ತೊರೆಯೇ ತೋರಿದ ದಾರಿ..

Share Button

toreye-torida-dari-book-front

‘ಹರೀಶ್ ಮಿಹಿರ’ ಆಳ್ವಾಸ್ ಕಾಲೇಜು ಮೂಡಬಿದಿರೆಯ ಕನ್ನಡ ಉಪನ್ಯಾಸಕರು. ಅವರ ಆತ್ಮಕತೆ ‘ತೊರೆಯೇ ತೋರಿದ ದಾರಿ ಮಿಹಿರ ಪ್ರಕಾಶನದಿಂದ ಬಿಡುಗಡೆಯಾಗಿದೆ. ಮುದ್ದಣ ಮನೋರಮೆಯರ ಸಲ್ಲಾಪದ ಶೈಲಿಯಲ್ಲಿ ಮೂಡಿ ಬರುವ ಈ ಆತ್ಮಕತೆ ತನ್ನ ತೆಳುವಾದ ನವಿರು ಹಾಸ್ಯದಿಂದ, ಜೀವನ ಪ್ರೀತಿಯಿಂದ ಮನ ಸೆಳೆಯುತ್ತದೆ. ಬಾಳೆಂಬ ತೊರೆಯಲ್ಲಿ ತಮ್ಮ ಜೀವನದ ನಾವೆ ತೇಲಿದ ಬಗೆ, ಶಿರಸಿಯಿಂದ ಮೂಡುಬಿದಿರೆಗೆ ಬಂದು ನೆಲೆಯಾಗುವಲ್ಲಿ ವರೆಗೆ , ಈ ಆತ್ಮಕತೆ ತನ್ನ ಅನುಭವದ ಪ್ರಾಮಾಣಿಕತೆಯಿಂದ, ಹಾಸ್ಯದೊಂದಿಗೆ ಮಿಳಿತವಾಗಿರುವ ಶೋಕದ ಗಾಢತೆಯಿಂದ ನಮ್ಮ ಮನ ತಟ್ಟುತ್ತದೆ. ತಮ್ಮ ಬಾಲ್ಯದ ಬಡತನವನ್ನು, ಬಾಲ್ಯವನ್ನು, ಅದರ ಸಿಹಿ ಕಹಿ ನೆನಪುಗಳೊಂದಿಗೆಯೇ ಬಣ್ಣಿಸುತ್ತಾರೆ ಹರೀಶ್. ತಮ್ಮ ಬಾಲ್ಯದ ಬಡತನವನ್ನು ವಿವರಿಸುತ್ತ ಹೇಗೆ ಶ್ರೀಮಂತ ಬ್ರಾಹ್ಮಣರು ಬಡ ಕುಟುಂಬಗಳನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ ಎಂದು ಹೃದಯಂಗಮವಾಗಿ ವರ್ಣಿಸುತ್ತಾರೆ.

ತನ್ನ ತಾಯಿವವರ ಆತ್ಮ ಗೌರವದ, ಸ್ವಾಭಿಮಾನದ ಬದುಕನ್ನು ಆರ್ದ್ರತೆಯಿಂದ ಕಟ್ಟಿ ಕೊಡುವ ಹರೀಶ್ ರ ಶೈಲಿ ಲಂಕೇಶ್ ರ ‘ಅವ್ವ’ ಕವಿತೆಯನ್ನು ನೆನಪಿಸುತ್ತದೆ. ಇವರ ಕಥಾನಕ ಬಹುತೇಕ ಬಡ ಬ್ರಾಹ್ಮಣ ಕುಟುಂಬಗಳ ಹೋರಾಟದ, ಅವಮಾನಗಳನ್ನು ನೀಗಿಕೊಳ್ಳುವ ಆತ್ಮ ಚೈತನ್ಯದ ಪ್ರತೀಕವೂ ಹೌದು. ಅದೇ ಸಮಯ ‘ಬಗ್ಗಿದವರಿಗೆ ಗುದ್ದು ಜಾಸ್ತಿ’ ಎನ್ನುವಂತೆ ತಮ್ಮ ಸಜ್ಜನ ತಂದೆಯವರನ್ನು ಮಂಟಪದ ಬೇಗಡೆ ಕಟ್ಟುವುದರಿಂದ ಹಿಡಿದು ಕೂಲಿ, ಗಾರೆ ಕೆಲಸಕ್ಕೆ ಕೂಡ ಬಳಸಿಕೊಂಡು ದುಡ್ಡು ಕೊಡದೆ ಇರುತ್ತಿದ್ದ ದೊಡ್ಡವರ ಸಣ್ಣತನ, ಜಿಪುಣತನವನ್ನು ಬರೆಯುತ್ತಾರೆ. ತಮ್ಮ ತಂದೆಯವರ ಬಗ್ಗೆ ಅವರು ಬರೆಯುವ “ಅವರು ಯಾರೊಂದಿಗೂ ಜಗಳಕ್ಕೆ ನಿಲ್ಲಲಿಲ್ಲ. ಬದಲಿಗೆ ತನಗೆ ನೋವು ನೀಡಿದವರಿಗೆ ನೆರವು ನೀಡಿದರು. ತನಗೆ ಅವಮಾನಿಸಿದವರಿಗೆ ಸಂಮಾನಿಸಿದರು” ಈ ಸಾಲುಗಳು ಮನಮಿಡಿಯುವಂತಿವೆ. ಇವು ನಮ್ಮ ನಿಮ್ಮೆಲ್ಲರ ದೈನಂದಿನ ದುಗುಡವೂ ಹೌದು. ಒಳ್ಳೆಯತನ, ಮೋಸ ಹೋಗುವಿಕೆ ಎರಡರ ನಡುವಿನ ಗೆರೆ ಬಹುಶ: ತುಂಬ ತೆಳು.

ತಮ್ಮ ಅಕ್ಕನ ಹತ್ತು ವಯಸ್ಸಿನ ಎಳೆ ಮಗುವಿನ ಮರಣ, ತನ್ನ ಎರಡನೆ ಅಕ್ಕನ ಗಂಡನ ಕುತ್ತಿಗೆಯ ಮೇಲೆ ಮರದ ಕೊಂಬೆ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿ ಜೀವಚ್ಛವದಂತೆ ಆರು ತಿಂಗಳು ಬದುಕಿದ್ದ ಭಾವನವರು… ಹೀಗೆ ಮಲೆನಾಡಿನ ಸಾಂದ್ರ ವೈಭವದ ಕಾದಂಬರಿಗಳನ್ನು ಓದಿದ ನಮಗೆ ಇದೀಗ ಇನ್ನೊಂದು ಮುಖದ ಅನಾವರಣ.

toreye-torida-dari-book-back

ತಮ್ಮ ಪ್ರೀತಿಯ ದಿನಗಳು, ಸ್ನೇಹಿತರ ಬಳಗದ ತುಂಟಾಟಗಳು, ಅಜ್ಜನ ಮನೆಯ ವಾತ್ಸಲ್ಯ, ಈ ಸಂಭ್ರಮ ವಿವರಗಳೊಂದಿಗೆಯೇ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಉಡುಪಿಯ ಕಾಲೇಜೊಂದರಲ್ಲಿ ಅರೆ ಕಾಲಿಕ ಉಪನ್ಯಾಸಕರಾಗಿ ತಾವು ಅನುಭವಿಸಿದ ಸಂಕಟ, ನೋವುಗಳು, ‘ಹಿರಿಯ’ ಯು ಜಿ ಸಿ ಸ್ಯಾಲರಿ ಪಡೆಯುವ ಉಪನ್ಯಾಸಕರು ತಮ್ಮೊಂದಿಗೆ ವರ್ತಿಸಿದ ಬಗೆಗಳನ್ನು ಹೇಳಿಕೊಳ್ಳುತ್ತಾರೆ. ಪ್ರತಿ ಮಾರ್ಚ್ ಗೆ ರಿಲೀವ್ ಮಾಡಿ ಜೂನ್ ಗೆ ಪುನ: ಸಂದರ್ಶನಕ್ಕೆ ಕರೆಯುವ ಕಾಲೇಜುಗಳು, ಆ ರಜೆಯಲ್ಲಿ ಸಂಬಳವಿಲ್ಲದೆ ಇರುವುದು.. ಹೀಗೆ ‘ಉಪನ್ಯಾಸಕರು’ ಎಂಬ ದೊಡ್ಡ ಹುದ್ದೆಯಲ್ಲಿರುವ ನೈಜ ಜೀವನದ ಚಿತ್ರಣ ಸಮಕಾಲೀನ ವಿದ್ಯಾಭ್ಯಾಸ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿದೆ.

ಪ್ರಸ್ತುತ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ನೆಮ್ಮದಿಯಿಂದಿರುವ ಹರೀಶ್ ವೈಯಕ್ತಿಕವಾಗಿ ಕೂಡ ಉತ್ಸಾಹದ ಚಿಲುಮೆ. ಪ್ರೊ. ನಟರಾಜ್ ಬೆನ್ನುಡಿಯಲ್ಲಿ ಬರೆದಿರುವಂತೆ ‘ಕೃತಕತೆಯ ಲವಲೇಶವೂ ಇಲ್ಲದಿರುವುದು’ ಈ ಕೃತಿಯನ್ನು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇವರ ಬರವಣಿಗೆಗೆ ಮುನ್ನುಡಿ ಬರೆದಿರುವ ವಾಸುದೇವ ನಾಡಿಗ್ ಅಭಿಪ್ರಾಯ ಪಡುವಂತೆ ‘ಬರಹವೆಂಬ ಪುಳಕ ಮತ್ತು ನೋವಿನ ಕ್ರಿಯೆಯು ತೀರಾ ಸಹಜವಾಗಿಯೇ ಮೂಡಿ ಬರುವಾಗ ಅದೊಂದು ಪ್ರಾಮಾಣಿಕ ಕ್ರಿಯೆ . ಈ ಪ್ರಾಮಾಣಿಕತೆ ಹರೀಶ್ ರ ಬರಹದಲ್ಲಿದೆ. ತಮ್ಮ ಮುನ್ನುಡಿಯಲ್ಲಿ ಡುಂಡಿ ರಾಜ್ ಬರೆದಿರುವಂತೆ “ಸಾಮಾನ್ಯವಾಗಿ ನಿವೃತ್ತಿಯ ನಂತರ ಇಳಿ ವಯಸ್ಸಿನಲ್ಲಿ ಬರೆಯುವ ಜೀವನ ಕಥನವನ್ನು ಹರೀಶ್ ಈಗಲೇ ಬರೆದಿದ್ದಾರೆ. ಬದುಕಿನಲ್ಲಿ ಇನ್ನಷ್ಟು ಅನುಭವಗಳನ್ನು ಪಡೆದ ಮೇಲೆ ಅವರು ತಮ್ಮ ಜೀವನಕಥನದ ಎರಡನೇ ಭಾಗವನ್ನು ಇದೇ ರೀತಿ ಸ್ವಾರಸ್ಯಕರವಾಗಿ ಬರೆಯಲಿ”. ಇದು ನಮ್ಮ ಆಶಯ ಕೂಡ. ಈಗಾಗಲೇ ಎರಡು ಕವನ ಸಂಕಲನ ಹಾಗೂ ಒಂದು ಕಥಾ ಸಂಕಲನ ಬರೆದು ಪ್ರಕಟಿಸಿರುವ ಹರೀಶ್ ಈ ಕ್ಷೇತ್ರದಲ್ಲಿ ಇನ್ನೂಸಾಧಿಸಲಿ ಎಂದು ಹಾರೈಕೆ.

 

 – ಜಯಶ್ರೀ ಬಿ ಕದ್ರಿ

3 Responses

  1. H Pattabhirama Somayaji says:

    ಹರೀಶ ಹಿರೀಶ. ಯಾರಿಗಾದರೂ ಪ್ರಿಯವಾಗಬಲ್ಲವ. ನೋವನ್ನೂ ಜೀವಕಾರುಣ್ಯವೆಂದು ಎಗ್ಗಿಲ್ಲದೆ ತಿಳಿದವನು. ಈತ ಈಗ ಇರುವ ಕರಾವಳಿ ಪ್ರ-ದೇಶದಲ್ಲಿ ಇದು ದುರ್ಲಭ. ನಾನು ಆತನ ಈ ಪುಸ್ತಕದ ಮಿದುವಿಗೂ ಹದಕ್ಕೂ ನವಿರಿಗೂ ಮಾರುಹೋದುದನ್ನು ಆತನಿಗೆ ತಿಳ಼ಿಸಿದ್ದೆ. ಜಯಶ್ರೀ ಬರೆದದ್ದು ಇದೇ ಅರ್ಥ ಕೊಡುತ್ತಿದೆ; ಚೆನ್ನಾಗಿದೆ.

  2. Jayashree b kadri says:

    Thank you so much Sir. So nice of you .

  3. H Pattabhirama Somayaji says:

    ಜಯಶ್ರೀಯ ಪುಟ್ಟ ಹೆಜ್ಜೆಗಳಿಗಗೂ ಜಯದ ಮೆಟ್ಟಿಲು ಸಿಗದಿರದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: