ಓಡಿ ಹೋದವನು
ಆ ತಾಯಿಯ ಒಬ್ಬ ಮಗ ಹತ್ತು ವರ್ಷವಿದ್ದಾಗಲೇ ಮನೆ ಬಿಟ್ಟು ಓಡಿಹೋದ. ತಾಯಿ ಹೃದಯ, ಎಲ್ಲ ಕಡೆಗೂ ಹುಡುಕಿದಳು, ಹುಡುಕಿಸಿದಳು. ಎಲ್ಲ ದೇವರಿಗೂ ಹರಕೆ ಹೊತ್ತಳು. ಸಿಕ್ಕ ಸಿಕ್ಕವರಲ್ಲಿ ಭವಿಷ್ಯ ಕೇಳಿದಳು. ಹೀಗೇ ಇಪ್ಪತ್ತು ವರ್ಷ ಮಗನ ಚಿಂತೆಯಲ್ಲೇ ಕಳೆಯಿತು.
ಆ ಊರಿನ ಭಕ್ತರು ಒಮ್ಮೆ ಹಿಮಾಲಯದಲ್ಲಿದ್ದ ಒಬ್ಬ ಯುವ ಸಾಧುಗಳನ್ನು ಕರೆಸಿದರು. ಒಳ್ಳೆಯ ಭವಿಷ್ಯ ಹೇಳುತ್ತಾರೆಂದೂ ಮತ್ತು ಜನರ ಕಷ್ಟಗಳನ್ನು ಪರಿಹರಿಸುತ್ತಾರೆಂದು ಅವರೆಲ್ಲರ ನಂಬಿಕೆಯಾಗಿತ್ತು. ಈ ಸುದ್ದಿ ತಿಳಿದ ತಾಯಿ, ಸಾಧುಗಳನ್ನು ಕಾಣಲು ಹೋದಳು. ಅಲ್ಲಿ ಬಂದ ಜನರು ಒಂದಲ್ಲ ಒಂದು ಕಷ್ಟ ಹೇಳಿಕೊಳ್ಳುತ್ತಾ ಅದರ ಪರಿಹಾರ ಕೇಳುತ್ತಿದ್ದರು. ಆ ತಾಯಿ ಅಲ್ಲಿ ಕುಳಿತು ಎಲ್ಲವನ್ನೂ ನೋಡಿದಳು.
ಸಾಧುವನ್ನು ಅವಳು ತದೇಕ ಚಿತ್ತಳಾಗಿ ನೋಡುತ್ತಾ ಸ್ವಲ್ಪ ಸಮಯ ಕುಳಿತೇ ಇದ್ದಳು. ಅವಳ ಕಣ್ಣುಗಳು ಮಿಂಚಿದವು. ಏಕೋ ಧಾರಾಕಾರ ಕಣ್ಣೀರು ಹರಿಯಿತು. ಅವಳಿಗೆ ಸಾಧುಗಳಲ್ಲಿ ಪ್ರಶ್ನೆ ಕೇಳುವ ಸರದಿ ಬಂತು. ಅವಳು ಸಾಧುವಿನ ಬಳಿಸಾರಿ ಅವರಿಗೆ ಮಾತ್ರ ಕೇಳುವಂತೆ ಮೆಲ್ಲನೆ ಹೇಳಿದಳು, “ಭವಿಷ್ಯವೆಲ್ಲವನ್ನೂ ಬಲ್ಲ ನಿಮಗೆ ನಿಮ್ಮ ಭೂತಕಾಲದ ಅರಿವಿದೆಯೆ!?”
ಸಾಧು ಉತ್ತರಿಸಲಿಲ್ಲ. ಎದ್ದು ಅವಳ ಕಾಲಿಗೆರಗಿ, “ಕ್ಷಮಿಸಮ್ಮಾ” ಅಂದರು!
ಇಬ್ಬರ ಕಣ್ಣಲ್ಲೂ ನೀರು. ಅಲ್ಲಿ ಸೇರಿದ್ದ ಜನರು, ʼಸ್ವಾಮಿಗಳು ದಯಾ ಹೃದಯಿ. ಜನರ ಕಷ್ಟಗಳಿಗೆ ಕರಗಿಬಿಡುತ್ತಾರೆʼ ಎಂದು ಮಾತಾಡಿಕೊಂಡರು.
ಆ ತಾಯಿ ಅಲ್ಲಿಂದ ಹಿಂತಿರುಗುತ್ತಾ, ʼನನ್ನ ಸಂಕಟ ಪರಿಹಾರವಾಗದಿದ್ದರೇನು? ಅಂತೂ ಇತರರ ಕಷ್ಟಗಳಿಗೆ ಪರಿಹಾರ ಕೊಡುತ್ತಿದ್ದಾನಲ್ಲ ಅಷ್ಟೇ ಸಾಕು!ʼ ಹೃದಯಪೂರ್ವಕ ಹರಸಿದಳು!
-ಅನಂತ ರಮೇಶ್ ,ಬೆಂಗಳೂರು
ಪುಟ್ಟ ಕಥೆ..ಚೆನ್ನಾಗಿದೆ
ಧನ್ಯವಾದಗಳು.
ಚಂದದ ಕಥೆ ಮಾರ್ಮಿಕವಾದ ಮುಕ್ತಾಯ.ಅಭಿನಂದನೆಗಳು.
ಧನ್ಯವಾದಗಳು.
ಕೆಲವೇ ಸಾಲುಗಳಲ್ಲಿ ಕತೆಯನ್ನು ಹೆಣೆದ ಪರಿ ಸೊಗಸಾಗಿದೆ.
ಧನ್ಯವಾದಗಳು.
ಪುಟ್ಟ ಕಥೆ ಮನಮುಟ್ಟಿತು.