ನಗುತ ಬಾಳೋಣ…
ಪ್ರಕೃತಿದತ್ತವಾಗಿ ಮಾನವಕುಲಕ್ಕೆ ವರವಾಗಿ ಬಂದಿದೆ.. ಈ ನಗು. ಜಗತ್ತಿನ ಜೀವಿಗಳಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿರುವುದು ಮನುಷ್ಯನಿಗೆ ಮಾತ್ರ. ಅವುಗಳಲ್ಲಿ ನಗುವೆಂಬುದು ಬಹಳ ವೈಶಿಷ್ಟ್ಯಪೂರ್ಣ ಭಾವನೆಯಾಗಿದೆ. ನಮ್ಮ ಸಕಲ ದು:ಖಗಳನ್ನೂ ಮರೆಸುವ ದಿವ್ಯ ಔಷಧಿಯಾಗಿದೆ.. ಈ ನಗು. ಎಷ್ಟೇ ಕೋಪತಾಪಗಳಿದ್ದರೂ ಪುಟ್ಟದೊಂದು ಮುಗುಳ್ನಗೆಯು ಅದ್ಭುತ ಮನಪರಿವರ್ತನೆಯನ್ನು ಮಾಡಬಲ್ಲುದು. ಮನಸ್ಸು ತುಂಬಾ ಒತ್ತಡಲ್ಲಿದ್ದಾಗ ಪ್ರಯತ್ನಪೂರ್ವಕವಾಗಿಯಾದರೂ ಮಾಡುವ ನಗುವು ಮನಸ್ಸನ್ನು ತಿಳಿಗೊಳಿಸುತ್ತದೆ. ಅಪರಿಚಿತರನ್ನು ಕಂಡಾಗ, ಅವರ ಮುಖ ನೋಡಿ ನಗುವ ಮುಗುಳ್ನಗೆಯಿಂದ ಅವರ ಮುಖದಲ್ಲೂ ನಗು ಮೂಡಿಸುವುದು ಸುಳ್ಳಲ್ಲ ಅಲ್ಲವೇ? ಪುಟ್ಟ ಮಗುವೊಂದರ ಮುಗ್ಧನಗು ನಮ್ಮ ಮುಖದಲ್ಲಿ ನಗೆ ಅರಳಿಸದಿರಲು ಸಾಧ್ಯವೇ? ಯಾವುದೇ ಸಿನಿಮಾಗಳಿಗಿಂತ ನಗು ಉಕ್ಕಿಸುವ, ಮಿಕ್ಕಿ ಮೌಸ್, ಚಾರ್ಲಿ ಚಾಪ್ಲಿನ್, ಮಿಸ್ಟರ್ ಬೀನ್ ನಂತಹ ಹಾಸ್ಯಭರಿತ ಚಲನಚಿತ್ರಗಳನ್ನು ಇಂದಿಗೂ ಎಲ್ಲ ವಯೋಮಾನದವರೂ ಇಷ್ಟಪಡುವುದು ಸುಳ್ಳಲ್ಲ.
1998ರಲ್ಲಿ ಮೊತ್ತಮೊದಲಾಗಿ, ಮುಂಬೈಯ ಮದನ್ ಕತಾರಿಯ ಎಂಬ ಕುಟುಂಬ ವೈದ್ಯರೊಬ್ಬರು, ನಮ್ಮ ದಿನನಿತ್ಯದ ಜೀವನದಲ್ಲಿ ನಗುವಿನ ಮಹತ್ವವು ಎಷ್ಟು ಮಹತ್ತರವಾಗಿದೆ ಎಂಬುದನ್ನು ಸಾಕ್ಷಿ ಸಹಿತ ನಿರೂಪಿಸಿದರು. ವಿವಿಧ ತರದ ರೋಗಿಗಳ ಮೇಲೆ ಅವರು ಮಾಡಿದ ಪ್ರಯೋಗವು, ಸಂಗೀತದಂತೆ ನಗುವನ್ನೂ ಚಿಕಿತ್ಸೆಗಾಗಿ ಬಳಸಬಹುದು ಎಂಬುದನ್ನು ಸಾಬೀತುಗೊಳಿಸಿತು. ಅಲ್ಲದೆ, ಮೇ2ರಂದು ವಿಶ್ವ ನಗುವಿನ ದಿನವನ್ನಾಗಿ ಆಚರಿಸಲು ಸಾಧ್ಯವಾಗುವಂತೆ ಮಾಡಿದೆ. “ನಗುವೆಂಬುದು ಒಂದು ದಿವ್ಯ ಔಷಧಿ” ಎಂದು ಜಾಗತಿಕ ಮಟ್ಟದಲ್ಲಿ ಇಂದು ಒಪ್ಪಿಕೊಳ್ಳುವಂತಾಗಿದೆ. ವಿಶ್ವಶಾಂತಿಯ ಅತೀ ಅಗತ್ಯತೆ ಇರುವ ಇಂದಿನ ದಿನಗಳಲ್ಲಿ, ಸೌಹಾರ್ದ ಜೀವನಕ್ಕೆ ಪೂರಕವಾಗಿರುವ ಸಹಜ ನಗುವಿನ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
ಇಂದು ನಗೆಕೂಟಗಳು ಜನರನ್ನು ಮನದೊತ್ತಡಗಳಿಂದ ಹೊರತರಲು ಸಹಾಯಕವಾಗಿವೆ. ನಗೆಯೋಗವು ಒಂದು ಬಹುದೊಡ್ಡ ಉದ್ಯೋಗ/ ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ. ಹಾಸ್ಯ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದು ಸೇರುವ ಜನಸ್ತೋಮ ನೋಡಿದರೆ ನಗು ಈ ದಿನಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಮನವರಿಕೆಯಾಗುವುದು. ಹಾಸ್ಯ ಚಟಾಕಿ ಹಾರಿಸುವ ಪ್ರಾಣೇಶ್, ರಿಚರ್ಡ್ ಲೂಯಿಸ್, ಕೃಷ್ಣೇಗೌಡ ಮತ್ತು ಇತರರು ನಮಗೆಲ್ಲಾ ನಗೆಯ ಔಷಧಿ ಇತ್ತು ನಮ್ಮರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಡಾಕ್ಟರ್ ಗಳಾಗಿದ್ದಾರೆ ಎನ್ನಬಹುದೇನೋ.
ನಗುವಿನ ಬಗೆಗಳು ಹಲವಾರು.. ಮುಗ್ಧ ನಗು ಪುಟ್ಟ ಕಂದಮ್ಮನ ನಗುವಾದರೆ, ಪ್ರಖ್ಯಾತ ಮೊನಾಲಿಸಾಳ ನಗುವನ್ನು ಸ್ನಿಗ್ಧ ನಗು ಎನ್ನಬಹುದೇನೋ. ತುಂಟ ಹುಡುಗಿಯ ನಗು ಕಳ್ಳ ನಗುವಾದರೆ, ಕೆರಳಿಸೋ ನಗು ನಮ್ಮ ಮೇಲಿನ ಅಧಿಕಾರಿಗಳದ್ದು..ಅದನ್ನೇ ವ್ಯಂಗ್ಯ ನಗು ಎನ್ನಬಹುದು. ಆಪ್ತಮಿತ್ರ ಸಿನಿಮಾದ ರಾ..ರಾ..ನಗು ಭೀಭತ್ಸ. ವಿಲನ್ ಪಾತ್ರದಲ್ಲಿ ನಮ್ಮ ವಜ್ರಮುನಿಯದು ಕ್ರೌರ್ಯ ನಗುವಾದರೆ, ತೃಪ್ತಿಯ ನಗುವಿದೆ ಅಮ್ಮ ತನ್ನ ಹಸಿದ ಮಗುವಿಗೆ ಉಣಬಡಿಸುವಾಗ, ಹಾಲೂಡಿಸುವಾಗ. ಹಿತವಾದ ಯೋಚನೆಯಲ್ಲಿ ಬರುವುದು ಮುಗುಳುನಗುವಾದರೆ, ಕೆಣಕುವ ನಗೆ, ಅಪಹಾಸ್ಯದ ನಗು ಆಗಾಗ ಸಹೋದ್ಯೋಗಿಗಳಿಂದ ಸಿಗುತ್ತಿರುತ್ತದೆ. ಫಕ್ಕನೆ ಏನೋ ತಮಾಷೆ ವಿಷಯವನ್ನು ನೆನೆದು ಬರುವ ಅರಿವಿಲ್ಲದ ನಗು, ಬುದ್ಧನ ಅಮರ ನಗು, ಸ್ಪರ್ಧೆಯಲ್ಲಿ ವಿಜಯಿಯಾದಾಗ ಬರುವುದೇ ಗೆಲುವಿನ ನಗು. ಸಮ್ಮತಿ ನಗುವು ಹುಡುಗಿ ಪ್ರೀತಿಯನ್ನು ಅಥವ ವಿವಾಹಕ್ಕೆ ಸಮ್ಮತಿಸುವ ನಗು, ಅಮ್ಮ ಕೊಟ್ಟ ತಿಂಡಿಗೆ ಕೈನೀಡುವಾಗ ಮಗುವ ಮೊಗದಲ್ಲಿ ಮಿನುಗುವುದೇ ಆಸೆಯ ನಗು. ಹೂನಗೆ, ಮಂದಹಾಸ, ಗೆಳೆತನದ ನಗು, ಸಂಭ್ರಮದ ನಗು, ಮೊದಲಿನ ಮಗುವಿನಾಗಮನಕ್ಕೆ ತಂದೆಯ ಹೃದಯದ ನಗು, ಮುಗ್ಧ, ಅಟ್ಟಹಾಸ, ಪರಿಹಾಸ್ಯ, ಕುಹಕ,ವ್ಯಂಗ್ಯ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚ, ನಾಚಿಕೆ,ರಸಿಕತನ, ಒಲವಿನ ನಗುಗಳು, ಗಹಗಹಿಸಿ ನಗುವುದು, ವೃದ್ಧರ ಬೊಚ್ಚುಬಾಯಿ ನಗೆ, ಮುಸಿನಗು, ಮೆಲುನಗು, ಹುಚ್ಚುನಗು, ಎದೆ ಹಗುರಾಗಿಸಿ ಕಣ್ಣು ತೇವಗೊಳಿಸುವ ನಗು, ಅಳು ನಗು, ಬಿದ್ದು ಬಿದ್ದು ನಗು, ಆಂಗ್ಲಭಾಷೆಯ ಮಿಲಿಯನ್ ಡಾಲರ್ ಸ್ಮೈಲ್!. ..ಹೀಗಿವೆ ಹಲವಾರು ಬಗೆಯ ಮಾನವ ಸಹಜ ನಗುಗಳು. ಇಂತಹ ವಿವಿಧ ರೀತಿಯ ನಗುಗಳನ್ನು ನಾವು ದಿನನಿತ್ಯ ಕಾಣಬಹುದು, ಇನ್ನು, ಮುಂಜಾನೆ ಪುಷ್ಪವರಳಿ ನಗುವುದು, ಬೆಳದಿಂಗಳಲ್ಲಿ ಶರಧಿ ಉಕ್ಕೇರುವ ನಗು, ಮಳೆನೀರಲ್ಲಿ ಮಿಂದ ಎಲೆಗಳ ನಗು,ಮುಂಜಾವಿನ ಚೆಲುನಿಸರ್ಗದ ಸವಿ ನಗುವಿಗೆ ಬೆಲೆಕಟ್ಟಲುಂತೇ!?
ಕನ್ನಡದ ಭಗವದ್ಗೀತೆ ಎಂದೇ ಹೆಸರಾದ, ಮಹಾನ್ ಕಗ್ಗ ಕವಿ ಡಿ.ವಿ. ಜಿಯವರ ಕಗ್ಗಗಳಲ್ಲಿ ಒಂದು…
ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ
ಇದರಲ್ಲಿ ನಗುವೆಂದರೇನು, ಅದು ಹೇಗಿರಬೇಕು ಎಂಬುದನ್ನು ಮನಮುಟ್ಟುವಂತೆ, ಮನಕ್ಕೆ ತಟ್ಟುವಂತೆ ತಿಳಿಸಿದ್ದಾರೆ. ಇಂದಿನ ಅತ್ಯಂತ ಒತ್ತಡದ ಜೀವನದಲ್ಲಿ ಯಾರಿಗೂ ನಗುವ ವ್ಯವಧಾನವಿಲ್ಲ. ಮನದ ಒತ್ತಡವನ್ನು ನೀಗಿಸಿ ನಿರಾಳಗೊಳಿಸುವ, ಮನದ ದು:ಖವನ್ನು ಮರೆಸುವ ಸಹಜ ಸುಂದರ ನಗು ಎಲ್ಲರಲ್ಲೂ ಮೂಡಲಿ ಎಂದು ನಾವೆಲ್ಲರೂ ಆಶಿಸೋಣ.
ಮನದ ತುಮುಲಗಳ ಸರಿಸಿ
ಕ್ಲೇಶ ಖೇದಳ ಮರೆಸಿ
ಹರ್ಷ ತುಂಬಲು ಬೇಕು ಎಲ್ಲರನು ನಗಿಸಿ
ಬಾಳರ್ಥವನು ಗ್ರಹಿಸಿ
ಕೂಡಿ ಬಾಳುವ ಸಹಿಸಿ
ಸಕಲ ದ್ವೇಷವ ಮರೆಸಿ ನಗುವ ಗಹಗಹಿಸಿ
ಸಕಲ ರೋಗಗಳ ಸರಿಸಿ
ಮನಕೆ ಶಾಂತಿಯ ಕೊಡಿಸಿ
ಹರಡಲದು ಎಲ್ಲೆಲ್ಲು ಮನಮನವ ಬೆರೆಸಿ
– ಶಂಕರಿ ಶರ್ಮ, ಪುತ್ತೂರು.
ಚಂದದ ಬರಹ. ಎಂತಹುದೇ ಮನಸಿನ ಕ್ಲೇಶವನ್ನು ದೂರವಾಗಿಸುವಲ್ಲಿ ನಗು ದಿವ್ಯ ಔಷಧ.
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ನಯನಾ ಮೇಡಂ.
ಮನದ ದುಗುಡವ ಹರಿಸುವ ನಗುವಿನ ಬಗ್ಗೆ ಸೊಗಸಾದ ಲೇಖನ
ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ಮೇಡಂ.
ಅರ್ಥಪೂರ್ಣ ಬರಹ. ನಗು ಇರಲಿ.
ಪ್ರತಿಸ್ಪಂದನೆಗೆ ನಮನಗಳು
ಶಂಕರಿ ಅಕ್ಕೋ ….ನಿಮ್ಮನಗುವಿನಲ್ಲಿ ಏನೋ ಒಂದು ಗುಟ್ಟು ಇದೆ ..ದಿನದಲ್ಲಿ ಒಂದರಿ ನೆಗೆ ಮಾಡೆಕ್ಕು ಅಲ್ಲದಾ .
ಮತ್ತೆ
ಅಬ್ಬಾ, ನಗುವಿಗೂ ಎಷ್ಟೊಂದು ಮುಖಗಳಿವೆ, ಎಷ್ಟೊಂದು ಬಗೆಯಿದೆ, ಆದರೂ ಹಲವರು ನಗಲು ಬಹಳ ಜಿಪುಣತನ ತೋರುತ್ತಾರಲ್ಲ, ಲೇಖನ ಓದಿಯಾದರೂ ಎಲ್ಲರೂ ನಗುನಗುತ್ತಾ ಇರುವುದನ್ನು ಕಲಿಯಬಹುದು.
ಪೂರಕವಾದ ಕವನವೂ ಸೊಗಸಾಗಿದೆ. ಅಭಿನಂದನೆಗಳು.