ಕೆ ಎಸ್ ನ ಕವಿನೆನಪು 41: ಸಹೋದ್ಯೋಗಿಗಳ ಸ್ನೇಹಾಭಿಮಾನ
ನಾನು ಜಯನಗರದಲ್ಲಿದ್ದ ನಮ್ಮ ಬ್ಯಾಂಕಿನ ಗೃಹ ಹಣಕಾಸು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಶಾಖೆಯ ಮುಖ್ಯಸ್ಥರು ಇಂಟರ್ಕಾಮ್ ಮಾಡಿ ಒಬ್ಬ ಗ್ರಾಹಕರನ್ನು ಪರಿಚಯ ಮಾಡಬೇಕಿದೆ ಬನ್ನಿ ಎಂದರು.
ನಾನು ಅವರತ್ತ ಹೋದೆ. ಸುಮಾರು ಎಪ್ಪತ್ತು ವರುಷ ವಯಸ್ಸಿನ ಹಿರಿಯ ಪ್ರಜೆಯೊಬ್ಬರು ಅವರ ಮುಂದೆ ಕುಳಿತಿದ್ದರು. ನ್ಯೂಜೆರ್ಸಿಯಲ್ಲಿ ಸಿವಿಲ್ ಎಂಜನಿಯರ್ ಆಗಿದ್ದ ಅವರ ಮಗನಿಗೆ ಮನೆ ಕಟ್ಟಲು ಸಾಲ ಬಯಸಿ ಬಂದಿದ್ದರು. ಮಾತಿನ ಮಧ್ಯೆ ಅವರು ತಾವು ಹೌಸಿಂಗ್ ಬೋರ್ಡ್ ನಲ್ಲಿ ಕೆಲಸದಲ್ಲಿದ್ದು ನಿವೃತ್ತರಾದವರೆಂದು ಹೇಳಿದರು. ನಾನು ನಮ್ಮ ತಂದೆಯವರ ಹೆಸರು ಹೇಳಿ “ಅವರು ನಿಮಗೆ ಗೊತ್ತೆ?” ಎಂದು ಕೇಳಿದೆ.
“ಓ,ಗೊತ್ತಿಲ್ಲದೆ ಏನು? ನನ್ನ ಗುರುಸಮಾನರು, ಮಾರ್ಗದರ್ಶಕರು, ನಿಮಗೆ ಹೇಗೆ ಪರಿಚಯ?”ಎಂದು ಕೇಳಿದರು.
“ನಾನು ಅವರ ಮೂರನೆಯ ಮಗ”ಎಂದೆ.
ಅವರು ಮತ್ತೊಮ್ಮೆ ನನ್ನತ್ತ ಕೂಲಂಕುಶವಾಗಿ ನೋಡಿ “ಹೌದೆ,ಬಹಳ ಸಂತಸದ ವಿಷಯ” ಎಂದು ಸಂಭ್ರಮಿಸಿದರು. ”ನಿಧನರಾದ ಸುದ್ಧಿ ತಿಳಿಯಿತು.ಮನೆ ವಿಳಾಸ ತಿಳಿದಿರಲಿಲ್ಲ, ಹಾಗಾಗಿ ಬರಲಾಗಲಿಲ್ಲ.” ಎಂದರು.
ತಮ್ಮ ಮಾತು ಮುಂದುವರೆಸುತ್ತ ಅವರು “ನಿಮ್ಮ ತಂದೆ ನನಗೆ ಮಾಡಿರುವ ಉಪಕಾರಗಳನ್ನು ಎಂದೂ ಮರೆಯಲಾರೆ. ಜಯನಗರ ಒಂಬತ್ತನೆಯ ವಿಭಾಗದಲ್ಲಿ ಹೌಸಿಂಗ್ ಬೋರ್ಡ್ ಬಡಾವಣೆ ನಿರ್ಮಾಣವಾದಾಗ , ನನಗೂ ಮನೆ ಮಂಜೂರಾಗಿದ್ದರೂ ಹೋಗಲು ಹಿಂದೇಟು ಹಾಕಿದೆ, ರಾಗಿಗುಡ್ಡಕ್ಕೆ ಹೋಗುವ ದಾರಿಯಲ್ಲಿದ್ದ , ಕಾಡಿನಂತಿದ್ದ ಆ ಜಾಗದಲ್ಲಿ ಹೋಗಲು ಯಾರಿಗೂ ಆಗ ಇಷ್ಟವಿರಲಿಲ್ಲ. ಆಗ ನಿಮ್ಮ ತಂದೆ ‘ವೆಂಕಟರಾಮಯ್ಯ.ಇಂದು ಇದ್ದ ಹಾಗೇ ನಾಳೆ ಇರುವುದಿಲ್ಲ. ಮುಂದೆ ಆ ಬಡಾವಣೆ ಅಭಿವೃದ್ಧಿಯಾದಾಗ ಕೊಳ್ಳಲು ಒಂದು ಅಡಿ ಜಾಗವೂ ನಿನಗೆ ಸಿಗದೆ ಹೋಗಬಹುದು.’ಎಂದು ಬಲವಂತ ಮಾಡಿ ಒಪ್ಪಿಸಿದರು.ಈಗ ಅವರ ಮಾತು ಎಷ್ಟು ನಿಜ ಎನ್ನಿಸುತ್ತದೆ.” ಎಂದರು.
“ ನಾನು ಎಲ್ ಎಲ್ ಬಿ ಮಾಡಲು ಬಯಸಿ ಕಛೇರಿಯಿಂದ ಅನುಮತಿ ಕೋರಿದಾಗ ಅವರು ನಿರಾಕರಿಸಿದರು. ಆಗ ನಿಮ್ಮ ತಂದೆ ಅಧ್ಯಕ್ಷರೊಡನೆ ಮಾತನಾಡಿ ‘ಸಂಸ್ಥೆಯಲ್ಲಿ ವಿದ್ಯಾವಂತರು, ಅದರಲ್ಲೂ ಕಾನೂನು ಜ್ಙಾನ ಇರುವವರು ಬೇಕು’ ಎಂದು ವಾದಿಸಿ ಅನುಮತಿ ದೊರಕಿಸಿಕೊಟ್ಟಿದ್ದರು.ನಾನು ಕಾನೂನು ಪದವಿ ಪಡೆದು, ನಿವೃತ್ತನಾದ ವಕೀಲಿ ವೃತ್ತಿ ನಡೆಸಿ, ಸ್ವಲ್ಪ ಕಾಲ ಗೃಹಮಂಡಳಿಗೂ ಕಾನೂನು ಸಲಹೆಗಾರನಾಗಿದ್ದೆ. ಇಂಥ ವ್ಯಕ್ತಿಯ ಮಗ ನನಗೆ ಪರಿಚಯವಾದದ್ದು ಸಂತಸ” ಎಂದು ಎಂದು ಸ್ಮೃತಿಕೋಶ ಅನಾವರಣಗೊಳಿಸಿದರು.
ಆಗ ವ್ಯವಸ್ಥಾಪಕರು “ನಿಮಗೆ ಪರಿಚಿತರೆಂದ ಮೇಲೆ ಅವರ ಸಾಲದ ಪ್ರಸ್ತಾವ ನೀವೇ ಪರಿಗಣಿಸುವುದು ಒಳ್ಳೆಯದು “ಎಂದು ಸಲಹೆ ನೀಡಿದರು.
ಆ ಪ್ರಸಂಗದಲ್ಲಿ ವರಮಾನ, ಹಕ್ಕುಪತ್ರ ಇತ್ಯಾದಿಗಳ ವಿಷಯಗಳಲ್ಲಿ ಯಾವುದೇ ತೊಡಕು ಇರಲಿಲ್ಲ.ಸಾಲ ಮಂಜೂರಾತಿ ಪ್ರಕ್ರಿಯೆ, ಸಾಕಷ್ಟು ಬೇಗ ಆಯಿತು. ವೆಂಕಟರಾಮಯ್ಯನವರು “ಅಪ್ಪ ಮಗ ಇಬ್ಬರಿಂದಲೂ ಉಪಕಾರ ಪಡೆದ ಕುಟುಂಬ ನಮ್ಮದು “ ಸಂತಸ ವ್ಯಕ್ತಪಡಿಸಿದರು.
ಇಷ್ಟೆಲ್ಲ ಅಭಿಮಾನಿಗಳು ಇದ್ದರೂ ಯಾವುದೋ ಸಣ್ಣ ಕಾರಣಕ್ಕಾಗಿ ನಮ್ಮ ತಂದೆಯವರ ಬಗ್ಗೆ ದ್ವೇಷ ಕಾರಿದ್ದ ಒಬ್ಬ ಸಹೋದ್ಯೋಗಿ ಇದ್ದ. ಮುಖ್ಯಮಂತ್ರಿಗಳ ವಿವೇಚನಾಧಿಕಾರದಡಿ ಮಂಜೂರಾಗಿದ್ದ ನಿವೇಶನ ದೊರಕದಿರುವಂತೆ ಮಾಡಲು ಮೂಗರ್ಜಿ ಹಾಕಿದ್ದ. ಆದರೆ ವಿಷಯ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ವಿಷಯ ತಿಳಿದು, ಅವನ ಆಟ ನಡೆಯಲಿಲ್ಲ.
(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31877
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಆಪ್ತ ಬರಹ
ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಾಧ್ಯವಿದ್ದಲ್ಲಿ ಆಗುಮಾಡುವ ಪುಣ್ಯಜೀವಿ ಕೆ ಎಸ ನ ನನ್ನ ಪಿತೃಸಮಾನರು.
ನೈಸ್ one
ಹಿರಿಕವಿಗಳ ಮೇರು ಮನಸ್ಸು ಅನಾವರಣಗೊಂಡ ಲೇಖನವು ಬಹಳ ಆಪ್ತವೆನಿಸಿತು…ಧನ್ಯವಾದಗಳು ಸರ್.