ಕಂಡೆ ನಾ ಕೇದಾರನಾಥದ ಬಂಡೆಯಾ!
ಕೇದಾರನಾಥ ದೇವಾಲಯದ ಗರ್ಭಗುಡಿಗೆ ಸಮಾನಾಂತರವಾಗಿ ಸುಮಾರು 20 ಅಡಿ ಹಿಂದೆ, ದೊಡ್ಡದಾದ ಬಂಡೆಯೊಂದು ಕಾಣಿಸುತ್ತದೆ. ಪ್ರಕೃತಿಯಲ್ಲಿ ಧಾರಾಳವಾಗಿ ಕಾಣಸಿಗುವ ಬಂಡೆಯಲ್ಲಿ ಏನು ವಿಶೇಷ ಎನ್ನುತ್ತೀರಾ? ಆ ಬಂಡೆ ಇರುವ ಜಾಗ, ಅದು ಅಲ್ಲಿಗೆ ಉರುಳುತ್ತಾ ಬಂದ ಪರಿ ಮತ್ತು ಬಹುಶ: ಬಂದು ತಲಪಿದ ಸಮಯ ಆಸ್ತಿಕರ ಮನಸ್ಸಿನಲ್ಲಿ ಅದಕ್ಕೆ ದೈವಿಕ ಅರ್ಹತೆಯನ್ನು ತಂದುಕೊಟ್ಟಿವೆ.
“ಆಗ ಅಲ್ಲಿ ಅರ್ಚಕನಾಗಿದ್ದೆ. ನಾವು 5 ಜನ ಇದ್ದೇವೆ. ವರ್ಷಕ್ಕೆ ಒಮ್ಮೆ ಅರ್ಚಕರು ಬದಲಾಗುತ್ತಾರೆ. ಸಾಮಾನ್ಯವಾಗಿ ಹಿಮಾಲಯದ ಮಳೆ ತುಂತುರು ಹನಿಯಾಗಿರುತ್ತದೆ. ಆದರೆ ಜೂನ್ 13 ರಿಂದಲೇ ಅಲ್ಲಿ ಪೈಪ್ ನಲ್ಲಿ ಹುಯ್ದ ಹಾಗೆ ಜೋರು ಮಳೆ ಬರುತ್ತಿತ್ತು. ತುಂಬಾ ಚಳಿ. ಪ್ರವಾಹ ಬಂದಿದ್ದು ಕೇವಲ ಕಾಲು ಗಂಟೆ ಅಷ್ಟೆ. ಅಷ್ಟಕ್ಕೇ ಎಷ್ಟು ಪ್ರಾಣ ಹಾನಿ ಆಯ್ತು . ಜೂನ್ 16 ರಂದು ರಾತ್ರಿ ಜೋರು ಮಳೆ ಬರುತ್ತಾ ಇತ್ತು. ಬೆಟ್ಟದ ಕಡೆಯಿಂದ ಧುಢುಂ-ಧುಢುಂ ಸದ್ದು ಕೇಳಿಸುತ್ತಾ ಇತ್ತು. ‘ಏನೋ ಆಗ್ತಾ ಇದೆ’ ಅಂತ ಭಯ ಪಟ್ಟೆವು. ಸದ್ಯ ರಾತ್ರಿ ಪ್ರವಾಹ ಬಂದಿಲ್ಲ. ಆ ದಿನಗಳಲ್ಲಿ ಕೇದಾರದಲ್ಲಿ ತುಂಬಾ ಜನ ಇದ್ದರು. ಕಡಿಮೆಯೆಂದರೂ ರಾತ್ರಿ 15000 ಜನ ಇದ್ದಿರಬಹುದು. ಆದರೆ ದೇವರು ದೊಡ್ಡವನು. ರಾತ್ರಿ ಪ್ರವಾಹ ಬಂದಿದ್ದರೆ ಸಾವು-ನೋವು ಬಹಳಷ್ಟು ಹೆಚ್ಚಾಗುತ್ತಿತ್ತು.
17 ಜೂನ್, ಬೆಳಗ್ಗೆ 06:30 ಗಂಟೆ ಆಗಿತ್ತು. ಕಲ್ಲು ಬಂಡೆಗಳನ್ನು ಉರುಳಿಸಿಕೊಂಡು ಸುಮಾರು ಕಾಲು ಗಂಟೆ ಭೀಕರ ಪ್ರವಾಹ ಬಂದಿತ್ತು. ಎಲ್ಲಾ ಕಡೆ ನೀರು, ಕೆಸರು, ಮರಳು, ಉರುಳುತ್ತಿರುವ ಬಂಡೆಗಳು! ಪ್ರವಾಹದ ಒಂದು ಅಲೆ ನನ್ನನ್ನು ರಪ್ಪನೆ ದೇವಾಲಯದ ಒಳಗೆ ತಳ್ಳಿತು. ನಾನು ಕಾಣಿಕೆ ಡಬ್ಬಿಯ ಮೇಲೆ ಹತ್ತಿ ನಿಂತು, ಮೇಲಿದ್ದ ಘಂಟೆಯನ್ನು ಆಧಾರಕ್ಕೆ ಹಿಡಿದುಕೊಂಡು, ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ.
ಪೂರ್ವ ಬಾಗಿಲಿನಿಂದ ಪ್ರವಾಹದ ನೀರು ದೇವಾಲಯದೊಳಗೆ ನುಗ್ಗುತ್ತಿತ್ತು. ನೀರಿನ ಮಟ್ಟ ಏರುತ್ತಾ ಇತ್ತು. ಹೊರಗಡೆ ಬಂಡೆ ಕಲ್ಲುಗಳು ಉರುಳುವ ಸದ್ದು. ನನ್ನ ಅಂತ್ಯಕಾಲ ಹತ್ತಿರವಾಯಿತು ಎಂದುಕೊಂಡು ಮೃತ್ಯುಂಜಯ ಜಪ ಮಾಡಲಾರಂಭಿಸಿದೆ. ನನ್ನ ಕತ್ತಿನ ವರೆಗೂ ನೀರು ಬಂದಿತ್ತು. ನೀರು ಬಹಳ ತಂಪಾಗಿತ್ತು. ಅಸಾಧ್ಯ ಚಳಿ. ಉಟ್ಟ ಬಟ್ಟೆ ಹರಿದಂತಾಗಿತ್ತು. ಕರೆಂಟು ಸಂಪರ್ಕ ಕಡಿದು ಕತ್ತಲೆಯಾಗಿ ಏನೂ ಕಾಣಿಸುತ್ತಿರಲಿಲ್ಲ. ಇನ್ನೇನು ಅರ್ಧ ಅಡಿ ಮೇಲೆ ನೀರು ಬಂದಿದ್ದರೆ ನಾನು ಜಲಸಮಾಧಿಯಾಗುತ್ತಿದ್ದೆ.
ಸ್ವಲ್ಪ ಹೊತ್ತಿನಲ್ಲಿ ನೀರು ಕಡಿಮೆಯಾಗಲಾರಂಭಿಸಿತು. ಕತ್ತಲೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಬಂದ ನೀರು ಎಲ್ಲಿಂದ ಹೋಗುತ್ತಿದೆ ಗೊತ್ತಾಗಲಿಲ್ಲ. ನೀರು ಸಂಪೂರ್ಣ ಇಳಿದ ಮೇಲೆ ನೋಡಿದಾಗ ಗೊತ್ತಾದುದೇನೆಂದರೆ, ಮುಚ್ಚಿದ್ದ ಪಶ್ಚಿಮ ಬಾಗಿಲು ತಾನಾಗಿಯೇ ತೆರೆದು ನೀರು ಅಲ್ಲಿಂದ ಹೊರಹೋಗುತ್ತಿತ್ತು!ಇದು ಶಿವಲೀಲೆ!!. ದೇವಾಲಯದ ಒಳಗೆ. ಮಣ್ಣು. ಮರಳು ತುಂಬಿತ್ತು. ಆಹಾರವಿರಲಿ, ಕುಡಿಯಲು ಸ್ವಚ್ಛ ನೀರೂ ಸಿಗದ ಪರಿಸ್ಥಿತಿಯಲ್ಲಿ ಎರಡು-ಮೂರು ದಿನ ಕಳೆದೆವು. ದೇವಸ್ಥಾನವನ್ನು ಸ್ವಚ್ಛಗೊಳಿಸಿದೆವು. ಸರಕಾರ ಮತ್ತು ಸೇನೆಯವರು ರಕ್ಷಣಾ ಕಾರ್ಯ ಆರಂಭಿಸಿದ್ದರು.
ದೇವಸ್ಥಾನದ ಹಿಂದೆ ಬೆಟ್ಟದಿಂದ ಉರುಳಿಕೊಂಡ ದೊಡ್ಡದಾದ ಬಂಡೆಯೊಂದು ಯಾರೋ ತಂದು ನಿಲ್ಲಿಸಿದಂತೆ ನಿಂತಿದೆ ನೋಡಿ. ಅದೇನಾದಾರೂ ಇನ್ನೂ ಉರುಳಿ ದೇವಾಲಯದ ಗೋಡೆಗೆ ಡಿಕ್ಕಿ ಹೊಡೆದಿದ್ದರೆ ಮಂದಿರಕ್ಕೆ ಹಾನಿಯಾಗುತ್ತಿತ್ತು. ಆದರೆ ಶಿವನ ಲೀಲೆ. ಇದೇ ಬಂಡೆಯಿಂದಾಗಿ ಪ್ರವಾಹದ ನೀರು ಕವಲಾಗಿ ಹರಿದು ದೇವಾಲಯ ಉಳಿದುಕೊಂಡಿತು. ಇದು ಕಲಿಗಾಲ, ಎಲ್ಲಾ ಶಿವನಿಚ್ಛೆ” ಎಂದು ತಮ್ಮ ಮಾತು ಮುಗಿಸಿದರು.
ಈ ಆಧುನಿಕ ‘ಮೃತ್ಯುಂಜಯ’ರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸಿದೆವು.
ಅಂದಿನ ಪ್ರವಾಹದ ಅಬ್ಬರಕ್ಕೆ ಸಿಲುಕಿ ಹಾನಿಗೊಳಗಾದ ಕೆಲವು ಕಟ್ಟಡಗಳ ಮತ್ತು ಕೊಚ್ಚಿಹೋದ ಹಳ್ಳಿಗಳ ಕುರುಹುಗಳನ್ನು ನಾವು ಕಂಡೆವು.
– ಹೇಮಮಾಲಾ.ಬಿ
ಓದುತ್ತಿದ್ದಂತೆ ರೋಮಾಂಚವಾಗುತ್ತಿದೆ,ನಿಮ್ಮ ಮೂಲಕ ತುಂಬಾ ಮಾಹಿತಿಗಳು ದೊರಕಿತು.ಧನ್ಯವಾದಗಳು.
ಸಹೋದರಿ ಪುಣ್ಯಕ್ಷೇತ್ರ ದಪರಿಚಯ ಬಲು ಸೊಗಸಾಗಿ ತಿಳಿಸಿ ನಾವೂ ನಿಮ್ಮ ಜೋತೆ ಇರುವಂತೆ ಮಾಡಿ, ಸಂತೋಷದ ಅಲೆಯಲಿ ತೇಲುವ ಹಾಗಾಗಿದೆ.
ಉತ್ತಮವಾದ ಲೇಖನ ಧನ್ಯವಾದಗಳು…ಮೇಡಂ.
Thank you very much.. 🙂
ಆಕರ್ಷಕ ಮತ್ತು ಸಮರ್ಪಕ ಬರವಣಿಗೆ ನಿಮಗೆ ಒಲಿದಿದೆ. ಮತ್ತೊಮ್ಮೆ ಹೋಗಿಬರಬೇಕು ಎನಿಸುತ್ತಿದೆ.
ನಿಮ್ಮ ಪ್ರವಾಹ ಕಥನಗಳು ನಮ್ಮನ್ನು ನೈಜ್ಯ ದರ್ಶನ ಮಾಡಿಸಿದತ್ತೆ ಇದೆ ವಂದನೆಗಳು ಮುಂದವರಿಯಲಿ
ಅಗೋಚರ ಶಕ್ತಿಗಳ ಕೆಲಸದ ಅತ್ಯಪೂವ೯ ನಿದಶ೯ನ; ಮನಸ್ಸನ್ನು ಮುಟ್ಟುವ ಮತ್ತು ತಟ್ಟುವ ನಿರೂಪಣೆ
ಧನ್ಯವಾದಗಳು.