ಹುಟ್ಟುಹಬ್ಬ ಆಚರಿಸೋಣ….

Share Button

ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ; ಅಲ್ಲದೆ ಬೇರೆ ಬೇರೆ ಧರ್ಮೀಯರು ಅವರದೇ ರೀತಿಯಲ್ಲಿ ಆಚರಿಸುವುದನ್ನು ಕಾಣಬಹುದು. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲದರಂತೆ ಅದರ ಮೇಲೂ ಆಂಗ್ಲ ಸಂಸ್ಕೃತಿಯ ಹಾವಳಿ ತೀವ್ರವಾಗಿ ಆಗಿರುವುದನ್ನು ಕಾಣಬಹುದು. “ಹೆಪ್ಪಿ ಬರ್ತ್ ಡೇ..” ಎಂದು ಶುಭಾಶಯ ಹೇಳುವುದು ಸಾರ್ವತ್ರಿಕವಾಗಿ ನಡೆಯುತ್ತಿದೆ. ಕೇಕ್ ಕತ್ತರಿಸಿ, ಉರಿಯುವ ಮೇಣದ ಬತ್ತಿಯನ್ನು ಆರಿಸಿ ಸಂಭ್ರಮಿಸುವುದೇ ಹುಟ್ಟುಹಬ್ಬದ ನಿಜವಾದ ಆಚರಣೆ ಎನ್ನುವಷ್ಟು ಎಲ್ಲರ ಜೀವನದಲ್ಲಿ ಇದು ಹಾಸುಹೊಕ್ಕಾಗಿದೆ.

ಹಿಂದೂ ಪದ್ಧತಿಯಲ್ಲಿ ಹಿರಿಯರ ಜನ್ಮದಿನದ ಆಚರಣೆಯು ಬಹಳ ಅರ್ಥವತ್ತಾಗಿ ನಡೆಯುತ್ತದೆ. ಆ ದಿನ ಕಿರಿಯರೆಲ್ಲರು ಅವರ ಆಶೀರ್ವಾದ ಪಡೆದು, ಮನೆಯವರೆಲ್ಲರು ಸಿಹಿಯೂಟ ಉಂಡು ಸಂಭ್ರಮಿಸುವರು. ಕಿರಿಯರಾದರೆ, ಹೊಸಬಟ್ಟೆ ಧರಿಸಿ, ದೀಪ ಬೆಳಗಿದ ದೇವರೆದುರು ಕುಳಿತಾಗ ಆ ಮಗುವಿನ ಹೆತ್ತವರು ಆರತಿ ಬೆಳಗುವರು. ಆ ಬಳಿಕ ಹಿರಿಯರ ಆಶೀರ್ವಾದದೊಂದಿಗೆ ತಮ್ಮಿಷ್ಟದ ಉಡುಗೊರೆಗಳನ್ನು ಪಡೆದು ಸಿಹಿಯುಂಡು ನಲಿಯುವರು.

ನಾನೊಮ್ಮೆ ಅಮೆರಿಕದಲ್ಲಿರುವ ಮಗಳಲ್ಲಿಗೆ ಹೋಗಿದ್ದ ಸಂದರ್ಭ. ಅವರ ಕುಟುಂಬದ ಗೆಳೆಯರು ಮಗುವಿನ ಜನುಮ ದಿನಾಚರಣೆಗೆ ನಮ್ಮನ್ನು ಕರೆದಿದ್ದರು. ಹೇಳಿ ಕೇಳಿ ಅಮೆರಿಕ, ಅಲ್ಲಿ ಮಾಮೂಲಿ ಕೇಕ್ ಕಟ್ಟಿಂಗ್ ಇರಬಹುದು ಎಂದುಕೊಡಿದ್ದೆ. ಆದರೆ ಅಚ್ಚರಿ ಪಡುವ ಸರದಿ ನನ್ನದಾಗಿತ್ತು ! ಅಚ್ಚುಕಟ್ಟಾಗಿ ಮಗುವಿಗೆ ಆರತಿ ಬೆಳಗಿದರು. ಆ ನಂತರ ಸಂಸ್ಕೃತದಲ್ಲಿರುವ ಶುಭಾಶಯ ಗೀತೆಯನ್ನು ಎಲ್ಲರು ಒಟ್ಟಾಗಿ, ಇಂಪಾಗಿ ಹಾಡಿದರು. ಆ ಬಳಿಕದ ಸಾಂಪ್ರದಾಯಿಕ ಸಿಹಿಭೋಜನ ಮನಸ್ಸನ್ನೂ ಸಿಹಿಮಾಡಿದ್ದು ಸುಳ್ಳಲ್ಲ. ಈ ಶುಭಾಶಯ ಗೀತೆಯು ನನ್ನ ಮನಸ್ಸನ್ನು ತುಂಬಿ ಬಿಟ್ಟಿತ್ತು. ನಂತರದ ದಿನಗಳಲ್ಲಿ ಅದು ಮರೆತೇ ಹೋಗಿತ್ತು ಎನ್ನಬಹುದು. ಹತ್ತಾರು ವರುಷಗಳ ಬಳಿಕ, ಈ ಯೂ ಟೂಬ್ ಯುಗದಲ್ಲಿ ಸಕಲವೂ ಲಭ್ಯವಿರುವಂತೆ, ಈ ಗೀತೆಯೂ ನನಗೆ ಸಿಕ್ಕೇ ಬಿಟ್ಟಿತು! ಬಹಳ ಪ್ರೀತಿಯಿಂದ ಅದರ ಅರ್ಥ ತಿಳಿದುಕೊಂಡು, ಅದನ್ನು ಮನನ ಮಾಡಿ, ನಾನು  ಜನುಮದಿನದ ಶುಭಾಶಯ ಕೋರುವ ಪ್ರತಿಯೊಬ್ಬರಿಗೂ ಇದನ್ನು ಹಾಡುವುದು ರೂಢಿಮಾಡಿಕೊಂಡಿರುವೆ..ಇದು ನನಗೆ ಅತ್ಯಂತ ತೃಪ್ತಿಯನ್ನು ನೀಡಿದುದು ಮಾತ್ರ ಸುಳ್ಳಲ್ಲ. ಅತ್ಯುನ್ನತ ಅರ್ಥವನ್ನು ಹೊಂದಿರುವ, ಸಂಸ್ಕೃತದಲ್ಲಿರುವ ಹುಟ್ಟುಹಬ್ಬದ ಶುಭಾಶಯವು ಈ ರೀತಿಯಿದೆ..

ಜನ್ಮ ದಿನಮಿದಂ| ಐ ಪ್ರಿಯ ಸಖೇ|
ಶಂತನೋ ತು ತೇ| ಸರ್ವದಾಮುದಂ|
ಪ್ರಾರ್ಥನಾಮಹೇ| ಭವ ಶತಾಯುಷೀ|
ಈಶ್ವರ ಸದಾ| ತ್ವಾ ಚ ರಕ್ಷತು|
ಪುಣ್ಯ ಕರ್ಮಣಾ| ಕೀರ್ತಿಂ ಅರ್ಜಯ|
ಜೀವನಂ ತವಾ| ಭವತು ಸಾರ್ಥಕಂ||

ಭಾವಾರ್ಥ ಕನ್ನಡದಲ್ಲಿ:

ನನ್ನ ಪ್ರೀತಿಯ ಗೆಳೆಯ/ ಗೆಳತಿ/ ಮಗ/ ಮಗಳು….

ನಿನ್ನ ಈ ಹುಟ್ಟುಹಬ್ಬದ ದಿನವು ನಿನಗೆ ಸಂಪೂರ್ಣ ಸಂತೋಷವನ್ನು ನೀಡಲಿ. ನೂರು ವರುಷಗಳ ಅತ್ಯಂತ ಸುಂದರ ಜೀವನವನ್ನು ನೀನು ಆನಂದಿಸುವಂತಾಗಲಿ ಎಂದು ದೇವರಲ್ಲಿ ಬೇಡುವೆವು. ಭಗವಂತನು ಸದಾ ನಿನ್ನನ್ನು ರಕ್ಷಿಸಲಿ! ಸದ್ಗುಣಶೀಲನಾದ ನೀನು, ನಿನ್ನ ಒಳ್ಳೆಯ, ಸರಿಯಾದ ಕೆಲಸಗಳಿಗಾಗಿ ಪ್ರಖ್ಯಾತಿಯನ್ನು ಹೊಂದುವಂತಾಗಲಿ. ನಿನ್ನ ಜೀವನವು ಪರಿಪೂರ್ಣವಾಗಿರಲಿ ಎಂದು ಹಾರೈಸುವೆವು.

ಭಾವಾರ್ಥ ಇಂಗ್ಲಿಷಲ್ಲಿ:

My dear friend, it is your Birthday. May this birthday bring you great joy and be an auspicious occasion. We pray that you enjoy a 100 beautiful years of life. And may the  Almighty always protect you! May you be virtuous and earn fame for always doing the right thing. May you live a fulfilling life.

– ಶಂಕರಿ ಶರ್ಮ, ಪುತ್ತೂರು.

14 Responses

  1. Anonymous says:

    ನಮಸ್ಕಾರ, ಖಂಡಿತವಾಗಿ ನನ್ನ ಅನಿಸಿಕೆ ಕೂಡ, ಮತ್ತು ಸಹಮತವಿದೆ
    ವಿದ್ಯಾ

    • ಶಂಕರಿ ಶರ್ಮ says:

      ತಮ್ಮ ಅನಿಸಿಕೆಗೆ ಧನ್ಯವಾದಗಳು ಮೇಡಂ.

  2. ಬಿ.ಆರ್.ನಾಗರತ್ನ says:

    ಹುಟ್ಟು ಹಬ್ಬದ ಮೂಲ ಆಶಯ ಆಚರಣೆ ಶುಭ ಸಂದೇಶ ಹೊತ್ತ ವಿಶಿಷ್ಟ ಲೇಖನ.ಚೆನ್ನಾಗಿದೆ ಅಭಿನಂದನೆಗಳು ಮೇಡಂ.

  3. ASHA nooji says:

    ಹೌದು ಅಕ್ಕಾ ಈಗ ಹೊರದೇಶದವರು ನಮ್ಮ ಸಂಸ್ಕೃತಿಗೆ . ದಾಸರಾಗಿ ರುವವರು .ಭಾರತೀಯರು ಅಲ್ಲಿ ನೆಲೆಸಿರುವ ಕಾರಣ ತಮ್ಮ ಸಂಸ್ಕೃತಿಯನ್ನು ಮರೆತಿಲ್ಲವೇನೋ
    ಚಂದದ ಹುಟ್ಟು ಹಬ್ಬ ಆಯಿತು

  4. ನಯನ ಬಜಕೂಡ್ಲು says:

    ನಾವು ಇವತ್ತಿಗೂ ನಮ್ಮ ಮನೆಯ ಪ್ರತಿಯೊಬ್ಬ ಸದಸ್ಯರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮನೆಮಂದಿ ಎಲ್ಲ ಸೇರಿ ಆಚರಿಸುತ್ತೇವೆ. ಚಂದದ ಬರಹ

    • ಶಂಕರಿ ಶರ್ಮ says:

      ತಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ನಯನಾ ಮೇಡಂ.

  5. Meghana Kanetkar says:

    ಇವತ್ತಿಗೂ ನಾವಿಷ್ಟು ದೊಡ್ಡವರಾದರೂ ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಜನ್ಮ ಮಿಥಿಯ ಪ್ರಕಾರವೇ ಶುಭ ಕೋರುವರು. ಬೆಳಗ್ಗೆ ಅಭ್ಯಂಜನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ಹಿರಿಯರಿಗೆಲ್ಲ ನಮಸ್ಕಾರಿಸಿ ಮಧ್ಯಾಹ್ನ ಸಿಹಿಯೂಟ ಸಂಜೆ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿ ಬರೊದು.
    ಫ್ರೆಂಡ್ಸ್ ಕೊಲೀಗ್ಸ್ ಎಲ್ಲ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಶುಭ ಕೋರಿ ಪಾರ್ಟಿ ಕೇಳ್ತಾರೆ. ಮನೆಗೆ ಕರೆದು ಹೊಟ್ಟೆ ತುಂಬ ಪಾಯಸ, ಬಿಸಿಬೇಳೆ ಭಾತ್, ಮೊಸರನ್ನ ಊಟಕ್ಕೆ ಹಾಕಿ ಕಳಸ್ತಿವಿ. ಒಮ್ಮೆಯೂ ಕೇಕ್ ಕತ್ತರಿಸಿಲ್ಲ. ಹೋಟೆಲ್‌ ನಲ್ಲಿ ಪಾರ್ಟಿ ಮಾಡಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

    ಚಂದದ ಬರಹ ನಿಮ್ಮದು

    • ಶಂಕರಿ ಶರ್ಮ says:

      ತಮಗೆ ಅಭಿನಂದನೆಗಳು ಹಾಗೂ ತಮ್ಮ ಮುಕ್ತ ಅನಿಸಿಕೆಗೆ ಧನ್ಯವಾದಗಳು ಮೇಡಂ.

  6. Savithri bhat says:

    ತುಂಬಾ ಚೆಂದದ ಬರಹ..

    • ಶಂಕರಿ ಶರ್ಮ says:

      .
      ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

  7. Dharmanna dhanni says:

    ಅರ್ಥಪೂರ್ಣವಾಗಿ ಬಂದಿದೆ ಬರಹ

    • ಶಂಕರಿ ಶರ್ಮ says:

      ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: