ಕಿರು ಕಾದಂಬರಿ: ಭಾವ ಸಂಬಂಧ- ಎಳೆ 9
ಮನೆಗೆ ಒಳ್ಳೆಯ ಬೆಲೆಯೇ ಬಂತು. ಸತೀಶರು ಈಗ ಸ್ವಲ್ಪ ಜಾಗೃತರಾದರು. ತಮ್ಮಿಬ್ಬರಲ್ಲಿ ಒಬ್ಬರು ಮರಣಿಸಿದರೂ ಇನ್ನೊಬ್ಬರು ಹಣಕಾಸಿಗಾಗಿ ಬವಣೆ ಪಡದಂತೆ ಲೆಕ್ಕಾಚಾರ ಹಾಕಿ, ಬೇಕಷ್ಟು ಹಣವನ್ನು ಬ್ಯಾಂಕಿನಲ್ಲಿ ಇಟ್ಟುಕೊಂಡು, ಒಂದು ಮಹಡಿ ಮೇಲಿನ ಚಿಕ್ಕ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡು ಮಿಕ್ಕ ಹಣವನ್ನು ಮಗಳಿಗೆ ಕಳಿಹಿಸಿದರು.
ಸರಳವಾಗಿ ಗೃಹ ಪ್ರವೇಶ ಮಾಡಿ ಹೊಸ ಮನೆಯ ವೀಡಿಯೋವನ್ನು ರೇಖಾ ಕಳುಹಿಸಿದಳು.ತಮ್ಮ ಅಗತ್ಯಗಳನ್ನು ಕಮ್ಮಿ ಮಾಡಿಕೊಂಡು ಮಗಳು ಉನ್ನತಿ ಹೊಂದಲು ಸಹಕರಿಸಿದ ಆತ್ಮತೃಪ್ತಿಯನ್ನು ಅನುಭವಿಸಿದರು ಹಿರಿಯ ಜೀವಿಗಳು.
ಆರೆಂಟು ವರ್ಷಗಳು ಕಳೆದವು. ಜೀವಯಾನ ಏರಿಳಿತಗಳಿಲ್ಲದೆ ಸಾವಧಾನದಿಂದ, ಸಮಾಧಾನದಿಂದ ಸಾಗುತ್ತಿತ್ತು. ಎರಡು ಮೂರು ವರುಷಗಳಿಗೊಮ್ಮೆ ರೇಖಾ ಬಂದು ಕೆಲವಾರು ದಿನಗಳಿದ್ದು ಹೋಗುತ್ತಿದ್ದಳು. ಆ ದಿನಗಳಿಗಾಗಿ ಇವರುಗಳು ಆಸ್ಥೆಯಿಂದ ಕಾಯುತ್ತಿದ್ದರು. ಬಂದಾಗ ಸಂಭ್ರಮಿಸುತ್ತಿದ್ದರು. ಮಿಕ್ಕಂತೆ ತಮ್ಮ ವಯಸ್ಸಿಗೆ ಮೀರಿದ ಚಟುವಟಿಕೆಯ ಜೀವನ ನಡೆಸುತ್ತಿದ್ದರು.
ಆಗ ತಾನೇ ರೇಖಾ ಬಂದು ಹೋಗಿದ್ದಳು. ಪ್ರತೀ ಬಾರಿ ಅವಳು ಬಂದು ಹೋದಾಗಲೂ ಪೂರ್ತಿ ಕೈ ಖಾಲಿಯಾಗುತ್ತಿತ್ತು. ಇದರಲ್ಲಿ ಅವಳ ತಪ್ಪೇನು ಇರುತ್ತಿರಲಿಲ್ಲ. ಸತೀಶರೇ ಮಗಳಿಗೆ ಸಂಕೋಚವಾಗದಂತೆ ತಾವೇ ಖರ್ಚು ಮಾಡುತ್ತಿದ್ದರು. ಸೀತಮ್ಮ ಬಗೆ ಬಗೆಯ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿದ್ದರು.
ಈ ಸಲ ಅವಳು ಬಂದು ಹೋದ ಮೂರು ತಿಂಗಳಿಗೇ ಸೀತಮ್ಮನವರ ಅರವತ್ತನೇ ವರ್ಷದ ಹುಟ್ಟಿದ ಹಬ್ಬ ಬಂತು. ಅವರಿಗೆ ಅದರ ಬಗ್ಗೆ ನೆನಪೂ ಇರಲಿಲ್ಲ. ಸತೀಶರಿಗೇ, ಸೀತಮ್ಮ ತಮ್ಮ ಕೈಲಿದ್ದ ಬಳೆಯನ್ನು ಮಗಳಿಗಾಗಿ ಕೊಟ್ಟಿದ್ದು ಪಿಚ್ ಎನ್ನಿಸುತ್ತಿತ್ತು. ಸರಿ, ಈ ಸಲ ಸರಪ್ರೈಸ್ ಆಗಿ ಅವಳಿಗೆ ಒಂದು ಜೊತೆ ಬಳೆ ಕೊಡಿಸೋಣ ಎಂದು ಯೋಚಿಸಿ, ತಮ್ಮ ಹತ್ತಿರ ಇದ್ದ ದುಡ್ಡನ್ನು ತೆಗೆದುಕೊಂಡು ಅಂಗಡಿಗೆ ಹೋದರು. ಆದರೆ ಚಿನ್ನದ ಬೆಲೆ ಗಗನಕ್ಕೇರಿತ್ತು. ಇವರ ಹತ್ತಿರವಿದ್ದ ದುಡ್ಡಿಗೆ ಬಳೆ ಬರುತ್ತಿರಲಿಲ್ಲ. ವಾಪಸ್ಸು ಬಂದ ಸತೀಶರಿಗೆ ಯಾಕೋ ಮನಸ್ಸು ತಡೆಯಲಿಲ್ಲ. ದಿನಾ ಟಿ.ವಿ.ಯಲ್ಲಿ ಸುಂದರ ಲಲನೆಯರು, ಸುಪ್ರಸಿದ್ದ ನಾಯಕಿ ನಟಿಯರು ಜಾಹಿರಾತಿನಲ್ಲಿ ಬಂದು ಹೇಳುತ್ತಿದ್ದ, “ನಿಮ್ಮ ಹಳೆಯ ಚಿನ್ನಕ್ಕೆ ಅಧಿಕ ಹಣವನ್ನು ನೀಡುತ್ತೇವೆ” ಎಂದು ಹೇಳುತ್ತಿದ್ದ ಮಾತುಗಳು ಏನೋ ಬೆಳಕಿನ ರೇಖೆಯನ್ನು ತೋರಿದವು.
ಸತೀಶರ ಐವತ್ತನೆಯ ವರ್ಷದ ಹುಟ್ಟಿದ ಹಬ್ಬಕ್ಕೆ ಅವರ ತಾಯಿಯವರು, ನಾಲ್ಕೂವರೆ ಗ್ರಾಂ ತೂಕದ ದಪ್ಪ ಉಂಗುರವೊಂದನ್ನು ಮಾಡಿಸಿ ತಂದು ಕೊಟ್ಟಿದ್ದರು. ಅವರೂ ತುಂಬಾ ಜೋಪಾನದ ಹೆಂಗಸು. ಅಂಗಡಿಯ ಹೆಸರು, ಉಂಗುರದ ತೂಕ, ಚಿನ್ನದ ಬೆಲೆ, ಎಲ್ಲಾ ನಮೂದಿಸಿದ್ದ ರಶೀತಿಯನ್ನೂ ಜೊತೆಯಲ್ಲೇ ಕೊಟ್ಟದ್ದರು. ಸತೀಶರು – ಇದೆಲ್ಲಾ ಯಾಕಮ್ಮಾ, ನಾನೇನು ಹುಟ್ಟಿದ ಹಬ್ಬ ಆಚರಿಸಿಕೊಳ್ಳಲು ಚಿಕ್ಕ ಮಗುವೇ – ಎನ್ನುತ್ತಾ ಸಂಕೋಚದಿಂದಲೇ ಸ್ವೀಕರಿಸಿ, ಅಮ್ಮ ದೇವರ ಹತ್ತಿರವಿಟ್ಟು ಪೂಜೆ ಮಾಡಿ ಕೊಟ್ಟಿದ್ದ ಉಂಗುರವನ್ನು ಒಮ್ಮೆ ಧರಿಸಿ ತಾಯಿಯ ಕಾಲಿಗೆರಗಿ, ನಂತರ ಬಿಚ್ಚಿ ಹಾಗೆಯೇ ಪೆಟ್ಟಿಗೆಯಲ್ಲಿ ಇಟ್ಟು ಬಿಟ್ಟಿದ್ದರು. ಈಗ ಅಚಾನಕ್ಕಾಗಿ ಅದು ಜ್ಞಾಪಕಕ್ಕೆ ಬಂತು. ಸರಿ, ಉಂಗುರ ಮತ್ತು ರಶೀತಿ, ಎರಡನ್ನೂ ಜೇಬಿಗೇರಿಸಿ ಕೊಂಡು ಜಾಹಿರಾತಿನಲ್ಲಿ ತೋರಿಸಿದ ಫೋನ್ ನಂಬರಿಗೆ ಡಯಲ್ ಮಾಡಿದರು. ಆ ಕಡೆಯಿಂದ ಮಧುರ ದನಿಯೊಂದು ವಿವರಗಳನ್ನು ವಿಚಾರಿಸಿ, ಸುಪ್ರಸನ್ನವಾಗಿ, ಇವರ ಮನೆಯ ವಿಳಾಸವನ್ನು ಕೇಳಿ ಅವರ ಮನೆಯ ಹತ್ತಿರವಿರುವ ಶಾಖೆಯ ವಿವರಗಳನ್ನು ನೀಡಿತು. ಇವರು ಒಳಗೆ ಅಡುಗೆ ಕೋಣೆಯಲ್ಲಿದ್ದ ಸೀತಮ್ಮನಿಗೆ ಇಲ್ಲೇ ಒಂದರ್ಧ ಗಂಟೆ ಕಾಲಾಡಿಸಿಕೊಂಡು ಬರುತ್ತೇನೆ – ಎಂದು ಹೇಳಿ ಉತ್ತರಕ್ಕೂ ಕಾಯದೆ, ಬಾಗಿಲು ಮುಂದೆಳೆದುಕೊಂಡು ಹೋದರು.
ಹತ್ತು ನಿಮಿಷದ ಕಾಲು ನಡಿಗೆಯಲ್ಲಿ ಅವರು ಶಾಖೆಯನ್ನು ತಲುಪಿದರು. ಅಷ್ಟರಲ್ಲೇ ಎರಡು ಬಾರಿ ಶಾಖೆಯಿಂದ ಫೋನ್ ಬಂದಿತ್ತು. – ಸರ್, ನಮ್ಮ ಕಾಲ್ ಸೆಂಟರಿನವರು ನೀವು ಬರುತ್ತೀರೆಂದು ಹೇಳಿದರು. ಏನಾದರೂ ಸಹಾಯ ಬೇಕೆ, ಇನ್ನೂ ಯಾಕೆ ಬಂದಿಲ್ಲಾ – ಎಂದೆಲ್ಲಾ ವಿಚಾರಿಸಿಕೊಂಡರು.
ಸತೀಶರಿಗೆ, ಇದ್ಯಾಕೋ ಅತೀಯಾಯಿತು. ಯಾಕೋ ಅತೀ ವಿನಯಂ. . . .. . . . . ಅನ್ನುವಂತಿದೆಯಲ್ಲಾ ಅನ್ನಿಸಿದರೂ ಇರಲಿಕ್ಕಿಲ್ಲ. ಈಗಿನ ವ್ಯಾಪಾರ, ವ್ಯವಹಾರದ ಸ್ಟೈಲ್ಲೇ ಇದು, ಅತೀ ನವಿರು, ಅತೀ ನಾಜೂಕು, ಎಂದುಕೊಳ್ಳುತ್ತಾ ಒಳಹೊಕ್ಕರು. ಕೌಂಟರಿನ ಮುಂದೆ ಹೋಗಿ ಕುಳಿತು ಜೇಬಿನಿಂದ ಉಂಗುರದ ಪೊಟ್ಟಣವನ್ನು ತೆಗೆದು ಕೊಡುತ್ತಾ – ಇದಕ್ಕೆ ಎಷ್ಟು ದುಡ್ಡು ಸಿಗುತ್ತದೆ ನೋಡಿ ಹೇಳಿ – ಎಂದರು.
ಸಾರ್, ತಾವು ಮಾರುತ್ತಿದ್ದೀರೋ, ಗಿರಿವಿ ಇಡುತ್ತೀರೋ – ಎಂದು ಕೌಂಟರಿನಲ್ಲಿ ಕುಳಿತಿದ್ದ ವ್ಯಕ್ತಿ ಕೇಳಿತು.ಒಂದು ದಿನವೂ ಉಪಯೋಗಿಸದೆ, ತಂದುಕೊಟ್ಟದ್ದನ್ನು ಹಾಗೆಯೇ ಬೆಚ್ಚಗೆ ಜಲ್ಲಿ ಕಾಗದದಲ್ಲಿ ಪೆಟ್ಟಿಗೆಯೊಳಗೆ ಕೂತಿದ್ದ ಹೊಸಾ ಉಂಗುರ ಫಳಫಳನೆ ಹೊಳೆಯುತಿತ್ತು.
ಮಾರಲೆಂದೇ ಎಂದು ಹೇಳ ಹೊರಟ ಸತೀಶರ ಕಣ್ಮುಂದೆ ಅಮ್ಮನ ಮುಖ, ಅಮ್ಮ ಅಕ್ಕರೆಯಿಂದ ತಂದುಕೊಟ್ಟ ಹುಟ್ಟಿದ ಹಬ್ಬದ ಸಂದರ್ಭ ಕಣ್ಣ ಮುಂದೆ ಬಂತು. ತಕ್ಷಣ ಮನಸ್ಸು ಬದಲಾಯಿಸಿ, ಮತ್ತೆ ಸ್ವಲ್ಪ ದಿನ ಕೈ ಹಿಡಿತ ಮಾಡಿ ಸಂಸಾರ ತೂಗಿಸಿದರೆ ಬಿಡಿಸಿಕೊಳ್ಳಬಹುದು, ಅಮ್ಮನ ನೆನಪಿಗೆ ನಾನಿರುವ ತನಕ ಇರಲಿ, ಎನ್ನಿಸಿ – ಗಿರವಿಗಾಗಿ ತಂದಿದ್ದೇನೆ – ಎಂದರು. ಆ ವ್ಯಕ್ತಿ ಅದನ್ನು ತೂಕಮಾಡಿ ಏನೇನೋ ಲೆಕ್ಕ ಬರೆದು ಹೊಡೆದು ಹಾಕಿ, ಮತ್ತೆ ಬರೆದು ಅಂತೂ ಇಂತು ಒಂದು ಅಂಕಿಯನ್ನು ಹೇಳುತ್ತಾ ಇಷ್ಟು ಹಣ ಈ ಉಂಗುರಕ್ಕೆ, ಗಿರವಿ ಇಟ್ಟರೆ ಸಿಗುತ್ತದೆ, ಮಾಸಿಕ ಬಡ್ಡಿ ಇಷ್ಟಾಗುತ್ತದೆ, ಸರ್ ಎಂದನು.
ಅವನು ಬರೆದಿರುವ ಚೀಟಿಯನ್ನು ಗಮನಿಸಿದಾಗ, ಅದರಲ್ಲಿ ಉಂಗುರದ ತೂಕ ಮೂರುಕಾಲು ಗ್ರಾಂ ಎಂದಿತ್ತು. ಗಾಭರಿಯಾದ ಸತೀಶ್, – ಇದೇನು ಹೀಗೆ ಹೇಳುತ್ತೀರಿ, ಇದರ ತೂಕ ಇನ್ನೂ ಜಾಸ್ತಿ ಇರಬೇಕಲ್ಲ – ಎಂದಾಗ, – ಮಾಡಿಸಿದಾಗ ಎಷ್ಟಿತ್ತೋ ಗೊತ್ತಿಲ್ಲ, ಉಪಯೋಗಿಸಿ ಸವೆದಿರಬಹುದು, ಈಗಂತೂ ಇಷ್ಟೇ ಇರುವುದು, ನಮ್ಮದು ಅತೀ ಕರಾರುವಕ್ಕಾಗಿ ತೂಕ ತೋರಿಸುವ ಡಿಜಿಟಲ್ ತಕ್ಕಡಿ ಎಂದನು.
ಒಂದು ದಿನವೂ ಉಪಯೋಗಿಸಿಲ್ಲ, ಇದೇನು ಹೀಗೆ ಹೇಳುತ್ತಿರುವಿರಿ – ಎನ್ನುವಾಗ ಸಾತ್ವಿಕ ಸತೀಶರ ದನಿಯೂ ಸ್ವಲ್ಪ ಗಡುಸಾಗಿತ್ತು.
ನಿಮ್ಮ ಯಾವುದೇ ರಶೀತಿಯನ್ನು ನಾವು ಪರಿಗಣಿಸುವುದಿಲ್ಲ. ನಮ್ಮ ತಕ್ಕಡಿ ತೋರಿಸುವ ತೂಕದ ಅನುಸಾರವಾಗಿಯೇ ನಾವು ವ್ಯವಹಾರ ಮಾಡುವುದು. ನಿಮಗೆ ಇಷ್ಟವಿದ್ದರೆ ಮುಂದುವರೆಯೋಣ, ಇಲ್ಲದಿದ್ದರೆ ಮುಂದೆ ಹಲವಾರು ಜನ ಕಾಯುತ್ತಿದ್ದಾರೆ – ಎಂದು ಇವರನ್ನು ಸಾಗ ಹಾಕಲು ಆತುರ ತೋರಿದಾಗ, ಅವರುಗಳ ಅತಿವಿನಯದ ಹಿಂದೆ ಇದ್ದ ಧೂರ್ತ ಲಕ್ಷಣದ ಮುಖ ಕಾಣತೊಡಗಿತು.
ಅಭ್ಯಾಸವಿಲ್ಲದ ಬ್ರಾಹ್ಮಣ ಅಗ್ನಿಹೋತ್ರ ಮಾಡಿದಂತೆ, ನಮಗೆಲ್ಲಾ ಈ ವ್ಯವಹಾರಗಳು ಸರಿ ಬರುವುದಿಲ್ಲ ಎಂದುಕೊಳ್ಳುತ್ತಾ ಮನೆಯ ಕಡೆ ನಡೆದರು. ಅಲ್ಲಾ, ನಮ್ಮಂತಹ ಓದು ಬರಹ ಬಲ್ಲವರಿಗೇ ಈ ರೀತಿಯಲ್ಲಾ, ಇನ್ನು ಮುಗ್ಧರ ಮಾಡೇನು, ತಾವು ಕಷ್ಟದಕ್ಕಿದ್ದೀವಿ, ಇವರು ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ಇವರಲ್ಲಿಗೆ ಬಂದರೆ, ದೇವರೇ ಗತಿ ಎಂದುಕೊಳ್ಳುತ್ತಾ ಮನೆಯೊಳಗೆ ನಡೆದರು. ಮನಸ್ಸು ವ್ಯಘ್ರವಾಗಿರುವುದು ಮುಖದಲ್ಲಿ ಬಿಂಬಿತವಾಗುತ್ತಿತ್ತು.
ಮನವನರಿತು ನಡೆಯುವ ಸತಿಯಾದ ಸೀತಮ್ಮನವರು ಹಚ್ಚಿದ ಒಲೆಯನ್ನು ಆರಿಸಿ, ಒಂದು ಲೋಟ ತಣ್ಣನೆಯ ಮಜ್ಜಿಗೆಯನ್ನು ತಂದು ಪತಿಯ ಕೈಗಿಟ್ಟು, ಆತ್ಮೀಯವಾಗಿ ಕೈಹಿಡಿದು ಮೃದುವಾಗಿ ಅಮುಕುತ್ತಾ, ಏಕೆ ಹೀಗಿದೆ ಮುಖ? ಎಲ್ಲಿಗೆ ಹೋಗಿದ್ದಿರಿ, ಏನಾಯಿತು ಹೇಳಿ? – ಎಂದು ಕೇಳಿದಾಗ ಮನಸ್ಸು ತಡೆಯದೆ ನಡೆದುದನ್ನೆಲ್ಲಾ ಹೇಳಿಬಿಟ್ಟರು.
ಸೀತಮ್ಮನವರು – ಹೋಗಲಿ ಬಿಡಿ, ನಾನು ಈಗ ಬಳೆ ಹಾಕಿಕೊಂಡು ಎಲ್ಲಿಗೆ ಹೋಗಬೇಕಾಗಿದೆ. ನಿಮಗೆ ನನಗಾಗಿ ತರಬೇಕು ಅನ್ನಿತಲ್ಲ ಅದಕ್ಕಿಂತ ದೊಡ್ಡ ಉಡುಗೊರೆ ನನಗೆ ಬೇಡ. ನನ್ನ ಅರವತ್ತನೇ ವರ್ಷದ ಹುಟ್ಟಿದ ಹಬ್ಬದ ಉಡುಗೊರೆ ನಿಮ್ಮ ಈ ಭಾವದಿಂದಲೇ ಸಿಕ್ಕಂತಾಯಿತು ಬಿಡಿ, ಚಿಂತಿಸಬೇಡಿ ಎಂದು ಸಮಾಧಾನಿಸಿದರು. ಸತೀಶರಿಗೆ ಹೆಂಡತಿಯ ಬಗ್ಗೆ ಹೆಮ್ಮೆ ಎನ್ನಿಸಿತು.
ಇದೇ ಸಮಯದಲ್ಲಿ ತಾವು ಸತೀಶರಿಗೆ ತಿಳಿಯದಂತೆ ಜೀವನದಲ್ಲಿ ಮಾಡಿದ ಒಂದೇ ಕೆಲಸವಾದ, ಹರಿವಾಣ ಅಡವಿಟ್ಟಿದ್ದನ್ನು ಹೇಳಿಕೊಂಡು ಸೀತಮ್ಮ ಹಗುರಾದರು. ಜನರ ಅಸಹಾಯಕತೆಯ ಶೋಷಣೆಯ ವಿವಿಧ ಮುಖಗಳಿಗೆ ಆ ಸಾತ್ವಿಕ ಜೀವಗಳು ಮಮ್ಮಲ ಮರುಗಿದವು. ರಾಯರು ಕೂಡಿಟ್ಟಿದ್ದ ದುಡ್ಡಿನಿಂದಲೇ ಒಂದು ಜೊತೆ ಚಿಕ್ಕ ಓಲೆ, ಹೊಸ ಸೀರೆ ತೆಗೆದುಕೊಟ್ಟರು.
ಓಲೆ ಹಾಕಿಕೊಂಡು, ಹೊಸ ಸೀರೆಯುಟ್ಟು , ದೇವಸ್ಥಾನಕ್ಕೆ ಹೋಗಿ ಅಮ್ಮನವರಿಗೆ ಕುಂಕುಮಾರ್ಚನೆಯನ್ನು ಮಾಡಿಸಿಕೊಂಡು ಬಂದು ಇಬ್ಬರೂ ಕೂಡಿ ಪಾಯಸದಡುಗೆಯ ಮಾಡಿ ಊಟ ಮಡುವ ಮೂಲಕ, ಸರಳವಾಗಿ, ಸಂತೋಷವಾಗಿ ಸೀತಮ್ಮನವರ ಅರವತ್ತನೆಯ ವರುಷದ ಹುಟ್ಟುಹಬ್ಬ ನೆರವೇರಿತು.
ಇಷ್ಟು ಹೇಳಿ ಮುಗಿಸಿದರು ಸೀತಕ್ಕ:
ಹೀಗೆ ಸಾಗಿತ್ತು ನಮ್ಮ ಬದುಕು ಸರಸೂ. ಅಷ್ಟರಲ್ಲೇ ಈ ಮಹಾ ಕರೋನಾ ಮಾರಿ ಒಕ್ಕರಿಸಿತು. ನಮ್ಮಿಬ್ಬರಿಗೆ, ಅಮೆರಿಕಾದಲ್ಲಿರುವ ರೇಖಾ, ಕಿರಣ್ ಮತ್ತು ಮಗುವಿನ ಚಿಂತೆ, ಅವರಿಗೆ ನಮ್ಮಿಬ್ಬರ ಚಿಂತೆ.
ನಾವೂ ಕರೋನಾವನ್ನು ಓಡಿಸಲು ಜಾಗಟೆ, ಗಂಟೆಗಳನ್ನು ಬಾರಿಸಿದೆವು. ಅಂಗಳ, ತಾರಸಿಯ ತುಂಬಾ ದೀಪಗಳನ್ನು ಹಚ್ಚಿಟ್ಟೆವು. ಮಾಸ್ಕ್ ಹಾಕಿಕೊಂಡೆವು. ಓಡಾಟಗಳನ್ನೆಲ್ಲಾ ಕಮ್ಮಿ ಮಾಡಿಕೊಂಡೆವು. ದಿನಕ್ಕೆ ಒಮ್ಮೆ ಮಾತ್ರ ಸತೀಶರು ಅಂಗಡಿಗೆ ಹೋಗಿ ಅಗತ್ಯವಿರುವ ಸಾಮಾನುಗಳನ್ನು ತರುತಿದ್ದರು. ರಷ್ ಜಾಸ್ತಿಯಿದ್ದರೆ ಹೋಗುತ್ತಲೇ ಇರಲಿಲ್ಲ. ಅಷ್ಟೆಲ್ಲಾ ಜಾಗ್ರತೆ ವಹಿಸಿದರೂ ಮುಂದಾದದ್ದು ನಿನಗೇ ಗೊತ್ತೇ ಇದೆಯಲ್ಲಾ ಸರಸು.
ಹೀಗಿದೆ ನನ್ನ ಜೀವಯಾನ. ಈಗ ಯಾವ ಜನ್ಮದ ಅನುಬಂಧವೋ ನೀನು ಸಿಕ್ಕಿದ್ದೀಯ. ಅಕ್ಕರೆಯ ಮಹಾಪೂರವನ್ನೇ ಹರಿಸುತ್ತೀದ್ದೀಯ. ಒಂಟಿತನದಿಂದ ನಲುಗಿ ನೋಯಬೇಕಾಗಿದ್ದ ನನ್ನಿಂದ ಕೆಲವರಿಗಾದರೂ ಕಿಂಚಿತ್ ಸೇವೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದೀಯಲ್ಲಾ, ಇದು ನನಗೆ ಸತೀಶರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನೂ, ಅಗಾಧವಾದ ಆತ್ಮತೃಪ್ತಿಯನ್ನೂ ಕೊಡುತ್ತಿದೆ. ಇದಕ್ಕಾಗಿ ನಿನಗೆ ಏನು ಹೇಳಬೇಕೋ ನನಗೆ ತಿಳಿಯುತ್ತಿಲ್ಲ ಎನ್ನುತ್ತಾ ಭಾವುಕರಾದ ಸೀತಕ್ಕ ಕ್ಷಣದಲ್ಲೇ ತಮ್ಮನ್ನು ತಾವೇ ಸಾವರಿಸಿಕೊಂಡು, ವಾತಾವರಣವನ್ನು ತಿಳಿಗೊಳಿಸುವಂತೆ ನಾಟಕೀಯವಾಗಿ, –
ಇಲ್ಲಿಗೆ ಸೀತಮ್ಮನವರ ಕಥಾವೃತ್ತಾಂತವು ಪರಿಸಮಾಪ್ತಿಯಾಯಿತು – ಎನ್ನುತ್ತಾ ಎದ್ದು,
ಏಳು, ಆಗಲೇ ಎರಡು ಗಂಟೆ ಆಯಿತು, ಊಟ ಮಾಡೋಣ ಎನ್ನುತ್ತಾ ಏನೂ ಆಗೇ ಇಲ್ಲವೇನೋ ಎಂಬಂತೆ ಅಡುಗೆ ಮನೆಯ ಕಡೆಗೆ ನಡೆದರು. ಸರಸ್ವತಿಗೆ ಬಾಗಿಲಿನಂಚಿನಿಂದ, ಸೀತಕ್ಕ ಕಣ್ಣಚಿನಲ್ಲಿ ಜಿನುಗಿದ ಎರಡು ಹನಿಗಳನ್ನು ಸೆರಗಿನಿಂದ ಒರೆಸಿಕೊಳ್ಳುತ್ತಿರುವುದು ಅವಳ ತೀಕ್ಷ, ಸೂಕ್ಷ್ಮ ಕಣ್ಣುಗಳಿಗೆ ಕಾಣಿಸಿತು.
ನಾಲ್ಕಾರು ನಿಮಿಷಗಳ ಕಾಲ ಶಿಲಾವಿಗ್ರಹದಂತೆಯೇ ಕುಳಿತುಬಿಟ್ಟಳು ಸರಸ್ವತಿ.
ಅನಂತರ ಸಾವರಿಸಿಕೊಂಡು, ಅಬ್ಬಬ್ಬಾ, ಈ ಅಖಂಡ ಪ್ರಪಂಚದಲ್ಲಿ, ಒಬ್ಬ ಮನುಷ್ಯ ಒಂದು ಅಣುವಿಗಿಂತಲೂ ಚಿಕ್ಕವನು, ಅನಿಸಿದರೂ ಒಬ್ಬೊಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲೂ ಅಸಮಾನ್ಯ ಸಂಗತಿಗಳು ಎಷ್ಟೊಂದು ಇರುತ್ತವಲ್ಲ, ಇನ್ನೂ ಹೆಚ್ಚು ಹೆಚ್ಚು ಸಾಧನೆಗೈದವರ ಬಾಳು ಇನ್ನೆಷ್ಟು ವೈವಿಧ್ಯತೆಗಳಿಂದ ಕೂಡಿರಬಹುದು ಅಂದುಕೊಳ್ಳುತ್ತಾ ಎದ್ದು ಊಟದ ಟೇಬಲ್ ಕಡೆ ನಡೆದಳು. ಇಬ್ಬರೂ ಮೌನವಾಗಿ ಊಟ ಮುಗಿಸಿದರು. ಅಲ್ಲಿ ಕೆಲ ಸಮಯವಾದರೂ ಮಾತಿಲ್ಲದ ಮೌನ ಸಾಮ್ರಾಜ್ಯದ ಸ್ಥಾಪನೆಯ ಅಗತ್ಯವಿತ್ತು.
ನಿಧಾನವಾಗಿ ಇಬ್ಬರೂ ಊಟ ಮುಗಿಸಿದರು. ಸರಸು ಟೇಬಲ್ ಕ್ಲೀನ್ ಮಾಡಿ, ಕಾಫಿ ಬಿಸಿ ಮಾಡಿ ಎರಡು ಲೋಟಗಳಿಗೆ ಬಗ್ಗಿಸಿಕೊಂಡು ಬಂದು ಸೋಫಾದಲ್ಲಿ ಕುಳಿತಿದ್ದ ಸೀತಕ್ಕನ ಕೈಗೆ ಒಂದು ಲೋಟ ಕೊಟ್ಟು ತಾನೂ ಕುಡಿಯತೊಡಗಿದಳು. ಕಾಫಿ ಕುಡಿಯುತ್ತಾ, ಕುಡಿಯುತ್ತಾ, ಮಾತು ಹೇಗೆ ಪ್ರಾರಂಬಿಸುವುದು ಎಂದು ಯೋಚಿಸುತ್ತಿದ್ದಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32829
–-ಪದ್ಮಾ ಆನಂದ್, ಮೈಸೂರು
ಪ್ರತಿ ಸಂಚಿಕೆ ಕೂಡಾ ಚೆನ್ನಾಗಿ ಮೂಡಿ ಬರುತ್ತಿದೆ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಬಹಳ ಸೊಗಸಾಗಿ ಮುಂದುವರಿಯುತ್ತಿದೆ ಕಾದಂಬರಿ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸುಂದರ ಸಾಂಸಾರಿಕ ಕಾದಂಬರಿ ಬಹಳ ಚೆನ್ನಾಗಿ ಸಾಗುತ್ತಿದೆ..ಧನ್ಯವಾದಗಳು ಮೇಡಂ
ತಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು
ಭಾಷೆ ತುಂಬಾ ಸೊಗಸಾಗಿದೆ..ಪ್ರತಿ ಸಂಚಿಕೆಯಲ್ಲಿ ನಮ್ಮ ಭಾರತೀಯ ಕುಟುಂಬಗಳ ಸರಳ ಜೀವನದ ಸೌಂದರ್ಯ ತಾನೇ ತಾನಾಗಿ ಹೊಮ್ಮಿ ಬರುತ್ತಿದೆ..ಚಂದದ ಬರಹ ಮೇಡಂ
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ತು಼ಂಬಾ ಚೆನ್ನಾಗಿ ಓದಿಸಿ ಕೊಂಡು ಹೋಗುತ್ತೆ ಮೇಡ಼ಂ.ನನ್ನ ಸಹೋದರಿ( ಚಿಕ್ಕಪ್ಪನ ಮಗಳು) ರಾಜೇಶ್ದರಿ ಇಂದ ತರಿಸಿ ಕೊಂಡು ಓದುತ್ತಿರುವೆ.
ಸರಾಗವಾಗಿ ಓದಿಸಿಕೊಂಡಿತು, ಮುಂದೆ ಕಥೆ ಹೇಗೆ ಓಡುತ್ತೆ ಎನ್ನುವ ಕುತೂಹಲವಿದೆ
ಧನ್ಯವಾದಗಳು