ಅನರ್ಘ್ಯ ರತ್ನ ಆಪಸ್ತಂಭ

Share Button

ಪುರಾಣ ಕಾಲದಲ್ಲಿ ಋಷಿಮನಿಗಳು ಕಾನನದಲ್ಲಿ, ನದೀ ತೀರದಲ್ಲಿ ಆಶ್ರಮ ಅಥವಾ ಕುಟೀರ ಕಟ್ಟಿಕೊಂಡು ತಪಸ್ಸನ್ನಾಚರಿಸುತ್ತಿದ್ದರಂತೆ ಇಂತಹ ತಪಸ್ಸು ಕುಳಿತು, ನಿಂತು, ಒಂಟಿಕಾಲಿನಲ್ಲಿ  ಹೀಗೆ ವಿವಿಧ ಭಂಗಿಗಳಲ್ಲಿ ಅವರ ಗುರಿ ಸಾಧಿಸುವ ತನಕ ಹಲವಾರು ವರ್ಷಗಳೇ  ಮುಂದುವರಿಸುತ್ತಿಸ್ಸರಂತೆ. ವಾಲ್ಮೀಕಿ, ಚ್ಯವನ ಮೊದಲಾದ ಋಷಿಗಳು ಹೀಗೆ  ಘೋರ ತಪಸ್ಸಿನಿಂದ ತಮ್ಮ ದೇಹ ಗೋಚರಿಸದಂತೆ ಮೈಮೇಲೆ ಹುತ್ತ  ಬೆಳೆದು ಏಕಾಗ್ರತೆ ಕದಲದೆ ತಪೋನಿಷ್ಟವಾಗಿದ್ದರೆಂಬ ಕಥೆ  ತಿಳಿದಿದ್ದೇವೆ. ಮನಸ್ಸೆಂಬುದು ಮರ್ಕಟದ ಹಾಗೆ.  ಒಂದರ್ಧ ಗಂಟೆ ಧಾನ ಮಾಡುವುದೆಂದರೆ ಕಾದ ಕಷ್ಟದ ಕೆಲಸವೆನಿಸುವ  ನಾವು ಇದನ್ನು ಕೇಳಿ  ಪರಮಾಶ್ಚರ್ಯ ಪಡುತ್ತೇವೆ ಅಲ್ಲವೇ ? ಹೌದು, ಅನುಮಾನವೆ ಇಲ್ಲ,  ಆದರೆ ಇದಕ್ಕಿಂತಲೂ ಮಿಗಿಲಾಗಿ ಇನ್ನೊಂದು ರೀತಿಯ ಕಠಿಣ ತಪಸ್ಸೂ ಇದೆಯಂತೆ.  ಅದುವೆ ಜಲಸ್ತಂಭನದ ಮೂಲಕ. ನೀರಿನೊಳಗೆ  ದೀರ್ಘಾವಧಿ ಕುಳಿತು ಮಾಡುವ ಧ್ಯಾನ.  ಅಂತಹವರಿಗೆ ಮೀನು, ಮೊಸಳೆ ಮೊದಲಾದ ಜಲಚರ ಪ್ರಾಣಿಗಳು ಏನೂ  ತೊಂದರೆ ಕೊಡುತ್ತಿರಲಿಲ್ಲವಂತೆ ಎಂಬುದು ಇನ್ನೊಂದು  ವಿಶೇಷ.  ಬದಲಾಗಿ ಅಂತಹ ತಪಸ್ವಿಗಳಿಗೆ ಭಕ್ತಿಯಿಂದ ಸುತ್ತು ಹಾಕುತ್ತಿದ್ದುವಂತೆ.

ಈ ನಿಟ್ಟಿನಲ್ಲಿ ಶ್ರೇಷ್ಠ ಬ್ರಹ್ಮನಿಷ್ಠ ಮುನಿಗಳ ಕೀರ್ತಿಯನ್ನು ಒಂದು ಕತೆಯ ಮೂಲಕ  ತಿಳಿಯೋಣ. ಭೃಗು ವಂಶದಲ್ಲಿ ಜನಿಸಿದ ಆಪಸ್ತಂಭನೆಂಬ ಬ್ರಾಹ್ಮಣನಿದ್ದ. ಎಳೆಯವನಾಗಿದ್ದಾಗಲೇ ಅವನ ಕಾಮಕ್ರೋಧಗಳಿಂದ ದೂರ ಉಳಿದು ಮನೆಯನ್ನುತೊರೆದು ನರ್ಮದಾ ನದಿ ತೀರಕ್ಕೆ ಹೋಗಿ ತಪಸ್ಸನ್ನಾಚರಿಸಲು ಪ್ರಾರಂಭಿಸಿದ. ಜಲದಲ್ಲಿ ಕುಳಿತು ತಪವನ್ನಾಚರಿಸಿ ಆಪಸ್ತಂಭನ’ ವಿದ್ಯೆಯನ್ನು ಕಲಿತ, ಆಗಾಗ ಕೆಲವು  ದಿನಗಳು ಹೀಗೆ ನೀರಿನಲ್ಲಿ ತಪಸ್ಸುಗೈದು ಮತ್ತೆ ಬಹಿರ್ಮುಖನಾಗಿ ಹೊರಗೆ ಬರುತ್ತಿದ್ದ. ಅದರಿಂದಾಗಿ ಅವನಿಗೆ ‘ಆಪಸ್ತಂಭ’ ಎಂಬ ಹೆಸರೇ ಉಳಿಯಿತು.

ಹೀಗೊಂದು ದಿನ ಆ ಋಷಿಯು  ನರ್ಮದಾ ನದಿಯ ಪ್ರವಾಹದ ಸುಳಿಯೊಳಗೆ ಕುಳಿತು ಜಲಸ್ತಂಭನ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ. ಜಲಚರಗಳು ಆತನಿಗೆ ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದುವು. ಅಪಾರ ಸಂಖ್ಯೆಯಲ್ಲಿ ಮೀನುಗಳನ್ನು ಒಂದೇ ಕಡೆ ಕಂಡ ಬೆಸ್ತರು ಸಂತೋಷಗೊಂಡು ಬಲೆಯನ್ನು ಬೀಸಿದರು. ಮೀನುಗಳು ಬಿದ್ದುವೆಂದು ಭಾರವಾದ ಬಲೆಯನ್ನು ಬೆಸ್ತರು ಎಳೆದಾಗ ಆಶ್ಚರ್ಯಕರವಾಗಿ ಒಬ್ಬ ಮನುಷ್ಯನ ದೇಹವೂ ಮೀನುಗಳೊಂದಿಗೆ ಬಲೆಯಲ್ಲಿ ಇತ್ತು. ಕೂಲಂಕುಷವಾಗಿ ಪರೀಕ್ಷಿಸಿದಾಗ ಅದು ಆಪಸ್ತಂಭನ ದೇಹವೆಂದು ತಿಳಿಯಿತು. ಬೆಸ್ತರು ಭಯಗ್ರಸ್ತರಾಗಿ ನಿಂತರು. ಅಷ್ಟರಲ್ಲಿ  ಮುನಿಯು ತಪಸ್ಸಿನಿಂದ ಬಹಿರ್ಮುಖಗೊಂಡು ಎದ್ದು ಕುಳಿತನು.

ಬೆಸ್ತರು ಮುನಿಯೊಡನೆ ‘ಪೂಜ್ಯ ಮುನಿವರ್ಯರೇ ನಮ್ಮಿಂದ ಮಹಾಪರಾಧವಾಗಿದೆ. ತಾವು ಜಲದೊಳಗೆ ತಪೋನಿಷ್ಠರಾಗಿದ್ದುದು ನಮಗೆ ತಿಳಿದಿರಲಿಲ್ಲ. ನಮ್ಮಿಂದಾದ ತಪ್ಪಿಗೆ ಪರಿಹಾರ ಮಾಡಿಕೊಳ್ಳಲು ಬಯಸುತ್ತೇವೆ’ ಎಂದರು. ಆಗ ಆಪಸ್ತಂಭನು ಸುತ್ತಮುತ್ತ ಪರಿಸರವನ್ನು ನೋಡಿ ‘ಬೆಸ್ತರೇ, ನಿಮ್ಮ ಬಾಯಿ ಚಪಲವನ್ನು ತೀರಿಸಿಕೊಳ್ಳಲು ಈ ನಿರುಪದ್ರವಿ ಮೀನುಗಳನ್ನು ಕೊಲ್ಲುವಿರಾದರೆ ಅವುಗಳು ಯಾರ ಮೊರೆ ಹೋಗಬೇಕು. ಅಸಹಾಯಕ ಪ್ರಾಣಿಗಳ ದುಃಖ ವಿಮೋಚನೆಗಾಗಿ ಜಪಾನುಷ್ಟಾನುಗಳಿಂದ ಗಳಿಸಿದ ಪುಣ್ಯವನ್ನೆಲ್ಲ ಈ ಪ್ರಾಣಿಗಳಿಗೆ ಅರ್ಪಿಸುತ್ತೇವೆ. ಬಲೆಯಲ್ಲಿ ಬಿದ್ದು ಪ್ರಾಣ ಬಲಿ ನೀಡುವ ಇವುಗಳನ್ನು ಬಿಟ್ಟು ನಾನು ಮೋಕ್ಷಕ್ಕೂ ಹೋಗಲಾರೆ. ಈ ಮತ್ಸ್ಯ ರಾಶಿಯೊಂದಿಗೆ  ನಾನು ಇಲ್ಲಿಯೇ ಇದ್ದು ಬಿಡುತ್ತೇನೆ’ ಎಂದನು.

ಬೆಸ್ತರು ಭಯಗ್ರಸ್ತರಾಗಿ ಅಲ್ಲಿಯ ರಾಜನಿಗೆ ತಿಳಿಸಲು ರಾಜನಾದ ನಾಭಾಗನಲ್ಲಿಗೆ  ಓಡಿದರು. ಅವರಿಂದ ವಿಷಯ ತಿಳಿದ ರಾಜನು ಅವರೊಂದಿಗೆ ಮುನಿ ಇರುವೆಡೆಗೆ ಬಂದ. ರಾಜನು ಮುನಿಗೆ ಸಾಷ್ಟಾಂಗ ಮಾಡಿ ಗೌರವದಿಂದ ಸತ್ಕರಿಸಿ ತನ್ನ ಪ್ರಜೆಗಳಿಂದಾದ ತಪ್ಪನ್ನು ಮನ್ನಿಸಬೇಕೆಂದೂ ಅದಕ್ಕಾಗಿ ತಾನು ಏನು ಮಾಡಬೇಕೆಂದು ಬಿನ್ನವಿಸಿಕೊಂಡನು.

ಕೂಡಲೇ ಆಪಸ್ತಂಭನು ರಾಜನಿಗೆ ‘ರಾಜಾ, ಈ ಮೀನುಗಾರರು ಕಡು ಬಡತನದಲ್ಲಿದ್ದಾರೆ. ಅವರ ಬಲೆಯಲ್ಲಿ ನಾನು ಬರುವ ಬದಲು ನನ್ನ ತೂಕದಷ್ಟು ಮೀನು ಬರುತ್ತಿದ್ದರೆ ಅವರಿಗೆ ಲಾಭವಾಗುತ್ತಿತ್ತು. ಆದರೀಗ ನನ್ನಿಂದ ಅವರಿಗೇನೂ ಲಾಭವಿಲ್ಲ. ನನ್ನನ್ನು ಹಿಡಿದು ಮೇಲಕ್ಕೆತ್ತಿರುವುದರಿಂದ ನಾನೀಗ ಅವರ ಸೊತ್ತು. ರಾಜನಾದ ನೀನು ನನ್ನನ್ನು ಬಂಧಮುಕ್ತಗೊಳಿಸಲು ನನ್ನ ಮೌಲ್ಯಕ್ಕೆ ಸರಿಸಮಾನವಾದ  ಮೌಲ್ಯವನ್ನು ಅವರಿಗೆ ಕೊಟ್ಟು ನನ್ನನ್ನು ಬಿಡುಗಡೆಗೊಳಿಸು‘ ಎಂದನು.

ಅದಕ್ಕೆ ‘ರಾಜನು ಮಹಾತ್ಮರೇ, ನಿಮ್ಮ ಬದಲಾಗಿ ಅವರಿಗೆ ಒಂದು ಲಕ್ಷ  ಸುವರ್ಣ ನಾಣ್ಯಗಳನ್ನು ಕೊಡುತ್ತೇನೆ. ಆಗಬಹುದಲ್ಲವೇ ? ‘ ಅಂದನು .ಆಗ ಆಪಸ್ಟಂಭನು ‘ನನ್ನ ಮೌಲ್ಯ ಅಷ್ಟು ಕಡಿಮೆಯೇ? ಈ ನಿನ್ನ ಮಂತ್ರಿವರ್ಯರೊಡನೆ ಯೋಚಿಸಿ ನಿರ್ಧರಿಸು’

‘ಒಂದು ಲಕ್ಷ ಸಾಲದಿದ್ದರೆ ಒಂದು ಕೋಟಿ ಸುವರ್ಣನಾಣ್ಯ ಕೊಡುತ್ತೇನೆ.  ಸಮಾಧಾನ ಮಾಡಿಕೊಳ್ಳಿ’  ಎಂದನು ರಾಜ.

‘ಏನು… ಒಂದು ಕೋಟಿಯೇ?  ನಾನೇನು ಅಷ್ಟು ಕೀಳು ಮಟ್ಟದವನೇ ?  ನೀನು ನಿನ್ನ ಗುರುಗಳನ್ನೂ ಮಂತ್ರಿವರ್ಯರನ್ನೂ, ಬ್ರಾಹ್ಮಣರನ್ನೂ ಕರೆಯಿಸಿ ಸಮಾಲೋಚಿಸು’  ಎಂದನು ಆಪಸ್ತಂಭ.

ರಾಜನು ಅಷ್ಟಕ್ಕೆ ನಿಲ್ಲಸದೆ ಮತ್ತೂ ಮುಂದುವರೆಸಿ ‘ನನ್ನ ಅರ್ಧ ರಾಜ್ಯವನ್ನೇ ಕೊಡುತ್ತೇನೆ.  ಈ ಮೀನುಗಾರರಿಗೆ, ನನ್ನ ದೃಷ್ಟಿಯಿಂದ ಇದು ನಿಮ್ಮ ಮೌಲ್ಯಕ್ಕೆ ಸಮನಾಗಬಹುದೆಂದು ನಿರ್ಧರಿಸಿದ್ದೇನೆ. ನಿಮಗಿದು ಸರಿಕಾಣದಲ್ಲಿ ನೀವೇ ಹೇಳಿರಿ. ನೀವು ಹೇಳಿದಂತೆ ನಾನು ಮಾಡಲು ಸಿದ್ದ’ ಎಂದನು.

‘ನನ್ನ ಬೆಲೆಯನ್ನು ನಾನೇ ನಿರ್ಧರಿಸಿಕೊಳ್ಳುವುದು ಸರಿಕಾಣದು, ನಿನ್ನ ಪುರೋಹಿತರ, ಋಷಿಗಳ ಸಲಹೆ ಕೇಳು’ ಎಂದನು.

ಇದನ್ನು ಕೇಳಿದ ರಾಜಾ ನಾಭಾಗನು ಬಹಳ ಚಿಂತಾಕ್ರಾಂತನಾಗಿ ಅರಮನೆಗೆ  ಬಂದನು. ಅಷ್ಟರಲ್ಲಿ ಮಹಾತಪಸ್ವಿಗಳಾದ ‘ಲೋಮಶ’ರು ಅರಮನೆಗೆ ಬಂದರು. ಅವರಲ್ಲಿ  ರಾಜನು ಇದುವರೆಗೆ ನಡೆದ ಎಲ್ಲ ವಿವರಗಳನ್ನು ಹೇಳಿದಾಗ ‘ನಾಭಾಗ, ಹೆದರಬೇಡ. ಆಪಸ್ತಂಭನನ್ನು ನಾನು ಸಮಾಧಾನಪಡಿಸುತ್ತೇನೆ’

‘ಪೂಜ್ಯರೇ, ನಾನು ಇಲ್ಲಿಯ ರಾಜನಾಗಿ ಆಪಸ್ತಂಭನಂತಹ ಮಹಾ ತಪಸ್ವಿಗೆ ನೋವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಲ್ಲವೇ?  ಈ ವಿಷಯದಲ್ಲಿ ತಮ್ಮಿಂದಾದ ಸಹಾಯ ಮಾಡಿರಿ’ ಎಂದನು ರಾಜ. ಆಗ ಲೋಮಶರು ‘ಮಹಾರಾಜಾ, ಆಪಸ್ತಂಭನಂತಹ ಬ್ರಹ್ಮನಿಷ್ಠ ಮುನಿಗಳಿಗೆ ಯಾರೂ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ.ಆದರೂ ಅವರ ಯೋಗ್ಯತೆಗೆ ಸರಿದೂಗುವ ಒಂದೇ ಒಂದು ವಸ್ತುವಿದೆ. ಅದನ್ನು ನೀನು ಸುಲಭವಾಗಿ ಕೊಡಲೂಬಹುದು’ ಎಂದು ಲೋಮಶರು ಹೇಳುತ್ತಿದ್ದಂತೆ, ಏನದು! ಎಂದು ಕಣ್ಣು-ಬಾಯರಳಿಸಿ ಲೋಮಶರನ್ನೇ ನೋಡಿದಾಗ ಅವರು ‘ರಾಜಾ…ಅದು ಬೇರಾವುದೂ ಅಲ್ಲ. ನಮ್ಮ ಗೋಮಾತೆ. ಗೋವಿನ ದೇಹದಲ್ಲಿ ಸಮಗ್ರ ದೇವತೆಗಳು ವಾಸಮಾಡುತ್ತಾರೆ. ಆದುದರಿಂದ ಗೋವು ಮಹರ್ಷಿಯ ಯೋಗ್ಯತೆಗೆ ಸರಿಯಾದ ಮೌಲ್ಯವೆನಿಸುವುದು. ಮೂವತ್ತಮೂರು ಕೋಟಿ ದೇವತೆಗಳನ್ನೊಳಗೊಂಡ ಗೋವು ಪರಮಪಾವನವೂ ಪೂಜನೀಯವೂ ಆಗಿರುವುದರಿಂದ ಗೋವನ್ನು ಆಪಸ್ತಂಭರ  ಪ್ರತಿ ಮೌಲ್ಯವಾಗಿ ಕೊಡಬಹುದು’ ಎಂದಾಗ ರಾಜನೂ  ಪರಿವಾರದವರೂ ಹರ್ಷಿತರಾದರಲ್ಲದೆ ಆಪಸ್ತಂಭನೂ ಸಂತೋಷಚಿತ್ತನಾಗಿ ನುಡಿದನು ‘ ರಾಜಾ…. ಗೋವಿಗಿಂತ ಉತ್ತಮವಾದ ವಸ್ತು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಗೋದಾನವೂ ಸರ್ವಪಾಪಹರವಾಗಿದೆ. ಗೋವು ನಿತ್ಯ ವಂದನೀಯ, ಹೆತ್ತ ಮಾತೆಗಿಂತಲೂ ಮಿಗಿಲಾದವಳು. ಹೆತ್ತಮಾತೆ ನಿರ್ಧಿಷ್ಟ ಸಮಯ ಹಾಲೂಡಿಸಿದರೆ, ಗೋವು ಉಸಿರು ಇರುವ ತನಕವೂ ಹಾಲು ಕೊಡುತ್ತಾಳೆ. ಗೋಮೂತ್ರದಲ್ಲಿ ಗಂಗೆ, ಗೋಮಯದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಅವಳ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಇವುಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಸೇರಿಸಿದರೆ ಪಂಚಗವ್ಯ, ಇದು ಪ್ರಪಂಚವನ್ನೇ ಪವಿತ್ರ ಮಾಡುತ್ತದೆ. ಯಾರೂ ಗೋಸೇವೆಯನ್ನು ನಿರಂತರ ಮಾಡುತ್ತಾರೋ ಅವರ ಪಾಪವೆಲ್ಲವೂ ನಾಶವಾಗಿ ವಿಷ್ಣು ಲೋಕಪ್ರಾಪ್ತಿಯಾಗುತ್ತದೆ.

ನಾಭಾಗ ರಾಜನು ಲೋಮಶರು ಹೇಳಿದಂತೆ ಆಪಸ್ತಂಭನ ಅನುಮತಿಯಂತೆ ಬೆಸ್ತರಿಗೆ ಉತ್ತಮವಾದ ಕರೆಯುವ ಗೋವೊಂದನ್ನು ನೀಡಿದನು.

ಬೆಸ್ತರೇ, ರಾಜ ನನ್ನ ಬದಲಾಗಿ ನೀಡಿದ ಈ ಗೋವೊಂದನ್ನು ತೆಗೆದು ಕೊಂಡೊಯ್ದಿರಿ. ನಿಮ್ಮ ಹಿಂದಿನ ಪಾಪರಾಶಿಯಿಂದ ಮುಕ್ತರಾಗಿರಿ, ಇನ್ನು ಮುಂದೆ ಯಾವ ಪ್ರಾಣಿಯನ್ನೂ ವಧೆ ಮಾಡಬೇಡಿರಿ ಎಂದು ಆಪಸ್ತಂಭನು ನುಡಿದಾಗ ಬೆಸ್ತರು ಆತನ ಮಾತಿಗೆ ಒಪ್ಪಿಗೆ ಸೂಚಿಸಿದರು. ಅತ್ತ, ರಾಜನು ಅರಮನೆಯನ್ನು ಸೇರಿದರೆ ಮುನಿವರ್ಯರು ತಮ್ಮ  ಆಶ್ರಮಕ್ಕೆ ತೆರಳಿದರು.

ಆಪಸ್ತಂಭನು ‘ಅಕ್ಷರೂತ್ರೆ’ ಎಂಬ ಕನೈಯನ್ನು ವಿವಾಹವಾಗಿ ಅವಳಲ್ಲಿ ‘ಕರ್ಕಿ’ ಎಂಬ ಪುತ್ರನನ್ನು ಪಡೆದನು. ಆಪಸ್ತಂಭನು ಹದಿನೆಂಟು ಸ್ಮೃತಿಕಾರರಲ್ಲಿ ಒಬ್ಬನಾಗಿದ್ದು, ‘ತೈತ್ತಿರೀಯ’ ಶಾಖಾವಲಂಬಿಗಳಿಗೆ ಉಪಯುಕ್ತವಾದ ಗೃಹ್ಯ, ಶೌತ್ರ ಸೂತ್ರಗಳನ್ನು ಬರೆದಿದ್ದಾನೆ. ಆಪಸ್ತಂಭನಂತವರು ನಮ್ಮ ಪುರಾಣದೊಳಗೆ ಅನರ್ಘ ರತ್ನವಿದ್ದಂತೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

8 Responses

  1. ಪ್ರಕಟಿಸಿದ ಆತ್ಮೀಯ ಹೇಮಮಾಲಾ ಅವರಿಗೆ,ಹಾಗೂ ಓದಿದ ಅಭಿಮಾನಗಳಿಗೆ ಧನ್ಯವಾದಗಳು.

  2. ಬಿ.ಆರ್.ನಾಗರತ್ನ says:

    ಪುರಾಣದ ಕಥೆಯಲ್ಲಿ ಆಪಸ್ತಂಭನ ಕಥೆಯ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ ತಿಳಿದಂತಾಯಿತು ಧನ್ಯವಾದಗಳು ಮೇಡಂ.

  3. ನಯನ ಬಜಕೂಡ್ಲು says:

    ಹೊಸ ಕಥೆ, ಕೇಳಿರಲಿಲ್ಲ.

  4. Padma Anand says:

    ಅಪರೂಪದ ಕೇಳಿರದಿದ್ದ ಕಥೆ. ಕುತೂಹಲದಿಂದ ಓದಿಸಿಕೊಂಡಿತು. ಅಭಿನಂದನೆಗಳು.

  5. B.k.meenakshi says:

    ಆಪಸ್ತಂಬ ನ ಹೆಸರೇ ಕೇಳಿರಲಿಲ್ಲ. ತುಂಬ ಇಷ್ಟವಾಯಿತು.

  6. ಶಂಕರಿ ಶರ್ಮ says:

    ಆಪಸ್ತಂಭ ಹೆಸರೇ ಹೊಸತು..ಜೊತೆಗೆ ಹೊಸ ಕಥೆಯೊಂದು ಗೋಮಾತೆಯ ಮಹಿಮೆಯೊಂದಿಗೆ ಅನಾವರಣಗೊಂಡ ಬಗೆ ಅನನ್ಯವಾಗಿದೆ..ಧನ್ಯವಾದಗಳು ವಿಜಯಕ್ಕ.

  7. ಅಪಸ್ತಂಬ ದ ಬಗ್ಗೆ ಕೇಳಿರಲಿಲ್ಲ ಚೆನ್ನಾಗಿದೆ ವಂದನೆಗಳು

  8. ವಿದ್ಯಾ says:

    ತುಂಬಾ ಚೆನ್ನಾಗಿ ದೆ

Leave a Reply to B.k.meenakshi Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: