ದೇವಗುರು ಬೃಹಸ್ಪತಾಚಾರ್ಯ
ನಮಗೆ ಯಾವುದೇ ಕಾಯಿಲೆ ಬಂದಾಗ ವೈದ್ಯರಲ್ಲಿಗೆ ಧಾವಿಸುತ್ತೇವೆ. ವೈದ್ಯ ನಾರಾಯಣೋ ಹರಿ: . ವೈದ್ಯರೊಡನೆ ನಮ್ಮ ರೋಗದ ಮಾಹಿತಿ ಒಪ್ಪಿಸಿದ ಮೇಲೆ ವಿಶ್ವಾಸದಿಂದ ಸಂಪೂರ್ಣ ಭಾರವನ್ನು ಅವರ ಮೇಲೆ ಹಾಕುತ್ತೇವೆ. ಅಂತೆಯೇ ಯಾವುದೇ ಶುಭಾಶುಭ ಕಾರ್ಯಗಳಿಗೆ ಕುಲಪುರೋಹಿತರು ಬೇಕು. ಅವರನ್ನು ಗುರುಗಳೆಂದು ಮೊದಲ ಆದ್ಯತೆ ಕೊಡಲಾಗುತ್ತದೆ. ಯಾವುದೇ ಪೂಜೆ, ಹವನಾದಿಗಳು ಮತ್ತು ಮದುವೆ, ಮುಂಜಿ, ಪುಂಸವನ, ಸೀಮಂತ, ನಾಮಕರಣ ಮೊದಲಾದ ಷೋಡಶ ಸಂಸ್ಕಾರಗಳನ್ನು ಕುಲಪುರೋಹಿತರ ಮುಖೇನ ಮಾಡಿಸಲು ಅದರ ಎಲ್ಲಾ ಹೊಣೆಯನ್ನು ಪುರೋಹಿತರ ಮೇಲೆ ಹಾಕುತ್ತೇವೆ. ಏನೇ ಸಂಕಷ್ಟ, ಸಮಸ್ಯೆ ಎದುರಾದಾಗ ಪುರೋಹಿತರಲ್ಲಿ ವಿಮರ್ಶೆ ಮಾಡಿ ಪರಿಹಾರ ಹುಡುಕುತ್ತೇವೆ. ಪಾರಂಪರ್ಯದಿಂದಲೇ ಬಂದ ಇವರನ್ನು ಕುಲಗುರು ಎನ್ನಲಾಗುತ್ತದೆ,
ಪುರಾಣದಲ್ಲಿ ದೇವ, ಬ್ರಾಹ್ಮಣ, ರಾಕ್ಷಸರಿಗೆ ಪ್ರತ್ಯೇಕವಾಗಿ ಕುಲಗುರುಗಳಿದ್ದರೆಂದು ನಾವು ಓದುತ್ತೇವೆ. ದೇವತೆಗಳು ದಾನವರನ್ನು ಜಯಿಸುವುದಕ್ಕಾಗಿ ಬೃಹಸ್ಪತಾಚಾರ್ಯರನ್ನು ತಮ್ಮ ಕುಲಪುರೋಹಿತರನ್ನಾಗಿ ಮಾಡಿಕೊಂಡಿದ್ದರಂತೆ. ಹಾಗೆಯೇ ದೇವತೆಗಳನ್ನು ಸೋಲಿಸುವುದಕ್ಕಾಗಿ ದಾನವರು ಶುಕ್ರಾಚಾರ್ಯರನ್ನು ಕುಲಪುರೋಹಿತರನ್ನಾಗಿ ಪಡೆದುಕೊಂಡಿದ್ದರಂತೆ. ದೇವತೆಗಳ ಕುಲಪುರೋಹಿತರಾದ ಬೃಹಸ್ಪತಿ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಬೃಹಸ್ಪತಾಚಾರ್ಯರೆಂದರೆ ದೇವಗುರುಗಳೆಂದು ಈಗಾಗಲೇ ಹೇಳಿದ್ದೇನೆಯಷ್ಟೆ! ಈತನು ಅಂಗೀರಸನ ಮಗ. ಇವನ ತಾಯಿ ವಸುಧೆ, ಬೃಹಸ್ಪತಿಯ ಸೋದರಿ ಬ್ರಹ್ಮವಾದಿನಿ. ಈತನ ಪತ್ನಿ ತಾರೆ. ಈಕೆಗೆ ಸುಭೆ ಹಾಗೂ ಚಂದ್ರಮಸಿ ಎಂಬ ಹೆಸರುಗಳೂ ಇದ್ದುವು. ಬೃಹಸ್ಪತಿಗೆ ತಾರೆಯಲ್ಲಿ ಆರು ಮಕ್ಕಳು ಜನಿಸಿದರು. ಅವರೇ ಅಗ್ನಿಗಳು-ಶಂಯು, ನಿಶ್ಚವನ, ವಿಶ್ವಜಿತ್, ವಿಶ್ವಭುಕ್, ಬಡಬಾಗ್ನಿ, ಸ್ಪಿಷ್ಟಕೃತ್, ಏಳನೇ ಮಗಳು ಸ್ವಾಹೆ. ಬೃಹಸ್ಪತಿಯ ಹಿರಿಯ ಮಗ ಕಚ. ಮಮತಾ ದೇವಿಯಲ್ಲಿ ಬೃಹಸ್ಪತಿಗೆ ಭಾರದ್ವಾಜನೆಂಬ ಮಗನೂ ಜನಿಸಿದನು.
‘ಮೃತ ಸಂಜೀವಿನಿ’ ವಿದ್ಯೆಯೆಂಬುದು ದಾನವರ ಗುರುಗಳಾದ ಶುಕ್ರಾಚಾರ್ಯರಿಗೇ ತಿಳಿದಿತ್ತೇ ವಿನಹ ದೇವ ಗುರು ಬೃಹಸ್ಪತಾಚಾರ್ಯರಿಗೆ ತಿಳಿದಿರಲಿಲ್ಲ.
ದೇವತೆಗಳ-ದಾನವರ ಯುದ್ಧದಲ್ಲಿ ಮಡಿದ ದಾನವರನ್ನು ಶುಕ್ರಾಚಾರ್ಯರು ಸಂಜೀವಿನಿ ವಿದ್ಯೆಯಿಂದ ಬದುಕಿಸುತ್ತಿದ್ದರು. ಆದರೆ ದೇವತೆಗಳು ಮಡಿದರೆ ಅವರ ಬದುಕಿಸಲು ಬೃಹಸ್ಪತಾಚಾರ್ಯರಿಗೆ ಸಂಜೀವಿನಿ ವಿದ್ಯೆ ತಿಳಿದಿರಲಿಲ್ಲವಲ್ಲ! ಅದು ದೇವಗುರು ಮತ್ತು ದೇವತೆಗಳು ಸಮಾಲೋಚನೆ ನಡೆಸಿ ಕಚನನ್ನು ಶುಕ್ರಾಚಾರ್ಯರಲ್ಲಿಗೆ ಮೃತಸಂಜೀವಿನಿ ವಿದ್ಯೆ ಕಲಿಕೆಗಾಗಿ ಕಳುಹಿಸುವುದೆಂದು ತೀರ್ಮಾನಿಸಿದರು. ಅಂತೆಯೆ ಬೃಹಸ್ಪತಿಯು ಮಗನಿಗೆ ‘ನೀನು ಶುಕ್ರಾಚಾರ್ಯರಿಗೆ ತಿಳಿದಿರುವ ಮೃತ ಸಂಜೀವಿನಿ ವಿದ್ಯೆಯನ್ನು ಕಲಿತು ಬಂದರೆ ನಮ್ಮೊಡನೆ ನಿನಗೂ ಯಜ್ಞದಲ್ಲಿ ಹವಿರ್ಭಾಗ ಸಿಕ್ಕುವುದು. ನೀನು ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನು ಸಂತೋಷಪಡಿಸಿದರೆ ನಿನಗೆ ಆ ವಿದ್ಯೆ ಸುಲಭವಾಗಿ ಲಭಿಸುವುದು’ ಎಂದನು. ಮುಂದೆ ಕಚನು ಶುಕ್ರರಲ್ಲಿಗೆ ಹೋಗಿ ‘ಮೃತ ಸಂಜೀವಿನಿ’ ವಿದ್ಯೆ ತಿಳಿದು ಬರುತ್ತಾನೆ.
ಒಮ್ಮೆ ಇಂದ್ರ ಇದ್ದಕ್ಕಿದ್ದಂತೆ ಅದೃಶ್ಯನಾಗಲು ದೇವತೆಗಳ ಪ್ರಾರ್ಥನೆಯಂತೆ ನಹುಷಃ ಇಂದ್ರಪಟ್ಟ ದೊರೆಯಿತು. ಆಗ ಇಂದ್ರನ ಪತ್ನಿ ಶಚೀದೇವಿಯಲ್ಲಿ ಮೋಹಿತನಾದ ನಹುಷ ಆಕೆಯನ್ನು ಕೆಣಕಿದ. ಇದನ್ನರಿತ ಬೃಹಸ್ಪತಿಯು ಅವನನ್ನು ತಡೆಮಾಡಿ ಶಚಿದೇವಿಯ ಪಾತಿವ್ರತ್ಯವನ್ನು ಕಾಪಾಡಿದನು.
ದೌಪದಿಯು ಬಾಲ್ಯಾವಸ್ಥೆಯಲ್ಲಿದ್ದಾಗ ಒಬ್ಬ ಬ್ರಾಹ್ಮಣನು ಬಂದು ಆಕೆಗೆ ‘ಬೃಹಸ್ಪತಿ ನೀತಿ‘ಯನ್ನು ಬೋಧಿಸಿದನಂತೆ. ಬೃಹಸ್ಪತಿಯು ಮಂತ್ರಶಾಸ್ತ್ರ, ನೀತಿಶಾಸ್ತ್ರ ಮೊದಲಾದವುಗಳನ್ನು ಬಲ್ಲವನು.
ಈತನು ದೇವ-ದಾನವರ ಯುದ್ಧದ ಸಮಯದಲ್ಲಿ ದಾನವರ ನಾಶಕ್ಕಾಗಿ ಸರಸ್ವತಿ ನದೀ ತೀರದಲ್ಲಿ ಒಂದು ಯಾಗವನ್ನು ಮಾಡಿದನು.
ಬೃಹಸ್ಪತಿಗೆ ಗೌರವ ಸೂಚಕವಾಗಿ ವಾರದಲ್ಲಿ ಒಂದು ದಿನವನ್ನು (ಗುರುವಾರ) ಬೃಹಸ್ಪತಿ ವಾಸರ: ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತದೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ನನ್ನ ಲೇಖನ ಪ್ರಕಟಿಸಿದ ಹೇಮಮಾಲಾ ಹಾಗೂ ಒಓದಿದ ಬಳಗಕ್ಕೆ ಮನಸಾ ಧನ್ಯವಾದಗಳು.
ಗೊತ್ತಿರುವ ಕಥೆಯೇ ಮತ್ತೆ ಮತ್ತೆ ನೆನಪಿಗೆ ಬರುವಂತೆ ಮಾಡಿತು ನಿಮ್ಮ ಬೃಹಸ್ಪತಿಚಾರ್ಯ ಕಥೆ ಧನ್ಯವಾದಗಳು ಮೇಡಂ.
ಚೆನ್ನಾಗಿದೆ
ದೇವಗುರು ಬೃಹಸ್ಪತಿ ಬಗೆಗಿನ ಸವಿವರ ಕಥಾನಕ, ಮರೆತಿದ್ದ ವಿಷಯಗಳನ್ನು ಮತ್ತೊಮ್ಮೆ ಮನನ ಮಾಡಿಸಿತು.. ಚಂದದ ಬರಹ..ಧನ್ಯವಾದಗಳು ವಿಜಯಕ್ಕ.