ಹರಟೆ: ಮರೆವು
ಬೆಳಿಗ್ಗೆ ಅರ್ಜೆಂಟ್ ಅರ್ಜೆಂಟಾಗಿ ಶಾವ್ಗೆ ಬಾತ್ ಮಾಡ್ತಾ ಇದ್ದೆ, ಯಜಮಾನ್ರು ಆಫೀಸಿಗೆ ಹೋಗಬೇಕಲ್ಲ ಅಂತ. ಅದೇ ಟೈಮಿಗೆ ನಮ್ಮನೆಲಿರೋ ನಾಲ್ಕುಕಾಲಿನ ಇಬ್ಬರು ಹೆಣ್ಣು ಮಕ್ಕಳು(🐶🐕) ಜೋರಾಗಿ ಶರಂಪರ ಜಗಳ ಶುರು ಮಾಡ್ಕೊಂಡ್ರು. ಅದೇನು ಅಂತ ನೋಡಿ ಇಬ್ಬರಿಗೂ ಗದರಿ ಬೇರೆ ಬೇರೆ ರೂಮುಗಳಲ್ಲಿ ಬಿಟ್ಟು ವಾಪಸ್ ಅಡ್ಗೆಮನೆಗೆ ಬರುವ ವೇಳೆಗೆ ಪೂರಾ ಬೆಂದು ರೆಡಿಯಾಗಿತ್ತು ಶ್ಯಾವಿಗೆ ಬಾತ್.. ಸರಿ ಅಂತ ಕತ್ತರಿಸಿದ್ದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪ್ಲೇಟ್ ಗೆ ಹಾಕಿ ಶೂ ಹಾಕ್ಕೋತಾ ಇದ್ದವರನ್ನು ಕರೆದು ‘ರೀ…ತಿಂಡಿ ರೆಡಿ’ ಅಂದೆ. ‘ಇನ್ನೈದು ನಿಮಿಷ ಲೇಟ್ ಆಗಿದ್ರೂ ಆಫೀಸಿಗೆ ಹೊರಟುಬಿಡ್ತಾ ಇದ್ದೆ, ಸ್ವಲ್ಪ ಬೇಗ ಮಾಡೋಕ್ಕೇನೂ..’ ಬೈಕೊಂಡೇ ಒಂದು ಚಮಚೆ ಬಾಯಿಗಿಟ್ಟುಕೊಂಡವರು ಮುಖ ಹರಳೆಣ್ಣೆ ಕುಡಿದವರಂತೆ ಮಾಡಿದ್ರು…!
‘ಏನಾಯ್ತು…!’ ಅಂದೆ.
‘ನನ್ ಮೇಲೆ ಬೇಜಾರ್ ಇದ್ರೆ ಡೈರೆಕ್ಟಾಗಿ ಹೇಳಬೇಕು, ಅದ್ಬಿಟ್ಟು ಹೀಗಾ ಮಾಡೋದು …?’ ಅಂದವರು ನಂಗೆ ತಿಂಡಿ ಬೇಡಾಂತ ತಟ್ಟೆ ದೂಡಿ ಎದ್ದು ಹೊರಟೇ ಬಿಡೋದಾ…😡
………
ಏನಾಯ್ತಪ್ಪ ಈ ತಿಂಡಿಗೆ..! ಯೋಚನೆ ಮಾಡ್ತಾ ಬೇಸರದಿಂದ ನಾನೂ ಒಂದು ಚಮಚ ಬಾಯಿಗೆ ಇಟ್ಕೊಂಡರೆ… ಬರೀ ಉಪ್ಪು!!
ಮರೆತ್ಹೋಗಿ ಎರಡು ಬಾರಿ ಉಪ್ಪು ಹಾಕಿಬಿಟ್ಟಿದ್ದೆ..!! ಇಷ್ಟು ವರ್ಷಗಳಲ್ಲಿ ಯಾವತ್ತೂ ಹೀಗೆ ಆಗಿರ್ಲಿಲ್ಲ.. ಎಲ್ಲಾ ಹೆಣ್ಣುಮಕ್ಕಳು ಗಮನವಿಟ್ಟೇ ಅಡಿಗೆ ಮಾಡೋದು.. ಒಮ್ಮೊಮ್ಮೆ ಹೀಗಾಗುತ್ತಪ್ಪ… ಅದೇನು ಅಂತಹ ಇಂಟರ್ನ್ಯಾಷನಲ್ ತಪ್ಪಾ.. ಸ್ವಲ್ಪ ಮೊಸರೋ, ಸಕ್ರೇನೋ ಹಾಕಿಕೊಂಡು ಚೂರು ತಿಂದು ಹೋಗಕ್ಕಾಗ್ತಿರಲಿಲ್ವಾ..🙄
ಸರೀ, ನಾವೇ ನಿಧಾನವಾಗಿ ತಿಂದರಾಯಿತು ಅಂದ್ಕೊಂಡು ಸಮಾಧಾನ ಪಟ್ಕೊಂಡೆ.
ಆದರೂ ಈ ನಡುವೆ ಅದೇನು ಮರೆವು ಅಂತೀನಿ… ಒಮ್ಮೆ ಹೀಗೆ ಯಾರೋ ಪರಿಚಯದವರು ಸಿಕ್ಕು ಮಾತಾಡ್ತಾ ಇರುವಾಗ ಸಡನ್ ಆಗಿ ಅವ್ರ ಹೆಸರು ಮರ್ತು ಹೋಗಿತ್ತು. ಆಗಲೇ ಇನ್ನೊಬ್ಬ ಫ್ರೆಂಡ್ ಎಂಟ್ರಿ ಆಗಬೇಕೇ..ಇವರು ____ ಅಂತ ಪರಿಚಯ ಮಾಡಿಕೊಡೋಣ ಅಂದ್ರೆ ಆಗ್ತಿಲ್ಲ.. ಸುಮ್ನೆ ಇರೋಕೆ ದಾಕ್ಷಿಣ್ಯ. ಸಂದರ್ಭ ನಿಭಾಯಿಸಲು ಬಲು ಕಷ್ಟ ಆಗಿತ್ತಪ್ಪ.. ಮುಂದೆ ಈ ತರಹ ಆದಾಗ ‘ಮೊಬೈಲ್ ನಲ್ಲಿ ಬರ್ದೇ ಇರೋ ಕರೆ ಬರಿಸಿಕೊಂಡು ಎಮರ್ಜೆನ್ಸಿ ಕೆಲಸ ಇದೆ ಅನ್ನೋ ಹಾಗೆ ಅಭಿನಯಿಸುತ್ತಾ ಅಲ್ಲಿಂದ ಜಾಗ ಖಾಲಿ ಮಾಡೋದು’ ಅನ್ನೋ ಉಪಾಯ ರೆಡಿ ಮಾಡ್ಕೊಂಡಿದ್ದೀನಿ. ಸೂಪರ್ ಅಲ್ವಾ…ಅದು ಲಾಕ್ ಡೌನ್ ತೆರವಾದ ನಂತರವೇ.. 😊
ಏನಾದ್ರು ಬರೀತಾ ಇದ್ರೆ ಪದಗಳು ನೆನಪಿಗೆ ಬರದೆ ಒದ್ದಾಡ್ತಾ ಇರ್ತೀನಿ. ಎಷ್ಟೋಸಲ ಫೇಸ್ಬುಕ್ ಫ್ರೆಂಡ್ಸ್ ಗಳ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ಅರ್ಧ ಬರೆದು ನನಗೆ ಬೇಕಿರೋ ‘ಆ ಒಂದು’ ಪರ್ಟಿಕ್ಯುಲರ್ ಪದ ಸಿಗದೆ ಪೂರಾ ಕಾಮೆಂಟ್ ಅಳ್ಸಿರೋ ಸಂದರ್ಭಗಳಿವೆ. ಬೇರೆ ಸಮಾನಾರ್ಥಕ ಪದವೂ ನೆನಪಾಗದೆ ವಾಕ್ಯ ಪೂರ್ತಿ ಆಗದೆ ಬೇಸರ ಪಟ್ಟುಕೊಂಡಿದ್ದಿದೆ.
ಉಪವಾಸ ಇರೋ ದಿವಸ ಮರೆತು ತಿಂದುಬಿಟ್ಟಾಗ ಮಾತ್ರ ಬಹಳ ನೋವಾಗಿಬಿಟ್ಟಿತ್ತು…😔 ನನ್ನ ಮಗಳು ನಾನು ತಿನ್ನೋದು ನೋಡ್ತಾ ಇದ್ರೂ ಎಚ್ಚರಿಸದೆ ಸುಮ್ಮನಿದ್ದು ಬೈಸಿಕೊಂಡಳು.
ನಮ್ ಡಾಕ್ಟ್ರಿಗೆ ಫೋನ್ ಮಾಡಿ ‘ಇತ್ತೀಚೆಗೆ ಮರೆವು ಹೆಚ್ಚಾಗಿದೆ, ಏನಾದರೂ ಪರಿಹಾರ ಹೇಳಿ ಡಾಕ್ಟ್ರೆ’ ಅಂದರೆ ‘ಅಯ್ಯೋ ಇರಮ್ಮ.. ಮರೆತು ಯಾವ್ದೋ ಪೇಷಂಟ್ ಗೆ ಕೊಡಬೇಕಾದ ಮೆಡಿಸಿನ್ ಯಾರ್ಗೋ ಕೊಟ್ಟು ನಂದೇ ಈಗ ತಲೆನೋವಾಗಿ ಕೂತಿದೆ..!’ ಅಂತ ರೇಗಿ ಫೋನ್ ಕುಕ್ಕಿಬಿಟ್ರು..!’
ಅಂತೂ ಮರೆವು ವಿಶ್ವವ್ಯಾಪಿಯಾಗಿರೋದು ಕಂಡು ಸಮಾಧಾನ ಮಾಡ್ಕೋತಾ ಉಪ್ಪಿನಕಾಯಿ ಜೊತೆಗೆ ಉಪ್ಪಿಲ್ಲದ ಶ್ಯಾವಿಗೆ ಬಾತ್ ತಿನ್ನಲು ಕೂತೆ.
-ಜಲಜಾ ರಾವ್, ಬೆಂಗಳೂರು
ಚೆನ್ನಾಗಿತ್ತು.
ಧನ್ಯವಾದ
ಹ್ಹ…. ಹ್ಹ… ಹ್ಹ…. ಸೊಗಸಾಗಿದೆ ಲೇಖನ
ಥ್ಯಾಂಕ್ಯೂ ನಯನ
ಸೊಗಸಾಗಿ ಓದಿಸಿಕೊಂಡಿತು
ಥ್ಯಾಂಕ್ಯೂ
ಸೂಪರ್ ಆಗಿ ‘ಹರಟೆ’ ಹೊಡೆದ್ರಿ..!
ಥ್ಯಾಂಕ್ಯೂ ನಿಮ್ಮ ಪ್ರೋತ್ಸಾಹಕ್ಕೆ
ಹೌದು..ಮರೆವಿನಿಂದಾಗುವ ಎಡವಟ್ಟುಗಳನ್ನು ನೋಡಿದ್ರೆ..ಅಯ್ಯೋ!! ನಿಜವಾಗಿಯೂ ಇದು ಕಷ್ಟ ಕಣ್ರೀ.. ಏನ್ಮಾಡೋದು?..ಹಾಂ ಒಲೆ ಮೇಲೆ ಪಲ್ಯ ಹೊತ್ತೇ ಹೋಯ್ತು ನೋಡಿ..ಹಾಳು ಮರೆವು!!
ನಿಜ್ವಾಗಿಯೂ ಚೆನ್ನಾಗಿದೆ ನಿಮ್ಮ ಲೇಖನ.
ಹಹಹಾ…. ಮರೆವು ಬಹಳ ಕಷ್ಟ.
ಥ್ಯಾಂಕ್ಯೂ
ಸೂಪರ್ .ಬರಹ
ಮರೆವು ಒಂದು ಎಲ್ಲರಿಗೂ ಬರುವ ಖಾಯಿಲೆ ..ಏನೂ ಮಾಡಲಾಗದು …
ಧನ್ಯವಾದ
ಚಂದ ಇದೆ
ಮರೆವಿನ ಬಗ್ಗೆ ಎಲ್ಲರ ಅನುಭವ ಬರೆದರೆ
ಮುಗಿಯದ ಕಂತುಗಳಾಗಬಹುದೇನೋ,,
ಲೇಖನ ತುಂಬಾ ಚೆನ್ನಾಗಿ ದೆ ಮೇಡಂ
ಸೂಪರ್ ಬರಹ ಮೇಡಮ್
ಇರಿ, ನನ್ನಂತೆಯೇ ಮರೆಯುವವರು, ಇನ್ನೂ ಹಲವಾರು ಜನರು ಇದ್ದಾರೆ ಎಂದು ಸಂತಸ ಪಟ್ಟು, ನಿಮ್ಮ ಲೇಖನಕ್ಕೆ ಮೆಚ್ಚುಗೆ ಸೂಚಿಸುವುದನ್ನೇ ಮರೆಯುವ ಮುಂಚೆಯೇ ಕಾಮೆಂಟ್ಸ ಬಾಕ್ಸಿನಲ್ಲಿ ಹಾಕ ಬಿಡುತ್ತೇನೆ. ʼಮೆಚ್ಚುಗೆಯಾಯಿತು ನಿಮ್ಮ ಲೇಖನʼ
ಎಲ್ಲರ ಮರೆವಿನ ಪ್ರಸಂಗಗಳು ಹೀಗೆಯೇ
ವಂದನೆಗಳು
ನೈಜ ಘಟನೆಗಳ ಹಾಸ್ಯ ಲೇಖನ.
ಚೆನ್ನಾಗಿದೆ. ನೈಜ ಘಟನೆಗಳ ಹಾಸ್ಯ ಲೇಖನ