ವಿಶೇಷ ದಿನ

ಯುಗದ ಆದಿಯ ಸಂಭ್ರಮ

Share Button

ಭೂರಮೆಯು ಹಸಿರುಡುಗೆಯ ತೊಟ್ಟು
ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು
ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು
ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು.

ಸೂರ್ಯನ ಗತಿಯಾಧರಿಸಿ ಸೌರಮಾನವು
ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು
ಉತ್ತರ ದಕ್ಷಿಣದಿ ಭಿನ್ನ ಯುಗಾದಿ ಆಚರಣೆಯು
ಸಡಗರ ತುಂಬಿ ವರ್ಷಾರಂಭಕ್ಕೆ ಪ್ರೇರಣೆಯು.

ದಾಶರಥಿಯು ಮಹಾಬಲಿಯ ವಾಲಿ ಸಂಹರಿಸಿ
ಸುಗ್ರೀವನಿಗೆ ಕಿಷ್ಕಿಂಧ ರಾಜ್ಯ ನೀಡಿದ ದಿನವು
ಶ್ರೀರಾಮನು ದಶಕಂಠನ ದರ್ಪದ ಸೊಲ್ಲಡಗಿಸಿ
ಸೀತಾಮಾತೆಯ ಶೋಕ ವಿಮೋಚಿಸಿದ ದಿನವು.

ಶಕರು ಹೂಣರನು ಗೌತಮೀಪುತ್ರ ಸೋಲಿಸಿ
ಶಾಲಿವಾಹನ ಶಕೆಯ ಆರಂಭಿಸಿದ ಗಳಿಗೆಯು
ಶಶಾಂಕನ ದರ್ಶನ ಪಡೆದು ಮನೆಮಂದಿಯೆಲ್ಲ
ಶಶಿಧರನ ಪೂಜಿಸಿ ಸವಿಯುವ ಹೋಳಿಗೆಯು.

ರಾಶಿಗಳ ಫಲಾಫಲಗಳ ಕೇಳುವ‌ ಕಾಲವು
ನಕ್ಷತ್ರಗಳ ಪಲ್ಲಟ ನೋಡುವ ಸಮಯವು
ನವ ಸಂವತ್ಸರದಿ ಹೊಸ ಸಂಕಲ್ಪದ ಕ್ಷಣವು
ನವ ಸಂಭ್ರಮದಿ ಹೊಸ ಬಾಳಿನ ಆರಂಭವು.

ಜೀವನ ಕಹಿ ಸಿಹಿಗಳ ಸಮರಸ ಪಾಕವು
ಬೇವು ಬೆಲ್ಲವ ಹಂಚಿ ತಿಳಿಯುವ ನಾವು
ಬಡವ ಬಲ್ಲಿದ ಬೇಧವ ಅಳಿಸ ಬನ್ನಿರಿ
ಬಾಳ ಚದುರಂಗದಾಟ ಆಡಿ ಕಲಿಯಿರಿ.

-ಶಿವಮೂರ್ತಿ.ಹೆಚ್,  ದಾವಣಗೆರೆ.

4 Comments on “ಯುಗದ ಆದಿಯ ಸಂಭ್ರಮ

  1. ಅರ್ಥಪೂರ್ಣ ಕವಿತೆ ಅಭಿನಂದನೆಗಳು ಸಾರ್.

  2. ಹೊಸ ವರುಷ ಯುಗಾದಿಗೆ ಸೊಗಸಾದ ಕವನ ಸ್ವಾಗತ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *