ಕಿರು ಕಾದಂಬರಿ: ಭಾವ ಸಂಬಂಧ- ಎಳೆ 10
(ಒಟ್ಟು 10 ಕಂತುಗಳಲ್ಲಿ ಹರಿದು ಬಂದ ‘ಭಾವಸಂಬಂಧ’ ಕಿರುಕಾದಂಬರಿಯು ಇಂದಿಗೆ ಕೊನೆಯಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಸದಭಿರುಚಿಯ, ಸೊಗಸಾದ, ಸುಲಲಿತವಾಗಿ ಓದಿಸಿಕೊಂಡು ಹೋದ ಕಿರುಕಾದಂಬರಿಯನ್ನು ಓದುಗರಿಗೆ ಕೊಟ್ಟ ಶ್ರೀಮತಿ ಪದ್ಮಾ ಆನಂದ್ ಅವರಿಗೆ ಧನ್ಯವಾದಗಳು. . ಸಂ: ಹೇಮಮಾಲಾ)
ಕಾಫಿ ಕುಡಿದು ಮುಗಿಸಿ, ಎದ್ದು ಬಂದು ಅವರ ಕಾಲಬಳಿ ಕುಳಿತು ತೊಡೆಯ ಮೇಲೆ ತಲೆಯಿಟ್ಟು ಅವರ ಕೈಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಇಟ್ಟುಕೊಂಡಳು.
ಎಂಥಹಾ ಸತ್ವಯುತ ಬದುಕು ಬಾಳಿದ್ದೀರೀ ಸೀತಕ್ಕಾ ನೀವು. ನನ್ನ ಅಮ್ಮ ರಾಜಮ್ಮನವರೇ ನನಗಾಗಿ ನಿಮ್ಮನ್ನು ನನ್ನೆಡೆಗೆ ಕಳುಹಿಸಿದ್ದಾರೆ. ನಮ್ಮ ಬಾಂಧವ್ಯಕ್ಕೆ ಯಾವ ಹೆಸರೂ ಬೇಡ. ನಾನಂತೂ ಎಂಥಹ ಅದೃಷ್ಟವಂತೆ. ರಕ್ತ ಸಂಭಂದದ ಯಾವ ತೀವ್ರತೆಯನ್ನೂ ಅನುಭವಿಸದಿದ್ದರೂ ನನಗೆ ಜೀವನದಲ್ಲಿ ಸಿಕ್ಕ, ಪ್ರೀತಿ, ಅಭಿಮಾನ, ಅಂತಃಕರಣಗಳಿಗೆ ಬೆಲೆಯೇ ಕಟ್ಟಲಾಗದು. ನಮ್ಮದು ರಕ್ತ ಸಂಬಂದವಲ್ಲದಿದ್ದರೇನು, ಇದು ಭಾವ ಸಂಬಂಧ. ಇನ್ನು ಮುಂದೆ ನಿಮಗೆ ನಾನು, ನನಗೆ ನೀವು, ರೋಗಿಗಳಿಗೆ ನಮ್ಮ ಸೇವೆ ಹೀಗೆ ಅವ್ಯಾಹತವಾಗಿ ನಡೆಯಲಿ. ಅದರಲ್ಲೇ ನಾವು ಸಾರ್ಥಕತೆ ಕಂಡುಕೊಳ್ಳೋಣ, ಏನಂತೀರಿ ಸೀತಕ್ಕಾ – ಎನ್ನಲು,
ಹೌದು ಸರಸು, ನನಗೂ ಸತೀಶರೇ ನನಗಾಗಿ ನಿನ್ನನ್ನು ಪರಿಚಯಿಸಿ ಹೋಗಿದ್ದಾರೆ ಅನ್ನಿಸುತ್ತದೆ. ಈಗ ನನ್ನ ಮುಂದಿನ ಗುರಿ ಅಂದರೆ, “ನನ್ನ ಕಣ್ಣ ಮುಂದೆಯೇ ಈ ಕರೋನಾ ಮಾರಿಯನ್ನು ಹೊಡೆದೋಡಿಸಬೇಕು, ಆದಷ್ಟು ಬೇಗ ಲಸಿಕೆ ಕಂಡು ಹಿಡಿಯಬೇಕು. ಜನರು ಲಸಿಕೆ ಪಡೆದು ಹಿಂದಿನಂತೆ ನಿರ್ಭಿತರಾಗಿ, ಸುಖ ಸಂತೋಷದಿಂದ ಓಡಾಡಿಕೊಂಡಿರಬೇಕು, ಎನ್ನುವುದು. ಕಡೆಯ ಪಕ್ಷ ಅಕಸ್ಮಾತ್ ನನ್ನ ಜೀವಿತಾವಧಿಯಲ್ಲಿ ಇದು ನಡೆಯದಿದ್ದರೂ ನಿನ್ನ ಜೀವಿತಾವಧಿಯಾಲ್ಲಾದರೂ ನಡೆಯಬೇಕು. ನಾನು ಮರಣಿಸಿದ್ದರೂ ನಿನ್ನ ಚಕ್ಷುಗಳ ಮೂಲಕ ಆ ದಿನಗಳನ್ನು ನೋಡಲು ಇಷ್ಟಪಡುತ್ತೇನೆ “ ಎಂದರು.
ಖಂಡಿತಾ ಸೀತಕ್ಕ. ಈಗ ವಿಜ್ಞಾನ ತುಂಬಾ ಮುಂದುವರೆದಿದೆ. ಪ್ರಪಂಚದಾದ್ಯಂತ ವಿಜ್ಞಾನಿಗಳು ಹಗಲಿರುಳೆನ್ನದೆ ಅದೇ ಕಾರ್ಯದಲ್ಲಿ ತೊಡಗಿದ್ದಾರೆ. ಆದಷ್ಟು ಬೇಗ ಸಾಧಿಸುತ್ತಾರೆ. ನಾವಿಬ್ಬರೂ ಒಟ್ಟಿಗೇ ಅದನ್ನು ನೋಡಿ ಸುಖಿಸೋಣ – ಎಂದಳು ಸರಸ್ವತಿ.
ಒಂದರ್ಧ ಗಂಟೆ ಅಡ್ಡಾಗೋಣ ಬಾ. ನಂತರ ಎದ್ದು ತಯ್ಯಾರಾಗಿ ಹೊಟ್ಟೆಗಿಷ್ಟು ಹಾಕಿಕೊಂಡು ಆಸ್ಪತ್ರೆಗೆ ಹೋಗಲು ಸರಿಹೋಗುತ್ತದೆ, – ಎನ್ನುತ್ತಾ ರೂಮಿನೆಡೆಗೆ ನಡೆದರು. ಸರಸ್ವತಿಯೂ ಹಿಂಬಾಲಿಸಿದಳು.
ಅಷ್ಟೊಂದು ಮಾತನಾಡಿದ್ದರ ಆಯಾಸದಿಂದಲೋ, ಇಡೀ ಜೀವನಾಗಾಥೆಯ ಭಾವನೆಗಳನ್ನು ಕೆದಕಿದಂತಾಗಿ, ಕೆಣಕಿದಂತಾಗಿದ್ದರಿಂದಲೋ, ಎಲ್ಲವನ್ನೂ ಆತ್ಮೀಯರೊಬ್ಬರ ಬಳಿ ಹೇಳಿಕೊಂಡಿದ್ದ ನೆಮ್ಮದಿಯಿಂದಲೋ, ಮಲಗಿದ ತಕ್ಷಣ ಒಳ್ಳೆಯ ನಿದ್ರೆಗೆ ಜಾರಿದರು ಸೀತಕ್ಕ.
ಸರಸ್ವತಿ ಎದ್ದು ಹೊರಬಂದು ಆಸ್ಪತ್ರೆಗೆ ಫೋನಾಯಿಸಿ ಇಂದು ತಾವಿಬ್ಬರೂ ಡ್ಯೂಟಿಗೆ ರಜ ತೆಗೆದುಕೊಳ್ಳಲು ಸಾಧ್ಯವಿದೆಯೇ ಎಂದು ಪರಿಶೀಲಿಸಿ, ಅಗತ್ಯ ವ್ಯವಸ್ಥೆಯನ್ನು ಮಾಡಿ, ಬೇರೊಬ್ಬ ತನ್ನ ನಂಬುಗೆಯ ದಾದಿಯೊಬ್ಬರನ್ನು ಪರಿಸ್ಥಿತಿ ನಿಭಾಯಿಸುವಂತೆ ವಿನಂತಿಸಿದಳು. ಅವರೂ ಒಪ್ಪಿಕೊಂಡಿದ್ದರಿಂದ ತಾನೂ ಆರಾಮವಾಗಿ ಕಣ್ಮುಚ್ಚಿದಳು.
ಅರ್ಧ ಗಂಟೆ ಎಂದು ಮಲಗಿದ ಇಬ್ಬರೂ ಪೂರ್ತಿ ಎರಡು ಗಂಟೆಗಳಷ್ಟು ನಿದ್ರೆಯನ್ನು ಮಾಡಿ ಎದ್ದರು. ಗಡಿಯಾರದ ಕಡೆ ನೋಡಿದ ಸೀತಕ್ಕ ಗಾಭರಿಯಾದರು – ಇದೇನು ಸರಸೂ, ಎಬ್ಬಿಸಬಾರದಿತ್ತೇ? ನೀನು ಅಲಾರಾಂ ಇಟ್ಟುಕೊಂಡು ಎಬ್ಬಿಸುತ್ತೀಯಾ ಎಂದು ನಾನು ಎಚ್ಚರವಿಲ್ಲದಂತೆ ಮಲಗಿಬಿಟ್ಟೆ. ಯಾಕೋ ಸತೀಶರನ್ನು ಕಳೆದುಕೊಂಡ ದಿನದಿಂದ ಹೆಪ್ಪುಗಟ್ಟಿದ್ದ ದುಃಖವೆಲ್ಲಾ ಕರಗಿ ನೀರಾಗಿ ಹರಿದಂತಾಯಿತು, ಒಳ್ಳೆ ನಿದ್ರೆ ಬಂದು ಬಿಟ್ಟಿತು.
ಇರಲಿ ಸೀತಕ್ಕ. ನಾನು ಬದಲೀ ವ್ಯವಸ್ಥೆ ಮಾಡಿದ್ದೇನೆ. ಇಂದು ಇಬ್ಬರಿಗೂ ರಜಾ ತೆಗೆದುಕೊಳ್ಳಲು ಅನುಮತಿ ಸಿಕ್ಕಿದೆ. ಚಿಂತಿಸಬೇಡಿ. ಇರೀ ಕಾಫಿ ಮಾಡಿ ತರುತ್ತೇನೆ ಎನ್ನುತ್ತಾ ಎದ್ದಳು. ಕಾಫಿ ಕುಡಿದ ನಂತರ ಸರಸ್ವತಿ, –
ಸೀತಕ್ಕಾ ಇಂದು ನಾವೇ ರೇಖಾ ಅವರಿಗೆ ಫೋನ್ ಮಾಡೋಣ. ಸತೀಶರು ಕಾಲವಾದಂದಿನಿಂದ ನೀವು ಅವರೊಂದಿಗೆ ಸರಿಯಾಗಿ ಮಾತೇ ಆಡಿಲ್ಲ. ನಿಮ್ಮ ಪರಿಸ್ಥಿತಿಯು ಅರ್ಥವಾಗುತ್ತದೆ. ನನ್ನನ್ನು ರೇಖಾ ಅವರಿಗೆ ಪರಿಚಯ ಮಾಡಿಕೊಡುವುದಿಲ್ಲವೆ? – ಎನ್ನಲು,
ಅಯ್ಯೋ ನಾನಾಗೇ ಎಂದೂ ಫೋನ್ ಮಾಡಿಲ್ಲ, ಆ ಡೈರಿಯಲ್ಲಿ ಅವಳ ನಂಬರ್ ಇದೆ. ಅದೂ ಸರಿ, ನಿನ್ನನ್ನು ಅವಳಿಗೆ ಪರಿಚಯಿಸಿಯೇ ಇಲ್ಲ. ಇಂದು ಆ ಕೆಲಸವಾಗಲಿ – ಎಂದರು.
ಸರಸ್ವತಿ, ಸಮಯ ನೋಡಿದಳು. ಈಗ ಇಲ್ಲಿ ಶನಿವಾರ ರಾತ್ರಿ ಒಂಬತ್ತು ಗಂಟೆ. ಅಂದರೆ ಅವರಿಗೆ ಶನಿವಾರ ಬೆಳಗಿನ ಎಂಟು ಗಂಟೆ. ಸಮಯ ಸರಿಯಾಗಿದೆ ಎಂದು ಕೊಳ್ಳುತ್ತಾ, ಸೀತಕ್ಕನಿಂದ ನಂಬರ್ ಪಡೆದು, “ಸೀತಕ್ಕ ನಿಮ್ಮೊಂದಿಗೆ ಮಾತನಾಡ ಬಯಸುತ್ತಾರೆ, ಅವರು ಈಗ ಈ ನಂಬರಿನಲ್ಲಿ ಲಭ್ಯವಿದ್ದಾರೆ, ಈ ನಂಬರ್ ನಿಂದ ಕಾಲ್ ಮಾಡಲೇ, ಎಷ್ಟು ಗಂಟೆಗೆ ಮಾಡಲಿ” – ಎಂದು ಮೆಸೇಜ್ ಕಳುಹಿಸಿದಳು.
ಮೆಸೇಜ್ ಕಳುಹಿಸಿ ಅರೆಕ್ಷಣವೂ ಆಗಿಲ್ಲ, ಅತ್ತಲಿಂದ ಫೋನ್ ಬಂದಿತು. ಫೋನ್ ರಿಸೀವ್ ಮಾಡಿದ ಸರಸ್ವತಿ, – ರೇಖಾ ಅವರೆ, ನಾನು ಸರಸ್ವತಿ ಅಂತ. ಸೀತಮ್ಮನವರು ಈಗ ನನ್ನೊಂದಿಗೆ ಇದ್ದಾರೆ. ಈಗ ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ. ನೀವು ಅವರ ಬಗ್ಗೆ ಚಿಂತಿಸಬೇಡಿ. ಆರೋಗ್ಯವಾಗಿದ್ದಾರೆ. ಮಹತ್ತರವಾದ ಜನಸೇವೆ ಮಾಡುತ್ತಾ “ಕರೋನಾ ವಾರಿಯರ್” ಆಗಿ ಎಲ್ಲರ ಅಚ್ಚು ಮೆಚ್ಚಿನವರಾಗಿದ್ದಾರೆ, ನೀವು ಅವರ ಬಗ್ಗೆ ಹೆಮ್ಮೆ ಪಡಬೇಕು, ಈಗ ಅವರಿಗೆ ಕೊಡುತ್ತೀನಿ, ಮಾತನಾಡಿ .. . . . ., ಆ ಕಡೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಗೊತ್ತಾಗುತ್ತಿತ್ತು. – ಅಳಬೇಡಿ ಮಾತಾಡಿ, ಎನ್ನುತ್ತಾ ಸೀತಕ್ಕನ ಕೈಗೆ ಕೊಟ್ಟಳು.
ಸೀತಕ್ಕ ಸ್ವಲ್ಪವೂ ಭಾವೋದ್ವೇಗಕ್ಕೆ ಒಳಗಾಗದೆ, ಎಳೆಯ ಮಗುವನ್ನು ಸಮಾಧಾನಿಸುವಂತೆ ಸಮಾಧಾನಿಸುತ್ತಾ – ಅಳಬೇಡ ರೇಖಾ, ನಾನೀಗ, ನೀನು ಮಾತನಾಡಿದೆಯಲ್ಲಾ ಸರಸ್ವತಿ, ಅವರ ಜೊತೆಗೇ ಇದ್ದೇನೆ. ನನ್ನ ಬಗ್ಗೆ ಚಿಂತಿಸಬೇಡ. ನಿನ್ನ ಸಂಸಾರ, ಆರೋಗ್ಯ, ಕೆಲಸದ ಕಡೆ ಗಮನ ಕೊಡು. ಈ ನಂಬರಿಗೆ ನಿನಗೆ ಸಮಯವಾದಾಗ ಫೋನ್ ಮಾಡು, ಮಾತನಾಡೋಣ – ಎಂದರು. ಅತ್ತಲಿಂದ ರೇಖಾ ಬಿಕ್ಕುತ್ತಲೇ – ಆಯಿತು ಅಮ್ಮಾ, ನಿನಗೆ ನನ್ನ ಮೇಲೆ ಕೋಪವಿಲ್ಲವಾ, ನಾನು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ಹಾಗೇ ಅಪ್ಪ ಹೊರಟೇ ಹೋದರು. ನಿಮಗೆ ವಯಸ್ಸಾಗಿದೆ, ನಾನು ನೋಡಿಕೊಳ್ಳಬೇಕಾದ ಸಮಯವಾಗಿದೆ ಎಂಬ ಅರಿವೇ ನನಗೆ ಬರಲಿಲ್ಲ. ನಾನು ಬರೀ ನನ್ನ ಗಂಡ, ಮಗು, ಕೆಲಸ ಅಂತ ಸ್ವಾರ್ಥಿಯಾಗಿಬಿಟ್ಟೆ. . . . . . ʼಏ ಸಾಕು ನಿಲ್ಲಿಸು, ಎಂದಿದ್ದರೂ ನೀನು ನಮ್ಮ ಪೀತಿಯ ಮಗಳು. ನೀನು ಏನೂ ತಪ್ಪು ಮಾಡಿಲ್ಲ. ಗಂಡ, ಮಗು, ಕೆಲಸದ ಕಡೆ ಗಮನ ಕೊಡುವುದು ಸ್ವಾರ್ಥವಲ್ಲ, ಕರ್ತವ್ಯ. ಏನೋ ಇದೊಂದು ರೋಗ ಬರಲಾಗಿ ನಿನ್ನ ಅಪ್ಪನನ್ನು ಕಳೆದುಕೊಳ್ಳ ಬೇಕಾಯಿತು. ಇಲ್ಲದಿದ್ದರೆ ನಾವಿಬ್ಬರೂ ಆರಾಮವಾಗಿಯೇ ಇದ್ದೆವು. ನನ್ನನ್ನು ಈ ಸರಸ್ವತಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಚಿಂತಿಸಬೇಡ ಕಂದಾ, ಈಗ ಫೋನ್ ಇಡಲೇ ಎನ್ನಲು, ರೇಖಾ, – ಒಮ್ಮೆ ಸರಸ್ವತಿಯವರಿಗೆ ಫೋನ್ ಕೊಡಮ್ಮಾ, ನೀನು ಜೋಪಾನ, ಹುಷಾರಾಗಿ ಇರಮ್ಮಾ, – ಎಂದಳು. ಸರಿ, ಎನ್ನುತ್ತಾ ಸರಸ್ವತಿಗೆ ಫೋನ್ ಕೊಟ್ಟರು.
ರೇಖಾ, – ಸರಸ್ವತಿಯವರೆ, ನಿಮಗೆ ಹೇಗೆ ಕೃತಜ್ಞತೆ ಹೇಳುವುದೋ ತಿಳಿಯುತ್ತಿಲ್ಲ, ನಿಮ್ಮ ಹತ್ತಿರ ನಾನು ತುಂಬಾ ಮಾತನಾಡ ಬೇಕು, ನಾಳೆ ಕಾಲ್ ಮಾಡಲೇ – ಎನ್ನಲು, ನನಗೆ ಅರ್ಥವಾಗಿತ್ತದೆ ರೇಖಾ, ನಮ್ಮವರು ನೋವನ್ನು ಅನುಭವಿಸುತ್ತಿದ್ದಾಗ, ನಾವು ದೂರದಲ್ಲಿ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿಇದ್ದಾಗ ಆಗುವ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನನಗೂ ನಿಮ್ಮೊಂದಿಗೆ ತುಂಬಾ ಮಾತನಾಡ ಬೇಕಿದೆ. ನಾಳೆ ನನ್ನ ಡ್ಯೂಟಿಯ ವೇಳಾಪಟ್ಟಿ ಬಂದ ನಂತರ ನಿಮಗೆ ತಿಳಿಸುತ್ತೇನೆ, ಕಾಲ್ ಮಾಡಿ ಮಾತನಾಡೋಣ, ಎಂದು ಫೋನ್ ಇಟ್ಟಳು.
ನಾಲ್ಕಾರು ಸಲ ಇಬ್ಬರೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡಿ ಆತ್ಮೀಯರಾಗಿಬಿಟ್ಟರು. ರೇಖಳ ಪರಿಸ್ಥಿತಿಯ ಅರಿವು ಸರಸ್ವತಿಗಾಗಿಬಿಟ್ಟಿತು. ತಾನು ಬಾಳ ಸಂಗಾತಿಯನ್ನು ಆರಿಸುವಲ್ಲಿ ಎಡವಿದ್ದನ್ನು ಸರಸ್ವತಿಯ ಬಳಿ ಹಂಚಿಕೊಂಡಳು. ವಿದ್ಯೆಯಲ್ಲಿ ಉದ್ಯೋಗದಲ್ಲಿ ಅತ್ಯಂತ್ಯ ಯಶಸ್ವಿ ಎನ್ನಿಸಿಕೊಂಡ ತಾನು ಭಾವವನ್ನರಿಯುವಲ್ಲಿ ತಪ್ಪು ಮಾಡಿದ್ದನ್ನು ಒಪ್ಪಿಕೊಂಡಳು. ಆದರೂ ತನ್ನಪ್ಪ, ಅಮ್ಮ ನೀಡಿದ್ದ ಸಂಸ್ಕಾರದಿಂದಾಗಿ ಅದರಿಂದ ಕಳಚಿಕೊಳ್ಳುವ ಬಗ್ಗೆ ಯೋಚಿಸದೆ ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಭರಾಟೆಯಲ್ಲಿ, ತಮ್ಮ ನೋವು ಸಂಕಟಗಳನ್ನು ತಮ್ಮಲ್ಲೇ ಹುದುಗಿಸಿಕೊಂಡು ಇನ್ನೊಬ್ಬರಿಗೆ ಬರೀ ಸುಖ, ಸಂತೋಷಗಳನ್ನೇ ಹಂಚಬಯಸುವ ತನ್ನ ತಂದೆ ತಾಯಿಗಳ ವಿಷಯದಲ್ಲಿ ತಪ್ಪು ಮಾಡಿಬಿಟ್ಟೆ ಎಂದು ನೊಂದುಕೊಂಡಳು.
ರೇಖಳಿಗೆ, ಸರಸ್ವತಿ ತನ್ನಮ್ಮನನ್ನು ನೋಡಿಕೊಳ್ಳುತ್ತಿರುವ ದೇವತೆ ಅನ್ನಿಸಿದರೆ, ಸರಸ್ವತಿಗೆ ರೇಖಾ, ತನ್ನ ಪ್ರೀತಿಯ ಸೀತಕ್ಕನ ಮಗಳು.
ಈ ಕರೋನಾ ಗಲಾಟೆ ಸ್ವಲ್ಪ ತಹಬದಿಗೆ ಬಂದ ಕೂಡಲೇ ಅಮ್ಮನನ್ನು ಕಾಣಲು ತಾನು ಓಡೋಡಿ ಬರುವೆನೆಂದು – ರೇಖಾ ಹೇಳಿದರೆ, – ನೀ ಬರುವವರೆಗೂ, ನೀ ಬಂದ ನಂತರವೂ ಸೀತಕ್ಕನನ್ನು ನನ್ನ ಕಣ್ಣ ರೆಪ್ಪೆಯ ಕೂದಲಿನಂತೆ ಕಾಪಿಡುತ್ತೇನೆ, – ಎಂದು ಸರಸ್ವತಿ ಹೇಳುತ್ತಿದ್ದಳು.
ಕೆಲವೊಮ್ಮೆ ಇವರಿಬ್ಬರ ಮಾತುಗಳನ್ನು ಕೇಳುತ್ತಿದ್ದ ಸೀತಕ್ಕಳಿಗೆ, ಈ ಮುಂಚೆ ಎಲ್ಲರೂ ಕೇಳುತ್ತಿದ್ದ ನಿಮ್ಮ ಮಕ್ಕಳಲ್ಲಿ ನಿಮಗೆ ಯಾರು ಇಷ್ಟ ಎನ್ನುವ ಉತ್ತರವಿಲ್ಲದ ಪ್ರಶ್ನೆಯಂತೆ, ಈಗ ತನಗೂ ರಕ್ತ ಸಂಭಂದ ಹೆಚ್ಚೋ, ಮನಸಾರೆ ಅಂಟಿಕೊಂಡು ನಂಟಾದ, ಭಾವ ಸಂಬಂಧ ಹೆಚ್ಚೋ ಎನ್ನುವುದು ಉತ್ತರವಿಲ್ಲದ ಪ್ರಶ್ನೆ ಅನ್ನಿಸಹತ್ತಿತು.
ಬಾಳನೌಕೆ ಅಬ್ಬರವಿಲ್ಲದ ಶಾಂತ ತರಂಗಗಳ ಮೇಲೆ ನಿಧಾನವಾಗಿ ನಿಖರವಾದ ಗುರಿಯೆಡೆಗೆ ಸಾಗಹತ್ತಿತು.
(ಮುಗಿಯಿತು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32911
–-ಪದ್ಮಾ ಆನಂದ್, ಮೈಸೂರು
ತುಂಬಾ ಸೊಗಸಾದ ಕಾದಂಬರಿ. ಇಂದಿನ ಪರಿಸ್ಥಿತಿಯ ಪರಿಚಯದೊಂದಿಗೆ ಬಹಳ ಚೆನ್ನಾಗಿ ಮೂಡಿ ಬಂತು. ಇಲ್ಲಿ ಒಂದು ಮಾತು ಮನಸ್ಸಿಗೆ ಬರುತ್ತದೆ ಪ್ರತಿಯೊಬ್ಬರ ಪ್ರತಿಯೊಂದು ನಡವಳಿಕೆಯ ಹಿಂದೆ ಅವರು ಎದುರಿಸಬೇಕಾಗಿ ಬರುವ ಪರಿಸ್ಥಿತಿಯ ಪಾಲೂ ಇರುತ್ತದೆ.
ಕಾದಂಬರಿಯ ಪ್ರಸಾರದುದ್ದಕ್ಕೂ ನೀವು ನೀಡಿದ ಪ್ರೋತ್ಸಾಹಕ್ಕೆ ಮನಃಪೂರ್ವಕ ಧನ್ಯವಾದಗಳು
ಭಾವ ಸಂಬಂಧ ಎಂಬ ಹೆಸರು ಕಾದಂಬರಿಗೆ ಸೂಕ್ತವಾಗಿದೆ
ಮೆಚ್ಚುಗೆಗಾಗಿ ಧನ್ಯವಾದಗಳು.
ತುಂಬಾ ಚೆನ್ನಾಗಿ ಮೂಡಿ ಬಂದ ಕಾದಂಬರಿ ಮತ್ತು ಮುದ ನೀಡಿತು
ಮೆಚ್ಚುಗೆಗಾಗಿ ಧನ್ಯವಾದಗಳು
ಭಾವ ಸಂಗಮದ ಸಕಾರಾತ್ಮಕ ಕತೆ…
ಇಂತಹವರನ್ನು ಕಾಣುವುದು ತುಂಬಾ ಕಷ್ಟ…
ಒಳ್ಳೆಯ ಮುಕ್ತಾಯ… ಇಷ್ಟ ಆಯ್ತು
ಧನ್ಯವಾದಗಳು. ಓದುಗರಿಗೆ ಇಷ್ಟವಾದರೆ ಕಾದಂಬರಿ ಗೆದ್ದಂತೆ.
ಭಾವಸಂಗಮದ ಸಾಂಸಾರಿಕ ಕತೆ ಇಷ್ಟ ಆಯ್ತು.. ಇಂತಹವರನ್ನು ಕಾಣುವುದು ಕಷ್ಟ… ಸಕಾರಾತ್ಮಕ ಅಂತ್ಯ..
ಅಭಿನಂದನೆಗಳು
ತಮಗೆ ಮೆಚ್ಚುಗೆಯಾದದ್ದು ಕಾದಂಬರಿಯನ್ನು ಬರೆದ ನನಗೆ ಸಂತೋಷವನ್ನು ತಂದಿತು. ಧನ್ಯವಾದಗಳು.
ಮಾನವೀಯ ಮೌಲ್ಯಗಳುಳ್ಳ ಸೊಗಸಾದ ಕಾದಂಬರಿ. ಸುಲಲಿತವಾಗಿ ಓದಿಸಿಕೊಂಡು ಹೋಯಿತು. ಧನ್ಯವಾದಗಳು
ಮೆಚ್ಚಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು
ರಕ್ತಸಂಬಂಧದಿಂದಲೂ ಭಾವ ಸಂಬಂಧ ಹಿರಿದಾದುದು. ಹಾಗೆಯೇ ಪ್ರಸ್ತುತ ಕೊರೋನಾ ವಿಷಯವೂ ಬಿಂಬಿತವಾಗಿ,ಸಕಾರಾತ್ಮಕ ವಿಷಯದ ಕಾದಂಬರಿ. ಮೆಚ್ಚುಗೆಯಾಯ್ತು.
ತಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು
ಲಲಿತ ಎಸ್. ಭಾವಸಂಬಂಧ ಇಂದಿನ ದಿನಗಳಲ್ಲಿ ಖಿನ್ನತೆಯನ್ನು ದೂರವಾಗಿಸಲು ಅಗತ್ಯವಾಗಿದ್ದು ಕಥೆ ಓದುಗರ ಚಿಂತನೆಗಳಿಗೆ ಹೊಸ ದಿಕ್ಕನ್ನು ಸೂಚಿಸುವಂತಿದೆ.
ಮೆಚ್ಚುಗೆಗಾಗಿ ಧನ್ಯವಾದಗಳು.
ಈಗ ಸಮಾಜದಲ್ಲಿ ತುರ್ತಾಗಿ ಬೇಕಾಗುವ ಮಾನವೀಯತೆಯನ್ನು ಕಥೆಯಲ್ಲಿ ಎತ್ತಿ ಹಿಡಿದ ಪರಿ ಬಹಳ ಹಿಡಿಸಿತು. ಉತ್ತಮ ಧಾರಾವಾಹಿಯನ್ನು ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ.
ತಮ್ಮ ಸಹೃದಯ ಮೆಚ್ಚುಗೆ ಮನಸ್ಸಿಗೆ ತೃಪ್ತಿ ಉಂಟುಮಾಡಿತು
ಅದ್ಭುತ ಕಥಾಹಂದರ
ಮೆಚ್ಚುಗೆಗಾಗಿ ಧನ್ಯವಾದಗಳು
ಸಂಬಂಧ ಎನ್ನುವುದೇ ಒಂದು ಭಾವ. ಯಾವುದೇ ಸಂಬಂಧ ಭಾವಿಸದಿದ್ದರೆ ಅರ್ಥರಹಿತ. ತಂದೆ ತಾಯಿಯರ ವಂಶವಾಹಿನಿಗಳನ್ನು ಪಡೆದ ಮಕ್ಕಳು ರಕ್ತಸಂಬಂಧಿಗಳು ಎನ್ನಬಹುದು. ಮಕ್ಕಳು ಅವರವರ ಬದುಕನ್ನು ಕಟ್ಟಿಕೊಳ್ಳಲೇ ಬೇಕು, ತಂದೆ ತಾಯಿಯರಿಗೆ ಹೊರೆಯಾಗಬಾರದು. ಅವರು ಅನಿವಾರ್ಯವಾಗಿ ಅಥವಾ ವೃತ್ತಿನಿರ್ವಹಣೆಗಾಗಿ ಎಂದು ಬೇರೆ ರಾಜ್ಯಕ್ಕೆ ಅಥವಾ ವಿದೇಶಕ್ಕೆ ಹೋಗಿ ಅಲ್ಲಿಯೇ ಜಾಬ್ ಸಾಟಿಸ್ ಫಾಕ್ಷನ್ ಎಂದು ತಳವೂರುತ್ತಾರೆ, ಅಲ್ಲಿಯ ಸಂಸ್ಕೃತಿಗೆ ಹೊಂದಿಕೊಳ್ಳಲೇ ಬೇಕು. ಇಲ್ಲದಿದ್ದರೆ ನೀರಿನಿಂದ ಹೊರಗೆಸೆದ ಮೀನಾಗುತ್ತಾರೆ. ಅವರು ಹಿಂದಿರುಗಿ ಬಂದರೂ ಎಲ್ಲಾ ರೀತಿಯಲ್ಲೂ ಮಾನಸಿಕವಾಗಿ ದೂರವಾಗಿಬಿಟ್ಟಿರುತ್ತಾರೆ. ಒಂದು ನಿರ್ದಿಷ್ಟ ಪರಿಸರ, ನಿರ್ದಿಷ್ಟ ಮನಸ್ಥಿತಿ, ಪುನಃ ಪುನಃ ಉಂಟಾಗುವ ಸಂಪರ್ಕಗಳು ಸ್ವಾಭಾವಿಕವಾಗಿ ಸಂಘಜೀವಿಯಾಗಿರುವ ಮನುಷ್ಯರನ್ನು ಬೆಸೆಯುತ್ತವೆ. ಈ ಸಂಗತಿಗಳನ್ನು ನಿರೂಪಿಸ ಬಯಸಿದ ಭಾವಸಂಬಂಧ ಕಾದಂಬರಿಗಾರ್ತಿ ಪದ್ಮ ಮೇಡಂ ಅವರಿಗೆ ಅಭಿನಂದನೆಗಳು. ಬಹಳ ಗಡಿಬಿಡಿಯಲ್ಲಿ ಕಾದಂಬರಿಯ ಹೆಣಿಗೆ ಮುಕ್ತಾಯವಾಯಿತು ಎಂದೆನ್ನಿಸಿತು.