ರೇಡಿಯೋ ಪುರಾಣ-ಮಧುರ ನೆನಪಿನ ಖಜಾನೆ

Share Button

ಕೆಲವು ತಿಂಗಳ ಹಿಂದೆ “ರೇಡಿಯೋ ಡೇ” ಎಂದು ಆಕಾಶವಾಣಿ ತಾನು ನಡೆದುಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಆಕಾಶವಾಣಿಯಲ್ಲಿ ಕೆಲಸಮಾಡಿ ನಿವೃತ್ತರಾದವರ ಮಾತುಗಳನ್ನೂ, ಬಹಳ ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳುತ್ತಿದ್ದವರ ಅನ್ನಿಸಿಕೆಗಳನ್ನೂ, ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದವರ ಅನುಭವದ ನುಡಿಗಳನ್ನೂ ಅನೇಕ ದಿನಗಳವರೆಗೆ ಪ್ರಸಾರ ಮಾಡಿತು. ಅದನ್ನು ಕೇಳುತ್ತಾ ನನ್ನ ನೆನಪಿನ ಸುರುಳಿ ಬಿಚ್ಚಿಕೊಂಡಿತು. ಅದು ಮಧುರನೆನಪಿನ ಧಾರಾವಾಹಿಯಾಗಿರುವುದು ಅಚ್ಚರಿಯನ್ನುಂಟು ಮಾಡಿತು. ಇಂತಹುದೇ ಸುಮಧುರ ನೆನಪಿನ ಸುರುಳಿ ನಮ್ಮ ನಿಮ್ಮೆಲ್ಲರದೂ ಹೌದು. ಅದನ್ನು ಹಂಚಿಕೊಳ್ಳುವಾ ಎಂದು ನನ್ನ ನೆನಪುಗಳನ್ನು ಸಾಧ್ಯವಾದಷ್ಟು  ಹಿಂದಕ್ಕೆ ಕಳುಹಿಸಿದಾಗ ಮನಸ್ಸಿಗೆ ಬಂದದ್ದು ಅಮ್ಮ ಬೆಳಿಗ್ಗೆ ನಸುಕಿನಲ್ಲಿ ವೆಂಕಟೇಶ್ವರ ಸುಪ್ರಭಾತ, ಮುಕುಂದಮಾಲೆಗಳನ್ನು ಹೇಳಿಕೊಳ್ಳುತ್ತಾ ಮೊಸರು ಕಡೆಯುತ್ತಿದ್ದ ನಾದ ನನ್ನನ್ನು ನಿದ್ರೆಯಿಂದ ಎಚ್ಚರಿಸುತ್ತಿದ್ದದ್ದು ಮತ್ತೆ ರೇಡಿಯೋದಿಂದ “ಏಳುತ್ತಾ ಕೈ ಮುಗಿವೇ” ಎಂದೋ “ಏಳು ನಾರಾಯಣ, ಏಳು ಲಕ್ಷ್ಮೀರಮಣ” ಎಂದೋ ಕಂಚಿನ ಕಂಠದ ಭಕ್ತಿಭಾವದ ಗೀತಾರಾಧನೆಯ ಗೀತೆ ನಿದ್ರೆಯ ಜಡತೆಯನ್ನು ಕಳೆಯುತ್ತಿದ್ದದ್ದು. ಇದು ನಾನು ಎರಡನೆಯ ತರಗತಿ ಓದುತ್ತಿದ್ದ ಕಾಲ. ನಮ್ಮ ಮನೆಯಲ್ಲಿ ಆ ವೇಳೆಗೆ ಆ ಕಾಲಕ್ಕೆ ದೊಡ್ಡದು ಎಂದು ಹೇಳಬಹುದಾದ ಜನೆರಲ್ ಎಲೆಕ್ಟ್ರಿಕ್ ಕಂಪೆನಿಯ, ಇವತ್ತಿನ ಮಿನಿ ಟಿ.ವಿ.ಯನ್ನು ಹೋಲುವ ಒಂದುವರೆ ಅಡಿ ಗಾತ್ರದ ರೇಡಿಯೋ ಇತ್ತು. ಅದು ನಮ್ಮಂಥ ತುಂಟ ಮಕ್ಕಳ ಕೈಗೆ ಸಿಗಬಾರದು ಎಂದು ಗೋಡೆಗೆ ಜೋಡಿಸಿದ್ದ ಸ್ಟಾಂಡ್ ಮೇಲೆ ಎತ್ತರದಲ್ಲಿ ಇಟ್ಟಿದ್ದರು. ಅದನ್ನು ಅಪ್ಪ ಮಾತ್ರ ಆಪರೇಟ್ ಮಾಡುತ್ತಿದ್ದರು. ಅವರು ಬಹಳಮಟ್ಟಿಗೆ ಭಕ್ತಿ ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ಕೇಳುತ್ತಿದ್ದರು.

ರೇಡಿಯೋ ಇಟ್ಟಿದ್ದ ಸ್ಟಾಂಡಿಗೆ ಸಮೀಪದಲ್ಲಿದ್ದ ಕಿಟಕಿಯನ್ನು ಹತ್ತಿ ರೇಡಿಯೋ ಒಳಗೆ ಯಾರು ಕುಳಿತು ಹಾಡುತ್ತಿದ್ದಾರೆ ಎಂದು ರೇಡಿಯೋ ಹಿಂಭಾಗಕ್ಕೆ ಇಣುಕಿ ಇಣುಕಿ ನೋಡುವ ಪ್ರಯತ್ನ ಮಾಡುತ್ತಿದ್ದದ್ದು ನೆನಪಾಗಿ ನಗು ಬರುತ್ತದೆ. ಹಾಗೆ ಮಾಡುವುದರ ಬದಲಿಗೆ ಅಪ್ಪನನ್ನೇ ಕೇಳಬಹುದಿತ್ತು. ಹಾಗೆ ಮಾಡಿದ್ದರೆ ರೇಡಿಯೋ ಒಳಗೆ ಯಾರಿದ್ದಾರೆನ್ನುವ ಶೋಧದ ಸ್ವಾರಸ್ಯವೇ ಕೆಟ್ಟುಹೋಗುತ್ತಿತ್ತು, ಅಲ್ಲವೇ! ರೇಡಿಯೋ ಒಳಗೆ ಯಾರಿದ್ದಾರೆನ್ನುವುದು ಪತ್ತೆಯಾಗದಿದ್ದರೂ ಅವರಂತೆ ನಾನೂ ಸಂಗೀತಗಾರ್ತಿ ಆಗಬೇಕೆನ್ನುವ ಆಸೆಯನ್ನಂತೂ ಅದು ಹುಟ್ಟು ಹಾಕಿತು. ಆಗ ನಾವು ನಮ್ಮ ಅಜ್ಜಿ (ತಾಯಿಯ ತಾಯಿ) ಇದ್ದ ಕೋಲಾರದಲ್ಲಿ ಇದ್ದೆವು. ಅಜ್ಜಿಯ ಮನೆಯ ಹತ್ತಿರ ಒಬ್ಬರು ಪಿಟೀಲು ನುಡಿಸುವವರು ಇದ್ದರು. ಅವರು ಪಿಟೀಲು ನುಡಿಸುವುದನ್ನು ಹೇಳಿಕೊಡುವುದರ ಜೊತೆಗೆ ಬಾಯಿಹಾಡುಗಾರಿಕೆಯನ್ನೂ ಕಲಿಸುತ್ತಿದ್ದರು. ಅಜ್ಜಿಯ ಮನೆಗೆ ಹೋಗುತ್ತಾ ಬರುತ್ತಾ ಅದನ್ನು   ಕೇಳಿಸಿಕೊಳ್ಳುತ್ತಿದ್ದೆ. ಮನೆಗೆ ಬಂದಮೇಲೆ ಹಿಂದಿನ ಕಾಲದ ಮಡಚಲಾಗದ ದೊಡ್ಡ ಛತ್ರಿಯ ಅಡಿಯಲ್ಲಿ ಕುಳಿತು ಅದರ ಉದ್ದದ ಹಿಡಿಕೆಯನ್ನೇ ಪಿಟೀಲನ್ನಾಗಿ ಕಲ್ಪಿಸಿಕೊಂಡು ಅದರ ಮೇಲೆ ಕೈಯಾಡಿಸುತ್ತಿದ್ದೆ. ಅದನ್ನು ಒಮ್ಮೆ ನೋಡಿದ ಅಪ್ಪ ದೊರೆಸ್ವಾಮಿ ಐಯ್ಯಂಗಾರರ ಹತ್ತಿರ ಸಂಗೀತ ಕಲಿಸೋಣವೆಂದು ಆಶ್ವಾಸನೆ ಕೊಟ್ಟರು! (ಮೈಸೂರಿನಲ್ಲಿದ್ದ ತಮ್ಮ ಅಕ್ಕ ಭಾವನ ಮನೆಯಲ್ಲಿದ್ದುಕೊಂಡು ಅಪ್ಪ ಬಿ.ಎಸ್.ಸಿ (ಗಣಿತ) ಆನರ್ಸ್ ಓದುತ್ತಿದ್ದಾಗ ದೊರೆಸ್ವಾಮಿ ಐಯ್ಯಂಗಾರರು ಅಪ್ಪನ ಆತ್ಮೀಯ ಸಹಪಾಠಿ)

 

ರೇಡಿಯೋದಲ್ಲಿ ಬರುತ್ತಿದ್ದ ಬೆಳಗಿನ ಒಂಬತ್ತು ಗಂಟೆಯ ಮಕ್ಕಳ ಕಾರ್ಯಕ್ರಮಗಳನ್ನು(ಬಾಲ ಜಗತ್) ನಮಗೆ, ಮಧ್ಯಾಹ್ನ ಹನ್ನೆರಡು ಗಂಟೆಯ ಮಹಿಳೆಯರಿಗಾಗಿ ಇದ್ದ ಕಾರ್ಯಕ್ರಮಗಳನ್ನು(ವನಿತಾ ವಿಹಾರ) ಅಮ್ಮನಿಗೆ ಅಪ್ಪ ಕೇಳಿಸುತ್ತಿದ್ದರು. ಆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ನಾಗಮ್ಮ, ನಿರ್ಮಲಾದೇವಿಯರ ಮಧುರವಾದ ಮತ್ತೆ ಆತ್ಮೀಯವಾದ ಧ್ವನಿಯ ನೆನಪು ಈಗಲೂ ಸಂತೋಷವನ್ನುಂಟುಮಾಡುತ್ತದೆ. ಮುಂದೆ ನಾನು ಗೃಹಿಣಿಯಾಗಿ, ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಚಿತ್ರದುರ್ಗದ ಬಳಿಯ ಸಿರಿಗೆರೆಯಲ್ಲಿ ಇದ್ದಾಗ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗಿಯಾಗಲು ಬೇಕಾದ ಅರ್ಜಿಯನ್ನು ನನ್ನ ಮಗಳಿಗಾಗಿ ಪಡೆಯಲು ಚಿತ್ರದುರ್ಗದ ಎಫ್.ಎಂ. ಆಕಾಶವಾಣಿಗೆ ಹೋಗಿದ್ದೆ. ಅಲ್ಲಿ ಎ.ಎಸ್.ಡಿ.ಯಾಗಿದ್ದ ನಿರ್ಮಲಾದೇವಿಯವರನ್ನು ಆಕಸ್ಮಿಕವೆನ್ನುವಂತೆ ಅನಿರೀಕ್ಷಿತವಾಗಿ ನೋಡಿದೆ. ಅವರ ಧ್ವನಿಯನ್ನು ಮಾತ್ರ ಕೇಳಿದ್ದ ನನಗೆ ಅವರನ್ನು ನೋಡಿ ಬಹಳ ಸಂತೋಷವಾಯಿತು. ಅವರ ಧ್ವನಿ ಹಿಂದಿನ ಹಾಗೆಯೇ ಇತ್ತು. ಅದು ನನ್ನ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿತ್ತು.

ನಿರ್ಮಲಾದೇವಿಯವರು ನನ್ನನ್ನು ಅವರ ಮುಂದೆ ಕೂಡಿಸಿಕೊಂಡರು. ಕಾರ್ಯಕ್ರಮ ನಡೆಸಿಕೊಡುವಾಗ ಯಾವ ಮಧುರವಾದ, ಆತ್ಮೀಯವಾದ ಭಾವದಲ್ಲಿ ಮಾತಾಡುತ್ತಿದ್ದರೋ ಅದೇ ರೀತಿ ಮಾತಾಡಿಸಿದರು. ಕೊನೆಯಲ್ಲಿ ಅವರ ಸಹೋದ್ಯೋಗಿ ಉಷಾಲತಾರವರನ್ನು ಕರೆದು ಇವರಿಗೆ ಟಾಕ್ ಗೆ ಕಾಂಟ್ರಾಕ್ಟ್ ಕೊಡಿ ಎಂದರು. ನನಗೆ ಆಶ್ಚರ್ಯವಾಯಿತು. ನಾನು ಅವರಿಗೆ ಯಾವ ರೀತಿಯಲ್ಲೂ ಪರಿಚಿತಳಲ್ಲ. ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿಷಯ ನಮ್ಮ ನಡುವಿನ ಮಾತುಕತೆಯಲ್ಲಿ ಬಂದಿರಲಿಲ್ಲ. ಅವರೊಂದಿಗಿನ ಮಾತುಕತೆಯಲ್ಲಿ ಅವರಿಗೆ ನನ್ನ ಬಗ್ಗೆ ಏನು ಹೊಳೆಯಿತೋ ಗೊತ್ತಿಲ್ಲ. ನಾನು ಹುಡುಕಿಕೊಂಡು ಹೋದ ಅರ್ಜಿ ಕೊಡಲು ಅವರಿಗೆ ಅವಕಾಶವಿರಲಿಲ್ಲ. ಅದನ್ನು ಭದ್ರಾವತಿಯಂತಹ ಇಡೀ ದಿನ ಕಾರ್ಯಕ್ರಮ ನಿರ್ವಹಿಸುವ ಆಕಾಶವಾಣಿಯಿಂದಲೇ ಪಡೆಯಬೇಕಿತ್ತು. ಅಂದುಕೊಂಡದ್ದು ಆಗದಿದ್ದರೂ ಅಂದು ಊರಿದ ಆಕಾಶವಾಣಿಯ ನಂಟು ಈಗಲೂ “ಸುಮಧುರ”ವಾಗಿಯೇ ಇದೆ. ಮುಂದೆ ಚಿತ್ರದುರ್ಗ ಆಕಾಶವಾಣಿಯ ಎಲ್ಲಾ ವಿಭಾಗದ ಕಾರ್ಯಕ್ರಮ ನಿರ್ವಾಹಕರು, ಇಂಜನಿಯರನ್ನು ಹೊರತುಪಡಿಸಿ, ನಮಗೆ ಆತ್ಮೀಯ ಸ್ನೇಹಿತರು ಎನ್ನುವುದಕ್ಕಿಂತ ನಮ್ಮ ಮನೆಯ ಜನರೇ ಆಗಿಬಿಟ್ಟರು ಎನ್ನುವುದನ್ನು ಮರೆಯುವಂತಿಲ್ಲ.

ಕೋಲಾರದಲ್ಲಿದ್ದಾಗ ಶಾಲೆಗೆ ರಜೆ ಇದ್ದ ದಿನಗಳಲ್ಲಿ ಸುತ್ತಮುತ್ತ ಇದ್ದ ಮಕ್ಕಳೆಲ್ಲಾ ಸೇರಿ ಸ್ವಲ್ಪ ದೂರವಿದ್ದ ಪಾರ್ಕಿಗೆ ಸಂಜೆ ಆಟವಾಡಲು ಹೋಗುತ್ತಿದ್ದೆವು. ಅಲ್ಲಿ ರೇಡಿಯೋದ ಕಾರ್ಯಕ್ರಮಗಳನ್ನು ದೊಡ್ಡದಾಗಿ ಕೇಳಿಸುವ ವ್ಯವಸ್ಥೆ ಇತ್ತು. ಬೀಗ ಹಾಕಿದ್ದ ಕೊಠಡಿಯಲ್ಲಿ ರೇಡಿಯೋ ಇರುತ್ತಿತ್ತು. ಆ ಕೊಠಡಿಯ ಆಚೆ ಮೇಲ್ಭಾಗದಲ್ಲಿ ಧ್ವನಿಯನ್ನು ಏರಿಸುವ ಮೈಕ್ರೊಫೋನ್ ಎರಡು ವಿರುದ್ಧ ದಿಕ್ಕುಗಳಲ್ಲಿ ಇತ್ತು. ನಾವು ಕೇಳಿದುದೆಲ್ಲಾ ಗೀತೆಗಳೇ. ಅದು ಯಾವ ಭಾಷೆಯೆಂಬುದೂ ನೆನಪಿಲ್ಲ, ಯಾವ ಆಕಾಶವಾಣಿಯ ಪ್ರಸಾರವಾಗಿತ್ತೆಂಬುದೂ ಗೊತ್ತಿಲ್ಲ. ಸಂಜೆಯ ಹೊತ್ತು ಆರಾಮಾಗಿ ಕಾಲ ಕಳೆಯಬೇಕೆಂದು ನಮ್ಮ ಹಾಗೆ ಪಾರ್ಕಿಗೆ ಬರುತ್ತಿದ್ದ ಮಧ್ಯ ವಯಸ್ಕರು, ಹಿರಿಯರು ರೇಡಿಯೋದ ಹಾಡಿಗೆ ತಲೆದೂಗುತ್ತಾ ಪಾರ್ಕಿನಲ್ಲಿದ್ದ ಬೆಂಚುಗಳ ಮೇಲೆ ಕುಳಿತಿರುತ್ತಿದ್ದರು. ನಮ್ಮ ಆಟದ ಗದ್ದಲ ಹೆಚ್ಚಾಗಿ ರೇಡಿಯೊ ಧ್ವನಿ ಕೇಳದಂತಾದಾಗ ನಮ್ಮನ್ನು ಗದರಿಕೊಳ್ಳುತ್ತಿದ್ದದ್ದು ಮಾತ್ರ ನೆನಪಿದೆ.

ನಮ್ಮ ಬಂಧುಗಳೊಬ್ಬರ ಮನೆಯಲ್ಲಿ ಮಧ್ಯಮಗಾತ್ರದ ಮರ್ಫಿ ರೇಡಿಯೋ ಇತ್ತು. ಅದನ್ನು ಮುಟ್ಟಲು ಮಕ್ಕಳಿಗೆ ನಿಷೇಧವಿರಲಿಲ್ಲ. ಪಕ್ಕದ ಬೀದಿಯಲ್ಲಿದ್ದ ಅವರ ಮನೆಗೆ ನಾನು, ನನ್ನ ತಂಗಿ ಶಾಲೆ ಮುಗಿದ ಮೇಲೆ ಆಡಲು ಹೋಗುತ್ತಿದ್ದೆವು. ಅವರ ಮನೆಯ ಮುಂದೆ ಕಲ್ಲು ಚಪ್ಪಡಿ ಹಾಸಿದ್ದ ಒಂದು ದೊಡ್ಡ ಅಂಗಳವಿತ್ತು. ಅವರಿಗೆ ಹೈಸ್ಕೂಲಿಗೆ ಹೋಗುತ್ತಿದ್ದ ಮಗಳು ಇದ್ದಳು. ಅವಳಿಗೆ ನಾಟಕ ಕೇಳುವುದು ಇಷ್ಟವಾಗುತ್ತಿತ್ತು. ಅವಳು ರೇಡಿಯೋ ಹಾಕಿದಾಗ ಕತ್ತಲಾಗಿದ್ದರೂ ನಾವು ಅದನ್ನು ಮನಸ್ಸಿಗೆ ತಂದುಕೊಳ್ಳದೆ ನಾಟಕ ಕೇಳುತ್ತಾ ಸ್ವಲ್ಪ ಎತ್ತರವಿದ್ದ ಗೂಡಿನಲ್ಲಿರುತ್ತಿದ್ದ ರೇಡಿಯೋ ಮುಂದೆ ನಿಂತುಬಿಡುತ್ತಿದ್ದೆವು. ಪಾತ್ರಗಳ ಭಾವವೆಲ್ಲಾ ನಮ್ಮದೇ ಆಗಿರುತ್ತಿತ್ತು. ದುಃಖದ ಸಂದರ್ಭದಲ್ಲಿ ನನ್ನ ತಂಗಿ ಒಮ್ಮೊಮ್ಮೆ ಗಳಗಳನೆ ಅತ್ತುಬಿಡುತ್ತಿದ್ದಳು. ಇಂತಹ ನಾಟಕವನ್ನೆಲ್ಲಾ ಕೇಳಿದ ಮೇಲೆ ಅದರಂತೆ ನಾವೇ ಸಂಭಾಷಣೆಯನ್ನು ಕಲ್ಪಿಸಿಕೊಂಡು ಅಮ್ಮನ ಸೀರೆಯನ್ನು ರಂಗಪರದೆಯನ್ನಾಗಿಸಿಕೊಂಡು ನಾಟಕವಾಡುತ್ತಿದ್ದೆವು.

ನಾವು ಇದ್ದದ್ದು ನಾಲ್ಕು ಮನೆಗಳಿದ್ದ ಒಂದು ವಠಾರದಲ್ಲಿ. ಆ ಮನೆಗಳಲ್ಲಿದ್ದ ಮಕ್ಕಳೇ ನಮ್ಮ ಪ್ರೇಕ್ಷಕರು. ಮುಂದೆ ಮಾಧ್ಯಮಿಕ ಶಾಲೆಗೆ ಸೇರಿದಾಗ ನಮ್ಮ ಬಂಧುಗಳ ಮಕ್ಕಳೆಲ್ಲಾ ಸೇರಿ ನಮ್ಮ ಅಜ್ಜಿಯ ಮನೆಯಲ್ಲಿ “ನೆಹರೂ ಬಂದ ದಿನ” ನಾಟಕವನ್ನು ಅರ್ಧ ಆಣೆ ಟಿಕೆಟ್ ಇಟ್ಟು ಆಡಿದೆವು. ರಾಷ್ಟ್ರೀಯ ನಿಧಿಗೆ ಆ ಹಣವನ್ನು ಕೊಡುವ ಉದ್ದೇಶವಿತ್ತು. ಆ ದಿನಗಳು ಚೌ ಎನ್ ಲಾಯ್ ನೇತೃತ್ವದಲ್ಲಿ ಚೈನಾ ಭಾರತದ ಮೇಲೆ ಧಾಳಿ ಮಾಡಿದ ದಿನಗಳಾಗಿದ್ದವು. ಆ ಹಣಕ್ಕೆ ಅಮ್ಮನಿಂದ ಇನ್ನಷ್ಟು ಹಣ ಪಡೆದು ಐದು ರೂಪಾಯಿಗಳನ್ನು ಒಟ್ಟುಮಾಡಿ ನಿಧಿಗೆ ಕೊಟ್ಟೆವು. ಇದಕ್ಕೆ ಆಕಾಶವಾಣಿ ಪ್ರಸಾರ ಮಾಡುತ್ತಿದ್ದ ದೇಶಭಕ್ತಗೀತೆಗಳೇ ಪ್ರಮುಖ ಪ್ರೇರಣೆ.

ಆ ದಿನಗಳಲ್ಲಿ ನಮ್ಮ ಇಂಗ್ಲಿಷ್ ಕಲಿಕೆ ಐದನೇ ತರಗತಿಗೆ ಸೇರಿದ ನಂತರ ಆರಂಭವಾಗುತ್ತಿತ್ತು. ಅಪ್ಪ, ಅಮ್ಮನಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಿತ್ತು. ನಾವೂ ಹಾಗೆಯೇ ಆಗಬೇಕೆಂಬುದು ಅವರ ಆಸೆ. ಅಪ್ಪ ರಾತ್ರಿ ಇಂಗ್ಲಿಷ್ ವಾರ್ತೆ ಕೇಳುವಾಗ ನನ್ನನ್ನು ಮತ್ತು ಅಕ್ಕನನ್ನು ಜೊತೆಗೆ ಇಟ್ಟುಕೊಳ್ಳುತ್ತಿದ್ದರು. ಭಾಷೆ ಅಪರಿಚಿತ, ಕೇಳಿಬರುವುದು ನಾಲ್ಕು ಅಡಿ ಎತ್ತರದ ಸ್ಟಾಂಡ್ ಮೇಲಿದ್ದ ರೇಡಿಯೋನಿಂದ ! ಶಬ್ದಗಳು ಕಿವಿಯ ಮೇಲೆ ಬೀಳುತ್ತಿದ್ದವು ಅಷ್ಟೇ! ಆದರೆ ನಮಗೆ ಪರಿಚಿತವಾಗಿದ್ದ ಕನ್ನಡ, ತೆಲುಗು, ತಮಿಳಿನಂತಹ ಭಾಷೆಗಿಂತ ಭಿನ್ನವಾದ ಈ ಇಂಗ್ಲಿಷ್ ಭಾಷೆಯನ್ನು ಉಚ್ಚರಿಸುತ್ತಿದ್ದ ರೀತಿ ವಿಚಿತ್ರ ಎನ್ನಿಸುತ್ತಿದ್ದರೂ ಅದನ್ನು ಅನುಕರಿಸಬೇಕೆನ್ನುವ ಆಕರ್ಷಣೆಯನ್ನು ಹುಟ್ಟಿಸುತ್ತಿತ್ತು. (ನನ್ನ ಮಕ್ಕಳು ಆಗಾಗ ಅಮ್ಮನದು ಆಕ್ಸ್ ಫರ್ಡ್ ಇಂಗ್ಲಿಷ್ ಎಂದು ಹಾಸ್ಯ ಮಾಡುತ್ತಿರುತ್ತಾರೆ.) ರೇಡಿಯೋ ಮೂಲಕ ಇಂಗ್ಲಿಷಿನ ಗಂಧಗಾಳಿಯೂ ತಾಗದಿದ್ದರೂ ಹಿಂದೀ ಭಾಷೆಯ ಗತಿಯನ್ನು ಅಲ್ಪ ಸ್ವಲ್ಪ ಅರ್ಥಮಾಡಿಕೊಳ್ಳಲು ರೇಡಿಯೋ ಸಹಾಯ ಮಾಡಿತು. ಆಗ ಇಂಗ್ಲಿಷಿನ ಜೊತೆಗೆ ಹಿಂದಿಯನ್ನೂ ಕಲಿಯಬೇಕಿತ್ತು.

ರೇಡಿಯೋ ಪ್ರಸಾರ ಮಾಡುತ್ತಿದ್ದ ಹಿಂದೀ ಪಾಠಗಳು ವ್ಯಾಕರಣ ಪ್ರಧಾನವಾಗಿರುತ್ತಿತ್ತು. ಯಾವುದು ಸ್ತ್ರೀ ಲಿಂಗ, ಯಾವುದು ಪುಲ್ಲಿಂಗ ಎಂಬುದನ್ನು ಹೆಚ್ಚು ಹೆಚ್ಚು ಪದಗಳ ಬಳಕೆಯ ಮಾಹಿತಿಯಿಂದಲೇ ಗೊತ್ತುಮಾಡಿಕೊಳ್ಳಬೇಕಾಗುತ್ತದೆ ಎಂದು ಪಾಠಗಳು ಹಿಂದೀ ಭಾಷೆಯ ಪದಗಳನ್ನು ಸಾಕಷ್ಟು ಪರಿಚಯಿಸುತ್ತಿದ್ದವು. ವಿಭಕ್ತಿ ಪ್ರತ್ಯಯಗಳ ಬಳಕೆ, ಬೇರೆ ಬೇರೆ ಕಾಲಗಳಲ್ಲಿ ಪದ ಪಡೆಯುವ ರೂಪಾಂತರ ಮೊದಲಾದವುಗಳನ್ನೆಲ್ಲಾ ಪಾಠಗಳು ಅರ್ಥಮಾಡಿಸುತ್ತಿದ್ದವು. ಹೈಸ್ಕೂಲಿಗೆ ಸೇರಿದ ಮೇಲೆ ಹಿಂದೀ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಮ್ಮ ಹಿಂದೀ ಟೀಚರ್ ಒತ್ತಾಯಿಸುತ್ತಿದ್ದರು. ಅಮ್ಮನಿಗೂ ವಿಶಾರದ ಪರೀಕ್ಷೆಯವರೆಗಿನ ಹಿಂದೀ ಪಾಠಗಳು ಆಗಿದ್ದವು. ಪರೀಕ್ಷೆಗೆ ಸಿದ್ಧರಾಗಲು ರೇಡಿಯೋ ಪಾಠಗಳು ಸಹಾಯ ಮಾಡಿದವು.

ರೇಡಿಯೋದ ಮೊದಲ ಆಕರ್ಷಣೆ ಅದರಲ್ಲಿ ಕೇಳಿಬರುತ್ತಿದ್ದ ಶಾಸ್ತ್ರೀಯ ಸಂಗೀತವೇ. ಬಾಲಮುರಳಿ, ಸುಬ್ಬಲಕ್ಷ್ಮಿ, ಪಟ್ಟಮ್ಮಾಳ್, ವಸಂತಕುಮಾರಿ, ರಾಧಾ ಜಯಲಕ್ಷ್ಮಿ, ಜಿ.ಎನ್.ಬಿ., ರಮಣಿ, ಮಹಾಲಿಂಗಂ, ಲಾಲ್ ಗುಡಿ, ಚಿಟ್ಟಿಬಾಬು, ಬೇಬಿ ಗಾಯತ್ರಿ, ಭೀಮಸೇನ್ ಜೋಷಿ, ಸವಾಯಿ ಗಂಧರ್ವ, ಫಲುಸ್ಕರ್, ಚೌರಾಸಿ ಮುಂತಾದ ಘನ ವಿದ್ವಾಂಸರ ಸಂಗೀತವನ್ನು ರೇಡಿಯೊ ಇಂಪಾಗಿ ಕೇಳಿಸುತ್ತಿತ್ತು. ಸಾಕಷ್ಟು ಸಮಯವನ್ನು ಸಂಗೀತಕ್ಕಾಗಿ ಮೀಸಲಿರಿಸುತ್ತಿತ್ತು. ಸಂಗೀತವನ್ನು ತಪ್ಪದೇ ಕೇಳುತ್ತಿದ್ದ ನನಗೆ ಒಂದು ದಿನ ಈಗ ಆರ್. ಕೆ. ರಾಮನಾಥನ್ ಅವರ ಹಾಡುಗಾರಿಕೆ ಎನ್ನುವುದು ಕೇಳಿ ಕಿವಿ ನೆಟ್ಟಗಾಯಿತು. ನಾವಾಗ ತುಮಕೂರಿನಲ್ಲಿದ್ದೆವು. ನಾನು ಪಿ.ಯು.ಸಿ. ವಿದ್ಯಾರ್ಥಿನಿ. ಹಾಡಿದವರು ನನ್ನ ಇಂಗ್ಲಿಷ್ ಅಧ್ಯಾಪಕರು. ಇಂಗ್ಲಿಷಿಗೂ ನಮ್ಮ ಶಾಸ್ತ್ರೀಯತೆಗೂ ಸಂಬಂಧವನ್ನು ಕಲ್ಪಿಸದಿದ್ದ ನನ್ನ ಮನಸ್ಸು ನನ್ನ ಇಂಗ್ಲಿಷ್ ಅಧ್ಯಾಪಕರ ಹಾಡುಗಾರಿಕೆ ಕೇಳಿ ಬೆಕ್ಕಸಬೆರಗಾಯಿತು. ಮಾರನೇ ದಿನ ಕಾಲೇಜಿಗೆ ಹೋದಾಗ ಅವರನ್ನು ನೋಡುವ ದೃಷ್ಟಿಯಲ್ಲಿ ಒಂದು ರೀತಿಯ ಧನ್ಯತಾ ಗೌರವಭಾವ ಬೆರೆತಿತ್ತು. ಹೆದರಿಕೊಂಡೇ ನಿಮ್ಮ ಸಂಗೀತ ಕೇಳಿದೆ ಸರ್ ಎಂದು ಹೇಳಿಯೇ ಬಿಟ್ಟೆ. ಅವರು ನಕ್ಕು ಸ್ಟಾಫ್ ರೂಮಿಗೆ ಹೋದರು. ಇಂತಹುದೊಂದು ಸಂದರ್ಭ ಸೃಷ್ಟಿಯಾದದ್ದು ರೇಡಿಯೋ ಇಂದಲೇ. ಆಗ ಅಧ್ಯಾಪಕರು ಸುಲಭವಾಗಿ ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿರಲಿಲ್ಲ. ಅವರನ್ನು ಮಾತನಾಡಿಸುವುದು ಕಷ್ಟಸಾಧ್ಯವಾಗಿತ್ತು. ದೂರಾಂತರವನ್ನು ಕಾಯ್ದುಕೊಳ್ಳುತ್ತಿದ್ದರು.

ನಾವು ಕೇಳುತ್ತಿದ್ದದ್ದು ಬೆಂಗಳೂರು ಆಕಾಶವಾಣಿ ಪ್ರಸಾರ ಮಾಡುತ್ತಿದ್ದ ಕಾರ್ಯಕ್ರಮಗಳನ್ನು ಮಾತ್ರ. ನಾನು ನನ್ನ ತಂಗಿ ಕರ್ನಾಟಕ ವಿಶ್ವವಿದ್ಯಾಲಯದ ದೂರಶಿಕ್ಷಣದಲ್ಲಿ ಎಂಎ ಓದುತ್ತಿದ್ದಾಗ ಪರೀಕ್ಷೆ ಬರೆಯಲು ಧಾರವಾಡಕ್ಕೆ ಹೋಗಿದ್ದೆವು. ಸಂಜೆ ಬೇಸರವಾಗುತ್ತಿತ್ತು. ಅಲ್ಲಿ ಧಾರವಾಡ ಆಕಾಶವಾಣಿ ಮಾತ್ರ ಕೇಳಬಹುದಾಗಿತ್ತು. ಮತ್ತೆ ಆ ಸಮಯದಲ್ಲಿ ರೇಡಿಯೋದಲ್ಲಿ ಕೇಳಬಹುದಾದದ್ದು ರೈತರಿಗಾಗಿ ಪ್ರಸಾರವಾಗುತ್ತಿದ್ದ ಕೃಷಿ ಕಾರ್ಯಕ್ರಮಗಳೇ. ಅದನ್ನೇ ಕೇಳಿದರಾಯಿತು ಎಂದು ರೇಡಿಯೋ ಹಾಕುತ್ತಿದ್ದೆವು. ಕಾರ್ಯಕ್ರಮ ನಡೆಸುವವರು ಕುಶಲೋಪರಿಯಲ್ಲಿ ಮಾತಾಡುತ್ತಾ ಜನಸಾಮಾನ್ಯ ಕೃಷಿಕರ ಜೀವನಗಾಥೆಯನ್ನು ಬಿಚ್ಚಿಡುತ್ತಿದ್ದದ್ದು, ಕಷ್ಟಸುಖ ಹಂಚಿಕೊಳ್ಳುತ್ತಿದ್ದದ್ದು ಮಾತುಕತಯ ಸಹಜತೆಯಿಂದಾಗಿ ಆಕರ್ಷಕವಾಗಿ ತೋರುತ್ತಿತ್ತು. ನಮ್ಮಿಬ್ಬರ ಪರೀಕ್ಷೆಗಳು ಬೇರೆ ಬೇರೆ ದಿನಗಳಲ್ಲಿತ್ತು, ಒಂದು ಪೇಪರ್ ಪರೀಕ್ಷೆಗೂ ಇನ್ನೊಂದಕ್ಕೂ ಎರಡು ಮೂರು ದಿನಗಳ ಅಂತರವೂ ಇತ್ತು. ಹೀಗಾಗಿ ನಾವು ಸುಮಾರು 20-25ದಿನಗಳೇ ಧಾರವಾಡದಲ್ಲಿದ್ದೆವು. ನಿಧಾನವಾಗಿ ಕೃಷಿ ಕಾರ್ಯಕ್ರಮ ಅದರ ಪ್ರಾಯೋಗಿಕ ಕೃಷಿ-ವಿವರಗಳಿಂದ ಕೃಷಿಕರಲ್ಲದ ನಮಗೂ ಇಷ್ಟವಾಯಿತು. ಆ ವಿವರಗಳು ಹೈಸ್ಕೂಲಿನಲ್ಲಿ ಓದಿದ್ದ ಸಾಮಾನ್ಯ ವಿಜ್ಞಾನದ ಪಾಠಗಳ ಮುಂದುವರಿಕೆಯಾಗಿತ್ತು.

60ರ ದಶಕದಲ್ಲಿ ರೇಡಿಯೋ ಇಟ್ಟುಕೊಂಡವರು ಪ್ರತಿವರ್ಷ ಐದು ರೂಪಾಯಿಗಳನ್ನು ಪೋಸ್ಟ್ ಆಫೀಸಿನಲ್ಲಿ ಕಟ್ಟಿ ರೇಡಿಯೋ ಇಟ್ಟುಕೊಳ್ಳುವ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕಿತ್ತು. ನಾನು ಹೋಗುತ್ತಿದ್ದ ಹೈಸ್ಕೂಲಿಗೆ ಪೋಸ್ಟ್ ಆಫೀಸ್ ಹತ್ತಿರದಲ್ಲಿತ್ತು. ನಮ್ಮ ಶಾಲೆ ಬೆಳಿಗ್ಗೆ 7ರಿಂದ 12ರ ವರೆಗೆ 8ನೇ ತರಗತಿಯನ್ನೂ, 12-30ರಿಂದ 5-30ರ ವರೆಗೆ ಉಳಿದ ತರಗತಿಯನ್ನೂ ನಡೆಸುತ್ತಿತ್ತು. ಅದರಿಂದ ನಾನೇ ಹಣ ಕಟ್ಟಿ ಪಾಸ್ ಬುಕ್ ನಂತಹುದೊಂದರಲ್ಲಿ  ಬರೆಸಿಕೊಂಡು ಮುದ್ರೆ ಒತ್ತಿಸಿಕೊಳ್ಳುತ್ತಿದ್ದೆ. ನಮ್ಮ ಒಬ್ಬ ಸೋದರಮಾವ ಆಸ್ಟ್ರೇಲಿಯಾದಲ್ಲಿದ್ದ. ಅವನು ನಮ್ಮನ್ನು ನೋಡಲು ಬಂದಾಗ ಅಮ್ಮನಿಗೆ ಒಂದು ಟ್ರಾನ್ಸಿಸ್ಟರ್ ಕೊಟ್ಟುಹೋದ. ರೇಡಿಯೋದಂತೆ ಇದನ್ನು ಸಹ ಡಿಕ್ಲೇರ್ ಮಾಡಿಕೊಂಡು ಪರವಾನಗಿಯನ್ನು ಮುಂದುವರೆಸಿಕೊಳ್ಳಬೇಕಿತ್ತು. ಡಿಕ್ಲೇರ್ ಮಾಡಿಕೊಳ್ಳಲು ಹೋದಾಗ ಟ್ರಾನ್ಸಿಸ್ಟರ್ ಗೆ ಲೈಸೆನ್ಸ್ ಮಾಡಿಸಿಲ್ಲವೆಂಬುದು ಗೊತ್ತಾಯಿತು. ಅಪ್ಪ ಅಮ್ಮನಿಗೆ ತಮ್ಮ ಬಳಿ ಅನಧಿಕೃತವಾಗಿ ಒಂದು ವಸ್ತುವಿದೆ ಎನ್ನುವುದು ಮಾನಸಿಕವಾಗಿ ಕಿರಿಕಿರಿಯ ವಿಷಯವಾಯಿತು. ಕೊನೆಗೆ ಅದು ನಮಗೆ ಗಿಫ್ಟ್ ಆಗಿ ಬಂದದ್ದು ಎಂದು ಮನವರಿಕೆ ಮಾಡಿಕೊಂಡ ಅಧಿಕಾರಿ ಆಮ್ನೆಸ್ಟಿ ಎಂದು ಬರೆದು ಲೈಸೆನ್ಸ್ ಹಣ ಪಡೆದು ಅದನ್ನು ಅಧಿಕೃತಗೊಳಿಸಿದರು. ಹಾಗೆ ಸಮಸ್ಯೆ ಬಗೆಹರಿದರೂ ಆಮ್ನೆಸ್ಟಿ ಎಂದು ಬರೆದದ್ದು ಬಹಳ ದಿನಗಳ ಕಾಲ ಕಿರಿಕಿರಿ ಮಾಡುತ್ತಲೇ ಇತ್ತು.

ಅಪ್ಪ ಕೊಂಡ ಜನೆರಲ್ ಎಲೆಕ್ಟ್ರಿಕ್ ರೇಡಿಯೋ ಕೆಲಸಮಾಡಲು ಉದ್ದದ ಪಟ್ಟಿಯಂತಹ ಬಲೆಯಂತಹ ಏರಿಯಲ್ ಇತ್ತು. ಅದನ್ನು ರೇಡಿಯೋ ಇಟ್ಟಿದ್ದ ಕೊಠಡಿಯ ಮೇಲ್ಛಾವಣಿಗೆ ಅಡ್ಡವಾಗಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಟ್ಟಿದ್ದರು. ಅದರ ಸಾಮರ್ಥ್ಯವನ್ನು ಅವಲಂಬಿಸಿ ರೇಡಿಯೋ ನಮಗೆ ಬೇಕಾದುದನ್ನು ಕಿವಿಗೆ ಹಿತವಾಗಿ ಕೇಳಿಸುತ್ತಿತ್ತು. ಮಾವ ಕೊಟ್ಟ ಟ್ರಾನ್ಸಿಸ್ಟರ್ ವಿದ್ಯುಚ್ಛಕ್ತಿಯಿಂದಲೂ ಕೆಲಸ ಮಾಡುತ್ತಿತ್ತು, ಸೆಲ್ ಗಳಿಂದಲೂ ಕೆಲಸ ಮಾಡುತ್ತಿತ್ತು. ಅದಕ್ಕೆ ಅಂಟಿಕೊಂಡಂತೆ ಉದ್ದದ ಲೋಹದ ಕಡ್ಡಿಯಂತಹ ಏರಿಯಲ್ ಇತ್ತು. ಆ ಮಡಚಿಕೊಂಡಿರುವ ಕಡ್ಡಿಯನ್ನು ಬೇಕಾದರೆ ಉದ್ದಕ್ಕೆ ಬಿಚ್ಚಿಕೊಳ್ಳಬಹುದಿತ್ತು. ಬಿಚ್ಚಿದಾಗ ಮೊದಲು ಕೇಳುತ್ತಿದ್ದುದಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಕೇಳುತ್ತಿತ್ತು. ಅದನ್ನು ಕೈಯಲ್ಲಿ ಹಿಡಿದು ಎಲ್ಲಿಗೆ ಬೇಕಾದರೂ ಒಯ್ಯಬಹುದಿತ್ತು. ಸಣ್ಣ ಧ್ವನಿಯಲ್ಲಿ ಸಂಗೀತ ಕೇಳುತ್ತಾ ಹಗಲಿನಲ್ಲಿ ಟೆರೇಸಿನಲ್ಲಿ ಮರಗಳ ನೆರಳಿನಲ್ಲಿ, ರಾತ್ರಿ ಸೊಳ್ಳೆಪರದೆಯ ಅಡಿಯಲ್ಲಿ ಪರೀಕ್ಷೆಯ ಸಮಯದಲ್ಲಿ ಓದಿಕೊಳ್ಳುತ್ತಿದ್ದೆ. ಓದುವುದಕ್ಕೆ ಸಂಗಾತಿಯಾಗಿದ್ದ ಅದು ಯಾವ ಕಾರಣಕ್ಕೋ ಸರಿಯಾಗಿ ಕೆಲಸಮಾಡುವುದನ್ನು ಬೇಗ ನಿಲ್ಲಿಸಿತು. ಬಹಳಷ್ಟು ಸಮಯ ಬರಿಯ ಗದ್ದಲವೇ ಕೇಳುತ್ತಿತ್ತು. ಆಮೇಲೆ ಸರಿಯಾಗುತ್ತಿತ್ತು. ಅದರಲ್ಲಿ ರೇಡಿಯೋ ಒಳಗೆ ಇದ್ದ ಸ್ಟೇಷನ್ ಗಳನ್ನು ಗುರುತಿಸುವ ಇಂಡಿಕೇಟರ್ ಓಡಾಡಲು ಅನುಕೂಲ ಮಾಡಿಕೊಡುವಂತೆ ಅದನ್ನು ಬಂಧಿಸಿದ್ದ ದಾರ ತುಂಡಾಯಿತು. ಬೇರೆ ಹಾಕಿಸಿದರೂ ಪ್ರಯೋಜನವಾಗಲಿಲ್ಲ.

ಅದೇ ರೀತಿ ಅಪ್ಪನ ರೇಡಿಯೋ ಒಳಗೆ ಇದ್ದ ಮೈಕ್ ದುರ್ಬಲವಾಗಿ ಭೋರ್ಗರೆತ ಕೇಳಲಾರಂಭಿಸಿತು. ಆ ಬಿಡಿ ಭಾಗ ದೊರೆಯದೆ ಸುಮಾರು 25 ವರ್ಷಗಳ ಕಾಲ ಸೇವೆ ಮಾಡಿ ನಿವೃತ್ತಿ ತೆಗೆದುಕೊಂಡಿತು. ಅದರ ಹೊರಮೈಯ ಹೊಳಪು ಅಷ್ಟಾಗಿ ಮಾಸಿಯೇ ಇರಲಿಲ್ಲ. ಅಮ್ಮ ಅದನ್ನು ಒಂದು ಶೋಪೀಸ್ ನಂತೆ ಗೂಡಿನಲ್ಲಿಟ್ಟುಕೊಂಡಿದ್ದರು. ಆ ಹೊರಮೈಯೂ ಹಾಳಾದ ಮೇಲೆ ಮನಸ್ಸಿಲ್ಲದ ಮನಸ್ಸಿನಿಂದ ಗುಜರಿಯವನಿಗೆ ಕೊಟ್ಟರು. ಅದರ ಜಾಗದಲ್ಲಿ ತಂಗಿ ಶುಭ ಪ್ರಾಜೆಕ್ಟ್ ವರ್ಕ್ನ ಭಾಗವಾಗಿ ಸಿದ್ಧಪಡಿಸಿದ ಟ್ರಾನ್ಸಿಸ್ಟರ್ ಬಂದು ಕೂತಿತು. ಬಿ.ಟೆಕ್ ಮಾಡುತ್ತಿದ್ದ ಈ ತಂಗಿ ಇದನ್ನು ಸಿದ್ಧಪಡಿಸಲು ಬೇಕಾದ ಬಿಡಿಭಾಗಗಳನ್ನೆಲ್ಲಾ ತಂದು ನಮ್ಮ ಮುಂದೆಯೇ ಜೋಡಿಸಿದಳು. ಇದಕ್ಕೆ ಆಂಟೆನ ಬೇಕಿರಲಿಲ್ಲ. ಎಷ್ಟು ಸಣ್ಣ ಸಣ್ಣ ಭಾಗಗಳು ಇಡೀ ಪ್ರಪಂಚವನ್ನೇ ವ್ಯಾಪಿಸಬಹುದಾದ ತರಂಗಗಳನ್ನು ಹಿಡಿದಿಟ್ಟು ನಮಗೆ ಬೇಕಾದುದನ್ನು ಕೇಳಿಸುತ್ತದೆಯಲ್ಲ, ನಿಜಕ್ಕೂ ಇದೊಂದು ಅದ್ಭುತವೇ.


ತಂಗಿ ಮದ್ರಾಸಿನಲ್ಲಿ ಬಿ.ಟೆಕ್ ಮಾಡುತ್ತಿದ್ದಳು. ನಾವು ಮೈಸೂರಿನಲ್ಲಿದ್ದೆವು. ಕೋರ್ಸಿನ ಭಾಗವಾಗಿ ಪ್ರಾಯೋಗಿಕ ಅನುಭವ ಪಡೆಯುವುದು ಕಡ್ಡಾಯವಾಗಿತ್ತು. ಅವಳು ಆಗಿನ ನಿರ್ದೇಶಕರಿಂದ ಅನುಮತಿ ಪಡೆದು ಮೈಸೂರು ಆಕಾಶವಾಣಿಯಲ್ಲಿ ಮೂರು ತಿಂಗಳು ಕೆಲಸ ಮಾಡಿ ಅನುಭವ ಪಡೆದಳು. ಅವಳ ಗ್ರಹಿಕೆಯ ಮಟ್ಟ ನಿರ್ದೇಶಕರಿಗೆ ಮೆಚ್ಚಿಗೆಯಾಗಿ ಆಕಾಶವಾಣಿಯ ಖಾಯಂ ಉದ್ಯೋಗಿಗಳು ಮಾಡುತ್ತಿದ್ದ ರೇಡಿಯೋ ಟ್ರಾನ್ಸ್ ಮಿಷನ್ನಿನ ಕೆಲಸವನ್ನೆಲ್ಲಾ ಮಾಡಲು ಬಿಟ್ಟರು ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾಳೆ. ಅಮೆರಿಕೆಯಲ್ಲಿ ನೆಲೆಸಿರುವ ಇವಳು ಈಗ ಅಂತರ್ರಾಷ್ಟ್ರೀಯ ಖ್ಯಾತಿಯ ಬೆರಳೆಣಿಕೆಯ ವಿಜ್ಞಾನಿಗಳಲ್ಲಿ ಒಬ್ಬಳು.

ಹೊರಗಿನವರಿಗೆ ಆಕಾಶವಾಣಿ ನಿಲಯದ ಒಳಗೆ ಪ್ರವೇಶ ಕಟ್ಟುನಿಟ್ಟಾಗಿ ನಿಶಿದ್ಧವಾಗಿತ್ತು. ಒಬ್ಬ ಬಂದೂಕುಧಾರಿ ಗೇಟಿನಲ್ಲಿಯೇ ಇರುತ್ತಿದ್ದ. ತಂಗಿ ಕೆಲಸ ಮಾಡುತ್ತಿದ್ದುದರಿಂದ ಪ್ರವೇಶದ ಅನುಮತಿ ಪಡೆದ ನಾವು ಅಕ್ಕತಂಗಿಯರೆಲ್ಲ ಆಕಾಶವಾಣಿ ನಿಲಯದ ಕಾರ್ಯಕ್ರಮದ ವಿಭಾಗದೊಳಗೆಲ್ಲಾ ಕುತೂಹಲದಿಂದ ಓಡಾಡಿದೆವು. ಈಗಲೂ ಸುಮ್ಮ ಸುಮ್ಮನೆ ಎಲ್ಲರನ್ನೂ ಒಳಗೆ ಬಿಡುವುದಿಲ್ಲ.  ಏನು ಕೆಲಸವಿದೆ, ಯಾರನ್ನು ನೋಡಬೇಕು ಇತ್ಯಾದಿ ಪೂರ್ವಾಪರಗಳನ್ನೆಲ್ಲ ವಿಚಾರಿಸಿ ರಿಜಿಸ್ಟರಿನಲ್ಲಿ ದಾಖಲು ಮಾಡಿಕೊಂಡು ಒಳಗೆ ಬಿಡುತ್ತಾರೆ. ಆದರೆ ಬಂದೂಕುಧಾರಿಯ ಹೆದರಿಕೆ ಮಾತ್ರ ಇಲ್ಲ!

ಮೈಸೂರಿನಲ್ಲಿ ನಾವು ಇದ್ದ ಜಾಗದಿಂದ ಒಂದಷ್ಟು ಹುಡುಗಿಯರು ಒಟ್ಟು ಸೇರಿ ಮಹಾರಾಣಿ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದೆವು. ಬಹಳಷ್ಟು ಹುಡುಗಿಯರು ಮಾತಾಡುತ್ತಿದ್ದದ್ದು ಬಿನಾಕ ಗೀತಮಾಲ, ಜಯಮಾಲ ಹೀಗೆ ಯಾವ ಯಾವುದೋ ಸಿನೆಮಾ ಗೀತೆಗಳ ವಿಶೇಷ ಪ್ರಸಾರ ಕಾರ್ಯಕ್ರಮಗಳ ಬಗ್ಗೆಯೇ. ಸಿನೆಮಾ ಗೀತೆಗಳನ್ನು ಕೇಳಿಯೇ ಗೊತ್ತಿರದಿದ್ದ ನಾನು ಸುಮ್ಮನೆ ಅವರ ಮಾತು ಕೇಳುತ್ತಾ ಹೋಗುತ್ತಿದ್ದೆ. ಅವರ ಅಭಿಪ್ರಾಯದಲ್ಲಿ ಚಿತ್ರಗೀತೆಗಳನ್ನು ಅದರಲ್ಲೂ ಹಿಂದೀ ಚಿತ್ರಗೀತೆಗಳನ್ನು ಕೇಳದೇ ಇರುವವರು ಗುಗ್ಗುಗಳು ಎಂದಾಗಿತ್ತು. ಅದು ಹೇಗೆ ವಿಶೇಷವಾದದ್ದಾಗಿತ್ತೋ ಹಾಗೆಯೇ ಟ್ರಾನ್ಸ್ ಸಿಸ್ಟರ್ ಹಿಡಿದುಕೊಂಡು ಓಡಾಡುವುದು, ಫೋಟೋ ತೆಗೆಸಿಕೊಳ್ಳುವುದು ಹಳ್ಳಿಗಳಲ್ಲಿ ವಿಶೇಷವಾದದ್ದಾಗಿತ್ತು. ಎಂ.ಎ. ಓದುತ್ತಿದ್ದಾಗಲೇ ಟ್ರಾನ್ಸ್ ಸಿಸ್ಟರ್ ಕೊಂಡಿದ್ದ ನನ್ನ ಶ್ರೀಯುತರು ಆಗ ಹಿಂದೀ ಚಿತ್ರಗೀತೆಗಳನ್ನೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಕೇಳುತ್ತಿದ್ದಂತೆ ಕೆಲಸಕ್ಕೆ ಸೇರಿದ ಮೇಲೂ ಮಧ್ಯಾಹ್ನ ಮತ್ತೆ ರಾತ್ರಿ ಸುಮಾರು ಹೊತ್ತು ವಿವಿಧಭಾರತಿಯಲ್ಲೋ ಸಿಲೋನಿನಿಂದಲೋ ಪ್ರಸಾರವಾಗುವ ಗೀತೆಗಳನ್ನು ಕೇಳುತ್ತಲೇ ಇರುತ್ತಿದ್ದರು. ನನಗೂ ಅದರ ಹುಚ್ಚನ್ನು ಅಂಟಿಸಲು ಪ್ರಯತ್ನಿಸಿದರು. ಯಶಸ್ವಿಯಾಗಲಿಲ್ಲ. ಅವರ ಬಳಿ ಇದ್ದ ಟ್ರಾನ್ಸ್ ಸಿಸ್ಟರ್ ಗೆ ಪುನಃ ಪುನಃ ಸೆಲ್ ಹಾಕಿಸಬೇಕಿತ್ತು. ನಾವು ಇದ್ದ ಸಿರಿಗೆರೆ ಹಳ್ಳಿಯಾಗಿತ್ತು. ಅಲ್ಲಿ ಸೆಲ್ ಸುಲಭಕ್ಕೆ ಸಿಗುತ್ತಿರಲಿಲ್ಲ. ವಿದ್ಯುಚ್ಛಕ್ತಿ ಸೌಲಭ್ಯ ಚೆನ್ನಾಗಿದ್ದುದರಿಂದ ದೊಡ್ಡದಾದ ಫಿಲಿಪ್ಸ್ ರೇಡಿಯೋ ಕಂ ಟೇಪ್ ರೆಕಾರ್ಡರ್ ತಂದರು. ಅದು ಸಹಜವಾಗಿ ಅವರ ಕೈದಾಟಿ ಗೋಡೆಯ ಮೇಲಿನ ಸ್ಟಾಂಡಿನಲ್ಲಿ ಪ್ರತಿಷ್ಠಾಪಿತವಾಯಿತು. ನಾನೂ, ನಮ್ಮ ಮಕ್ಕಳು ಸಂಗೀತ ಕೇಳಿದೆವು. ನಮ್ಮ ಜೊತೆಯಲ್ಲಿದ್ದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಮೈದುನ, ಸೋದರಳಿಯ ಕ್ಯಾಸೆಟ್ ಹಾಕಿ ಭಜನೆ, ಯಕ್ಷಗಾನ ಕೇಳಿದರು.

ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದವರು ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಧ್ವನಿಮುದ್ರಿಸಿಕೊಳ್ಳಲು ಭದ್ರಾವತಿ ಆಕಾಶವಾಣಿಯವರು ಬಂದಿದ್ದರು. ಅವರಲ್ಲಿ ಒಬ್ಬರು ಉದ್ಘೋಷಕಿ ನಳಿನಿ. ಅವರು ಭದ್ರಾವತಿ ಆಕಾಶವಾಣಿ ಬೆಳಿಗ್ಗೆ ಪ್ರಸಾರ ಮಾಡುತ್ತಿದ್ದ ನಾಲ್ಕು ನಿಮಿಷದ ರಶ್ಮಿ ಕಾರ್ಯಕ್ರಮಕ್ಕೆ ಲೇಖನಗಳನ್ನು ಕಳುಹಿಸಿಕೊಡಲೇಬೇಕೆಂದು ಒತ್ತಾಯಿಸಿದರು. ಅವರ ಮಾತಿಗೆ ಗೌರವ ಕೊಟ್ಟು ಲೇಖನಗಳನ್ನು ಕಳುಹಿಸಿದೆ. ಅವು ಅಲ್ಲಿದ್ದ ಸುದರ್ಶನರವರಿಗೆ ಇಷ್ಟವಾಯಿತು. ರೇಡಿಯೋದಲ್ಲಿ ಹಾಡುತ್ತಿದ್ದ ಸಂಗೀತಗಾರರಂತೆ ನಾನೂ ಹಾಡಬೇಕು ಎಂದು ಒಂದು ರೀತಿಯ ಕನಸನ್ನು ಕಂಡಿದ್ದವಳಿಗೆ ಮಾತಾಡುವ ಅವಕಾಶ ಅಚಾನಕ್ಕಾಗಿ ದೊರೆತದ್ದು ಆಶ್ಚರ್ಯ ಮತ್ತೆ ಸಂತೋಷ ಎರಡನ್ನೂ ಉಂಟುಮಾಡಿತು. ಚಿತ್ರದುರ್ಗದಲ್ಲಿ ಎಫ್.ಎಂ. ಸ್ಟೇಷನ್ ರೆಗ್ಯುಲರ್ ಆಗಿ ಕೆಲಸ ಮಾಡಲು ಪ್ರಾರಂಭಿಸುವವರೆಗೂ ಭದ್ರಾವತಿ ಆಕಾಶವಾಣಿಯ ರಶ್ಮಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ದೊರೆತರೆ ಚಿತ್ರದುರ್ಗದ ಆಕಾಶವಾಣಿಯಲ್ಲಿ ನಲ್ನುಡಿ, ಚರ್ಚೆ, ಭಾಷಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 2004ರ ವರೆಗೂ ಅವಕಾಶ ದೊರೆಯಿತು.

ಬೆಂಗಳೂರು ಆಕಾಶವಾಣಿ ಯುಗಾದಿಯನ್ನು ವಿಶೇಷವಾದ ರೀತಿಯಲ್ಲಿ ಆಚರಿಸಬೇಕೆಂದು ಯೋಚಿಸಿ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿತು. ಆಯ್ಕೆಯಾದ ಕವನಗಳನ್ನು ಆಹ್ವಾನಿತ ಶ್ರೋತೃಗಳ ಮುಂದೆ ಪರಿಣತ ಕಲಾವಿದರಿಂದ ಹಾಡಿಸುವ ಮತ್ತು ಪ್ರತಿಯೊಂದನ್ನೂ ಒಂದೊಂದು ತಿಂಗಳು ಪೂರ್ತಿ ತಿಂಗಳ ಗೀತೆ ಎಂದು ಪ್ರಸಾರ ಮಾಡುವ ಯೋಜನೆ ಅದರೊಂದಿಗೆ ಸೇರಿಕೊಂಡಿತ್ತು. ಈ ಪ್ರಕಟಣೆಯನ್ನು ಕೇಳಿದ ನನ್ನ ಶ್ರೀಯುತರಿಗೆ ತಾನೊಂದು ಕವನವನ್ನು ಕಳುಹಿಸಬೇಕೆಂಬ ಉಮೇದಿ   ಬಂದಿತು. ಈ ಹಿಂದೆ ಸಿರಿಗೆರೆಯಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಓದಿದ ಆನೆ ಮತ್ತು ಬಾಲ ಪದ್ಯವನ್ನು ಆ ಕಾರ್ಯಕ್ರಮಕ್ಕೆ ಬಂದಿದ್ದ ಭದ್ರಾವತಿ ಆಕಾಶವಾಣಿಯವರು ವಿಶೇಷವಾಗಿ ಭಾವಿಸಿ ಆ ಪದ್ಯದ ಓದುವಿಕೆಯ ಹಿನ್ನೆಲೆಯಲ್ಲಿಯೇ ಗೋಷ್ಠಿಯ ವರದಿಯನ್ನು ಪ್ರಸಾರ ಮಾಡಿದ್ದರು. ಇದನ್ನು ಭಾವಿಸಿಯೋ ಏನೋ “ಕುಹೂ ಕುಹೂ” ಎನ್ನುವ ಪದ್ಯವನ್ನು ಕಳುಹಿಸಿದರು. ಅದು ಪ್ರಥಮ ಆದ್ಯತೆ ಪಡೆಯಿತು, ಶಾಂತ ಜಯತೀರ್ಥ ಮತ್ತು ಸಂಗಡಿಗರು ಅದನ್ನು ಹಾಡಿದರು, ನಿರ್ಣಾಯಕರಾಗಿದ್ದ ಹೆಚ್.ಎಸ್. ವೆಂಕಟೇಶ ಮೂರ್ತಿಯವರು ಅದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು ಎನ್ನುವುದಕ್ಕಿಂತ ಮುಖ್ಯವಾದದ್ದು ಸಂಪರ್ಕ ತಪ್ಪಿಯೇ ಹೋಗಿತ್ತು ಎನ್ನುವಂತಿದ್ದ ಅಪ್ಪನ ಅಕ್ಕನ ಮಗನ ಮಗಳ ಬಾಂಧವ್ಯ ಚಿಗುರಿತು ಎನ್ನುವುದು. ಈಕೆ (ಸುರಭಿ) ಬೆಂಗಳೂರು ಆಕಾಶವಾಣಿಯಲ್ಲಿ ಗ್ರಂಥಪಾಲಕಿಯಾಗಿದ್ದಳು. ಅದು ನಮಗೆ ಗೊತ್ತಿರಲಿಲ್ಲ. ಆಕೆಯೇ ಆ ಜನಸಂದಣಿಯಲ್ಲಿ ನಮ್ಮನ್ನು ಹುಡುಕಿಕೊಂಡು ಬಂದು ಮಾತಾಡಿಸಿದಳು. ಪದ್ಯ ಆಯ್ಕೆಯಾದುದಕ್ಕೆ, ಅದನ್ನು ಹಾಡಿದ ರೀತಿ ಅರ್ಥವತ್ತಾಗಿದ್ದುದಕ್ಕೆ, ಅದಕ್ಕೆ ಕೇಳುಗರಿಂದ ಮೆಚ್ಚಿಗೆಯ ಪ್ರತಿಕ್ರಿಯೆ ಬಂದುದಕ್ಕೆ ತನಗಾದ ಸಂತೋಷವನ್ನು ಹಂಚಿಕೊಂಡಳು.

ಒಂದು ದಿನ ರೇಡಿಯೋ ಕೇಳುತ್ತಿದ್ದಾಗ ಚಿತ್ರದುರ್ಗದ ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡಲು ಬಯಸುವವರು ಸದಸ್ಯರ ಪಟ್ಟಿಯೊಂದಿಗೆ ಸಂಘಟನೆಯ ಮೂಲಕವೇ ಆಕಾಶವಾಣಿಯನ್ನು ಸಂಪರ್ಕಿಸಬೇಕು, ಸದಸ್ಯರ ಸಂಖ್ಯೆ ನಾಲ್ಕರಿಂದ ಹತ್ತರ ವರೆಗೆ ಮಾತ್ರ ಇರಬೇಕು ಎಂದು ನಿಲಯ ನಿರ್ದೇಶಕರು ಕೊಟ್ಟ ಪ್ರಕಟಣೆ ಕೇಳಿಬಂತು. ನಾವು ಸಿರಿಗೆರೆಯಲ್ಲಿದ್ದದ್ದು ಶಿವಕುಮಾರ ನಗರ(!)ದಲ್ಲಿ. ಅಲ್ಲಿದ್ದವರೆಲ್ಲಾ ನಮ್ಮ ಸಹೋದ್ಯೋಗಿಗಳೇ. ಅವರ ಶ್ರೀಮತಿಯರನ್ನು ಸದಸ್ಯರನ್ನಾಗಿ ಮಾಡಿಕೊಂಡ ಒಂದು ಸಂಘಟನೆ, ಮಕ್ಕಳನ್ನೆಲ್ಲಾ ಒಟ್ಟುಗೂಡಿಸಿಕೊಂಡ ಎರಡು ಸಂಘಟನೆ, ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡ ಒಂದು ಸಂಘಟನೆ ಮಾಡಿ ಸದಸ್ಯರಿಗೆ ಹಾಡು, ನಾಟಕ, ಚರ್ಚೆ, ಹಾಸ್ಯ ಪ್ರಹಸನ, ಗೀತ ರೂಪಕಗಳ ತರಬೇತಿ ಕೊಟ್ಟು ಆಕಾಶವಾಣಿಗೆ  ಅವರನ್ನು ಕರೆದುಕೊಂಡು ಹೋದೆವು. ಅವು ಕಾರ್ಯಕ್ರಮ ನಿರ್ವಹಣಾಧಿಕಾರಿಗಳಿಗೆ ಸಂತೋಷವನ್ನುಂಟು ಮಾಡಿದವು. ಮೂರು ತಿಂಗಳಿಗೊಮ್ಮೆ (ಅದು ಎರಡು ಕಾರ್ಯಕ್ರಮಗಳ ನಡುವೆ ಇರಬೇಕಾದ ಕನಿಷ್ಠ ಕಾಲಾವಧಿ ಆಗಿತ್ತು) ಸಂಘಟನೆಯ ಸದಸ್ಯರಿಗೆ ಕಾರ್ಯಕ್ರಮ ಕೊಡಲು ಅವಕಾಶ ದೊರೆಯಿತು. ಚಿತ್ರದುರ್ಗ ಆಕಾಶವಾಣಿ ತನ್ನ ದಶಮಾನೋತ್ಸವವನ್ನು ಆಚರಿಸಿಕೊಂಡಾಗ ವಿದ್ಯಾರ್ಥಿಗಳು ಇದ್ದ ಸಂಘಟನೆಗೆ ನನ್ನ ಶ್ರೀಯುತರು ರಚಿಸಿದ ಚಿತ್ರದುರ್ಗ ಇತಿಹಾಸ ಆಧಾರಿತ ಗೀತ ರೂಪಕವನ್ನು ನಡೆಸಿಕೊಡಲು ಆಹ್ವಾನ ಸಿಕ್ಕಿತು.

ಚಿತ್ರದುರ್ಗ ಆಕಾಶವಾಣಿಗೆ ಹೊಸ ನಿರ್ದೇಶಕರು ಬಂದಾಗ ಯುವವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿತ್ರದುರ್ಗದ ಜಿಲ್ಲಾ ವ್ಯಾಪ್ತಿಗೆ ಬರುವ ಕಾಲೇಜುಗಳಿಗೆಲ್ಲಾ ನಿಲಯದ ನಿರ್ದೇಶಕರ ಪತ್ರ ಹೋಯಿತು. ಇಂಜನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದ ತಮ್ಮ ಕಾಲೇಜಿನ ತಂಡದ ಮುಖ್ಯಸ್ಥನಿಗೆ ಪತ್ರವನ್ನು ದಾವಣಗೆರೆಯ ಬಿ.ಡಿ.ಟಿ. ಕಾಲೇಜಿನ ಪ್ರಿನ್ಸಿಪಾಲರು ಕೊಟ್ಟರು. ಕಾರ್ಯಕ್ರಮ ಕೊಡಲು ಸಿದ್ಧರಾಗಿ ಹೋದ ತಂಡದಲ್ಲಿದ್ದ ನನ್ನ ಹಿರಿಯ ಮಗಳು ಸ್ವರಚಿತ ಕವನಗಳನ್ನು ಓದಿದಳು. ಅದರಿಂದ ಅವಳಿಗೆ ಅಂತರ ಆಕಾಶವಾಣಿ ಯುವವಾಣಿ ಕಾರ್ಯಕ್ರಮದಲ್ಲಿ ಚಿತ್ರದುರ್ಗವನ್ನು ಪ್ರತಿನಿಧಿಸುವ ಅವಕಾಶ ಕಲ್ಪಿತವಾಯಿತು. ಅದು ಹೊಸದುರ್ಗದಲ್ಲಿ ನಡೆದ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಹ್ವಾನ ಕೊಡಿಸಿತು, ಅವಳ ಕವನಗಳನ್ನು ರಾಘವೇಂದ್ರ ಪಾಟೀಲರ ಪ್ರತಿಷ್ಠಿತ “ಸಾಹಿತ್ಯ ಸಂವಾದ” ಪತ್ರಿಕೆ ಪ್ರಕಟಿಸಿತು, ಅವುಗಳನ್ನು ನೋಡಿದ ಕರ್ನಾಟಕ ಲೇಖಕಿಯರ ಸಂಘದವರ ಒಂದು ದತ್ತಿ ಬಹುಮಾನಕ್ಕೆ ಭಾಜ್ಯಳಾದಳು. “ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ”!

ಚಿತ್ರದುರ್ಗ ಆಕಾಶವಾಣಿ ಜನರ ಬಳಿಗೇ ಹೋಗಿ ಅವರ ದನಿಗೆ ಮಿಡಿಯಬೇಕೆಂದು ಹಳ್ಳಿ ಹಳ್ಳಿಗೆ ಹೋಗಿ ಜನಸಾಮಾನ್ಯರನ್ನು ಮಾತನಾಡಿಸಿದ ಹಾಗೆ ಮನೆ ಮನೆಯಲ್ಲಿ ಆಕಾಶವಾಣಿ (ಬಾ ಬಾ ಬಾನುಲಿ) ಎನ್ನುವ ಕಾರ್ಯಕ್ರಮವನ್ನೂ ಆಯೋಜಿಸಿತು. ಯಾರು ತಮ್ಮ ಮನೆಯಲ್ಲಿ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಆಹ್ವಾನಿಸುತ್ತಿದ್ದರೋ ಅಂತಹವರ ಮನೆಗೆ ಆಕಾಶವಾಣಿಯವರು ತಮ್ಮ ತಾಂತ್ರಿಕ ಸಿಬ್ಬಂದಿಯೊಡನೆ ಹೋಗಿ ಕಾರ್ಯಕ್ರಮವನ್ನು ಧ್ವನಿಮುದ್ರಿಸಿಕೊಂಡು ಪ್ರಸಾರ ಮಾಡುವ ಯೋಜನೆ ಅದಾಗಿತ್ತು. ಕಾರ್ಯಕ್ರಮ ಜನಸಾಮಾನ್ಯರಲ್ಲಿ ತೀವ್ರ ಸ್ಪಂದನೆಯನ್ನುಂಟು ಮಾಡುವಂತಹುದಾಗಿರಬೇಕು ಎಂದು ಸಂವಾದದ ವಿಷಯ, ಅದನ್ನು ನಿರ್ವಹಿಸುವ ಅತಿಥಿಯನ್ನು ಆಕಾಶವಾಣಿಯವರೇ ನಿರ್ಧರಿಸುತ್ತಿದ್ದರು. “ಮಹಿಳೆಯರ ಸಾಮಾಜಿಕ ಹೊಣೆ” ಎನ್ನುವ ವಿಷಯದ ಮೇಲೆ ಕಾರ್ಯಕ್ರಮವನ್ನು ಸಿರಿಗೆರೆಯಲ್ಲಿ ನಮ್ಮ ಸಹೋದ್ಯೋಗಿಯ ಮನೆಯಲ್ಲಿ ಆಯೋಜಿಸಿದ್ದರು. ಅದು ಸಿರಿಗೆರೆಯ ಶೈಕ್ಷಣಿಕ ವಲಯದವರೆಲ್ಲರನ್ನೂ ಆಕಾಶವಾಣಿಯ ಕಡೆಗೆ ಸೆಳೆಯಿತು. ಸಿರಿಗೆರೆಯಲ್ಲಿ ಎಲ್ಲ ರೀತಿಯ ಜನರೂ ಇದ್ದರು. ಅದೊಂದು ಮಿನಿ ಕಾಸ್ಮೊಪಾಲಿಟನ್ ಸ್ಥಳ. ತುರ್ತಾಗಿ ಜನರ ಅಭಿಪ್ರಾಯವನ್ನು ತಿಳಿಯಬೇಕೆಂದಾಗ ಆಕಾಶವಾಣಿಯವರಿಗೆ ಸ್ಪಂದಿಸುವವರು ಇಲ್ಲಿ ದೊರೆಯುತ್ತಿದ್ದರು. ಹೀಗಾಗಿ ನಮಗೆ ಮಾತ್ರವಲ್ಲದೆ ಸಿರಿಗೆರೆಯವರೆಲ್ಲರಿಗೂ ಚಿತ್ರದುರ್ಗ ಆಕಾಶವಾಣಿಯವರು ಮನೆಯ ಜನರಂತಾಗಿಬಿಟ್ಟರು.

ರೇಡಿಯೋ ಜನಸಮೂಹದ ಸಮಕಾಲೀನ ತಿಳುವಳಿಕೆಯ ಮಾಧ್ಯಮ ಆಗಬೇಕೆಂಬ ಯೋಜನೆಯಡಿ ಬೆಂಗಳೂರು ಆಕಾಶವಾಣಿ ವಿಜ್ಞಾನ ಸಂಬಂಧಿತ ಕಾರ್ಯಕ್ರಮ (ಹೆಸರು ಮರೆತಿದೆ), ಭದ್ರಾವತಿ ಆಕಾಶವಾಣಿ “ಚಿಗುರು” ಕಾರ್ಯಕ್ರಮಗಳನ್ನು ಹೈಸ್ಕೂಲಿನವರೆಗಿನ ವಿದ್ಯಾರ್ಥಿಗಳಿಗೆ, ಚಿತ್ರದುರ್ಗ ಆಕಾಶವಾಣಿ “ಪರಿಸರದ ಉಳಿವಿಗೆ ಅಳಿಲು ಸೇವೆ” ಕಾರ್ಯಕ್ರಮವನ್ನು ಎಲ್ಲರಿಗಾಗಿ ಬೇರೆ ಬೇರೆ ವರ್ಷಗಳಲ್ಲಿ ನಡೆಸಿದವು. ಕಾರ್ಯಕ್ರಮಗಳನ್ನು ಕೇಳಿ ಸರಣಿಯ ಮುಕ್ತಾಯದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಬೇಕಿತ್ತು. ಚಿಗುರು ಕಾರ್ಯಕ್ರಮಕ್ಕೆ ಪ್ರತಿ ಸರಣಿಯ ನಂತರ ಕಾರ್ಯಕ್ರಮದ ಬಗ್ಗೆ ಟಿಪ್ಪಣಿ ಮಾಡಿಕೊಂಡು ಸರಣಿಯ ಕೊನೆಯಲ್ಲಿ ಟಿಪ್ಪಣಿ ಪುಸ್ತಕ ಕಳುಹಿಸಿಕೊಡಬೇಕಿತ್ತು. ಈ ಕಾರ್ಯಕ್ರಮಗಳಲ್ಲಿ ನಮ್ಮ ಮಕ್ಕಳು ಭಾಗಿಯಾಗಿ ಪ್ರಥಮ ಬಹುಮಾನ ಪಡೆದರು, ಬೆಂಗಳೂರಿನ ಕಾರ್ಯಕ್ರಮದ ಬಹುಮಾನವನ್ನು ರಾಜ್ಯಪಾಲರಿಂದ ಪಡೆದರು ಎನ್ನುವ ಸಂತೋಷದ ಜೊತೆಗೆ ರೇಡಿಯೋಗೆ ಕಿವಿಯಾದರು ಎನ್ನುವ ಸಂತೋಷ ನಮ್ಮದು.

ಮೈಸೂರು ಆಕಾಶವಾಣಿ ಇದೇ ರೀತಿ ಸರ್ವಜ್ಞನನ್ನು ಕುರಿತ “ಅರಿವಿನ ಶಿಖರ”, ಕನ್ನಡ ಪದಗಳಲ್ಲಿ ಅಡಗಿರುವ ಸಾಂಸ್ಕೃತಿಕ    ಮಹತ್ವವನ್ನು ಗುರುತಿಸುವ “ಪದ ಸಂಸ್ಕೃತಿ” ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದಾಗ ನನಗೂ ಅವುಗಳಲ್ಲಿ ಭಾಗಿಯಾಗುವ ಅವಕಾಶ ದೊರೆತಿದೆ ಎನ್ನುವ ಸಂತೋಷ ಒಂದಾದರೆ ಅದನ್ನು ಕೇಳಲು ನನ್ನ ಹಳೆಯ ವಿದ್ಯಾರ್ಥಿಗಳು, ಅಕ್ಕ ತಂಗಿಯರ ಮಕ್ಕಳು, ಬಂಧುವರ್ಗದವರು ಸಹ ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವ ಸಂತೋಷ ಇನ್ನೊಂದು. ಕಾರ್ಯಕ್ರಮ ಕೇಳಿದ ಮೇಲೆ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಎನ್ನುವ ಸಂತೋಷ ಮತ್ತೊಂದು.

ಹೊಳಲಕೆರೆಗೆ ವರ್ಗವಾದಮೇಲೆ ಸುತ್ತಮುತ್ತ ಇದ್ದ ಗುಡ್ಡಗಳಿಂದಾಗಿ ಮತ್ತು ನಮ್ಮ ಮನೆಯ ಬಳಿ ಇದ್ದ ಮೊಬೈಲ್ ಟವರ್ ನಿಂದಾಗಿ ನಮಗೆ ರೇಡಿಯೋ ಕೇಳಲು ಆಗುತ್ತಿರಲಿಲ್ಲ. ಬೆಳಗಿನ ಆರೂ ಕಾಲು ಸಮಯದವರೆಗೆ ಮಾತ್ರ ಯಾವುದಾದರೂ ಸ್ಟೇಷನ್ ಕೇಳಬಹುದಾಗಿತ್ತು. ಅದರಿಂದ ನನಗೆ ಬಹಳ ಬೇಜಾರಾಗಿತ್ತು. ನನ್ನ ನಿವೃತ್ತಿಯ ನಂತರ ನಾವು ಮೈಸೂರಿನಲ್ಲಿ ನೆಲೆಸಿದ ಮೇಲೆ ಮಾಡಿದ ಮೊದಲ ಕೆಲಸ ನಮ್ಮ ಬಳಿ ಇದ್ದ ಎರಡು ಬೇರೆ ಬೇರೆ ಮಾಡೆಲಿನ ಫಿಲಿಪ್ಸ್ ಟೇಪ್ ರೆಕಾರ್ಡರ್ ಗಳು ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಂಡದ್ದು. ಒಂದು ಅಡಿಗೆ ಮನೆಯಲ್ಲಿ, ಇನ್ನೊಂದು ಹಾಲ್ ನಲ್ಲಿ ಪ್ರತಿಷ್ಠಾಪಿತವಾಯಿತು.

ಬೇರೆ ಬೇರೆ ಆಕಾಶವಾಣಿಗಳ ಎ.ಎಸ್.ಡಿ.ಗಳು ಒಂದೆಡೆಗೆ ಸೇರಿದಾಗ ನಾನು ಮೈಸೂರಿನಲ್ಲಿದ್ದೇನೆಂದು ನನ್ನನ್ನು ಮೈಸೂರು ಆಕಾಶವಾಣಿಯ ಎ.ಎಸ್.ಡಿ.ಗೆ ಪರಿಚಯಿಸಿದವರು ಮೊದಲು ಭದ್ರಾವತಿಯಲ್ಲಿದ್ದು ಆನಂತರ ರಾಯಚೂರಿನಲ್ಲಿದ್ದವರು. ಒಂದು ದಿನ ಬೆಳಿಗ್ಗೆ ಬೆಳಿಗ್ಗೆ ಎನ್ನುವಂತೆ ನನಗೆ ಫೋನ್ ಮಾಡಿದವರು ಮೈಸೂರು ವಿಶ್ವವಿದ್ಯಾಯದ ನನ್ನ ಡಿಪಾರ್ಟ್ ಮೆಂಟಿನ ಪ್ರೊ. ಶೇಷಗಿರಿರಾವ್. “ನಿಮ್ಮ ‘ಅರಿವಿನ ಶಿಖರ’ ಕಾರ್ಯಕ್ರಮವನ್ನು ಕೇಳಿದ ಮೇಲೆ ಆಕಾಶವಾಣಿಗೆ ಫೋನ್ ಮಾಡಿ ನೀವು ಮೈಸೂರಿನಲ್ಲಿಯೇ ಇದ್ದೀರಿ ಎಂದು ಖಚಿತ ಪಡಿಸಿಕೊಂಡೆ, ಡಿಪಾರ್ಟ್ ಮೆಂಟ್ ಶತಮಾನೋತ್ಸವವನ್ನು ಆಚರಿಸುತ್ತಿದೆ, ನಮ್ಮ ಗುರುಗಳಾದ ಜಿ. ಶ್ರೀನಿವಾಸನ್ ರವರ ಕೃತಿಗಳ ಬಗ್ಗೆ ಒಂದು ಪ್ರಬಂಧವನ್ನು ಮಂಡಿಸಿ ಎಂದು ಕೇಳುತ್ತಿದ್ದೇನೆ” ಎಂದರು. ಭೂಮಿ ಗುಂಡಗಿದೆ ಎನ್ನುವುದರ ಅರ್ಥ ಇದೇ ಅಲ್ಲವೇ!

ಈಗ ಮೊಬೈಲ್ ನಲ್ಲಿ ಯಾವ ಆಕಾಶವಾಣಿಯ ಕಾರ್ಯಕ್ರಮವನ್ನಾದರೂ ಕೇಳಬಹುದು. ಆದರೂ ನಾನು ಕೇಳುವುದು ಮೈಸೂರು ಆಕಾಶವಾಣಿಯನ್ನೇ. ಅದರ ಕಾರ್ಯಕ್ರಮಗಳು ವೈವಿಧ್ಯಮಯ ಮತ್ತೆ ಒಳ್ಳೆಯ ಮಾಹಿತಿಯನ್ನು ಕೊಡುವಂತಹವು. ಅವು ಜನಪದದ ಕಾರ್ಯಕ್ರಮವಾಗಿರಲೀ, ಆರೋಗ್ಯದ ಕಾರ್ಯಕ್ರಮವಾಗಿರಲಿ, ಸಂದರ್ಶನವಾದರೂ ಆಗಿರಲಿ ಅಥವಾ ಮತ್ತಾವುದೇ ಕಾರ್ಯಕ್ರಮವಾಗಿರಲಿ ಅದಕ್ಕೊಂದು ಪ್ರಬಂಧಾತ್ಮಕ ಎನ್ನುವ ಗುಣ ಇದೆ. ಮೈಸೂರು ಆಕಾಶವಾಣಿ ಪ್ರಾಚೀನ ಚಿಂತನೆ ಈಗಲೂ ಹೇಗೆ ಪ್ರಸ್ತುತ ಎಂದು ಮನದಟ್ಟು ಮಾಡಿಸುತ್ತದೆ. ವಿಜ್ಞಾನ ಮತ್ತು ಜನಸಾಮಾನ್ಯರ ಬದುಕು ಹೇಗೆ ಥಳುಕು ಹಾಕಿಕೊಂಡಿರುತ್ತದೆ ಎಂಬುದನ್ನು ಮನೋಜ್ಞವಾಗಿಸುತ್ತದೆ. ಕಲ್ಪನಾ ಲೋಕದ ಅದ್ಭುತವನ್ನು ರಮಣೀಯವಾಗಿ ಕೇಳಿಸುತ್ತದೆ. ನಾಟಕಗಳಂತೂ ಸಮಕಾಲೀನ ಸಮಸ್ಯೆಗಳಿಗೆ ಮಿಡಿಯುತ್ತಾ ಮನಸ್ಸನ್ನು ಆರ್ದಗೊಳಿಸುತ್ತವೆ. ನಗೆಚಾಟಿಕೆಗಳು ನಗಿಸುತ್ತಲೇ ಮೈ ಮನ ಮುಟ್ಟಿ ತಟ್ಟಿ ನೋಡಿಕೊಳ್ಳುವಂತೆ ಮಾಡುತ್ತವೆ. ನವಿಲುಗರಿ, ಸಿರಿಗನ್ನಡಂ ಗೆಲ್ಗೆ, ಹಾದಿಯಲ್ಲಿ ಕಂಡ ಮುಖ, ಕನ್ನಡಿಯಲ್ಲಿ ಕಂಡಂತೆ, ಲಾಕ್ ಡೌನ್ ಕಥೆಗಳು – ಒಂದೇ ಎರಡೇ ಹತ್ತಾರು ಜೀವನ್ಮುಖಿ ಜ್ಞಾನಮುಖಿ ಮೈಸೂರು ಆಕಾಶವಾಣಿ !

ಜನಸಾಮಾನ್ಯರಿಗೂ ಅವರಿಗೆ ಅರ್ಥವಾಗುವ ಹಾಗೆ, ಅವರ ಬದುಕಿಗೆ ಅನ್ವಯವಾಗುವ ಹಾಗೆ, ಅವರ ಭಾವಗಳನ್ನು ಪೋಷಿಸುವ ಹಾಗೆ ಸಿದ್ಧವಾದ ಚೌಕಟ್ಟಿನಲ್ಲಿರುವ ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನ ವಿಸ್ತರಣಾ ಉಪನ್ಯಾಸ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಏರ್ಪಡಿಸುತ್ತಿತ್ತು. ಅದನ್ನು ಪುಸ್ತಕ-ರೂಪದಲ್ಲಿ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಎಂಬ್ಲೆಮ್ “ನಹಿ ಜ್ಞಾನೇನ ಸದೃಶಂ”. ಇದನ್ನು ವಿಶ್ವವಿದ್ಯಾನಿಲಯದಂತೆ ಸಾರ್ಥಕ ಮತ್ತು ಅನ್ವರ್ಥಕಗೊಳಿಸುತ್ತಿರುವುದು ಮೈಸೂರು ಆಕಾಶವಾಣಿಯೇ. ಅದು ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯವೈಖರಿಯ ಉತ್ತರಾಧಿಕಾರಿಯಾಗಿದೆ ಎಂದರೆ ತಪ್ಪೇನಿಲ್ಲ.

ರೇಡಿಯೋ ಒಂದು ಎಲೆಕ್ಟ್ರಾನಿಕ್ ವಸ್ತುವಾಗಿ, ಬಹುಮುಖಿಯಾದ ಸಂಪರ್ಕ ಮಾಧ್ಯಮವಾಗಿ, ಮನರಂಜನೆ, ಕಾಲದ ಸದುಪಯೋಗ, ಏಕತಾನತೆಯ ಬೇಸರದ ನಿವಾರಣೆ ಹೀಗೆ ಹತ್ತು ಹಲವು ರೀತಿಯಲ್ಲಿ ಬಹೂಪಯೋಗಿಯಾಗಿ ಮರ್ಯಾದಿತ. ರೇಡಿಯೋ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಗತಿಯ ಮೇಲೆ ಹೇಗೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ಗಮನಿಸಿದರೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಗುತ್ತವೆ.

-ಪದ್ಮಿನಿ ಹೆಗಡೆ

6 Responses

  1. ನಾನು ಆಕಾಶವಾಣಿ ಶ್ರೋತೃಗಳು .ಬರಹ ಚೆನ್ನಾಗಿದೆ

  2. ನಾಗರತ್ನ ಬಿ.ಆರ್ says:

    ಆಕಾಶವಾಣಿಯ ಒಡನಾಟವನ್ನು ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ಹಂತ ಹಂತವಾಗಿ ತಮ್ಮ ಬದುಕಿನಲ್ಲಿ ಹೇಗೆ ಬಂದಿತು ಎಂಬುದನ್ನು ವಿವರಣಾತ್ಮಕ ವಾಗಿ ಬರೆದಿರುವ ಲೇಖನ ಬಹಳ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.ಅಭಿನಂದನೆಗಳು.

  3. ನಯನ ಬಜಕೂಡ್ಲು says:

    ಸಾಕಷ್ಟು ಅಪರೂಪದ ಮಾಹಿತಿಗಳನ್ನೊಳಗೊಂಡ ಲೇಖನ ತುಂಬಾ ಚೆನ್ನಾಗಿದೆ.

  4. Padma Anand says:

    ಎಷ್ಟೊಂದು ಮಧುರ ನೆನಪುಗಳು. ಪ್ರತಿಭೆಯ ಅನಾವರಣಕ್ಕೆ ಕಾರಣವಾದ ಪ್ರಮುಖ ವೇದಿಕೆಯಾದ ಮೆಚ್ಚಿನ ಆಕಾಶವಾಣಿ. ಚಂದದ ಬರಹ.

  5. Padmini Hegde says:

    ಲೇಖನ ಓದಿದ ಸಹೃದಯರಿಗೆಲ್ಲ ವಂದನೆಗಳು. ಲೇಖನವನ್ನು ಮುದ್ದಾದ ಚಿತ್ರಗಳೊಂದಿಗೆ ಆಕರ್ಷಕವಾಗಿಸಿರುವ ಮತ್ತೆ ದೀರ್ಘವಾಗಿದ್ದರೂ ಪ್ರೀತಿಯಿಂದ ಪ್ರಕಟಿಸಿರುವ ಹೇಮಮಾಲಾ ಮೇಡಂಗೆ ಧನ್ಯವಾದಗಳು.

  6. ಶಂಕರಿ ಶರ್ಮ says:

    ರೇಡಿಯೋದ ನಂಟು..ಬಿಡಿಸಲಾಗದ ಒಂದೊಳ್ಳೆ ಗಂಟು. ತಮ್ಮ ಅನುಭವಗಳಲ್ಲಿ ಒಂದು, ಸಾಮಾನ್ಯವಾಗಿ ಸಮಕಾಲೀನರಿಗೆ ಆಗಿಯೇ ಆಗುತ್ತದೆ. ಹತ್ತಿರದ ಬಂಧುಗಳಲ್ಲಿ ಮೊತ್ತ ಮೊದಲ ಬಾರಿಗೆ, (ನನ್ನ ಏಳನೇ ವಯಸ್ಸಲ್ಲಿ ಇರಬಹುದು ) ಸಂಗೀತ ಕೇಳಿದಾಗ, ಅಷ್ಟು ಮಂದಿ ಅದರೊಳಗೆ ಹೇಗೆ ಕೂತ್ಕೊಂಡಿದ್ದಾರೆ ಎಂದು ಮನೆಯವರಲ್ಲಿ ಕೇಳಿದ ನೆನಪು ಇಂದಿಗೂ ಇದೆ! ಸೊಗಸಾದ ನೆನಪಿನ ಸರಮಾಲೆಯನ್ನು ಬಿಚ್ಚಿಟ್ಟಿರುವಿರಿ..ಧನ್ಯವಾದಗಳು ಮೇಡಂ. ಈಗಲೂ ನಮ್ಮೂರ ಸಮುದಾಯ ರೇಡಿಯೋ ಕೇಂದ್ರದಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತಾ, ಅದರೊಂದಿಗಿನ ನಂಟು ಮುಂದುವರಿಸಿರುವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: