ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 1

Share Button

ದಕ್ಷಿಣ ಆಫ್ರಿಕಾ ಎಂದಾಕ್ಷಣ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು ಎರಡು ಚಿತ್ರಗಳು ಅಲ್ಲವೇ? ಮಹಾತ್ಮ ಗಾಂಧಿಯವರದು ಹಾಗೂ ಒಂದು ಕಗ್ಗತ್ತಲ ಖಂಡದ ಚಿತ್ರ. ವೃತ್ತಿಯಲ್ಲಿ ಬ್ಯಾರಿಸ್ಟರ್ ಆಗಿದ್ದ ಮೋಹನದಾಸ್ ಕರಮಚಂದ್ ಗಾಂಧಿಯವರು ಸತ್ಯಾಗ್ರಹ ಚಳುವಳಿಯ ನೇತಾರರಾಗಿ ಹೊರಹೊಮ್ಮಿದ್ದು ಇಲ್ಲಿಯೇ. ಶಾಲೆಯಲ್ಲಿ ಓದುವಾಗ ” ಆಫ್ರಿಕಾ ಒಂದು ಕಗ್ಗತ್ತಲ ಖಂಡ” ಎಂದು ಪಾಲಮ್ಮ ಟೀಚರ್ ಹೇಳುವಾಗ ಹಲವಾರು ಪ್ರಶ್ನೆಗಳು ಮನದಲ್ಲಿ ಮಿಂಚಿ ಮರೆಯಾಗುತ್ತಿದ್ದವು. ಇಲ್ಲಿನ ದಟ್ಟವಾದ ಅರಣ್ಯಗಳು, ನದಿಗಳು, ಧುಮ್ಮಿಕ್ಕುವ ಜಲಪಾತಗಳು, ವನ್ಯಜೀವಿಗಳು, ವಿಸ್ತಾರವಾದ ಸಹಾರ ಮರುಭೂಮಿ, ಪ್ಲಾಟಿನಂ, ವಜ್ರ, ಹಾಗೂ ಚಿನ್ನದ ಗಣಿಗಳು, ಖನಿಜ ಸಂಪತ್ತು, ಹೀಗೆ ಅಪಾರವಾದ ಪ್ರಕೃತಿ ಸಂಪತ್ತುಳ್ಳ ಈ ದೇಶಕ್ಕೆ ಕಗ್ಗತ್ತಲ ಖಂಡ ಎಂದು ಹೆಸರು ಬಂದದ್ದಾದರೂ ಹೇಗೆ?

ಹೆನ್ರಿ ಸ್ಟಾನ್ಲಿ ಎಂಬ ಬ್ರಿಟಿಷ್ ಪರಿಶೋಧಕ – ದಕ್ಷಿಣ ಆಫ್ರಿಕಾವನ್ನು ಕಗ್ಗತ್ತಲ ಖಂಡ ಎಂದು ಹೆಸರಿಸಿದವನು. ಬಹುಶಃ ರವಿಕಿರಣಗಳು ನೆಲ ಮುಟ್ಟದಂತೆ ತಡೆವ ಕಾಡುಗಳು, ಜೀವಜಾಲಕ್ಕೆ ಸವಾಲು ಒಡ್ಡುವ ಸಹಾರ ಮರುಭೂಮಿ, ಹೊರಜಗತ್ತಿನ ಸಂಪರ್ಕವೇ ಇಲ್ಲದ ಮೂಲ ನಿವಾಸಿಗಳು, ಅವರ ವಿಷಪೂರಿತ ಬಾಣಗಳು, ಚಿತ್ರ ವಿಚಿತ್ರ ಸಂಪ್ರದಾಯಗಳು, ಮೂಢನಂಬಿಕೆಗಳು – ಇಂತಹ ಹಲವು ಕಾರಣಗಳಿಂದ ಅವನು ಹೀಗೆ ಕರೆದಿರಬಹುದು.

ಆಫ್ರಿಕಾದ ಮೂಲ ಹೆಸರು ‘ಆಲ್ಕೆಬನ್ -ಲಾನ್’ ಅಂದರೆ ಮನುಕುಲದ ಮಾತೆ, ಈ ಪದದ ಇನ್ನೊಂದು ಅರ್ಥ ದೇವರ ನಾಡು ಅಥವಾ ಇಂದ್ರನ ಅಮರಾವತಿ ಎನ್ನಬಹುದೇನೋ? ಒಂದೆಡೆ ಕಗ್ಗತ್ತಲ ಖಂಡ ಎಂದು ಕರೆಯಲ್ಪಟ್ಟ ನಾಡು, ಇನ್ನೊಂದೆಡೆ ದೇವರ ನಾಡು ಎಂಬ ಹೆಸರು ಹೊತ್ತ ನೆಲ – ಇಂತಹ ವಿರೋಧಾಭಾಸದ ಬುನಾದಿಯ ಮೇಲೆ ನಿಂತಿರುವ ಈ ನಾಡಿಗೆ ಪ್ರವಾಸ ಮಾಡುವ ಅವಕಾಶ ಅಚಾನಕ್ ಆಗಿ ನನಗೆ ಬಂದೊದಗಿತು.

ಅಕ್ಕನ ಮಗ ವಾಗೀಶ ಯು-ಬ್ಯಾಂಕ್‌ಗೆ ಸಾಫ್ಟ್‌ವೇರ್ ನೆರವು ನೀಡುವ ಟೆಕ್ ಮಹೀಂದ್ರ ತಂಡದ ಲೀಡರ್ ಆಗಿದ್ದ. ಅವನು ಈ ಕೆಲಸದ ಸಲುವಾಗಿ ದಕ್ಷಿಣ ಆಫ್ರಿಕಾದ ಅತ್ಯಂತ ಶ್ರೀಮಂತ ನಗರವಾದ ಜೊಹಾನ್ಸ್‌ಬರ್ಗ್‌ಗೆ ಎರಡು ಬಾರಿ ಭೇಟಿ ನೀಡಿದ್ದ. ಅವನು ಅಲ್ಲಿನ ಬೆಟ್ಟಗುಡ್ಡಗಳು, ಸಫಾರಿಗಳು, ಸಮುದ್ರ ತೀರ, ವಿಕ್ಟೋರಿಯ ಫಾಲ್ಸಿ॒ವುಗಳ ವರ್ಣನೆ ಮಾಡುತ್ತಿದ್ದ. ಕಂಪ್ಯೂಟರ್ ಮೌಸ್ ಪ್ಯಾಡ್ ಮೇಲೆ ತಾನು ಚಿರತೆಯೊಂದಿಗೆ ನಡೆಯುತ್ತಿರುವ ಚಿತ್ರ ಹಾಕಿಕೊಂಡಿದ್ದ. ಅಲ್ಲಿನ ಸಫಾರಿಗಳಲ್ಲಿ ಹುಲಿಮರಿಗಳೊಂದಿಗೆ, ಚಿರತೆಯೊಂದಿಗೆ ಪ್ರವಾಸಿಗರು ಓಡಾಡಲು ಅವಕಾಶ ಇದೆ ಎಂದೆಲ್ಲಾ ಹೇಳಿದಾಗ ನಮಗೆಲ್ಲಾ ದಕ್ಷಿಣ ಆಫ್ರಿಕಾಗೆ ಭೇಟಿ ನೀಡುವ ಆಸೆ ಪ್ರಬಲವಾಗುತ್ತಿತ್ತು. ಅವನು ಮತ್ತೊಮ್ಮೆ ಬ್ಯಾಂಕಿನ ಕೆಲಸದ ಸಲುವಾಗಿ ಅಲ್ಲಿಗೆ ಹೋಗಬೇಕಾಗಿ ಬಂದಾಗ – ನಾವೂ ಬರುತ್ತೇವೆ ಎಂದು ಅವನಿಗೆ ದುಂಬಾಲು ಬಿದ್ದೆವು. ಅವನು -“ನೋಡೋಣ, ಅಲ್ಲಿನ ಪರಿಸ್ಥಿತಿ ನೋಡಿ ತಿಳಿಸುವೆ”, ಎಂದನು. ಎರಡೇ ವಾರದಲ್ಲಿ ಅವನಿಂದ ಪೋನ್ ಬಂತು -“ವೀಸಾಗೆ ಅರ್ಜಿ ಸಲ್ಲಿಸಿ. ‘ಯೆಲ್ಲೋ ಫಿವರ್’ ಲಸಿಕೆ ಹಾಕಿಸಿಕೊಳ್ಳಿ”. ಬಿಳಿಯರು ಆಫ್ರಿಕನ್ನರಿಗೆ – ಕರಿಯರು ಎಂದು ಕರೆದ ಹಾಗೆ ಅವರಿಗೆ ಬರುವ ಜ್ವರಕ್ಕೂ ಒಂದು ಬಣ್ಣ ಹಚ್ಚಿರೋದನ್ನು ನೋಡಿ ನಗು ಬಂತು. ನನ್ನ ಭಾವ ಧರ್ಮಪ್ಪನವರು ಮೈಸೂರಿನಲ್ಲಿರುವ ಬಿ.ಐ.ಟಿ.ಯವರ ಬಳಿ ವೀಸಾಗೆ ಅರ್ಜಿ ಸಲ್ಲಿಸಿದರು.

ಗೂಗಲ್ ಸರ್ವಜ್ಞನ ಬಳಿ ದಕ್ಷಿಣ ಆಫ್ರಿಕಾ ಪ್ರವಾಸದ ಮಾಹಿತಿಯನ್ನು ಪಡೆದು ಪ್ರವಾಸ ತಾಣಗಳ ಪಟ್ಟಿ ಮಾಡಿದೆವು – ಸತ್ಯಾಗ್ರಹ ಹೌಸ್, ಮಂಡೇಲಾ ಹೌಸ್, ಕಾನ್ಸ್ಟಿಟ್ಯುಷನ್ ಹಿಲ್, ಕೇಪ್ ಟೌನ್, ಡೈಮಂಡ್ ಮೈನ್ಸ್, ವಿಕ್ಟೋರಿಯ ಪಾಲ್ಸ್, ಕೃಗೇರ್ ನ್ಯಾಷನಲ್ ಪಾರ್ಕ್, ಕ್ರೇಡಲ್ ಆಪ್ ಹ್ಯುಮನ್ಸ್ ಇತ್ಯಾದಿ.


ದಕ್ಷಿಣ ಆಫ್ರಿಕಾದ ಪರಿಸರ ವ್ಯವಸ್ಥೆ ವಿಶಿಷ್ಟವಾದುದು. ಇಲ್ಲಿನ ಪ್ರಕೃತಿ ವಿವಿಧ ಆಕಾರಗಳಲ್ಲಿ, ವಿವಿಧ ಉಡುಗೆ ತೊಡುಗೆಯಲ್ಲಿ ನಲಿದಾಡುವಳು. ಆದರೆ ಪರಕೀಯರ ದಾಳಿಗೆ ತುತ್ತಾದ ಇಲ್ಲಿನ ಪರಿಸರ, ಜನಜೀವನ ನಲುಗಿ ಹೋಗಿದೆ. ‘ಅಪರ್‌ಥೈಡ್’ನ ಚಕ್ರವ್ಯೂಹದಲ್ಲಿ ಬಂಧಿಯಾದ ಆಫ್ರಿಕನ್ನರು-ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ನಿರಂತರವಾಗಿ ಶೋಷಣೆಗೊಳಗಾದರು. ಆಫ್ರಿಕನ್ನರನ್ನು ಬಿಳಿಯರು ‘ಕರಿಯರು’ ಎಂದೇ ಸಂಬೋಧಿಸಿ ವರ್ಣಬೇಧಕ್ಕೆ ನಾಂದಿ ಹಾಡಿದರು. ಇವರನ್ನು ಅನಾಗರೀಕರೆಂದು ಪರಿಗಣಿಸಿ, ನಾಗರೀಕರನ್ನಾಗಿ ಮಾಡುವ ಸೋಗು ಹಾಕಿ ಮತಾಂತರ ಮಾಡಿದರು. ಇವರದೇ ನೆಲದಲ್ಲಿ ನಿಂತು – ಇವರನ್ನೇ ದೂರ ಇಟ್ಟರು. ಇದನ್ನು ಅಪರ್‌ಥೈಡ್ ಎಂದು ಕರೆದರು. ಇದರ ಮುಖ್ಯವಾದ ಮೂರು ಕಾಯ್ದೆಗಳು;

1) ರೇಸ್ ಕ್ಲಾಸಿಫಿಕೇಷನ್ ಆಕ್ಟ್ – ಅಲ್ಲಿ ನೆಲಸಿದ್ದ ಜನಾಂಗವನ್ನು ಬಿಳಿಯರು, ಕರಿಯರು ಮತ್ತು ಕಲರ್ಡ್ ಎಂದು ವಿಂಗಡಿಸಿದರು
2) ಮಿಕ್ಸೆಡ್ ಮ್ಯಾರೇಜಸ್ ಆಕ್ಟ್- ಒಂದು ಜನಾಂಗದವರು ಇನ್ನೊಂದು ಜನಾಂಗದವರೊಡನೆ ಮದುವೆಯಾಗುವಂತಿಲ್ಲ.
3) ಗ್ರೌಂಡ್ ಏರಿಯಾ ಆಕ್ಟ್- ಎಲ್ಲ ಜನಾಂಗದವರೂ ಅವರಿಗೆಂದೇ ಗುರುತಿಸಲ್ಪಟ್ಟ ಸ್ಥಳದಲ್ಲಿಯೇ ವಾಸಿಸಬೇಕು.

೧೯೪೮ ರಿಂದ ೧೯೯೪ ರ ವರೆಗೆ ಸತತ ಹೋರಾಟ ನಡೆಸಿದ ಆಫ್ರಿಕನ್ನರು ಕೊನೆಗೂ ಅಪರ್‌ಥೇಡ್ ದಿಂದ ಮುಕ್ತಿ ಪಡೆದರು. ಈ ಹೋರಾಟದ ನಾಯಕತ್ವ ವಹಿಸಿದ್ದ ನೆಲ್ಸನ್ ಮಂಡೇಲಾರವರು ಇಪ್ಪತ್ತೇಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಮೊಟ್ಟಮೊದಲ ಕರಿಯ ಆಫ್ರಿಕನ್ ಅಧ್ಯಕ್ಷರಾದ ಹೆಗ್ಗಳಿಕೆ ಇವರದು.
ದಕ್ಷಿಣ ಆಫ್ರಿಕಾದಲ್ಲಿ ಮೂರು ರಾಜಧಾನಿಗಳಿವೆ–ಕಾರ್ಯಾಂಗದ ರಾಜಧಾನಿ ಪ್ರಿಟೋರಿಯ, ಶಾಸಕಾಂಗದ ರಾಜಧಾನಿ ಕೇಪ್ ಟೌನ್ ಹಾಗೂ ನ್ಯಾಯಾಂಗದ ರಾಜಧಾನಿ ಬ್ಲೊ‌ಎಮ್‌ಫಾಂಟೆನ್
ದಕ್ಷಿಣ ಆಫ್ರಿಕಾದ ಆರು ಪ್ರಮುಖ ಪಟ್ಟಣಗಳು – ಜೊಹಾನ್ಸ್‌ಬರ್ಗ್, ಕೇಪ್ ಟೌನ್, ಕೈರೋ, ಲಾಗೋಸ್, ಡರ್ಬನ್ ಹಾಗೂ ನೈರೋಬಿ. ಇವರಾಡುವ ಭಾಷೆಗಳು ಹಲವಾರು ಇದ್ದರೂ ಸರ್ಕಾರವು ಹನ್ನೊಂದು ಭಾಷೆಗಳನ್ನು ಅಧಿಕೃತವೆಂದು ಘೋಷಿಸಿದೆ.

ನಾವುಗಳು ಪ್ರವಾಸದ ಸಿದ್ಧತೆ ಮಾಡುತ್ತಿರುವಾಗಲೇ, ವಾಗೀಶ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದ- ಇಲ್ಲಿ ಕಳ್ಳತನ, ಸುಲಿಗೆ ಹೆಚ್ಚು. ಚಿನ್ನ ಅಥವಾ ಚಿನ್ನದಂತೆ ಕಾಣುವ ಯಾವುದೇ ಆಭರಣ ಹಾಕಿಕೊಂಡು ಬರಬೇಡಿ. ವ್ಯಾನಿಟಿಬ್ಯಾಗ್ ಹೆಗಲಿಗೇರಿಸಿಕೊಂಡು ಬರಲೇಬೇಡಿ. ಪಾಸ್‌ಪೋರ್ಟ್, ಮೊಬೈಲ್, ಹಣಕ್ಕಾಗಿ ಅದನ್ನು ಕಸಿದುಕೊಂಡು ಪರಾರಿಯಾಗುತ್ತಾರೆ. ಈಗೇನೋ ಫ್ಯಾನ್ಸಿ ಆಭರಣಗಳು ಸಾಕಷ್ಟು ದೊರೆಯುತ್ತವೆ, ಆದರೆ ವ್ಯಾನಿಟಿಬ್ಯಾಗ್ ಇಲ್ಲದೆ ಪ್ರಯಾಣ ಮಾಡುವುದಾದರೂ ಹೇಗೆ? ಹೆಣ್ಣುಮಕ್ಕಳ ವ್ಯಾನಿಟಿ ಎಲ್ಲ ಅಡಗಿರುವುದು ಅಲ್ಲಿಯೇ ಅಲ್ಲವೇ? ಜೊತೆಗೆ ಇವನ್ನೆಲ್ಲಾ ಇಡಲು ಹೆಣ್ಣಿನ ಉಡುಪಿನಲ್ಲಿ ಜೇಬಿಲ್ಲವಲ್ಲ. ಬಹಳ ಯೋಚಿಸಿ ಒಂದು ದಾರಿ ಹುಡುಕಿದೆವು. ಎಲೆ, ಅಡಿಕೆ ಇಡಲು ಹಿಂದೆ ಅಜ್ಜಿಯರು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದ ಸಂಚಿಯನ್ನು ಸ್ವಲ್ಪ ಮಾರ್ಪಾಡು ಮಾಡಿ ಕುತ್ತಿಗೆಗೆ ನೇತುಹಾಕಿಕೊಡೆವು.

ನಾವು ಜೊಹಾನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸುವ ಮೊದಲೇ ಅಲ್ಲಿನ ವಂಚನೆಯ ಜಾಲಗಳ ಪರಿಚಯ ಆಗತೊಡಗಿತು. ವಾಗೀಶ ನಮ್ಮ ಪ್ರವಾಸದ ಪೂರ್ವಸಿದ್ಧತೆ ಮಾಡುತ್ತಿದ್ದ. ಪ್ರವಾಸದ ಸಮಯದಲ್ಲಿ ತಂಗಲು ಸುಸಜ್ಜಿತವಾದ ಮನೆ, ತಿರುಗಾಡಲು ವಾಹನ, ಪ್ರವಾಸದ ವೇಳಾಪಟ್ಟಿ, ಮುಂಗಡ ಟಿಕೆಟ್ ಬುಕಿಂಗ್ ಎಲ್ಲಾ ತಯಾರಿ ಮಾಡಿದ್ದ. ವಿಕ್ಟೋರಿಯಾ ಫಾಲ್ಸ್‌ಗೆ ಹೋಗಲು ಅಲ್ಲಿನ ಸ್ಥಳೀಯ ವಿಮಾನ ಕಂಪೆನಿಯೊಂದರಲ್ಲಿ ನಾಲ್ಕು ಟಿಕೆಟ್‌ಗಳನ್ನು ರೂ.1,20,000 ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಿ ಬುಕ್ ಮಾಡಿದ. ಮಾರನೆಯ ದಿನವೇ ಬಂದಿತು ಬ್ರೇಕಿಂಗ್ ನ್ಯೂಸ್ – ಆ ಕಂಪನಿಯೇ ಮಾಯ. ಅಲ್ಲಿ ಯಾವ ವಿಮಾನವೂ ಇರಲೇ ಇಲ್ಲ. ಅದೃಷ್ಟವಶಾತ್ ಬೆಂಗಳೂರಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನವರು ಆ ಕಂಪನಿಯ ಮೋಸದ ಜಾಲವನ್ನು ಪತ್ತೆ ಮಾಡಿ ಹಣ ಪಾವತಿಸಿರಲಿಲ್ಲ. ನಮ್ಮ ಹಣವೇನೋ ಸುರಕ್ಷಿತವಾಗಿತ್ತು. ಆದರೆ ನಾವು ನಾಲ್ಕೂ ಜನ ಆ ಅಕೌಂಟಿಗೇ ಪ್ರವಾಸಕ್ಕೆ ಬೇಕಾದ ಹಣವನ್ನು ಜಮಾ ಮಾಡಿದ್ದರಿಂದ ಸ್ವಲ್ಪ ಪರದಾಟವಾಯಿತು.

-ಡಾ.ಗಾಯತ್ರಿದೇವಿ ಸಜ್ಜನ್

10 Responses

  1. ನಯನ ಬಜಕೂಡ್ಲು says:

    Very nice

  2. ಬಿ.ಆರ್.ನಾಗರತ್ನ says:

    ಪ್ರವಾಸ ಕಥನ ನನಗೆ ಆಪ್ತವಾದ ಓದು.ಸುರಹೊನ್ನೆಯಲ್ಲಿ ನಿರಂತರವಾಗಿ ಪ್ರಕಟಿಸುತ್ತಿರುವುದು ನನಗೆ ಹೆಚ್ಚು ಖುಷಿ ಆಗಿದೆ ಬರೆಯುತ್ತಿರುವ ಲೇಖಕರಿಗೂ ಪ್ರಕಟಿಸುತ್ತಿರುವ ಸಂಪಾದಕರಿಗೂ ನನ್ನ ಧನ್ಯವಾದಗಳು.

  3. Padma Anand says:

    ನಿಮ್ಮ ಸುಲಲಿತ ಲೇಖನದೊಂದಿಗೆ ದಕ್ಷಿಣ ಆಫ್ರಿಕಾ ಸುತ್ತಾಡಲು ನಾವೂ ತಯಾರಾಗಿದ್ದೇವೆ. ನೇರ ನಿರೂಪಣೆ ಇಷ್ಟವಾಯಿತು

  4. ಶಂಕರಿ ಶರ್ಮ says:

    ಪ್ರವಾಸ ಕಥನವು ಆತ್ಮೀಯವಾಗಿದೆ. ಆಫ್ರಿಕದ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾದುವು..ಧನ್ಯವಾದಗಳು ಮೇಡಂ.

  5. ASHA SHETTY says:

    VV Interesting Madam

  6. Anonymous says:

    Waiting to read more

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: