ಬಾಳೊಂದು ಭಾವನಂದನ
‘ ನಿನ್ನಲ್ಲಿ ಹುದುಗಿರುವ ಅಪಾರ ಶಕ್ತಿಯ ಪರಿಚಯ ನಿನಗೀಗಾಬೇಕು. ಏಳು ವೀರ ಮಹಿಳೆ. ಇದು ನಿನ್ನ ಜೀವನದ ಏಳುಬೀಳಿನ ಕಾಲ. ಈಗಿಂದೀಗಲೇ ಪೊರಕೆ ಹಿಡಿ. ಜೇಡನ ಬಲೆ ನಿನ್ನ ಅಮೂಲ್ಯ ಕರಸ್ಪರ್ಶಕ್ಕೆ ಕಾತರಿಸುತ್ತಿದೆ. ಬಟ್ಟೆಯ ಬೆಟ್ಟ ಕರಗಿಸಬೇಕು. ಪಾತ್ರೆಯ ಪರ್ವತ ಸವರಬೇಕು.’ ಇದು ನನ್ನ ಕಸೀನ್ ಹೆಂಡತಿ ಸೌಮ್ಯ, ಮನೆಗೆಲಸದವಳನ್ನು, ಕೆಲಸದಿಂದ ಮನೆಗೆ ಕಳಿಸಿ, ತನ್ನನ್ನು ಪ್ರೇರೇಪಿಸಿಕೊಳ್ಳುವ ಪರಿ.
ಸೌಮ್ಯ ಮಡಿಕೇರಿಯ ತಂಪು ತೌರಲ್ಲಿ, ಬಾಳೆ ಗುಡಾಣದಲ್ಲಿ ಬೆಳೆದ, ಕುಸುಮ ಕೋಮಲೆ. ನೋಡಲು ಬಲು ಸುಂದರಿ. ಹಾಯಾಗಿದ್ದ ಆ ಕುವರಿ ನನ್ನ ಕಸೀನ್ ರವಿಯ ಕಣ್ಣಿಗೆ ಬಿದ್ದು, ಚಿತ್ತ ಅಪಹರಿಸಿದಳು. ನಿದ್ದೆಗೆಟ್ಟ ರವಿ, ಬಯಸಿ ಬಯಸಿ, ಅವಳ ಕೈ ಹಿಡಿದು, ಕೃತಾರ್ಥನಾದ, ವಂಶೋದ್ಧಾರಕನ ಜನನಕ್ಕೆ ಕಾರಣನಾದ. ಎಲ್ಲೆಲ್ಲೂ ಈ ಪರಿವಾರ ‘ನಮ್ಮ ಸಂಸಾರ ಆನಂದ ಸಾಗರ’ ಎಂದು ಹಾಡುತ್ತ ಕಾಣಿಸಿಕೊಳ್ಳುವುದು ಮಾಮೂಲಾಯಿತು.
ರವಿ ಸಾಪ್ಟ್ ವೇರ್ ಇಂಜನೀಯರ್.ರಾಣಿ ಜೇನು ಮಧುವನ್ನು ಸಂಗ್ರಹಿಸುವಂತೆ, ನಮ್ಮ ರವಿ ದೇಶದಾಚೆಗೂ ಕೆಲಸ ಮಾಡಿ, ಹಣಕೂಡಿಟ್ಟು, ಸೌಮ್ಯಳ ಅಪೇಕ್ಷೆಯಂತೆ, ಕನಸಿನ ಮಹಲ್ ಕಟ್ಟಿಸಿದ. ಅವಳಿಗೋ ರಂಗು ರಂಗಾದ ಸ್ವಪ್ನಗಳು. ಆಸೆಯಿಂದ ಗೃಹಾಲಂಕಾರ ಪೂರೈಸಿ ನೆಲ ಲಕಲಕ ಹೊಳೆಯುವಂತೆ, ಗೋಡೆಗಳು ಥಳಥಳಗುಟ್ಟುವಂತೆ, ಸಿಂಕು ಮಿರಿಮಿರಿ ಮಿರುಗುವಂತೆ, ಅಂಗಳದ ಕೈತೋಟ ಕಂಗೊಳಿಸುವಂತೆ ಶ್ರಮವಹಿಸುವ ಜಾಯಮಾನದವಳು. ಮನೆಗೆ ತಕ್ಕಂತೆ ಕೆಲಸದವರನ್ನು ಏರ್ಪಾಡು ಮಾಡಿ, ಸಮಗ್ರ ನಿರ್ವಹಣೆಯ ಹೊಣೆ ಹೊತ್ತಳು. ಅತಿಥಿ ಸತ್ಕಾರದಲ್ಲೂ ಅವಳು ಒಂದು ಹೆಜ್ಜೆ ಮುಂದು. ಆಮಂತ್ರಿಸಿದವರಿಗೆ ಪ್ರಿಯವಾದ ಅಡುಗೆಯನ್ನೇ, ಮುಂಚಿತವಾಗಿ ಅವರಿಂದ ಹೇಗೋ ಬಾಯಿ ಬಿಡಿಸಿ, ಅದನ್ನೇ ಅವರಿಗೆ ಉಣಬಡಿಸುವ ಪರಿಪಾಠದವಳು. ಸೌಮ್ಯಳ ಇಡೀ ಮನೆ ಯಾವ ಪಂಚತಾರಾ ಹೋಟೆಲಿಗೂ ಕಮ್ಮಿಯಿಲ್ಲವೆಂಬಂತೆ ತೋರುವುದು. ಅವಳ ಜೀವನದ ಗುರಿಯೇ ಅಂದವಾಗಿ ಮನೆ ಕಟ್ಟಿ, ಚಂದವಾಗಿ ಸಂಸಾರ ಮಾಡುವುದು. ರವಿಗೆ ಯಾವ ಚಿಂತೆಯು ಇಲ್ಲ. ಅವನಾಯಿತು, ಅವನ ಕಂಪ್ಯೂಟರ್ ಆಯಿತು. ಇವೆಲ್ಲದರ ಜೊತೆಯಲ್ಲಿ ಸೌಮ್ಯ ನಗೆಮೊಗದರಸಿ, ಸರಸಿ. ಅವಳ ತೋಟದ ಗಿಡಗಳ ಪಾತಿಯಲ್ಲೂ ಚೂರು ಕಸವಿಲ್ಲ, ಕಡ್ಡಿಯಿಲ್ಲ. ಅಚ್ಚುಕಟ್ಟಾಗಿ ಎಲೆ ಹಾಕಿ, ಊಟ ಮಾಡಬಹುದು. ಅಷ್ಟು ಸ್ವಚ್ಚ, ಮನೋಹರ. ಅಡುಗೆಮನೆ ಕಿಟಕೆಯಾಚೆ ಕರಿಬೇವಿನ ಮರ ಹೊಸ ಚಿಗುರಿನಿಂದ, ಸೊಂಪಾಗಿ ತಲೆದೂಗುವುದನ್ನು ಒಮ್ಮೆ ಕಂಡ ನಾನು, ತಮಾಷೆಗೆಂದಿದ್ದೆ, ‘ಹುಳಿ, ಸಾರು ಕುದಿ ಹತ್ತಿ, ಒಗ್ಗರಣೆಗಿಡುವಾಗ, ಈ ಕರಿಬೇವಿನ ಗೊಂಚಲು ಹಾಗೆ ಎಳಕೋ ಸೌಮ್ಯ, ಕುದಿ ಹತ್ತಿದ ಪಾತ್ರೇಲಿ ಅದ್ದಿ, ಸ್ವಲ್ಪ ಹೊತ್ತು ಬಿಟ್ಟು, ಹಾಗೆ ಯಥಾಸ್ಥಿತಿಗೆ ಬಿಟ್ಟುಬಿಡು. ಮುಂದೆ ಗಿಡ ಹಾಗೆ ಚಿಗುರಿಕೊಳ್ಳತ್ತೆ.’
ಅಲ್ಲಿ ಹಬ್ಬಿರುವ ಜಾಜಿ, ಮಲ್ಲೆ, ವೀಳೆಯದೆಲೆ, ನಗುತ್ತ ಅರಳಿರುವ ಗುಲಾಬಿ ಎಲ್ಲವೂ ಮನಮೋಹಕ. ಅವಳಿಗೆ ಎಲ್ಲದರಲ್ಲೂ ಆಸಕ್ತಿ. ಮಾತಿಗೆ ಸಿಕ್ಕರೆ ಸಾಕು, ಅವಳ ಬಾಯಿತುಂಬ ಅವುಗಳ ಬಗ್ಗೆಯೇ ಹಿಗ್ಗಿನ ಸುದ್ದಿ. ಅವಳು ಅಲಂಕಾರಪ್ರಿಯೆ. ಹಿತಮಿತವಾಗಿ, ಸರಳವಾಗಿ, ಅತಿ ಕಡಿಮೆ ಪ್ರಸಾದನ ಬಳಸಿ, ಕಣ್ಣು ಕೋರೈಸುವಂತೆ ಸಿದ್ಧವಾಗುವಳು. ಆಯಾಸ, ಬೇಸರ ಈ ಯಾವುವು ಅವಳ ಭಾವಕೋಶದಲ್ಲಿ ಇಲ್ಲವೇ ಇಲ್ಲ. ಸ್ನೇಹದ ನಗು ಅವಳ ವಿಶೇಷ ಆಭರಣ. ಇಂತಹ ವ್ಯಕ್ತಿತ್ವದ ಸೌಮ್ಯಳಿಗೆ ರವಿ ಮಾರುಹೋಗಿದ್ದರಲ್ಲಿ, ಅಚ್ಚರಿ ಪಡುವಂತಹುದೇನಿಲ್ಲ ಬಿಡಿ.
ಶಂಕರಮಾಮನ ಮಗಳು ಜ್ಯೋತಿ ಮನೆಯ ಗೃಹಪ್ರವೇಶ, ಇತ್ತೀಚೆಗೆ ನೆರವೇರಿದಾಗ, ಅಲ್ಲಿ ಸೌಮ್ಯ ಸಿಕ್ಕಳು, ನಕ್ಕಳು. ಊಟಕ್ಕೆ ಒಟ್ಟಾಗಿ ಕುಳಿತೆವು. ನಮ್ಮ ಮಾತುಕತೆ, ವಿನೋದಮಯವಾಗಿ, ಮನೆಯಿಂದ ಮನೆಗೆಲಸದವರತ್ತ ತಿರುಗಿತು.
ಸೌಮ್ಯ; ‘ಆಂಟಿ, ಹೇಗಿದೀರಿ? ಸಣ್ಣ ಆದ ಹಾಗಿದೆ. ಆಫೀಸ್‌ಲ್ಲಿ ವಿಪರೀತ ಕೆಲಸವಾ? ಹೇಗೆ?’
ನಾನು; ‘ಮನೆಕೆಲಸ ಆಫೀಸಲ್ಲಿ ಮಾಡೋ ತರಹ ಅನುಕೂಲವಿದ್ದಿದ್ದರೆ ಚೆನ್ನಾಗಿತ್ತು. ಆದರೆ ಮನೆಕೆಲಸ ಮನೇಲೇ, ಮನೆಗೆ ಬಂದೇ ಮುಗಿಸಬೇಕು ನೋಡು, ಅದಕ್ಕೆ ತೆಳ್ಳಗಾಗಿದೀನಿ ಅನ್ನಿಸತ್ತೆ.ನಿನ್ನ ಸಮಾಚಾರ ಏನು? ಹೇಗಿದೆ ನಿಮ್ಮ ಇಂದ್ರ ಮಹಲ್?’
ಸೌಮ್ಯ; ‘ಆಂಟೀ, ಕೆಲಸದವರಿಗೆ ಟಿಕೇಟ್ ಕೊಟ್ಟು, ನಾನೇ ಬಕೆಟ್ ಹಿಡಿದೆ. ಈಗೀಗಸಾಕಾಗಿ ಸುಸ್ತಾಗತ್ತೆ. ಆಗ ವಿವೇಕವಾಣಿ ಹೇಳಿಕೊಂಡು, ಹೊಸ ಹುರುಪು ತುಂಬಿಕೊಂಡು, ಮನೆಕೆಲಸಕ್ಕೆ ಇಳೀತೀನಿ.’
ಅವಳು ಹೇಳಿಕೊಳ್ಳುವ ವಿವೇಕವಾಣಿಯೇ, ‘ನಿನ್ನಲ್ಲಿ ಹುದುಗಿರುವ ಅಪಾರ ಶಕ್ತಿಯ ಪರಿಚಯ ನಿನಗೀಗ ಬೇಕು. ಏಳು ವೀರ ಮಹಿಳೆ. ಇದು ನಿನ್ನ ಜೀವನದ ಏಳುಬೀಳಿನ ಕಾಲ. ಈಗಿಂದೀಗಲೇ ಪೊರಕೆ ಹಿಡಿ. ಜೇಡನ ಬಲೆ ನಿನ್ನ ಅಮೂಲ್ಯ ಸೇವೆಗೆ ಕಾತರಿಸುತ್ತಿದೆ. ಬಟ್ಟೆಯ ಬೆಟ್ಟ ಕರಗಿಸಬೇಕು. ಪಾತ್ರೆಯ ಪರ್ವತ ಸವರಬೇಕು.’
ಈ ಉದ್ದೀಪನಾ ನುಡಿ, ಇಡೀ ಹೆಣ್ಣುಕುಲಕ್ಕೆ ಅಗತ್ಯವಾದ ಸಂಜೀವಿನಿ ಚಿಕಿತ್ಸಾ ವಿಧಾನ. ಜಗತ್ತಿನ ಕುಲಕೋಟಿಯ ಸಂಕಷ್ಟ ಸಮಯದ ನೆರವಿಗೆ, ಸ್ವಯಂಪ್ರೇರಣೆಯಿಂದ ಧಾವಿಸುವ ನಮ್ಮನ್ನು ಉಪಚರಿಸುವವರು, ಬಹಳ ವಿರಳ. ಎಲ್ಲರ ಉದರ ಪೋಷಣೆ ಮಾಡುವ ನಾವು ತಿಂದೆವಾ, ಬಿಟ್ಟೆವಾ ಎಂದು ಕೇಳುವರಾರು ಹೇಳಿ. ನಮ್ಮ ಇಷ್ಟಾನಿಷ್ಠಗಳ ಪರಿಚಯ, ಸಾಮಾನ್ಯವಾಗಿ ಯಾರಿಗೂ ಇರುವುದಿಲ್ಲ ಬಿಡಿ. ದುಡಿದು ದಣಿದಾಗ ನಾನು ನನ್ನನ್ನೇ ಉಪಚರಿಸಿಕೊಳ್ಳುತ್ತೇನೆ. ನನ್ನೊಡನೆ ನಾನೇ, ಒಳಗಿಂದೊಳಗೇ, ಮಾತಾಡಿಕೊಳ್ಳುತ್ತೇನೆ. ಅದು ಹೀಗೆ ಸಾಗಿರುವುದು, ‘ಒಂದೇ ಸಮ ಕೆಲಸ ಮಾಡ್ತಿದೀಯಾ, ನಿನಗೂ ಸುಸ್ತಾಗತ್ತೆ. ಕೂತುಕೋ. ಬಿಸಿ ಕಾಫಿ ಕುಡಿದು, ಸುಧಾರಿಸಿಕೋ. ಅರ್ಧ ಗಂಟೆ ವಿಶ್ರಾಂತಿ ಪಡಿ.’ ಆಗ ಹೊಸ ಚೈತನ್ಯ ನರನಾಡಿಗಳಲ್ಲಿ ಪ್ರವಹಿಸಲಾರಂಭಿಸುತ್ತದೆ. ಇದೇ ಅಂತೆ ‘ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್’.
ಸೌಮ್ಯಳಿಗೆ ನನ್ನ ಈ ಸ್ವಯಂ ಸರ್ವೋಪಚಾರದ ಬಗ್ಗೆ ವಿವರಿಸಿ, ನನ್ನ ಕುತೂಹಲ ತಣಿಸಿಕೊಳ್ಳಲು, ಕೇಳಿದೆ, ‘ಸೌಮ್ಯ, ನೀನು ಸ್ಪೂರ್ತಿ ತುಂಬಿಕೊಳ್ಳುವ ರೀತಿ ನಿಜಕ್ಕೂ ಅನುಕರಣೀಯ. ನನ್ನ ಸಂದೇಹ , ಈ ತರಹ ಹೇಳಿಕೊಳ್ಳುವುದರಿಂದ, ನಿನ್ನಲ್ಲಿ ಹುರುಪು ಬಂದು, ಉಳಿದ ಕೆಲಸ ಲೀಲಾಜಾಲವಾಗಿ ನಿರ್ವಹಿಸಲು ಸಾಧ್ಯವಾ?’
ಸೌಮ್ಯ ಎಂದಿನ ನಗೆಕಾರಂಜಿ ಚಿಮ್ಮಿಸುತ್ತ ಉತ್ತರಿಸಿದಳು, ‘ಹುರುಪು ಇಲ್ಲ, ಮಣ್ಣಾಗಟ್ಟೀನೂ ಇಲ್ಲ. ಹಾಗೆ ಬೆನ್ನು ತಟ್ಟಿಕೊಳ್ಳೋದ್ರಿಂದ, ಕೆಲಸ ಪೂರೈಸಬಹುದು ಅಷ್ಟೇ.’
ನಿತ್ಯವೂ ಬೆಳಗಿನ ಜಾವ ಐದು ಗಂಟೆಗೆ ಏಳುವ ಪರಿಪಾಠದ ಸೌಮ್ಯಳಿಗೆ ಪಾಕಲೋಕವೂ ಪ್ರಿಯ ಕ್ಷೇತ್ರ. ಹೀಗೊಂದು ದಿನ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ, ಅಡುಗೆ ಮನೆಯಲ್ಲಿ ಬೆಳಗಿನ ತಿಂಡಿ, ಮನೆಯವರ ಮತ್ತು ಮಗನ ಮದ್ಯಾಹ್ನದ ಬುತ್ತಿಗೆ ತಯಾರು ಮಾಡುತ್ತಿದ್ದ ಸೌಮ್ಯಳಿಗೆ, ಒಮ್ಮಿಂದೊಮ್ಮೆಗೇ ಹಕ್ಕಿಗಳ ಚಿಲಿಪಿಲಿ ಮಾಮೂಲಿಗಿಂತಲೂ, ಸ್ವಲ್ಪ ಜಾಸ್ತಿಯಾಗಿಯೇ ಕೇಳಿಸತೊಡಗಿತು. ಸರಿಯಾಗಿ ಗಮನಿಸಿದಾಗ ಅವುಗಳ ಹೃದಯದ ಕೂಗೆನಿಸಿತು ಸಹ. ಆಗ ಅರಿವಿಗೆ ಬಂದ ವಿಷಯವೆಂದರೆ, ಜೋಡಿ ಮೈನಾ ಹಕ್ಕಿಗಳು, ತಮ್ಮನೆಯ ಹೂದೋಟದಲ್ಲಿ ಗೂಡು ಕಟ್ಟುತಿತ್ತು. ಹಾಗೆ ಅದು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಯಾದಾಗ ಆದ ಸಂತಸ ಹೇಳತೀರದು. ತನ್ನ ಪತಿ ಪರಮೇಶ್ವರನಿಗೂ, ಮಗ ಮಹರಾಯನಿಗೂ ತೋರಿಸಿ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಮನೆಗೆ ಬಂದ ಬಂಧುಗಳಿಗೂ ತೋರಿಸಿ ಮೆರೆದಿದ್ದೇ ಮೆರೆದಿದ್ದು. ಇದಕ್ಕಿಂತ ಮಿಗಿಲಾದ ರಸಮಯ ಸಮಯ
ಇನ್ನೆಲ್ಲಿದೆ ಈ ಮೂರು ಲೋಕದಲ್ಲಿ ಎಂದು ಎಷ್ಟೋ ಬಾರಿ ಸೌಮ್ಯಳಿಗೆ ಎನಿಸಿದ್ದುಂಟು. ಬದುಕನ್ನು ಸಹಜ ರೀತಿಯಲ್ಲಿ ಪ್ರಕೃತಿಗೆ ಹತ್ತಿರವಾಗಿ ಸರಳ ಸಂತೋಷದಿಂದ ಕಟ್ಟಿಕೊಂಡು ಸಂಭ್ರಮಿಸುವುದರಲ್ಲಿ ಎಂತಹ ಸೊಗಸಿದೆ. ಇದೇ ಅಧ್ಯಾತ್ಮದ ಮೂಲವಲ್ಲವೇ…
-ಸಾಯಿಲಕ್ಷ್ಮಿ. ಎಸ್
ಸೊಗಸಾದ ಬರಹ.
ಆತ್ಮೀಯ ಬರಹ
ಬಹಳ ಚೆಂದದ ಬರಹ ಈ ಕರೋನಾ ಕಬಂಧಬಾಹುಗಳಿಗೆ ಸಿಕ್ಕಿ ಕೆಲಸದವರೂ ಇಲ್ಲದೆ ಒದ್ದಾಡುತ್ತಿರುವ ಮಹಿಳಾ ಮಣಿಗಳಿಗೆ ಅದರಲ್ಲೂ ಉದ್ಯೋಗ ಸ್ಥರಾದ ಮಹಿಳಾಮಣಿಗಳಿಗೆ ಒಳ್ಳೆಯ ಸಂದೇಶ ಏಳು.. ಎದ್ದೇಳು ವೀರ ಮಹಿಳೆ ವಾವ್.. ಅಭಿನಂದನೆಗಳು ಮೇಡಂ
ಉತ್ಸಾಹ ಹುಟ್ಟಿಸಿದ ಬರಹ❤
ಆಪ್ತ ಬರಹ
ಮನ ಮುಟ್ಟಿತು ನಿಮ್ಮ ಈ ಸುಂದರವಾದ ಬರಹ.
ಹೀಗೆ ನಮ್ಮನ್ನು ಪ್ರೋತ್ಸಾಹಿಸುತ್ತಿರಿ.
ಬಹಳ ಸುಂದರವಾದ ಮತ್ತು ಬಾಳಿಗೆ ಪ್ರೋತ್ಸಾಹ ತುಂಬುವ ಬರಹ.
inspiring
ಚಂದದ ಬರಹ…ಸೊಗಸಾದ ಭಾಷೆ..ಸೌಮ್ಯ ರವರ ಜೀವನ ಪ್ರೀತಿ ಎಲ್ಲರಲ್ಲಿ, ಸಾಂಕ್ರಾಮಿಕವಾಗಿ ಎಲ್ಲಾ ಕಡೆ ಈ ಕರೋನ ಬದಲಿಗೆ ಹಬ್ಬಲಿ.. ಇಂಥಹಾ ಮನೋಭಾವವೇ ಎಲ್ಲಾ ರೀತಿಯ ಸಂಕಷ್ಟಗಳ ಎದುರಿಸುವ ಧೈರ್ಯ ನೀಡುವುದು…ಅಭಿನಂದನೆಗಳು ಮೇಡಂ..
ಆಹಾ..ನಿಮ್ಮ ಕಥಾನಾಯಕಿ ಸೌಮ್ಯರವರನ್ನು ಬಹಳ ವಿಶೇಷ ರೀತಿಯಲ್ಲಿ ಪರಿಚಯಿಸಿರುವಿರಿ. ಅವರ ಸುಂದರ ಬೃಂದಾವನದಲ್ಲಿ ನಾವೂ ಸುತ್ತಾಡಿದೆವು, ಹೂಗಳ ಪರಿಮಳವನ್ನು ಆಘ್ರಾಣಿಸಿದೆವು..ಹಾಗೆಯೇ ಅವರ ಜೀವನಪ್ರೀತಿ ಎಲ್ಲರಿಗೂ ಪಸರಿಸಲಿ. ತುಂಬಾ ಆತ್ಮೀಯವಾದ ಬರಹ..ಧನ್ಯವಾದಗಳು ಮೇಡಂ.