ಶ್ರೀಮತಿಯ ಆಕಾಶವಾಣಿ ಅರಂಗೇಟ್ರಂ.

Share Button


ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದಾಗಲೇ ”ರ್ರೀ… ” ನನ್ನವಳ ಕೋಗಿಲೆ ಕಂಠ ಕರ್ಕಶವಾಗಿ ಉಲಿಯಿತು.
”ಲೇ..ಲತಾ ಇವತ್ತು ವಾಕಿಂಗ್ ಬಂದ್. ನೆನ್ನೆ ನನ್ನ ಗೆಳೆಯ ರಾಮು ಅಲ್ಲಿ ಇಲ್ಲಿ ಅಂತ ಅರ್ಧ ಮೈಸೂರು ಸುತ್ತಿಸಿಬಿಟ್ಟ. ಸಾಕಾಗಿ ಹೋಗಿದೆ ಕಣೆ ಪ್ಲೀಸ್”.
”ನೀವು ವಾಕಿಂಗ್ ಹೋಗಿ.. ಬಿಡಿ ನನಗೇನೂ ಆಗಬೇಕಾಗಿಲ್ಲ. ಇವತ್ತು ಸ್ವಲ್ಪ ಬೇಗ ಎದ್ದು ಸ್ನಾನ ತಿಂಡಿ ಮುಗಿಸಿದರೆ ನನಗೆ ಹೆಲ್ಪ್ ಆಗುತ್ತೆ”
”ಏ..ಅದೇನು ವಿಶೇಷ. ಕೆಲಸದ ನಿಂಗಮ್ಮ ಬರಲಿಲ್ಲವೇ?”
”ಅದೇನೂ ಅಲ್ಲಾರೀ, ರಾತ್ರಿ ಊಟ ಮಾಡುವಾಗ ನಾನು ಇವತ್ತಿನ ಪ್ರೋಗ್ರಾಂ ಬಗ್ಗೆ ಹೇಳಿದ್ದೆ. ನೆನಪಿಲ್ಲವೇ? ”ಎಂದಳು ನನ್ನರಗಿಣಿ.
‘ಏನು?’ ಎಂದು ಮತ್ತೆ ಕೇಳಿದೆ.

”ರಾತ್ರಿಯೆಲ್ಲ ರಾಮಾಯಣ ಕೇಳಿ ಬೆಳಗಾಗೆದ್ದು ರಾಮನಿಗೂ ಸೀತೇಗೂ ಏನಾಗಬೇಕು ಅಂತ ಕೇಳಿದಂತಿದೆ ನಿಮ್ಮ ಮಾತು. ಇವತ್ತು ನನ್ನನ್ನು ಆಕಾಶವಾಣಿಗೆ ಕರೆದುಕೊಂಡು ಹೋಗಬೇಕೂಂತ ಹೇಳಿರಲಿಲ್ಲವೇ? ನನ್ನ ಗೆಳತಿ ಶ್ಯಾಮಲಾ ಊರಿನಲ್ಲಿ ಇದ್ದಿದ್ದರೆ ನಿಮ್ಮನ್ನು ಯಾರು ಕರಿಯುತ್ತಿದ್ದರು. ಪಾಪ.. ಅವರು ಊರಿನಲ್ಲಿ ಯಾರಿಗೋ ಹುಷಾರಿಲ್ಲವೆಂದು ಫೋನ್ ಬಂದಿತ್ತಂತೆ. ನೆನ್ನೆ ಬೆಳಗ್ಗೇನೆ ಹೋದರು. ಎಷ್ಟು ಕಷ್ಟಪಟ್ಟು ನನ್ನ ಲೇಖನಗಳನ್ನು ತಾವೇ ತೆಗೆದುಕೊಂಡು ಹೋಗಿ ಕೊಟ್ಟು ಓಡಾಡಿ ಪ್ರಸಾರಕ್ಕೆ ಆಯ್ಕೆ ಮಾಡಿಸಿದ್ದಾರೆ. ರೆಕಾರ್ಡಿಂಗಿಗೆ ತಪ್ಪಿಸಿಕೊಳ್ಳಬೇಡಿ, ನಿಮ್ಮವರನ್ನೇ ಕರೆದುಕೊಂಡು ಹೋಗಿ ಎಂದು ಸಾರಿ ಸಾರಿ ಹೇಳಿ ಹೋಗಿದ್ದಾರೆ. ಒಂದು ಸಾರಿ ಅವರು ಹೇಳಿದ ಟೈಂಗೆ ಹೊಗಲಿಲ್ಲಾಂದ್ರೆ ಮತ್ಯಾವತ್ತೂ ನನ್ನನ್ನು ಕರೆಯೋದೇ ಇಲ್ಲವಂತೆ. ಟೈಂ ಸೆನ್ಸ್ ಇಲ್ಲ, ನೆಗ್ಲಿಜೆನ್ಸ್ ಅಂತ. ಫಸ್ಟ್ ಟೈಂ ಸ್ವಲ್ಪ ಬೇಗನೇ ಹೋಗಿ ನಂಬಿಕೆ ಉಳಿಸಿಕೊಳ್ಳಿ” ಅಂತ ಹೇಳಿದ್ದಾರೆ.

ಓಹೋ ! ನೆನಪಿಗೆ ಬಂತು. ಹೌದು, ಇದು ನಾನೇ ಮೈಮೇಲೆ ಎಳೆದುಕೊಂಡ ಆಪತ್ತು. ಹೇಗೆ ಅಂತೀರಾ.. ಕೇಳಿ. ನಾನು ನನ್ನ ಧರ್ಮಪತ್ನಿ ಇಬ್ಬರೂ ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗ ಹಿಡಿದು ನಮಗೆ ವರ್ಗವಾದ ಕಡೆಗಳಿಗೆಲ್ಲ ಸುತ್ತಿ ಸರ್ವೀಸು ಮುಗಿಸಿದ್ವಿ. ಹುಟ್ಟಿದ ಎರಡು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿ ಅವರುಗಳು ನೌಕರಿ ಹಿಡಿದ ನಂತರ ಮದುವೆ ಮಾಡಿ ದಡ ಮುಟ್ಟಿಸಿಯಾಗಿತ್ತು. ನಿವೃತ್ತಿಯಾದಮೇಲೆ ‘ಪೆನ್ಷನರ್‍ಸ್ ಪ್ಯಾರಡೈಸ್’ ಎಂದು ಹೆಸರಾದ ಮೈಸೂರಲ್ಲಿ ನಮ್ಮ ಬೆವರು ಸುರಿ ದುಡಿದ ಹಣದಿಂದ ಒಂದು ಪುಟ್ಟ ಗೂಡು ಕಟ್ಟಿಕೊಂಡು ಅದನ್ನು ಇಷ್ಟು ದಿನ ಬಾಡಿಗೆಗೆ ಕೊಟ್ಟಿದ್ದೆವು. ಈಗ ಬಿಡಿಸಿಕೊಂಡು ನಾವಿಬ್ಬರೂ ಪರ್ಮನೆಂಟಾಗಿ ನೆಲೆಯೂರಿದ್ದಾಗಿತ್ತು. ಹುಂ..ಇಷ್ಟು ದಿನ ಗಂಡ ಮನೆ ಮಕ್ಕಳು ಕೆಲಸಾಂತ ಬಿಜಿಯಾಗಿದ್ದ ನನ್ನ ಬೆಟರ್‌ಹಾಫ್ ಮೈಸೂರಿಗೆ ಬಂದು ಸೆಟ್ಲಾದಾಗ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸತೊಡಗಿದಳು. ಆಗ ಪರಿಚಯವಾದವರೇ ಎದುರು ಮನೆಯಾಕೆ ಶ್ಯಾಮಲಾಸುಂದರ್. ಮದುವೆಯಾದರೂ ಹೆತ್ತವರನ್ನು ತೊರೆಯದೇ ಕಟ್ಟಿಕೊಂಡವನೊಡನೆ ತೌರಿನಲ್ಲಿಯೇ ಝಾಂಡಾ ಹೂಡಿದ್ದರು. ಒಂದೇ ಒಂದು ಬಂಗಾರದಂತ ಗಂಡು ಮಗನನ್ನೆತ್ತು ಸಾಫ್ಟ್‌ವೇರ್ ಇಂಜಿನಿಯರ್ ಮಾಡಿ ವಿದೇಶಕ್ಕೆ ರವಾನಿಸಿದ್ದರು. ಅವರ ಹೆತ್ತವರು ಪರಲೋಕವಾಸಿಗಳಾದ ಮೇಲೆ ಅವರ ಸಮಸ್ತ ಆಸ್ತಿಗೂ ಇವರೇ ವಾರಸುದಾರರಾಗಿದ್ದರು ನೌಕರಿಯಿಂದ ನಿವೃತ್ತರಾಗಿದ್ದ ಪತಿದೇವರನ್ನು ಮನೆಯ ಹೊರಗಿನ ಎಲ್ಲ ಜವಾಬ್ದಾರಿಗಳಿಗೆ ನೇಮಕಮಾಡಿ ಯಾವುದೇ ಕಾಟವಿಲ್ಲದೆ ತಾವು ಹಲವಾರು ಸಾಂಸ್ಕೃತಿಕ ಸಂಘಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದು ಅಲ್ಲಿಂದಿಲ್ಲಿಗೆ ಎಡತಾಕುತ್ತಾ ಚಟುವಟಿಕೆಯಿಂದಿದ್ದರು. ಅವರು ನನ್ನವಳಿಗೆ ಪರಿಚಯವಾದದ್ದೇ ಸೇಹಿತರಾದರು. ಆತ್ಮೀಯತೆಯ ಅನುಬಂಧ ಬೆಳೆಯುತು.

ಹೀಗೆ ಶುರುವಾದ ಅವರಿಬ್ಬರ ಗೆಳೆತನ ಎಲ್ಲಿಗೆ ಬಂತೆಂದರೆ ಶ್ಯಾಮಲಾ ನನ್ನವಳ ಅಂತರಂಗದಲ್ಲಿ ಈ ವರೆಗೆ ಹುದುಗಿದ್ದ ಅನೇಕ ಹುಚ್ಚುಗಳಿಗೆ ಬಾಣ ಹೊಡೆದು ಬಡಿದೆಬ್ಬಿಸಿದರು. ಆದರಿಂದ ಉತ್ತೇಜಿತಳಾದ ನನ್ನವಳು ”ರೀ.. ಶ್ಯಾಮಲಾ ಕೆಲವು ಸಾಹಿತ್ಯಿಕ ಸಂಘಗಳಿಗೆ ಸೇರಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ನನಗೂ ಅಂತದ್ದೆಲ್ಲ ಇಷ್ಟವೇ. ಇದುವರೆಗಂತೂ ಆಕಡೆಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಈಗ ಸೇರಿಕೊಳ್ಳಲಾ?” ಎಂದು ಕೇಳಿದಳು. ನಾನು ಮನೆಯಲ್ಲಿ ಇವಳು ಮೂರುಹೊತ್ತು ನನ್ನ ತಲೆ ತಿನ್ನುವುದು ತಪ್ಪುತ್ತಲ್ಲಾ ಎಂದು ಸಮ್ಮತಿಸಿದೆ. ಈಗ ಎಷ್ಟು ಸಂಘಗಳಿಗೆ ಸೇರಿದ್ದಾಳೋ ನನಗೇ ತಿಳಿಯದು. ಬೆಳಗಾದರೆ, ಸಂಜೆಯಾದರೆ ಆ ಶ್ಯಾಮಲಾರ ಜಪವೇ ಆಗಿದೆ. ಅವರ ಪ್ರೇರಣೆಯ ಫಲವಾಗಿಯೇ ನನ್ನವಳು ಒಂದೆರಡು ವೈಚಾರಿಕ ಲೇಖನಗಳನ್ನು ಬರೆದು ಅವು ಆಕಾಶವಾಣಿಯಲ್ಲಿ ಪ್ರಸಾರಕ್ಕೆ ಆಯ್ಕೆಯಾಗಿವೆ. ಈಗ ರೆಕಾರ್ಡಿಂಗಿಗಾಗಿ ಕರೆಯೂ ಬಂದುಬಿಟ್ಟಿದೆ. ಸುಮಾರು ಎರಡು ವಾರದಿಂದ ಅದಕ್ಕೆ ತಯಾರಿ ನಡೆದಿದೆ. ಲೇಖನವನ್ನು ಅನೇಕಸಾರಿ ಗಟ್ಟಿಯಾಗಿ ಆಕೆ ಓದುವುದನ್ನು ಕೇಳಿ ಕೇಳಿ ನನಗೇ ಅದು ಬಾಯಿಪಾಠವಾಗಿಬಿಟ್ಟಿದೆ. ”ಏನೇ ಇದು ಇಷ್ಟೊಂದು ಬಾರಿ ಪ್ರ್ಯಾಕ್ಟೀಸೂ?” ಎಂದಾಗಲೆಲ್ಲ ಉತ್ತರ ರೆಡಿ.
”ರೀ ನಿಮಗೇನು ಗೊತ್ತು, ಶ್ಯಾಮಲಾ ಹೇಳಿದ್ದಾರೆ. ಬರಿಯ ಲೇಖನ ಬರೆದು ಬಿಟ್ಟರೆ ಸಾಕಾಗೊಲ್ಲ. ಅದನ್ನು ಪ್ರೆಸೆಂಟ್ ಮಾಡೋ ರೀತಿಯಲ್ಲಿ ವಿಶೇಷತೆಯಿರಬೇಕು ಅಂತ”
”ಹೌದೇ? ಅದು ಹೇಗೆ?”

”ಕೇಳಿ ಪ್ರನೌನ್ಸೇಷನ್, ವಾಯ್ಸ್ ಮಾಡ್ಯುಲೇಷನ್, ವಾಕ್ಯಗಳ ನಡುವೆ ಸ್ಪೇಸ್ ಮೆಂಟೆನೆನ್ಸ್ ಎಲ್ಲವೂ ಮುಖ್ಯವಂತೆ. ಕೇಳಿದ ಶ್ರೋತೃಗಳಿಗೆ ಒಳ್ಳೆಯ ಇಂಪ್ರೆಷನ್ ಮೂಡಿಸಿದರೆ ಅಭಿಮಾನಿಗಳ ಬಳಗ ಬೆಳೆಯುತ್ತದೆ. ಇದು ಹೆಚ್ಚಾದಷ್ಟೂ ಮತ್ತೆಮತ್ತೆ ಆಕಾಶವಾಣಿಯ ಮಹಿಳಾವಿಭಾಗದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆಯುತ್ತಾರಂತೆ. ಶ್ಯಾಮಲಾರವರೂ ಮೊದಲು ಹೀಗೇ ಎಂಟ್ರಾಗಿದ್ದಂತೆ. ಹತ್ತು ವರ್ಷಗಳಿಂದ ಅವರಿಗೆ ಸತತವಾಗಿ ಅವಕಾಶಗಳು ಸಿಗುತ್ತಿವೆಯಂತೆ. ಎಷ್ಟೋ ಜನ ಪ್ರತಿಭೆ ಇರುವಂತಹ ನನ್ನಂಥವರನ್ನು ಇಂಟ್ರೊಡ್ಯೂಸ್ ಮಾಡಿಸಿದ್ದಾರಂತೆ. ಈಗ ನನ್ನ ಸರದಿ” ಎಂದು ಕಣ್ಣರಳಿಸಿ ಹೇಳಿದಳು.
‘ಹೋಗಲಿ ಬಿಡು ನನಗೇನು? ಇದ್ದಾರಲ್ಲ ಅವಳ ಮೆಂಟರ್, ಬಸವನ ಹಿಂದೆ ಬಾಲ’ ಹೋಗಿ ಬರುತ್ತಾರೆಂದುಕೊಂಡಿದ್ದೆ. ನನ್ನ ಗ್ರಹಚಾರ ಆಕೆ ಊರಿಗೆ ಹೋಗಿದ್ದರಿಂದ ನನ್ ತಲೆಗೆ ವಕ್ರಿಸಿತು ಆ ಕೆಲಸ.

‘ರೀ ಇನ್ನೂ ಎದ್ದೇ ಇಲ್ಲವಾ?’ ಕೇಳಿಸಿತು. ಇನ್ನು ಹಾಸಿಗೆ ಮೇಲೇ ಇದ್ದರೆ ಉಳಿಗಾಲವಿಲ್ಲವೆಂದು ಗಡಬಡಿಸಿ ಎದ್ದು ಪ್ರಾಥಃಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ದೇವರಿಗೊಂದು ಸೆಲ್ಯೂಟ್ ಹೊಡೆದು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ ಮೇಲೆ ಹಬೆಯಾಡುತ್ತಿದ್ದ ಇಡ್ಲಿ ಚಟ್ನಿ, ಪಲ್ಯ ರೆಡಿಯಾಗಿದ್ದವು. ತಿಂದು ಕಾಫಿ ಕುಡಿದು ಡ್ರೆಸ್ ಮಾಡಿಕೊಂಡು ಸಿದ್ಧವಾಗಿ ಮನದನ್ನೆ ಅಲಂಕಾರ ಮುಗಿಸುವವರೆಗೂ ಸೋಫಾ ಮೇಲೆ ಕುಳಿತೆ.

”ಓ ! ನಾನೂ ರೆಡಿ” ಎಂದು ನಾಟಕೀಯವಾಗಿ ನುಡಿದ ಪತ್ನಿ ಟಿಪಾಯಿಯ ಮೇಲೆ ಕಾರಿನ ‘ಕೀ’ಇಟ್ಟಿದ್ದೇನೆ. ಸ್ವಲ್ಪ ಗ್ಯಾರೇಜಿನಿಂದ ಕಾರು ಹೊರಕ್ಕೆ ತೆಗೆದು ಇಡಿ” ಎಂದಳು.
”ಅಲ್ಲವೇ ಇಬ್ಬರು ಹೋಗಲಿಕ್ಕೆ ಬೈಕು ಸಾಕಲ್ವಾ?”
”ಬೇಡಾರೀ, ಹೊರಗೆ ತುಂಬ ಬಿಸಿಲಿದೆ ಅಕಾಶವಾಣಿಗೆ ಹೋಗುವಷ್ಟರಲ್ಲಿ ಮತ್ತೊಂದು ಸಾರಿ ಲೇಖನವನ್ನು ನೋಡಿಕೊಳ್ಳಬಹುದು. ಬೈಕಿನಲ್ಲಿ ಆಗಲ್ಲ. ಅಲ್ಲದೆ ಹೆಲ್ಮೆಟ್ ಬೇರೆ ಹಾಕ್ಕೋಬೇಕು. ಹೇರ್‌ಸ್ಟೈಲೆಲ್ಲ ಹಾಳಾಗುತ್ತೆ ” ಎಂದಳು.
”ಹ್ಹ..ಹ್ಹ ಇದೇನು ಎಕ್ಸಾಂಗೆ ಹೋಗೋ ತರಹ ಆಡ್ತಾ ಇದ್ದಾಳೆ. ಲೇಖನವನ್ನು ನೋಡಿಕೊಂಡು ಓದೋಕೆ. ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಯ್ತು” ಹೇಳಿದಷ್ಟು ಮಾಡೋಣವೆಂದು ಕಾರು ತೆಗೆದು ಹೊರಗೆ ನಿಲ್ಲಿಸಿದೆ. ಮನೆ ಲಾಕ್ ಮಾಡಿ ಗೇಟನ್ನು ಮುಚ್ಚಿ ಬಂದ ನನ್ನವಳನ್ನು ನೋಡಿ ಹಾಗೇ ಅವಾಕ್ಕಾದೆ.

ಅಬ್ಬಬ್ಬಾ ! ಮೊನ್ನೆಮೊನ್ನೆ ತಂದಿದ್ದ ಮೈಸೂರು ಸಿಲ್ಕ್ ಸೀರೆ, ಅವಳ ಮೈಮೇಲೆ, ಅದಕ್ಕೊಪ್ಪುವ ಬ್ಲೌಸು, ಮಾಂಗಲ್ಯ ಚೈನಿನೊಡನೆ ಎರಡೆಳೆ ಮುತ್ತಿನಸರ, ಕೊರಳನ್ನು ಅಲಂಕರಿಸಿದೆ. ಒಪ್ಪುವಂತೆ ಮುತ್ತಿನ ಓಲೆ, ಮುತ್ತಿನ ಬಳೆಗಳು. ಒಂದು ಕೈಯಲ್ಲಿ ರಿಸ್ಟ್‌ವಾಚು. ಕಸೂತಿ ಮಾಡಿದ ಪೌಚು, ಮ್ಯಾಚಿಂಗ್ ಸ್ಲಿಪ್ಪರ್, ಮುಖಕ್ಕೆ ಏನಿಲ್ಲವೆಂದರೂ ಒಂದಿಂಚು ದಪ್ಪ ಮೇಕಪ್ಪು, ತುಟಿಗೆ ರಂಗು, ಇದ್ದ ಕೂದಲನ್ನು ಒಪ್ಪವಾಗಿ ಬಾಚಿಕೊಂಡು ಕಟ್ಟಿದ ಲೇಟೆಸ್ಟ್ ಹೇರ್‌ಸ್ಟೈಲು, ಪಕ್ಕಕ್ಕೊಂದು ಚೆಂಗುಲಾಬಿ ಹೂ. ನೋಡುತ್ತಿದ್ದಂತೆ ಒಂದು ಕ್ಷಣ ತಡೆಯಲಾರದಷ್ಟು ನಗೆಯುಕ್ಕಿಬಂತು. ದೇವರೇ ನನ್ನ ಅರ್ಧಾಂಗಿಯು ಬುದ್ಧಿವಂತ ದಡ್ಡಳಾದಳಲ್ಲಾ ಎಂದು. ಇದು ಆಕಾಶವಾಣಿಯಲ್ಲಿ ರೆಕಾರ್ಡಿಂಗ್, ಬರಿಯ ಆಡಿಯೋ, ವೀಡಿಯೋ ಅಲ್ಲ. ಆದರೂ ಇಷ್ಟೊಂದು ಸಾಲಂಕೃತಳಾಗಿ ಹೊರಟಿದ್ದಾಳಲ್ಲಾ. ನಾಲಿಗೆ ತುದಿಯಲ್ಲಿ ಬಂದ ಮಾತುಗಳನ್ನು ತಡೆದುಕೊಂಡು ಕಾರಿನ ಬಾಗಿಲು ತೆರೆದು ಡ್ರೈವರ್ ಸೀಟಿನಲ್ಲಿ ಕುಳಿತೆ.

ಕಾರಿನ ಒಳಗೆ ಬಂದ ನನ್ನಾಕೆ ‘ಏ.ಸಿ. ಆನ್ ಮಾಡ್ರೀ’ ಎಂದು ಆಜ್ಞಾಪಿಸಿದಳು. ನಾಲ್ಕು ಹೆಜ್ಜೆ ಹೋಗಿಲ್ಲ ಆಗಲೇ ”ರೀ..ಒಂದೇ ಸಾರಿ ಎರಡು ಲೇಖನಗಳನ್ನು ರೆಕಾರ್ಡಿಂಗ್ ಮಾಡಿಬಿಡುತ್ತಾರಂತೆ. ಮಧ್ಯೆ ಸ್ವಲ್ಪ ರೆಸ್ಟ್ ತೊಗೋಬಹುದಂತೆ. ಶ್ಯಾಮಲಾ ಕುಡಿಯಲು ನೀರು ತೆಗೆದುಕೊಂಡು ಹೋಗಿರಿ ಎಂದಿದ್ದರು. ವಾಟರ್ ಬಾಟಲ್ಗೆ ನೀರು ತುಂಬಿಸಿ ಡೈನಿಂಗ್ ಟೇಬಲ್ಮೇಲೆ ಇಟ್ಟಿದ್ದೆ” ಎಂದಳು.
ಅವಳ ಮಾತನ್ನು ತಡೆದು ”ಮಾರಾಯಿತಿ, ದಾರಿಯಲ್ಲಿ ಒಂದು ಮಿನರಲ್ ವಾಟರ್ ಬಾಟಲ್ ಕೊಡಿಸುತ್ತೇನೆ. ಮತ್ತೆ ಕೆಳಗಿಳಿಯಬೇಡ. ಮತ್ತೆ ಆ ಶ್ಯಾಮಲಾ ಭಜನೆಯನ್ನು ನಿಲ್ಲಿಸು” ಎಂದೆ.

ನನ್ನ ಪುಣ್ಯ ಆಕಾಶವಾಣಿ ತಲುಪುವವರೆಗೆ ಮತ್ತೆ ತುಟಿಬಿಚ್ಚಲಿಲ್ಲ. ತನ್ನ ಲೇಖನದಲ್ಲಿ ಮಗ್ನಳಾಗಿದ್ದಳು. ಆಕಾಶವಾಣಿ ಗೇಟಿನ ಬಳಿ ಸೆಕ್ಯೂರಿಟಿಯವನಿಗೆ ನನ್ನಾಕೆಯ ಪ್ರವರವನ್ನೆಲ್ಲ ಒದರಿ ಅಲ್ಲಿಂದ ಬಂದಿದ್ದ ಪತ್ರವನ್ನು ತೋರಿಸಿದ್ದಾಯಿತು. ಒಳಕ್ಕೆ ಹೋದೆವು. ಅಷ್ಟೊತ್ತಿಗೆ ರೆಕಾರ್ಡಿಂಗಿಗೆ ಕೊಟ್ಟಿದ್ದ ಟೈಂಗೆ ಕೇವಲ ಹತ್ತು ನಿಮಿಷ ಬಾಕಿಯಿತ್ತು. ನನ್ನ ಅರಗಿಣಿ ತನಗೆ ಬಂದಿದ್ದ ಲೆಟರ್ ಹಿಡಿದು ದಡಬಡ ಕಛೇರಿಯೊಳಕ್ಕೆ ಹೋಗುವುದಕ್ಕೂ ಒಳಗಿನಿಂದ ಒಬ್ಬ ಮಹಿಳೆ ಫೈಲ್ ಹಿಡಿದು ಹೊರಗೆ ಕಾಣಿಸಿದರು. ನಮಸ್ಕಾರಗಳ ವಿನಿಮಯ ನಡೆಯುತು. ನನ್ನವಳು ಬಂದ ವಿಷಯವನ್ನು ಹೇಳಿ ಲೆಟರ್ ತೋರುತ್ತಿದ್ದಂತೆ ”ಓ ! ಶ್ರೀಮತಿ ಲತಾ, ಬೇಗ ಬನ್ನಿ ರೆಕಾರ್ಡಿಂಗಿಗೆ ನೇರವಾಗಿ ಹೋಗಿಬೊಡೊಣ. ಫಸ್ಟ್ ಟೈಂ ಬರುತ್ತಿದ್ದೀರಲ್ಲವಾ? ಶ್ರೀಮತಿ ಶ್ಯಾಮಲಾರವರ ಕಡೆಯಿಂದ. ಇನ್ನುಸ್ವಲ್ಪ ಬೇಗನೇ ಬಂದಿದ್ದರೆ ನಿಮ್ಮಜತೆ ಡಿಸ್ಕಸ್ ಮಾಡಬಹುದಿತ್ತು. ಓ.ಕೆ. ಅಲ್ಲೇ ಹೇಳುತ್ತೇನೆ ಬನ್ನಿ” ಎಂದು ಅವಸರಿಸಿದರು. ಅಲ್ಲೇ ನಿಂತಿದ್ದ ನನ್ನ ಕಡೆ ತಿರುಗಿ ”ಸರ್, ನೀವು ಇಲ್ಲೇ ಇರಬೇಕಾಗುತ್ತೆ” ಎಂದು ನನ್ನ ಉತ್ತರವನ್ನೂ ಕಾಯದೇ ಮತ್ತೊಂದು ವಿಭಾಗಕ್ಕೆ ನನ್ನವಳೊಡನೆ ಹೋದರು.

ಒಳಗಿನ ನಿಶ್ಶಬ್ಧತೆಯನ್ನು ನೋಡಿ ಹೊರಗೆ ಒಂದು ಸುತ್ತುಹಾಕಿ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತೆ. ಮುಕ್ಕಾಲು ಗಂಟೆಯ ನಂತರ ನನ್ನ ಮಡದಿ ರೆಕಾರ್ಡಿಂಗಿಂದ ಜೊತೆಯ ಮಹಿಳೆಯೊಡನೆ ಪ್ರತ್ಯಕ್ಷಳಾದಳು. ಮುಖದಲ್ಲಿ ನಿರಾಳ ಭಾವ ಕಂಡು ನೆಮ್ಮದಿಯಾಯ್ತು. ”ಹೊರಡೊಣವೇ?” ಎಂದೆ.” ಒಂದು ನಿಮಿಷ, ಫಾರ್ಮ್ ಫಿಲಪ್ ಮಾಡಿ ಬಂದುಬಿಡುತ್ತೇನೆ” ಎಂದು ಮತ್ತೆ ಒಳಕ್ಕೆ ಹೋದಳು.
ಇನ್ನೇನು ಕೆಲಸವೆಂದು ಎದ್ದು ಕಾರಿನ ಬಳಿ ಬಂದು ನಿಂತೆ.

ಚಿತ್ರ ಕೃಪೆ : ಅಂತರ್ಜಾಲ, ಸಾಂದರ್ಭಿಕ ಚಿತ್ರ

ಸ್ವಲ್ಪ ಸಮಯದ ನಂತರ ನನ್ನ ಸತೀ ಶಿರೋಮಣಿಯ ಆಗಮನವಾಯಿತು. ರೆಕಾರ್ಡಿಂಗೆಲ್ಲ ಫಸ್ಟ್‌ಕ್ಲಾಸಾಗಿ ಆಯ್ತು ”ರೀ. ಮೇಡಂ ಅಂತೂ ಹೊಗಳಿಬಿಟ್ಟರು. ಮೊದಲನೆಯ ಸಾರಿ ಬಂದು ಅದ್ಭುತವಾಗಿ ನಿಭಾಯಿಸಿದ್ದೀರಿ. ನಿಮ್ಮ ವಾಯ್ಸ್ ಅಂತೂ ರೆಕಾರ್ಡಿಂಗಿಗೆ ಹೇಳಿ ಮಾಡಿಸಿದಂತಿದೆ ಎಂದರು. ರಿಲೇ ಯಾವಾಗಾಂತ ಫೋನ್ ಮಾಡಿ ಹೇಳ್ತಾರಂತೆ” ಎಂದಳು.
”ಹೋಗಲಿ ಬಿಡು, ನಿನ್ನ ಹದಿನೈದು ದಿನಗಳ ಶ್ರಮ ಸಾರ್ಥಕವಾಯಿತಲ್ಲ. ಹೋಗೋಣವೇ?” ಎಂದೆ.
”ರೀ, ನೀವೇನೂ ತಪ್ಪು ತಿಳಕೊಳ್ಳೋಲ್ಲ ಅಂದರೆ ಒಂದು ರಿಕ್ವೆಸ್ಟ್ ”ಎಂದಳು.
”ಏನು ಹೇಳು?”
”ಮತ್ತೆ ಮತ್ತೇ ಆಕಾಶವಾಣಿಯ ಕಟ್ಟಡದ ಮುಂದಿನ ಮೆಟ್ಟಿಲಮೇಲೆ ನಿಂತುಕೊಳ್ತೀನಿ. ಒಂದು ಫೋಟೋ ತೆಗೀತೀರಾ?”
”ಅಲ್ಲವೇ ಕ್ಯಾಮರಾ ತಂದಿಲ್ಲ. ಮೊಬೈಲನ್ನು ಚಾರ್ಜಿಗೆ ಹಾಕಿದ್ದೆ. ಅದನ್ನೂ ತರಲಿಲ್ಲ”.
”ನಾನು ತಂದಿದ್ದೀನ್ರೀ, ರೆಕಾರ್ಡಿಂಗ್ ರೂಮಿನಲ್ಲಿದ್ದಾಗ ಸೈಲೆಂಟು ಮೋಡಿನಲ್ಲಿಟ್ಟಿದ್ದೆ. ಈಗ ಸರಿ ಮಾಡಿದ್ದೀನಿ. ಪ್ಲೀಸ್ ತೆಗೀರೀ. ಶ್ಯಾಮಲಾ ಹೇಳಿದ್ರು ಫಸ್ಟ್ ಟೈಂ ಹೋಗ್ತ್ತಿದ್ದೀರಾ. ನೆನಪಿರುವಂತೆ ಒಂದು ಫೋಟೋ ತೆಗೆಸಿಕೊಂಡು ಬನ್ನಿ ಅಂತ” ಎಂದಳು.
”ಓಹೋ ! ನನ್ನವಳ ಸಿಂಗಾರವೆಲ್ಲ ಏಕೆಂದು ಈಗ ಅರ್ಥವಾಯಿತು. ಅಂತೂ ಬುದ್ಧೂ ನಾನಾದೆ”. ಆದರೂ ನನ್ನವಳ ಆಕಾಶವಾಣಿ ಅರಂಗೇಟ್ರಂ ಕಲರ್‍ಫುಲ್ ಫೊಟೋದಲ್ಲಿ ನೆನಪಿರುವಂತೆ ಮೂಡಿತು.

-ಬಿ.ಆರ್.ನಾಗರತ್ನ

15 Responses

  1. ನಯನ ಬಜಕೂಡ್ಲು says:

    Nice

  2. Padma Anand says:

    ಚಂದದ ಕಥೆ. ಸುಂದರ ಪರಿಕಲ್ಪನೆ

  3. ಸೊಗಸಾಗಿದೆ

  4. Vathsala says:

    ಲೈಕ್ಸ್, ಕಾಮೆಂಟ್ಸ್, ವೈರಲ್ ಅನ್ನೋ ಈಗಿನ ಅಂತರ್ಜಾಲ
    ಯುಗದಲ್ಲಿ ಈ ತೆರನ ಅನುಭವ ತುಂಬಾ ಮಜಾ
    ಕೊಟ್ಟಿತು.

  5. padmini says:

    Nice

  6. ನಾಗರತ್ನ ಬಿ. ಅರ್. says:

    ನನ್ನ ಲೇಖನ ಮೆಚ್ಚಿ ಪ್ರತಿಕ್ರಿಯೆ ನೀಡಿರುವ ಎಲ್ಲಾ ಸಾಹಿತ್ಯ ಸಹೃದಯರಿಗೆ ಹೃತ್ಪೂರ್ವಕ ಧನ್ಯವಾದಗಳು.

  7. ಶಂಕರಿ ಶರ್ಮ says:

    ಬಹಳ ಚೆನ್ನಾಗಿದೆ ಮೇಡಂ ಕಥಾನಿರೂಪಣೆ. ನಾವು ಅಷ್ಟಲಕ್ಷ್ಮಿಯರು ಮಂಗಳೂರು ಆಕಾಶವಾಣಿಯಲ್ಲಿ ನಾಟಕ ರೆಕಾರ್ಡಿಂಗ್ ಗೆ ಮೊದಲನೇ ಬಾರಿ ಹೋದುದು ನೆನಪಾಗಿ ನಗು ಬಂತು

  8. ನಾಗರತ್ನ ಬಿ. ಅರ್. says:

    ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ ಶಂಕರಿಶರ್ಮ ಮೇಡಂಗೆ ಧನ್ಯವಾದಗಳು

  9. ನವಿರಾದ ಹಾಸ್ಯ ಭರಿತ ಚಂದದ ಲೇಖನ ವಂದನೆಗಳು

  10. ಧನ್ಯವಾದಗಳು ಗಾಯತ್ರಿ ಮೇಡಂ

  11. ವಿದ್ಯಾ says:

    ಕತೆಯ ಕೊನೆ ಕೂಡ ಶ್ಯಾಮಲಾಳ ಜಪದೊಂದಿಗೆ ಮುಕ್ತಾಯ ವಾಗಿ ನಗು ತರಸಿತು,,,

  12. ಶಂಕರಿ ಶರ್ಮ says:

    ಆಕಾಶವಾಣಿ ಅರಂಗೇಟ್ರಂ ಹಾಸ್ಯಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  13. Padmini Hegde says:

    ಸೊಗಸಾಗಿದೆ

  14. ನಾಗರತ್ನ ಬಿ. ಆರ್ says:

    ಧನ್ಯವಾದಗಳು ವಿದ್ಯಾ

  15. ಧನ್ಯವಾದಗಳು ವಿದ್ಯಾ

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: