ಹಸಿರಿಗೆ ಹೆಸರಾದ ಪದ್ಮಶ್ರೀ ತುಳಸಿ ಗೌಡ

Share Button

ಪದ್ಮಶ್ರೀ ತುಳಸಿ ಗೌಡ, ಇದೊಂದು ಹೆಸರಲ್ಲ ಪ್ರಶಾಂತತೆ. ಹಸಿರಿನ ಉಸಿರನ್ನು ಜಗವೆಲ್ಲ ತುಂಬಿದಾಕೆಯ ಕಥೆ. ಬದುಕಿನಲ್ಲಿ‌ ಎದುರಾದ ನೋವು ಮರೆಯಲು ಹಸಿರು ಬೆಳೆದ ಬಡವಳದ್ದು ಸಿರಿತನದ ಬದುಕು. ಅಕ್ಷರ ತಿಳಿಯದ, ಆಧಿನಿಕ ಜಗತ್ತಿನ‌ ಅರಿವಿರದ ಹಳ್ಳಿಯ ಒಂದು ಮೂಲೆಯಲ್ಲಿ ಬದುಕುತ್ತಿರುವ ತುಳಸಿಗೌಡ ಇವರದು‌ ಅಪರೂಪದ ಸಾಧನೆಯ ಕಥೆ. ತಾನು ಮಾಡಿರುವುದು ಬಲು ದೊಡ್ಡ ಸಾಧನೆ ಎಂಬ ಅರಿವೇ‌ ಇಲ್ಲದೆ , ಪ್ರಚಾರ ಬಯಸದೆ ಬದುಕಿನ ಸಂತೃಪ್ತಿಗೆಂದೇ ವನರಾಶಿಯನ್ನು ಬೆಳೆದ ಈ ತಾಯಿ ಸಾಮಾನ್ಯಳಲ್ಲ. ಇಂಥಹ ಮಹಾನ್ ತಾಯಿಯೊಬ್ಬಳನ್ನು ಕಣ್ತುಂಬಿಕೊಂಡು, ಅವಳ ಸ್ಪೂರ್ತಿಯ ಕಥೆಯನ್ನು ತಿಳಿದುಕೊಳ್ಳಲೇಬೇಕೆಂಬ ಉದ್ದೇಶದಿಂದ ದಿನೇಶ್ ಹೊಳ್ಳ ಅವರ ಮಾರ್ಗದರ್ಶನದೊಂದಿಗೆ ನಮ್ಮಕಾಲೇಜಿನ ಬಿ.ಎಸ್.ಡಬ್ಲ್ಯು ವಿದ್ಯಾರ್ಥಿಗಳೊಂದಿಗೆ ಕೈಗೊಂಡ‌ ಅಧ್ಯಯನ ಪ್ರವಾಸದ‌ ಒಂದು ಸುಂದರ ಕಥೆ.

ಅಂಕೋಲ ತಾಲೂಕಿನ ಹೊನ್ನಳ್ಳಿಯ ಬಡ ಹಾಲ‌ಕ್ಕಿ ಕುಟುಂಬದಲ್ಲಿ ಹುಟ್ಟಿದ ತುಳಸಿಗೌಡ ತನ್ನ ಮೂರನೇ ವಯಸ್ಸನಲ್ಲೆ ತಂದೆಯನ್ನು ಕಳೆದುಕೊಂಡು, ತನ್ನ ಪುಟ್ಟ ತಮ್ಮನ ಜವಾಬ್ಧಾರಿಯನ್ನು ಹೊರುವಂತಾಗುತ್ತದೆ. ಈ ನೋವು, ವಯಸ್ಸಿಗೆ ಮೀರಿದ ಜವಾಬ್ದಾರಿ, ಬಡತನದ ಬವಣೆ‌ ಇವೆಲ್ಲದರ ಮಧ್ಯೆ‌ ಅವರಿಗೆ‌ ಆಧಾರವಾದದ್ದು ಹಸಿರು ಕಾಡಿನ‌ ಒಡನಾಟ. ಅನಕ್ಷರಸ್ಥೆಯಾಗಿದ್ದರೂ, ಬಾಲ್ಯದಲ್ಲಿ ತಾಯಿಯೊಂದಿಗೆ ಬೆಟ್ಟ ಕಾಡು ಸುತ್ತಿ‌ ಅನುಭವವಿದ್ದ‌ ಅವರಿಗೆ ಈ ಕಾಡಿನೊಂದಿಗಿನ ಸಹವಾಸ ಬದುಕಿನ ದಾರಿ ತೋರಿಸಿತು. ಪಶ್ಚಿಮ ಘಟ್ಟದ ಮಾಸ್ತಿಕಟ್ಟೆ ಅರಣ್ಯ ವಲಯದ‌ ಅಗಸೂರು ಸಸ್ಯಪಾಲನಾ ಕ್ಷೇತ್ರದಲ್ಲಿ‌ ಅರಣ್ಯ ಸಂರಕ್ಷಣಾಧಿಕಾರಿ‌ ಎಲ್ಲಪ್ಪ ರೆಡ್ಡಿ, ಇವರು ಕೂಲಿ ಕೆಲಸ ಕೊಡಿಸಿದ್ದರು. ಇಲ್ಲಿಂದಲೇ‌ ಈಕೆಯ ಸಾಧನೆಯ ಮಹಾಪಯಣ ಶುರು. ಪ್ರತಿ ದಿನವು ಅವರು ಕೊಡುವ‌ ಅಲ್ಪ ಕೂಲಿಗೆ ತನಗೆ ಸಾಧ್ಯವಾದಷ್ಟು ಗಿಡಗಳನ್ನು ನೆಡುತ್ತಾರೆ.

ಇದೆಲ್ಲದರ ಮಧ್ಯೆ ಸಣ್ಣ ವಯಸ್ಸಿನ ತುಳಸಿ ಗೌಡರಿಗೆ ಬಾಲ್ಯವಿವಾಹವೂ ನಡೆದು ಹೋಯಿತು. ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡ ಅವರದು ಮತ್ತದೇ ನೋವಿನ ಬದುಕು. ಮತ್ತೆ ಮತ್ತೆ ನೋವು ಮರೆಸಲು ಕಾಡು‌ ಆಸರೆಯಾಗುತ್ತದೆ. ಇದೇ ರೀತಿ ಮುಂದುವರಿಯುತ್ತಾ ಲೆಕ್ಕವಿಡಲಾಗದಷ್ಟು ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ವರ್ಷಕ್ಕೆ ಸುಮಾರು 30000 ದಷ್ಟು ಗಿಡ ನೆಟ್ಟಿರಬಹುದೆಂದು ತಿಳಿದವರು ಹೇಳುತ್ತಾರೆ. ಆದರೂ ತಾನು ಬೆಳೆದ ಗಿಡಗಳ ಬಗ್ಗೆ ಈಕೆಗೆ ಲೆಕ್ಕ ತಿಳಿದಿಲ್ಲ. ಸಾಧನೆಯ ಈ ಪಯಣ‌ ಎಲ್ಲಿಯ ವರೆಗೆ ಮುಟ್ಟಿತೆಂದರೆ, ಅರಣ್ಯಾಧಿಕಾರಿಗಳು, ಸಸ್ಯವಿಜ್ಙಾನಿಗಳು ಗಿಡಮರಗಳ ಬಗ್ಗೆ ತನ್ನ ಬಳಿ ಬಂದು ಮಾಹಿತಿ ಪಡೆಯುವಲ್ಲಿ ವರೆಗೆ. ಸಸ್ಯ ವಿಜ್ಞಾನಿಗಳನ್ನೂ ಮೀರಿದ ಸಸ್ಯಜ್ಞಾನ ಹೊಂದಿರುವ‌ ಇವರನ್ನು ಕೆಲವರು‌ ಅರಣ್ಯದ‌ ಎನ್‌ಸೈಕ್ಲೋಪೀಡಿಯಾ‌ ಎಂದೂ ಕರೆದಿದ್ದುಂಟು.

ಹಾಲಕ್ಕಿ ಜನಾಂಗದ ವಿಶೇಷ ಶೈಲಿಯಲ್ಲಿ ಸೀರೆ ಉಟ್ಟು, ಕತ್ತಿನತುಂಬಾ ಮಣಿ ಧರಿಸಿ, ಈಕೆ ಗಿಡಮರಗಳು ನಮ್ಮ ಪ್ರೀತಿ ಪೋಷಣೆ ಸಿಕ್ಕರೆ ಚೆನ್ನಾಗಿ ಸೊಂಪಾಗಿ ಬೆಳೆಯಬಲ್ಲವು‌ ಎಂದು ಹೇಳುತ್ತಿದ್ದರೆ ವೃಕ್ಷದೇವತೆಯನ್ನು ಕಂಡಂತೆ‌ ಒಂದೊಮ್ಮೆ ಭಾಸವಾಗುತ್ತದೆ. ಗಿಡಗಳನ್ನು ನೆಡುವುದಷ್ಟೆ‌ ಅಲ್ಲ ಅವುಗಳ ಪೋಷಣೆಯನ್ನೂ ಮಾಡಿದರೆ ಮಾತ್ರ ಗಿಡ ನೆಡುವ ಕೆಲಸ ಸಾರ್ಥಕವಾಗುತ್ತದೆ‌ ಎಂಬುದನ್ನು ತೋರಿಸಿಕೊಟ್ಟ ಸ್ತ್ರೀ ಇವರು.

ಹಲವು ವರ್ಷಗಳಿಂದ ವೃಕ್ಷ ಸೇವೆ ಮಾಡಿದ‌ ಇವರಿಗೀಗ 72 ರ ಇಳಿ ವಯಸ್ಸು. ಆದರೂ ಮರಗಳ ಬಗ್ಗೆ, ಗಿಡಮೂಲಿಕೆಗಳ ಬಗ್ಗೆ ಕಾಡಿನ ರಕ್ಷಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಇಂದಿಗೂ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ತಾನು ಮಾಡಿದ ಕೆಲಸ ಎಷ್ಟು ಮಹತ್ವದ್ದು‌ ಎಂದು‌ ಅವರಿಗೆ ತಿಳಿಯದಿರಬಹುದು‌ ಆದರೆ‌ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಲೆಕ್ಕವಿಲ್ಲ.

ಪದ್ಮಶ್ರೀ ತುಳಸಿ ಗೌಡ ಅವರೊಂದಿಗೆ ವಿದ್ಯಾರ್ಥಿನಿಯರು

ಅವರಿಗೆ ಬಂದಿರುವ ಪ್ರಶಸ್ತಿಗಳ ಬಗ್ಗೆ ಕೇಳಿದರೆ ತಮಗೆ ದೊರೆತ ರಾಶಿ ರಾಶಿ ಪ್ರಶಸ್ತಿ, ಪದಕ, ಸನ್ಮಾನ ಪತ್ರಗಳನ್ನು ನಮ್ಮ ಮುಂದೆ ತಂದಿಡುತ್ತಾರೆ. ಅವರ ಈ ಬದುಕಿಗೆ ದೊರೆತ ದೊಡ್ಡ ಗೌರವವೆಂದರೆ ಪರಿಸರರಕ್ಷಣೆಗೆ ದೊರೆತ 2020 ರ ಪದ್ಮಶ್ರೀ ಪ್ರಶಸ್ತಿ. ಈ ಪ್ರಶಸ್ತಿ ಸಿಕ್ಕದಾಗ ನಿಮಗೇನು ಅನಿಸಿತು ಎಂದು ಕೇಳುವಾಗ ಖುಷಿಯಾಯ್ತು ಮಕ್ಕಳೆ‌ ಎನ್ನುವ‌ ಆಕೆಯ ಮಾತಿನಲ್ಲಿ ಯಾವುದೇ ಗರ್ವವಿಲ್ಲ. ಇಷ್ಟೆಲ್ಲಾ ಪ್ರಶಸ್ತಿಗಳು, ಸನ್ಮಾನಗಳು, ಗೌರವಗಳು ಅವರನ್ನು ಒಂದಿನಿತೂ ಬದಲಾಯಿಸಿಲ್ಲ. ಅದೇ ಮುಗ್ಧತೆ, ಸರಳತೆ. ಹೀಗೆ ಪ್ರಶಸ್ತಿಗಳ ಬಗ್ಗೆ ಅರಿವು, ನಿರೀಕ್ಷೆಗಳೇ ಇಲ್ಲದ ವ್ಯಕ್ತಿಗಳಿಗೆ ದೊರೆತಾಗ ಪ್ರಶಸ್ತಿಗಳ ಬಗೆಗೂ ಗೌರವ ಮೂಡುತ್ತದೆ.

ಇಲ್ಲಿ ದುಃಖದ ವಿಷಯವೆಂದರೆ, ದೇಶದ ಬಹು ಪ್ರತಿಷ್ಟೆಯ ಪ್ರಶಸ್ತಿ ಅವರ ಪಾಲಿಗೆ ಬಂದರೂ, ಅವರ ಬಡತನ ಮಾತ್ರ ನೀಗಿಲ್ಲ. ಪುಟ್ಟ ಹಂಚಿನ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಬದುಕು ಸಾಗುತ್ತಿದೆ. ಕೂಲಿ ಮಾಡಿ ಬದುಕುವ ಈ ಕುಟುಂಬಕ್ಕೆ ಬೇರೆ ಯಾವುದೇ‌ ಆದಾಯವಿಲ್ಲ. ಈ ಕಷ್ಟದ ಬದುಕಿನಲ್ಲಿಯೂ ಪ್ರತಿನಿತ್ಯ ತನ್ನ ಬಗ್ಗೆ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳು, ಆಸಕ್ತರಿಗೆ ಪ್ರೀತಿ, ವಾತ್ಸಲ್ಯದೊಂದಿಗೆ ಸತ್ಕರಿಸುತ್ತಾರೆ. ಬಡತನವಿದ್ದರೂ ಬಂದವರಿಗೆ ಊಟ, ಉಪಹಾರ ನೀಡುವ‌ ಇವರ ಮನಸ್ಸು ತುಂಬಾ ದೊಡ್ಡದು. ಎಲ್ಲಾ ಕಷ್ಟಗಳನ್ನು ಎದುರಿಸಿ ಬಡತನದಲ್ಲೇ ಬೆಳೆದರೂ, ಅಸಾಧ್ಯವೆಂಬಷ್ಟು ಹಸಿರು ಬೆಳೆದ ಇವರದ್ದು ಬರೆದಷ್ಟು ಮುಗಿಯದ, ತಿಳಿದಷ್ಟೂ ಮನಸ್ಸು ತಣಿಯದ ಕಥೆ.

ಬಡತನವಿರಲಿ, ಸಿರಿತನವಿರಲಿ, ಪ್ರಶಸ್ತಿ ಬರಲಿ, ಬರದಿರಲಿ ನನ್ನ ಕೆಲಸದಿಂದ‌ ಒಂದಷ್ಟು ಜನ ಸ್ಪೂರ್ತಿಗೊಂಡು ಗಿಡಗಳನ್ನು ನೆಟ್ಟು ಬೆಳೆಸುವಂತಾದರೆ ಅಷ್ಟೆ ಸಾಕು‌ ಎನ್ನುವ ಈ ಸರಳ, ಸುಂದರ ವ್ಯಕ್ತಿತ್ವಕ್ಕೆ‌ ಒಂದು ದೊಡ್ಡ ಸೆಲ್ಯೂಟ್.

-ಅರುಣ ಕುಮಾರಿ,  ಮಂಗಳೂರು 

26 Responses

  1. ಮಹೇಶ್ವರಿ ಯು says:

    ಸಾಲು ಮರದ ತಿಮ್ಮಕ್ಕ ನ ತಂಗಿಯೋ ಅಕ್ಕನೋ ಸೈ ಈಕೆ. ಅನಂತ ಪ್ರಣಾಮಗಳು

  2. Bhavyashree says:

    Good one

  3. ಡಾ. ಕೃಷ್ಣಪ್ರಭ ಎಂ says:

    ತುಂಬಾ ಚೆನ್ನಾಗಿದೆ ನಿಮ್ಮ ಲೇಖನ..ಉತ್ತಮ ನಿರೂಪಣೆ…ತಮ್ಮಿಂದ ಇನ್ನಷ್ಟು ಲೇಖನಗಳ ನಿರೀಕ್ಷೆಯಲ್ಲಿ

  4. Jayakara Bhandary says:

    ಅಪರೂಪದ ವ್ಯಕ್ತಿಯೊಬ್ಬರ ಕುರಿತಾದ ಒಳ್ಳೆಯ ಬರಹ. ಹಲವು ವರ್ಷಗಳ ಹಿಂದೆ ನಾನು ಕಾರವಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾ ಗ ತುಳಸಿ ಗೌಡ ಅವರ ಜೊತೆಗೆ ಒಡನಾಡಿದ ನೆನಪು ಮರುಕಳಿಸುವಂತೆ ಮಾಡಿದಿರಿ. ಧನ್ಯವಾದಗಳು

  5. Thrishanth Kumar says:

    ತುಂಬಾ ಉತ್ತಮವಾಗಿ ಮೂಡಿ ಬಂದಿದೆ

  6. ಗಂಗಾಧರ್ ಪಾವಗಡ says:

    ಪರಿಸರ ದೇವತೆಯ ಪರಿಚಯದ ಬರಹ ಸುಂದರವಾಗಿದೆ.
    ವಂದನೆಗಳು

  7. ನಾಗರತ್ನ ಬಿ.ಆರ್ says:

    ತುಳಸಿ ಗೌಡರ ಪ್ರಕೃತಿ ಪ್ರೇಮ ಅವರು ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸಿರುವ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಮೇಡಂ.

  8. ನಾಗರತ್ನ ಬಿ.ಆರ್ says:

    ತುಳಸಿ ಗೌಡರ ಪ್ರಕೃತಿ ಪ್ರೇಮ ಅವರು ನಿಸ್ವಾರ್ಥ ಸೇವೆಯ ಬಗ್ಗೆ ಬರೆದಿರುವ ಲೇಖನ ಬಹಳ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.

  9. Krishma says:

    ತೀರ ಬಡತನವಿದ್ದರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ತನ್ನ ಪರಿಶ್ರಮ ವನ್ನೆಲ್ಲ ಕಾಡಿನಲ್ಲೇ ಕಳೆದಿರುವ ಇವರ ಸಾಧನೆ ಅತ್ಯಮೂಲ್ಯ ವಾಗಿದೆ
    ಆದರೂ ಸರಕಾರ ಇವರಿಗೆ ಮೂಲ ಸೌಕರ್ಯ ಒದಗಿಸದಿದ್ದದು ವಿಪರ್ಯಾಸ..

  10. ಉತ್ತಮ ಬರಹ. ಧನ್ಯವಾದಗಳು

  11. Aruna says:

    ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

  12. Hema says:

    ಅಪರೂಪದ ಸಾಧಕಿಯ ಬಗ್ಗೆ ಸೊಗಸಾದ ಬರಹ..

  13. ನಯನ ಬಜಕೂಡ್ಲು says:

    ಮಹಾನ್ ಸಾಧಕಿಗೊಂದು ನಮನ . ಇಂತಹ ಅದ್ಭುತ ವ್ಯಕ್ತಿತ್ವವನ್ನು, ಛಲಗಾತಿಯನ್ನು ಪರಿಚಯಿಸುವಂತಹ ಲೇಖನ ಬರೆದವರಿಗೂ ನಮನಗಳು.

  14. ಡಾ. ನಾಗವೇಣಿ ಮಂಚಿ says:

    ಇಂತಹವರ ಪರಿಚಯ ಖಂಡಿತ ಇಂದಿನ ಅಗತ್ಯ. ತುಳಸಿಗೌಡ ಪರಿಸರವನ್ನು ನಿರ್ಮಲವಾಗಿಡುತ್ತಿದ್ದಾರೆ. ನಾವದನ್ನು ಬಳಸಿ ಬದುಕುತ್ತಿದ್ದೇವೆ. ನಮಗವರು ಸ್ಫೂರ್ತಿ. ಪರಿಚಯಿಸಿ ಅರುಣ ಮೇಡಂ ಒಳ್ಳೆಯ ಕೆಲಸ ಮಾಡಿದಿರಿ. ನಿಮ್ಮಿಂದ ಇನ್ನಷ್ಟು ಬರಹಗಳು ಬರಲಿ ಮೇಡಂ.

    • Aruna says:

      ಧನ್ಯವಾದಗಳು ಮೇಡಮ್. ನಿಮ್ಮ ಸ್ಪೂರ್ತಿಯ ಮೂತುಗಳ ನಿರೀಕ್ಷೆಯಲ್ಲಿ ಸದಾ.

  15. Padma Anand says:

    ಆರ್ಥಿಕವಾಗಿ ಬಡತನವಿದ್ದರೂ ಹೃದಯ ಶ್ರೀಮಂತರಾದ ಇಂಥವರ ಸರಳ ಸುಂದರ ಪರಿಚಯಾತ್ಮಕ ಲೇಖನಕ್ಕಾಗಿ ಅಭಿನಂದನೆಗಳು ನಿಮಗೆ

  16. ಶಂಕರಿ ಶರ್ಮ says:

    ಸಂಪೂರ್ಣ ನಿಸ್ವಾರ್ಥತೆಯಿಂದ ಕೆಲಸ ಮಾಡುವ ಇಂತಹ ಮಹಾನ್ ಚೇತನಗಳಿಗೆ ಯಾವುದೇ ಗೌರವಾದರಗಳ ಚಿಂತೆ ಇರುವುದಿಲ್ಲ. ವನದೇವತೆಯೊಬ್ಬರ ಪರಿಚಯ ಲೇಖನ ಬಹಳ ಚೆನ್ನಾಗಿದೆ.

  17. ಜಗನ್ನಾಥ್ ಶಿರ್ಲಾಲ್ says:

    ಉತ್ತಮ ಲೇಖನ. ತುಳಸಿ ಗೌಡರ ಪ್ರಕೃತಿ ಪ್ರೇಮ ನಿಸ್ವಾರ್ಥ ಸೇವೆ ಅಭಿನಂದನರ್ಹ. ಲೇಖನದ ಮೂಲಕ ಪರಿಚಯಿಸಿದಕ್ಕೆ ಧನ್ಯವಾದಗಳು…

  18. Manjunatha KH says:

    Thank you Ma’am for nice article and it is inspirational story.

  19. Dr. Banashankarayya M says:

    ಒಂದು ವ್ಯಕ್ತಿತ್ವದ ಪರಿಚಯ ಸವಿಸ್ತಾರವಾಗಿ ಮಾಡಿರುವಿರಿ. ಆ ತಾಯಿ ಕಾಯಕಕ್ಕೆ ಕೋಟಿ ನಮನಗಳು. ನಿಮ್ಮಿಂದ ಇಂತಹ ಲೇಖನಗಳು ಇನ್ನೂ ಬರಲಿ ಎಂದು ಆಶಿಸುತ್ತೇನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: