ತಮ್ಮನನ್ನು ತುಂಡು ತುಂಡು‌ಮಾಡಿ ಕೊಲ್ಲುವವಳಿದ್ದಳು

Share Button

ನನ್ನ  ಸಹೋದ್ಯೋಗಿ ಒಮ್ಮೆ ನಾಲ್ಕು ದಿನ  ರಜದ ಮೇಲಿದ್ದಾಗ  ಎರಡೂ ತರಗತಿಗಳನ್ನು ನಾನೇ ನೋಡಿಕೊಳ್ಳಬೇಕಾಗಿ ಬಂದಂತಹ ಸಮಯದಲ್ಲಿ ನಡೆದದ್ದು ಈ ಪ್ರಸಂಗ. ನಮ್ಮಿಬ್ಬರ  ಕ್ಲಾಸ್ ರೂಮ್‌ಗಳು ದೂರ ಇದ್ದ‌ ಕಾರಣ ಕಂಬೈಂಡ್ ಮಾಡಲು ನಿರ್ಧರಿಸಿ  ಆ ಸೆಕ್ಷನ್‌ನ ಮಕ್ಕಳನ್ನು ಮೌನವಾಗಿ ಸಾಲಾಗಿ‌ ಕರೆತರಲು ಆಯಾಗೆ‌ ಹೇಳಿದೆ. ಒಂದು ತರಗತಿಯನ್ನು ಸಂಭಾಳಿಸುವುದೇ ಕಷ್ಟ. ಇನ್ನು ಎರಡೂ ಸೆಕ್ಷನ್‌ನವರು ಸೇರಿದರೆ ಕಪ್ಪೆ ತಕ್ಕಡಿಗೆ ಹಾಕಿದಂತೆಯೇ. ಆದರೂ ಅನಿವಾರ್ಯ. ಹಾಗೆ ಕಂಬೈನ್ಡ್ ಮಾಡುವಾಗ ಮಕ್ಕಳು ತಮ್ಮ ತಮ್ಮ ಗೆಳತಿಯರನ್ನು  ಕೂಗಿ ಕೂಗಿ ಕರೆಯುತ್ತಾ ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುವ ಸಂಭ್ರಮ ಸಡಗರದಿಂದ ತರಗತಿಯಲ್ಲಿ ಗುಲ್ಲೋಗುಲ್ಲು. ಎಲ್ಲರೂ ಮರಿ ಕಪಿಗಳೇ!  ಅವರನ್ನು ತಹಬಂದಿಗೆ ತರುವುದೇನು ಹುಡುಗಾಟದ ಕೆಲಸವೇ?

ಅಂತೂ ಇಂತೂ ಮಕ್ಕಳ ಗಲಾಟೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಿ ತರಗತಿಗಳನ್ನು ಒಂದು ಹಿಡಿತಕ್ಕೆ ತೆಗೆದುಕೊಂಡ ಮೇಲೆ ಇತ್ತೀಚೆಗೆ ನಾನು ನನ್ನ ಸಹೋದ್ಯೋಗಿ ಇಬ್ಬರೂ ಮುಗಿಸಿದ್ದ ಪಾಠವನ್ನೊಮ್ಮೆ ಸ್ಥೂಲವಾಗಿ ಪುನರಾವರ್ತಿಸಿ. ಪ್ರಶ್ನೆ ಕೇಳಿ ಉತ್ತರಗಳನ್ನು ಬೋರ್ಡ್ ಮೇಲೆ ಬರೆದು ಮಕ್ಕಳಿಗೂ ಬರೆದುಕೊಳ್ಳಲು ಹೇಳಿ ನನ್ನ ಟೇಬಲ್ ಬಳಿಗೆ ಬಂದು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಲೇ ಇನ್ನೊಂದು ಸೆಕ್ಷನ್‌ನ  ಆ ಬಾಲೆ  ಮೇಜಿನ ಬಳಿಗೆ ನಿಧಾನವಾಗಿ ಬಂದಳು. *ನೀವು ತುಂಬಾ ಒಳ್ಳೆ ಟೀಚರ್ ಅಂತ ನನ್ನ ಫ್ರೆಂಡ್ಸ್ ಯಾವಾಗ್ಲೂ ಹೇಳ್ತಿರ್ತಾರೆ. ನೀವೇ ನಂಗೆ ಟೀಚರ್ ಆಗ್ಬೇಕಿತ್ತೂ* ಎಂದಳು ರಾಗವಾಗಿ.

ಮಕ್ಕಳು‌ ಟೀಚರ್ಸ್‌ಗಳನ್ನು ಈ ರೀತಿ ಉಬ್ಬಿಸಲು ನೋಡುವುದರಲ್ಲಿ  (flattering ನಲ್ಲಿ) ಬಹಳ ಚಾಣಾಕ್ಷರಿರುತ್ತಾರೆ ಎಂಬುದನ್ನು ನನ್ನ ಹಲವು ವರ್ಷಗಳ ವೃತ್ತಿಯಲ್ಲಿ‌ ಕಂಡುಕೊಂಡಿದ್ದರಿಂದ‌ ಆ ಹೊಗಳಿಕೆಯ ಮಾತಿಗೆ ಪ್ರತಿಕ್ರಿಯೆ ತೋರದೆ, *ಇನ್ನು ಹೆಚ್ಚು ಟೈಮ್ ಇಲ್ಲ ಬೇಗ ಬರೆದುಕೊ ಹೋಗಮ್ಮ* ಎಂದೆ.

*ನಂಗೆ ಓದೋದು ಬರ‌್ಯೋದು ಏನೂ ಬೇಡ‌ ಟೀಚರ್. ತುಂಬಾ‌ ಬೇಜಾರು. ನಾನು ಬರ‌್ಕೊಳಲ್ಲ.* ಎಂದಳು. ಈ ರೀತಿ ಮಕ್ಕಳು ಕೆಲವೊಮ್ಮೆ  ಯಾವ ಭಯವೂ ಇಲ್ಲದೆ ಓದಲು ಬರೆಯಲು ದಿಟ್ಟತನದಿಂದ‌ ನಿರಾಕರಿಸುವುದೂ ಹೊಸದಲ್ಲವಾದ್ದರಿಂದ ಆಶ್ಚರ್ಯವೇನೂ‌ ಆಗದೆ ನಗುತ್ತಲೇ ಕೇಳಿದೆ.
*ಯಾಕೆ!? ಬೆಳಿಗ್ಗೆ ತಿಂಡಿ ತಿಂದಿಲ್ವಾ? ತುಂಬಾ ಹಸಿವಾಗ್ತಿದ್ಯಾ?*

*ಸೇರಿದ್ರೆ ತಾನೆ ತಿನ್ನೋಕೆ. ನಂಗೆ ಊಟ ತಿಂಡಿ ಪಾರ್ಟಿ ಯಾವುದ್ರಲ್ಲೂ ಇಂಟರೆಸ್ಟ್ ಇಲ್ಲ ಟೀಚರ್* ಎಂದಳು.

*ಚಾಕಲೇಟ್, ಐಸ್‌ಕ್ರೀಮ್, ಪಾನಿಪೂರಿ, ಚಾಟ್ಸ್, ಗೋಬಿ ಮಂಚೂರಿ, ಪಿಜ್ಜಾ?* ಕೀಟಲೆ ಮಾಡುತ್ತಾ ಕೇಳಿದೆ.

*ಯಾವುದೂ ಬೇಡ ಟೀಚರ್. ಯಾವಾಗ್ಲೂ ಅಮ್ಮನ ಜೊತೆ ಮಾತ್ರ ಇರೋಣ ಅನ್ಸುತ್ತೆ*

*ಮನೆಗೆ ಹೋದ್ಮೇಲೆ ಅಮ್ಮನ ಜೊತೇನೆ ತಾನೇ ಇರೋದು. ಸ್ಕೂಲಲ್ಲಿರುವಾಗ ಅಮ್ಮನ ಯೋಚ್ನೆ ಮಾಡ್ದೆ ಗಮನವಿಟ್ಟು ಪಾಠ ಕೇಳ್ಬೇಕು. ಬೇಗ ಬೇಗ ಬರ‌್ಕೊಬೇಕು. ಇಲ್ದಿದ್ರೆ   you will lag behind. ಆಗ ನಿಮ್ಮಮ್ಮಂಗೆ ಬೇಜಾರಾಗುತ್ತಲ್ವಾ?. ಅಮ್ಮಂಗೆ  ಬೇಜಾರು ಮಾಡ್ತೀಯಾ? ನೀನು ಏನೂ ಬರ‌್ಕೊಂಡು ಹೋಗ್ದೇ ಇದ್ರೆ ಅಮ್ಮ ಸಿಟ್ಮಾಡ್ಕೊಳೋಲ್ವಾ ಪುಟ್ಟೀ* ಎಂದು ರಮಿಸತೊಡಗಿದೆ.

*ನಾನು ಏನು ಬರೆದೆ, ಏನ್ ಓದಿದೆ ಅಂತ ನೋಡೋಕೆ ಅಮ್ಮಂಗೆ ಟೈಮೆಲ್ಲಿದೆ‌ ಟೀಚರ್? ಮಗ ಬರೋ‌ ಖುಷೀಲಿ ಅವರ‌್ಗೆ ಬೇರೆ ಯಾರೂ ಬೇಡ.* ಎಂದಳು.
*ಯಾವ ಊರಿಗೆ ಹೋಗಿದಾನೆ ನಿಮ್ಮ ಅಣ್ಣ?* ಅಂತ ಕೇಳಿದೆ.
*ಊರಿಂದ ಬರೋದಲ್ಲ ಟೀಚರ್. ನ‌ನ್ನ ತಮ್ಮನಂತೆ. ಅಮ್ಮನ ಹೊಟ್ಟೆಲಿದಾನಂತೆ* ಎಂದಳು.
*ಏನೂ!???!*

*ನಮ್ಮಮ್ಮ pregnant ಅಂತೆ ಟೀಚರ್.  ನಮ್ಮಮ್ಮನ ಹೊಟ್ಟೆ ಇಷ್ಟ್‌ದಪ್ಪ ಊದ್ಕೊಂಡಿದೆ. ಅದರಲ್ಲಿ ತಮ್ಮ ಇದಾನಂತೆ. ಆಸ್ಪತ್ರೆಗೆ  ಹೋದ್ಮೇಲೆ ಅವ್ನು ಹೊರಗೆ ಬರ್ತಾನಂತೆ. ಆಮೇಲೆ ಮನೆಗೆ ಕರ್ಕೊಂಬರ್ತಾರಂತೆ‌.  ಆದ್ರೆ ನಾನ್ ಅವ್ನನ್ನ ಮನೆಗೆ ಬಂದ ತಕ್ಷಣ ಸಾಯಿಸಿಬಿಡ್ತೀನಿ. ಪೀಸ್ ಪೀಸ್ ಮಾಡಿ ಮಿಕ್ಸರ್‌ಗೆ ಹಾಗಿ ಸೂಪ್ ಮಾಡಿ ಬಿಸಾಕಿ ಬಿಡ್ತೀನಿ ಟೀಚರ್.  ನಮ್ಮನೆಗೆ‌ ಇನ್ಯಾರೂ ಬರ‌್ಬಾರ್ದು* ಎಂದಳು.

ಕಣ್ಣುಗಳಲ್ಲಿ‌ ಧ್ವನಿಯಲ್ಲಿ‌ ತುಳುಕುತ್ತಿತತ್ತು ತೀವ್ರತರ ದ್ವೇಷ, ರೋಷ. ಅಸಹನೆ. ಕುಣಿದು ನಲಿಯುವ ವಯಸ್ಸಿನ ಎರಡನೇ ತರಗತಿಯ ಮುಗ್ಧ ಬಾಲೆಯ ಬಾಯಲ್ಲಿ ಇಷ್ಟು ಕ್ರೌರ್ಯದ ಮಾತು ಕೇಳಿ ದಿಗ್ಭ್ರಮೆಯಾಯಿತು. ಹೊಸ ಜೀವವೊಂದು ಆಗಮಿಸುವ ಸೂಚನೆ‌ ಕಂಡಾಗಿನಿಂದ ತಂದೆತಾಯಿಗಳು ಹಿರಿಯ ಮಗುವಿಗೆ ಪ್ರೀತಿಯಲ್ಲಿ ಒಂದೂ ಚೂರೂ ಕಡಿಮೆ ಮಾಡದೆ ಜೊತೆಗೆ  ಚಿಕ್ಕ ಹಸುಳೆಯ ಸ್ವಾಗತಕ್ಕೆ ಜಾಣತನದಿಂದ ಸಿದ್ಧ ಮಾಡಿಸದೆ ಹಾಗೂ ಮಕ್ಕಳ ಜನನದ ನಡುವೆ ಸಾಕಷ್ಟು ಅಂತರವೂ ಇರುವಂತೆ ಪ್ಲಾನ್ ಮಾಡದಿದ್ದರೆ ಎದುರಿಸಬೇಕಾದ  ಸಾಕಷ್ಟು ಸಮಸ್ಯೆಗಳ ಒಂದು ಮಾದರಿ ಇದು.

ತಮಗೆ‌ ಮಾತ್ರ ಇಡಿಯಾಗಿ ಅಖಂಡವಾಗಿ ದೊರಕುತ್ತಿದ್ದ ಅಮ್ಮ ಅಪ್ಪನ ಪ್ರೀತಿಗೆ ಪಾಲುದಾರರಾಗಿ ಬರುವ ತಮ್ಮ ಅಥವಾ ತಂಗಿಯ ಮೇಲೆ (Siblings Rivalry) ಅಂದರೆ ಒಂದು ತರಹದ ದ್ವೇಷ, ಮತ್ಸರ ಹಾಗೂ ಅಭದ್ರತೆಯ  ಭಾವ ಎಳೆಯ ಮಕ್ಕಳಲ್ಲಿ ಮೂಡಿ‌, ಆ ಚಿಕ್ಕ ಮಗುವನ್ನು ಹೊಡೆಯುವುದು, ಚಿವುಟುವುದು, ಅಸಹನೆ ತೋರುವುದು, ತಾಯಿಯ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು‌ ಚಿಕ್ಕ ಚಿಕ್ಕ ವಿಷಯಕ್ಕೆ ಅಳುವುದು, ಚಂಡಿ ಹಠ ಹಿಡಿಯುವುದು, ಮನೆಯ ಸಾಮಾನುಗಳನ್ನು ಎಸೆಯುವುದು ಒಡೆದುಹಾಕುವುದು ಇತ್ಯಾದಿ ವಿಕ್ಷಿಪ್ತವಾಗಿ  ವರ್ತಿಸುವುದುಂಟು. ಇದು ಹೊಸತಲ್ಲ.

ಆದರೆ ಈ ಬಾಲೆ???!!!

ಅಷ್ಟೊತ್ತಿಗಾಗಲೇ ಆ ತರಗತಿಯ ಅವಧಿ ಮುಗಿದ ಗಂಟೆ ಹೊಡೆದದ್ದೇ ಮಕ್ಕಳೆಲ್ಲ ಎದ್ದು *ಥ್ಯಾಂಕ್ಯೂ ಟೀಚರ್*. ಎಂದು ಒಕ್ಕೊರಲಿನಲ್ಲಿ ರಾಗವಾಗಿ ಹೇಳಿ ಗಡಬಡಿಸಿ ಹೊರಟರು.

ಯಾಕೋ ಈ ಮಗುವನ್ನು ಅವಳ ಈ ದುಃಖತಪ್ತ,  ಉದ್ರಿಕ್ತ ಮನಃಸ್ಥಿತಿಯಲ್ಲಿ ಮುಂದಿನ ತರಗತಿಗೆ ಕಳಿಸುವುದು ಸರಿಯಲ್ಲ‌‌ ಎಂದು‌ ಅನಿಸಿದ್ದರಿಂದ ಆಯಾಳನ್ನು ಕರೆದು ಇವಳು ಇನ್ನೂ‌ ಸ್ವಲ್ಪ ಹೊತ್ತು ನನ್ನ ಜೊತೆಗೇ ಇರುತ್ತಾಳೆಂದು‌ ಅವಳ ತರಗತಿಯ ಶಿಕ್ಷಕಿಗೆ ಹೇಳಿ ಕಳಿಸಿದೆ.

ಆ ಪೀರಿಯಡ್ ನನಗೆ ಬಿಡುವಿದ್ದರೂ ಉಪಾಧ್ಯಾಯರ ಕೋಣೆಗೆ ಹೋಗದೆ ಉಪಾಯವಾಗಿ ಅವಳ ಮನೆಯ ಪರಿಸ್ಥಿತಿ ತಿಳಿದುಕೊಂಡೆ. ಈ ಬಾಲೆಗೆ ಇವಳಿಗಿಂತ ಕೇವಲ ಒಂದೂಮುಕ್ಕಾಲು ಎರಡು ವರ್ಷ ಚಿಕ್ಕವಳಾದ ಒಬ್ಬ ತಂಗಿ, ನಾಲ್ಕು ವರ್ಷ ಚಿಕ್ಕವಳಾದ ಮತ್ತೊಬ್ಬ ತಂಗಿ ಇದ್ದಾಳೆ. ಗಂಡುಮಗುವನ್ನು ಪಡೆಯಲೇಬೇಕೆಂಬ ಹಂಬಲದಿಂದ‌ ಮತ್ತೊಮ್ಮೆ ಇವಳಮ್ಮ ಬಸಿರಾಗಿದ್ದಾರೆ. ಗರ್ಭದಲ್ಲಿರುವ ಮಗು ನಿಶ್ಚಿತವಾಗಿ ಗಂಡು ಮಗುವೇ ಎಂದು ಗುಟ್ಟಾಗಿ ಪರೀಕ್ಷೆ ಮಾಡಿಸಿ ಖಚಿತ‌ ಪಡಿಸಿಕೊಂಡಿದ್ದಾರೆ. ಗಂಡು ಮಗು ಎಂದು ತಿಳಿದಾಗಿನಿಂದ ಹೆಣ್ಣು‌ಮಕ್ಕಳ‌ನ್ನು ಕಂಡರೆ ಒಂಥರಾ ಉದಾಸೀನ. ಅವಳ ಉಳಿದ ತಂಗಿಯರ ವಿಷಯ ತಿಳಿಯದು. ಆದರೆ ಸೂಕ್ಷ್ಮ ಮನಸ್ಸಿನ ಈ ಬಾಲೆ ತಾಯಿಯ ಪ್ರೀತಿಯಿಂದ ಸಂಪೂರ್ಣ  ವಂಚಿತಳಾಗಿರುವ ನೋವು ಹಾಗೂ ಅನಾಥ ಪ್ರಜ್ಞೆಯಿಂದ ತತ್ತರಿಸಿ ಹೋಗುತ್ತಿದ್ದಾಳೆ. ತಂದೆ ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವ ಹೊತ್ತಿಗೆ ತೀರ ಬಳಲಿರುತ್ತಾರೆ. ಮಕ್ಕಳ ಪ್ರೀತಿಯ ಅವಶ್ಯಕತೆಯನ್ನು ಪೂರೈಸಬೇಕಾದ ಕಡೆ ಅವರಿಗೂ ಗಮನವಿಲ್ಲ. ಗಂಡು ಮಗುವನ್ನು, ವಂಶೋದ್ಧಾರಕನನ್ನು ಹೊತ್ತಿರುವ ಪತ್ನಿಗೆ ಆಯಾಸವಾಗಬಾರದೆಂದು ಮನೆಯಲ್ಲಿ ಅಡುಗೆ ಮಾಡುವವರನ್ನೂ ನೇಮಿಸಿಕೊಂಡಿದ್ದಾರೆ. ಆಕೆ  ರುಚಿಯಾಗಿ ಅಡುಗೆ ಮಾಡಿದರೂ ಅದಕ್ಕೆ ಅಮ್ಮನ ವಾತ್ಸಲ್ಯ ಪ್ರೀತಿ ಮಮತೆಯ ಸ್ಪರ್ಶವಿರಲು ಸಾಧ್ಯವೇ?? ಅದು ಈ ಮಗುವಿಗೆ ಕೇವಲ ಹಸಿವನ್ನು ಹಿಂಗಿಸಿಕೊಳ್ಳುವ ಬರಡು ಆಹಾರವಾಗಿದೆ ಅಷ್ಟೇ.

*ನಿನ್ನ ತಮ್ಮನ್ನ ನಿಮ್ಮಮ್ಮ ಆಸ್ಪತ್ರೆಯಿಂದ ಯಾವಾಗ ಕರಕೊಂಡು ಬರ್ತಾರೇಂತ  ನಿಂಗೆ ಗೊತ್ತಾ ಪುಟ್ಟೀ?* ಹೆರಿಗೆಗೆ ಇನ್ನೆಷ್ಟು ದಿನಗಳಿವೆ ಎಂದು ತಿಳಿದುಕೊಳ್ಳುವ ಸಲುವಾಗಿ ಕೇಳಿದೆ.

*ನಂಗೊತ್ತಿಲ್ಲ. ಯಾವಾಗ ಕರ್ಕೊಂಬಂದ್ರೂ‌ ನಾನು ತಕ್ಷಣ ಪೀಸ್ ಪೀಸ್ ಮಾಡಿ ಸಾಯ್ಸಾಕ್ಬಿಡ್ತೀನಿ* ಎಂದಳು. ಅವಳ ಧ್ವನಿ ಕಣ್ಣುಗಳು ಉಗುಳುತ್ತಿದ್ದ ಗಟ್ಟಿ ನಿರ್ಧಾರ, ವಿದ್ವೇಷದ ಬೆಂಕಿ ಗಾಬರಿಯನ್ನುಂಟು ಮಾಡಿತು.

ಹಾಗೂ ಹೀಗೂ ಆ ವಿಷಯವನ್ನೇ ಮರೆಸಿ ತಮಾಷೆಯಾಗಿ ಮಾತಾಡುತ್ತಾ ಅವಳನ್ನು ನಗಿಸುತ್ತಾ, ಲೈಬ್ರರಿಗೆ ಕರೆದುಕೊಂಡು ಹೋಗಿ ಮುದ್ದಾದ ಹಸುಳೆಗಳ ಚಿತ್ರ ತೋರಿಸಿ ಅವುಗಳ ಮೋಹಕ ನಗು,‌ ಹೂವಿನಂತಹ ಕೋಮಲ ಮೃದು ಸ್ಪರ್ಶ, ದಟ್ಟಡಿ, ಇತ್ಯಾದಿಗಳ ಬಗ್ಗೆ ವರ್ಣಿಸಿ. *you are so lucky to get a cute sweet younger brother. He loves you so much* ಎಂದೆಲ್ಲಾ ಹೇಳುತ್ತಾ‌ ಬರುವ ತಮ್ಮನ ಬಗ್ಗೆ  excite ಆಗುವಂತೆ ಮಾಡಲು ಹಲವಾರು ರೀತಿಯಲ್ಲಿ ಯತ್ನಿಸಿದೆ.

ಆದರೆ ಅವಳು ಇನ್ನಷ್ಟು ಆಕ್ರೋಶದಿಂದ.
*No I am very unlucky to get a brother*.*I hate him. I hate him. I hate my parents*.
*I will definitely kill him. I will chop him  into pieces* ಎಂದು ಕಿರುಚಿ ಹೊರಗೋಡಲು ಯತ್ನಿಸಿದಳು. ಲೈಬ್ರರಿಯನ್‌ ಬೆಚ್ಚಿ ನನ್ನೆಡೆ  ನೋಡಿದರು.  ಆಮೇಲೆ ಹೇಳುವೆ ಎನ್ನುವಂತೆ ಕಣ್ಣಿನಲ್ಲೇ ಸನ್ನೆ ಮಾಡಿ ತಕ್ಷಣ ಆ ಬಾಲೆಯನ್ನು ಹಾಗೇ ಹಿಡಿದು ಹೊರಗೆ ಬಂದೆ. ಒಮ್ಮೆ ಅಪ್ಪಿಕೊಂಡು ಮುದ್ದಿಸಿ, ಆ ಪೀರಿಯಡ್ ಮುಗಿಯುವ ಸಮಯವಾದ್ದರಿಂದ ಅನಿವಾರ್ಯವಾಗಿ ಅವಳನ್ನು ಅವಳ ತರಗತಿಗೆ ಕರೆದುಕೊಂಡು ಹೋಗಿ ಬಿಟ್ಟುಬಂದೆ. *ಏಕೆಂದರೆ ನಾನು ಆ ಮಗುವಿನ ಕ್ಲಾಸ್ ಟೀಚರ್ರೂ ಅಲ್ಲ. ಸಬ್ಜೆಕ್ಟ್ ಟೀಚರ್ರೂ ಆಗಿರಲಿಲ್ಲವಲ್ಲ*.

ಮತ್ತೆ ಮಾರನೆಯ ದಿನದ ಕಂಬೈಂಡ್ ತರಗತಿಗೆ ಬಂದಾಗಲೂ ಅವಳು ಇನ್ನೂ ಅಷ್ಟೇ ರೋಷ,  ವಿದ್ವೇಷ, ಮತ್ಸರ, ಅನಾಥ ಪ್ರಜ್ಞೆಯಲ್ಲಿ ಕಳೆದು ಹೋದಂತೆಯೇ ಇದ್ದಳು.‌ ಓದು ಬರಹ, ಪಾಠ, ಆಟ  ತಿಂಡಿ ಏನೂ ಬೇಡದ ಭಾವ ಅವಳ ಮುಖದಲ್ಲಿ ಹೊಡೆದು ತೋರುತ್ತಿತ್ತು. ಇನ್ನು ತಡ ಮಾಡಬಾರದೆನಿಸಿ  ಆಫೀಸಿನಿಂದ ಅವಳ ತಾಯಿಯ ಮೊಬೈಲ್ ನಂಬರ್ ಪಡೆದು, ಆಕೆಗೆ ಫೋನ್ ಮಾಡಿ, ಅಭಿನಂದಿಸಿ,  ಆದಷ್ಟು ಬೇಗ ಬಂದು ನನ್ನನ್ನು ಇಂಥಾ ಬಿಡುವಿನ ವೇಳೆಯಲ್ಲಿ ಭೇಟಿಯಾಗುವಂತೆ, ಆದರೆ ಗಾಬರಿಯಾಗದಂತೆ ಮೃದುವಾಗಿಯೇ ತಿಳಿಸಿದೆ.

ಮಾರನೆಯ ದಿನ  ಹೇಳಿದ ಹೊತ್ತಿಗೆ ಸರಿಯಾಗಿ ಚಿಕ್ಕ ಮಗಳ ಕೈ ಹಿಡಿದುಕೊಂಡು ಆಯಾಸದಿಂದ ಹೆಜ್ಜೆ ಹಾಕುತ್ತಾ ಬಂದ‌ ತುಂಬು‌ ಬಸುರಿಯನ್ನು ನೋಡಿ ಅನುಕಂಪವಾಯಿತು. ಇನ್ನು 22  ದಿನಕ್ಕೆ‌‌ ಆಕೆಯ‌ ಡ್ಯೂ ಡೇಟ್ ಎಂದು‌ ತಿಳಿದುಬಂತು.

ಉದ್ದ ಪೀಠಿಕೆಯೇನೂ ಇಲ್ಲದೆ ಅವರ ಮಗಳು ತಾಯಿಯ ಪ್ರೀತಿಯಿಂದ ವಂಚಿತಳಾಗಿ‌ ಅನುಭವಿಸುತ್ತಿರುವ ಅನಾಥ ಪ್ರಜ್ಞೆಯ ಬಗ್ಗೆ ಹೇಳಿ ಹುಟ್ಟಲಿರುವ ತಮ್ಮನ ಬಗ್ಗೆ ಅವಳಾಡಿದ ಮಾತನ್ನೂ ತಿಳಿಸಿದೆ. ಭಯದಿಂದ ನಡುಗಿದ ಆಕೆ ಒಮ್ಮೆಲೇ ಕ್ರೋಧದಿಂದ ಉರಿಯುತ್ತಾ *ರಾಕ್ಷಸಿ. ತಮ್ಮನ್ನ ಸಾಯಿಸ್ತಾಳಂತಾ? ನಾಳೆನೇ ಅವ್ಳುನ್ನ ಯಾವ್ದಾದ್ರೂ‌ ಹಾಸ್ಟೆಲ್ಗೆ ಸೇರಿಸಿಬಿಡ್ತೀವಿ ಅಷ್ಟೆ* ಎಂದರು.

ನಾನು ಶಾಂತವಾಗಿ *ಅವಳು ಈ ತರಹ violent ಆಗಿ ಮಾತಾಡೋಕೆ ನೀವೇ ಕಾರಣ* ಎಂದೆ.

*ನಾವ್ಯಾಕೆ ಕಾರಣ ಆಗ್ತೀವಿ ಟೀಚರ್. ಅವಳ್ಗೇನು ಕಡ್ಮೆ ಮಾಡಿದೀವಿ. ನಮ್ಮನೆಗೆ ಬಂದು ನೋಡಿ. ಎಷ್ಟು ಟಾಯ್ಸ್, ಗೊಂಬೆಗಳು, ಆಟದ ಸಾಮಾನು, ಸೈಕಲ್, ಡಿಸೈನರ್ ಡ್ರೆಸ್ ಏನಿಲ್ಲ ಅಂತ ತೋರ‌್ಸಿ* ಎಂದರು.

*ಮೇಡಂ‌, ನೀವು ಪ್ರಪಂಚದ ಐಶ್ವರ್ಯವನ್ನೇ ಅವಳ ಮುಂದೆ ತಂದು ಸುರಿದರೇನು? ಅವಳಿಗೆ ಬೇಕಾಗಿರೋದು ನಿಮ್ಮ ಪ್ರೀತಿ ಮಮತೆ ವಾತ್ಸಲ್ಯ ಮಾತ್ರ. ನೀವು ಕನ್ಸೀವ್‌ ಆಗಿ‌ ಗಂಡು ಮಗು ಅಂತ ಗೊತ್ತಾದಾಗಿನಿಂದ ಅವಳನ್ನು ಎಷ್ಟು ಸಲ  ಮುದ್ದು‌ಮಾಡಿದೀರ? ಎಷ್ಟು ಸಲ ಹತ್ತಿರ ಮಲಗಿಸಿಕೊಂಡಿದೀರ? ಪ್ರೀತಿಯಿಂದ ಎಷ್ಟು ಸಲ ಊಟಮಾಡ್ಸಿದೀರ?. ಶಾಲೆಯಲ್ಲಿ ಅವಳ ಪ್ರೋಗ್ರೆಸ್ ಬಗ್ಗೆ ಎಷ್ಟು ಸಲ ವಿಚಾರ್ಸಿದೀರ???* ಸ್ವಲ್ಪ ಜಕ್ಕಿಸಿ ಕೇಳಿದೆ.

ಆಕೆ ಬೆಪ್ಪಾಗಿಬಿಟ್ಟರು. ಒಂದು ಕ್ಷಣ ಸುಮ್ಮನಿದ್ದು ಪ್ರತಿಭಟಿಸುವವರಂತೆ‌ *ಆಗ್ಲೇ ಅವಳಿಗೆ ಏಳು ವರ್ಷ ಟೀಚರ್. ಇನ್ನೂ ಎಳೆಯ ಮಗುವಲ್ಲ* ಎಂದರು.

*ನೀವು ನಿಮ್ಮ ತಂದೆ ತಾಯಿ ಎಷ್ಟನೆಯವರು?*
*ಕಡೇ ಮಗಳು*
*ಈಗಲೂ ನಿಮ್ಮ ತಂದೆ‌ ತಾಯಿಗೆ ನೀವು ಚಿಕ್ಕವರು ಅನ್ನೋ ಪ್ರೀತಿ ಇದೆ ಅಲ್ವಾ?* *ಇನ್ನೇನು ನಾಲ್ಕು ಮಕ್ಕಳ ತಾಯಿಯಾಗಲಿರುವ ನಿಮಗೇ ಅಪ್ಪ ಅಮ್ಮನ ಪ್ರೀತಿ ಇನ್ನೂ ಬೇಕು‌ ಅನ್ನಿಸ್ತಿರುತ್ತೆ*. *ಅಲ್ವಾ? ಹಾಗಿರೋವಾಗ‌,  ಇನ್ನೂ  ಏಳು ವರ್ಷದ ಎಳೆಯ ಮಗುವನ್ನು ನೀವು  ಹೀಗೆ ದೂರ ಮಾಡಿರೋದು ಎಷ್ಟು ಸರಿ?  ಎಷ್ಟು ವಯಸ್ಸಾದರೂ ಮಕ್ಕಳು ಅಮ್ಮನ ಪ್ರೀತಿಗಾಗಿ ಹಂಬಲಿಸ್ತಾರೆ. ನಿಮ್ಮ ಮಗಳಿನ್ನೂ ತುಂಬಾ ತುಂಬಾ ಪುಟ್ಟ ಹುಡುಗಿ. ಈಗಲೂ ಕಾಲ ಮಿಂಚಿಲ್ಲ. ನಿಮಗೆ ಸ್ವಲ್ಪ ತೊಂದರೆಯಾದರೂ‌ ಪರವಾಗಿಲ್ಲ ಅವಳನ್ನು ಬಳಿಯಲ್ಲಿ‌ ಕೂರಿಸಿಕೊಳ್ಳಿ ಮಲಗಿಸಿಕೊಳ್ಳಿ. ಮುದ್ದು ಮಾಡಿ. ಪ್ರೀತಿಯಿಂದ ತಿನ್ನಿಸಿ.  ತಮ್ಮನ ಬಗ್ಗೆಯೂ ಹೇಳಿ ಪ್ರೀತಿ ಹುಟ್ಟುವಂತೆ ಮಾಡಿ. ಪುಟ್ಟ ಅಕ್ಕನಾಗಿ ಅವಳು‌ ತಮ್ಮನನ್ನು ಬಹಳ ಜತನದಿಂದ ಜೋಪಾನ ಮಾಡುವಂತೆ ಮಾಡಿ. ಮಗು ಅತ್ತರೆ ತಕ್ಷಣ ಹಾಲು ಕುಡಿಸಬೇಡಿ. ಇವಳ ಪರ್ಮಿಷನ್ ಕೇಳಿ. ಇವಳಿನ್ನೂ ಕೋಮಲ ಮನಸ್ಸಿನ ಎಳೆಯ ಹುಡುಗಿ. ತನ್ನ ತಮ್ಮ ಅತ್ತರೆ ಖಂಡಿತಾ ತಡೆದುಕೊಳ್ಳಲಾರಳು. ಕರಗಿ ಹೋಗುತ್ತಾಳೆ. *ಅಮ್ಮಾ ಮೊದಲು ತಮ್ಮಂಗೆ ಹಾಲು ಕುಡಿಸು ಅಂತಾಳೆ* ಎಂದು ನಿಮಗೇ ಬಲವಂತದಿಂದ ಜೋರು ಮಾಡ್ತಾಳೆ  ವಿಧವಿಧವಾಗಿ ಅವರಿಗೆ ತಿಳಿಸಿ ಹೇಳುವ ಯತ್ನ ಮಾಡಿದೆ.

*ನಿಜವಾಗಿಯೂ ಅವಳು ಸರಿಹೋಗ್ತಾಳಾ? ಏನೋ ಟೀಚರ್ ನಂಗೆ ತುಂಬಾ ಭಯ ಆಗ್ತಿದೆ. ನಾನು ಎದುರಿಗಿಲ್ಲದಿದ್ದಾಗ ಇವಳು ಮಗುವಿಗೇನಾದರೂ ಮಾಡಿಬಿಟ್ಟರೆ. ಹಾಸ್ಟೆಲಿಗೆ ಸೇರ‌್ಸೋದೇವಾಸಿಯೇನೋ* ಎಂದರು ದಿಗಿಲಿನಿಂದ.

*ಆ ತಪ್ಪು ಮಾತ್ರ ಮಾಡಬೇಡಿ. ಗಂಡು ಮಗನ ಮೋಹದಿಂದ  ನೀವೇನಾದ್ರೂ  ಅವಳನ್ನು ಹಾಸ್ಟೆಲ್ಗೆ ಸೇರಿಸಿದ್ರೆ ಅವಳೇನಾಗ್ತಾಳೆ ಎಂದು ನಾನು ಹೇಳಲಾರೆ. ಹಾಗೆ ನಿಮ್ಮ ಉಳಿದ ಎರಡು ಹೆಣ್ಣು ಮಕ್ಕಳ  ಮಾನಸಿಕ ಸ್ಥಿತಿಯೂ ಕೆಡದಂತೆಯೂ ಎಚ್ಚರದ ಪ್ರೀತಿಯಿಂದ ನೋಡಿಕೊಳ್ಳಬೇಕು. ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಮಕ್ಕಳು ಯಾವ ರೀತಿ ಬೇಕಾದ್ರೂ ಹಾಳಾಗಬಹುದು. I am not threatening you. ಆದರೆ ಬಹಳಷ್ಟು ಕಡೆ ಹೀಗಾಗಿದೆ. ಇದು ಕಟು ಸತ್ಯ* ಎಂದೆ.

*ಇವತ್ತು, ಈ ಕ್ಷಣದಿಂದಲೇ ಅವಳು‌ ನಿಮ್ಮಿಂದ ಕಳೆದುಕೊಂಡಿರುವ ಪ್ರೀತಿಯನ್ನು ಅವಳಿಗೆ ದುಪ್ಪಟ್ಟಾಗಿ‌ ಕೊಡಬೇಕು. ಹೇಗೆ ಮಾಡ್ತೀರ ನೋಡಿ*? *ಇನ್ನೂ ಸ್ವಲ್ಪ ಮಾತಾಡುವುದಿದೆ ತೊಂದರೆಯಾದರೂ ಇನ್ನೊಂದೆರಡು ದಿನ ನೀವು ಬರಬೇಕಾಗುತ್ತೆ* ಎಂದು ಹೇಳಿ ಭಯ ಕಳೆಯುವಂತೆ ಮೃದುವಾಗಿ ಬೆನ್ನು ತಟ್ಟಿ ಕಳುಹಿಸಿದೆ, ನನಗೂ ಮುಂದಿನ ತರಗತಿ ಇತ್ತಲ್ಲ.

ಮಾರನೆಯ ದಿನ ತುಸು ತಡವಾಗಿ  ಸೋತ ಕಾಲೆಳೆಯುತ್ತಾ ಬಂದರು. ನಾವು ಮಾತಾಡುತ್ತಿರುವಂತೆ ಮಧ್ಯಾಹ್ನದ ಊಟದ ಗಂಟೆಯಾದದ್ದೇ‌ ಮಕ್ಕಳೆಲ್ಲಾ ಗದ್ದಲ ಮಾಡುತ್ತಾ ತರಗತಿಯಿಂದ ಹೊರಗೆ ಓಡಿ ಬಂದರು. ನನ್ನ ಗಮನ ಮಾತ್ರ ಆ ಬಾಲೆಯಿದ್ದ ಕ್ಲಾಸಿನ ಕಡೆ ಇತ್ತು. ಕಾರಿಡಾರ್ನಲ್ಲಿ ಟೀಚರ್ ಜೊತೆ ಮಾತಾಡುತ್ತಿದ್ದ  ತನ್ನ ಅಮ್ಮನನ್ನು ನೋಡುತ್ತಲೇ ಹಿಗ್ಗು ಬೆರಗಿನಿಂದ ಓಡಿ ಬಂದ ಆ ಬಾಲೆ ಒಂದು ಕ್ಷಣ ಸಪ್ಪೆಯಾಗಿ ದೂರವೇ ನಿಂತುಬಿಟ್ಟಳು. ಕಣ್ಣುಗಳಲ್ಲಿ ನೀರು. ನನಗೇ ಕರುಳು ಚುರ್ರೆಂದಿತು. ನಾನು ಸುಮ್ಮನೆ ಆ ತಾಯಿಯ ಕಡೆ ನೋಡಿದೆ. ಆಕೆ ಸಾವರಿಸಿಕೊಂಡು ಮಗಳ ಕಡೆ ಮಮತೆಯ ಕಿರು ನಗೆಬೀರಿ,

*ಊಟದ ಡಬ್ಬಿ ತಗೊಂಬಾ ಚಿನ್ನಾ. ತಿನ್ನಿಸ್ತೀನಿ* ಎಂದಾಗ ಆ ಬಾಲೆಯ ಕಣ್ಣಲ್ಲಿ ಆಶ್ಚರ್ಯ ಅಪನಂಬಿಕೆ ಎರಡೂ ಓದುವಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು. ಮಗಳ ಈ ಪ್ರತಿಕ್ರಿಯೆಯಿಂದ ಒಂದು ಕ್ಷಣ ತಾಯಿಯೇ ಪೆಚ್ಚಾದರು. ಈ ಬಾರಿ ಇನ್ನೂ ಹೆಚ್ಚಿನ ವಾತ್ಸಲ್ಯದಿಂದ, *ಊಟ ನಾನೇ ತಿನ್ನಿಸ್ತೀನಿ. ಡಬ್ಬಿ ಕೊಡು ಚಿನ್ನ* ಎಂದಾಗ ಆ ಬಾಲೆಯ ಕಣ್ಣಲ್ಲಿ ಸಾವಿರ ಕ್ಯಾಂಡಲ್‌ಗಳ ಬೆಳಕು!!!.
****   ****    ****    ****

ಮುಂದೆ ಒಂದು ದಿನ ಅವಳು ಅಳುತ್ತಾ– ನಾನು ಅವಳ ಟೀಚರ್ ಅಲ್ಲದಿದ್ದರೂ– ನನ್ನ ಬಳಿ ಬಂದಳು.
*ಯಾಕ್ ಅಳ್ತಿದೀಯ ಪುಟ್ಟೀ ಏನಾಯ್ತು?* ಎಂದು‌  ಕೇಳಿದೆ.
ಇನ್ನೂ ಜೋರಾಗಿ ಅಳುತ್ತಲೇ,
*ನನ್ನ ತಮ್ಮಂಗೆ ಸ್ವಲ್ಪ ಜ್ವರ ಬಂದಿದೆ. ಅವ್ನಿಗೆ ಏನೂ ಆಗಲ್ಲ ಅಲ್ವಾ ಟೀಚರ್. ಬೇಗ ಹುಷಾರಾಗ್ತಾನೆ ಅಲ್ವಾ ಟೀಚರ್.  ನಮ್ಮಮ್ಮ ಅವ್ನನ್ನ ಸರಿಯಾಗಿ ನೋಡ್ಕೋತಾರೋ ಇಲ್ವೋ ಅಂತ ನಂಗೆ ತುಂಬಾ ಭಯ ಆಗ್ತಿದೆ ಟೀಚರ್* ಎಂದಳು.

ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಳ್ಳುತ್ತಾ *ಇಲ್ಲ ಪುಟ್ಟಿ. ನಿನ್ನ ತಮ್ಮಂಗೆ ಏನೂ ಆಗೊಲ್ಲ. ಖಂಡಿತಾ ಬೇಗ ಹುಷಾರಾಗ್ತಾನೆ. ಐ  ಪ್ರಾಮಿಸ್ ಯೂ ಚಿನ್ನಾ* ಎಂದು  ಅಕ್ಕರೆಯಿಂದ ಅವಳನ್ನು ತಬ್ಬಿಕೊಂಡೆ.

– ರತ್ನಾ ಮೂರ್ತಿ

8 Responses

  1. Vasundhara says:

    ತುಂಬಾ ಒಳ್ಳೆಯ ಬರಹ. ಸೂಕ್ತ ಆಪ್ತ ಸಮಾಲೋಚನೆ ಮಾಡಿದ ನಿಮಗೆ ಅಭಿವಂದನೆಗಳು

  2. ನಯನ ಬಜಕೂಡ್ಲು says:

    ಕ್ಷಣಕಾಲ ಸ್ತಬ್ದ ಲೇಖನ ಓದಿ. ಟೀಚರ್ಸ್ ಯಾವತ್ತಿದ್ರೂ ಗ್ರೇಟ್. ಗುರುಗಳ ಕೈಯ್ಯಲ್ಲೇ ಮಕ್ಕಳ ಭವಿಷ್ಯ ರೂಪುಗೊಳ್ಳೋದು. ವ್ಯಯಕ್ತಿಕವಾಗಿ ಆ ಹುಡುಗಿಯನ್ನು ಗಮನಿಸದೆ ಇರುತ್ತಿದ್ದರೆ ಒಂದು ಮಗುವಿನ ಬದುಕೇ ಸರ್ವನಾಶದ ಹಾದಿಯಲ್ಲಿ ಸಾಗುವುದರಲ್ಲಿತ್ತು.

  3. Hema says:

    ಓದಿ ದಿಗ್ಭ್ರಮೆಯಾಯಿತು .ತುಂಬಾ ಒಳ್ಳೆಯ ರೀತಿ counselling ಮಾಡಿ ಅಮ್ಮ-ಮಗಳು ಇಬ್ಬರಿಗೂ ನೆಮ್ಮದಿ ಕಲ್ಪಿಸಿದ ನಿಮ್ಮ ಮಾತೃಹೃದಯಕ್ಕೆ ಹಾಗೂ ಶಿಷ್ಯವಾತ್ಸಲ್ಯಕ್ಕೆ ಶರಣು.

  4. Samatha.R says:

    ಮನಸ್ಸು ತಟ್ಟಿದ ಬರಹ..ನೀವು ಓರ್ವ ಅತ್ಯುತ್ತಮ ಶಿಕ್ಷಕಿ ಅನ್ನುವುದು ಪ್ರತಿ ಸಾಲಿನಲ್ಲೂ ಅನುಭವಕ್ಕೆ ಬರುತ್ತದೆ..

  5. ಆತ್ಮೀಯ ಸಮಾಲೋಚನೆ

  6. ಬಿ.ಆರ್.ನಾಗರತ್ನ says:

    ವಾವ್ ಮನಸ್ಸಿಗೆ ನಾಟಿದ ಬರಹ. ಅಭಿನಂದನೆಗಳು ಮೇಡಂ.

  7. ಚನ್ನಕೇಶವ says:

    ಒಳ್ಳೆಯ ಅನುಭವ….
    ಸಮಯೋಚಿತ ಸಮಾಲೋಚನೆಯಿಂದ, ಎಂಥಾ ಮನಸುಗಳನ್ನೂ ಬದಲಾಯಿಸಬಹುದು

  8. ಶಂಕರಿ ಶರ್ಮ says:

    ಮಗುವಿನ ಅಮ್ಮನಿಗೆ ಬಹಳ ಸೂಕ್ಷ್ಮ ರೀತಿಯಲ್ಲಿ, ಆತ್ಮೀಯವಾಗಿ ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತ ಮೇಡಂ. ಆತ್ಮೀಯವಾಗಿ ನೈಜ ರೀತಿಯಲ್ಲಿ ನಮ್ಮೊಂದಿಗೆ ಹಂಚಿಕೊಂಡ ರೀತಿ ಸೊಗಸಾಗಿದೆ..ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: