‘ಟುಗು ನೆಗರ’ ಪ್ರತಿಮೆಯನ್ನು, ಪ್ರಶಾಂತವಾದ ವಾತಾವರಣದಲ್ಲಿ, ಒಂದು ಕೊಳದ ಮಧ್ಯೆ ಸ್ಥಾಪಿಸಲಾಗಿದೆ. ಅಲ್ಲಿಯ ಫಲಕಗಳಗಲ್ಲಿ ಹುತಾತ್ಮರ ಪಟ್ಟಿಯಲ್ಲಿ ‘ಸಿಂಗ್’ ಎಂದು ಕೊನೆಗೊಳ್ಳುವ ಪಂಜಾಬಿ ಯೋಧರ ಹೆಸರೂ ಇದ್ದುವು. ಬ್ರಿಟಿಷರು ಭಾರತದ ಸೇನೆಯನ್ನು ಅಲ್ಲಿ ಹೋರಾಡಲು ಆಯೋಜಿಸಿದ್ದರ ಫಲವಿದು.
ನನಗೆ ಇಲ್ಲಿ ಇಷ್ಟವಾದ ವಿಚಾರವೇನೆಂದರೆ ಸೆಕ್ಯುರಿಟಿ ಹೆಸರಿನಲ್ಲಿ ಇಲ್ಲಿ ನಮ್ಮನ್ನು ಅಡಿಗಡಿಗೆ ತಡೆಯಲು ಯಾರೂ ಇರಲಿಲ್ಲ. ಫೋಟೊ ತೆಗೆಯಲು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಕೆಲವು ಪ್ರವಾಸಿ ತಾಣಗಳಲ್ಲಿರುವಂತೆ ಕ್ಯಾಮೆರಾ ಚಾರ್ಜ್ ಕೊಡಬೇಕಾಗಿಲ್ಲ, ‘ಇಲ್ಲಿ ಫೊಟೊ ತೆಗಯಬಾರದು’ ಎಂಬ ಎಚ್ಚರಿಕೆಯ ಬರಹವಂತೂ ಇಲ್ಲವೇ ಇಲ್ಲ, ಬಲೂನ್ ಮಾರುವವರಾಗಲಿ, ವಿವಿಧ ತಿಂಡಿ- ತಿನಿಸು ಮಾರುವವರಾಗಲೀ , ಭಿಕ್ಷೆ ಬೇಡುವವರಾಗಲೀ – ಸುತ್ತಮುತ್ತ ಕಾಣಿಸಲೇ ಇಲ್ಲ. ಹಾಗಾಗಿ, ಈ ಪರಿಸರವು ಶಾಂತವಾಗಿ, ಸ್ವಚ್ಛವಾಗಿ ಇದೆ.
ದೇಶ ಯಾವುದೇ ಇರಲಿ, ಅದರ ರಕ್ಷಣೆಗೆ ಹೋರಾಡಿದವರೆಲ್ಲರೂ ಚಿರಸ್ಮರಣೀಯರು. ಈ ಸ್ಮಾರಕದ ಭವ್ಯತೆ ಹಾಗು ಸುತ್ತಲಿನ ಪ್ರಶಾಂತತೆ ಯನ್ನು ನೋಡಿದಾಗ ಗೌರವ ತಾನಾಗಿ ಉಕ್ಕುತ್ತದೆ. ಅಯಾಚಿತವಾಗಿ, ನನಗೆ ದೆಹಲಿಯಲ್ಲಿರುವ ‘ಅಮರ ಜವಾನ್ ಜ್ಯೋತಿ’ ನೆನಪಾಯಿತು.ನಮ್ಮ ‘ಅಮರ ಜವಾನ್’ ರಿಗೂ ಇಂತಹುದೇ ಸ್ವಚ್ಚ, ಶಾಂತ ಪರಿಸರದಲ್ಲಿ ಸ್ಮಾರಕ ಇರಬೇಕಿತ್ತಲ್ಲವೆ?
ದೆಹಲಿಯಲ್ಲಿ, ‘ಅಮರ ಜವಾನ್ ‘ ಜ್ಯೋತಿಯನ್ನು ಅಚ್ಚುಕಟ್ಟಾಗಿ ಕಾಯುತ್ತಾರಾದರೂ, ಸುತ್ತಲಿನ ಪರಿಸರ ಸಂತೆ. ಈ ಗಲಾಟೆಯಲ್ಲಿ ‘ಅಮರ ಜವಾನ ಜ್ಯೋತಿ’ ಮಂಕಾಗಿ ಕಾಣಿಸುತ್ತದೆ!.
– ಹೇಮಮಾಲಾ.ಬಿ
ಒಂದು ಪ್ರಶಾಂತವಾದ ಜಾಗದ ಪರಿಚಯ ಮಾಡಕ್ಕೊಟ್ಟ ತಮಗೆ ಧನ್ಯವಾದಗಳು