ಆ ಕ್ಷಣವನ್ನು ದಾಟಿಸಬೇಕಿತ್ತು  

Share Button

ಅಂದು ಶಾಲೆಯಲ್ಲಿ ಬೆಳಗಿನ ಕಿರು ವಿರಾಮ ಮುಗಿಸಿ ಗಂಟೆ ಹೊಡೆದ ತಕ್ಷಣ ಮುಂದಿನ ತರಗತಿಗೆ ಹೋದೆ. ಹಿಂದಿನಿಂದಲೇ ಮಕ್ಕಳು ಕಲರವದೊಂದಿಗೆ ಒಳಪ್ರವೇಶಿಸಿ ತಮ್ಮ ತಮ್ಮ ಜಾಗ ಸೇರಿ ಒಕ್ಕೊರಲಿನಿಂದ ನಮಸ್ಕಾರ ಹೇಳಿ ಕುಳಿತರು.  ಮಕ್ಕಳ ಹಾಜರಿ‌ ತೆಗೆದುಕೊಂಡು ಕುರ್ಚಿಯಿಂದೆದ್ದು ಬೋರ್ಡಿನ ಬಳಿಗೆ ಹೋಗುವಷ್ಟರಲ್ಲಿ. *ಅಯ್ಯೋ!   ತಡೀಲಾರೆ* ಎಂದು ಇಡೀ ತರಗತಿಯೇ ಬೆಚ್ಚಿಬಿದ್ದು, ಪ್ರತಿಧ್ವನಿಸುವಂತೆ ಯಾರೋ ಅತ್ಯಂತ ವಿಕಾರವಾಗಿ, ಕೇಳಿದವರ ರಕ್ತ ಭೀತಿಯಿಂದ ಹೆಪ್ಪುಗಟ್ಟುವಂತೆ ಕಿಟ್ಟನೆ ಕಿರುಚಿದರು.

ಮಕ್ಕಳೂ ಕೆಲವರು ಏನೆಂದು ಅರಿಯದೆ ತಟ್ಟನೆ Reflex action ಎನ್ನವಂತೆ ತಾವೂ ಚೀರತೊಡಗಿದರು. ಒಂದು ಕ್ಷಣ ನನ್ನೆದೆಯೂ ದಿಗಿಲಿನಿಂದ ನಡುಗಿಬಿಟ್ಟಿತು. ಯಾರೆಂದು ಕಣ್ಣಾಡಿಸಿದರೆ ಆ ಬಾಲೆ ಹೊಟ್ಟೆ ಹಿಡಿದುಕೊಂಡು ಅಳುತ್ತಾ ಚೀರುತ್ತಾ ವಿಲವಿಲನೆ ಒದ್ದಾಡತೊಡಗಿದ್ದಳು.‌ ತಟ್ಟನೆ ಅವಳ ಬಳಿಗೆ ಧಾವಿಸಿ, *ಯಾಕೆ ಪುಟ್ಟಿ ಏನಾಗ್ತಿದೆ* ಗಾಬರಿಯಿಂದಲೇ ಕೇಳಿದೆ.*ಹೊಟ್ಟೆ ನೋವೂ, ಅಯ್ಯೋ! ತಡ್ಕಳೋಕ್ಕಾಗ್ತಾಯಿಲ್ಲ ಟೀಚರ್* ಎಂದು  ಅಳತೊಡಗಿದಳು.

ಒಂದು ವಾರದಿಂದ ಅವಳು ಶಾಲೆಗೆ ಬಂದಿರಲಿಲ್ಲ ಎಂಬುದು ಅರಿವಿಗೆ ಬಂದಿತು . ತಕ್ಷಣ ಅವಳನ್ನು ಅಲ್ಲೇ ಬೆಂಚಿನ ಮೇಲೆ ಮಲಗಿಸಿ ಮೃದುವಾಗಿ ಕೇಳಿದೆ, *ಯಾಕೆ ಪುಟ್ಟಿ? ಏನಾಯ್ತು? ಒಂದು ವಾರದಿಂದ ಸ್ಕೂಲ್ಗೂ ಬಂದಿಲ್ವಲ್ಲಾ*.

*ತುಂಬಾ ಹೊಟ್ಟೆ ನೋವಾಗಿ ಆಸ್ಪತ್ರೆಗೆ‌ ಅಡ್ಮಿಟ್ ಆಗಿದ್ದೆ ಟೀಚರ್. ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿ ಮನೆಗೆ ಬಂದೆ* ಎಂದಳು

*ಏನು!? ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿ, ಇವತ್ತು ಬೆಳಿಗ್ಗೆನೇ ಸ್ಕೂಲಿಗೆ ಬಂದಿದೀಯಲ್ಲಾ ??!! ತಲೆ ಸರಿ ಇದೆಯಾ ನಿಂಗೆ?? ಮನೇಲೇ ನಾಲ್ಕು‌ದಿನ ಇದ್ದು ರೆಸ್ಟ್ ತಗೊಳ್ಬಾರ‌್ದಾಗಿತ್ತಾ? ಪೋರ್ಷನ್ ಎಲ್ಲ ಮುಗಿದಿದೆ. ಬರೀ ರಿವಿಷನ್ ಅಲ್ವಾ?*  ಸ್ವಲ್ಪ ಸಿಟ್ಟಿನಿಂದಲೇ ಪ್ರಶ್ನಿಸಿದೆ.

*ನಂಗೆ ಇನ್ನೂ ತುಂಬಾ ಸುಸ್ತಿದೆ ಅಮ್ಮಾ.. ಸ್ಕೂಲ್ಗೆ ಹೋಗೋಕಾಗುಲ್ಲ ಅಂತ ಎಷ್ಟು ಬೇಡಿಕೊಂಡ್ರೂ ನಮ್ಮಮ್ಮ ಬೈದು ಬಲವಂತವಾಗಿ ಕಳಿಸಿದ್ರು ಟೀಚರ್. ನಂಗೆ ಇನ್ನೂ  ಹೊಟ್ಟೆ ನೋಯ್ತಾನೇ ಇದೆ*  ಎಂದು ಮತ್ತೂ‌ ಜೋರಾಗಿ ಅಳತೊಡಗಿದಳು. ನನಗೂ ಒಂದು ಕ್ಷಣ ದಿಕ್ಕು ತೋಚದಾಯ್ತು.  ಅವಳಮ್ಮನ ಮೇಲೆ ಅಸಾಧ್ಯ ಕೋಪವೂ ಬಂದಿತು.

ನಾನು ಆಗ ಕೆಲಸ ಮಾಡುತ್ತಿದ್ದುದು ಬಹಳ ಪ್ರಖ್ಯಾತವಾದ ಪ್ರತಿಷ್ಠಿತ ಶಾಲೆಯಲ್ಲಿ. ಸಾಕಷ್ಟು ಸಂಖ್ಯೆಯ ಹಲವು ಕೋಟ್ಯಾಧಿಪತಿಗಳ ಮಕ್ಕಳಲ್ಲದೆ ಕೆಲವು‌ ಸಿನಿಮಾ ತಾರೆಯರ ಮಕ್ಕಳು, ರಾಜಕೀಯ ನೇತಾರರ, ಮಂತ್ರಿಗಳ ಮಕ್ಕಳು, ಐ ಎ ಎಸ್, ಐಪಿಎಸ್ ಅಧಿಕಾರಿಗಳ ಮಕ್ಕಳು, ಪೂರ್ವೋತ್ತರ ರಾಜ್ಯಗಳ ಮಂತ್ರಿಗಳ ಉನ್ನತ‌ ಅಧಿಕಾರಿಗಳ ಮಕ್ಕಳೂ ಬರುತ್ತಿದ್ದ ಶಾಲೆ. ಇಂಥ ಪ್ರತಿಷ್ಠಿತರ ಮಕ್ಕಳಿಗಾಗಿಯೇ ಒಂದು ಸುಸಜ್ಜಿತ  ಬೋರ್ಡಿಂಗ್ ಇದ್ದು ಪಕ್ಕದಲ್ಲಿಯೇ 24 ಗಂಟೆಯೂ ಒಂದಿಬ್ಬರು ನರ್ಸ್ಗಳಿರುವ ಮತ್ತು ವೈದ್ಯರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಬರುವ ಒಂದು ಪುಟ್ಟ ಆಸ್ಪತ್ರೆಯೂ ಇತ್ತು. ಬೋರ್ಡಿಂಗ್‌ನಲ್ಲಿರುವ ಮಕ್ಕಳಿಗಂತೂ‌ ಸರಿಯೇ ಸರಿ, ಶಾಲೆಯ  ಬೇರೆ ಯಾವುದೇ ಮಕ್ಕಳಿಗೆ ಅಲ್ಲದೆ ಸಿಬ್ಬಂದಿಗೂ ಶಾಲೆಯಲ್ಲೇ ಅಕಸ್ಮಾತ್ ಏನಾದರು ಆರೋಗ್ಯದ ಸಮಸ್ಯೆ ಆದರೂ ಅಲ್ಲಿಯೇ‌ ತತ್‌ಕ್ಷಣದ ಪ್ರಥಮ   ಚಿಕಿತ್ಸೆ ದೊರೆಯುತ್ತಿತ್ತು.

ಹಾಗಾಗಿ ಹೊಟ್ಟೆ ನೋವಿನಿಂದ ವಿಲವಿಲ ಒದ್ದಾಡುತ್ತಾ ಅಳುತ್ತಿದ್ದ ಅವಳನ್ನು ನೋಡಿ ಭಯವಾಗಿ *ನರ್ಸಿಂಗ್ ರೂಮ್ಗೆ ಹೋಗಿ ತೋರಿಸ್ಕೊಂಡು ಬರೋಣ ಬಾ* ಎಂದು ಅವಸರಿಸಿದೆ.

ಆ ಮಾತಿಗೆ ಅವಳು ಚಟಕ್ಕ‌ನೆ, *ಬೇಡ ಟೀಚರ್. ಏನೂ ಬೇಡ. ನಾನು  ಸಾಯ್ಬೇಕು ಅನ್ನಿಸ್ತಿದೆ ಟೀಚರ್. ನಾನು ಸತ್ತು ಹೋಗ್ಬೇಕು. ನಂಗೆ ಬದುಕೋಕೆ ಇಷ್ಟವಿಲ್ಲ. ಸಾಕಾಗಿ ಹೋಗಿದೆ ಟೀಚರ್‌. ನಂಗೆ ಯಾವ ನರ್ಸಿಂಗ್ ರೂಮೂ ಬೇಡ. ಯಾವ ಟ್ರೀಟ್‌ಮೆಂಟೂ ಬೇಡ. ನಾನು  ಬರೊಲ್ಲ. ನಾನು ಬೇಗ ಸಾಯ್ಬೇಕು. ಬೇಗ ಸಾಯ್ಬೇಕು* ಎಂದು ಹೃದಯವಿದ್ರಾವಕವಾಗಿ ಅಳತೊಡಗಿದಳು.

ಅವಳ ಮಾತು ಬಾಲಿಶ ಎಂದುಕೊಂಡು ಕೆಲವು ಮಕ್ಕಳು ಕಿಸಕ್ಕನೆ ನಕ್ಕರೆ ಮತ್ತೆ ಕೆಲವರು, *ಇದ್ಯಾಕೆ‌ ಟೀಚರ್ ಇವಳು ಹೀಗೆ ಮಾತಾಡ್ತಾಳೆ* ಎಂದು ಸೋಜಿಗದಿಂದ ಕೇಳಿದರು. *ಐದನೆಯ ತರಗತಿಯ ಬಾಲಕಿಯ ಬಾಯಲ್ಲಿ ಸಾಯುವ ಮಾತು???!!! ಅದೂ‌ ಇಷ್ಟು ತೀವ್ರವಾಗಿ!!???. ನಾನು‌ ಬೆಚ್ಚಿ ಬಿದ್ದೆ. ಸಾವು ಎಂದರೇನು ಎಂಬುದಾದರೂ ಇವಳಿಗೆ ತಿಳಿದಿದೆಯೇ ಎಂಬ ಒಂದು ಪ್ರಶ್ನೆಯೂ ಮಿಂಚಿನಂತೆ ಸುಳಿದು ಹೋಯಿತು.

ಆದರೆ ಕೆಲವೇ ದಿನಗಳ ಹಿಂದೆ ನಾಲ್ಕನೆಯ ತರಗತಿಯ ಒಬ್ಬ ಪುಟ್ಟ ಬಾಲಕ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಓದಿ ತತ್ತರಿಸಿ ಹೋಗಿದ್ದೆ. ಆಗೀಗ ಹದಿಹರೆಯದ ಮಕ್ಕಳು, ಕೆಲವೊಮ್ಮೆ ಕಿಶೋರ ವಯಸ್ಸಿನವರೂ ಆತ್ಮಹತ್ಯೆಗೆ‌ ಶರಣಾಗುವ ಸುದ್ದಿಗಳನ್ನು ಅರಗಿಸಿಕೊಳ್ಳಲಾಗುವುದೇ? ಇನ್ನೂ ಸರಿಯಾಗಿ ಕಣ್ಣೂ ಬಿಡದ, ಜಗತ್ತನ್ನು‌ ಸರಿಯಾಗಿ ನೋಡದ, ಬದುಕು ಅರಳಬೇಕಾದ ಎಳೆಯ ಮಕ್ಕಳು ಸಾಯುವ ನಿರ್ಧಾರವನ್ನೇಕೆ ಮಾಡುತ್ತಾರೆ? ಅದಕ್ಕೆ ಸಮಾಜ, ತಂದೆತಾಯಿ, ಬಂಧುಗಳು, ಸ್ನೇಹಿತರು, ಶಾಲೆ  ಯಾರ‌್ಯಾರು‌ ಎಷ್ಟೆಷ್ಟು ಹೊಣೆ?

*ಯಾಕೆ ಪುಟ್ಟಿ ಹೀಗ್ಮಾತಾಡ್ತೀಯ? ಸಾಯೋಕೇನಾಗಿದೆ ನಿನಗೆ? ಒಂದು ವಾರ ಮನೆಲಿ‌ ರೆಸ್ಟ್ ತಗೊ. ಸರಿ ಹೋಗುತ್ತೆ.  ನಿಮ್ಮಮ್ಮಂಗೆ ಹೇಳಿ ಕಳಿಸ್ತೀನಿ. ಬಂದು ಕರಕೊಂಡು ಹೋಗ್ತಾರೆ. ಒಂದು ಹೊಟ್ಟೆ ನೋವಿಗೆಲ್ಲ ಯಾರಾದ್ರೂ ಸಾಯೋ ಮಾತಾಡ್ತಾರಾ ಪುಟ್ಟಿ?* ಎಂದೆ ಸಂತೈಸುವಂತೆ.

*ಅಯ್ಯಯ್ಯೋ! ನಿಮ್ಮ ದಮ್ಮಯ್ಯ. ನಮ್ಮಮ್ಮಂಗೆ ಹೇಳ್ಬೇಡಿ ಟೀಚರ್. ಹಂಗಿಸಿ ಹಂಗಿಸೀನೇ ನನ್ನ ಸಾಯಿಸ್ಬಿಡ್ತಾರೆ* ಎಂದು ಕೈಕೈ ಹಿಡಿದು ಬೇಡಿಕೊಂಡಳು.

ಹಾಗಾದರೆ ಇದು ಸಾಧಾರಣ ಹೊಟ್ಟೆ ನೋವಿನ ಮಾತಲ್ಲ ಎಂದು ಅರಿವಾದದ್ದೇ, ಪಕ್ಕದ ತರಗತಿಯಲ್ಲಿದ್ದ ನನ್ನ ಸಹೋದ್ಯೋಗಿಗೆ, ಚುಟುಕಾಗಿ ವಿಷಯ ತಿಳಿಸಿ, ಸ್ವಲ್ಪ ಹೊತ್ತು ನನ್ನ ತರಗತಿಯ ಮಕ್ಕಳನ್ನೂ ನೋಡಿಕೊಳ್ಳಬೇಕೆಂದು ವಿನಂತಿಸಿಕೊಂಡು, ಅವಳನ್ನು ತಕ್ಷಣ ಹೊರಗೆ ಕರೆದುಕೊಂಡು ಬಂದು ಶಾಲೆಯ ವಿಶಾಲ ಅಂಗಳದ ದೂರದೊಂದು‌ ಮರದ ಕೆಳಗಿನ ಕಲ್ಲು ಬೆಂಚಿನ ಮೇಲೆ ಕುಳ್ಳಿರಿಸಿಕೊಂಡು, ಮೃದುವಾಗಿ‌ ಅವಳ ಬೆನ್ನು ನೇವರಿಸುತ್ತಾ, *ಮನೇಲೇನಾಯ್ತು ಹೇಳು. ಯಾಕೆ ಹೀಗೆ ಸಾಯೋ‌
ಮಾತಾಡ್ತದೀಯಾ?* ಎಂದು ರಮಿಸತೊಡಗಿದೆ.

ಹಾಗೆ ಕೇಳಿದ್ದೇ ಅವಳ‌ ದುಃಖದ ಅಣೆಕಟ್ಟೊಡೆದು ಅಳು ಭೋರ್ಗರೆವ ಪ್ರವಾಹವಾಗಿ ನುಗ್ಗಿ ಬಂತು.

ಮಧ್ಯೆ ಮಧ್ಯೆ ಬಿಕ್ಕುತ್ತಲೇ, *ಹೌದು ಟೀಚರ್ ನಾನು ಸಾಯ್ಲೇ ಬೇಕು. ನನ್ನಿಂದ ಅಮ್ಮ ಅಪ್ಪನಿಗೆ ಯಾರಿಗೂ ಪ್ರಯೋಜನವಿಲ್ಲ. ಈಗಾಗ್ಲೇ ಆಸ್ಪತ್ರೆ ಖರ್ಚೇ ಎಪ್ಪತ್ತೈದು ಸಾವಿರ ಆಯ್ತಂತೆ, ಇನ್ನು ಓದಿಸೋ ಖರ್ಚು, ಅಮೇಲೆ ಮದುವೆ ಮಾಡೋ ಖರ್ಚು ಎಷ್ಟೆಷ್ಟೋ ಲಕ್ಷ ರೂಪಾಯಿ ನಮ್ಮಪ್ಪ ಖರ್ಚುಮಾಡ್ಬೇಕಂತೆ. ಅವರಿಗೆ ನಾನೊಂದು ಭಾರ ಅಲ್ವಾ ಟೀಚರ್. ಇಂಥಾ ಮಾತೆಲ್ಲಾ ದಿನಾ ದಿನಾ ಕೇಳೋಕ್ಕಿಂತಾ ಸತ್ತು ಹೋಗೋದೇ ವಾಸಿ ಅಲ್ವಾ ಟೀಚರ್?* ಎಂದಳು

ಎಂತಹ ತಂದೆ ತಾಯಿಗಳು?! ಮೃದು ಮನಸ್ಸಿನ ಮಕ್ಕಳ ಮುಂದೆ ಇಂತಹ ಮಾತಾಡುವುದೇ ಎಂದು ತಿರಸ್ಕಾರ ಮೂಡಿತು.
ಆದರೂ *ಹಾಗಲ್ಲ ಪುಟ್ಟಿ. ತಂದೆ ತಾಯಿಗಳಿಗೆ ಮಕ್ಕಳಂದ್ರೆ ಪ್ರಾಣ. ಏನೋ ಒಂದ್ಸಲ ಹಾಗೆ ಮಾತಾಡಿದ್ರು ಅಂದ ತಕ್ಷಣ ಅದನ್ನು ಇಷ್ಟು ಸೀರಿಯಸ್ಸಾಗಿ ತಗೋತಾರ ಮರಿ??? ಹುಷಾರಿಲ್ದೆ ನೀನು ಒಂದು ವಾರ ಆಸ್ಪತ್ರೆಲಿದ್ದೆ ನೋಡು. ಅದಕ್ಕೆ‌ ಮೈಯಲ್ಲಿ ಏನೂ ಶಕ್ತಿಯಿಲ್ದೆ ನಿನ್ ಮನಸ್ಸೂ ವೀಕಾಗಿದೆ. ‘ವೀಕ್ ಮೈಂಡ್ ಇನ್ ಎ ವೀಕ್ ಬಾಡಿ’ ಅಂತ ಹೇಳ್ತಾರೆ ಕೇಳಿದೀಯಲ್ವಾ?  ಸ್ವಲ್ಪ ಏನಾದ್ರೂ ತಿನ್ನು.  ಸುಸ್ತು‌ ಕಡಿಮೆ ಆದರೆ ಮನಸ್ಸಿಗೂ ಶಕ್ತಿ ಬರುತ್ತೆ* ಎಂದು ಹೇಳಿ ಹತ್ತಿರದಲ್ಲೇ ಕಂಡ ಒಬ್ಬ ಆಯಾಳಿಗೆ ಸ್ಟಾಫ಼್ ರೂಮಿನಲ್ಲಿ ನನ್ನ ಟೇಬಲ್ ಮೇಲಿಟ್ಟಿರುವ ಊಟದ ಡಬ್ಬಿ ತರಲು‌ ಕಳಿಸಿದೆ.

*ಬೇಡ ಟೀಚರ್. ನಂಗೇನೂ‌ ಬೇಡ. ಸಾಯೋಳಿಗೆ ಊಟ ಯಾಕೆ? ನೀವೀಗ ಏನು ಹೇಳಿದರೂ, ಹೇಗೆ ತಡೆದರೂ ಮನೆಗೆ ಹೋದ ಮೇಲೇ ನಾನು ಸಾಯೋದೆ ನಿಜ. ನಾಳೆ ನೀವ್ಯಾರೂ ನನ್ನ ನೋಡೊಲ್ಲ. ಇಷ್ಟರ ಮೇಲೆ ನಾನು ಸತ್ರೇನು ಟೀಚರ್?? ಇಬ್ಬರು ಅಕ್ಕ ಇದಾರಲ್ವಾ. ಒಬ್ಳ ಖರ್ಚಂತೂ‌ ಅಪ್ಪನಿಗೆ ಕಡಿಮೆ‌ ಆಗುತ್ತೆ. ನಾನು ಸಾಯೋದನ್ನ ನಿಮ್ಕೈಲಿ ತಪ್ಪಿಸೋಕಾಗೊಲ್ಲ ಟೀಚರ್* ಎಂದು ಅವಳು ನಿಶ್ಚಯವಾಗಿ ನುಡಿದಾಗ ನನಗೆ ನಿಜವಾಗಿಯೂ ಗಾಬರಿಯಾಯಿತು.

 

ಚಿತ್ರಕೃಪೆ: ಅಂತರ್ಜಾಲ

ಭಾವೋದ್ರೇಕದ ತುತ್ತ ತುದಿಯ ಸೂಕ್ಷ್ಮ ತಂತುವಿನಲ್ಲಿರುವ ಅವಳ ಮನಸ್ಸನ್ನು ಸಾವಿನ ಯೋಚನೆಯಿಂದ ತಪ್ಪಿಸೋದು ಹೇಗೆ? ಇಂತಹ ಕೇಸ್‌ಗಳನ್ನು ಪ್ರಿನ್ಸಿಪಾಲರ ಗಮನಕ್ಕೆ  ತರೋದೆ ವಾಸಿ ಅಂದುಕೊಂಡು ಹೇಗೋ ಪುಸಲಾಯಿಸಿ ಅವಳನ್ನು ಪ್ರಿನ್ಸಿಪಾಲರ ಬಳಿ ಕರೆದುಕೊಂಡು ಹೋಗಿ ಚುಟುಕಾಗಿ ವಿಷಯ ತಿಳಿಸಿದೆ.

ಆಕೆ ಆ ಬಾಲೆಯನ್ನು ನೋಡಿದ್ದೇ, *You are so fair. So beautiful. Then why do you want to die?* ಎಂದಾಗ ನನಗೆ ಜಿಗುಪ್ಸೆ ಅಸಹ್ಯಗಳಿಂದ ಹಣೆ ಹಣೆ  ಚಚ್ಚಿಕೊಳ್ಳುವಂತಾಯಿತು. ಏನಿವರ ಮಾತಿನ ಅರ್ಥ?!! ಕಪ್ಪಗಿದ್ದವರು, ಚೆಂದವಿಲ್ಲದವರು ಹಾಗಾದರೆ  ಸಾಯಬಹುದು ಎಂಬುದು ಇವರ‌ ಅಭಿಪ್ರಾಯವೇ? ಎಂಬ ಯೋಚನೆ  ಸುಳಿಯದಿರುತ್ತದೆಯೇ??.

ಇವರಿಂದ ಈ‌ ಸಮಸ್ಯೆಗೆ‌ ಪರಿಹಾರ‌ ದೊರಕದು ಎಂದು‌ ಆ ಕ್ಷಣಕ್ಕೇ  ಅರ್ಥವಾದದ್ದೇ, *It’s OK Madam. I will handle with her.* ಎಂದು‌ ಹೊರಗೆ ಕರೆದುಕೊಂಡು ಬಂದೆ. ಮತ್ತೆ ಅದೇ ಮರದ ಬಳಿ ಬಂದು ಬಲವಂತವಾಗಿ‌ ಅವಳಿಗೆ ನಾಲ್ಕು ತುತ್ತು ಮೊಸರನ್ನವನ್ನು ತಿನ್ನಿಸಿದೆ.

*ಪ್ರಿನ್ಸಿ ಮ್ಯಾಡಂ ನಮ್ಮಮ್ಮಂಗೆ ಖಂಡಿತಾ ಫೋನ್ ಮಾಡಿರ್ತಾರೆ. ನನ್ನ ಗತಿ ಏನು ಟೀಚರ್. ನೀವ್ಯಾಕೆ ನನ್ನನ್ನು ಅವರ ಬಳಿಗೆ ಕರಕೊಂಡು ಹೋದ್ರಿ?  ಅಮ್ಮ ಬರೋದ್ರೊಳಗೆ ನಾನು ಸಾಯ್ಬೇಕು. ಇಲ್ದಿದ್ರೆ ಅವರು ಮಾತಿಂದ್ಲೇ ನನ್ನ ಕೊಂದ್ಹಾಕ್ಬಿಡ್ತಾರೆ* ಎಂದು ಗಡಗಡ ನಡುಗುತ್ತಾ ರೋಧಿಸತೊಡಗಿದಳು.

ನಾನೆಷ್ಟೆಷ್ಟು ರಮಿಸಿದರೂ  ಸಾಯುವ ಅವಳ‌ ನಿರ್ಧಾರ ಅಷ್ಟಷ್ಟು ಗಟ್ಟಿಯಾಗುತ್ತಿತ್ತು. ನನ್ನ ಪುಸಲಾವಣೆ ನಡೆದಿರುವಂತೆಯೇ ಆ ಮಹಾತಾಯಿ ಆಗಮಿಸಿ, *ಆಯ್ತಾ? ತೃಪ್ತಿಯಾಯ್ತಾ? ಚೆನ್ನಾಗಿ ನಾಟಕ ಆಡ್ತಿದೀಯ. ಹತ್ತು ದಿನ ಆಸ್ಪತ್ರೆಗೆ ಸೇರ‌್ಸಿ  ನೋಡ್ಕೊಳ್ಲಿಲ್ವಾ?  ಬೇಕಾದಷ್ಟು ದುಡ್ಡು ಸುರೀಲಿಲ್ವಾ?  ಇನ್ನೇನು ರೋಗ ನಿಂಗೆ?  ಸಾಯ್ತೀಯಾ? ಸಾಯಿ ನೋಡ್ತೀನಿ. ಸಾಯಿ ನೋಡ್ತೀನಿ. ಇವ್ಳು ಸುಮ್ನೆ ನಾಟಕ ಆಡ್ತಿದಾಳೆ. ಅಯ್ಯೋ! ಮೇಡಂ, ನೀವ್ಯಾಕವ್ಳ ಮಾತನ್ನು ಅಷ್ಟು ಸೀರಿಯಸ್ಸಾಗಿ ತಗೊಂಡಿದೀರಿ* ಎಂದು ಹಂಗಿಸತೊಡಗಿದರು.

*ನಾನು ಹೇಳ್ಲಿಲ್ವಾ ಟೀಚರ್?  ಅಮ್ಮನ್ನ ಕರೆಸಬೇಡಿ ಅಂತ. ಈಗ ನೋಡಿ ಹೇಗ್ಮಾತಾಡ್ತಾರೆ. ಹೇಳಿ ನಾನ್ಯಾಕೆ ಬದುಕ್ಬೇಕು. ನಾನು ಸತ್ರೇನೇ ಇವರಿಗೆಲ್ಲ ಖುಷಿ.‌ ಅದಕ್ಕೇ ಇವರೆಲ್ಲ ಕಾಯ್ತಿದಾರೆ* ಎಂದು ಭಯವಿಹ್ವಲಳಾಗಿ ಅಳುತ್ತಾ ನಡುಗತೊಡಗಿದಳು.

ನನಗೆ ಬ್ರಹಾಂಡ ಕೋಪ ಬಂದು ಮೈ ಉರಿದು ಹೋಯಿತು.
*ನೀವೇನು ಹೆತ್ತ ತಾಯಿನಾ? ಹತ್ತು ದಿನ ಆಸ್ಪತ್ರೆಲಿದ್ದೋಳು. ಮನೇಲಿ ನಾಲ್ಕು ದಿನ ರೆಸ್ಟ್ ತಗೋಳೋಕೆ ಬಿಡ್ದೆ ಬಲವಂತವಾಗಿ ಸ್ಕೂಲಿಗೆ ಕಳಿಸಿದೀರಲ್ಲ. ಪೋರ್ಷನ್ ಎಲ್ಲ ಮುಗಿದಿದೆ. ಸ್ಕೂಲಿಗೆ ಕಳಿಸದಿದ್ದರೆ ಏನು ಸೂರೆ ಹೋಗ್ತಿದ್ದಿದ್ದು. ಅಲ್ಲದೆ ಇವಳನ್ನು ಈಗ ಹೀಗೆ ಹಂಗಿಸಿ ಮಾತಾಡ್ತೀರಲ್ಲಾ. ನೀವೇನು ಮನುಷ್ಯರಾ? ಎಳೆಯ ಹುಡುಗಿ. ಇವಳ ಮನಸ್ಸೀಗ ತುಂಬಾ ವೀಕ್ ಆಗಿದೆ. ನೀವೆಲ್ಲ ಮಲಗಿದ್ದಾಗ ಇವಳೇನಾದ್ರೂ ಮಾಡ್ಕೊಂಡ್ರೆ???……ಈಗಿನ ಮನಸ್ಥಿತೀಲಿ ಇವಳು ಹಾಗೆ ಏನಾದ್ರೂ ಮಾಡ್ಕೊಂಡು ಸಾಯೋದೆ ನಿಜ. ಆಗ  ಬದುಕಿಸ್ಕೊಳೋಕೆ ನಿಮಗೆ ಸಾಧ್ಯನಾ? ಹೇಳಿ ಮೇಡಂ. ನಿಮಗೆ ದುಡ್ಡು ಮುಖ್ಯನಾ? ಮಗಳು ಮುಖ್ಯನಾ? ತಾಯಂದಿರು ಯಾರಾದ್ರೂ ನಿಮ್ಮ ಹಾಗೂ ಇರ್ತಾರಾ? ಥೂ! ಹೊರಟ್ಹೋಗಿ ನೀವು. ನಾನಿವಳನ್ನು ನೋಡ್ಕೊತೀನಿ* ಎಂದು ಅವರಿನ್ನು ಅಲ್ಲಿ ಒಂದು ನಿಮಷವೂ ನಿಲ್ಲಲಾಗದಂತೆ ಹಿಗ್ಗಾ ಮುಗ್ಗಾ ಬೈದು ಕಳಿಸಿಬಿಟ್ಟೆ.

ಅವರಮ್ಮ ಬಂದು ಹಂಗಿಸಿ ಹೋದ ಮೇಲಂತೂ ಸಾಯುವ ಅವಳ ನಿಶ್ಚಯ ಇನ್ನೂ ಗಟ್ಟಿಯಾಗಿಬಿಟ್ಟಿತು. ಅವಳ ಭೀಕರ ನಿರ್ಧಾರದ ಘೋರ ಕ್ಷಣದಿಂದ‌‌ ಅವಳನ್ನು ದಾಟಿಸಿ ಅವಳಲ್ಲಿ ಆತ್ಮವಿಶ್ವಾಸ ತುಂಬಿ‌ ಜೀವನ್ಮುಖಿಯಾಗಿ ಮಾಡಲೇಬೇಕಿತ್ತು.

ಈಗ ನಾನೇನು ಮಾಡಲಿ?? ಸಾಯುವ ಯೋಚನೆಯಿಂದ ಅವಳನ್ನು ಹೇಗೆ ವಿಮುಖಳನ್ನಾಗಿ ಮಾಡಲಿ??. ನನ್ನ ಮುಂದಿನ ತರಗತಿಯೂ ಮುಗಿದು ಅದರ ಮುಂದಿನ ತರಗತಿಯೂ ಮುಗಿಯುತ್ತಾ ಬಂದಿತ್ತು. ನನ್ನ ಸಹೋದ್ಯೋಗಿ ಮತ್ತು‌ ನನ್ನ ನಡುವೆ ಒಳ್ಳೆಯ ಹೊಂದಾಣಿಕೆ ಇದ್ದದ್ದರಿಂದ ನನಗೆ ಯೋಚನೆ ಇರಲಿಲ್ಲ. ಆದರೆ ಆ ಬಾಲೆಯನ್ನು  ಅವಳ ಕ್ಲಾಸಿಗೆ ಕಳಿಸುವ ಧೈರ್ಯ ಮಾತ್ರ ಉಂಟಾಗಲಿಲ್ಲ. ಒಂದು ಕ್ಷಣದಲ್ಲಿ ನನ್ನ ಕೈ ಮತ್ತು ಗಮನ ಎರಡರಿಂದಲೂ ಮಿಂಚಿನ ವೇಗದಲ್ಲಿ ನುಣುಚಿಕೊಂಡು‌ ಓಡಿ ಹೋಗಿ, ಬಹು ಮಹಡಿ ಶಾಲೆಯ ಯಾವುದಾದರೂ ಮಹಡಿಯನ್ನು ಚಕ್ಕನೆ ಏರಿ……….??? ಎದೆ‌‌ ನಡುಗಿಬಿಟ್ಟಿತು.

ಅಕ್ಕರೆಯಿಂದ ಅವಳನ್ನಪ್ಪಿಕೊಂಡೇ ಅವಳ ಆಸೆ, ಆಸಕ್ತಿ, ಟ್ಯಾಲೆಂಟ್‌ಗಳ ಬಗ್ಗೆ ಮಾತಾಡುತ್ತಾ,  ಭವಿಷ್ಯದ ಸುಂದರ ಕನಸುಗಳನ್ನು  ಬಿತ್ತಲೆತ್ನಿಸುತ್ತಾ,  ಸಂತೈಸುತ್ತಾ ಹೋದಷ್ಟೂ ನನ್ನ ಆ ಎಲ್ಲಾ ಮಾತುಗಳಿಗೂ ಕಿವುಡಾಗಿದ್ದ ಅವಳ ಮನಸ್ಸಿನಲ್ಲಿ‌ ಮಥಿಸುತ್ತಿದ್ದದ್ದು ಸಾವಿನ ಯೋಚನೆಯೊಂದೇ ಎಂದು ಅರಿವಾದಂತೆ ನನಗೂ ದಿಕ್ಕು ತೋಚದಂತಾಗತೊಡಗಿತು. ಏನು ಮಾಡಲಿ?? ಈಗೇನು ಮಾಡಲಿ??…..ಅಸಹಾಯಕತೆ ಮತ್ತು ಭೀತಿಯಿಂದ ಚಡಪಡಿಸಿದೆ‌. ಹತ್ತಾರು ಬಗೆಯಲ್ಲಿ‌ ಯೋಚಿಸುತ್ತಲೇ ಕಡೆಗೆ ಇದಕ್ಕೆ ಒಂದೇ ದಾರಿ ಎಂದು ಅನಿಸಿತು.

ನಾನು ಹಿಂದೆಂದೂ ಮಾಡಿರದ, ನನಗೆ ನಂಬಿಕೆಯೂ ಇರದಿದ್ದ ಒಂದು ಕೆಲಸ ಮಾಡಲು ನಿರ್ಧರಿಸಿ, *ಪುಟ್ಟೀ,  ನಿನಗೆ ನನ್ನನ್ನು ಕಂಡರೆ ಇಷ್ಟ ಇದೆ ಅಲ್ವಾ? * ಅಂತ ಕೇಳಿದೆ.
*yes teacher.  you are my most favourite teacher. I love you very much. I love you more than my mother.* ಎಂದಳು.

‌ಹೀಗೆ ಕಲಿಸಿ ಹೀಗೆ ಹೋಗುವ ಒಬ್ಬ ಟೀಚರ್ ಮೇಲೆ ಹೆತ್ತ ತಾಯಿಗಿಂತ ಜಾಸ್ತಿ ಪ್ರೀತಿ ಇರಲು ಸಾಧ್ಯವೇ?!! ಎಳೆವಯಸ್ಸಿನ ಮುಗ್ಧಭಾವ ಅದು. ಆದರೆ ಜೀವನದ   ಮೆಟ್ಟಿಲೇರುತ್ತಾ ಹೋದಂತೆ ಕ್ರಮೇಣ ವಿದ್ಯಾರ್ಥಿಗಳ ನೆನಪಿನಿಂದಲೂ ಮರೆಯಾಗಿ ಬಿಡಬಹುದಾದವರು ಶಿಕ್ಷಕರು, ವಿದ್ಯಾರ್ಥಿ ಜೀವನದಲ್ಲಿ ಕೆಲಕಾಲ ಮಾತ್ರ ಪ್ರಮುಖ ಪಾತ್ರ  ವಹಿಸಿರುತ್ತಾರಷ್ಟೆ.‌ ಮುಂದೆ ಇವಳ ವಿಷಯದಲ್ಲೂ ಇದು ಸತ್ಯವಾಗಬಹುದಾದ ವಿಷಯವಾದರೂ ಆ ಕ್ಷಣಕ್ಕೆ ಅವಳ ಆ ಮಾತು ನನಗೆ ಆಗ‌ ಅವಶ್ಯವಿದ್ದ ಬಲಕೊಟ್ಟಿತು. ದಿಕ್ಕು ತೋರಿಸಿತು.

ಗೆದ್ದೆ ಎಂದು ಕೊಳ್ಳುತ್ತಾ, *ಹಾಗಾದ್ರೆ…..ನಿಂಗೆ ನಿಜವಾಗ್ಲೂ ನನ್ಮೇಲೆ ಪ್ರೀತಿ ಇರೋದಾದ್ರೆ…ನಂಗೊಂದು ಪ್ರಾಮಿಸ್ ಮಾಡ್ತೀಯ ಪುಟ್ಟಿ…..?* ಎಂದು ಅಂಗೈ ನೀಡಿದೆ.ಅನುಮಾನದಿಂದ ತಬ್ಬಿಬ್ಬಾದರೂ ಒಲ್ಲದ ಮನಸ್ಸಿನಿಂದಲೇ ಬಹಳ ನಿಧಾನವಾಗಿ ನನ್ನ ಅಂಗೈ ಮೇಲೆ ತನ್ನ ಅಂಗೈ ಇಟ್ಟು *ಪ್ರಾಮಿಸ್ ಟೀಚರ್* ಎಂದಳು.  ಈ ಸಮಯದಲ್ಲಿ ನಾನು ಏನು ಕೇಳಬಹುದೆಂಬ ವಾಸನೆ ಸಹಜವಾಗಿಯೇ ಅವಳಿಗೆ ಬಡಿಯದಿರುತ್ತದೆಯೇ!??

*ನನ್ನ ತಲೆ‌ ಮೇಲೆ ಕೈಯಿಟ್ಟು ನನ್ಮೇಲೆ ಆಣೆ ಮಾಡಿ ಹೇಳು. ನೀನಿನ್ನೆಂದೂ ಸಾಯೋ ಯೋಚನೆ ಮಾಡೊಲ್ಲ,‌ ಸಾಯೊ ಮಾತಾಡೊಲ್ಲ ಅಂತ* ಎಂದು  ಹೇಳಿದೆ. ಆಗ ನೋಡಬೇಕಿತ್ತು!  ಅವಳ ಮುಖದ ಮೇಲೆ ಭಾವನೆಗಳ ಯಕ್ಷಗಾನದ ಕುಣಿತ. ಅದರಲ್ಲಿ ಅಸಮಾಧಾನದ ರುದ್ರ ತಾಂಡವವೇ ಹೊಡೆದು ತೋರುತ್ತಿತ್ತು. ಬದುಕು ಈ ಚಿಕ್ಕ ವಯಸ್ಸಿಗೇ ಇವಳಿಗೆ ಇಷ್ಟೊಂದು ಬೇಸರ ಮೂಡಿಸಿದೆಯೇ ಎಂದು ಮನಸ್ಸಿಗೆ ತುಂಬಾ ನೋವಾಯಿತು.

ಅವಳು ಬಹಳ ನಿರಾಶೆ ಹಾಗೂ ನೋವಿನಿಂದಲೇ *ಆಯ್ತು ಟೀಚರ್. ನಾನಿನ್ಯಾವತ್ತೂ ಸಾಯೋ ಮಾತಾಡೊಲ್ಲ. ಸಾಯೊ‌ ಯೋಚನೆ ಮಾಡೊಲ್ಲ. ನಿಮ್ಮಾಣೆಗೂ ಟೀಚರ್* ಎಂದಳು.

ಚಿತ್ರಕೃಪೆ: ಅಂತರ್ಜಾಲ

*ಆ ಪುಟ್ಟ ಬಾಲೆಗೆ ನನ್ನ ಮೇಲಿದ್ದ ನಿರ್ಮಲ ಪ್ರೀತಿಯ ದ್ಯೋತಕವಾಗಿತ್ತು‌ ಅವಳು‌ ಕೊಟ್ಟ ಭಾಷೆ.* ನನ್ನ ಹೃದಯ ತುಂಬಿಬಂದು ಬಾಚಿ ಅವಳನ್ನು ಅಪ್ಪಿಕೊಂಡೆ.

ನನ್ನ ಭೀತ‌ ಮನಸ್ಸು ಮೊದಲ ಬಾರಿಗೆ ಸ್ವಲ್ಪ ಹಗುರತೆ ಕಂಡಿತು.ಈ ರೀತಿಯ *Emotional black mail* ಮಾಡದೆ ಅವಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಖಚಿತವಾಗಿದ್ದರಿಂದ ನಾನು ಆ ದಾರಿ‌ ಹಿಡಿಯುವುದು‌ ಅನಿವಾರ್ಯವಾಗಿತ್ತು. ಆ ಹೊತ್ತಿಗೆ ಅವಳನ್ನು ತಿನ್ನುತ್ತಿದ್ದ ಹೊಟ್ಟೆನೋವು ತುಂಬಾ ಕಡಿಮೆಯಾದದ್ದು ಅರಿವಿಗೆ ಬಂದು ಬೆರಗು ನಿರಾಳ  ಸಂತೋಷ ಎಲ್ಲವೂ ಉಂಟಾಯಿತು. ಇವಳ ಈ ತೀವ್ರವಾದ ಹೊಟ್ಟೆ ನೋವು Psychosomatic disorder ಅಂದರೆ ಮನೋದೈಹಿಕವಾದದ್ದು ಎಂದು ದೃಢವಾಗಿ ಅನಿಸಿಬಿಟ್ಟಿತು.

ಅವಳ ಇಷ್ಟದ ದೇವರು‌ ಹನುಮಂತ ಎಂದು ತಿಳಿದುಕೊಂಡೆ. ಮಾರನೆ ದಿನ ಒಂದು ಸುಂದರ ಹನುಮಂತನ ಫೋಟೋ ಕೊಂಡುಕೊಂಡು ಹೋಗಿ ಕೊಟ್ಟೆ.  ಆಮೇಲೆ ಮುಂದೆ ಇಪ್ಪತ್ತು  ಇಪ್ಪತ್ತೈದು ದಿನಗಳ ಕಾಲ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ನಗುನಗುತ್ತಾ  good morning ಹೇಳಿ ಶಾಲೆಯಲ್ಲಿ ಅವಳಿಗಾಗಿ ಕಾಯುತ್ತಿರುವೆನೆಂದು ತಿಳಿಸಿ, ಶಾಲೆಯಲ್ಲಿ ಅವಳಿಗೆ‌ ವಿಶೇಷ ಗಮನಕೊಡುತ್ತಾ,  ರಾತ್ರಿ ಅವಳಿಗೆ ಮತ್ತೆ ಫೋನ್ ಮಾಡಿ ಪ್ರೀತಿಯಿಂದ ಮಾತನಾಡಿಸುತ್ತಾ, ಕನಸುಗಳನ್ನು ತುಂಬುತ್ತಾ,  ಅವಳ ಮುಗ್ಧ ಮಾತುಗಳಿಗೆ ಕಿವಿಗೊಡುತ್ತಾ,  ಜೋಕ್‌ಗಳನ್ನು ಹೇಳಿ ನಗಿಸುತ್ತಾ,……..ಇರುವಂತೆಯೇ ಅವಳ ಹೊಟ್ಟೆನೋವು ವಿಳಾಸಕೊಡದೆ ಓಡಿಹೋಗಿತ್ತು. ನಾನು ಬೈದು ಕಳಿಸಿದ ಅಪಮಾನದ ಸಿಟ್ಟನ್ನು ಆ ತಾಯಿ ಮಗಳನ್ನು ಹೊಡೆದು ಬಡಿದು ತೀರಿಸಿಕೊಳ್ಳತೊಡಗಿದರೇ….,???ಎಂಬ ಭಯ  ಕಾಡುತ್ತಿತ್ತು.

ಆದರೆ ಬಹುಶಃ ನಾನು ಕೊಟ್ಟ ಶಾಕ್‌ಟ್ರೀಟ್‌ಮೆಂಟ್ ಪರಿಣಾಮಕಾರಿಯಾಗಿದ್ದರಿಂದಲೋ ಏನೋ, ಆಕೆಗೂ ಮಗಳು ಏನಾದರೂ ಮಾಡಿಕೊಂಡುಬಿಟ್ಟರೆ ಎಂದು ಭಯವಾಗಿರಬೇಕು. ಮಗಳೊಂದಿಗೆ ಆ ತಾಯಿ, ತಾಯಿಯೊಬ್ಬಳಿಗೆ ಸಹಜವಾದ ಪ್ರೀತಿ ಮಮತೆ ವಾತ್ಸಲ್ಯ ಅನುಕಂಪದಿಂದ ನೋಡಿಕೊಳ್ಳತೊಡಗಿದ್ದರೆಂದು ಗೊತ್ತಾಗಿ ನಿರಾಳವಾಯಿತು (ಆದರೆ ಮುಂದೆಂದೂ ಆ ತಾಯಿ ನನ್ನನ್ನು ಕಂಡು Wish ಮಾಡಲಿಲ್ಲ. ಭೇಟಿಯನ್ನೂ ತಪ್ಪಿಸಿಕೊಳ್ಳುತ್ತಿದ್ದರು. ಅವರ Ego ಗೆ ನಾನು ಕೊಟ್ಟ ಪೆಟ್ಟನ್ನು ಆಕೆಗೆ ಮರೆಯಲು‌ ಸಾಧ್ಯವೇ?? ನನಗೆ ನಗು ಬರುತ್ತಿತ್ತು. ಹೋಗಲಿ ಬಿಡಿ ಅದರಿಂದ ನನಗೇನೂ‌ ಆಗಬೇಕಿಲ್ಲವಲ್ಲ)

ಅಂತೂ ಇಂತೂ ಕರಗುವುದೇ ಇಲ್ಲವೇನೊ ಎಂದು ಭಯದಿಂದ ತತ್ತರಿಸಿ ಹೋಗುವಂತೆ ಮಾಡಿದ್ದ ಚಂದ್ರ, ಭಯಂಕರ ದಟ್ಟ‌ ಕಾರ್ಮೋಡದಿಂದ  ಹೊರ ಬಂದಿದ್ದ. ಆಮೇಲೆ ಅವಳ ನಗೆಯ‌ ಬೆಳದಿಂಗಳು ನನ್ನ ಮನಕ್ಕೆ ಹೆಚ್ಚಿನ ತಂಪನ್ನು ಕೊಡದಿದ್ದೀತೇ?? ಈಗವಳು ಎಲ್ಲಿದ್ದಾಳೋ ತಿಳಿಯದು. ಎಲ್ಲಿದ್ದರೂ ಚೆನ್ನಾಗಿರಲಿ ಅಷ್ಟೆ.

– ರತ್ನಾ ಮೂರ್ತಿ,ಬೆಂಗಳೂರು

14 Responses

  1. ಮಹೇಶ್ವರಿ ಯು says:

    ತುಂಬ ಹೃದಯಸ್ಪಶಿ೯ಯಾಗಿದೆ ಬರಹ.

  2. Samatha.R says:

    ಕಣ್ಣು ತುಂಬಿ ಬಂತು…ಬಹಳ ಆಪ್ತವಾದ ಬರಹ..

  3. Hema says:

    ವಿದ್ಯಾರ್ಥಿಗಳ ಬಗ್ಗೆ ತಮಗಿರುವ ಕಾಳಜಿ, ಅವರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕೆಂಬ ಕಾಳಜಿ, ಹಾಗೂ ಕೌನ್ಸೆಲಿಂಗ್ ವಿಧಾನಗಳಿಗೆ ಅಭಿನಂದನೆಗಳು.

  4. ನಾಗರತ್ನ ಬಿ.ಆರ್ says:

    ನಿಜವಾಗಿಯೂ ನಿಮ್ಮ ಸಹನೆ ಮಕ್ಕಳ ಮೇಲಿನ ಕಾಳಜಿಗೆ ನನ್ನ ದೊಂದು ನಮಸ್ಕಾರ ಮೇಡಂ.

  5. ಚನ್ನಕೇಶವ says:

    ಮಕ್ಕಳ ಮನಸ್ಸು ಹೇಗೆ ಇರುತ್ತದೆ ಮತ್ತು ತಂದೆ ತಾಯಿಗಳು ಮಕ್ಕಳೊಡನೆ ಹೇಗೆ ವರ್ತಿಸಬೇಕು ಹಾಗೂ ಹೇಗೆ ಬೆಳೆಸಬೇಕು ಅಂತ ನಿಮ್ಮ ಅನುಭವ…. ಮಾರ್ಗದರ್ಶನದಂತಿದೆ.
    ಜೊತೆಗೆ, ನಮ್ಮಲ್ಲಿ ಬೆಳೆದು ಬಂದಿರುವ ಮದುವೆ ಖರ್ಚು, ವೆಚ್ಚ, ವರದಕ್ಷಿಣೆ ಎಲ್ಲಾ ಹೆಣ್ಣು ಮಕ್ಕಳ ತಂದೆ ತಾಯಿಗಳ ಜವಾಬ್ದಾರಿ ಅನ್ನುವ ಮನೋಭಾವ ಹೋಗಬೇಕು. ಮದುವೆಯಿಂದ ಹೆಚ್ಚಿನ ಅನುಕೂಲ ಗಂಡಿನಮನೆಯವರಿಗೇ ಆಗುತ್ತದೆ. ಆ ಹೆಣ್ಣಿನಿಂದ ಅವರ ವಂಶ ಬೆಳಗುತ್ತದೆ.
    ಆದ್ದರಿಂದ ಗಂಡು ಮತ್ತು ಹೆಣ್ಣು ಎರಡೂ ಕಡೆಯವರೂ, ದುಂದುವೆಚ್ಚ ಮಾಡದೇ, ಇಬ್ಬರೂ ಖರ್ಚುನ್ನು ಸಮನಾಗಿ ಹಂಚಿಕೊಂಡು ಮದುವೆ ಮಾಡುವಂತಹ ಸುಧಾರಣೆ ಜಾರಿಗೆ ತಂದರೆ, ಮಕ್ಕಳ ಮನಸ್ಸಿನಲ್ಲಿ ಇಂತಹ ಭಾವನೆ ಮೂಡುವುದು ಕಡಿಮೆಯಾಗಬಹುದು ಎನ್ನುವುದು ನನ್ನ ಅಭಿಪ್ರಾಯ.

  6. ಪುಟ್ಟಣ್ಣ says:

    ರತ್ನಾ ಮೂರ್ತಿಯವರೇ ಕಥೆ ತುಂಬಾ ನೈಜವಾಗಿ ಬಂದಿದೆ.ಕಥೆಯೋ ನಿಮ್ಮ ಅನುಭವವೋ ಅಥವ ಎರಡರ ಮಿಶ್ರಣವೋ. ನಿಮಗೆ ಅಭಿನಂದನೆಗಳು

  7. ನಯನ ಬಜಕೂಡ್ಲು says:

    ಮಕ್ಕಳ ಜೊತೆ ನೀವು ತೋರುವ ಸ್ನೇಹ, ವಾತ್ಸಲ್ಯ, ಅವರನ್ನು ಸರಿಯಾದ ದಾರಿ ತೋರಿಸಿ ಮುನ್ನಡೆಸಿದ ರೀತಿ ಎಲ್ಲದಕ್ಕೂ ಒಂದು ಸಲ್ಯೂಟ್ ಮೇಡಂ. ಬಹಳ ಆಪ್ತ ಬರಹ

  8. Sayilakshmi S says:

    ಮನ ಕಲಕುವ ಅನುಭವ. ಅಭಿನಂದನೆ

  9. Padma Anand says:

    ಆ ವಿದ್ಯಾರ್ಥಿನಿಯ ಅತ್ಯಂತ ಕ್ಲಿಷ್ಟ ಸಮಯದಲ್ಲಿ ನಿಮ್ಮ ಸಮಯೋಚಿತ ನಡುವಳಿಕೆ ಅವಳ ಬಾಳಿನುದ್ದಕ್ಕೂ ಬತ್ತದಾ ನೆನಪಾಗಿ, ನಂದಾದೀಪವಾಗಿ ಕಾಪಾಡುತ್ತದೆ.

  10. ಮುಗ್ಧ ಎಳೇ ಮನಸ್ಸಿಗೆ ಇಂಥಾ ಒಂದು ಭರವಸೆಯ ಅವಶ್ಯಕತೆ ಸಕಾಲಕ್ಕೆ ದೊರಕುವುದು ಅತೀ ಅವಶ್ಯಕ. ಆ ಕ್ಷಣ ಕಳೆದು ಮತ್ತೆ ಆಕೆಯಲ್ಲಿ ಆತ್ಮವಿಶ್ವಾಸ ಮರಳಿದರೆ ಆಕೆಯ ಬಾಳು ಅರ್ಥಪೂರ್ಣ.

  11. Padmini Hegde says:

    ಬಹಳ ಆಪ್ತವಾದ ಬರಹ. ಸಮಸ್ಯೆ ಪರಿಹಾರವಾದುದಕ್ಕೆ ಬಹಳ ಸಂತೋಷವಾಯಿತು. ಅಭಿನಂದನೆಗಳು, ಮೇಡಂ

  12. ಶಂಕರಿ ಶರ್ಮ says:

    ಸಮಸ್ಯೆಯನ್ನು ಬಹಳ ಚೆನ್ನಾಗಿ ನಿಭಾಯಿಸಿ ಮುಗ್ಧ ಮಗುವಿಗೊಂದು ಬಾಳು ಕೊಟ್ಟಿರಿ… ಅವಳ ಪರವಾಗಿ ಅಭಿಮಾನ ಪೂರ್ವಕ ನನ್ನದೊಂದು ವಂದನೆ.. ಧನ್ಯವಾದಗಳು ಮೇಡಂ.

  13. ಎಸ್. ಎಂ. ನಾಗರತ್ನ (ರತ್ನಾ ಮೂರ್ತಿ) says:

    *ಆ ಕ್ಷಣವನ್ನು ದಾಟಿಸಬೇಕಿತ್ತು* ಅನುಭವ ಲೇಖನವನ್ನು ಓದಿ ಮೆಚ್ಚಿ, ಸ್ಪಂದನೆಗಳನ್ನು ಹಾಕಿರುವ ಎಲ್ಲ ಸಹೃದಯರಿಗೆ‌ ಧನ್ಯವಾದಗಳು.
    ಪಠ್ಯಪುಸ್ತಕಗಳಾಚೆಯೂ ಶಿಕ್ಷಕರಿಗೆ ಮಹತ್ತರವಾದ ಜವಾಬ್ದಾರಿ ಇರುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: