ಬಾ ಮುದ್ದು ಇಣಚಿಯೇ
ನಮ್ಮ ಮನೆಯ ತಾರಸಿಯ ಮೇಲೆ ಹಲವಾರು ವರ್ಷಗಳ ಕಾಲದಿಂದ ದಿನಾ ಬೆಳಿಗ್ಗೆ ಹಾಕುವ ಜೋಳ, ಅಕ್ಕಿ, ಒಂದಿಷ್ಟು ಅನ್ನ ನೀರು ಇದಕ್ಕಾಗಿ ಒಂದೈವತ್ತು ಅರವತ್ತು ಪಾರಿವಾಳಗಳು, ಕೆಲವು ಕಾಗೆಗಳು, ಮತ್ಯಾವುದೋ ಒಂದೆರಡು ಹೆಸರರಿಯದ ಹಕ್ಕಿಗಳು, ಕೆಲವೊಮ್ಮೆ ಕೋಗಿಲೆ ಇವೆಲ್ಲ ಬರುತ್ತವೆ. ಅಳಿಲುಗಳು ಬಂದರೂ ಅವು ಉಣ್ಣುವುದು ಅನ್ನವನ್ನು ಮಾತ್ರ. ಬಿರು ಬೇಸಿಗೆಯಲ್ಲಿ ಗೊರವಂಕ ಹದ್ದು, ಗಿಡುಗಗಳೂ ಮತ್ಯಾವುದೋ ಪಕ್ಷಿಗಳೂ ನಮ್ಮ ತಾರಸಿಯ ಅರವಟ್ಟಿಗೆಯನ್ನು ಪಾವನಗೊಳಿಸುತ್ತಿರುತ್ತವೆ. ಆದರೆ ಎಲ್ಲವೂ ಅದೇನು ಪುಕ್ಕಲೋ? ವರ್ಷಗಟ್ಟಲೆಯಿಂದ ಈ ಬೆಳಗಿನ ಉಪಾಹಾರ, ಉಳಿದರೆ ಊಟದ ಅಭ್ಯಾಸವನ್ನು ಕೂಡ ಮಾಡಿದ್ದರೂ ಯಾಕೋ ಅವುಗಳಿಗೆ ನನ್ನೊಂದಿಗೆ ಸ್ನೇಹ ಬೆಳೆಸಲು ಅತೀ ಬಿಗುಮಾನವೋ ದಿಗಿಲೋ ಅರಿಯೆ. ನಾನು ಅಷ್ಟೊಂದು ಭಯ ಹುಟ್ಟಿಸುವಂತಿದ್ದೇನೆಯೇ ಎಂದು ಮತ್ತೆ ಮತ್ತೆ ಕನ್ನಡಿ ನೋಡಿಕೊಂಡಿರುವುದೂ ಉಂಟು. ನನ್ನ ಕಣ್ಣಿಗೆ ನಾನು ತಕ್ಕಮಟ್ಟಿಗೆ ಹಿತವಾಗಿಯೇ ಕಂಡಿದ್ದೇನೆ.
ಅವುಗಳಲ್ಲಿ ಕಾಗೆ ಮಾತ್ರ ನೋಡಿ ತುಸು ಧೈರ್ಯವಂತ. ಶ್ರಾದ್ಧದೇವನ ವರದಿಂದ ಪಿತೃಗಳಿಗೆ ಅನ್ನ ಒದಗಿಸುವವನು ತಾನು ಎಂಬ ಹೆಮ್ಮೆಯೇನೋ ಅರಿಯೆ. ತೀರಾ ಹತ್ತಿರ ಬರುವವರೆಗೂ ಕ್ಯಾರೇ ಎನ್ನದೆ ಅನ್ನಪಾನದಲ್ಲಿ ಮಗ್ನವಾಗಿರುತ್ತದೆ. ಸಮೀಪಿಸಿದ ತಕ್ಷಣ ಪುರ್ರ್…..
ನಮ್ಮ ಮನೆಯ ಮೇಲಿಂದಲೇ ಹಾರಿ ಹೋಗುವ, ಹತ್ತಿರದ ಆಲದ ಮರದ ಮೇಲೆ ಬಂದು ಕುಳಿತುಕೊಳ್ಳುವ ಗಿಣಿಗಳನ್ನು ಬರಮಾಡಿಕೊಳ್ಳಲು, ಸೀಬೆ ಹಣ್ಣುಗಳ ತುಂಡುಗಳನ್ನೂ, ಕೆಲವು ಹಣ್ಣು ಕಡಲೆ ಬೀಜಗಳನ್ನೂ ಮತ್ತೆ ಮತ್ತೆ ಇರಿಸಿ ಕಾದದ್ದೇ ಬಂತು. ಸೀಬೆ ತುಂಡುಗಳು ಒಣಗಿ ಕಟ್ಟಿಗೆಯಾಗಿ, ಬೇರೆ ಹಣ್ಣುಗಳು ಕೊಳೆತು, ಕಡಲೆ ಬೀಜಗಳು ಅಳಿಲು ಪಾರಿವಾಳ ಕಾಗೆಗಳಿಗೆವಿಶೇಷ ಭೋಜನವಾಗಿ, ಛೇ! ಒಂದೇ ಒಂದು ಗಿಳಿಯೂ ಇತ್ತ ತಿರುಗಿಯೂ ನೋಡಬೇಡವೇ?! ಬಲು ಸೊಕ್ಕಿನವು. ಮತ್ಯಾವ ರೀತಿ ಅವುಗಳನ್ನು ಆಕರ್ಷಿಸುವುದೋ ಅರಿಯೆ.
ಹಾಂ! ಆ ಪುಟು ಪುಟು ಅಳಿಲುಗಳು ಬಂದು, ದಪ್ಪ ತುಪ್ಪಳದಂಥ ಬಾಲವನ್ನು ಹಿಂದಕ್ಕೆ ಮೇಲೆತ್ತಿ ಠೀವಿಯಿಂದ ಕುಳಿತುಕೊಂಡು, ಅನ್ನದ ಅಗುಳುಗಳನ್ನು ಎತ್ತಿ ತಿನ್ನುವುದನ್ನು ನೋಡುವುದೇ ಒಂದು ಬೆರಗು. ದೂರದಿಂದಲೇ ನೋಡಿ ಖುಷಿಪಟ್ಟಿದ್ದೇ ಬಂತು. ಇಷ್ಟು ವರ್ಷಗಳಾದರೂ ಯಾವೊಂದು ಅಳಿಲಿನ ಸನಿಹವೂ ಸುಳಿಯಲಾಗಿಲ್ಲ. ಅಳಿಲೊಂದನ್ನು ಮೃದುವಾಗಿ ಎತ್ತಿಕೊಂಡು ಎಡ ಅಂಗೈಯಲ್ಲಿರಿಸಿ, ರಾಮ ಮೂಡಿಸಿದ್ದೆನ್ನಲಾಗುವ, ಅದರ ಬೆನ್ನ ಮೇಲಿನ ಮೂರು ಪಟ್ಟೆಗಳ ಮೇಲೆ ನವುರಾಗಿ ಕೈಯಾಡಿಸುತ್ತಾ ಮುದ್ದು ಮಾಡುವಾಸೆ. ಅವಕಾಶ ಒದಗಿದರೆ ಸಾಕುವ ಆಸೆ ಅದಮ್ಯವಾಗಿತ್ತು. ಆದರೆ ಮೆಟ್ಟಿಲು ಹತ್ತಿ ಬರುವುದನ್ನು ಕಂಡ ತಕ್ಷಣ ಹಸಿವನ್ನೂ ಮರೆತು ಪುಣಕ್ಕನೆ ಓಡಿ ಹೋಗುವ ಅವುಗಳ ಭೀರುತನವನ್ನು ಹೋಗಲಾಡಿಸಲು ನಾನೇನು ಮಾಡಲಿ??
ನಮ್ಮ ಮನೆಯ ಹಿಂಭಾಗಕ್ಕೆ ಅಳವಡಿಸಿರುವ ಕಬ್ಬಿಣದ ತಂತಿ ಜಾಲರಿಯಲ್ಲಿ, ಒಮ್ಮೆ ಅದು ಹೇಗೋ ತಾನು ನುಸುಳಿ ಓಡಾಡುವಷ್ಟು ಒಂದು ತೂತನ್ನು ಅಗಲ ಮಾಡಿಕೊಂಡ ಒಂದು ಅಳಿಲು ನಮ್ಮ ಮನೆಯ ಶೌಚಾಲಯದ ಮೇಲಿನ ಅಟ್ಟದಂತಿರುವ ಭಾಗದಲ್ಲಿ ಪೇರಿಸಿರುವ ಬೇಡದ ಸಾಮಾನುಗಳ ನಡುವೆ ಅದು ಹೇಗೋ ಮರಿ ಹಾಕಿ ತನ್ನ ಬಾಣಂತನ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದು ಸಖತ್ ಖುಷಿಯಾಯಿತು. ಅಷ್ಟೆತ್ತರಕ್ಕೆ ಮೆಟ್ಟಿಂಗಾಲಿಕ್ಕಿ ನೋಡುವುದು ಸಾಧ್ಯವೇ? ಅದರ ಗೋಡೆಗೆ ಹೊಂದಿಕೊಂಡಿರುವ ಬಟ್ಟೆ ಒಗೆಯುವ ಕಟ್ಟೆಯನ್ನು ಹತ್ತಿ ಅವುಗಳ ಸಂಸಾರ ಸೌಭಾಗ್ಯದ ದರ್ಶನ ಪಡೆಯಲೂ ಹಲವಾರು ಬಾರಿ ಪ್ರಯತ್ನಿಸಿದೆ. ಆ ಅಟ್ಟದ ಮೇಲೆ ಪೇರಿಸಿರುವ ಸಧ್ಯ ಅನುಪಯುಕ್ತ ಸಾಮಾನುಗಳ ರಾಶಿಯ ಮಧ್ಯದ ಯಾವ ಗೌಪ್ಯ ಸ್ಥಳದಲ್ಲಿ ತನ್ನ ಬಿಡಾರ ಹೂಡಿ ಬಾಣಂತನ ಮಾಡಿಕೊಳ್ಳುತ್ತಿತ್ತೋ ಊಹೂಂ. ನನ್ನ ಕಣ್ಣಿಗೆ ಗೋಚರಿಸಲೇ ಇಲ್ಲ.
ಬಾಡಿಗೆಯ ಹಂಗಿರದೆ ನಮ್ಮ ಮನೆಯಲ್ಲಿ ವಸತಿ ಹೂಡಿ ಸಂಸಾರ ವೃದ್ಧಿಸಿಕೊಳ್ಳುತ್ತಿರುವ ಈ ಅಳಿಲನ್ನಾದರೂ ಒಲಿಸಿಕೊಂಡು ಸಾಕುವ ಹಂಬಲ ಚಿಗುರೊಡೆಯಿತು. ಆದರೆ ತಾಯಿ ಅಳಿಲು ಹೊರಗಿಂದ ಒಳಗೆ ಓಡಾಡುವ ಸಡಗರ ಮತ್ತು ಆಗಾಗ್ಗೆ ತಾಯಿ ಮರಿಗಳ ಸಂವಾದ ಕೇಳುವುದು ಬಿಟ್ಟು ಮತ್ತೇನೂ ಕಾಣುತ್ತಿರಲಿಲ್ಲ.
ಒಮ್ಮೆ ಬೆಳಗಿನ ಉಪಾಹಾರ ಮುಗಿಸಿ ದಿನ ಪತ್ರಿಕೆ ಓದುತ್ತಿದ್ದಾಗ ಹತ್ತಿರದಲ್ಲೇ ಅಳಿಲುಗಳ *ಚೀ ಚೀ, ಚೀ ಚೀ* ಸದ್ದು!! ಚಕ್ಕನೆ ಪತ್ರಿಕೆ ಬದಿಗಿಟ್ಟು ಎದ್ದು ಅತ್ತಿತ್ತ ಕಣ್ಣು ಹಾಯಿಸಿದರೆ ಅಳಿಲಿನ ಮೂರು ಪುಟ್ಟ ಮರಿಗಳು ಊಟದ ಮನೆಯ ಗೋಡೆಯ ಅಂಚಿನಲ್ಲಿ ನೆಲದ ಮೇಲೆ ಒಂದರ ಹಿಂದೊಂದು ಸರಿದು ಬರುತ್ತಿದ್ದವು!! ತಾಯಿ ಹೊರಗೆ ಹೋಗಿದ್ದಾಗ ಹೊರಜಗತ್ತನ್ನು ಕಾಣುವ ಹಂಬಲದಿಂದ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದುಬಿಟ್ಟಿರುವವೇ? ಎಂದು ದಿಗಿಲಾಯಿತು. ಅಷ್ಟೆತ್ತರದಿಂದ ಬಿದ್ದು ಪೆಟ್ಟಾಗಿರಬಹುದೇ ಎಂದು ಮರುಕವಾಯಿತು.
ಅವುಗಳ ಚಲನೆಯಲ್ಲಿ ಯಾವ ಕೊರೆಯೂ ಕಾಣದುದರಿಂದ, ತಂತಿ ಜಾಲರಿಯನ್ನೇ ಏಣಿಯಾಗಿ ಮಾಡಿಕೊಂಡು ಇಳಿದಿರಬೇಕು ಅಥವಾ ಬಿದ್ದರೂ ದಪ್ಪ ತುಪ್ಪುಳದ ಮೈಯಿಂದಾಗಿ ಪೆಟ್ಟಾಗಿರಲಾರದು ಎನಿಸಿತು. ತೀರ ನಿಧಾನವಾಗಿ, ನನ್ನ ಚಲನೆ ಅವುಗಳ ಗಮನಕ್ಕೆ ಬಾರದ ರೀತಿಯಲ್ಲಿ ಅವುಗಳ ಬಳಿಸಾರಲೆತ್ನಿಸಿದರೆ ಟಣ್ಣನೆ ಹಿಂತಿರುಗಿ ಶೀತಕಾರಕ ಪೆಟ್ಟಿಗೆಯ ಹಿಂದೆ ಬಚ್ಚಿಟ್ಟುಕೊಳ್ಳುವುದೇ!! ಅವುಗಳನ್ನು ಸಮೀಪಿಸಿ ಹಿಡಿಯುವ ನನ್ನ ಎಲ್ಲಾ ಪ್ರಯತ್ನವೂ ವಿಫಲವಾಗಿ ತುಂಬಾ ನಿರಾಸೆಯಾಯಿತು.
ವಾಸ್ತವವಾಗಿ ಅವಕ್ಕೆ ತಮ್ಮ ಗೂಡಿಗೆ ವಾಪಸ್ಸಾಗುವ ದಾರಿಯೇ ಗೊತ್ತಾಗುತ್ತಿಲ್ಲವೋ ಅಥವಾ ಹತ್ತಿ ಹೋಗಲು ಆಗುತ್ತಿಲ್ಲವೋ ತಿಳಿಯಲಾಗಲಿಲ್ಲ. ನಾನು ನನ್ನ ಮಕ್ಕಳು ಈಗೇನು ಮಾಡುವುದು ಎಂದು ಚರ್ಚಿಸಿದೆವು. ಇಣಚಿಯ ಮರಿಗಳನ್ನು ಮುದ್ದಿನ ಪ್ರಾಣಿಯಾಗಿ ಸಾಕಿದರೆ ಎಂಬ ಯೋಚನೆ ಅವರಿಗೂ ಖುಷಿಕೊಟ್ಟಿತು. ತಾಯಿ ಅಳಿಲು ವಾಪಸ್ಸಾಗಿ ಮರಿಗಳನ್ನು ಕಾಣದೆ *ಚೀಂವ್ ಕೀಂವ್* ಎಂದು ಕೂಗುತ್ತಾ ಹುಡುಕುವಾಗ ಅಮ್ಮನ ದನಿಯ ಜಾಡು ಹಿಡಿದು ಇವು ನಮ್ಮ ಮನೆಯ ತಮ್ಮ ನೆಲೆಗೆ ವಾಪಸ್ಸಾಗಬಹುದು ಎಂದುಕೊಂಡೆವು.
ಆದರೆ ಒಂದು ದಿನ ಕಳೆದರೂ ತಾಯಿ ಅಳಿಲಿನ ಸುಳಿವಿಲ್ಲ. ಅಂದರೇ… ಅಂದರೇ…?? ಈಗೇನು ಮಾಡುವುದು?? ದಿನವಿಡೀ ಆಹಾರವಿಲ್ಲದೆ ಮರಿಗಳು ಪಾಪ ಎಷ್ಟು ಹಸಿದಿರಬಹುದೋ ಎನಿಸಿ ವ್ಯಥೆಯಾಯಿತು. ಅಗಲ ಬಾಯಿನ ಪುಟ್ಟ ಬಟ್ಟಲುಗಳಲ್ಲಿ ಕ್ರಮವಾಗಿ ಕಡಲೆ ಬೀಜ, ಹಣ್ಣಿನ ತುಂಡು, ಹಾಲು, ಅನ್ನ, ನೀರು ಹೀಗೆ ಅವು ತಿನ್ನಬಹುದು ಎನಿಸಿದ್ದನ್ನೆಲ್ಲಾ ಬೇರೆ ಬೇರೆಯಾಗಿ ಹಾಕಿ ಅವುಗಳು ಓಡಾಡುವ ಜಾಗದಲ್ಲಿಟ್ಟೆ.
*ಹುಚ್ಚ ಹುರುಳಿ ಬಿತ್ತಿ ಕಿತ್ತಿ ಕಿತ್ತಿ ನೋಡಿದ* ಎಂಬ ಗಾದೆಯಂತೆ ಮತ್ತೆ ಮತ್ತೆ ಸಂಭ್ರಮದಿಂದ ಕಳ್ಳ ಹೆಜ್ಜೆಯಲ್ಲಿ ಬಂದು ಬಂದು ನೋಡತೊಡಗಿದೆ. ನಾನು ಕಾಣದಾದಾಗ ಅಲ್ಲಲ್ಲೇ ಓಡಾಡುತ್ತಿದ್ದವು. ಮೊದಲೇ ಪುಟಾಣಿ ಮರಿಗಳು. ಅವುಗಳ ಹೊಟ್ಟೆಯಾದರೂ ಎಷ್ಟು? ನಾನೋ ಬಟ್ಟಲುಗಳನ್ನು ಸಾಕಷ್ಟು ತುಂಬಿದ್ದೆ. ಆದ್ದರಿಂದ ಎಷ್ಟು ತಿಂದಿವೆ ಗೊತ್ತಾಗಲಿಲ್ಲ. ಇಟ್ಟಿದ್ದ ಆಹಾರ ಹಳತಾದ್ದರಿಂದ ಮಾರನೆಯ ದಿನ ಕಡಲೆಕಾಯಿ ಬೀಜ, ಬೇರೆ ಕಾಳುಗಳು ಹಣ್ಣಿನ ತುಂಡು ಎಲ್ಲವನ್ನೂ ಎಣಿಸೆಣಿಸಿ ಇಟ್ಟೆ. ಜೊತೆಗೆ ಬಟ್ಟಲ ತುಂಬಾ ನೀರು.
ತಮ್ಮ ಗೂಡು ಹುಡುಕಲಾಗದೆ, ತಾಯಿಯ ಸುಳಿವಿರದೆ, ಹೊರಗೆ ಹೋಗಲು ತಿಳಿಯದೆ ಹೆದರುತ್ತಾ ಅಲ್ಲೇ ಓಡಾಡುತ್ತಿದ್ದವು. ಆದರೆ ರಾತ್ರಿಯಾದರೂ ಬಟ್ಟಲುಗಳ ಒಂದೇ ಒಂದು ಕಾಳೂ ಕಡಿಮೆಯಾಗಲಿಲ್ಲ. ಹನಿ ನೀರನ್ನೂ ಕುಡಿಯಲಿಲ್ಲ. ಮೆಲುವಾಗಿ ಹಿತವಾದ ಸಂಗೀತ ಹಾಕಿದೆ. ಅಲುಗಾಡದಂತೆ ಕುಳಿತೆ. ಹಸಿವಿನ ಬೇಗೆ ತಾಳಲಾಗದೆ ಬಂದು ಆಹಾರ ಸ್ವೀಕರಿಸುತ್ತವೇನೋ ಎಂದು ಚಡಪಡಿಕೆಯಿಂದ ಕಾದೆ.
ಪ್ರಾಯೋಪವೇಶದ ವ್ರತ ತೊಟ್ಟಂತೆ ಮೂರು ದಿನವಾದರೂ ಒಂದು ಅನ್ನದಗುಳೇ, ಒಂದು ಕಾಳೇ ಹನಿ ನೀರೇ ಏನನ್ನೂ ಸ್ವೀಕರಿಸದಾದಾಗ ದಿಗಿಲಾಯಿತು. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಇವುಗಳನ್ನು ಒಲಿಸಿಕೊಂಡು ಮುದ್ದಿನಿಂದ ಸಾಕುತ್ತೇನೆ ಎಂಬ ನನ್ನ ಆಸೆ ನುಚ್ಚುನೂರಾಯಿತು. ಅನ್ನ ನೀರು ಮುಟ್ಟದೆ, ಹೊರಗೆ ಹೋಗುವ ದಾರಿಕಾಣದೆ ಇವು ಹೀಗೆ ಮರಣಿಸಿದರೆ ಎಂಬ ಭಯ ಮೆಟ್ಟಿಕೊಂಡಿತು. ಹೊರಗೆ ಬಿಟ್ಟರೆ ಹೇಗಾದರೂ ಮರಗಿಡಗಳನ್ನೇರಿ ಪ್ರಕೃತಿದತ್ತ ಆಹಾರವನ್ನುಂಡು ಬದುಕಿಕೊಳ್ಳುವುದು ನಿಜ ಎನಿಸಿದ್ದೆ ಅವುಗಳನ್ನು ಮನೆಯಿಂದ ಮುಕ್ತಗೊಳಿಸುವ ಕಾರ್ಯಾಚರಣೆ ಬಗ್ಗೆ ಯೋಚಿಸಿದೆ. ನಮ್ಮನ್ನು ಕಂಡರೆ ಸಾಕು ಹೆದರಿ ಪುಣಕ್ಕನೆ ಓಡಿ ಅಡಗಿಕೊಳ್ಳುವ ಪುಟ್ಟ ಮರಿಗಳನ್ನು ಹಿಡಿಯುವುದಾದರೂ ಹೇಗೆ?
ಮೂರೂ ಮರಿಗಳೂ ಜೊತೆಯಾಗಿಯೇ ಓಡಾಡುತ್ತಿದ್ದವು. ಭಗೀರಥ ಪ್ರಯತ್ನ ಮಾಡಿ ಮೂರು ನಾಲ್ಕು ಬಾರಿ ಮೂರೂ ಮರಿಗಳ ಮೇಲೆ ದೋಡ್ಡ ಪ್ಲಾಸ್ಟಿಕ್ ಬುಟ್ಟಿಯನ್ನು ಕವುಚಿ ಬಿಟ್ಟು ಗೆದ್ದೆ ಎಂದು ಕೊಂಡೆ. ಆದರೆ ಪ್ರತೀ ಬಾರಿಯೂ ಬುಟ್ಟಿಯನ್ನು ತುಸುವೇ ನಿಧಾನವಾಗಿ ಎತ್ತಿ, ಕೈ ತೂರಿಸಿ ಅವುಗಳನ್ನು ಹಿಡಿಯಲೆಳಸುವುದರೊಳಗೆ ಮಿಂಚಿನ ವೇಗದಲ್ಲಿ ನುಣುಚಿಕೊಂಡು ಹೋಗುತ್ತಿದ್ದವು. *ಪುಟ್ಟ ಮರಿಗಳೇ, ಅಷ್ಟೇಕೆ ಬೆದರುತ್ತಿದ್ದೀರಿ. ನಾನು ನಿಮಗೆ ಹಾನಿ ಮಾಡಲಲ್ಲ, ಕಾಪಾಡಲು ಯತ್ನಿಸುತ್ತಿದ್ದೇನೆ* ಎಂಬ ನನ್ನ ಕಳಕಳಿ ಅವಕ್ಕೆ ಅರ್ಥವಾಗುವುದೆಂತು.
ದೊಡ್ಡ ದಪ್ಪ ಬೆಡ್ ಶೀಟ್ ಒಂದನ್ನು ಅವುಗಳ ಮೇಲೆ ಹಾಕಿ ಚಲಿಸಲಾಗದಂತೆ ಮಾಡಿ, ಮುದುರಿ ತೆಗೆದುಕೊಂಡು ಹೊರಗೆ ಬಿಟ್ಟರೆ ಹೇಗೆ ಎನಿಸಿದರೂ ಗಾಳಿ ಸಾಲದೆ ಉಸಿರುಗಟ್ಟೀತೇನೋ ಎಂಬ ಭೀತಿ ತಲೆದೋರಿತು.ಕಡೆಗೆ ತೆಳ್ಳನೆಯ ಹತ್ತಿ ಸೀರೆಯೊಂದನ್ನು ಎರಡು ಮೂರು ಮಡಿಕೆ ಮಾಡಿ ಇಣಚಿ ಮರಿಗಳ ಮೇಲೆ ಹಾಕಿ ಚಲಿಸಲು ಕಷ್ಟವಾಗುವಂತೆ ಮಾಡಿ, ಹಗುರಾಗಿ ಸುತ್ತಿ ಹಿಡಿಯುವಲ್ಲಿ ಯಶಸ್ವಿಯಾದೆ. ಪಾಪ ಸೆರೆ ಸಿಕ್ಕ ಭಯದಿಂದ ಅವು ಕೀಚಲು ಧ್ವನಿಯಲ್ಲಿ ಚೀರತೊಡಗಿದಾಗ ಅಯ್ಯೋ ಎನಿಸಿತು. ತಕ್ಷಣ ಒಂದು ದೊಡ್ಡ ಟಬ್ಬಿನಲ್ಲಿ ಸೀರೆಯನ್ನು ಬಿಡಿಸಿ ಇಣಚಿಗಳನ್ನು ಪತ್ತಲದ ಸೆರೆಯಿಂದ ಬಿಡಿಸಿದೆ. ಟಬ್ ಬಹಳ ದೊಡ್ಡದಾಗಿಯೂ, ಅದರ ಒಳಭಾಗ ನುಣುಪಾಗಿಯೂ ಇದ್ದದ್ದರಿಂದ ಇಣಚಿ ಮರಿಗಳಿಗೆ ಟಬ್‌ನಿಂದ ಹೊರಬರಲಾಗಲಿಲ್ಲ. ಒಂದಿಷ್ಟು ಹೊತ್ತು ಚಡಪಡಿಸಿ ಮತ್ತೆ ಮತ್ತೆ ಒಳಗೇ ಸುತ್ತಿ ಸುತ್ತಿ ಕುಳಿತುಕೊಳ್ಳುತ್ತಿದ್ದವು. ಟಬ್ಬಿನೊಳಗೇ ಕಾಳುಗಳನ್ನು ಹಾಕಿದರೂ ಮೂಸಿಯೂ ನೋಡಲಿಲ್ಲ. ನೀರಿಟ್ಟರೆ ಕುಡಿಯಲೂ ಇಲ್ಲ.
ಆದರೆ ಹಾಗೇ ಹತ್ತಿರದಿಂದ ಗಮನಿಸುವ ಅವಕಾಶವನ್ನು ಹೇಗೆ ಕೈ ಚೆಲ್ಲಲಿ? ದೊಡ್ಡದಾದ ದುಂಡನೆಯ ಹೊಳಪಿನ ಕಪ್ಪು ಕಣ್ಣುಗಳು, ಎದ್ದು ನಿಂತ ಕಿವಿಗಳು. ಮೋಟಾದ ಮುಂದಿನ ಕಾಲುಗಳು. ಉದ್ದನೆಯ ಹಿಂಗಾಲುಗಳು. ದಟ್ಟವಾದ ಉದ್ದ ಬಾಲ. ಬೆನ್ನ ಮೇಲೆ ಮೂರು ಬಿಳಿಯ ಪಟ್ಟಿಗಳು. ಮೈಪೂರ ಉದ್ದ ಬೂದುಬಣ್ಣದ ತುಪ್ಪಳದಂತಹ ರೋಮಗಳು. ಅವುಗಳನ್ನು ಸ್ಪರ್ಶಿಸುವ ಆಸೆ ಅದಮ್ಯವಾಗಿ ಮೆಲ್ಲನೆ ಕೈ ಚಾಚಿದೆ. ಚೀರಿ ದಿಕ್ಕೆಟ್ಟಂತೆ ಓಡಾಡತೊಡಗಿದಾಗಲೇ ಹೂವಿನಂತಹ ಅವುಗಳ ಮೃದು ಮೈಯಿನ ಸ್ಪರ್ಶವಾಗಿ ನಿಜವಾಗಿಯೂ ಪುಲಕಗೊಂಡೆ. ನನ್ನ ಪ್ರೀತಿಗೆ ಸ್ಪಂದಿಸಲಾಗದ ಅರ್ಥಮಾಡಿಕೊಳ್ಳಲಾಗದ ಪುಟ್ಟ ಜೀವಿಗಳು. ಮನೆಯಿಂದ ಕಳಿಸಬೇಕಲ್ಲಾ ಎಂದು ತುಂಬಾ ಬೇಜಾರಾಯಿತು. ಅಳಿಲುಗಳನ್ನು ಸಾಕಲು ತಾನಾಗಿಯೇ ಒದಗಿ ಬಂದ ಒಂದು ಅವಕಾಶವೂ ಕೈತಪ್ಪಿತು.
ಟಬ್ ಅನ್ನು ಎಚ್ಚರಿಕೆಯಿಂದ ಎತ್ತಿಕೊಂಡು ಮಹಡಿಯಿಂದಿಳಿದು ಹೊರಗೆ ಬಂದು, ಹತ್ತಿರದ ಆಲದ ಮರದ ಬಳಿ ನಿಂತು, ನನ್ನ ಮನ ಹೃದಯ ಸೂರೆಗೊಂಡಿದ್ದ ಆ ಅಳಿಲು ಮರಿಗಳನ್ನು ಕಟ್ಟ ಕಡೆಯ ಬಾರಿಗೊಮ್ಮೆ ಸುದೀರ್ಘವಾಗಿ ನೋಡಿ ಕಣ್ತುಂಬಿಕೊಂಡೆ. ನಂತರ ಅವು ಹೊರ ಹೋಗಲು ಸಾಧ್ಯವಾಗುವಂತೆ ಟಬ್ ಅನ್ನು ಪಕ್ಕಕ್ಕೆ ಮಲಗಿಸಿದೆ. ಒಂದು ಕ್ಷಣ ದಿಕ್ಕು ತೋಚದಂತೆ ನಿಶ್ಚಲವಾಗಿದ್ದ ಇಣಚಿ ಮರಿಗಳು ಪಕ್ಕನೆ ಜ್ಞಾನೋದಯವಾದಂತೆ ಒಂದೊಂದಾಗಿ ಟಣ್ಣನೆ ಹೊರಗೆ ಬಂದು ಚಕ್ಕನೆ ಆಲದ ಮರವೇರಿ ದಟ್ಟ ಎಲೆಗಳ ಸಂದಿಯಲ್ಲಿ ಮರೆಯಾಗಿ ಬಿಟ್ಟವು.
ಅವು ಮರವೇರಿದ ಭಾಗವನ್ನೇ ದಿಙ್ಮೂಢಳಾಗಿ ಕ್ಷಣಕಾಲ ನೋಡುತ್ತಾ ನಿಂತಿದ್ದು ನಂತರ ಭಾರವಾದ ನಿರಾಸೆಯ ಹೃದಯದೊಂದಿಗೆ ಮರಳಿದೆ. ಮನೆಯಲ್ಲಿಯ ಕ್ಯಾಮರಾ ಕೆಟ್ಟು ಹೋಗಿದ್ದು ಚರವಾಣಿ ಇನ್ನೂ ವ್ಯಾಪ್ತವಾಗಿ ಬಳಕೆಯಲ್ಲಿರದ ಕಾಲ. ಅಚಾನಕ್ಕಾಗಿ ಮನೆಗೆ ಬಂದಿದ್ದ ಮುದ್ದು ಅತಿಥಿಗಳ ಚಿತ್ರವನ್ನೂ ನೆನಪಿಗಾಗಿ ತೆಗೆದಿಟ್ಟುಕೊಳ್ಳಲಾಗಲಿಲ್ಲ.
– ರತ್ನ
ಮುದ್ದಾದ ಬರಹ
ಇಣಚಿ ಅರಾಮವಾಗಿ ಮನೆಯಲ್ಲಿರಬಾರದಿತ್ತೆ? ಸ್ವತಂತ್ರವೋ ಸ್ವರ್ಗವೋ? ಅಗಿರಬೇಕು ಅಬವಕ್ಕೆ
ತುಂಬಾ ಚಂದದ ಬರಹ.
ಪುಟ್ಟ ಅಳಿಲುಗಳ ಆರೈಕೆ ಬಗ್ಗೆ ಓದಿ ನಾನು ಬಿ.ಎಸ್.ಸಿ ಓದುತ್ತಿದ್ದಾಗ ಸೆಂತ್ರಾಲಂಕಾಲೇಜಿನ ಮಹಿಳಾ ವಸತಿ ಗೃಹದಲ್ಲಿನ ಅನುಭವ ನೆನಪಾಯ್ತು.ಹೆಂಚಿನ ಛಾವಣಿಯ ಮೇಲಿನಿಂದ ನನ್ನ ಹಾಸಿಗೆಯಮೇಲೆ ಬಿದ್ದ ಪುಟ್ಟ ಅಳಿಲು ನಾಕೊಟ್ಟ ಇಂಕ್ ಫೈಲ್ಲೆರ್ ಮೂಲಕ ಹಾಲು ಕುಡಿದು ಸ್ಸುಮಾರಿ ಒಂದು ತಿಂಗಳು ಜೊತೆ ಇತ್ತು
ಒತ್ತಾಗಿದ್ದ ನನ್ನ ಜಡೆಯ ಬುಡಕ್ಕೆ ಬಂದು ಮಲಗುತ್ತಿತ್ತು. ಪ್ರಾಣಿಗಳ ನಿಷ್ಕಲ್ಮಶ ಪ್ರೀತಿಗೆ ಸರಿಸಮಾನಉಂಟೆ.ಲೇಖನ ಚೆನ್ನಾಗಿದೆ .
ಮಾಲತಿಶ್ರೀನಿವಾಸನ್
ಭಾವಚಿತ್ರಗಳನ್ನು ಹಿಡಿಯಲಾಗದಿದ್ದರೇನಾಯಿತು? ನೆನಪಿನಂಗಳದಲ್ಲಿದ್ದ ಮುದ್ದುಮರಿಗಳೊಂದುಗಿನ ಪ್ರೀತಿಯ ಸಹಬಾಳ್ವೆಯನ್ನು ಅಕ್ಷರಗಳಲ್ಲೇ ಅಚ್ಚುಕಟ್ಟಾಗಿ ಕಣ್ಗೆ ರೂಪ ಇಳಿಯುವಂತೆ ಕಟ್ಟಿಕೊಟ್ಟಿದ್ದೀರಿ. ಚಂದದ ಲೇಖನ.
ಮುದ್ದು ಇಣಚಿ ಮರಿಗಳ ಒಡನಾಟ, ತಿಣುಕಾಟ,ಕೊಂಡಾಟ ಎಲ್ಲವನ್ನೂ ಎಷ್ಟು ಚೆನ್ನಾಗಿ ಭಟ್ಟಿ ಇಳಿಸಿದ್ದೀರಿ.. ನಿಮ್ಮ ಇಣಚಿ ಮರಿಗಳು ನನ್ನ ಕಣ್ಮುಂದೇನೂ ಬಂದುವು. ಆತ್ಮೀಯ ಲೇಖನ. ನಮ್ಮ ಮನೆಯಲ್ಲಿ ಪಿಕಳಾರ ಹಕ್ಕಿ, ಅದರ ಸಂಸಾರದ ಫೋಟೋ ಕ್ಲಿಕ್ಕಿಸುವಲ್ಲಿ ಸಫಲವಾದ, ಅದರ ಬಗ್ಗೆ ನಾನು ಬರೆದ ಲೇಖನ ಪೇಪರಲ್ಲಿ ಮೊದಲಬಾರಿಗೆ ಪ್ರಕಟವಾದಾಗ ಸಂಭ್ರಮಿಸಿದ್ದು ನೆನಪಾಯ್ತು.