅನೇಕ ರೀತಿಯ ಹೂವುಗಳಿವೆ. ವಿವಿಧ ಬಣ್ಣಗಳ ವಿಸ್ಟೀರಿಯ ನಾವು ಭೇಟಿ ಕೊಟ್ಟಾಗ ಹೂವಾಗಬೇಕಿತ್ತು. ಆದರೆ ಈ ವರ್ಷ ಆಗಿರಲಿಲ್ಲ. ಇನ್ನೂ ಮೊಗ್ಗಿನ ಮಾಲೆಗಳಿದ್ದುವು. ಎರಡು ಮರಗಳು ಬಹಳ ಹಳೆಯವು. ಒಂದು ಮರ 150 ವರ್ಷ ಹಳೆಯದ್ದು. ಇವು ಪಾರ್ಕ್‌ನ ಮಧ್ಯದಲ್ಲಿವೆ. ಇವುಗಳಿಗೆ ಕಬ್ಬಿಣದ ಸರಳುಗಳನ್ನು ಆಧಾರಕ್ಕೆ ಕೊಟ್ಟು ಹಬ್ಬಿಸಿದ್ದಾರೆ. ಇದು 1000 ಚದರ ಮೀಟರ್‌ಗಳಷ್ಟು ಇದೆ. ಅವತಾರ್ ಚಿತ್ರದ ‘ಅಧ್ಯಾತ್ಮದ ಮರ’ ವನ್ನು ನೆನಪಿಗೆ ತರುತ್ತದೆ. ಹೂವಿನ ಬಣ್ಣ ತಿಳಿನೇರಳೆ. ಇದಲ್ಲದೆ ಹಳದಿ ಬಣ್ಣದ ಹೂಗಳಿರುವ ಕಡೆ ‘love tunnel ‘ ಅಂದರೆ ಪ್ರೇಮದ ಸುರಂಗ ಎನ್ನುತ್ತಾರೆ. ವಿಸ್ಟೀರಿಯಾ ಹೂಗಳ ಗೊಂಚಲುಗಳು ನಾಲ್ಕು ಅಡಿ ಉದ್ದ ಇರುತ್ತವಂತೆ. ಒಂದೊಂದು ಒಂದು ಹಾರದ ಹಾಗೆ ಇರಬಹುದು.
ಮಧ್ಯದಲ್ಲಿ ಒಂದು ಕೊಳವಿದೆ. ಸುಂದರ ಜಪಾನೀ ಹೂದೋಟ. ಅಲ್ಲಿ ತೇಲುವ ಹೂ ಪಿರಮಿಡ್‌ಗಳಿವೆ. ಬಣ್ಣಗಳ ಮಾಯಾಲೋಕವನ್ನೇ ಸೃಷ್ಟಿಸಿವೆ. ಚಿಕ್ಕ ಸೇತುವೆಗಳಿವೆ. ಇದಲ್ಲದೆ ಎತ್ತರದ ಜಾಲರಿಯ ಮೇಲೆ ಹಬ್ಬುವ ಗುಲಾಬಿ ಗಿಡಗಳಿವೆ. ಇದು ‘ಕಾಮನಬಿಲ್ಲು’ ಉದ್ಯಾನ ಆಗಿದೆ. ಒಂದೆಡೆ ಟ್ಯೂಲಿಪ್‌ಗಳಿವೆ. ಟ್ಯೂಲಿಪ್ ಹಾಲೆಂಡ್ (ನೆದರ್‌ಲ್ಯಾಂಡ್) ದೇಶದ ಪ್ರಸಿದ್ಧ ಹೂವು, ರಾಷ್ಟ್ರದ ಹೂವು ಕೂಡ. ಅಮಿತಾಬ್ ಬಚ್ಚನ್ ಮತ್ತು ರೇಖಾ ನಟಿಸಿರುವ ‘ಸಿಲ್‌ಸಿಲಾ’ ಚಿತ್ರದಲ್ಲಿ ಹಾಲೆಂಡ್‌ನಲ್ಲಿ ಬೆಳೆದಿರುವ ಉದ್ದಕ್ಕೂ ಇರುವ ಬಣ್ಣ ಬಣ್ಣದ ಟ್ಯೂಲಿಪ್‌ಗಳ ಮಧ್ಯೆ ಇವರಿಬ್ಬರ ಹಾಡಿನ ಚಿತ್ರೀಕರಣ ನೆನಪಿಗೆ ಬರುತ್ತದೆ. ಈಗ ನಮ್ಮ ದೇಶದ ಕಾಶ್ಮೀರದಲ್ಲಿಯೂ ಒಳ್ಳೆಯ ಟ್ಯುಲಿಪ್ ಉದ್ಯಾನ ಇದೆ. ಆಶಿಕಾಗ ಉದ್ಯಾನದಲ್ಲಿ ಇನ್ನೂ ಅನೇಕ ರೀತಿಯ ಪುಷ್ಪಗಳನ್ನು ನೋಡಿ ಆನಂದಿಸಿದೆವು. ಎಷ್ಟು ಫೋಟೋಗಳನ್ನು ಕ್ಲಿಕ್ಕಿಸಿದರೂ ತೃಪ್ತಿಯಿಲ್ಲ. ಪಕ್ಕದ ಹೂವು ‘ನಾನೆಷ್ಟು ಸುಂದರ, ನನ್ನ ಫೋಟೋ ಬೇಡವೇ?’ ಎಂದು ಕೇಳುವಂತಿತ್ತು. ಅನೇಕ ಹೈಡ್ರಾಂಜಿಯಗಳೂ ಇದ್ದುವು. ಇದಲ್ಲದೆ ಕೊಳದಲ್ಲಿ ತಾವರೆಗಳು ಅರಳಿದ್ದುವು. ರೋಡೋಡೆಂಡ್ರಾನ್, ಪ್ಯೂನಿ ಕೂಡ ಇದ್ದುವು. ಜಪಾನೀಯರ ಅಚ್ಚುಮೆಚ್ಚಿನ ಬಣ್ಣಬಣ್ಣದ ಸೇವಂತಿಗೆಯೂ ಇತ್ತು. ಆಶಿಕಾಗದಲ್ಲಿ ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ರಾತ್ರಿ ದೀಪಾಲಂಕಾರ ಇರುತ್ತದಂತೆ.
ಒಂದು ಕಡೆ ಚೆರ್ರಿ ಮರಗಳಿದ್ದುವು. ತಿಳಿಗುಲಾಬಿ ಬಣ್ಣದ ನವಿರಾದ ಹೂಗಳು. ಅವುಗಳ ಪಕಳೆಗಳು ಗಾಳಿಗೆ ಉದುರುವಾಗ ಏನೋ ಒಂದು ಮಧುರ ಭಾವನೆ, ನಾವೇ ಗಾಳಿಯಲ್ಲಿ ತೇಲಾಡಿದಂತೆ ಅನಿಸಿತು. ನೆಲದ ಮೇಲೆ ಉದುರಿದ ಎಸಳುಗಳ ರತ್ನಗಂಬಳಿಯ ನೇಯ್ಗೆ! ಅಲ್ಲೇ ಚೆರ್ರಿ ಮರಗಳನ್ನು ನೋಡುತ್ತಾ ನಮ್ಮ ಪೊಟ್ಟಣದ ಊಟವನ್ನು ಮಾಡಿದೆವು. ಚಿತ್ರಾನ್ನ, ಮೊಸರನ್ನ ಮತ್ತು ಹಲ್ವ ಇದ್ದುವು. ಮತ್ತೆ ಸುತ್ತಾಡಿ, ವಾಪಾಸು ಹೊರಡುವ ಸಮಯ ಬಂದಿತು. ನಾವು ಒಳಗೆ ಬಂದ ದ್ವಾರದ ಹತ್ತಿರ ಗಿಡಗಳನ್ನು, ಬೀಜಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಬೆಲೆ ಬಹಳ ದುಬಾರಿ ಎನ್ನಿಸಿತು. ಎಲ್ಲರೂ ಹೊರಗೆ ಬಂದು ನಮ್ಮ ಬಸ್ಸನ್ನು ಏರಿದೆವು. ಮತ್ತೆ ಸುಮಾರು ಎರಡು ಗಂಟೆಗಳ ಪ್ರಯಾಣ. ಟೋಕಿಯೋ ಹತ್ತಿರ ಟ್ರಾಫಿಕ್ ಇರುತ್ತದಲ್ಲ, ವಾಪಾಸು ಬರುವಾಗ ಹಳ್ಳಿಯ ಚಿತ್ರಗಳು ಅಲ್ಲಲ್ಲಿ ಸಿಕ್ಕಿದುವು. ಅಲ್ಲಲ್ಲಿ ಕೃಷಿಭೂಮಿ ಮತ್ತು ಹೆಂಚಿನ ಮನೆಗಳು ಕಾಣಿಸಿದುವು. ರಸ್ತೆ ಹಿಂಬದಿಗೆ ಚೆರ್ರಿ ಮರಗಳು. ಹೋಟೆಲ್‌ಗೆ ಸಂಜೆ ಆರರ ಹೊತ್ತಿಗೆ ತಲುಪಿದೆವು. ನಂತರ ಹತ್ತಿರದಲ್ಲೇ ಓಡಾಡಿ ಬರಲು ಹೋಗಿದ್ದೆವು. ಇಂಗ್ಲೀಷ್ ಬೋರ್ಡ್‌ಗಳು ಕಡಿಮೆ. ಮಾತನಾಡಲೂ ಯಾರಿಗೂ ಬರುವುದಿಲ್ಲ. ‘ಡೈಸೋ’ ಎನ್ನುವ ಮಾಲ್‌ಗೆ ಹೋಗಿದ್ದೆವು. ನಮ್ಮ ಮಾಲ್‌ಗಳಂತೆಯೇ ಇದ್ದರೂ, ಇನ್ನೂ ದೊಡ್ಡದು. ಇಲ್ಲಿ ಯಾವ ವಸ್ತು ಕೊಂಡರೂ ನೂರು ಯೆನ್, ಬೆಲೆ ಹೆಚ್ಚಿದ್ದರೆ ಅದರ ಮೇಲೆಯೇ ಮುದ್ರಿಸಿರುತ್ತಾರೆ. ಈ ರೀತಿ ಅನೇಕ ದೇಶಗಳಲ್ಲಿ ಇರುತ್ತದೆ. ಅಮೆರಿಕದಲ್ಲಿರುವ ಒನ್ ಡಾಲರ್ ಶಾಪ್‌ಗಳಂತೆ. ಮಲೇಶಿಯಾದಲ್ಲೂ ‘ಟು ರಿಂಗಿಟ್’ ಅಂಗಡಿಗಳಿವೆ. ಡೈಸೋನಲ್ಲಿ ಹಾಗೇ ಸುತ್ತಾಡಿದೆವು. ಕೊಳ್ಳಲು ವಿಶೇಷವಾಗಿ ಏನೂ ಕಾಣಿಸಲಿಲ್ಲ. ಒಂದು ಚತ್ರಿ ಮತ್ತು ಹೈಡ್ರಾಂಜಿಯ ಹೂಗಳನ್ನು ಕೊಂಡೆ ಮತ್ತೆ ವಾಪಸ್ ಹೋಟೆಲಿಗೆ ಬಂದೆವು.
(ಮುಂದುವರಿಯುವುದು)
(ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33093 )
-ಡಾ.ಎಸ್.ಸುಧಾ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.ನಿಮ್ಮ ಜಪಾನ್ ಪ್ರವಾಸದ ಅನುಭವ ಓದುತ್ತಾ ಓದುತ್ತಾ ನಾನು ಅದರಲ್ಲಿ ಒಬ್ಬಳಾಗಿ ನಿಂತು ನೋಡುವಂತೆ ಇದೆ ನಿಮ್ಮ ನಿರೂಪಣೆ ಧನ್ಯವಾದಗಳು ಮೇಡಂ.
Thanks nagarathna. your encouragement is needed.
ನಿನ್ನ ಜೊತೆ ಸುತ್ತಾಡಿದಂತೆ, ಸುಂದರ ಹೂವುಗಳ ಸುವಾಸನೆ ಆಸ್ವಾದಿಸಿದಂತೆ ಅನುಭವವಾಯಿತು. ಬಹಳ ಚೆನ್ನಾದ ವಿವರಣೆ. ಸಿಲ್ ಸಿಲಾ ಹಾಡು ನನಗೆ ಬಹಳ ಇಷ್ಟ.ಮುಂದಿನ ಕಂತಿಗೆ ಕಾಯುತ್ತೇನೆ
Thanks nirmala. happy you liked it.
Very fine graphic description
Thanks sir
ಜಪಾನಿನ ವಿಸ್ಟೀರಿಯಾ ಹೂವನ್ನು ಕಂಡಾಗ ನಮ್ಮ ದ್ರೌಪದೀ ಹೂವಿನ ಮಾಲೆಯ ನೆನಪಾಯ್ತು.. ಆಶಿಕಾಗ ಉದ್ಯಾನವನದ ಚಿತ್ರಗಳು ಮನಸೆಳೆದವು..ಕೂತಲ್ಲಿಯೇ ನಮಗೆ ಜಪಾನ್ ಪ್ರವಾಸ ಮಾಡಿಸುತ್ತಿರುವಿರಿ ಮೇಡಂ..ಧನ್ಯವಾದಗಳು.
ನಿಮ್ಮ ಜಪಾನ್ ಅನುಭವಗಳು ಚೆನ್ನಾಗಿವೆ.Thanks for sharing