ಹೊಟ್ಟೆ ಬರುತ್ತೆ ಹೋಗಲ್ಲ…

Spread the love
Share Button

“ಮಗಳು,ಸ್ವಲ್ಪ ಸೀರೆ ನೆರಿಗೆ ಹಿಡಿದು ಕೊಡಪ್ಪ, ಏಳಪ್ಪ”ಎಂದು ಬೆಳಿಗ್ಗೆ ಬೆಳಗ್ಗೆಯೇ ಸುಖ ನಿದ್ದೆಯಲ್ಲಿದ್ದ ಮಗಳ ಏಳಿಸಿದೆ.”ಅಮ್ಮಾ, ದಿನಾ ನಿಂದೊಂದು ಕಾಟ ನನಗೆ, ಈ ಹಾಳು ಕಾಟನ್ ಸೀರೆ ಯಾಕೆ ಉಡ್ತಿಯ,ಸ್ಕೂಲ್ ಗೆ ಹೋಗ ಬೇಕಾದರೆ ಸಿಂಥೆಟಿಕ್ ಸೀರೆ ಉಟ್ಟು ಕೊಂಡು ಹೋಗು,ನನ್ನ ನಿದ್ದೆ ಕೆಡಿಸಬೇಡ” ಅಂತ ಮತ್ತೆ ಹೊರಳಿ ಮಲಗಿದಳು. ಆದರೂ ಬಿಡದೆ,ಪೂಸಿ ಮಾಡಿ ಏಳಿಸಿ ನೆರಿಗೆ ಹಿಡಿಯಲು ಹಚ್ಚಿದೆ.ನೆರಿಗೆ ಹಿಡಿಯುತ್ತಾ ಅವಳು “ಅಯ್ಯೋ ಅಮ್ಮಾ ಬರಿ ನಾಲ್ಕೇ ನೆರಿಗೆ ಸಿಗ್ತಾ ಇದೆ,ಸಾಕಾ “ಎಂದಳು.

“ಇರ್ಲಿ ಬಿಡು,ಇನ್ನೊಂದು ಹಾಗೆ ಪಕ್ಕದಲ್ಲೇ ಇದೆ. ಹಿಡಿಯೋಕೆ ಸಿಗಲ್ಲ” ಎಂದು, “ಏನು ಮಾಡೋದು ಹೇಳು, ಮುಂಚೆ ನನ್ನ ಮದುವೆ ಹೊಸದರಲ್ಲಿ ಆರು ಏಳು ನೆರಿಗೆ ಬರೋದು, ಈಗ ನಾಲ್ಕು ಐದು ಮಾತ್ರ ಬರುತ್ತೆ, ಮುಂಚಿನ ಹಾಗೆ ಸೀರೆಗಳು ಉದ್ದವೇ ಇರಲ್ಲ ಕಣೆ” ಎಂದು ಗೊಣಗುತ್ತಾ ತಲೆ ಬಾಚಿಕೊಳ್ಳತೊಡಗಿದೆ.

ನನ್ನ ಮಗಳು ತಕ್ಷಣವೇ  ‘ ಕಿಸಕ್ ‘ ಎಂದು ನಕ್ಕು”ಅಯ್ಯೋ ನನ್ನ ಪೆದ್ದಿ ಅಮ್ಮಾ, ಸೀರೆಗಳು ಆಗಲೂ ಐದೂವರೆ ಮೀಟರ್ ಇರುತ್ತಿದ್ದು ಈಗಲೂ ಅಷ್ಟೇ ಬರೋದು, ಬದಲಾಗಿರೋದು ನಿನ್ನ ಹೊಟ್ಟೆ, ಮೊದಲು ಇಪ್ಪತ್ತಾರು ಇಂಚು ಇದ್ದದ್ದು ಈಗ ಮೂವತ್ತಾರಾಗಿದೆ, ಅಷ್ಟೇ,ಒಂದೆರಡು ನೆರಿಗೆ ನಿನ್ನ ಊಟದ ಜೊತೆಗೆ ನಿನ್ನ ಹೊಟ್ಟೆ ಸೇರಿಕೊಂಡಿದೆ”ಎಂದು ನಕ್ಕಳು.

ನನ್ನ ಟ್ಯೂಬ್ ಲೈಟ್ ಜಗ್ ಎಂದು ಹೊತ್ತಿ ಕೊಂಡಿತು.”ಹೌದಲ್ಲವಾ,ನಾನು ಇಷ್ಟು ದಿನ ಸೀರೆ ಉತ್ಪಾದಕರಿಗೆ ಬೈದು ಕೊಳ್ಳುತ್ತೀದ್ದೇನಲ್ಲ,” ಅನ್ನಿಸಿ ನನಗೂ ನಗು ಬಂತು. ಈ ಹೊಟ್ಟೆ ಯಾವಾಗ ದಪ್ಪವಾಯಿತೋ ನೆನಪಿಲ್ಲ. ನನ್ನ ಗಂಡ ಯಾವಾಗಲೂ,”ಹುಡುಗಿ ತೆಳ್ಳಗಿದ್ದಾಳೆ ಅಂತ ಮದುವೆ ಆದ್ರೆ, ನೀನು ಮದುವೆಯಾದಾ ವರ್ಷಕ್ಕೇ ಸಂಡಿಗೆ ಅರಳಿದ ಹಾಗೆ ಅರಳಿಬಿಟ್ಟೇ” ಅಂತ  ಚುಡಾಯಿಸುತ್ತಾರೆ.

ಏನು ಮಾಡೋದು ಹೇಳಿ,ಎರಡು ಮಕ್ಕಳಾದ ಬಳಿಕವೂ ಬಳುಕುವ ಬಳ್ಳಿಯಂತೆ ಇರಲು ನಾನೇನು ಕರೀನಾ ಕಪೂರಾ?ಸಿನೆಮಾ ತಾರೆಯರಿಗೆ ಏನು ಕೆಲಸ ಹೇಳಿ, ಕೈಗೊಬ್ಬರು ಕಾಲ್ಗೊಬ್ಬರು ಅಂತ ಸಹಾಯಕರು, ಜಿಮ್ ಫಿಟ್ನೆಸ್  ಎಕ್ಸ್ಪರ್ಟ್ ಗಳು, ಡಯಟಿಷಿಯನ್ನು ಗಳು ಎಲ್ಲಾ ಸೇರಿ ಹೆಂಗೆ ಬೇಕೂ ಹಂಗೆ ದೇಹ, ಕುಗ್ಗಿಸಿ, ತಗ್ಗಿಸಿ, ಬಾಗಿಸಿ ಬಳುಕಿಸಿ, ಚಿತ್ರದ ಗೊಂಬೆ ಹಾಗೆ ಮಾಡಿಬಿಡುತ್ತಾರೆ.

ದಿನ ಬೆಳಿಗ್ಗೆ ಎದ್ದು, ಮನೆ ಕೆಲಸ ಮಾಡಿಕೊಂಡು,ಹೊರಗೆ ದುಡಿಯುವ ಮಹಿಳೆಯರ ಪಾಡು ಅವರಿಗೇ ಗೊತ್ತು. ಅಡುಗೆ, ಪಾತ್ರೆ, ಬಟ್ಟೆಬರೆ, ಮನೆ, ಗಂಡ ಮಕ್ಕಳು,ಉದ್ಯೋಗ ಎಲ್ಲದಕ್ಕೂ ತಲೆಕೊಟ್ಟು, ಅದರಲ್ಲೂ “ಫಿಗರ್ ಚೆನ್ನಾಗಿ ಇಟ್ಟುಕೊಳ್ಳಿ” ಅಂತ  ಯಾರಾದರೂ ಹೇಳಿದರೆ ಜಾಡಿಸಿ ಒದೆಯುವಷ್ಟು ಸಿಟ್ಟು ಬರುತ್ತದೆ.ನನಗಂತೂ ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ, ಹೊಟ್ಟೆಯ ಅನುಪಾತ ಸ್ವಲ್ಪ ಹೆಚ್ಚೇ ಇದೆ. ಸೀರೆಯುಟ್ಟಾಗ ಸ್ವಲ್ಪ ಮುಚ್ಚಿದರೂ, ಸಲ್ವಾರ್ ನಲ್ಲಿ ಮಾತ್ರ ಮಡಕೆ ಕಟ್ಟಿಕೊಂಡಂತೆಯೆ ಕಾಣುವುದು. ಹೇಗೋ ಸ್ವಲ್ಪ ಸಡಿಲ ಟಾಪ್ ಗಳ ಹಾಕಿ ನಿಭಾಯಿಸಬೇಕು.

“ಹೇಗೋ ಒಂದು ಇದ್ದರಾಯಿತು” ಅಂತ ಈ ಕಾಲದಲ್ಲಿ ಇರೋಕ್ಕಾಗೊಲ್ಲವಲ್ಲ. ಮನೆಯಿಂದ ಹೊರಗೆ ಉದ್ಯೋಗಕ್ಕಾಗಿ ಅಂತ ಓಡಾಡುವಾಗ ತುಂಬಾ ಚಂದವಾಗಿ ಅಲ್ಲದಿದ್ದರೂ ಸ್ವಲ್ಪ ಪ್ರೆಸೆಂಟಬಲ್ ಆಗಿ ಯಾದರೂ ಇದ್ದರೆ ಒಳ್ಳೆಯದಲ್ಲವೇ. ಅಲ್ಲದೆ ಆರೋಗ್ಯದ ಸಮಸ್ಯೆಗಳು ಶುರುವಾಗೋದೇ  ಹೊಟ್ಟೆ ಬಂದರೆ ಅಂತ ಹೆದರಿಸುವ ಜನ ಕೊಡುವ ಕಾಟ ಕಮ್ಮಿಯೇ?ಇನ್ನೂ ಮಕ್ಕಳಿಗಂತೂ ಅಮ್ಮ ಯಾವಾಗಲೂ ಸ್ಮಾರ್ಟ್ ಆಗಿಯೇ ಇರಬೇಕು. ಅಲ್ಲದೇ ಒಂದು ಹೊಸ ಸೀರೆಯುಟ್ಟು ಕೊಂಡಾಗಲೂ ಗಂಡ ಹೊರಳಿ ನೋಡದ ದಿನ ಬಂದಾಗ ಅದು ಎಚ್ಚರಿಕೆಯ ಗಂಟೆಯೆ ಸರಿ.

ಒಮ್ಮೆಯಂತೂ ಯಾವುದೋ ಮೀಟಿಂಗ್ ನಲ್ಲಿ ಸಿಕ್ಕ ಹಳೆಯ ಸಹಪಾಠಿಯೊಬ್ಬಳು “ಏನೇ ಇಷ್ಟು ತಡವಾಗಿ ಎರಡನೆಯ ಮಗು ಮಾಡಿ ಕೊಳ್ಳುತ್ತಿದ್ದೀಯ” ಅಂತ ಅಂದಾಗ ಮಾತ್ರ ಸಹಿಸಲಾಗದೇ “ಇನ್ನು ಈ ಹೊಟ್ಟೆಗೆ ಒಂದು ಗತಿ ಕಾಣಿಸಿಯೆ ಸಿದ್ಧ” ಅಂತ ಶಪಥ ಕೈಗೊಂಡೆ.

ಹೊಟ್ಟೆ ಕರಗಿಸುವ ಮನಸ್ಸೇನೋ ಮಾಡಿದ್ದಾಯಿತು ಆದರೆ ಹೇಗೆ ಅನ್ನೋ ಪ್ರಶ್ನೆ ಧುತ್ ಎಂದು ಎದುರಾಯಿತು. ಸರಿ “ಯಾರನ್ನು ಕೇಳುವುದು” ಅಂತ ಯೋಚನೆ ಮಾಡುತ್ತಾ ನನ್ನ ಗೆಳತಿಯರನ್ನು ಒಬ್ಬೊಬ್ಬರಾಗಿ ನೆನಪಿಸಿ ಕೊಳ್ಳುತ್ತಾ ಕೂತೆ. ನನ್ನ ಗೆಳತಿಯರು ಬಹುತೇಕ ಜನ ನನ್ನ ಹಾಗೆಯೇ “ಉಂಡು ತಿಂದು ಸುಖವಾಗಿ ಇರಬೇಕಪ್ಪ” ಅನ್ನೋ ಪಾಲಿಸಿಯವರು. ಬಂಧು ಬಳಗದವರಲ್ಲಿ ಯಾರಿದ್ದಾರೆ ಅಂತಹ ಲತಾಂಗಿ ,ಕೃಶಾಂಗಿಯರು ಅಂತ ಯೋಚಿಸಿದಾಗ ನೆನಪಾದದ್ದು ಹತ್ತು ವರ್ಷಗಳ ಹಿಂದೆ ಹೇಗಿದ್ದಳೋ    ಈಗಲೂ ಹಾಗೆಯೇ ಇರುವ ನನ್ನ ಓರಗಿತ್ತಿ. ಸರಿ ಅವಳನ್ನೇ ಕೇಳಿದರೆ ಅವಳು “ದಿನಕ್ಕೆ ಎರಡು ಬಾರಿ ವಾಕ್ ಮಾಡಿಕೊಂಡು, ಊಟೋಪಚಾರದಲ್ಲಿ ಹಿತ ಮಿತ ಕಾಪಾಡಿಕೊಳ್ಳಿ” ಅಂತ ಸಲಹೆ ಕೊಟ್ಟಳು. ವಾಕ್ ಏನೋ ಸರಿ ಆದರೆ ತಿಂಡಿ ತೀರ್ಥದಲ್ಲಿ ಹಿತ ಮಿತ! ‘ಛೇ ಛೇ ಅದಾಗದು’ ಅನ್ನಿಸಿತು.

ಅಂತೂ ನನ್ನ ವಾಕ್ ನನ್ನ ನೆರೆಮನೆಯ ಗೆಳತಿಯೊಂದಿಗೆ ಶುರುವಾಯಿತು. ಬೆಳಿಗ್ಗೆ ಸಂಜೆ ಅಂತ ಎರಡು ಹೊತ್ತು ದುಸ ದುಸಾ ಉಸಿರು ಬಿಡುತ್ತಾ ತಿಂಗಳುಗಟ್ಟಲೆ ಸುತ್ತಿದರೂ ಒಂದು ಅರ್ಧ ಇಂಚಾದರೂ ಕರಗಬಾರದೆ! ಆ ಅಳತೆಯ ಟೇಪ್ ನ್ನೇ ಕತ್ತರಿಸಿ ಎಸೆದು ಬಿಡುವಷ್ಟು ಸಿಟ್ಟು ಬಂದು ಹೋಯಿತು.ಉರಿಯುವ ಗಾಯಕ್ಕೆ ಉಪ್ಪೆರಚಿದಂತೆ ನನ್ನ ಮಗ ರಾಯ “ಅಮ್ಮ,ಇಡೀ ವಾರ ನೀನು ಗರ ಗರ ಸುತ್ತಿದರೂ, ಭಾನುವಾರ ಬಂದಾಕ್ಷಣವೆ ಅರ್ಧ ಕೆಜಿ ಚಿಕನ್ ಮುಕ್ಕಿದರೆ, ಹೊಟ್ಟೆ ಬರದೇ ಇಳಿಯುತ್ತಾ ಹೇಳು” ಎಂದು ಹಲ್ಲು ಕಿರಿದ.ಹಾಗಂತ ಚಿಕನ್ ಬಿಟ್ಟು ಬದುಕಲಾದೀತೆ!

ನನ್ನ ಬಾಯಿ ರುಚಿಗೂ ಮೋಸ ವಾಗಬಾರದು, ಹೊಟ್ಟೆಯೂ ಕರಗಬೇಕು ಆ ರೀತಿಯ ಯಾವುದಾದರೂ ಉಪಾಯವಿದೆಯೇ ಎಂದು ಹುಡುಕಾಡುತ್ತಿದ್ದಾಗ ಒಬ್ಬ ಗೆಳತಿ,” ಯೋಗ ಮಾಡೇ ಯೋಗ, ಎಷ್ಟು ಬೇಕಾದರೂ , ಏನು ಬೇಕಾದರೂ ತಿನ್ನಬಹುದು, ಮೈ ಕೂಡ ಒಳ್ಳೇ ಶೇಪ್ ಪಡೆಯುತ್ತೆ” ಅಂತ ಆಸೆ ಹುಟ್ಟಿಸಿದಳು.

ಯೋಗವೇನೋ ಮಾಡೋಣ ಅಂತ ಮನಸು ಮಾಡಿದ್ದಾಯಿತು.ಆದರೆ ಗುರು ಎಲ್ಲಿ ಹುಡುಕೋದು?ಟಿವಿ ಯಲ್ಲಿ ಬಾಬಾ ರಾಮದೇವರ ಯೋಗಕ್ಲಾಸ್ ಗಳೇನೋ ಪುಕ್ಕಟೆಯಾಗಿ ಸಿಗುತ್ತವೆ , ಆದರೆ ಬೆಳಗಿನ ಜಾವ ನಾಲ್ಕು ಘಂಟೆಗೆ ಎದ್ದು ನನ್ನಂಥ ಸೂರ್ಯವಂಶಿ ಯೋಗ ಮಾಡಿ ಬಿಟ್ಟರೆ ಆ ದಿನ ಪ್ರಳಯ ಆಗೊದಂತು ಗ್ಯಾರಂಟೀ.ಬೆಳಗಿನ ಸಕ್ಕರೆ ನಿದ್ದೆ ಬಿಟ್ಟು ಎದ್ದು ಯೋಗ ಮಾಡೋದು ನನಗಂತೂ ಎವರೆಸ್ಟ್ ಶಿಖರ ಹತ್ತುವ ಸಮಾನವೆ ಅನ್ನಿಸಿ ಬಿಟ್ಟಿತು.ಹಾಗಂತ ಕೈ ಬಿಡಲು ಮನಸ್ಸು ಬಾರದೆ ದೈಹಿಕ ಶಿಕ್ಷಣ ಶಿಕ್ಷಕಿ ಯಾಗಿದ್ದ ನನ್ನ ಸಹೋದ್ಯೋಗಿ ಗೆಳತಿ ಯೊಬ್ಬರ ಮೊರೆ ಹೋದೆ.ಅವರು ಉದಾರ ಮನಸ್ಸಿನಿಂದ “ಅದಕ್ಕೇನಂತೆ ಬನ್ನಿ”ಎಂದು ತುಂಬಾ ಚೆನ್ನಾಗಿ ಸತತವಾಗಿ ಎರಡು ಗಂಟೆಗಳ ಕಾಲ ಮಾಡುವಷ್ಟು ಯೋಗ ಪ್ರಾಣಾಯಾಮ ಹೇಳಿಕೊಟ್ಟರು. ಅದರ ಪ್ರಕಾರ ಮತ್ತೆ ಮೂರುತಿಂಗಳು ದಿನಕ್ಕೊಂದು ಘಂಟೆಯಂತೆ ನನ್ನ ಯೋಗಾಭ್ಯಾಸ ಶುರುವಾಯಿತು. ಎಷ್ಟೇ ತಿಪ್ಪರಲಾಗ ಹಾಕಿದರು ಹೊಟ್ಟೆ ಕರಗಿತೆ? ಇಲ್ಲ ಅಂದರೆ ಇಲ್ಲ.ನನಗಂತೂ ರೋಸಿ ಹೋಗಿ ಯೋಗಾಭ್ಯಾಸಕ್ಕೂ ಎಳ್ಳು ನೀರು ಬಿಟ್ಟದ್ದಾಯಿತು.

ಗಂಡ ಬೇರೆ ಮುಸಿ ಮುಸಿ ನಗುತ್ತಾ “ಮನೇ ಕೆಲಸದ ಸಹಾಯದವರನ್ನು ಬಿಡಿಸಿ ನೀನೇ ಮನೆ ಕೆಲಸ ಎಲ್ಲಾ ಮಾಡಿ ನೋಡು,ಎರಡು ತಿಂಗಳಲ್ಲಿ ಹತ್ತು ಕೆಜಿ ಇಳಿದಿದ್ರೆ ಹೇಳು,ಅಲ್ಲದೆ ಅವಳಿಗೆ ಕೊಡೋ ದುಡ್ಡಲ್ಲಿ ತಿಂಗಳಿಗೆರಡು ಸೀರೆ ಕೂಡ ನೀನು ತೋಗೋ ಬಹುದು” ಅನ್ನೋ ಆಸೆ ಬೇರೆ ಹುಟ್ಟಿಸಿದರು. ಆದರೆ ಮನೇ ಕೆಲಸ ಹೊರಗಿನ ಉದ್ಯೋಗ ಎಲ್ಲಾ ಮಾಡುವಷ್ಟು ಪುರುಸೊತ್ತು ಮನಸ್ಸು ನನಗಂತೂ ಇಲ್ಲವೇ ಇಲ್ಲ.

ಅಲ್ಲದೇ ನಮ್ಮ ಮನೇ ಕೆಲಸದ ಸಹಾಯದ ಸಾವಿತ್ರಮ್ಮನನ್ನು ಮನೆ ಕೆಲಸದವಳು ಅಂತ ನಾನು ಯಾವತ್ತೂ ಕಂಡವಳೆ ಅಲ್ಲ. ನಾನು ಬೆಳಗ್ಗೆ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಾಗ ನನ್ನ ಮಕ್ಕಳ ತಲೆಹರಟೆ ಮಾತುಗಳನ್ನೆಲ್ಲ ಕೇಳಿಸಿಕೊಂಡು ಅವರಿಗೆ ಪುಕ್ಕಟ್ಟೆ ಸಲಹೆ ಸೂಚನೆ ಕೊಡುವ ಆಪ್ತ ಸಮಾಲೋಚಕಿ. ನನ್ನ ತಲೆಗೆ ವಾರ ವಾರವೂ ಎಣ್ಣೆ ತಿಕ್ಕಿ, ಮೆಹಂದಿ ಹಚ್ಚಿಕೊಡುವ ಬ್ಯುಟಿಷಿಯನ್. ಸ್ನಾನ ಮಾಡುವಾಗ ಬಂದು ಬೆನ್ನು ತಿಕ್ಕಿ ತಲೆಗೆ ನೀರು ಎರೆಯುವ ಅಕ್ಕ. ಅಂತಹವಳನ್ನು ಕೇವಲ ಹೊಟ್ಟೆ ಕರಗಿಸುವ ಆಸೆಗೆ ಮನೆ ಬಿಡಿಸಿದರೆ ದೇವರು ಮೆಚ್ಚಿಯಾನೆ?

ಹೀಗೆ ಮೈ ಕೈ ದಂಡಿಸಿ ಕೂಡ ಯಾವುದೇ ಪರಿಣಾಮ ಕಾಣದಾದಾಗ “ಹೊಟ್ಟೆ ಬಂದ್ರೆ ಬರ್ಲಿ ಬಿಡು, ಏನ್ನ್ ಮಾಡೋಕ್ಕಾಗುತ್ತೆ, ನಾನೇನು ಸಿನೆಮಾ ತಾರೆಯೋ, ಫಿಗರ್ ಮೆಂಟೇನ್ ಮಾಡಲು”ಅಂತ ಸುಮ್ಮನಾಗಿದ್ದೆ.ಆದರೆ ಒಮ್ಮೆ ಫೇಸ್ ಬುಕ್ ಜಾಲಾಡು ತ್ತಿದ್ದಾಗಾ ಗುಂಡು ಗುಂಡಗೆ ಉರುಳಾಡುತ್ತಿದ್ದ ನನ್ನ ಗೆಳತಿಯೊಬ್ಬಳು ಇದ್ದಕ್ಕಿಂದ್ದಂತೆ ಬಳುಕುವ ಬಳ್ಳಿಯಂತೆ ಕಾಣುವ ಫೋಟೋಗಳ ದಿನಕ್ಕೆ ಒಂದೊಂದರಂತೆ ಬಾಣ ದಂತೆ ಫೇಸ್ ಬುಕ್ ನಲ್ಲಿ ಬಿಡತೊಡಗಿದಳು.’ಅರೆ ದೇವಾ! ಈ ಗುಂಡಮ್ಮ ನೆ ಹೀಗೆ ಕರಗಿರುವಾಗ ನನ್ನ ದೇನು ಲೆಕ್ಕ’ ಅನಿಸಿ ಅವಳಿಗೆ ಕರೆ ಮಾಡಿ ಅವಳ ‘ಹೊಟ್ಟೆ ಕರಗಿಸಿರುವಾ ಗುಟ್ಟು ರಟ್ಟು ಮಾಡೆ ‘ ಅಂದು ಗೋಗರೆದೆ. ತೊಗೊ ಅವಳು ಅದ್ಯಾವುದೋ ಕಷಾಯದ ರೆಸಿಪಿ ಕೊಟ್ಟು “ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿ, ಮೂರು ತಿಂಗಳಿಗೆ ನಿನ್ನ ಹೊಟ್ಟೆ ಕರಗದಿದ್ದರೆ ಹೇಳು” ಅಂತ ಬಲವಾದ ಭರವಸೆಯನ್ನು ಕೊಟ್ಟು ಬಿಟ್ಟಳು.

ಅವತ್ತೇ ಪನ್ಸಾರಿ ಅಂಗಡಿಗೆ ಹೋಗಿ ಅವಳು ಹೇಳಿದ್ದ ನಾರುಬೇರು ಗಳನ್ನೆಲ್ಲಾ ತಂದು, ಕುಟ್ಟಿ, ಪುಡಿ ಮಾಡಿ ನೀರಲ್ಲಿ ಕುದಿಸಿ,ಆರಿಸಿ, ಸೋಸಿ, ಫ್ರಿಡ್ಜ್ ನಲ್ಲಿ ಒಂದು ಬಾಟಲಿಯಲ್ಲಿ ತುಂಬಿಟ್ಟೆ.ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನು,ಅರ್ಧ ಲೋಟ ಕಷಾಯ ಸೇರಿಸಿ ಎರಡು ದಿನ ಕುಡಿದದ್ದಷ್ಟೆ.ನನ್ನ ಅಂಗೈ ಅಂಗಾಲು ಹೊಟ್ಟೆ ಎಲ್ಲಾ ಭಗ ಭಗಾ ಅಂತ ಉರಿಯಲು ಶುರುವಾಗಿ, ‘ಈ ಕಷಾಯದ ಬಾಟಲಿ ಪೂರ್ಣ ಮಾಡಿದರೆ ನನ್ನ ಹೊಟ್ಟೆ ಕರಗುವುದು ಇರಲಿ, ಮೈ ಕೈ ಸುಟ್ಟು ಹೋಗದಿದ್ದರೆ ಸಾಕು’ ಎನಿಸಿ ಬಿಟ್ಟಿತು.ತಕ್ಷಣವೇ ಸಿಂಕ್ ನಲ್ಲಿ ಕಷಾಯ ಸುರಿದು ಚೆಲ್ಲಿ ಸುಮ್ಮನಾದೆ.

ಇಷ್ಟೊಂದು ಜನರ ಸಲಹೆ ಸೂಚನೆ ಪಾಲಿಸುತ್ತಾ ಇದ್ದ ನನ್ನ ಪರದಾಟಗಳ ನೋಡುತ್ತಿದ್ದ ನನ್ನ ಮಕ್ಕಳು ಕೂಡ ಒಂದು ಪುಕ್ಕಟ್ಟೆ ಸಲಹೆ ಬಿಸಾಕಿದರು.”ಅಮ್ಮ ಟಿವಿ ಯಲ್ಲಿ ಒಂದು ಸಾನ ಬೆಲ್ಟ್ ಅಂತ ಒಂದು ಜಾಹೀರಾತು ಬರುತ್ತೆ.ಅದು ಕಟ್ಟಿಕೊಂಡರೆ ಹತ್ತೇ ದಿನಕ್ಕೆ ಹೊಟ್ಟೆ ಮಾಯವಾಗುತ್ತಂತೆ ” ಅನ್ನುವ ಕಿಡಿಯೊಂದನ್ನು ಹಚ್ಚಿದರು.  ಅಯ್ಯೋ “ಇಷ್ಟೊಂದನ್ನೆಲ್ಲ ಮಾಡಿದೀನಿ.ಇದೊಂದು ಯಾಕೆ ಬೇಡ”ಅನ್ನಿಸಿ, ಆನ್ಲೈನ್ ನಲ್ಲಿ ಬುಕ್ ಮಾಡಿ ಸಾನಾ ಬೆಲ್ಟ್ ತರಿಸಿದ್ದಾಯಿತು. ಸರಿ ಅದನ್ನು ಧರಿಸಿ ರಾತ್ರಿ ಮಲಗಿದ್ದು ಆಯಿತು. ಒಂದೆರಡು ಗಂಟೆ ಕಳೆದಿಲ್ಲ ಅಷ್ಟೇ, ಯಾರೋ ಎದೆ ಮೇಲೆ ಕುಳಿತು ತಿದಿ ಒತ್ತಿದಂತೆ ಉಸಿರು ಕಟ್ಟಲು ಶುರುವಾಗಿ ಧಡ್ ಎಂದು ಎದ್ದು ಕುಳಿತರೆ, ಆ ಬೆಲ್ಟ್ ಆವರಿಸಿರೋ ಪ್ರದೇಶವೆಲ್ಲ ಬಟ್ಟೆ ಹಿಂಡಿದ ಹಾಗೆ ಹಿಂಡುತ್ತಿರುವ ಹಾಗೆ ಅನ್ನಿಸಿ ತಕ್ಷಣ ಅದು ತೆಗೆದು ಎಸೆದು ಮಲಗಿದೆ.

ಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಕರಗದ ನನ್ನ ಹೊಟ್ಟೆ ಬಗ್ಗೆ ಇದ್ದಕ್ಕಿದ್ದಂತೆ ಅಭಿಮಾನವೆನಿಸಲು ತೊಡಗಿತು.”ಶಬ್ಬಾಶ್ ನನ್ನ ಹೊಟ್ಟೆಯೆ! ಯಾರೆಷ್ಟು ಒತ್ತಾಯಿಸಿದರೂ ಕರಗದ ನಿನ್ನಿಂದ ನಾನು ಧೃಢ ಸಂಕಲ್ಪ ಅಂದರೆ ಏನು ಅನ್ನೋದು ಕಲಿತೆ. ಇನ್ನು ನಿನ್ನ ತಂಟೆಗೆ ನಾ ಬರೋದಿಲ್ಲ, ನಿನ್ನ ಪಾಡಿಗೆ ನೀನು ಬೆಳೆದು ಕೊಂಡು ಕುಲುಕಿಕೊಂಡು ಇರು” ಎಂದು ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಬಿಟ್ಟೆ. ಅದು  ಕುಲು ಕುಲು ನಗುತ್ತ,”ಅಯ್ಯೋ ನಾನೇನೂ ನಿನಗೆ ತೊಂದರೆ ಕೊಟ್ಟಿಲ್ಲವಲ್ಲ, ನಿನ್ನ ಎರಡು ಮಕ್ಕಳ ನಾನು ಕಾಪಾಡಿಕೊಂಡು ಇಟ್ಟು ಕೊಂಡು ನಿನಗೆ ಕೊಟ್ಟಿಲ್ಲವ, ಇನ್ನೇನು ಬೇಕು ನಿನಗೆ, ಸುಮ್ಮನೆ ನಿನ್ನ ಪಾಡಿಗೆ ನೀನು ನಿನಗೆ ಬೇಕಾದ್ದನ್ನೆಲ್ಲ ತಿಂದು ಕೊಂಡು ಹಾಯಾಗಿರು. ಇರುವುದೊಂದೇ ಜೀವನ,ತಿಂದು ಉಂಡು ಸುಖವಾಗಿರು, ನನ್ನನ್ನೂ ನನ್ನ ಪಾಡಿಗೆ ಬಿಟ್ಟು ಬಿಡು ” ಅಂತ ಹೇಳಿತು.

ನನ್ನ ಮಕ್ಕಳೂ ಕೂಡ “ಅಮ್ಮ ನೀನು ಗುಂಡು ಗುಂಡಗೆ ಇದ್ದರೇನೆ ನಮಗೆ ಮುದ್ದು. ತಬ್ಬಿಕೊಂಡರೆ ಕೈ ತುಂಬಾ ಸಿಕ್ತಿಯ. ಒಣಕಲು ಕಡ್ಡಿ ಥರ ಇದ್ರೆ ಏನು ಚಂದ. ಸುಮ್ಮನೆ ನಿನ್ನ ಈ ಪರದಾಟಗಳನ್ನೆಲ್ಲಾ ಬಿಟ್ಟು ಬಿಟ್ಟು ಹಾಯಾಗಿರೂ” ಎಂದು ಮುದ್ದಿಸಿದರು. ಇನ್ನು ಮಕ್ಕಳ ಮಾತು ಈ ಭೂಮಿ ಮೇಲೆ ಯಾರಾದರೂ ಮೀರುವುದುಂಟೆ!

ನನ್ನ ಸಹೋದ್ಯೋಗಿ ಗೆಳತಿಯೊಬ್ಬರು “ನೋಡಿ ಮೇಡಂ,ದೇವರು ಕೊಟ್ಟಿರೋ ರೂಪ,ಇರೋದು ಹೋಗಲ್ಲ, ಇಲ್ದಿರೋದು ಬರಲ್ಲ, ನಾವು ಹೇಗಿದ್ದೇವೋ ಹಾಗೆ ನಮ್ಮನ್ನು ನಾವು ಒಪ್ಪಿ ಕೊಳ್ಳೋದ ಕಲಿಯಬೇಕು.” ಅಂತ ದೊಡ್ಡ ತತ್ವವನ್ನೇ ಹೇಳಿದರು .ಅದಲ್ಲದೆ ವಾಟ್ಸಪ್ ನಲ್ಲಿ ತಿರುಗುತ್ತಿದ್ದ ಒಂದು ಸಂದೇಶ “ಹೊಟ್ಟೆ ಬರುತ್ತೇ ಹೋಗಲ್ಲ, ಕೂದಲು ಹೋಗುತ್ತೆ ಬರಲ್ಲ” ಅನ್ನೋ ದೊಡ್ಡ ಸತ್ಯ ದರ್ಶನವನ್ನೇ ಮಾಡಿಸಿ ಬಿಟ್ಟಿತು.

ಅಂತೆಯೇ ನನ್ನ ಹೊಟ್ಟೆಯ ಚಿಂತೆ ಬಿಟ್ಟು,ಹೊಟ್ಟೆ ತುಂಬಾ ತಿಂದುಂಡುಕೊಂಡು, ಕಣ್ಣ್ತುಂಬಾ ನಿದ್ರಿಸಿಕೊಂಡು,ವರ್ಷಕ್ಕೆರಡು ಕೆಜಿ ತೂಕ ಏರಿಸಿಕೊಂಡು ನೆಮ್ಮದಿಯಾಗಿದ್ದೇನೆ.

– ಸಮತಾ. ಆರ್

26 Responses

 1. Avatar ನಯನ ಬಜಕೂಡ್ಲು says:

  ಹೆಚ್ಚಿನ ಮಹಿಳೆಯರ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದೀರಿ. ಎಷ್ಟೇ ಕಸರತ್ತು ಮಾಡಿದರೂ ಹೊಟ್ಟೆ ಮಾತ್ರ ಕರಗುವುದಿಲ್ಲ. ಈಗ ಹೀಗಿರುವುದೂ ಸಹಜವೇನೋ ಅನ್ನುವಷ್ಟು ಪರಿಸ್ಥಿತಿಯನ್ನು ಸ್ವೀಕರಿಸಿ ಆಗಿದೆ

 2. Avatar Vasundhara says:

  ಅಹ್ಹಹ್ಹಾ…!! ತಮಾಶೆಯಾಗಿದೆ. ಸೊಗಸಾಗಿದೆ

 3. Avatar Malavika.R says:

  Suuuuuper Samathaji

 4. Avatar Latha says:

  very nice

 5. Hema Hema says:

  ಇದು ಬಹುತೇಕ ಮಹಿಳೆಯರ ಸಮಸ್ಯೆ…ಚೆಂದದ ಬರಹ… ಹೊಟ್ಟೆ ಕರಗಿಸಲು ಹಲವಾರು ಕಸರತ್ತು ನಡೆಸಿ ವಿಫಲರಾದವರೊಡನೆ ನಾನಿದ್ದೇನೆ..ಸಮಾನ ‘ಹೊಟ್ಟೆ’ಯೊಂದಿಗೆ!

 6. Avatar Anonymous says:

  Super…

 7. Avatar ಪ್ರತಿಮಾ ಹರೀಶ್ ರೈ says:

  ಸಮತಾ ಮೇಡಂ… ನೀವಿಷ್ಟು ಹಾಸ್ಯಮಯಿ ಅನ್ನೋದೇ ಗೊತ್ತಿರ್ಲಿಲ್ಲ ನನಗೇ.. ನಿಮ್ಮ ಅನುಭವಗಳಿಗೊಂದು ರೂಪ ಕೊಟ್ಟು ಇಂದಿನ ಮಹಿಳೆಯರ ಫಿಟ್ನೆಸ್ ತೊಂದರೆಯನ್ನು ತೆರೆದಿಟ್ಟಿದ್ದು ಖುಷಿಯಾಗಿ ಓದಿಸಿಕೊಂಡು ಹೋಗುವಂತಿದೆ.. ಮುಂದುವರಿಯಲಿ ನಿಮ್ಮ ಬರವಣಿಗೆಯ ಕಾಯಕ.

 8. Avatar Veena says:

  Writing super

 9. Avatar ಬಿ.ಆರ್.ನಾಗರತ್ನ says:

  ಹೊಟ್ಟೆ ಪುರಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ.ಅದನ್ನು ಕರಗಿಸಲು ಮಾಡಿದ ಕಸರತ್ತು ಗಳು ನಿರೂಪಣೆ ಸೊಗಸಾಗಿ ಮೂಡಿಬಂದಿದೆ ಅಭಿನಂದನೆಗಳು ಮೇಡಂ.

 10. Avatar ಉಮೇಶ್ ಸಿದ್ದಪ್ಪ says:

  ಹೊಟ್ಟೆ ಬರುವುದು ಅಂದರೆ ಅದು ಸಮೃದ್ಧಿಯ ಸಂಕೇತ, ಸಮೃದ್ಧಿ ಮಾತ್ರ ಬೇಕು ಹೊಟ್ಟೆ ಬರುವುದು ಬೇಡ ಅಂದರೆ ಹೇಗೆ.
  Collegeಗೆ ಹೋಗುವಾಗ ಕೆಲವರಿಗೆ, ever pregnant never delivery, EPND ಬಿರುದು ಕೊಟ್ಟಿದ್ದು ನೆನಪಾಗತ್ತೆ. ಅದೇ ಬಿರುದಿಗೆ ನಾವು ಭಾಜನರಗಬಹುದು ಅಂತ ಗೊತ್ತಿರಲಿಲ್ಲ.
  ಇತ್ತೀಚೆಗೆ ಲುಂಗಿ ಕಂಪನಿಯವರೂ ವಿಜಯ ಕರ್ನಾಟಕ ದಿನಪತ್ರಿಕೆಯಂತೆ ಖರ್ಚಿನ ಕಡತಕ್ಕೆ ಒಳಗಾಗಿದ್ದಾರೆ ಅಂದುಕೊಂಡಿದ್ದು ನಮ್ಮ ಭ್ರಮೆ ಅಂತ ಮನವರಿಕೆ ಮಾಡಿಸಿದ್ದೀರಾ. ಧನ್ಯವಾದಗಳು.
  ತಲೆಕೂದಲು ಹೋಗತ್ತೆ, ಬರೋದಿಲ್ಲ ಅನ್ನೋದನ್ನ ನಾವು ಯಾರಾದರೂ ಅನುಭವದೊಂದಿಗೆ ಬರೆಯುವುದು ಬಾಕಿ ಉಳಿದಿದೆ.

 11. Avatar Meghana Kanetkar says:

  ಹಹ್ಹಹ್ಹಾ ನಿಜ ಹೊಟ್ಟೆ ನಿನ್ನಿಂದ ನಾ ಕೆಟ್ಟೆ ಅಂದ್ರೆ ಅದು ಕರಗಲ್ಲ
  ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಲೇ ಇದ್ದಷ್ಟು ದಿನ ತಿಂದುಂಡು ಹಾಯಾಗಿರಬೇಕು
  ಚೆನ್ನಾಗಿದೆ ಬರಹ

 12. Avatar Kishor s j says:

  Super

 13. Avatar ಜಯ ಕಲಾ ಡಿಎಲ್ says:

  ಸಮತಾ ಜಿ ಸೂಪರ್ ಆಗಿದೆ ನಿಮ್ಮ ಸರದಿ ಯಲ್ಲಿ ನಾನು ಇದ್ದೀನಿ ಹೊಟ್ಟೆ ಕರಗಿಸಲು ಹೋದರೆ ಜಾಸ್ತೀನೇ ಆಗುತ್ತದೆ ನೀವು ಹಾಗೆ ಬೋಟಿ ಗೊಜ್ಜು ತಿಂದ್ರೆ ಹೊಟ್ಟೆ ನಿಜವಾಗಿ ಕರಗುತ್ತಾ .ತುಂಬಾ ಚೆನ್ನಾಗಿ ಬರ್ದಿದೀರ ಪದಗಳ ಜೋಡಣೆ ಹಾಗೂ ಹಾಸ್ಯಾಸ್ಪದ ವಾಕ್ಯಗಳು ….ಇನ್ನೂ ಇನ್ನೂ ಓದ್ಬೇಕು ಅನ್ಸುತ್ತೆ .

 14. Avatar Jayakala D L says:

  Super..

 15. Avatar ಸುನೀತ says:

  ನಮ್ಮೆಲ್ಲರದೇ ಆದ ಅನುಭವಗಳನ್ನು ಹಾಸ್ಯಮಯವಾಗಿಸಿ ನಗುವಂತೆ ಮಾಡಿದ್ರಿ ಸಮತಾ….ಇನ್ನಷ್ಟು ಬರೆದು ನಕ್ಕುಬಿಡಿ ಅನ್ನಿ..

 16. Avatar Veena Manjunath says:

  ಸಮತ… ನಿನ್ನ ಸ್ವಾಭಾವಿಕ ಬರವಣಿಗೆ ಯ ಶೈಲಿ ನನಗೆ ತುಂಬಾ ಅಚ್ಚುಮೆಚ್ಚು. It’s so very relatable that we live that every single moment while reading…..all your articles are hilarious ones.

 17. Avatar Samatha.R says:

  ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

 18. Avatar Padma Anand says:

  ಚಂದದ ಬರಹ. ಕನ್ನಡಿಯಲ್ಲಿ ಗುಂಡನೆಯ ಹೊಟ್ಟೆ ನೋಡಿಕೊಂಡಾಗಲೆಲ್ಲ ಮುಖ ಸಿಂಡರಿಸುತ್ತಿದ್ದ ನಾನು ಇಂದು ಆಪ್ತವಾಗಿ ನೇವರಿಸಿದೆ.

 19. Avatar Sayilakshmi S says:

  ಸಿಜೇರಿಯನ್ ಆದವರಿಗೆ ಹೊಟ್ಟೆಬರುವುದು ಮಾಮೂಲು.‌ನನ್ನ‌ಪ್ರಕಾರ ದೇಹ flexible ಆಗಿ ಇರೋ ಹಾಗೆ ನೋಡಿಕೊಂಡರೆ ಅದೇ ಆರೋಗ್ಯ ಹಾಗು ಸೌಂದರ್ಯವರ್ಧಕ ಸಹ.‌ಲೇಖನ ಚೆನ್ನಾಗಿದೆ. ಒಂದು ಮನಸ್ತಿತಿ ಮುಟ್ಟಬೇಕಾದರೆ ಎಷ್ಟೆಲ್ಲ ಅನುಭವಗಳಲ್ಲಿ ಸಾಗಬೇಕು. ಅಭಿನಂದನೆ

 20. Avatar Asha says:

  ತುಂಬಾ ಚೆನ್ನಾಗಿದೆ

 21. Avatar ಶಂಕರಿ ಶರ್ಮ says:

  ಹೊಟ್ಟೆ ಬಗೆಗಿನ ಲಘುಲೇಖನ ಓದಿ ಹೊಟ್ಟೆ ತುಂಬಾ ನಕ್ಕುಬಿಟ್ಟೆ. ಎಲ್ಲರೂ ಅವರವರ ಹೊಟ್ಟೆ ಮುಟ್ಟಿ ನೋಡಿಕೊಳ್ಳುವಂತೆ, ಎಲ್ಲರಿಗೂ ಹೊಂದಿಕೆಯಾಗುವಂತಹ ಆತ್ಮೀಯ ಬರಹ ಬಹಳ ಇಷ್ಟವಾಯ್ತು…

 22. Avatar Jayalakshmi says:

  Fine Sami ✨

 23. Avatar Uma SK says:

  ಹಾಸ್ಯ ಲೇಖನ…ಬರವಣಿಗೆ ಮನಸ್ಸಿಗೆ ಮುದ ನೀಡಿತು

 24. Avatar Pruthvi says:

  In this pandemic time i think everyone has got anxieties ,really after reading this article i felt so relaxed by laughing so much thank you .

 25. Avatar Ushakumari says:

  ಸಮತಾ.. ತುಂಬಾ ಚೆನ್ನಾಗಿ ಬಂದಿದೆ. ನಿಮ್ಮ ಬರವಣಿಗೆ ಶೈಲಿ, ಪ್ರಸಿದ್ದ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ ಅವರನ್ನು ಹೋಲುತ್ತದೆ.. ಅವರ ಬರಹಗಳು ನನಗೆ ತುಂಬಾ ಇಷ್ಟ.ನಿಜ ಹೇಳಬೇಕು ಅಂದ್ರೆ,ನಿಮ್ಮ ಬರಹ ಅವರದಕ್ಕಿಂತಲೂ ತುಂಬಾ ಚೆನ್ನಾಗಿದೆ.. ಅವರ ಬರಹದಲ್ಲಿ ಕೆಲವೊಮ್ಮೆ ಬೋರ್ ಆಗುತ್ತದೆ…ನಿಮ್ಮದು ಸಲೀಸಾಗಿ ಓದಿಸಿ ಕೊಂಡು ಹೋಗುತ್ತದೆ. ಜೊತೆ ಯಲ್ಲಿರುವ ಲಘು ಹಾಸ್ಯ ಮುಖದಲ್ಲಿ ನಗು ಅರಲಿಸುತ್ಠದೆ. ಆಗ ಮನಸ್ಸು ತಾನೇ ತಾನಾಗಿ ಪ್ರಫುಲ್ಲ ವಾಗುತ್ತದೆ. . ಹ್ಯಾಟ್ಸಾಫ್…keep it up

 26. Avatar Dayananda Diddahalli says:

  Super article, your humarous articles are so fine which arise laughter to larger extent. Keep us laughing always.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: